ಶನಿವಾರ, ಆಗಸ್ಟ್ 25, 2012

ಅವನು ಮತ್ತು ಅವಳು..! (ಸತ್ತ ಪ್ರೀತಿಗೆ ತಿಥಿ ಮಾಡಬಹುದು ಜೀವ ಕೊಡುವುದು ಹೇಗೆ?!)

ಅವನು-

ಇವೊತ್ತು  ಮನಸಾರೆ ಅಪ್ಪಿ ಮುತ್ತಿಟ್ಟು ಹೇಳಿಬಿಡಬೇಕು.."ನಿನ್ನ ಬಿಟ್ಟಿರಲಾರೆ..ನನ್ನ ಸಿಡುಕುಗಳೆಲ್ಲ ಕೊನೆಯಾಯಿತು..ಈ ಮೂರು ವರ್ಷದ ತಪ್ಪಸ್ಸಿಗೆ ಫಲ ಸಿಕ್ಕ ದಿನ ಇದು..ಐ ಲವ್ ಯು.." ನಾ ಇಷ್ಟು ಹೇಳಿಬಿಟ್ಟರೆ ಸಾಕು. ಓಡಿ ಬಂದು ಪಾದಕ್ಕೆರಗಿ ಬಿಡುತ್ತಾಳೆ.ನಿನ್ನ ಈ ಮಾತಿಗೆ ಅದೆಷ್ಟು ಹಂಬಲಿಸಿದ್ದೆನೆಂದು ಕಣ್ಣಿರಿಡುತ್ತಾಳೆ.ನನ್ನದೆಗೆ ತಲೆಯಾನಿಸಿ ಅವಳು ಬಯಸಿದ್ದ ಭದ್ರತೆಯ ಭಾವವನ್ನು ಆಸ್ವಾದಿಸಿಬಿಡುತ್ತಾಳೆ. "ನಿನ್ನವಳೇ.." ಎಂದು ಪಿಸುಗುಡುತ್ತಾಳೆ..ಮತ್ತೆಂದೂ ಬೇರಾಗದಂತೆ ನನ್ನೊಳಗೆ ಒಂದಾಗುತ್ತಾಳೆ ನನ್ನ ಹುಡುಗಿ..!

ಹೌದು..!ಮೂರು ವರ್ಷಗಳು ಹಾಗೆ ಸಂದಿ ಬಿಟ್ಟವು.. ನನ್ನ ಬಯ್ಗಳಗಳು, ಕಟಕಿಗಳನ್ನೆಲ್ಲ ಸಹಿಸಿಕೊಂಡು ಮೂರು ವರ್ಷ ನನಗಾಗೆ ಎಂಬಂತೆ ಬದುಕಿ, ಡಿಗ್ರಿ ತೆಗೆದುಕೊಂಡಿದ್ದಾಳೆ...ಇವತ್ತಿಂದ ಈ ಜೀವ ಅವಳಿಗಾಗೆ.. ಬೇರೇನು ಮಾತಿಲ್ಲ...ಪ್ರೀತಿಯ ಸುರಗಂಗೆಯನ್ನೇ ಹರಿಸಿಬಿಡುತ್ತೇನೆ ಅವಳ ಮೇಲೆ...

