ಶನಿವಾರ, ಸೆಪ್ಟೆಂಬರ್ 1, 2012

ಹೀಗೊಂದು ಕನಸು....!

ರಾತ್ರಿಯ ಸಮಯ..
ದೊಡ್ಡದೊಂದು ಕೆರೆ.. ಹಚ್ಚ ಹಸುರು ಬಣ್ಣ ಜೊತೆಗೊಂದಿಷ್ಟು ಕರಾಳ ಕಪ್ಪು.. ಭಯಾನಕವೆನಿಸುವ ನೋಟ..
ಅಮ್ಮ , ನಾನು ಮತ್ತು ಅವನು.. ಮೂವರೇ..!
ಅಮ್ಮ, "ಬದುಕು ಈ ಕೆರೆಯಂತೆ, ಕಣ್ಣಿಗೆ ತಂಪು, ಗರ್ಭದಲ್ಲಿ ಬವಣೆಗಳ ಸಾಲೇ.. ಸುಳಿಯೊಳಗೆ ಸಿಲುಕಿ ಜಯಿಸಿ ಬರುವ ಧೈರ್ಯವಿದೆಯಾ ಮಗಳೇ?"
ಅವನು "ಜೀವನದ ಪ್ರತಿ ಮೆಟ್ಟಿಲಿಗೂ ನಾನಿರುತ್ತೇನೆ, ಬವಣೆಗಳ ಬಿಸಿ ನಿಮ್ಮ ಮಗಳನ್ನು ಸೋಕದು ಅಮ್ಮಾ.."
ನನಗೆ ದಡದ ಮೇಲಿನ ಅಮ್ಮನ ಕಂಡರೆ ಮಮತೆ..
ಜೀವನದ ಕೊನೆ ತನಕ ಜೊತೆ ಇರುವೆ ಎನ್ನುವ ಇವನನ್ನು ಕಂಡರೆ ಪ್ರೀತಿ.. ಅವನು ಜೀವನದೆಡೆಗೆ ಹೆಜ್ಜೆಯುರುತ್ತಾನೆ..ನಾನು ಅವನ ಹಿಂದೆ ಹೆಜ್ಜೆ ಹಾಕುತ್ತೇನೆ..ಭವಿಷ್ಯದ ಪ್ರತಿ ಸೋಲು ಗೆಲುವಿಗೂ ಸಿದ್ದಳಿದ್ದೇನೆ..!
ಅಮ್ಮನಿಗೆ ನನ್ನ ಮೇಲೆ ಆ ಧೈರ್ಯ ಇತ್ತೋ..ಇಲ್ಲವೋ... ನನ್ನ ಊಹೆಗೆ ನಿಲುಕದ್ದು...
ಅಮ್ಮನಿಗೆ ವಿದಾಯ ಹೇಳುತ್ತಲೇ ಅವನ ಹಿಂದೆ ಹೆಜ್ಜೆಯಿಡುತ್ತಿದ್ದೆ..
ಜೀವನವೆಂಬ ಕರಾಳ ಕೆರೆಗೆ ನಾನು ನನ್ನ ಹುಡುಗ ದುಮುಕಿ ಬಿಟ್ಟಿದ್ದೆವು..
ಒಂದರೆನಿಮಿಷ ಅಷ್ಟೇ...

ಸುಳಿ ನಮ್ಮನ್ನು ಆವರಿಸುತ್ತಿತು..

ಸುಳಿಯೊಳಗೆ ಸಿಲುಕಿ ನಲುಗುತ್ತಿದ್ದೆವು...ಉಸಿರಾಡಲೂ ಆಗುತ್ತಿಲ್ಲ...
ಅಮ್ಮಾ...ಚೀರಿದ್ದೆ....
ಜೀವನ ನುಂಗಿ ಬಿಟ್ಟಿತೆ..?! ನಮ್ಮನ್ನ- ನಮ್ಮ ಕನಸುಗಳನ್ನ?!
ಅಮ್ಮ ಓಡಿ ಬಂದಿದ್ದಳು...ನಮ್ಮಿಬ್ಬರನ್ನು ಎತ್ತಿ ಇನ್ನೊಂದು ದಡ ಸೇರಿಸಿದ್ದಳು...ಎಲ್ಲಿತ್ತು ಅಮ್ಮನಿಗೆ ಅಷ್ಟೊಂದು ಶಕ್ತಿ?!
ದಡ ಸೇರಿದ ನಾವು..ಅಮ್ಮನಿಗಾಗಿ ಹುಡುಕುತ್ತಿದ್ದೇವೆ...
ಎಲ್ಲಿ ಅಮ್ಮಾ?


ಮಂಚದಿಂದ ಎದ್ದು ಹುಡುಕುತ್ತಿದ್ದೇನೆ...
ಹೀಗೊಂದು ಕನಸೇ?!
ಮುಖದ ತುಂಬಾ ಬೆವರ ಹನಿಗಳು...