ಗುರುವಾರ, ಅಕ್ಟೋಬರ್ 18, 2012

ಅಜ್ಜ ಮತ್ತು ಅಜ್ಜನ ಪುಳ್ಳಿ..

ಸ್ವಲ್ಪ ದಿನದಿಂದ ಬಹಳನೇ ಬಾಬಜ್ಜನ ನೆನಪು....ಸಿಕ್ಕಾಪಟ್ಟೆ ಅನ್ನುವಷ್ಟು ಜಾಸ್ತಿಯಾಗಿತ್ತು...ಅಜ್ಜನ ಗುಳಿ ಬಿದ್ದ ಕೆನ್ನೆ ಹಿಂಡಿ, ಜೋಬಲ್ಲಿನ ಎಂಟಾಣೆ ರಸಗುಲ್ಲಕ್ಕೆ ಆಸೆಯಾಗಿತ್ತು....ಜಗಳ ಕಾದು ಸೋಲಿಸಬೇಕೆನಿಸಿತ್ತು... ಮುದ್ದಿನ ಅಜ್ಜನ ಬಳಿ ಆಟವಾಡಬೇಕೆನ್ನುವ ಹುಮ್ಮಸ್ಸು.. ಹಮ್ಮು ಬಿಮ್ಮಿಲ್ಲದ ಅಜ್ಜ ಎಂದರೆ ಅದೇನೋ ಅದಮ್ಯ ಅಕ್ಕರೆ..

ಅಜ್ಜಿ , ಮನೆಗೆ ಬೇಕಾದ ದಿನಸಿ ಸಾಮಾನುಗಳನ್ನೆಲ್ಲ ಅಮ್ಮನ ಕೈಲಿ ಪಟ್ಟಿ ಮಾಡಿಸಿ, ಬಾಬಜ್ಜನ ಕೈಗಿಡುತ್ತಿದ್ದರು. ಜೊತೆಗೆ ಅವರ ಬೀಡಿಗೂ ಆ ಪಟ್ಟಿಯಲ್ಲೇ ಜಾಗವಿರುತ್ತಿತ್ತು..ಚೀಟಿ, ದುಡ್ಡು ಮತ್ತೊಂದು ಕೈಚೀಲ ಹಿಡಿದುಕ್ಕೊಂಡು ಅಜ್ಜ ಹೊರಟರೆಂದರೆ, ನನಗೂ ಅವರ ಜೊತೆ ಹೊರಗೆಲ್ಲ ಸುತ್ತಿ ಬರೋ ಚಪಲ.. ನಾನೂ ಹೊರಟು ಬಿಡುತ್ತಿದ್ದೆ ಅಜ್ಜಿ ಬೇಡವೆಂದರೂ ಕೇಳದೆ..ದಾರಿ ಉದ್ದಕ್ಕೂ ಪ್ರಶ್ನೆಗಳ ಸುರಿಮಳೆ ಅಜ್ಜನ ಮೇಲೆ..
ಅಜ್ಜಾ ನಿಮ್ಮ ನಿಜಾ ಊರು ಯಾವುದು? ಇಲ್ಲಿಗೆ ಬಂದಿರೋದು ಯಾವಾಗ? ನಿಮಗೆ ಮದ್ವೆ ಆಗಿಲ್ವಾ? ಯಾಕೆ ಮದ್ವೆ ಮಾಡ್ಕೊಂಡಿಲ್ಲಾ...? ಹೀಗೆ ತೀರಾ ಖಾಸಗಿ ಎನಿಸುವಂತಹ ಅವರಿಗೂ ನನ್ನೊಂದಿಗೆ ಹೇಳಿಕ್ಕೊಳ್ಳಲು ಆಗದೆ ಇರುವಂತಹ ಪ್ರಶ್ನೆಗಳನ್ನೆಲ್ಲ ಕೇಳುತ್ತಿದ್ದೆ.. ಈ ಪ್ರಶ್ನೆಗಳನ್ನ ಅದೆಷ್ಟು ಬಾರಿ ಕೇಳಿದ್ದಿನೋ... ಒಂದು ಬಾರಿಯೂ ಅಜ್ಜ ಸಮಾದಾನಕರ ಉತ್ತರ ನೀಡಲೇ ಇಲ್ಲಾ..ಅಥವಾ ಅವರ ಉತ್ತರ ನನಗ ಅರ್ಥವೇ ಆಗಲಿಲ್ಲವೋ...! ಈಗಲೂ ನನಗದು ಯಕ್ಷಪ್ರಶ್ನೆಯೇ ಸರಿ..

