ಗುರುವಾರ, ಡಿಸೆಂಬರ್ 1, 2011

ಎದ್ದು ನಿಲ್ಲುವ ಹೊತ್ತಲ್ಲಿ....!ಹಾಗೆ ಹುಣ್ಣಿಮೆಯ ರಾತ್ರಿಯಲ್ಲಿ ಚಂದಿರನ ದಿಟ್ಟಿಸುತ್ತ ಕುಳಿತಿದ್ದೆ.... ತುಂಬಾ ಚಂದ- ಚಂದಮಾಮ! ಅವನಿಗಾದರೂ ಅದೆಷ್ಟು ಜೊತೆಗಾರರು...? ನಕ್ಷತ್ರಗಳ ಜೊತೆ ಅವನ್ನು ಮೀರಿಸಿ ಮಿಂಚುವವನು.. ಕೈಗೆ ಸಿಗೋ ನೀನು ಎಂಬ ಹಂಬಲಕ್ಕೆ ತಳ್ಳುವವನು.. . ಅದೆಷ್ಟು ತಾರೆಗಳ ಸ್ನೇಹ ಅವನಿಗೆ... ಹುಣ್ಣಿಮೆಯ ರಾತ್ರಿಯಂದು ಉಕ್ಕೇರುವ ಶರಧಿಯ ಜೊತೆ ಪ್ರೇಮ ಬೇರೆ...ಜಗತ್ತಿನಲ್ಲಿ ಅವನಿಗಿಂತ ಸುಖಿ ಬೇರೆಯಾರಿದ್ದಾರೆ?! ಸ್ನೇಹ-ಪ್ರೇಮಗಳು ಬದುಕಿನಲ್ಲಿ ಹದವಾಗಿ ಬೇರೆತರೆಷ್ಟು ಚಂದ..! ಚಂದಮಾಮನ ಕೈನ ಮಿಟಾಯಿಗೆ ಜೊಲ್ಲು ಸುರಿಸುತ್ತ ನಿಂತಿರೋ ಪುಟ್ಟಿಯಂತಾಗಿದ್ದೆ ...

ಒಂದು ಪ್ರೀತಿಗೆ ಸ್ನೇಹ ಬೇರಾದರೆ, ಇನ್ನೊಂದು ಸ್ನೇಹಕ್ಕಾಗಿ ಪ್ರೀತಿ ವಿನಾಃಕಾರಣ ಕುಸಿಯುತ್ತಿದೆ...!!  ಸ್ನೇಹ ಪ್ರೀತಿಯ ಮೋಹದಲ್ಲಿ  ಬಲಿಯಾಗಿರೋ ಮನಸ್ಸು ಮಾತ್ರ ಒಂದೇ... ಮನುಷ್ಯ ಸಂಬಂಧಗಳು ದುಡ್ಡು ಕಾಸಿನಿಂದ ಅಳೆಯುವಂತದ್ದೆ?! 
ತೀರಾ ಒಬ್ಬಂಟಿ ಅನಿಸಿದಾಗ ಕೊರಳ ಸೆರೆ ಉಬ್ಬಿ ಬರುತ್ತದೆ...ತಡೆತಡೆದು ಹಿಡಕೊಂಡ ಕಣ್ಣೀರು ಸೋರುತ್ತದೆ. ನನ್ನದೇ ಎನ್ನುವ ಇನ್ನೊಂದು ಜೀವಕ್ಕೆ ಇದನ್ನೆಲ್ಲಾ ಹೇಳಿ "ನಾನಿದ್ದೇನೆ ಕಣೋ" ಅನ್ನೋ ಅವನ ಮಾತಿಗೆ ಹಂಬಲವಾಗುತ್ತದೆ.. ದೂರದ  ತೀರದಲ್ಲಿ ಕೈ ಹಿಡಿದುಕ್ಕೊಂಡು ನಡೆದು ಹೋಗಿ ಭದ್ರತೆಯ ಭಾವವನ್ನು ಆಸ್ವಾದಿಸುವ ಮನಸಾಗುತ್ತದೆ..ಬೇರೆಯಾದ  ಗೆಳೆಯರ ನೋವನ್ನ ಅವನ ಮಡಿಲಿಗೆ ಹಾಕಿ ಮಗುವಾಗಿ ಬಿಡುವ ಆಸೆಯಾಗುತ್ತದೆ...ಅಂದುಕ್ಕೊಂಡದ್ದೆಲ್ಲ ಆಗಿ ಬಿಡುವಂತಿದ್ದರೆ ಜೀವನಕ್ಕಿರುವ ಅರ್ಥವಾದರೂ ಏನು?ಕೈಯ ಗೋರಂಟಿ ಬಣ್ಣ ಕಳೆದುಕ್ಕೊಂಡಿದೆ..ಮನದ ರಂಗವಲ್ಲಿ ಮಾಸಿದಂತಿದೆ...

ನೋವು, ಹತಾಶೆ,ನಿರಾಸೆಗಳೇ ಸಾಂಗತಿಗಳಾಗಿ ಬಿಟ್ಟರೆ ಜೀವನ ಪ್ರೀತಿ ಹುಟ್ಟುವುದಾದರೂ ಎಲ್ಲಿಂದ? ಎದ್ದು ನಿಲ್ಲುವ ಹೊತ್ತಲ್ಲಿ ಒದ್ದು ಹೋದರೆ ಏನೆನ್ನಲಿ? 
ತೀರ ಯೋಚಿಸಿಕ್ಕೊಂಡು ಗುಣಿಸಿ,ಕಳೆದು,ಭಾಗಿಸಿ, ತಾಳೆ ನೋಡಿ ಕೂಡಿಸಿಕ್ಕೊಂಡಿದ್ದ ಪ್ರೀತಿಯದು..ಕನಸಿನರಮನೆಯ ಕಟ್ಟಿ ಕೊಟ್ಟವನು..ನೀನೇನೂ ನನಗಲ್ಲವೇ ಅಲ್ಲ ಅನ್ನುವಂತೆ ನೆಗ್ಲೆಕ್ಟ್ ಮಾಡತೊಡಗಿದರೆ..ಜೀವ ನಿಲ್ಲುವ ಸೂಚನೆಯಿದೆಯೇ?

ಎಲ್ಲ ಸರಿಯಿದೆ ಅಂದುಕ್ಕೊಳ್ಳುವಷ್ಟರಲ್ಲೇ ಪದೇ ಪದೇ ಅನಿಸುವಷ್ಟು ಸಾರಿ ಹೀಗಾಗುತ್ತಿದೆ...
ಮುಖವಾಡ ಕಳಚುತ್ತಲೇ ಇದೆ..ಎತ್ತಿ ಮತ್ತೇ ಹಾಕಿಕ್ಕೊಳುತ್ತೇನೆ.ನಗುತ್ತೇನೆ ನಗಿಸುತ್ತೇನೆ ಪಟಪಟ ಮಾತಾಡಿ ಎಲ್ಲವನ್ನು ಮರೆತು ನಿರ್ಲಿಪ್ತಳಾಗಿದ್ದೇನೆ ಎಂದುಕ್ಕೊಳ್ಳುತ್ತೇನೆ..ಅಷ್ಟರಲ್ಲಿ ಮತ್ತೇ ಪರದೆ ಸರಿಯುತ್ತದೆ..ನನ್ನೊಳಗಿನ ನಾನು ಮತ್ತೇ ನಾನೇ! ಮತ್ತದೇ ಅರ್ಥವಾಗದ ಸೂಕ್ಷ್ಮತೆಗಳೊಂದಿಗಿನ ತೊಳಲಾಟ..


ಸೋತ ಹೃದಯ, ಕಣ್ಣಹನಿ, ಕಮರಿದ ಕನಸುಗಳು,ಎದೆಯ ಮಿದುವಲ್ಲಿ ಹೆಪ್ಪುಗಟ್ಟಿದ ನೋವು...ಬಿಡದೆ ಕಾಡುತ್ತದೆ..ಕೆನ್ನೆ ತೋಯಿಸಿದ ನೆನಪುಗಳಿಂದ ಕೊಡವಿಕ್ಕೋಳ್ಳುವೇನೆಂದು ಕಣ್ಣೆತ್ತಿದರೆ ಮೋಡಗಳ ಜೊತೆ ಚಂದಮಾಮ ಸರಸವಾಡುತ್ತಿದ್ದ. ಪಕ್ಕನೆ ನೋಡಿ ನಕ್ಕಂತಾಯಿತು... "ನಾನಿದ್ದೇನೆ ಹುಡುಗಿ...ನಿನ್ನೊಳಗೆ ಹೊಸ ಕನಸ ಕಸು ಮಾಡಲು..." ಎಂದತಾಯಿತು...ನಸುನಕ್ಕೆ...

8 ಕಾಮೆಂಟ್‌ಗಳು:

 1. ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸರ್..

  ಪ್ರತ್ಯುತ್ತರಅಳಿಸಿ
 2. ಚಂದಮಾಮನ ಕೈನ ಮಿಟಾಯಿಗೆ ಜೊಲ್ಲು ಸುರಿಸುತ್ತ ನಿಂತಿರೋ ಪುಟ್ಟಿಯಂತಾಗಿದ್ದೆ ...

  ತುಂಬಾ ಚಂದವಾಗಿದೆ ವಾಕ್ಯ....

  ಹೂಂ... ಒಬ್ಬಂಟಿ ಬರೋ ಕನಸುಗಳನ್ನು ಭಾವನೆಗಳನ್ನು ಕೊಲ್ಲೋದು ಕಷ್ಟ.....

