ಬುಧವಾರ, ನವೆಂಬರ್ 10, 2010

ಅಮ್ಮಾ....ನಿನ್ನ ಎದೆಯಾಳದಲ್ಲಿ...

ಅಮ್ಮಾ.... ಈ ಭಾವಗೀತೆ ಕೇಳಿದಾಗಲೆಲ್ಲಾ ಅದೆಷ್ಟು ಭಾವುಕಳಾಗಿ ಬಿಡ್ತೇನೆ ಗೊತ್ತೇನೆ..?ನಿನ್ನ ಪ್ರೀತಿಯ ಗಾಳಕ್ಕೆ ಸಿಕ್ಕಿ ಮೀನಾಗಿ ಒದ್ದಾಡುವ ಆನಂದ ನನಗಷ್ಟೇಯೇನೋ ...!! ನೀನೆಂದರೆ ನೀನೆ ಕಣೇ..ಎಲ್ಲರಿಗಿಂತಲೂ  ದೊಡ್ಡವಳು..ದೇವರಿಗಿಂತಲೂ ಮೇಲಿನವಳು.. 'Love at first sight' ಅಂತಾರಲ್ಲ., ಹ್ಞೂ ಕಣೇ ನನಗೆ ನಿನ್ನೊಂದಿಗೆನೆ ಅದು ಆಗಿದ್ದು..ಅಂದು ನಾ ಭೂಮಿಗೆ  ಬಂದ  ಮೊದಲ ದಿನದಿಂದ...ಅದೇ ಆ ದಿನ ನಾ ನಿನ್ನ ನೋಡಿ ಅತ್ತಿದ್ದೆನಲ್ಲ...ನೀ ನನ್ನ ನೋಡಿ ನಕ್ಕಿದ್ದೆಯಲ್ಲ ಆ ದಿನ...ಮೊದಲು ನೋಡಿದ ನಿನ್ನೊಂದಿಗೆನೆ ನಂಗೆ ಲವ್ ಆಗಿದ್ದು...ಇವತ್ತಿನ ವರೆಗೂ ನಾಳೆಗೂ ಅದು ಹಾಗೆ ಇರತ್ತೆ ಅಮ್ಮಾ.. ಅದೊಂದೇ ದಿನವೇನೋ ಬಹುಶಃ ನಾ ಅತ್ತಾಗ ನೀ ನಕ್ಕಿದ್ದು.. ಮಿಕ್ಕೆಲ್ಲ ಸಂದರ್ಭಗಳೂ ಇದಕ್ಕೆ ವಿರುದ್ದವೇ ಅಲ್ಲವೇನೆ..? ಅದಕ್ಕೆ ಇರಬೇಕು ನಿನ್ನ ಅಮ್ಮನೆನ್ನುವುದು...
ಅಮ್ಮಾ...ನೀನು ನಂಗೆ ಎಲ್ಲವೂ ಕಣೇ.. ಟೀಚರ್ರು , ಫ್ರೆಂಡು, ಲವ್ವರ್ರು.. ಹೀಗೆ ಎಲ್ಲವೂ ನೀನು ನಂಗೆ.. ಅಪ್ಪನಂಗೆ ಹಳೇ ಕಾಲದವರ ಥರಾ ಮಾಡೋಲ್ಲ ನೀನು.. ಅದಕ್ಕೆ ಅಪ್ಪನಿಗಿಂತಲೂ ತುಂಬಾ ಇಷ್ಟ ಆಗ್ತೀಯಾ.. ನಾನು ಅರ್ಕುಟು, ಜಿಮೇಲು, ಫೋನು, ಫ್ರೆಂಡ್ಸು ಅಂದ್ರೆ ಅರ್ಥ ಮಾಡ್ಕೊಂತಿಯಾ.. ಅಪ್ಪನಂಗೆ ಸಿಡಿಮಿಡಿ ಅನ್ನೋಲ್ಲ.. ಅಮ್ಮಾ ನಿಂಗೆ ಒಬ್ಬಳಿಗೇ ಮಾತ್ರ ಯಾಕೆ ಎಲ್ಲವನ್ನೂ- ಎಲ್ಲವಾಗಿ ಒಪ್ಪೋ ಇಷ್ಟು ವಿಶಾಲ ಮನಸ್ಸು..? ನಂಗೆ ಯಾಕೆ ಅದು ಇಲ್ಲಾ?? ಹೇಳು.. ನಾನು ನಿನ್ನ ಮಗಳಲ್ಲವೆ..? ನಂಗು ಆ ದೊಡ್ಡ ಮನಸ್ಸು ಕೊಡೆ ಅಮ್ಮಾ.. ಅದೆಂಗೆ ನನ್ನ ಸೋಮಾರಿತನನೆಲ್ಲ ಒಪ್ಪಿ ಅಪ್ಪಿ ಮುದ್ದು ಮಾಡ್ತಿಯಾ, ಪ್ರೀತಿಸ್ತಿಯಾ.. ನಂಗೆ ಗೊತ್ತಿಲ್ಲ ಅಂದ್ಕೊಂಡಿದ್ದಿಯಾ ಅಮ್ಮಾ.. ಮೊನ್ನೆ ನನ್ನ ಬರ್ತ್ ಡೇ ದಿವ್ಸ ಮುಂಜಾನೆ ನೀ  ನನ್ನ ಹಣೆಗೆ ಮುತ್ತಿಟ್ಟಿದನ್ನ ...? ಆ ನಿನ್ನ ಮುತ್ತೆ ನನಗೆ ಮೊದಲ ಬರ್ತ್ ಡೇ ವಿಶ್ ಕಣೇ ...ಉಮ್ಮಾ ಟೂ ಅಮ್ಮಾ.. ನಾನು ಆಗ ಎಚ್ಚರದಲ್ಲಿದ್ದೆ... ಸುಮ್ನೆ ನಿದ್ದೆ ಮಾಡ್ತಿರೋ ಹಂಗೆ ನಾಟ್ಕ ಮಾಡ್ತಾ...!! ಹೇ ಹೇ ಹೇ...!!

ಚಿಕ್ಕೊಳಿರೋವಾಗ ಸ್ಲೇಟು ಬಳಪ ಹಿಡಿಸಿ ಕೈ ಹಿಡಿದು ಬರೆಸ್ತಿದ್ದ ಆ ನೆನಪು, ಪದ್ಯ ಹೇಳಿ ಬಹುಮಾನ ಬಂದಾಗ ನೀ ಕೊಟ್ಟ ಮುತ್ತು, ಪ್ರತಿಸಲವೂ ಕ್ಲಾಸಿಗೆ ನಾನೇ ಫಸ್ಟ್ ಬರಬೇಕೆಂಬ ನಿನ್ನ ಸ್ವಾರ್ಥ, ನಾನು ಭಾಷಣ ಮಾಡ್ತೀನಿ ಅಂದ್ರೆ ನೀನೆ ತಾಯಾರು ಆಗ್ತಿದ್ದ ಆ ನಿನ್ನ ರೀತಿ.. ಎಲ್ಲ ಎಂಥ ಸುಂದರ ನೆನಪುಗಳೇ ಅಮ್ಮಾ..! ಹ್ಞೂ , ಸೋಲೆಂದರೆ ಏನೆಂದೇ ಕಲಿಸಿ ಕೊಟ್ಟಿಲ್ಲ ನೀನು.. ನಾನು ಜೀವನ ಇದೆಯೇನೋ ಅಂದುಕೊಂಡಿದ್ದೆ.. ಬರೀ ಸುಂದರ.. ಪ್ರೀತಿ ನಿನ್ನಲ್ಲಿ ಮಾತ್ರ ಇದ್ದಾಗಲೇ ಚಂದವಿತ್ತೆ.. ನಿನ್ನ ಪ್ರೀತಿಲಿ ಬರೀ ಗೆಲುವೆ.. ಯಾವಾಗ 'ಪ್ರೀತಿ' ನಿನ್ನ ಬಿಟ್ಟು ಇನ್ನಷ್ಟು ವಿಶಾಲಾರ್ಥ ಪಡೆಯಿತೋ.. ಆಗ ಸೋಲು ಗೊತ್ತಾಯಿತು ಅಮ್ಮಾ.. 'ಪ್ರೀತಿ' ಯಾ ವ್ಯಾಪ್ತಿ ವಿಶಾಲಾವಾದುದೆ ಬಹುಶಃ ತಪ್ಪಾಯಿತೇನೋ..!! ಅಮ್ಮಾ..ಆ ದಿನಗಳಲ್ಲಿ ಉಮ್ಮಳಿಸಿ ಬರುತ್ತಿದ್ದ ದುಃಖ, ಕಣ್ಣು ಇದ್ದಕ್ಕಿದ್ದಂತೆ ಏನೋ ನೆನಪಾಗಿ ತುಂಬುತ್ತಿದ್ದಾಗ ಏನೂ ವಿಚಾರಿಸದೆ ..ಗೋಜಲು ಗೋಜಲಾಗಿರೋ ಮನಕ್ಕೆ ನಿನ್ನ ಮಡಿಲಿನ ಸಾಂತ್ವನ ಕೊಡುತ್ತಿದ್ದೆಯಲ್ಲಾ ಅದೇ ನನಗೆ ಧೈರ್ಯ, ನಿನ್ನ ಆಸೆ- ಆಕಾಂಕ್ಷೆಗಳ ಜೊತೆ ನಾನಿದ್ದೇನೆ ಎಂಬ ಆ ನಿನ್ನ ಭರವಸೆಯೇ ನನಗೆ ಸ್ಪೂರ್ತಿ..