ಮಂಜುನಾಥ ಮಾಮನ ಅಂಗಡಿಗೆ ಬಂದರೆ ನಮ್ಮ ಮಾತಿಗೆ ಅವರೂ ಸೇರಿಕ್ಕೊಳ್ಳುತ್ತಿದ್ದರು..ಅವರು ಸಾಮಾನುಗಳನ್ನೆಲ್ಲ ಕಟ್ಟಿ ರೆಡಿ ಮಾಡಿ ಕೊಡುವಷ್ಟರಲ್ಲಿ ನನಗೋ ಜೋರು ಬಾಯಾರಿಕೆ..!! ಎದುರಲ್ಲೇ ಇದ್ದ ಮಾಮನ ಅಂಗಡಿಯ ಫ್ರಿಜ್ಜು ನನಗೆ ಬಾಯಾರಿಕೆ ತರಿಸಿರುತ್ತದೆ..! ನೀರು ಕೊಟ್ಟರೂ ಬೇಡ... ಕಪ್ಪು ಬಣ್ಣದ ಕೋಲಾನೇ ಬೇಕು.. ಅಜ್ಜಿ ದುಡ್ಡಲ್ಲಿ ಕೊಂಡರೆ ಅಜ್ಜನಿಗೆ ಕ್ಲಾಸ್ ಇರುತ್ತೆ ಮನೇಲಿ.. ತೆಗೆಸಿಕೊಡದೆ ನಾ ಕೇಳಲಾರೆ.. ಅಜ್ಜ ತನ್ನ ದೊಗಲೆ ಚಡ್ಡಿಯ ಜೋಬಿನೊಳಗಿನ ನೋಟನ್ನ ನನಗಾಗಿ ಚಿಲ್ಲರೆ ಮಾಡುತ್ತಾರೆ.. ಎಂಟಾಣೇಯ 2 ರಸಗುಲ್ಲ, ಮತ್ತೊಂದು ತುಂಡು ಮೈಸೂರ್ ಪಾಕ್ ಸಿಕ್ಕಿ ಬಿಡುತ್ತೆ.. ನಾನು ಫುಲ್ ಖುಷ್ .. 
ನನಗೆ ಒಂದೂವರೆ ಎರಡು ವರ್ಷದ ಆಜುಬಾಜು ಇದ್ದಾಗಲೇ ಈ ರೀತಿ ಅಜ್ಜನ ಜೊತೆ ಹೊರಗೆ ಹೋಗುತ್ತೇನೆಂದು ಹಠ ಹಿಡಿಯುತ್ತಿದ್ದಾಗ ಅಜ್ಜ ನನ್ನ ಕಣ್ಣುತಪ್ಪಿಸಿ ಹಿಂಬದಿ ಬಾಗಿಲಿನಿಂದ ಗೋಡೆ ಹಾರಿಕ್ಕೊಂಡು ಹೋಗುತ್ತಿದ್ದರಂತೆ ಅಮ್ಮ ಸಾದಾ ನೆನಪು ಮಾಡಿಕ್ಕೊಳ್ಳುವ ನನ್ನ ಬಾಲ್ಯದ ಸಂಗತಿಗಳಲ್ಲಿ ಇದೂ ಒಂದು.


ಈ ಅಜ್ಜನ ಊರು ಯಾವುದು? ಯಾಕೆ ನಮ್ಮೂರಲ್ಲಿ ಇದ್ದರು? ಒಂದೂ ಗೊತ್ತಿಲ್ಲಾ..ಹೆಂಡತಿ ಮಕ್ಕಳು ಇರೋಕೆ ಮದುವೆಯೇ ಆಗಿಲ್ಲ..ನಮ್ಮೂರಲ್ಲಿ ಅವರ ಯಾರೋ ದೂರದ ಸಂಬಂಧಿ ಮನೇಲಿ ಇರುತ್ತಿದ್ದರು.. ಹಗಲುಗಳೆಲ್ಲ ನಮ್ಮ ಮನೇಲಿ ಕಳಿಯುತ್ತಿತ್ತು.. ಮನೇಲಿ ಇರುತ್ತಿದ್ದ ಪೇಪರ್ರು,ಮಂಗಳ ಮ್ಯಾಗಜಿನ್ನು ಓದುತ್ತಾ, ಅಜ್ಜಿ ಯಾವುದೊ ಅಂಗಡಿಯಿಂದ ಏನೋ ತರುವುದಕ್ಕೆ ಹೇಳಿದರೆ ಅದನ್ನು ತಂದುಕೊಡುತ್ತಾ, ಸಂಜೆಯೆಲ್ಲಾ ನನ್ನೊಂದಿಗೆ ಹಾಗೆ ಅಜ್ಜನ ದಿನಚರಿ ಮುಗಿಯುತ್ತಿತ್ತು.. ವಾರಕ್ಕೊಮ್ಮೆ ಅಪ್ಪ ತಂದುಕೊಡುತ್ತಿದ್ದ ತೀರ್ಥ ಸೇವನೆ ಆಯಿತೆಂದರೆ ಅಜ್ಜನ ಆ ವಾರ ಪೂರ್ತಿಯಾದಂತೆ..

