ಸೋಮವಾರ, ಏಪ್ರಿಲ್ 30, 2012

ಆಫೀಸಿನ ಕೊನೆ ದಿನ..!

ಬದುಕು ತೀರಾ ಯಾಂತ್ರಿಕವಾಗಿದೆ ಅನಿಸಿಬಿಡುತ್ತದೆ..ದಿನಾ ಬೆಳಗಾದರೆ ಅದೇ ಬಸ್ಸು-ರಶ್ಶು, ಅದೇ ಆಫೀಸು, ಅದೇ ಮುಖಗಳು, ಅದೇ ಬಾಸು...ರೂಟಿನ್ ಲೈಫು...ಬದುಕು ಇಷ್ಟೇನಾ ಕೊರಗು ಕೊರೆಯಲಾರಂಭಿಸುತ್ತದೆ..!ಬದಲಾವಣೆಗೆ ತೆರಕೊಳ್ಳುವ ಹಪಾಹಪಿ ಜಗ್ಗನೇ ಎದ್ದು ಬಿಡುತ್ತದೆ...ಇಲ್ಲಿಗಿಂತ ಅಲ್ಲಿ ಕಂಫರ್ಟ್ ಅನಿಸಿತಾ,ಆ ಬದಲಾವಣೆಗೆ ಮನಸ್ಸು ನುಗ್ಗಿ ಬಿಡುತ್ತದೆ.. ಇದು ಕೆಲಸ ಬದಲಾಯಿಸುವ ವಿಚಾರ..ಈ ಮೂರ್ನಾಲ್ಕು ದಿನಗಳಿಂದ ಒಳಗೊಳಗೇ ಸಂಕಟ, ಈ ಆಫೀಸಿನ ಬದುಕು ಯಾಂತ್ರಿಕವೆಂದು ಮರುಗುತ್ತಿದ್ದವಳಿಗೆ, ಬಿಟ್ಟು ಹೋಗುವಾಗ  ಈ ಬಗೆಯ ಸಂಕಟವೇಕೋ..!
ಜಿ ಎಸ್ ಶಿವರುದ್ರಪ್ಪ ಅವರ ಸಾಲುಗಳು ನೆನಪಾಗುತ್ತದೆ:
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕೆ ಹಸಿರು ಮೂಡಿತು ಹೇಗೆ?
ಬದುಕಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಿರುತ್ತದೆ... ಅರ್ಥ ಮಾಡಿಕೊಳ್ಳುವಷ್ಟರಲ್ಲಿ ತಡವಾಗಿರುತ್ತದೆ.. ಕೆಲಸದ ಜೊತೆಗೆ ಹೊಂದಿಕೊಂಡಿದ್ದ ಮನಸ್ಸಿನ ಪ್ರೀತಿಯ ಭಾವನಾತ್ಮಕ ಅಂಶದಿಂದಲೇ ಈ ಮೂಕ ಸಂಕಟವಿರಬೇಕು... :(

