ಮಂಗಳವಾರ, ಮಾರ್ಚ್ 27, 2012

ಅಮ್ಮನಾಗುವ ಸಮಯ..


ಮದುವೆ ಎನ್ನುವುದೊಂದು ಆಗುವುದಕ್ಕಿಂತ ಮುಂಚೆ ನಾವು ಹುಡುಗಿಯರು  ತೀರಾ ಭಿನ್ನವಾಗಿ ಯೋಚಿಸುತ್ತಿರುತ್ತೇವೆ...ಗಂಡುಬೀರಿ, ಬಜಾರಿ ಅನಿಸಿಕೊಂಡದಾರೂ ಗಂಡು ಮಕ್ಕಳಿಗೆ ನಾವು ಸಮ ಎನ್ನುವುದನ್ನ ಸಾಬೀತು ಮಾಡ ಹೊರಡುತ್ತೇವೆ...ಜಿದ್ದಿಗೆ ಬಿದ್ದಾದರೂ ಪೈಪೋಟಿ ನೀಡುತ್ತೇವೆ...ಮದುವೆ, ಮನೆ, ಗಂಡ, ಮಕ್ಕಳು...ಥತ್, ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲೇ ಮಾಡಿರೋ ವ್ಯವಸ್ಥೆ ಎಂದು ತಾಸುಗಟ್ಟಲೆ ಗೆಳತಿಯರ ಮಧ್ಯ  ಭಾಷಣ ಬಿಗಿರುತ್ತೇವೆ... ಇಷ್ಟಾದರೂ ಮನೆಯಲ್ಲಿ ಹಿಡಿದು ಮದುವೆ ಮಾಡೇ ಮಾಡುತ್ತಾರೆ...ಸರಿ ಮದುವೆಯಾಗಿತ್ತಲ್ಲ ಮಕ್ಕಳಂತೂ ಸದ್ಯದ ವಿಚಾರ ಅಲ್ಲಾ...ಎರಡು-ಮೂರು  ವರ್ಷ ಗ್ಯಾಪ್ ಇರಲಿ ಎಂದುಕೊಳ್ಳುತ್ತಲೇ ಮಡಿಲು ತುಂಬಿರುತ್ತದೆ...ಇಲ್ಲಿಯ ತನಕ 'ನಾವೂ ಗಂಡಿನ ಹಾಗೆ' ಅಂದುಕೊಂಡ ಮುಖವಾಡ ಕಳಚುವುದು ಈಗಲೇ...ಇದು ಅಮ್ಮನಾಗುವ ಖುಷಿ...ಹೆಣ್ತನ, ತಾಯ್ತನ ಜಾಗೃತವಾಗುವ ಹೊತ್ತು.. ಪೂರ್ತಿಯಾಗಿ ಮಾತೃ ಭಾವವನ್ನು ಆಸ್ವಾದಿಸುವ ಹೊತ್ತು.. ಗಂಡಾಗಿ ಇಂತಹ ಆನಂದ ಪಡೆಯಲು ಸಾದ್ಯವೇ ಎಂದೆಣಿಸುವಾಗ ಬಜಾರಿ ಕಳೆದು ಹೋಗುತ್ತಾಳೆ.. ಮೊಗ್ಗು ಅರಳುವ ಸಮಯದ ನಾವಿನ್ಯ ಭಾವದ ಹೆಣ್ಣು ಮೈದಳೆಯುತ್ತಾಳೆ..


ತೀರಾ ಒಂದು ವರ್ಷದ ಕೆಳಗಿನ ಮಾತು.ಮದುವೆಯಾಗಿ ಗಂಡನ ಮನೆಗೆ ಹೊರಟಮೇಲೆ ಸದ್ಯಕ್ಕಂತೂ ಮಗುವಿನ ಯೋಚನೆಯೇ ಇಲ್ಲಾ ಎನ್ನುತ್ತಿದ್ದವಳ ಮಡಿಲು ವರ್ಷ ತುಂಬುವುದರೊಳಗೆ ತುಂಬಿದೆ. "ಹೆಣ್ಣಿನ ಪರಿಪೂರ್ಣತೆ ತಾಯ್ತನದಲ್ಲೇ.." ಅವನ ಪಿಸುಮಾತು ಹೆಣ್ತನ ಅರಳಿಸಿದ್ದಿರಬೇಕು.ಡಾಕ್ಟರು confirm ಮಾಡಿದ ಕೂಡಲೇ ತನ್ನದೇ ಜೀವ ತನ್ನೊಳಗೆ ಕುಡಿಯುತ್ತಿರುವುದರ, ಜೀವ ತಳೆಯುತ್ತಿರುವುದರ ಆನಂದ. ಒಡಲ ಜೀವದೊಟ್ಟಿಗೇ ನೂರಾರು ಕನಸುಗಳು ಬಣ್ಣ ತುಂಬಿ ನಿಂತಿದೆ.. ಹೊಸ ಹುಟ್ಟು ಪಡೆದಿದೆ.. ದಿನೇ ದಿನೇ ಇಂಚಿಂಚಾಗಿ ಉಬ್ಬುವ ಹೊಟ್ಟೆ, ಕನ್ನಡಿ ಮುಂದೆ ನಿಂತು ಕೈಯಾಡಿಸುತ್ತಿದ್ದಾಗ ಕಂಡು ಕಾಣದಂತಹ ಒಂದು ಸಣ್ಣ ನಾಚಿಕೆ, ತಾಯ್ತನದ ದೊಡ್ಡ ಹೆಮ್ಮೆ.

