ಶನಿವಾರ, ಡಿಸೆಂಬರ್ 31, 2011

ಗೆಳೆಯಾ..ಬಿರುಬಿಸಿಲಲ್ಲಿ ಮೈಮನ ತೋಯ್ವ ಸೋನೆ ನೀನು
ಆ ಕ್ಷಣ ಹೃದಯವ ಹಾರಿಸಿ ಕಚಗುಳಿ ಇಡುವ ತಂಗಾಳಿ ನೀನು 
ಕೇಳುವ ಆಸೆ ಎನಗೆ ನಿನ್ನಂತರಂಗದಲ್ಲೊಂದು ಜಾಗವನ್ನ 
ಬೇಡವೆಂದರೆ ಹೇಗೆ ಮರೆಯಲೋ ನಿನ್ನಾ..?ಆ ಸವಿ ಕನಸುಗಳನ್ನ.


ನೀನಿಲ್ಲದ ಜಗ ನಿಲುಕದು ಎನ್ನಯ ಕಲ್ಪನೆಗೆ 
ನಿನ್ನೊಲವಿನ ಹಸಿರುಗರಿಕೆಯ ಆಧಾರವದಕೆ 
ನಿನ್ನಯ ಸನಿಹ ಬಯಸಿದೆ, ಬೇಕೆನಿಸಿದೆ ಬಾರೆಯ?
ನಿನ್ನಯ ಪ್ರೀತಿ ತುಂಬಿದ ಹೃದಯವ ನೀಡೆಯಾ?

ಮೌನದಲ್ಲೇ ಮಾತಿನ ಹುಡುಕಾಟ ಗೆಳೆಯಾ 
ತುಟಿ ಕಂಪಿಸದ ಹೊರತು ಮಾತಿಲ್ಲವೇನೋ ಇನಿಯಾ
ಹೃದಯದ ಭಾಷೆಗೆ ಮಾತೇಕೆ 
ಅಲ್ಲೊಂದು ಪುಟ್ಟ ತಣ್ಣಗಿನ ನಗು ಇರುವಾಗ?

ದುಗುಡಗಳಿಗೆ ಬೇಕಿದೆ ನಿನ್ನ ಪ್ರೀತಿಯ ಗುಳಿಗೆ
ಈ ಕನಸು ಕಂಗಳ ತುಂಬೆಲ್ಲ ನಿನ್ನದೇ ಕನವರಿಕೆ
ಅನುರಾಗದ ಕಂಪಿನಲಿ ನಿನ್ನೊಲವಿನ ಕನಸುಗಳೊಂದಿಗೆ
ಇರುವೆನು ನಿನ್ನ ಜೊತೆ ಜೊತೆಯಲಿ..{ಪಿಯುಸಿ ನಲ್ಲಿ ಬರೆದ ಕವನ, ಡೈರಿ ಯೊಳಗೆ ಬೆಚ್ಚನೆ ಮಲಗಿತ್ತು...ಎಬ್ಬಿಸಿ ನಿಮ್ಮ ಮುಂದೆ ನಿಲ್ಲಿಸಿದ್ದೇನೆ...ಹೇಗಿದೆ ಎಂದು ಹೇಳ್ತಿರಲ್ಲ...?
}

ಮಂಗಳವಾರ, ಡಿಸೆಂಬರ್ 27, 2011

ಅಮ್ಮ ಫೋನ್ ನಲ್ಲಿ ಒಂದು ಗಂಟೆ ಲೆಕ್ಚರ್ ಕೊಟ್ಟು ಬಿಟ್ಲು ನಿನ್ನಿಂದಾಗಿ. ಅಲ್ಲೇ ಇದ್ಕೊಂಡು ಅದೆಂಥ ಫಿಟ್ಟಿಂಗ್ ಇಡ್ತಿಯೋ ಮಾರಾಯಾ..?ದೂರ ಇದ್ರೂ ಕಾಡೋದು ಬಿಟ್ಟಿಲ್ವಲ್ಲೋ..ಪಾಪಿ! ನಾನು ಇಂಜಿನಿಯರಿಂಗ್ ಮಾಡ್ತಿರೋದೆ ದಂಡಿ ಅಂದು ಬಿಟ್ಲು ಅಮ್ಮ .ನೀನು ಮಾತ್ರ ಬಿ.ಎ ಮಾಡ್ತಾ ಹೀರೋ ಆಗ್ಬಿಟ್ಟೆ ನೋಡು. ಮೂರು ಸೆಮ್ ಕಳೆಯೋವಷ್ಟರಲ್ಲಿ ಕಾಲೇಜ್ ನಲ್ಲಿ ನಿಂದೆ ಕಾರುಬಾರಂತೆ..ಕತೆ,ಕವನ,ಪ್ರಬಂಧ,ಭಾಷಣ ಅಂತೆಲ್ಲ ಬಹುಮಾನಗಳ ಮೇಲೆ ಬಹುಮಾನ, ಸ್ಕಾಲರ್ ಶಿಪ್ಪು ಎಲ್ಲ ಬಾಚ್ಕೊತ ಇದ್ದೀಯಂತೆ..ಅಮ್ಮ ಹೇಳಿದ್ಲು. ಇಲ್ಲಿ ನಿನ್ಹಾಗೆ ಇದ್ರೆ 'ಗಾಂಧಿ' ಅಂತ ರೆಗಿಸ್ತಾರೆ ಕಣೋ..ನಂಗಂತೂ ಆ ಪಟ್ಟ ಬೇಡಪ್ಪ..! ಇದನ್ನ ಸ್ವಲ್ಪ ನಿನ್ನತ್ತೆಗೆ ಬಿಡಿಸಿ ಹೇಳು. ಇಷ್ಟಕ್ಕೂ ಒಂಚೂರು ಜಾಲಿಯಾಗಿರೋದನ್ನ ರೂಡಿಸಿಕೋ ಮಾರಾಯ..ಕಾಲೇಜು ಲೈಫಿದು. ಮತ್ತೇ ನೀನು ಕನ್ನಡ ಮೇಷ್ಟ್ರಾಗಿ ದಪ್ಪ ಕನ್ನಡಕ ಮೂಗಿಗೇರಿಸಿಕ್ಕೊಂಡಿದ್ದಾಗ  ಈ ಸಮಯ ದಕ್ಕುವುದಿಲ್ಲ ನೋಡು...