ಇಲ್ಲಿಯವರೆಗೆ ನನ್ನದೇ ಎಂಬಂತಿದ್ದ ಎಲ್ಲವನ್ನೂ ಬಿಟ್ಟೋಗಬೇಕು..ನಾಳೆ ಬರೋ ಹೊಸ ಹುಡುಗಿಗೆ ಇದೆಲ್ಲವೂ..! ನಾಳೆ ನಾನಿಲ್ಲಿ ಬಂದರೂ ಯಾವುದೂ ನನ್ನದಾಗಿ ಉಳಿದಿರುವುದಿಲ್ಲ..ಬಹುಶಃ ಪ್ರೀತಿಯ ಹುಡುಗಾ/ಗಿ ಯೋ ದೂರಾಗುವಾಗ ಪ್ರೇಮಿಯ ತಳಮಳವೂ ಇದೆ ತೆರನದ್ದಾಗಿರಬೇಕು... !!ಅಗಲುವಿಕೆ ಬಹಳ ಕಷ್ಟ..
ಪಿಯುಸಿ ಮುಗಿಸಿದಾಗ ಕೆಲಸ ನೀಡಿತು..ಮೆಲ್ಲನೆ ಬದುಕಿಗೊಂದು ಹೆಮ್ಮೆ ಜಮೆ ಮಾಡಿತು, ಬದುಕಿನ ರೀತಿ ಕಲಿಸಿ ಕೊಟ್ಟಿತು..ವಿದ್ಯಾರ್ಥಿ ದೆಸೆಯಿಂದ ವೃತಿ ಜೀವನಕ್ಕೆ ಕಾಲಿಡುವಾಗಿನ ಶಿಸ್ತು ತಿಳಿಸಿ ಹೇಳಿತ್ತು...ಇಂತಹ ಆಫಿಸಿನಲ್ಲಿ ಇವತ್ತು ಕೊನೆ ದಿನ..! ಎರಡು ವರ್ಷಗಳ ನಂಟು ಕಳಚಿ, ನೆನಪುಗಳ ಮೂಟೆಯೊಂದಿಗೆ ಹೊರನಡೆಯಬೇಕು..ಬೇಸರವ ಅದುಮಿಟ್ಟು, ನಾ ಬಯಸಿದ ಬದಲಾವಣೆಯ ಮಗ್ಗುಲಿಗೆ ಖುಷಿಯಾಗಿದ್ದೆನೆಂದು ತೋರ್ಪಡಿಸಬೇಕು...' ತೇನವಿನಾ ತೃಣಮಪಿ ನಾ ಚಲತಿ' ಭಗವಂತನ ಆಜ್ಞೆಯಿಲ್ಲದೆ ಹುಲ್ಲುಕಡ್ಡಿಯೂ ಚಲಿಸದಂತೆ.. ಈ ಚಲನೆಗೂ ಅವನದೇ ಆಜ್ಞೆ , ಅವನದೇ ದಾರಿ... ನಡೆಯಬೇಕು ನಡೆಸಿದಷ್ಟು ದೂರ..ಒಂದೊಂದೇ ಹೆಜ್ಜೆಯಿಂದ ಭರಿಸಬೇಕು ಆ ತೀರ...!6 ಕಾಮೆಂಟ್‌ಗಳು:

 1. ಲೇಖನ ತುಂಬಾ ಭಾವನಾತ್ಮಕವಾಗಿದೆ. ಹಲವು ಕಡೆ ಕೆಲಸ ಮಾಡಿ ಹಲವು ಬಾರಿ ಬಿಟ್ಟು ಹೋಗುವಾಗ ಇಂತಹ ಭಾವಗಳು ಮಸುಕಾಗಬಹುದು. ಈ ಯಾಂತ್ರಿಕ ಬದುಕಿನಲ್ಲಿ ಸಂಬಳ, ಉದ್ಯೋಗದ ಭರವಸೆಗಳು, ಆರ್ಥಿಕ ಪರಿಸ್ಥಿತಿಗಳು, ವಾತಾವರಣ ಒಂದೊಂದು ಸಂಸ್ಥೆಯಗ ನಿಯಮಗಳ ಗೊಜಲಿಗೆ ಸಿಲುಕಿ ಬದಲಾಗುತ್ತಲೇ ಇರುವಂತವು. ಅಲ್ಲಿ ಭಾವನಾತ್ಮಕ ಆಲೋಚನೆಗಳು ಸೊರಗಿ ಹೋಗುವುದು. ಅದು ಭಾರತವದರೂ ಸರಿ, ವಿದೇಶವಾದರೂ ಸರಿ. ಮತ್ತೆ ಇಂತಹ ಒಂದು ಲೇಖನವನ್ನು ಮೊದಲ ಬಾರಿಗೆ ಓದುತ್ತಿದ್ದೇನೆ. ಇನ್ನಷ್ಟು ಬರೆದು ಶಾಶ್ವತಗೊಳಿಸುವ ಅವಕಾಶವಿದೆ.