ನಾನು ಕೊಂಚ ಒರಟು, ಎದೆಯೊಳಗಿನ ಪ್ರೀತಿಯ ಬಣ್ಣದ ಪದಗಳಿಂದ ವರ್ಣಿಸಿ ನನ್ನೆದೆಯ ಹುಡುಗಿಯ ಮುಂದೆ ಹರವಿಕೊಳ್ಳಲು ಬರುವುದಿಲ್ಲ.ಬೀದಿಯಲ್ಲಿ ಕೈ ಕೈ ಹಿಡಿದು ಓಡಾಡಿ ಪ್ರೇಮಿಗಳೆಂದು ತೋರಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ದೇವಸ್ಥಾನಕ್ಕೆ ಹೋದಾಗ ಅವಳಿಷ್ಟದಂತೆ ದುಪ್ಪಟ್ಟ ಹಿಡಿದು ಓಡಾಡಲು ನನಗಾಗುವುದಿಲ್ಲ. ಅವಳ ಹಣೆಗೆ ಕುಂಕುಮ ಹಚ್ಚಿ, ಅವಳನ್ನು ಪರಿಪೂರ್ಣ ಭಾವದಲ್ಲಿ ಓಲೈಸಲು ನನಗಾಗಿಲ್ಲ.ಅವಳ ಸಣ್ಣ ತಪ್ಪಿಗೂ ದುಪ್ಪಟ್ಟು ರೇಗಿದ್ದೇನೆ.ಸಿಡುಕಿದ್ದೇನೆ.. ಅವಳು ತಪ್ಪು ಮಾಡಬಾರದೆಂಬ ಆತುರದಲ್ಲಿ ನಾನೇ ತಪ್ಪಾಗಿ ನಡಕೊಂಡು ಬಿಟ್ಟೆನೇನೋ..ಪ್ರೀತಿಸುವಕ್ಕಿಂತ ಜೀವನ ಅಂದ್ರೆ ಹೀಗೆ ಎಂದು ಹೇಳಿಕೊಡುತ್ತಲೇ ಇಷ್ಟು ವರ್ಷಗಳನ್ನು  ಕಳೆದು ಬಿಟ್ಟೆ.. ಭಾವನೆಗಳು, ಸೆಂಟಿಮೆಂಟು ಎಂದು ಕೂತರೆ ಇಷ್ಟು ದೊಡ್ಡ ಪ್ರಪಂಚವನ್ನು ಎದುರಿಸುವುದ್ದರೂ ಹೇಗೆ ನನ್ನ ಪುಟ್ಟ ಹುಡುಗಿ?! ಅವಳಿಗೆ ನಾನೇ ತಿಳಿಹೇಳಬೇಕು.. ಜೀವನ ಪಕ್ಕಾ ಪ್ರಾಕ್ಟಿಕಲ್ಲು, ನಾವು ಪ್ರಾಕ್ಟಿಕಲ್ ಆಗಿ ಯೋಚಿಸಿದೀವಾ ಜಗತ್ತು ನಮ್ಮನ್ನ ಒಪ್ಪಿಕ್ಕೊಳ್ಳುತ್ತೆ,..ಅರ್ಥ ಮಾಡಿಕೊ ಕಂದಾ..! ಬಾರಿ ಬಾರಿ ಗೂ ಹೇಳಿದ್ದೇನೆ.. 

ಪ್ರೀತಿಸುವುದು ಸುಲಭ, ಜೀವನ ಪ್ರೀತಿಯಷ್ಟು ಸುಲಭವಲ್ಲ. ಜಾತಿ, ದುಡ್ಡು..!!ನನ್ನ ಮರೆತು ಬೇರೆ ಮದುವೆಯಾಗಿ ಬಿಡು ನೂರು ಸರ್ತಿ ಎಂಬಷ್ಟು ಹೇಳಿದ್ದೇನೆ, ಆ ಮಾತು ಹೇಳಬೇಕಾದರೆ ನಾನು ಒಳಗೊಳಗೇ ಇಳಿದು ಹೋಗುತ್ತಿದ್ದೆ. ಸಂಕಟ ಕಾಣದಂತೆ ಪ್ರಾಕ್ಟಿಕಲ್ ಮನುಷ್ಯನ ಮುಖವಾಡ ಹೊತ್ತುಕೊಂಡಿದ್ದೆ..ಇಂತಹ ಮಾತಿಗೆ ಕಣ್ಣಿರೊಂದೆ ಅವಳ ಉತ್ತರ. ನಿನ್ನ ಬಿಟ್ಟು ಇರಲಾಗದು, ದೂರ ಹೋಗಬೇಡ -ಮಾಡಬೇಡ..ಗೋಳಾಡುತ್ತಿದ್ದಳು.ಅವಳ ಒಂದೊಂದು ಹನಿ ಕಣ್ಣಿರಿಗೂ ದುಪ್ಪಟ್ಟು ಕೊರಗಿದ್ದೇನೆ, ಎದೆಯೊಳಗೆ ಬಿಕ್ಕಳಿಸಿದ್ದೇನೆ! ಜಾತಿ ಒಂದು ಮಾಡಲ್ಲ ನಮ್ಮನ್ನ, ಬೇರೆಯದೇ ಸಂಸಾರ ಹೂಡುವಷ್ಟು ಆರ್ಥಿಕ ಶಕ್ತಿಯಿಲ್ಲ..ಅವಳಾದರೂ ಒಳ್ಳೆ ಗಂಡನ್ನ ಪಡೆದು ಸುಖವಾಗಿರಲಿ..ನನ್ನ ಬವಣೆಗಳ ಬಾಳು ಅವಳಿಗೆ ಬೇಡ.-ನನ್ನ ಯೋಚನೆ.. 