Hmm...ಇಷ್ಟಕ್ಕೂ ನಿನ್ನ ಹೊಗಳಿದ್ದಕ್ಕೆ ನನ್ನದೇನೂ ಬೇಜಾರಿಲ್ಲಪ್ಪ...ಈಗೀಗ ಅದು ಮಾಮೂಲು..! ನನಲ್ಲಿ ಇಲ್ಲದ್ದಕ್ಕೆ ಅಲ್ಲವಾ ನಿನಗೇ ಎಲ್ಲ ಸಿಗುತ್ತಿರುವುದು! ಇಲ್ಲಂತೂ ಹಾಗಿರುವುದಕ್ಕೆ ಸಾದ್ಯವಿಲ್ಲ ( ಅಲಿಖಿತ ನಿಯಮ!!) ಇರುವೆಲ್ಲಾ ಟೈಮು ಹರಟೆ, ಕ್ಯಾಂಟೀನ್, ಮತ್ತೇ ಸ್ವಲ್ಪ ಸಮಯ ಕಾರಿಡಾರ್ ನಲ್ಲಿ ಆಚೀಚೆ ತೀರುಗಾಡುತ್ತಾ, ಲೈನ್ ಹೊಡಿಸಿಕೊಳ್ಳುತ್ತ ಕೊಳೆದು ಹೋಗುತ್ತದೆ ನೋಡು..ಇನ್ನು ಹಾಸ್ಟೆಲ್ ಮುಟ್ಟಿದರೆ ತಮಾಷೆಯ ಯೋಗವಿಲ್ಲ...ಪುಸ್ತಕ್ಕವನ್ನೇ ಅರೆದು ತಿನ್ನಬೇಕು, ಕುಡಿಯಬೇಕು ಎನ್ನುವಂತೆ ಸ್ಟ್ರಿಕ್ಟ್ ವಾರ್ಡನ್.. ಈ ಮದ್ಯೆ ಬಹುಮಾನದ ಸ್ಪರ್ದೆಗಳಿಗೆ ಹೋಗೋಕೆ ಪುರುಸೊತ್ತು ಎಲ್ಲಿದೆಯೋ ನಾ ಕಾಣೆ!


ಹೌದೂ.., ಕಾಲೇಜ್ ಗೆ ನೀನೆ ಹೀರೋ ಎಂದ ಮೇಲೆ, ನಿಂಗೊಬ್ಬಳು ರಾಜಕುಮಾರಿ ಸಿಕ್ಕರಲೇ ಬೇಕಲ್ಲವಾ..?
ಸಿಕ್ಕಿದಳಾ..? ಲೈನ್ ಹೊಡೆಯೋಕೆ ಬರದ ಪೆದ್ದು ನೀನು, ಸಿಕ್ಕಿರೋಲ್ಲ ನಂಗೆ ಗೊತ್ತು..
ಬಟ್ ನಾನು ನಿನ್ನ ಹಾಗಲ್ವೆ...ನನ್ ಕಥೆ ಕೇಳು..

ಭರತ ಅಂತ ನನ್ ಸಿನಿಯರ್ರು. ನಮ್ಮ ಕ್ಲಾಸ್ ರೂಂ ಮುಂದೆ ತುಂಬಾನೇ ಅಡ್ಡಾಡ್ತಾ ಇರ್ತಾನೆ. ವಿಜಿ ಹತ್ರ ನನ್ ನಂಬರ್ ರ್ರೂ ಕೇಳಿದನಂತೆ. ನಾವೋ ಹುಡುಗೀರು ಇಂಥ ವಿಷಯದಲ್ಲಿ ಬೇಗ ಮೈಂಡ್ ಅಗ್ತಿವಿ.(ನಿನ್ನಂಥ ಸೈಲೆಂಟ್ ಹುಡುಗರ ಕತೆ ನಮಗೆ ಗೊತ್ತಾಗಲ್ಲ ಮಾರಾಯ..! ) ಇಷ್ಟರಲ್ಲಿ ಅವ್ನು ಒಳ್ಳೆ ನೇಚರ್ ಹುಡ್ಗ, ಬ್ರಿಲಿಯೆಂಟ್ ಸ್ಟುಡೆಂಟ್ ಅಂತ ಅವನ ಬಗ್ಗೆ ಸರ್ಟಿಫಿಕೇಟ್ ಕೊಡ್ತಾ ಇದ್ರು ಅವನ ಕ್ಲಾಸ್ ಗರ್ಲ್ಸ್. ನಮ್ ಭಾಷೇಲಿ ಹೇಳ್ಲಾ?! ಪೂಸಿ ಹೊಡಿತ ಇದ್ರು ಕಣೋ..! ಒನ್ ಫೈನ್ ಡೇ ಪ್ರಪೋಸ್ ಮಾಡೇ ಬಿಟ್ಟ..ಬೇಡ ಅನ್ನೋಕೆ ಮನಸೇ ಬರ್ಲಿಲ್ವೋ...!