ನನಗೆ ಬುದ್ದಿ ತಿಳಿದಾಗಿನಿಂದಲೂ ಅಜ್ಜನದು ಒಂದೇ ರೂಪ... ನೆರೆತ ಕೂದಲು, ಕುಳ್ಳನೆ ತೆಳ್ಳಗಿನ ಶರೀರ, ನಸುಗಪ್ಪು ಬಣ್ಣ, ಗುಳಿಬಿದ್ದ ಕೆನ್ನೆ...ಅಂಗಡಿಯ ಮಂಜುನಾಥ ಮಾಮ ನನ್ನ ಕೆನ್ನೆ ಗುಳಿ ನೋಡಿ, "ಅಜ್ಜ ಪುಳ್ಳಿ ಇಬ್ಬರ ಕೆನ್ನೆಲೂ ಗುಳಿ..ಅಜ್ಜನಿಗೆ ಕೆನ್ನೆ ತುಂಬುವ ದೊಡ್ಡ ಗುಳಿ, ಪುಳ್ಳಿಗೆ ಚಿಕ್ಕ ಗುಳಿ.. " ಎಂದು ತಮಾಷೆ ಮಾಡುತ್ತಿದ್ದರು. ನಾ ಬೆಳೆಯುತ್ತಿದ್ದಂತೆ ಉದ್ದವಾಗತೊಡಗಿದ್ದೆ... ಅಜ್ಜನಿಗಿಂತ ಕುಳ್ಳಗಿದ್ದ ನಾನು ಅಜ್ಜನನ್ನು ಮೀರಿಸಿದ ಎತ್ತರ ಹೊಂದಿದಾಗ ನನಗೆ ಹೆಮ್ಮೆ ಅಜ್ಜನಿಗೆ ಸಂತೋಷ...ಅಜ್ಜನ ಪುಳ್ಳಿ ಯಾಗಿ ಅಜ್ಜನನ್ನು ಇದೆ ವಿಷಯಕ್ಕೆ ಸಾಕಷ್ಟು ಬಾರಿ ರೆಗಿಸಿದ್ದೇನೆ, ಅಜ್ಜನಿಗೆ ಬರೆಯೋಕೆ ಬರುತ್ತೋ ಇಲ್ವೋ ಅಂತ ಉತ್ತಲೇಖನ ಕೊಟ್ಟು ಟೆಸ್ಟ್ ಮಾಡಿದ್ದೇನೆ.. ಅದೆಷ್ಟೋ ಬಾರಿ ಅಜ್ಜನ ಬೀಡಿ ದುಡ್ಡಲ್ಲಿ ರಸಗುಲ್ಲ ತಿಂದಿದ್ದೇನೆ..ಶಾಲೇಲಿ ಕಳಿಸಿದ ಹಾಡನ್ನು ಅವರ ಮುಂದೆ ಹಾಡಿದ್ದೇನೆ, ಕುಣಿದ್ದಿದ್ದೇನೆ..
 ನಾ ಏನು ಮಾಡಿದರೂ ಒಂದೇ ಒಂದು ಬಾರಿ ನನ್ನ ಅಜ್ಜ ನನ್ನ ಮೇಲೆ ಮುನಿಸಿಕ್ಕೊಂಡಿಲ್ಲ..ಬೈದಿಲ್ಲ..ಹೊಡೆದಿಲ್ಲ... :) ನಾ ಮಾಡಿದ ಎಲ್ಲ ಚೇಷ್ಟೆಗಳನ್ನು ಸಹಿಸಿ ಮುದ್ದು ಮಾಡಿದ ಒಂದೇ ಜೀವ ಅದು..(ಅಪ್ಪ ಅಮ್ಮನೂ ಎಲ್ಲ ಮಕ್ಕಳನ್ನೂ ಸಹಿಸಿಕ್ಕೊಳ್ಳುತ್ತಾರೆ.. ಇಲ್ಲವೆಂದಲ್ಲ ಆದರೆ ಒಂದೇ ಒಂದೂ ಬಾರಿಯೂ ತಾಳ್ಮೆ ಕಳೆದುಕ್ಕೊಳ್ಳದೇ ಇರಲಾರರು) ಈ ಅಜ್ಜನಿಗೆ ನನ್ನ ಹೆಸರು ಸರಿಯಾಗಿ ಕೂಗಲು ಬರುತ್ತಿರಲಿಲ್ಲ.. ಸುಷ್ಮಾ ಅನ್ನೋದು ತುಸು ಕಷ್ಟವಾಗುತ್ತಿತ್ತು... ನನ್ನನ್ನು ಸುಸಿಮಾ ಎನ್ನುತ್ತಿದ್ದಾಗಲೆಲ್ಲಾ ಸರಿ ಮಾಡಲು ಹೋಗಿ ಸೋತಿದ್ದೇನೆ..