ಅವಳ ಪ್ರೀತಿ ತಡೆದಿತ್ತು, ನನ್ನ ಬಿಟ್ಟು ಇನ್ನೊಂದು ಪ್ರಪಂಚದ ಕಲ್ಪನೆಯೂ ಇಲ್ಲದ ಹುಡುಗಿ..ಗಟ್ಟಿ ನಿರ್ಧಾರ ಮಾಡಿ ಅವಳ ಹಿಂದೆ ನಿಂತಿದ್ದೆ..ಭಾವನೆಗಳಿಲ್ಲದ ಮನುಷ್ಯನಂತೆ ವರ್ತಿಸುತ್ತಲೇ ಕಲ್ಲು ಶಿಲೆಯಾಗುದಕ್ಕೆ ಪ್ರಯತ್ನಿಸುತ್ತಲೇ ಇದ್ದೆ..
ಶಿಲೆಯಾಗಿದ್ದಾಳೆ....!
ನನ್ನ ಒಲವ ಶಿಲೆ.. ಪ್ರೀತಿಯ ಸೆಲೆ..ಬದುಕಿನ ನೆಲೆ..
ಇವೊತ್ತು ನನ್ನೀ ನಿರ್ಭಾವುಕ ಸ್ಥಿತಿಗೆ ಕೊನೆಯ ದಿನ...
ಸುಖ ದುಃಖ ಗಳೆರಡೂ ನಿನ್ನ ಜೊತೆಯಲ್ಲೇ ಹುಡುಗಿ, ಪ್ರೀತಿ ದಾಂಪತ್ಯವಾಗಲಿ.. ಐ ಲವ್ ಯು..!
ನನ್ನೆದೆಯ ಒಳಗೆ ನೀ ಮುಖವಿಟ್ಟು ಖುಷಿಯಾಗಿರುವುದನ್ನು ಕಣ್ತುಂಬಾ ನೋಡಬೇಕು..
-ನಿನ್ನದೇ ಹುಡುಗಾ..!


 
==================================================

ಅವಳು-

ಕಲ್ಲು ಶಿಲೆಯಾಗುದಕ್ಕಂತೆ ಅವನ ಪ್ರಯತ್ನ...! ಒಂದೆರಡು ವರ್ಷಗಳ ಹಿಂದೆ ಬಹಳವಾಗಿ ನಂಬಿದ್ದ ಮಾತಿದು..ಪ್ರೀತಿಯ ಪೆಟ್ಟಿನಿಂದ ಶಿಲೆಯಾಗುವ ಸಂಭವವಿತ್ತು. ಒರಟಾದ ಚುಚ್ಚು ಮಾತುಗಳ ಉಳಿಯೇಟು ಬಿದ್ದರೆ..? ಇನ್ನೂ ಪ್ರಬುದ್ದತೆಯ ಮಟ್ಟಕ್ಕೆ ಬಂದಿರದ ಕಲ್ಲು, ಸಹನೆ ತಾಳ್ಮೆ ಇಲ್ಲದೆ ಒಡೆದೇ ಹೋಯಿತು -ನನ್ನೊಂದು ಮನಸಿನಂತೆ..ತೋರಿಸಿಕೊಳ್ಳಲಾರದ ಪ್ರೀತಿ ಇದ್ದೇನು ಪ್ರಯೋಜನ?