ಇನ್ನೂ ಹೇಮಂತ್ ಇವ್ನು ನಂದೇ ಕ್ಲಾಸ್, ಇತ್ತೀಚಿಗೆ ನಮ್ಮ ಫ್ರೆಂಡ್ಸ್ ಸರ್ಕಲ್ ಗೆ ಸೆರ್ಕೊಂಡ ಹೊಸ ಹುಡುಗ..ಸ್ಟೈಲಿಶ್, ಹ್ಯಾಂಡ್ ಸಂ ....etc etc..! ಹುಡ್ಗೀರೆಲ್ಲ ಅವನ ಹಿಂದೇನೆ...ಇಂತಿಪ್ಪ ವೇಳೆಯಲ್ಲಿ, ಹೇಮಂತನೆ ಲವ್ವಿಗೆ ಆಫರ್ ರ್ರು ಕೊಟ್ಟೆ ಬಿಟ್ಟ , ನನ್ ಇನ್ನೋಸೆಂಟ್ ಫೇಸ್ ಅವಂಗೆ ಬಹಳ ಇಷ್ಟ ಅನ್ನೋದು ಕಾರಣ..ಹೊಸಬ ಅಲ್ವಾ, ನನ್ ಇನ್ನೋಸೆನ್ಸ್ ಬಗ್ಗೆ ಇನ್ನೂ ಗೊತ್ತಿಲ್ಲ..ಪಾಪ! ಇರಲಿ ಬಿಡು...ಹೆಂಗೋ ಬೇಡ ಅನ್ನೋದು? ಅಷ್ಟೊಂದೆಲ್ಲ ಹುಡ್ಗೀರು ಅವನ್ನ ಇಷ್ಟಪಡ್ತಾ ಇದ್ರೂ ಇಂವ ನನ್ನ ಇಷ್ಟಪಟ್ಟಗಾ...ಇಷ್ಟರ ಮೇಲೆ ಒಳ್ಳೆ ಹುಡ್ಗ ಅಂತ ಮನಸೂ ಬೇರೆ ಹೇಳ್ತಾ ಇತ್ತಲ್ಲ...
ಇಬ್ರಿಗೂ ಬೇಡ ಅನ್ನಲಿಲ್ಲ...ನಿಜ್ಜಾ..ರೈಸ್ ಆಗಿರೋ ಹಾರ್ಟ್ ಬೀಟ್ ನ ಕಮ್ಮಿ ಮಾಡ್ಕೋ..ಓಕೆ ಅಂತನೂ ಹೇಳಿಲ್ಲ..
ಟೈಮ್ ಕೇಳ್ದೆ...ಸಾತಾಯಿಸೋದ್ರಲ್ಲೂ ಎಂತಹ ಮಜಾ ಇರತ್ತೆ ಗೊತ್ತ?
ಕಾಲೇಜ್ ನಲ್ಲಿ ಆಲ್ ಮೋಸ್ಟ್ ಎಲ್ಲರಿಗೂ ಒಂದು ಪೇರ್ ಅಂತ ಇರೋವಾಗ ನಂಗೆ ಬೇಡ್ವಾ? ಪಾಕೆಟ್ ಮನಿ ಶಾರ್ಟೆಜ್ ಬಂದ್ರು ತೊಂದ್ರೆ ಇರೋಲ್ಲ...ಹೀಗೆಲ್ಲ ಯೋಚನೆ ಮಾಡಿ ಮಾಡಿ..ಅಂತೂ ಕಡೆಗೆ ಇಬ್ರಿಗೂ ಬೇಡ ಅಂದ್ಬಿಟ್ಟೆ.. ಆದ್ರೂ ಇಬ್ರೂ ಬಿಡೋ ಹಾಗೆ ಕಾಣ್ತಿಲ್ಲ..ಲವ್ವು ಲವ್ವು ಅಂತಿದಾರೆ..ನನಗೋ ಒಳಗೊಳಗೇ ಖುಷಿ. ಕಾರಣ ಕೇಳಬೇಡ!
ಇಷ್ಟಕ್ಕೂ ಇದು ಸ್ವಲ್ಪ ದಿನ ಅಷ್ಟೇ ಬಿಡು. ನನಗಿಂತ ಚಂದದೊಳು ಇನ್ನೊಬ್ಳು ಸಿಕ್ರೆ ತಾನಾಗೆ ದೂರ ಸರಿತಾರೆ..no problem. ಮತ್ತೂ ಬಿಟ್ಟಿಲ್ಲ ಅಂದ್ರೆ ನೀನು ಕಾಲೇಜ್ ಹತ್ರ ಬಂದ್ಬಿಡು.ನಿನ್ನನ್ನ ಅವರಿಬ್ರಿಗೆ ತೋರಿಸಿ ಬಿಡ್ತೀನಿ. ಆಗಂತೂ ಸುಮ್ಮನಾಗಲೇ  ಬೇಕಲ್ಲ..?

