ಮಂಗಳವಾರ, ಮಾರ್ಚ್ 27, 2012

ಅಮ್ಮನಾಗುವ ಸಮಯ..


ಮದುವೆ ಎನ್ನುವುದೊಂದು ಆಗುವುದಕ್ಕಿಂತ ಮುಂಚೆ ನಾವು ಹುಡುಗಿಯರು  ತೀರಾ ಭಿನ್ನವಾಗಿ ಯೋಚಿಸುತ್ತಿರುತ್ತೇವೆ...ಗಂಡುಬೀರಿ, ಬಜಾರಿ ಅನಿಸಿಕೊಂಡದಾರೂ ಗಂಡು ಮಕ್ಕಳಿಗೆ ನಾವು ಸಮ ಎನ್ನುವುದನ್ನ ಸಾಬೀತು ಮಾಡ ಹೊರಡುತ್ತೇವೆ...ಜಿದ್ದಿಗೆ ಬಿದ್ದಾದರೂ ಪೈಪೋಟಿ ನೀಡುತ್ತೇವೆ...ಮದುವೆ, ಮನೆ, ಗಂಡ, ಮಕ್ಕಳು...ಥತ್, ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲೇ ಮಾಡಿರೋ ವ್ಯವಸ್ಥೆ ಎಂದು ತಾಸುಗಟ್ಟಲೆ ಗೆಳತಿಯರ ಮಧ್ಯ  ಭಾಷಣ ಬಿಗಿರುತ್ತೇವೆ... ಇಷ್ಟಾದರೂ ಮನೆಯಲ್ಲಿ ಹಿಡಿದು ಮದುವೆ ಮಾಡೇ ಮಾಡುತ್ತಾರೆ...ಸರಿ ಮದುವೆಯಾಗಿತ್ತಲ್ಲ ಮಕ್ಕಳಂತೂ ಸದ್ಯದ ವಿಚಾರ ಅಲ್ಲಾ...ಎರಡು-ಮೂರು  ವರ್ಷ ಗ್ಯಾಪ್ ಇರಲಿ ಎಂದುಕೊಳ್ಳುತ್ತಲೇ ಮಡಿಲು ತುಂಬಿರುತ್ತದೆ...ಇಲ್ಲಿಯ ತನಕ 'ನಾವೂ ಗಂಡಿನ ಹಾಗೆ' ಅಂದುಕೊಂಡ ಮುಖವಾಡ ಕಳಚುವುದು ಈಗಲೇ...ಇದು ಅಮ್ಮನಾಗುವ ಖುಷಿ...ಹೆಣ್ತನ, ತಾಯ್ತನ ಜಾಗೃತವಾಗುವ ಹೊತ್ತು.. ಪೂರ್ತಿಯಾಗಿ ಮಾತೃ ಭಾವವನ್ನು ಆಸ್ವಾದಿಸುವ ಹೊತ್ತು.. ಗಂಡಾಗಿ ಇಂತಹ ಆನಂದ ಪಡೆಯಲು ಸಾದ್ಯವೇ ಎಂದೆಣಿಸುವಾಗ ಬಜಾರಿ ಕಳೆದು ಹೋಗುತ್ತಾಳೆ.. ಮೊಗ್ಗು ಅರಳುವ ಸಮಯದ ನಾವಿನ್ಯ ಭಾವದ ಹೆಣ್ಣು ಮೈದಳೆಯುತ್ತಾಳೆ..