ನಾನ್ಯಾವಾಗ ಇವನಿಗೆ ಇಂತದ್ದೊಂದು ಮೋಸ ಮಾಡಬೇಕೆಂಬ ಯೋಚನೆ ಮಾಡಿದೆ.. ನನಗಿನ್ನೂ ಸ್ಪಷ್ಟವಿಲ್ಲ..
ಬಹುಶಃ ತುಂಬು ಪ್ರೀತಿಯಲ್ಲಿ ನಂಬಿಕೆ ದ್ರೋಹದ ವಾಸನೆ ಬಂದಾಗ ನಿರ್ಧರಿಸಿದೆನಾ? ಅಥವಾ ತಾನು ಮೋಸ ಹೋಗುವ ಮುನ್ನ, ತಾನೇ ಮೋಸ ಮಾಡುವುದು ಸೂಕ್ತ ಎಂಬ ನಿಲುವಾ..? ಗೊತ್ತಿಲ್ಲ..
ಮೋಸದ ಸೂಚನೆಯಂತೂ ಸಿಕ್ಕಿತ್ತು..
ನೀನೆಲ್ಲದೆ ಜೀವ ಇಲ್ಲ ಅನ್ನುತ್ತಿದ್ದವನು, ನನಗೆ ಬೇರೆ ಮದುವೆಯಾಗುವ ಬಗ್ಗೆ ಹೇಳುತ್ತಿದ್ದ.
ಇನ್ನೊಂದು ಹೆಣ್ಣಿನ ಬಗ್ಗೆ ಯೋಚಿಸೊಲ್ಲ ಎಂದವನು, ನನ್ನ ಮೇಲೆ ಆಣೆ ಪ್ರಮಾಣ ಮಾಡಿ ಬೇರೆ ಮದುವೆಯಾಗುತ್ತೇನೆ ಅಂದಿದ್ದ.. ವರದಕ್ಷಿಣೆ ಹಣದಿಂದ ತಾನು ಬುಸಿನೆಸ್ ಶುರು ಮಾಡಬಹುದು ಎಂದು, ತಾನು ಬಡವಿ ಎಂದು ಹಂಗಿಸಿದ್ದ..
ನಿನ್ನ ಪ್ರೀತಿಸಿದಷ್ಟೇ ನಿನ್ನ ಫ್ಯಾಮಿಲಿ ನ ಪ್ರೀತಿಸುತ್ತೀನಿ ಅಂದಿದ್ದವನು, ನಿನ್ನ ಫ್ಯಾಮಿಲಿ ತನಗೇನೂ ಸಂಬಂಧ ಪಟ್ಟಿದ್ದೆ ಅಲ್ಲವೆಂದು ಜಾರಿಕೊಂಡಿದ್ದ..
ಮನಸ್ಸು ಮುರಿದ್ದಿದ್ದು ಆಗಲೇ..!
ಅತ್ತು ಕರೆದು ಮಾಡಿದ್ದೆ.... ಅವನ ಒರಟುತನ ಕಡಿಮೆಯಾಗಲಿಲ್ಲ.. ಹಾಗೆಂದು ನನ್ನ ಬಿಟ್ಟು ಹೋಗಲಿಲ್ಲ..ಜೊತೆಗೆ ಇದ್ದ, ಬಾರಿ ಬಾರಿಗೂ ಚುಚ್ಚುತ್ತಾ, ನನ್ನ ಸ್ಥಿತಿಗೆ ಆಡಿಕ್ಕೊಳ್ಳುತ್ತಾ, ಬಿಟ್ಟು ಹೋಗುತ್ತೇನೆಂದು ಹೇಳುತ್ತಾ.. ಈಗೊಂದು ಸ್ಥಿತಿಗೆ ಬಂದಿದ್ದೇನೆ. ಈಗ ಪ್ರೀತಿ ಬೇಡುತ್ತಿದ್ದಾನೆ.. ಸತ್ತ ಪ್ರೀತಿಗೆ ತಿಥಿ ಮಾಡಬಹುದು, ಜೀವ ಕೊಡುವುದು ಹೇಗೆ? ಅವನ ವರ್ತನೆಗೆ ಸಾವಿರ ಸಮುಜಾಯಿಷಿ ಕೊಡುತ್ತಾನೆ, ಅದು ನನ್ನ ನೋವಿನ ಕ್ಷಣಗಳ, ಒಂಟಿತನದ ಬೇನೆಗಳ ಗುಣ ಮಾಡುವ ಔಷಧಿಯಾಗಲು ಸಾದ್ಯವೇ?
ಅವನ ಎಲ್ಲಾ ಮಾತುಗಳೂ ನನ್ನ ಮೇಲೆ ಪರಿಣಾಮ ಬೀರಿವೆ.. ಪ್ರಾಕ್ಟಿಕಲ್ ಆಗಿ ಬದುಕಲು ಕಲಿತಿದ್ದೇನೆ.. ಏಣಿ ಏರಿದ ಮೇಲೆ ಏಣಿಯ ಹಂಗೇನು?!!
-ನಿನ್ನವಳಾಗಿದ್ದ ಹುಡುಗಿ..!. 