ಅವರಿಬ್ರ ಕಲರ್ ಮಾಡಿರೋ ಕೂದಲು, ಲೋವೆಸ್ಟ್ ಜೀನ್ಸ್ , ಬಣ್ಣ ಬಣ್ಣದ ಶೂಸ್ ಗಿಂತ ಸದಾ ಪಾರ್ಮಲ್ಸ್ ನಲ್ಲಿ ಇರೋ "ಪೆದ್ದಂಭಟ್ಟ " ನೀನೆ ಇಷ್ಟ ಕಣೋ..ನಿನ್ನ ಚಿಗುರು ಮೀಸೆಯ ಕೆಳಗೆ ಅಡಗಿರೋ ಆ ತುಂಟ ನಗು ಇನ್ನೂ ಇಷ್ಟ...

ಈ ತಲೆಹರಟೆನೆಲ್ಲ ..ಅಮ್ಮಂಗೆ ಹೇಳಿ ಬಿಡಬೇಡ ಮಾರಾಯ..ಫೋನ್ ನಲ್ಲೆ ಕ್ಲಾಸ್ ಶುರುವಾಗತ್ತೆ ಆಮೇಲೆ...


ಶನಿವಾರ, ಡಿಸೆಂಬರ್ 17, 2011

ಪರಿ..


ಎಣೆಯಿಲ್ಲದ ಬವಣೆಗಳು
ಎಡಬಿಡದೆ ಕಾಡುತಿರೆ
ಗುರಿಯಿಲ್ಲದ ದಾರೀಲಿ 
ಗತಿಗೆಟ್ಟು ಹೋಗುತಿರೆ
ಬಿಸಿಲ್ಗುದುರೆಯ ತಾಪ
ಬೆಂಬಿಡದೆ ತಟ್ಟುತಿರೆ
'ಅಂದು-ಕೊಂದ'ವರೆಷ್ಟು?
ಸುಟ್ಟ ಕನಸುಗಳಲ್ಲಿ 
ಜೀಕುವ ಗಟ್ಟಿ ಬದುಕು!
ಚಿಂತೆಗಳ ಸಂತೆಯಲ್ಲಿ
ರಾಶಿ ನೆನಪುಗಳ ಕಂತೆ
ಕಣ್ಣಂಚು ದಾಟಿ ಬರಲು
ತವಕಿಸುವ ಹನಿಗೆ
ನಿನ್ನ ಸ್ವರ್ಶ..
ಎದೆಯ ಮಿದುವೊಳಗೆ
ಹೆಪ್ಪುಗಟ್ಟಿ ಕೂತ 
ದುಃಖಸಾಗರ 
ನಿನ್ನೊಳಗೆ ಹರವಿ ಹೋದ
ಪರಿ ಹೇಗೆ?!
ಶನಿವಾರ, ಡಿಸೆಂಬರ್ 10, 2011

ಬಿಡದೆ ಬಿಟ್ಟಂತೆ...(ಜೊತೆಯಲಿದ್ದೂ ಇಲ್ಲವೆನ್ನುವ ನಿನಗೆ...! )


ಮುದ್ದು...


ನನಸಾಗದ ಕನಸುಗಳ ಉರಿಯಿನ್ನೂ ಆರಿಲ್ಲ..ದಹದಹಿಸುತ್ತಿದೆ..ತೀರಾ ಗೋಜಲು ಗೊಜಲಾಗಿರೋ ನಿನ್ನ ಮನಸ್ಥಿತಿ ಮತ್ತು ನಿರ್ಧಾರಗಳ ಬಗ್ಗೆ ಇನ್ನೊಂದು ಮಾತನಾಡಲಾರೆ ಎಂದು ಅವಡುಗಚ್ಚಿ, ನೋವುಗಳ ಒತ್ತೆಯಿಟ್ಟು ಬದುಕಿದ್ದೆ. ಇನ್ನಾಗದು ಗೆಳೆಯಾ...ನಿನ್ನ ಮಾತುಗಳನ್ನು,ನಿರ್ದಾರಗಳನ್ನು ಸಮ್ಮತಿಸಿ 'ದೂರವಿದ್ದು ಬಿಡೆ ಹುಡುಗಿ' ಅನ್ನೋ ಬುದ್ದಿಯಿದೆ.ಆದರೆ ಹ್ರದಯವೆಂದೊಂದು ಉಂಟಲ್ಲ..?ನಿನ್ನ ಮೌನದ ಬೆಂಕಿಯಲ್ಲಿ ಬೂದಿಯಾಗ ಹತ್ತಿದ್ದೇನೆ..
ಆಕಸ್ಮಿಕವಾಗಿ ಬಂದೆ ಬದುಕೆಂದರೆ ನೀನೇ ಎನಿಸಿಕ್ಕೊಳ್ಳುವಷ್ಟು ಪ್ರೀತಿಸಿಕ್ಕೊಂಡೆ, ಈಗ ಮತ್ತೇ ಹಿಂದಿರುಗುವ ದಾರಿಯಲ್ಲಿದ್ದಿಯ..ಇಲ್ಲಿ ನಾನೂ ಮಾತ್ರ ಒಬ್ಬಂಟಿ. ನೆನಪುಗಳೇ ಸಂಗಾತಿ . ಬದುಕಿನ ದಾರಿಯಲ್ಲಿ ಚಂದದ ಕನಸಿಟ್ಟು ಅದನ್ನೇ ಬೆಳಕಾಗಿಸುವ ಮಾತಾಡಿದವನು.. ನಾ ರಾಜ ನೀ ರಾಣಿ ಎನ್ನುತ್ತಾ ಕನಸಿನರಮನೆಯ ಕಟ್ಟಿದವನು, ಬದುಕಿನುದ್ದಕ್ಕೂ ಜೊತೆ ಇರುವೆ ಎಂದವನು, ಬಾಚಿ ತಬ್ಬಿ ಉಸಿರುಗಟ್ಟಿಸುವ ಬಾಹುಬಂಧನದಲ್ಲಿ 'ಎಂದೂ ನಿನ್ನವನೇ' ಎಂದೂ ಪಿಸುಗುಟ್ಟಿದವನು..ಎಲ್ಲಾ ಮರೆತು ಹಿಂದುರುಗುತ್ತಿಯಾ?!
ಹಾಗಂತ ನಮ್ಮ ಪ್ರೀತಿಯೇನು ಮುರಿದುಬಿತ್ತಾ..?ಎಂದರೆ ನನ್ನಲ್ಲಿ ಉತ್ತರವಿಲ್ಲ..ಜೋತೆಲಿದ್ದೂ  ಇಲ್ಲದಂತೆ ಇದ್ದಿಯಾ..ನಾನೂ ಇದ್ದೇನೆ ಬಿಡದೆ ಬಿಟ್ಟಂತೆ..ನಾಳೆ ಹೊರಡುವವ ನಾನೂ,ಇವತ್ಯಾಕೆ ಈ ಪರಿ ಪ್ರೀತಿಂತ ಇರ್ತಿಯಾ ಅಂತ ಅಣಕಿಸ್ತಿಯ..ಆದರೂ ನಾ ನಿನ್ನ ಕಂಗಳಲ್ಲಿ ಹುಡುಕೋದು ಅಳಿದುಳಿದ ನಮ್ಮ ಪ್ರೀತಿಯ ಅವಶೇಷವೇನಾದರು ಇರಬಹುದೇನೋ ಅಂತ..ಹೇಳದೆ ಕೇಳದೆ ನೀ ಬದುಕಿಂದ ಎದ್ದು ಹೋಗಿದ್ದರೆ ಮೋಸದ ಪ್ರೀತಿಯದು ಅಂದುಕೊಂಡು ಸಮಾದಾನಿಸಿಕ್ಕೋಳ್ಳಬಹುದಿತ್ತು ...ನಿನ್ನೊಂದಿಗಿನ ನನ್ನ ಪ್ರತಿದಿನ ಕ್ಷಣಗಳು ಅದ್ಯಾವುದೋ ಅಂಧಕಾರದ ಕೂಪಕ್ಕೆ ತಳ್ಳಲು ಸಾಕಷ್ಟು ತಾಲೀಮು ನಡೆಸಿರುವಂತಿದೆ...ಈ ಹೊತ್ತು  ನಿನ್ನ ಮೊಸಗಾರನೆನ್ನುವಂತಿಲ್ಲ..!