ಹಾ...ಹಾ..ತಡಿ ತಡಿ...ಇದರಿಂದ ಭವಿಷ್ಯವೇನು ಕುಂದಿಲ್ಲ ಅಮ್ಮಾ...!! ನೀ ನನ್ನ ಜೊತೆಯಿದ್ದಿಯಲ್ಲ.. ಪಾಠ ಕಲಿಸಿದೆ ಅಷ್ಟೇ..! ಕನಸುಕಂಗಳ ಹುಡುಗಿ ನಾನು.. ನನ್ನ ಕನಸುಗಳಿಗೆ ಜೀವ ತುಂಬಲು ನೀನಿರೋವಾಗ ಇನ್ನೇನೆ ಬೇಕು...? ನೀ ಒಬ್ಬಳು ಜೊತೆ ಇದ್ದು ಬಿಡೆ ಸಾಕು.. ಭವಿಷ್ಯದ ತುಂಬಾ ಬಹಳ ಕನಸಿದೆ ಅಮ್ಮಾ.. ಅದಿಕ್ಕೆ ರಂಗು ರಂಗಿನ ಬಣ್ಣ ನೀನೇ ಹಚ್ತಿಯಲ್ವಾ...?  
     ಕೊನೆದಾಗಿ ಅಮ್ಮಾ... ಈ ಲೆಟರ್ರಿನ ತುಂಬಾ ನಿನ್ನ ಅವಳು- ಇವಳುಅಂದಿದ್ಕೆ ಬೇಜಾರು ಮಾಡ್ಕೋಬೇಡ್ವೇ... ಟೆನ್ತ್ ತನ್ಕ ಹಾಂಗೇ ಕರೀತಾ ಇದ್ನಲ್ಲಾ ನೆನಪು ಮಾಡ್ಕೊಂಡು ಕ್ಷಮಿಸ್‌ಬಿಡೆ ಪ್ಲೀಸ್...! ಅಲ್ಲಾ ಅಮ್ಮಾ.. ನನ್ನ ಸೋಲು- ಗೆಲುವುಗಳಲ್ಲಿ ಜೀವ ತುಂಬೋ ನಿನ್ನನ್ನು ನನಗೆ ಕೊಟ್ಟನಲ್ಲಾ ಆ ದೇವರು, ಅವನಿಗೆ ಅಂದ್ಹೇಗೆ ಥ್ಯಾಂಕ್ಸ್ ಹೇಳಲಿ.. ಕೆಲವೊಮ್ಮೆ ಕತ್ತಲಲ್ಲಿ ಬಿಕ್ಕುತ್ತೇನೆ ಅಮ್ಮಾ.. ನಿನ್ನ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ನನ್ನ ಅರ್ಹತೆನ ನೆನೆದು! ಅದೇನೋ ಈ ಬಗ್ಗೆ ಕಳವಳ ನನಿಗೆ, ಆತಂಕ ಜೊತೆಜೊತೆಗೆ, ಅದೇನೆ ಆದರೂ ಕೊನೆಗೆ ಆ ಕತ್ತಲು ಸೀಳಿಕೊಂಡು ಬರುವುದೂ ನಿನ್ನಲ್ಲಿಗೇ.. ಅಮ್ಮಾ... ಎಂದು. Love you ಕಣೆ  Love you lot…                                                                                                                                                                                         ನಿನ್ನ ಮುದ್ದು ಮಗಳು,ಸುಷ್ಮಾ..