  ಪ್ರತ್ಯುತ್ತರಅಳಿಸಿ
 2. ಮನಸ್ಸಿನ ತುಮುಲಗಳು, ತುಡಿತಗಳು ಬರಹದಲ್ಲಿ ಇಣುಕುವ ರೀತಿ ಚೆನ್ನಾಗಿದೆ...... ಬರಹ ಮುಂದುವರೆಸಿ...

  ಪ್ರತ್ಯುತ್ತರಅಳಿಸಿ
 3. ನಿಜ ರುಚಿಯಿಲ್ಲದೆ ಆಹಾರ ಜೀರ್ಣವಾಗದು. ಒಲ್ಲದ ಕಡೆ ಕೆಲಸ ಮಾಡಿದರೂ ಅದು ಮನಸ್ಸಿಗೆ ಒಗ್ಗುವುದೇ ಇಲ್ಲ.

  ನಿಮ್ಮ ಹೊಸ ನೌಕರಿಗೆ ನನ್ನ ಶುಭಾಶಯಗಳು.

  ಪ್ರತ್ಯುತ್ತರಅಳಿಸಿ
 4. ಬರವಣಿಗೆ ಚೆನ್ನಾಗಿದೆ. ಮನಸಿನ ದುಗುಡದೊಡನೆ, ಹೊಸ ಕೆಲಸ, ಹೊಸ ಜಾಗಕ್ಕೆ ಮನಸಿನ ತುಡಿತ... Love ur Job, Not ur Company..

  ಪ್ರತ್ಯುತ್ತರಅಳಿಸಿ
 5. ಹೀಗೆ ಸುಮ್ನೆ ಒಂದಷ್ಟು ಓದೋಣಾ ಅಂತಾ ಅಂತರ್ಜಾಲದಲ್ಲಿ ಸುತ್ತಾಡ್ತಾ ಇದ್ದಾಗಾ ಅಚಾನಕ್ ಆಗಿ ಸಿಕ್ದ್ರಿ,
  ಇಷ್ಟವಾಯಿತು ನಿಮ್ಮ ಕನಸ ಕಂಗಳ ತುಂಬಿದ ಮೌನ ರಾಗ..

  ಹಳೆಯದನ್ನ ಸುಲಭವಾಗಿ ಬಿಡಲಾಗದು,
  ಬಾಲ್ಯ, ಗೆಳೆಯರು, ಪ್ರಾಚೀನ ವಸ್ತುಗಳು, ಪುಸ್ತಕದಲ್ಲಿಟ್ಟು ಮರೆತ ನವಿಲು ಗರಿ, ಮೊದಲ ಸ್ನೇಹ-ಪ್ರೇಮ,

  ಕೆಲಸ ಕೂಡ ಇದೇ ಸಾಲಿಗೆ ಸೇರುವುದು ಕೆಲವರ ಪಾಲಿಗೆ ಮಾತ್ರ
  ಆಸ್ವಾಧಿಸುವ ಮನಸ್ಸು, ಕಲಿಯುವ ಖುಷಿ, ಜೊತೆಗೆ ಆಪ್ತ ಪರಿಸರವಿದ್ದಾಗ ಕಛೇರಿಯೂ ಕಾಡುತ್ತದೆ.

  ಭಾವಗಳ ತುಂಬಾ ಚೆನ್ನಾಗಿ ಹಿಡಿದಿಟ್ಟಿದ್ದೀರಿ,
  ಸುಂದರ ಓದಿನ ಖುಷಿಗೆ ಧನ್ಯವಾದ...

  ನನ್ನ ಸಮುದ್ರ ತೀರಕ್ಕೂ ಒಮ್ಮೆ ವಿಹಾರಕ್ಕೆ ಬನ್ನಿ - http://www.samudrateera.blogspot.in/

  ಪ್ರತ್ಯುತ್ತರಅಳಿಸಿ
 6. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು...
  ಪ್ರೋತ್ಸಾಹ ನಿರಂತರವಾಗಿರಲಿ....

  ಪ್ರತ್ಯುತ್ತರಅಳಿಸಿ