ಕೆಲವೊಮ್ಮೆ ನನಗೆ ನನ್ನನ್ನೇ ಸಮಾದಾನಿಸಾಲಾಗದ ಸ್ಥಿತಿಯಲ್ಲಿ ನೋವು,ಹತಾಶೆ,ದುಃಖ, ವಿರಹಗಳು ಹೀಗೆ ಹರಿದು ಬಿಡುತ್ತಾವೆ ಹುಡುಗಾ..ಕ್ಷಮಿಸು! ನಿನಗಾಗಿ ರಚ್ಚೆ ಹಿಡಿದು ಅಳುವುದರಿಂದ ಪ್ರಯೋಜನವಿಲ್ಲ ಎಂಬುದರ ಅರಿವಾಗಿದೆ. ಮುರಿದ ಮನಸ್ಸು ಈಗೊಂದು ತಹಬದಿಗೆ ಬಂದಿದೆ! ಮೌನವಾಗಿ..ಮೌನರಾಗ ಮೀಟುತ್ತಾ...ನಿನ್ನಿಂದ ಬದುಕಿನ ಅತಿದೊಡ್ಡ ಸಂತೋಷ ಸಿಕ್ಕಿದೆಯೆಂಬ ಭ್ರಮೆಯಲ್ಲಿ ದುಃಖದ ಮಡುವಿಗೆ ಬೀಳುವ ಕಲ್ಪನೆಯಿಲ್ಲದೆ ಬಿದ್ದೆ..ಮತ್ತೇ ಮೇಲೆಳಲಾಗದಂತೆ..ನೋವು, ಕಣ್ಣಿರನೆಲ್ಲ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ನೀ ಜೊತೆ ಇರುವಷ್ಟು ದಿನ ಸಂತೋಷದ ಸೋಗೆ ಹಾಕಿಕೊಂಡಿರೋಣ ಎಂದು.ನೀ ಬಿಟ್ಟುಹೋದ ದಿನ ನನ್ನುಸಿರು ನಿಲ್ಲುವ ಭರವಸೆಯು ಇಲ್ಲ ನನಿಗೆ.
ನಿನ್ನನ್ನು ಜೀವ ಮತ್ತು ಜೀವದುಸಿರಂತೆ ಪ್ರೀತಿಸಿಕ್ಕೊಂಡವಳು  ನಾನು..ಬಿಟ್ಟು ಹೋಗಬೇಡ ಎಂದರೆ ನೀ ತಾಯರಿದ್ದಿಯ ..?! ನಾ ಹಠಕ್ಕೆ  ಬಿದ್ದರೆ ನನ್ನ ಪ್ರೀತಿ ನನಗೆ ದಕ್ಕಿತಾ?ಎರಡು ಸಾದ್ಯವಿಲ್ಲದವುಗಳು.. ನಿನ್ನ ನಿರ್ಧಾರಕ್ಕೆ ನನ್ನದು ಸಮ್ಮತಿಯಿದೆ..ಹೋಗುವುದಾದರೆ ಹೋಗಿಬಿಡು..ನೀ ಕೊಟ್ಟ ಸಂತೋಷಗಳನ್ನು ಬದುಕಿನುದ್ದಕ್ಕೂ ಜತನವಾಗಿರಿಸುತ್ತೇನೆ..