ತೀರಾ ಒಂದು ವರ್ಷದ ಕೆಳಗಿನ ಮಾತು.ಮದುವೆಯಾಗಿ ಗಂಡನ ಮನೆಗೆ ಹೊರಟಮೇಲೆ ಸದ್ಯಕ್ಕಂತೂ ಮಗುವಿನ ಯೋಚನೆಯೇ ಇಲ್ಲಾ ಎನ್ನುತ್ತಿದ್ದವಳ ಮಡಿಲು ವರ್ಷ ತುಂಬುವುದರೊಳಗೆ ತುಂಬಿದೆ. "ಹೆಣ್ಣಿನ ಪರಿಪೂರ್ಣತೆ ತಾಯ್ತನದಲ್ಲೇ.." ಅವನ ಪಿಸುಮಾತು ಹೆಣ್ತನ ಅರಳಿಸಿದ್ದಿರಬೇಕು.ಡಾಕ್ಟರು confirm ಮಾಡಿದ ಕೂಡಲೇ ತನ್ನದೇ ಜೀವ ತನ್ನೊಳಗೆ ಕುಡಿಯುತ್ತಿರುವುದರ, ಜೀವ ತಳೆಯುತ್ತಿರುವುದರ ಆನಂದ. ಒಡಲ ಜೀವದೊಟ್ಟಿಗೇ ನೂರಾರು ಕನಸುಗಳು ಬಣ್ಣ ತುಂಬಿ ನಿಂತಿದೆ.. ಹೊಸ ಹುಟ್ಟು ಪಡೆದಿದೆ.. ದಿನೇ ದಿನೇ ಇಂಚಿಂಚಾಗಿ ಉಬ್ಬುವ ಹೊಟ್ಟೆ, ಕನ್ನಡಿ ಮುಂದೆ ನಿಂತು ಕೈಯಾಡಿಸುತ್ತಿದ್ದಾಗ ಕಂಡು ಕಾಣದಂತಹ ಒಂದು ಸಣ್ಣ ನಾಚಿಕೆ, ತಾಯ್ತನದ ದೊಡ್ಡ ಹೆಮ್ಮೆ.

ಎಲ್ಲೊ ಓದಿದ ನೆನಪಲ್ಲಿ "ಒಳಗಿಂದ ಮಗಳು ಒದೀತಾಳೆಯೇ?!" ಮಗಳೇ ಹುಟ್ಟಲಿ ಎನ್ನೋ ಆಸೆಯಲ್ಲಿ ಪ್ರಶ್ನಿಸುವ ನಾನು..
"ಹ್ಞೂಮ್ ... ಈಗೀಗ ಅಮ್ಮನ್ನ ಒದಿಯೋಕೆ ಶುರು ಮಾಡಿದ್ದಾನೆ.." ಮಗನೇ ಒಳಗಿರುವವನು ಅನ್ನೋ ಅವಳು...
ಗಂಡೋ ಹೆಣ್ಣೋ ಕಂದಾ ನಮ್ಮದೇ ಒಕ್ಕುರುಲಿನ ಅಭಿಮತ.
ಇಷ್ಟೊಂದೆಲ್ಲ ಆನಂದ ಪಡುತ್ತಿರುವ ಗೆಳತಿಯ ನೆನೆದಾಗ ಅಮ್ಮನ ಮಮತೆ ನೆನಪಾಗುತ್ತದೆ..ಮಕ್ಕಳ ಎಲ್ಲಾ ತಪ್ಪುಗಳನ್ನು ಒಪ್ಪಿ, ತಿದ್ದಿ, ಅವರ ಏಳ್ಗೆಯಲ್ಲೇ ತನ್ನ ಸಂತೋಷ ಕಾಣುವ ಅಮ್ಮಾ ನಿಜ್ಜಕ್ಕೂ ಗ್ರೇಟ್... ಇಂತಹುದೇ ಅಮ್ಮಂದಿರ ಸಾಲಿಗೆ ಮುದ್ದಿನ ಗೆಳತಿ ಸೇರಿಕೊಳ್ಳುತ್ತಿದ್ದಾಳೆ..ಅವಳಮ್ಮ ಪುಟ್ಟ ಮಗುವಿನಂತೆ ಅವಳನ್ನು ಲಾಲಿಸುತ್ತಿದ್ದರೆ, ಇವಳು ಇವಳ ಕಂದನ ಬರುವಿಕೆಗೆ ದಿನಗಳನ್ನೇಣಿಸುತ್ತಿದ್ದಾಳೆ.. "thinking of you..counting the days.." ಅಂತಾ ರಾಜಕುಮಾರ/ರೀ ಯ ಬಗ್ಗೆ ಪುಟಗಟ್ಟಲೆ ಬರೆಯುತ್ತಾಳೆ..ಮತ್ತೇ ಮತ್ತೇ ಓದಿ ಖುಷಿಪಡುತ್ತಾಳೆ..
ಈ ಮಧ್ಯ ನೀನೂ 'ನನ್ನ-ನನ್ನ ಮಗು'ವಿನ ಬಗ್ಗೆ ಬರಿಯೇ ಎಂದು ಕಾಡಿಸುತ್ತಲೇ ಇಷ್ಟು ಬರಿಸಿದ್ದಾಳೆ...
ಅವಳ ಸಂತೋಷಕ್ಕೆ , ಅಮ್ಮನಾಗುವ ಖುಷಿಗೆ ನನ್ನದೊಂದು ಸಲಾಂ...
ಶುಭ್ರ ಆಕಾಶದಲ್ಲಿ ಸಪ್ತವರ್ಣದ ಕನಸಿನ ಕಾಮನಬಿಲ್ಲು ಮೂಡಿದೆ..
ಆ ಕನಸುಗಳೆಲ್ಲಾ ನನಸಾಗಲಿ...