ಎಲ್ಲೊ ಓದಿದ ನೆನಪಲ್ಲಿ "ಒಳಗಿಂದ ಮಗಳು ಒದೀತಾಳೆಯೇ?!" ಮಗಳೇ ಹುಟ್ಟಲಿ ಎನ್ನೋ ಆಸೆಯಲ್ಲಿ ಪ್ರಶ್ನಿಸುವ ನಾನು..
"ಹ್ಞೂಮ್ ... ಈಗೀಗ ಅಮ್ಮನ್ನ ಒದಿಯೋಕೆ ಶುರು ಮಾಡಿದ್ದಾನೆ.." ಮಗನೇ ಒಳಗಿರುವವನು ಅನ್ನೋ ಅವಳು...
ಗಂಡೋ ಹೆಣ್ಣೋ ಕಂದಾ ನಮ್ಮದೇ ಒಕ್ಕುರುಲಿನ ಅಭಿಮತ.
ಇಷ್ಟೊಂದೆಲ್ಲ ಆನಂದ ಪಡುತ್ತಿರುವ ಗೆಳತಿಯ ನೆನೆದಾಗ ಅಮ್ಮನ ಮಮತೆ ನೆನಪಾಗುತ್ತದೆ..ಮಕ್ಕಳ ಎಲ್ಲಾ ತಪ್ಪುಗಳನ್ನು ಒಪ್ಪಿ, ತಿದ್ದಿ, ಅವರ ಏಳ್ಗೆಯಲ್ಲೇ ತನ್ನ ಸಂತೋಷ ಕಾಣುವ ಅಮ್ಮಾ ನಿಜ್ಜಕ್ಕೂ ಗ್ರೇಟ್... ಇಂತಹುದೇ ಅಮ್ಮಂದಿರ ಸಾಲಿಗೆ ಮುದ್ದಿನ ಗೆಳತಿ ಸೇರಿಕೊಳ್ಳುತ್ತಿದ್ದಾಳೆ..ಅವಳಮ್ಮ ಪುಟ್ಟ ಮಗುವಿನಂತೆ ಅವಳನ್ನು ಲಾಲಿಸುತ್ತಿದ್ದರೆ, ಇವಳು ಇವಳ ಕಂದನ ಬರುವಿಕೆಗೆ ದಿನಗಳನ್ನೇಣಿಸುತ್ತಿದ್ದಾಳೆ.. "thinking of you..counting the days.." ಅಂತಾ ರಾಜಕುಮಾರ/ರೀ ಯ ಬಗ್ಗೆ ಪುಟಗಟ್ಟಲೆ ಬರೆಯುತ್ತಾಳೆ..ಮತ್ತೇ ಮತ್ತೇ ಓದಿ ಖುಷಿಪಡುತ್ತಾಳೆ..
ಈ ಮಧ್ಯ ನೀನೂ 'ನನ್ನ-ನನ್ನ ಮಗು'ವಿನ ಬಗ್ಗೆ ಬರಿಯೇ ಎಂದು ಕಾಡಿಸುತ್ತಲೇ ಇಷ್ಟು ಬರಿಸಿದ್ದಾಳೆ...
ಅವಳ ಸಂತೋಷಕ್ಕೆ , ಅಮ್ಮನಾಗುವ ಖುಷಿಗೆ ನನ್ನದೊಂದು ಸಲಾಂ...
ಶುಭ್ರ ಆಕಾಶದಲ್ಲಿ ಸಪ್ತವರ್ಣದ ಕನಸಿನ ಕಾಮನಬಿಲ್ಲು ಮೂಡಿದೆ..
ಆ ಕನಸುಗಳೆಲ್ಲಾ ನನಸಾಗಲಿ...

ಸೋಮವಾರ, ಮಾರ್ಚ್ 5, 2012

ಸಾರಾಯಿ..


ಚಿಂತೆ ಕಾಡದು ಕುಡಿದಾಗ ಹೆಂಡ 
ಆಗ ಕಾಣದು ಬದಿಯಲ್ಲಿದ್ದರೆ ಹೊಂಡ
ಮಡದಿ ಬೈದರೆ ಎನ್ನುವಿ,
ಸುಮ್ಮನಿರು ನಾ ನಿನ್ನ ಗಂಡ
ಕೊನೆಗೆ ಗೊತ್ತಾಗುವುದು ನೀನೊಬ್ಬ ದಂಡಪಿಂಡ

ಕುಡಿಯಲು ಬೇಕು ಸಾರಾಯಿ
ಅದ ಕೊಳ್ಳಲು ಬೇಕು ರೂಪಾಯಿ
ಆಗ ಕುಡಿದು ಹುಚ್ಚನಂತೆ ಹೇಳುವಿ 
ಈಗ ನಾನೇ ಇಲ್ಲಿ ದಳವಾಯಿ
ಆಗ ಹೇಳುವರೆಲ್ಲಾ ನೀನೊಬ್ಬ ನಿಜವಾದ ನಾಯಿ

ಶರಾಬು ಆರೋಗ್ಯಕ್ಕೆ ಹಾನಿಕಾರಕ 
ಕುಡಿಯದಿದ್ದರೆ ಶುಭದಾಯಕ 
ಒಂದು ವೇಳೆ ಕುಡಿದರೆ
ರೋಗ ಬಂದು ಕಾಣುವಿ ನೀ ನರಕ
ನಂತರ ಉಳಿಯುವುದೊಂದೇ ನಿನ್ನ ಸ್ಮಾರಕ {When I was in 8th standard, I wrote this....}