ಸೋಮವಾರ, ಡಿಸೆಂಬರ್ 5, 2011

ದೂರಗುತ್ತಿದ್ದಾನೆ...

ದುರಾದೃಷ್ಟ ಅನ್ನೋದು ಎಷ್ಟು ಕೆಟ್ಟದು ನೋಡು..!!
ಪಾರ್ಕಿನ ಮೂಲೆಯ ಬೆಂಚೊಂದರಲ್ಲಿ ಗಂಟೆಗಟ್ಟಲೆ ತನ್ನವನಿಗಾಗಿ ಕಾದು ಕೂರೋ ಹುಡುಗಿ, ಕೊನೆಗೊಮ್ಮೆ ಕತ್ತಲಾವರಿಸತೋಡಗಿದಾಗ  ಮನೆಯ ದಾರಿ ಹಿಡಿಯುತ್ತಾಳೆ. ಮನೆಗೆ ಬಂದು ತಾಸಿನ ಮೇಲೆ ಅವನ ಮೆಸೇಜ್ ಇರುತ್ತದೆ "ಬ್ಯುಸಿ ಇದ್ದೆ ಬರಲಾಗಲಿಲ್ಲ..sorry .." ಅವನೊಂದು ಸೆಕುಂಡಿನ ಮೆಸೇಜು ತಾಸುಗಟ್ಟಲೆ ಪರಿತಪಿಸಿದ, ಕಾಡು ಬೆಂಡಾದ ನೋವನ್ನು ತನ್ನೊಳಗೆ ಅವನನ್ನು ಕಾಣಲಿದ್ದ ಆಸೆ - ಬಾರದಿದ್ದಾಗ ಬಂದ ಕೋಪ, ಅಸಹನೆ ಎಲ್ಲವನ್ನು ಮರೆಸಿ ಬಿಡುತ್ತ..?

ಬೆಳಿಗ್ಗೆಯಷ್ಟೇ ಹೇಳಿರುತ್ತಾನೆ,ಈಗ ಮುಖ್ಯವಾದ ಕೆಲಸ ಇದೆ ಸಂಜೆ ಫ್ರೀ ಆಗಿ ಕಾಲ್ ಮಾಡ್ತೀನಿ ಮಾತಾಡೋಣ...ಸಂಜೆಯ ಅವನ ಕರೆಗೆ ಚಾತಕದಂತೆ ಕಾಯುತ್ತಿರುವಾಗ ಅವನೊಂದು ಮೆಸೇಜು ರಪ್ಪನೆ ರಾಚುತ್ತದೆ ಫ್ರೆಂಡ್ಸ್ ಜೊತೆ ಆಚೆ ಇದ್ದೀನಿ ಮಲಗ್ತಾ ಮೆಸೇಜ್ ಮಾಡ್ತೀನಿ...ಹುಡುಗಿ ಮೃದುವಾಗುತ್ತಾಳೆ..ಸರಿ!!

ಆದರೆ ಮನಸ್ಸೆಂಬುದೊಂದು ಉಂಟಲ್ಲ..?!
ಅದು ಹಿಂದಿನದನ್ನು ಕೆದಕುತ್ತದೆ..ಬೇಡವೆಂದರೂ ಕೇಳದೆ!
ಅವನ ದಿನದ ಎಲ್ಲ ಮೆಸೇಜುಗಳು ತನಗಾಗಿಯೇ ವ್ಯವವಾಗುತ್ತಿದ್ದುದು, ಅದೆಷ್ಟು ಮಾತಾಡಿದರೂ ತೃಪ್ತಿಯೇ ಇಲ್ಲವೆಂದು ದುಪ್ಪಟ್ಟ ಜಗ್ಗಿಸಿ ಕೂರಿಸಿಕ್ಕೊಂಡಿದ್ದು , ನಿದ್ದೆ ಇಲ್ಲದ ರಾತ್ರಿ...ಆದರೂ ಬರಿ ಕನಸುಗಳೇ ಎನ್ನುತ್ತಾ ನನ್ನೊಳಗೂ ಆ ಕನಸುಗಳನ್ನು ಬಿತ್ತಿದ್ದು..
ಆ ದಿನಗಳಲ್ಲಿ ಈ "ಬ್ಯುಸಿ" ಎಲ್ಲಿ ಅವಿತಿತ್ತು?!
ಆಶ್ಚರ್ಯವಾಗುತ್ತದೆ..
ಆದರೂ ಅವನನ್ನೊಮ್ಮೆ ಕಂಡು ಮಾತಾಡಿಸುವ ಹಂಬಲ ಕಡಿಮೆಯಾಗಿರುವುದಿಲ್ಲ...ಕಾಯುತ್ತಾಳೆ....

ಇನ್ನೇನು ಮಲಗುವ ಸಮಯ ಎಂದುಕ್ಕೊಂಡು ಮೆಸೇಜು ಮಾಡಿದರೆ "i'm tired, catch u tomorrow" ಅವನ ರಿಪ್ಲೈ ...
ನಾಳೆ ಇದಕ್ಕಿಂತ ಬಿನ್ನವೇನಲ್ಲ..!!
ಅವಾಯ್ಡ್ ಮಾಡುತ್ತಿರುವುದನ್ನು ಹುಡುಗಿ ಮನಸ್ಸು ಸ್ಪಷ್ಟವಾಗಿ ಗುರುತಿಸಿಕ್ಕೊಂಡಿದ್ದರೂ ಒಪ್ಪಿಕ್ಕೊಳ್ಳಲು ತಾಯಾರಿಲ್ಲ...! ಬಿಕ್ಕಿ ಬಿಕ್ಕಿ ಅಳುತ್ತಳಷ್ಟೇ..