18 ಕಾಮೆಂಟ್‌ಗಳು:

 1. Nice article... you mentioned feeling with writing... :) Send my wish to her..

  ಪ್ರತ್ಯುತ್ತರಅಳಿಸಿ
 2. ಒಂದು ಹೆಣ್ಣು ನಿಜವಾಗ್ಲೂ ತುಂಬಾ ಖುಷಿಯಾಗಿರೊದು ಅವಳ ತಾಯ್ತನದಲ್ಲಂತೆ.................. ಮೊದಲು ಎಲ್ಲಾ ತನಗೆ ಬೇಕು ಎನ್ನುವ ಅವಳು ತನ್ನದೊಂದು ಮಗುವಾದ ಮೇಲೆ ತನಗಿಲ್ಲದಿದ್ದರೂ ಮಗುವಿಗೆ ಬೇಕು ಎನ್ನುತ್ತಾಳೆ...... ಒಬ್ಬಳು ಹೆಣ್ಣು ಮೊದಲು ಪ್ರಪಂಚದಲ್ಲಿ ಎಲ್ಲರಿಕಿಂತ ಮೊದಲು ತನ್ನ ಗಂಡನನ್ನು ಇಷ್ಟಪಡುತ್ತಾಳೆ ಅದೇ ಹೆಣ್ಣು ತಾಯಿಯಾದ ಮೇಲೆ ಪ್ರಪಂಚದಲ್ಲಿ ಎಲ್ಲರಿಕಿಂತ ಮೊದಲು ತನ್ನ ಮಗುವನ್ನು ಇಷ್ಟಪಡುತ್ತಾಳೇ.......... ಏನಂತಿಯಾ ಸುಷ್ಮಾ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಜಕ್ಕೂ ಸತ್ಯ...
   ತಾಯ್ತನದ ಆನಂದವನ್ನು ಇಷ್ಟಪಡದ ಮಹಿಳೆ ಇರಲಿಕ್ಕಿಲ್ಲ...ಒಂದುವೇಳೆ ಇದ್ದರೆ, ಆಕೆಯ ಪರಿಸ್ಥಿತಿಯ ಒತ್ತಡವಿರಬಹುದೇ ಹೊರತು...ಅದು ಆಕೆಯ ಇಚ್ಛೆ ಖಂಡಿತ ಆಗಿದ್ದಿರಲಾರದು.. ಗೆಳತಿ ಇಷ್ಟೊಂದು ಸಂಭ್ರಮ ಪಡುತ್ತಿರುವಾಗ ನಮ್ಮಮ್ಮನ ನೆನಪಾಗುತ್ತದೆ...ಅವಳೂ ಇಷ್ಟೇ ಆನಂದ ಪಟ್ಟಿದ್ದಿರಬಹುದಲ್ಲವಾ ಎನಿಸುತ್ತದೆ...ನಮಗಾಗಿ ಜೀವ ತೇಯುವ ಅಮ್ಮ ನಿಜಕ್ಕೂ ಗ್ರೇಟ್.....
   ನನ್ನದೂ ನಿಮ್ಮದೇ ಅಭಿಪ್ರಾಯ...