  ತುಂಬಾ ನಗಿಸುವವರು ತುಂಬಾ ನಗುವವರು ತುಂಬಾ ದುಃಖವನ್ನು ಒಡಲಲ್ಲಿ
  ತುಂಬಿಕೊಂಡಿರ್ತಾರಂತೆ......

  ಸೂಕ್ಷ್ಮಗಳೆಲ್ಲವೂ ಅವರ ಪಾಲಿಗೇ ಎಂಬಂತೆ ತಾಗಿಸಿಕೊಳ್ತಾರೆ....

  ಮೃದುವಾಗಿರ್ತಾರೆ....
  ಮತ್ತೆ ಒಬ್ಬಂಟಿ ಸಮಯದಲ್ಲೇ ದುಃಖ ಕರೆಸಿಕೊಂಡು ಅಳುವಾಗ್ತಾರೆ....

  ಬರಹ ತುಂಬಾ ಇಷ್ಟವಾಯ್ತು ಸುಷ್ಮಾ.......
  ಬರೆಯುತ್ತಿರಿ.....
  ಓದುತ್ತಿರುತ್ತೇವೆ....

  ಪ್ರತ್ಯುತ್ತರಅಳಿಸಿ
 3. ಹಾಗೆ ಸುಮ್ಮನೆ ಗೀಚಿದ್ದನ್ನು ಇಷ್ಟ ಪಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಕನಸು ಕಂಗಳ ಹುಡುಗಾ.....

  TanQ so much..

  ಪ್ರತ್ಯುತ್ತರಅಳಿಸಿ
 4. "ಚಂದಮಾಮ, ಚಕ್ಕುಲಿಮಾಮ
  ನಿನ್ನನು ನೋಡಿ ನಗುತಿರುವ..!
  ಕೋಪ ಬಿಟ್ಟು..,
  ಕಚಗುಳಿ ಇಟ್ಟು..!
  ನಿನ್ನನ್ನು ನಗಿಸು ಎನುತಿರುವ..!" :)
  ಕೇಳು ಬಾ ಪುಟ್ಟಿ..!! :)

  ಪ್ರತಿಯೊಬ್ಬರ ಜೀವ ಒಂದೇಯಾದರೂ
  ಮನಸುಗಳು ಮಾತ್ರ ಎರಡೆರಡು..! :)
  ಕನಸುಗಳು ನೂರಾರು..!

  ಅವರವರ ಜೊತೆ ಅವರವರ ಕನಸು ತುಂಬಿದ
  ಆ ಎರಡೂ ಮನಸುಗಳೂ ಆ ಒಂದೇ ಜೀವದಲ್ಲಿ
  ಸದಾ ಜೊತೆ ಜೊತೆಯಾಗೇ ಇರುತ್ತವೆ..!

  So, ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ..! ♥ ♥
  ನೆನಪಿರಲಿ..! :)♥

  ಪ್ರತ್ಯುತ್ತರಅಳಿಸಿ
 5. ನೂರು ಕನಸಿನ ಮದ್ಯೆ ಒಂದು ಒಂಟಿ ಜೀವ ಎನ್ನುವಂತೆಲ್ಲಾ..ಕೊರಗುವ ಮನಸ್ಸುಗಳಿಗೆ ಸ್ಫೂರ್ತಿ ನಿಮ್ಮ ಈ ಕವನ...
  ಒಂದು ಜೀವದಲ್ಲಿ ಎರಡು ಮನಸ್ಸುಗಳು ಎಂಬುದೇ ಅದ್ಭುತ ಕಲ್ಪನೆ... ನೈಸ್..
  ಪ್ರತಿಕ್ರಿಯೆಗೆ ಧನ್ಯವಾದ..

  ಪ್ರತ್ಯುತ್ತರಅಳಿಸಿ
 6. ಚಂದಮಾಮನ ಕೈನ ಮಿಟಾಯಿಗೆ ಜೊಲ್ಲು ಸುರಿಸುತ್ತ ನಿಂತಿರೋ ಪುಟ್ಟಿಯಂತಾಗಿದ್ದೆ ...
  ಸುಂದರ ಸಾಲುಗಳು...

  ಹೌದು - ಚಂದ್ರನೆಂದರೆ ಹಾಗೇ ಎಷ್ಟು ಬಾಚಿಕೊಂಡರೂ ಖಾಲಿಯಾಗದಷ್ಟು ಕನಸುಗಳನ್ನು ತನ್ನ ಜೋಳಿಗೆಯಲ್ಲಿಟ್ಟುಕೊಂಡು ನಮ್ಮೆಡೆಗೆ ಚೆಲ್ಲುತ್ತಿರುವ ಜಾದೂಗಾರ...

  ಚಂದನೆಯ ಬರಹ...

  ಪ್ರತ್ಯುತ್ತರಅಳಿಸಿ
 7. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಸರ್...

  ಪ್ರತ್ಯುತ್ತರಅಳಿಸಿ