ಬುಧವಾರ, ಫೆಬ್ರವರಿ 16, 2011

ನಿಟ್ಟುಸಿರಲ್ಲಿ...


ಕೈಗೂಡದ ಆಸೆಗಳು, ಭರವಸೆಗಳು ಸೋತು ನಿಂತಾಗ ಬದುಕಿಂದ ಎದ್ದೆ ಹೋಗುವಷ್ಟು ಹೃದಯ ಮರಟಿ ಹೋಗಿರುತ್ತದೆ..ಕಾಡುವ ಅತಿಯಾದ ಒಂಟಿತನ ಇದಕ್ಕೊಂದು ಮುಕ್ತಿ ಹಾಡು ಎಂದು ಬೇಡುವಂತೆ ಭಾಸವಾಗುತ್ತಿರುತ್ತದೆ..

ಬದುಕು ಎಷ್ಟೊಂದು ವಿಚಿತ್ರ ಅಲ್ವ?ಬೇಡ ಬೇಡವೆಂದರೂ ಹಿಡಿದು ಪಾಠ ಕಲಿಸಿ ಬಿಡುತ್ತೆ...ಬದುಕಿನ ಅರ್ಥ ಹುಡುಕುವಲ್ಲಿ ದೀನಳಾಗಿ ಬಿಟ್ಟಿದ್ದೇನೆ..ಒಳಗೊಳಗೇ ಒಂಟಿತನದ ಬೇಗುದಿಯಿಂದ ಕುದ್ದು ಹೋಗುತ್ತಿದ್ದರೂ.., ಈಗ ಜೊತೆ ಎಂದು ಅನಿಸುತ್ತಲೇ ಇಲ್ಲಾ..ಪ್ರೀತಿಸುವ ಅಪ್ಪ ಅಮ್ಮಾ, ಮುದ್ದು ಮಾಡೋ ತಮ್ಮ , ಎಲ್ಲದಕ್ಕೂ ನಾವಿರ್ತಿವಿ ಎನ್ನೋ ಸ್ನೇಹಿತರಿದ್ದರೂ ಅದ್ಯಾಕೋ ನನ್ನೊಳಗೆ ಹೇಳಿಕ್ಕೊಳಲಾಗದ ಭಾವ ಒಂಟಿಯಾಗಿಸಿ ಬಿಟ್ಟಿದೆ ನನ್ನನ್ನು..
ಅವತ್ತು ಅದೆಷ್ಟು ಕೇಳಿಕ್ಕೊಂಡಿದ್ದ, ಹತಾಶನಾಗಿಯೂ ಸಂತವಿಸುವ ಪ್ರಯತ್ನ ಮಾಡಿದ್ದ.."ನೀ ನಂಗೆ ಒಳ್ಳೆ ಗೆಳತಿ ಕಣೇ..ಅದಿಕ್ಕೆ ಪ್ರೀತಿ-ಪ್ರೇಮಗಳೆಂಬ ಬಣ್ಣ ಯಾಕೆ ಬೇಕು..ಪ್ರೀತಿಂತ ನೀ ನನ್ನ ಬಿಟ್ಟು ಹೋದರೆ, ನಾ ನೀನಿಲ್ದೆ ಒಂಟಿಯಾಗ್ತೇನೆ ಕಣೇ...ಲೈಫ್ ಲಾಂಗ್ ನಿನ್ನಂಥ ಬೆಸ್ಟ್ ಫ್ರೆಂಡ್ ನ ಮಿಸ್ ಮಾಡ್ಕೋತೇನೆ.." ಅಕ್ಷರಶ: ಆತ ಕಣ್ಣಿರಾಗಿದ್ದ..
ಅದೆಷ್ಟು ಠೋವಾಗಿದ್ದೆ ಆಗ ನಾನು..! ಬಹುಶಃ ಅವನಲ್ಲಿ ಸ್ನೇಹಿತನನ್ನು ಕಾಣೋದಿಕ್ಕೇ ನನ್ನಿಂದ ಆಗಲೇ ಇಲ್ಲಾ ..ಆ ಕ್ಷಣ ಆತನ ಸ್ನೇಹವನ್ನೂ ದಿಕ್ಕರಿಸಿ ಎದ್ದು ಬಂದಿದ್ದೆ..ಪ್ರೀತಿಯೆಂದುಕ್ಕೊಂಡಿದ್ದ  ಅವನಿಂದ, ಸ್ನೇಹಾನ ದೂರವಿಟ್ಟೆ..ಅವನ ಮಾತು, ಸರಳತೆ, ಹುಡುಗಿಯರ ಬಗ್ಗೆ ಅವನಿಗಿದ್ದ ಕಾಳಜಿ , ಕೊಡುತ್ತಿದ್ದ importance ಹುಡುಗಾ ಎಂದರೆ ಹೀಗಿರಬೇಕು ಎಂದೆನಿಸುವಂತೆ ಮಾಡತೊಡಗಿತ್ತು...ಗೊತ್ತಿಲ್ಲದಂತೆ ಪ್ರೀತಿಸತೊಡಗಿದೆ..ಇನ್ನು ಹೇಳಿಕೊಳ್ಳದೆ ಇರಲಾರೆ ಎಂದಾದಾಗ ಸಹಜ ಲಜ್ಜೆ ಬಿಟ್ಟು ಹೇಳಿಕ್ಕೊಂಡೂ  ಬಿಟ್ಟೆ..ಅಂದವನ ಆ ಉತ್ತರವೇ ಇಂದೂ ನನ್ನ ಈ ಪರಿ ತೋಳಲಾಡಿಸುತ್ತಿರುವುದು, ಒಂಟಿಯಾಗಿರಿಸಿರುವುದು..
ಇದೀಗ ಅವನ ಸ್ನೇಹ, ಪ್ರೀತಿ ಯಾವುದೂ ಇಲ್ಲದೆ ಇರುವ ಜೀವನಕ್ಕೆ ಒಗ್ಗಿಕ್ಕೊಂಡಿದ್ದೆನಾದರೂ..ಕಾಡುವುದು ಕಂಡ ಕನಸುಗಳು, ಒಗ್ಗೂಡದ ಪ್ರೀತಿಯ ನಿಟ್ಟುಸಿರು..ಮತ್ತು ನಿಟ್ಟುಸಿರ ತುಂಬಾ ನನ್ನ ಹುಡುಗಾ..!! ಇವೆಲ್ಲವನ್ನೂ ಪಕ್ಕಕ್ಕಿಟ್ಟು ನನ್ನೊಂದು ನೋವಿಗೆ ಇತರರನ್ನು ಬೇಜಾರು ಮಾಡಲು ಇಚ್ಚಿಸದೆ, ನಗುವಿನ ಮುಖವಾದ ಹೊತ್ತು ಅದೇ ಹಿಂದಿನ ನಾನಾಗಲು ಪ್ರಯತ್ನ ಪಡುತ್ತಲೇ ಇದ್ದೇನೆ.., ಪಟ್ಟಷ್ಟು ಸೋತ ಅನುಭವ..! 