   ಅಳಿಸಿ
 3. ಲೇಖನ ತುಂಬಾ ಆಳದಿಂದ ಬಂದಿದೆ ತಾಯಿ.!
  ಭರವಸೆಯ ಸೃಜನಶೀಲತೆಗೆ ಇಷ್ಟು ಸಾಕು. ಮತ್ತೊಂದು ಮರೆಯಲಾಗದ ಕವಿತೆ ಅಥವ ಬರಹಕ್ಕೆ ಕಾದಿರುತ್ತೇನೆ. ನಾನು ಆ ತಾಯಿ ಮತ್ತು ಮಗುವನ್ನು ತುಂಬಾ ಪ್ರೀತಿಸುತ್ತೇನೆ. ಚೆಂದ ಬಂದಿದೆ ಮನಸ್ಸಿನ ಚಿತ್ರಣ. ಶುಭವಾಗಲಿ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸರ್...ನಿಮ್ಮ ಪ್ರೋತ್ಸಾಹಕ್ಕೆ ನಾನು ಅಭಾರಿ...
   ನಿಮ್ಮ ಪ್ರತಿಕ್ರಿಯೆ ಈ ಮಟ್ಟಿಗಿದ್ದರೆ ಅದು ಇನ್ನಷ್ಟು ಬರೆಯಲು ಪ್ರೇರಣೆಯಾಗುತ್ತದೆ.... ಹೀಗೆ ಬರುತ್ತಿರಿ..ಹರಸುತ್ತಿರಿ ಸರ್...
   ಧನ್ಯವಾದಗಳು...

   ಅಳಿಸಿ
 4. ಚೆನಾಗಿದೆ...ನಾನಿನ್ನೂ ಹುಡುಗರ ಸರಿಸಮಾನರಾಗಿ ತೋರಿಸಿಕೊಳ್ಳುವ ತವಕ ಹೊತ್ತ ಹುಡುಗಿಯರನ್ನಷ್ಟೇ ನೋಡುತ್ತಿದ್ದೇನೆ..ಅವರ ಜೀವನದ ಇನ್ನೊಂದು ಮುಖವನ್ನು ಪರಿಚಯಿಸಿದ್ದಕ್ಕಾಗಿ ,ಧನ್ಯವಾಗಳು,ಬರೆಯುತ್ತಿರಿ

  ಪ್ರತ್ಯುತ್ತರಅಳಿಸಿ
 5. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 6. ಹರೆಯದ ಗುಂಗು ಅದೇ ಥರ ಚಿನ್ಮಯ್..
  ಬದುಕು ಮಗ್ಗುಲು ಬದಲಿಸಿಕೊಂಡಾಗ ಅದರಲ್ಲೂ ಹೆಣ್ಣು ಮಕ್ಕಳಿಗೆ ಇಂತಹ ಸಾರ್ಥಕತೆಯ ಅರಿವಾಗುತ್ತದೆ..
  ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 7. ನಿಜ.
  ಹೆಣ್ಣು ತಾಯಿಯಾದಾಗ ಅದೆಷ್ಟು ಸಂಬಂಧಗಳು ಒಟ್ಟಿಗೇ ಹುಟ್ಟಿಕೊಳ್ಳುತ್ತವೆ ನೋಡಿ?
  ಗೆಳಾತಿಯೊಂದಿಗೆ ಮೊನ್ನೆ ಮೊನ್ನೆ ಕೇಂಟೀನಿನಲ್ಲಿ ಒಟ್ಟಿಗೇ ಊಟ ಮಾಡಿದಂತೆ ಎನಿಸುತ್ತಿತ್ತು..
  ಇಂದು ನೋಡಿದರೆ ಆಕೆಯ ಕಂಕುಳಲ್ಲಿ ಪುಟ್ಟ ಮಗು...
  ಮಾಮಾ ಎನ್ನಬಹುದಲ್ಲ ನಾಳೆ ಅದು ನನ್ನನ್ನು...??

  ಚೆನ್ನಾದ ಲೇಖನ :)

  ಪ್ರತ್ಯುತ್ತರಅಳಿಸಿ
 8. ನಿಜದ ಮಾತು ಸರ್..
  ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 9. ಸುಷ್ಮಾ.... ನಿಜ ನೀನಂದಿದ್ದು......

  "ತಾಯ್ತನದ ಖುಷಿ ಮಾತಿನಲ್ಲಿ ಹೇಳೋಕೆ ಕಷ್ಟವಂತೆ....
  ಅದು ಏನೇ ಅಂದರೂ ಅಪೂರ್ಣ ಅನಿಸುತ್ತೆ....
  ಹೇಳೋಕೆ ಹೋದ್ರೆ ಕಷ್ಟ.... ಅನುಭವಿಸಬೇಕು..."