========================================================

ಒಂದು ಪ್ರೇಮಕತೆಯ ಅಂತ್ಯವಾದದ್ದು ಹೀಗೆ..!
ದರ್ಪ, ಅಹಂಕಾರ, ಈಗೋ ಗಳು ಪ್ರೀತಿಯ ಮುಂದೆ ನಿಲ್ಲೋಲ್ಲ...
ಪ್ರೀತಿಯನ್ನ ಪ್ರೀತಿಯಿಂದಲೇ ಗೆಲ್ಲಿ...
ಈ ಮಾತಿನ ಮೇಲೆ ತೀವ್ರ ನಂಬಿಕೆ ಬರುತ್ತಿದೆ..

===========================================


೨೦೧೨ ಅಕ್ಟೋಬರ್ ತಿಂಗಳ ಮಾನಸದಲ್ಲಿ ಪ್ರಕಟಿತ ಬರಹ.... :)
ಸತ್ತ ಪ್ರೀತಿಗೆ ತಿಥಿ ಮಾಡಬಹುದು ಜೀವ ಕೊಡುವುದು ಹೇಗೆ?!ಶನಿವಾರ, ಆಗಸ್ಟ್ 11, 2012

ನನ್ನ ವರ ನೀನೆ ಕಣೋ....

ಯಾಕೋ ದೇವರು ತುಂಬಾ ನೆನಪಾಗುತ್ತಿದ್ದ...ಅದಿಕ್ಕೆ ಹೀಗೆ ಬರೆದು..ಎಫ್ ಬಿ ಗೆ ಹಾಕಿದ್ದೆ...
ದೇವರು ಕೇಳಿದ್ದೆಲ್ಲ ಕೊಡಲಾರ...
ಕೊಟ್ಟರೆ ತುಸು ದೊಡ್ಡದೆನ್ನುವ ವರವನ್ನೇ ದಯಪಾಲಿಸಿ ಬಿಡುತ್ತಾನೆ...
ಅವನ ಮುಂದೆ ನಿಂತು ಭಕ್ತಿಯಿಂದ ಕೈ ಜೋಡಿಸುವಾಗ ಅಮ್ಮ ಹೇಳಿಕೊಟ್ಟ ಶ್ಲೋಕ ನಾಲಿಗೆ ತುದಿಲಿ ಬರುತ್ತದೆ...
ತಾನಂದುಕೊಂಡಿದ್ದು ಯಾವುದೂ ನೇರವಿರಿಸದ ದೇವರನ್ನು ದೂರುತ್ತಿದ್ದಾಗಲೇ ಅವಳಿಗೆ, ಅವಳ ಪಾಲಿಗೆ ದೊಡ್ಡದೇ ಎನ್ನುವಂತಹ ವರ ಕೊಟ್ಟುಬಿಟ್ಟ ಕರುಣಾಮಯಿ.

ಜೀವನ ಪೂರ್ತಿ ಜೋಪಾನ ಮಾಡು ಎಂದ ನೆನಪೂ ಅವಳಿಗಿದೆ...
ಈಗ ಹಠತ್ತಾನೆ ವರವನ್ನ ಕಳಕೊಳ್ಳುವ ಭಯ ಬಂದಿದೆ....! 

ದೇವರು ಕೊಟ್ಟಿದ್ದು....
ಜೋಪಾನ ಮಾಡಬೇಕು..!
ಅವಳ ಸಿಟ್ಟು, ಹಠ ನಿಲ್ಲಿಸಿ ಬಿಡು ದೇವರೇ...ಈ ಒಂದು ವರ ದಯಪಾಲಿಸು...
ಮತ್ತೇನೂ ಬೇಡ...

ಓದಿದ ಅವನದು ಪ್ರಶ್ನೆ...
"ಯಾವ ವರನೇ ಅದು? ಯಾಕೆ ಕಳಕ್ಕೊಳ್ಳುವ ಭಯ ಬಂದಿದೆ?" ಕಣ್ಣಲ್ಲಿ ಕಣ್ಣು ನೆಟ್ಟಿದ್ದ...
ನನ್ನ ಕಣ್ಣಲ್ಲಿ ನೀರು ಜಿನುಗಿತು.. 

"ನನ್ನ 'ವರ' ನೀನೆ ಕಣೋ...." 
ಮಾತು ಮುಗಿಸೋವಷ್ಟರಲ್ಲಿ ಅವನ ತೋಳಲ್ಲಿ ಬಂಧಿಯಾಗಿದ್ದೆ.. 
ಮತ್ತೆಂದೂ ಬೇರಾಗದಂತೆ ಜೊತೆಯಾಗಿದ್ದ....