ಒಮ್ಮೆ ಗೆಳತಿ " ಅದ್ಯಾಕೆ ಅವನು ಅಂದ್ರೆ ಸಾಯ್ತಿಯಾ...ಅವಂಗೆ ಈಗಾಗಲೇ ಬೇರೆ ಲವ್ ಇದೆ..ಅವನು ಸುಖವಾಗೆ ಇದ್ದಾನೆ..ನಿನ್ನ ಲವ್ವು, ಫ್ರೆಂಡ್ ಶಿಪ್ಪು ಸಿಗ್ಲಿಲ್ಲ ಅಂತ ಅವನೇನೂ ನಿನ್ನಂಗೆ ..." ಅದೇನೋ ಹೇಳುವಳಿದ್ದಳು -ತಡೆದೆ... ಎದೆಯೊಳಗೆ ನೂರಾರು ಭಾವ ಹೊತ್ತಿ ಉರಿಯುತ್ತಿದ್ದರೂ , ನಾ ಅವಳಿಗೆ ಅಂದಿದ್ದು.."ಪ್ರೀತಿಸಿಕ್ಕೊಂಡಿದ್ದು ನಾನು ಮಾತ್ರ ಅವನಲ್ಲ..!"


ಈಗ ಮತ್ತದೇ ಕಣ್ಣ ಕೊನೆಯಲ್ಲಿ ಒಂದು ಹನಿ, ಎದೆಯಲ್ಲಿ ಆಳವಾದೊಂದು ನಿಟ್ಟುಸಿರು..ಅದು ಅವನು ಸಂತೋಷವಾಗಿರುವುದಕ್ಕೆ ನನ್ನ ನೆಮ್ಮದಿಯದೋ..ನಾ ನೆಮ್ಮದಿ ಕಳಕ್ಕೊಂಡ ದುಖಃಕ್ಕೊ ..ನನಗಿನ್ನೂ ಅರ್ಥ ಆಗಿಲ್ಲ..! ಆದರೆ ನಾನು ಮಾತ್ರ ಮತ್ತದೇ ಅವಳೇ ..ಅವನ್ನ ಜೀವಕ್ಕಿಂತ ಜಾಸ್ತಿ ಪ್ರೀತಿಸಿಕೊಳ್ಳೋ ಹುಡುಗಿ..