  ನನ್ friend ಅಮ್ಮನಾದ ಹೊತ್ತಲ್ಲಿ ಈಗೇನನ್ಸುತ್ತೆ.. ಅಂತ ಕೇಳಿದಾಗ
  ಅಂದದ್ದು ಹೀಗೆ....

  ಹಾಲು ಕುಡಿಯುವ ಮಗು, ಕೇಕೆ ಹಾಕುವ ಮಗು, ರಚ್ಚೆ ಹಿಡಿಯುವ ಮಗು, ಹೊಟ್ಟೆಯೊಳಗೆ ಒದೆಯುವಾಗಿಂದ ಹಿಡಿದು
  ಬಟ್ಟೆಯೊಳಗೆ ಸು ಸು ಮಾಡುವಲ್ಲಿಯವರೆಗೂ ಎಲ್ಲವೂ ಸಹನೀಯ ದಿವ್ಯ ಸಂತೋಷ ಅಮ್ಮನಿಗೆ....
  ಹೇಗೆಂದು ವರ್ಣಿಸಿಯಾರು?

  ನಿಮ್ friend ಗೂ ನಂದೊಂದ್ wish ತಿಳಿಸ್ಬಿಡಿ.
  ಚನ್ನಗಿದೆ ಬರಹ. ಓದಿ ಖುಷಿಪಟ್ಟೆ.

  ಪ್ರತ್ಯುತ್ತರಅಳಿಸಿ
 10. Hmm....ಬಹುಶಃ ಇಂತಹ ಒಂದು ಆನಂದಕ್ಕೆ ಇರಬೇಕು ಪ್ರತಿ ಹೆಣ್ಣೂ ತಾಯ್ತನವನ್ನು ಪ್ರೀತಿಸುವುದು... ನೋವಲ್ಲಿ ಸಂತಸ ಕಾಣುವುದು.. 'ಅಮ್ಮನಾಗುವ ಬಗೆಗೆ ಬರೆ' ಎಂದು ಮೊದಲು ಅವಳು ಹೇಳಿದ್ದಾಗ... ನಾನು ಪೂರ್ತಿ ಖಾಲಿ, ಏನೂ ಬರೆಯಲಿ ಎಂದರೆ ಏನೂ ಇಲ್ಲಾ ಅನಿಸುತ್ತಿತ್ತು... ಜೊತೆಗೆ ಆ ಹಂತದ ಬಗ್ಗೆ ಅರಿವೂ ಇಲ್ಲಾ...ಆಮೇಲೆ ಅವಳ ಖುಷಿ ಹತ್ತಿರದಿಂದ ನೋಡಿ, ಇಷ್ಟು ಬರೆಯುವಂತಾಯಿತು...ಇದೆಲ್ಲಾ ಅವಳ ಕೃಪೆಯೇ...
  ನಿಮ್ಮ ಶುಭಾಶಯ ಅವಳಿಗೆ ತಿಳಿಸುತ್ತೇನೆ....ಬರಹ ಮೆಚ್ಚಿ, ಅನುಭವ ಹಂಚಿಕೊಂಡಿದ್ದಿರಿ....
  ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 11. ಧನ್ಯವಾದಗಳು ಸುಷ್ಮಾ..
  ಈ comment ಮಾಡುವ option ಚೆನ್ನಾಗಿದೆ.. :)

  ಪ್ರತ್ಯುತ್ತರಅಳಿಸಿ
 12. ಚೆನ್ನಾಗಿದೆ ಲೇಖನ, ಬ್ಲಾಗೂ :-) ಹೆಣ್ಣಿನ ಮನದ ಭಾವಗಳನ್ನು ಒಂದು ಹೆಣ್ಣೇ ಇಷ್ಟು ಸುಂದರವಾಗಿ ಬರೆಯಲು ಸಾಧ್ಯ ಅನಿಸುತ್ತದೆ. ಚೆನ್ನಾಗಿದೆ ಅಕ್ಕ :-)

  ಪ್ರತ್ಯುತ್ತರಅಳಿಸಿ
 13. ಧನ್ಯವಾದಗಳು ನಂದ ಕಿಶೋರ್ & ಪ್ರಶಸ್ತಿ....
  :)

  ಪ್ರತ್ಯುತ್ತರಅಳಿಸಿ