ಹರೆಯದ ಪ್ರೀತಿ ದಿನಕಳೆದಂತೆ ಹಳತಾಗುವ ಬಗೆ ಹೀಗೆಯೇ....!
ಹುಡುಗ ಏನೆಂದರೆ ಏನು ಹೇಳುವುದಿಲ್ಲ...ಬ್ಯುಸಿ ಅನ್ನುವುದೊಂದು ಬಿಟ್ಟು..
ಅವಳು ತಾನೇ "ಬೇಕಿದ್ದರೆ" ಕಾಯುತ್ತಾಳೆ ಅನ್ನೋ ಉಡಾಫೆ..

ಬಿಟ್ಟು ಬಿಡು ಹುಡುಗಿಯೇ 
ಅವನು ದೂರಗುತ್ತಿದ್ದಾನೆ ...
ಯಾರಿಗೆ ಬೇಕೇ ಜಂಜಾಟ ಹುಡುಗಿ?
ಅತ್ತು ಬಿಡು ಒಮ್ಮೆ ಜೋರಾಗಿ 
ಡವಡವ ಬಡಿಯುವ
ಎದೆಸದ್ದು ತಹಬದಿಗೆ ಬರಲಿ
ನಿನ್ನ ಬದುಕಿದು 
ಪೂರ್ತಿಯಾಗಿ ಬದುಕಿ ಬಿಡೆ ಹುಡುಗಿ..
ಬವಣೆಗಳು ಸಾಕಿನ್ನು....!!


========================================================
ನನ್ನ ಲೇಖನಕ್ಕೆ ಲಲಿತಾ ಪೂಜಾರಿ ಮಾಡಿದ ಫೋಟೋ ಶಾಪ್ ವರ್ಕ್..


ಗುರುವಾರ, ಡಿಸೆಂಬರ್ 1, 2011

ಎದ್ದು ನಿಲ್ಲುವ ಹೊತ್ತಲ್ಲಿ....!ಹಾಗೆ ಹುಣ್ಣಿಮೆಯ ರಾತ್ರಿಯಲ್ಲಿ ಚಂದಿರನ ದಿಟ್ಟಿಸುತ್ತ ಕುಳಿತಿದ್ದೆ.... ತುಂಬಾ ಚಂದ- ಚಂದಮಾಮ! ಅವನಿಗಾದರೂ ಅದೆಷ್ಟು ಜೊತೆಗಾರರು...? ನಕ್ಷತ್ರಗಳ ಜೊತೆ ಅವನ್ನು ಮೀರಿಸಿ ಮಿಂಚುವವನು.. ಕೈಗೆ ಸಿಗೋ ನೀನು ಎಂಬ ಹಂಬಲಕ್ಕೆ ತಳ್ಳುವವನು.. . ಅದೆಷ್ಟು ತಾರೆಗಳ ಸ್ನೇಹ ಅವನಿಗೆ... ಹುಣ್ಣಿಮೆಯ ರಾತ್ರಿಯಂದು ಉಕ್ಕೇರುವ ಶರಧಿಯ ಜೊತೆ ಪ್ರೇಮ ಬೇರೆ...ಜಗತ್ತಿನಲ್ಲಿ ಅವನಿಗಿಂತ ಸುಖಿ ಬೇರೆಯಾರಿದ್ದಾರೆ?! ಸ್ನೇಹ-ಪ್ರೇಮಗಳು ಬದುಕಿನಲ್ಲಿ ಹದವಾಗಿ ಬೇರೆತರೆಷ್ಟು ಚಂದ..! ಚಂದಮಾಮನ ಕೈನ ಮಿಟಾಯಿಗೆ ಜೊಲ್ಲು ಸುರಿಸುತ್ತ ನಿಂತಿರೋ ಪುಟ್ಟಿಯಂತಾಗಿದ್ದೆ ...

ಒಂದು ಪ್ರೀತಿಗೆ ಸ್ನೇಹ ಬೇರಾದರೆ, ಇನ್ನೊಂದು ಸ್ನೇಹಕ್ಕಾಗಿ ಪ್ರೀತಿ ವಿನಾಃಕಾರಣ ಕುಸಿಯುತ್ತಿದೆ...!!  ಸ್ನೇಹ ಪ್ರೀತಿಯ ಮೋಹದಲ್ಲಿ  ಬಲಿಯಾಗಿರೋ ಮನಸ್ಸು ಮಾತ್ರ ಒಂದೇ... ಮನುಷ್ಯ ಸಂಬಂಧಗಳು ದುಡ್ಡು ಕಾಸಿನಿಂದ ಅಳೆಯುವಂತದ್ದೆ?! 
ತೀರಾ ಒಬ್ಬಂಟಿ ಅನಿಸಿದಾಗ ಕೊರಳ ಸೆರೆ ಉಬ್ಬಿ ಬರುತ್ತದೆ...ತಡೆತಡೆದು ಹಿಡಕೊಂಡ ಕಣ್ಣೀರು ಸೋರುತ್ತದೆ. ನನ್ನದೇ ಎನ್ನುವ ಇನ್ನೊಂದು ಜೀವಕ್ಕೆ ಇದನ್ನೆಲ್ಲಾ ಹೇಳಿ "ನಾನಿದ್ದೇನೆ ಕಣೋ" ಅನ್ನೋ ಅವನ ಮಾತಿಗೆ ಹಂಬಲವಾಗುತ್ತದೆ.. ದೂರದ  ತೀರದಲ್ಲಿ ಕೈ ಹಿಡಿದುಕ್ಕೊಂಡು ನಡೆದು ಹೋಗಿ ಭದ್ರತೆಯ ಭಾವವನ್ನು ಆಸ್ವಾದಿಸುವ ಮನಸಾಗುತ್ತದೆ..ಬೇರೆಯಾದ  ಗೆಳೆಯರ ನೋವನ್ನ ಅವನ ಮಡಿಲಿಗೆ ಹಾಕಿ ಮಗುವಾಗಿ ಬಿಡುವ ಆಸೆಯಾಗುತ್ತದೆ...ಅಂದುಕ್ಕೊಂಡದ್ದೆಲ್ಲ ಆಗಿ ಬಿಡುವಂತಿದ್ದರೆ ಜೀವನಕ್ಕಿರುವ ಅರ್ಥವಾದರೂ ಏನು?ಕೈಯ ಗೋರಂಟಿ ಬಣ್ಣ ಕಳೆದುಕ್ಕೊಂಡಿದೆ..ಮನದ ರಂಗವಲ್ಲಿ ಮಾಸಿದಂತಿದೆ...

ನೋವು, ಹತಾಶೆ,ನಿರಾಸೆಗಳೇ ಸಾಂಗತಿಗಳಾಗಿ ಬಿಟ್ಟರೆ ಜೀವನ ಪ್ರೀತಿ ಹುಟ್ಟುವುದಾದರೂ ಎಲ್ಲಿಂದ? ಎದ್ದು ನಿಲ್ಲುವ ಹೊತ್ತಲ್ಲಿ ಒದ್ದು ಹೋದರೆ ಏನೆನ್ನಲಿ? 
ತೀರ ಯೋಚಿಸಿಕ್ಕೊಂಡು ಗುಣಿಸಿ,ಕಳೆದು,ಭಾಗಿಸಿ, ತಾಳೆ ನೋಡಿ ಕೂಡಿಸಿಕ್ಕೊಂಡಿದ್ದ ಪ್ರೀತಿಯದು..ಕನಸಿನರಮನೆಯ ಕಟ್ಟಿ ಕೊಟ್ಟವನು..ನೀನೇನೂ ನನಗಲ್ಲವೇ ಅಲ್ಲ ಅನ್ನುವಂತೆ ನೆಗ್ಲೆಕ್ಟ್ ಮಾಡತೊಡಗಿದರೆ..ಜೀವ ನಿಲ್ಲುವ ಸೂಚನೆಯಿದೆಯೇ?

ಎಲ್ಲ ಸರಿಯಿದೆ ಅಂದುಕ್ಕೊಳ್ಳುವಷ್ಟರಲ್ಲೇ ಪದೇ ಪದೇ ಅನಿಸುವಷ್ಟು ಸಾರಿ ಹೀಗಾಗುತ್ತಿದೆ...
ಮುಖವಾಡ ಕಳಚುತ್ತಲೇ ಇದೆ..ಎತ್ತಿ ಮತ್ತೇ ಹಾಕಿಕ್ಕೊಳುತ್ತೇನೆ.ನಗುತ್ತೇನೆ ನಗಿಸುತ್ತೇನೆ ಪಟಪಟ ಮಾತಾಡಿ ಎಲ್ಲವನ್ನು ಮರೆತು ನಿರ್ಲಿಪ್ತಳಾಗಿದ್ದೇನೆ ಎಂದುಕ್ಕೊಳ್ಳುತ್ತೇನೆ..ಅಷ್ಟರಲ್ಲಿ ಮತ್ತೇ ಪರದೆ ಸರಿಯುತ್ತದೆ..ನನ್ನೊಳಗಿನ ನಾನು ಮತ್ತೇ ನಾನೇ! ಮತ್ತದೇ ಅರ್ಥವಾಗದ ಸೂಕ್ಷ್ಮತೆಗಳೊಂದಿಗಿನ ತೊಳಲಾಟ..


ಸೋತ ಹೃದಯ, ಕಣ್ಣಹನಿ, ಕಮರಿದ ಕನಸುಗಳು,ಎದೆಯ ಮಿದುವಲ್ಲಿ ಹೆಪ್ಪುಗಟ್ಟಿದ ನೋವು...ಬಿಡದೆ ಕಾಡುತ್ತದೆ..ಕೆನ್ನೆ ತೋಯಿಸಿದ ನೆನಪುಗಳಿಂದ ಕೊಡವಿಕ್ಕೋಳ್ಳುವೇನೆಂದು ಕಣ್ಣೆತ್ತಿದರೆ ಮೋಡಗಳ ಜೊತೆ ಚಂದಮಾಮ ಸರಸವಾಡುತ್ತಿದ್ದ. ಪಕ್ಕನೆ ನೋಡಿ ನಕ್ಕಂತಾಯಿತು... "ನಾನಿದ್ದೇನೆ ಹುಡುಗಿ...ನಿನ್ನೊಳಗೆ ಹೊಸ ಕನಸ ಕಸು ಮಾಡಲು..." ಎಂದತಾಯಿತು...ನಸುನಕ್ಕೆ...