ಇಂತಹ ಅಜ್ಜ ಇದ್ದಕ್ಕಿದ್ದ ಹಾಗೆ ಖಾಯಿಲೆ ಬಿದ್ದು ಬಿಟ್ಟರು.. :(
ಮೊದಲು ಗಾಬರಿಯಾಗುವಂತಹದು ಎನಿಲ್ಲವಾದರೂ... ಕ್ರಮೇಣ ದೇಹಸ್ಥಿತಿ ಕೆಡುತ್ತಾ ಬಂದಿತ್ತು.. ನಾನು ಅಪ್ಪ ತಂದ ಬಿಸ್ಕತ್ತು, ಬ್ರೆಡ್ಡು ಹಿಡಿದು ಅಜ್ಜನ ಮನೆಗೆ ಓಡುತ್ತಿದ್ದೆ... ನಾ ಹೋದಾಗಲೆಲ್ಲ "ಸುಸಿಮಾ... ಸುಸಿಮಾ.." ಎನ್ನುತ್ತಿದ್ದರು ಅಷ್ಟೇ.. ನನಗೆ ಒಳಗೊಳಗೇ ಸಂಕಟ.. ದಿನ ದೇವರ ಮುಂದೆ ಕೈ ಜೋಡಿಸುವಾಗ ಕೇಳಿಕೊಳ್ಳುತ್ತಿದಿದು ಒಂದೇ ಅಜ್ಜನ್ನ ಗುಣ ಮಾಡು ದೇವರೇ.. ಮೊರೆ ತಲುಪಲಿಲ್ಲಾ..ಅಜ್ಜ ಅದೊಂದು ದಿನ ವಿಧಿವಶರಾಗಿ ಬಿಟ್ಟರು.. ಚಿಕ್ಕವಳಿದ್ದ ಕಾರಣ, ಸತ್ತ ಮನೆಗೆ ಹೋಗುವಂತಿರಲಿಲ್ಲ ಅಜ್ಜಿಯ ತಾಕೀತು. ಅಮ್ಮನೇ ನನ್ನ ಸಂಕಟ ನೋಡಲಾಗದೇ ಕೊನೆ ಬಾರಿ ನೋಡಿಕ್ಕೊಂಡು ಬಿಡಲಿ ಅಂದರೂ, ಅಜ್ಜಿಯ ಮಾತಿನ ಮುಂದೆ ನಡೆಯಲ್ಲಿಲ್ಲ... ದೂರದಲ್ಲೆಲ್ಲೋ ಚಟ್ಟ ಎತ್ತಿಕೊಂಡು ಹೋದಾಗಲೇ ನೋಡಿದ್ದು...

ಇದಾಗಿ ವರುಷಗಳುರುಳಿದರೂ ಆ ನೆನಪು, ಸಂಕಟ ಇನ್ನು ಎದೆಯೊಳಗೆ ಅಂದಿನಂತೆಯೇ ಇದೆ...ಈಗ ಮತ್ತಷ್ಟು ಎತ್ತರಕ್ಕಾಗಿರುವುದು ಅಜ್ಜನ ಮುಂದೆ ನಿಂತು ತೋರಿಸಬೇಕೆಂಬ ಹಂಬಲ ಇದೆ.. ಮತ್ತದೇ ರಸಗುಲ್ಲದ ನೆನಪಿದೆ.. ಅಜ್ಜನ ಗುಳಿಕೆನ್ನೆ ಹಿಂಡುವ ಹಂಬಲ ಇದೆ.. ಎಲ್ಲವೂ ನೆನಪು ಮತ್ತು ನೆನಪು ಮಾತ್ರ... ನೆನಪು ಬಹಳನೇ ಕಾಡುತ್ತಿದೆ...

(ಪುಳ್ಳಿ ಎಂದರೆ ಮೊಮ್ಮಗಳು...)

6 ಕಾಮೆಂಟ್‌ಗಳು:

 1. ಚೆನಾಗಿದೆ ಸುಷ್ಮಾ..ಮುಂದುವರೆಸಿ...
  ಕವನಗಳನ್ನು ಬದಲು,ಹೊಸತರಹದ ಲೇಖನ ನೀಡಿದಿರಿ..

  ಪ್ರತ್ಯುತ್ತರಅಳಿಸಿ
 2. ಸುಸಿಮಾ ಮನಸ್ಸನ್ನು ತೀಡಿ ಹಳೇ ನೆನಪುಗಳತ್ತ ಜಾಗೃತಗೊಳಿಸಿದ ಕಥನ.

  ನನಗೆ ತಿಪ್ಪಜ್ಜ ಮತ್ತು ಅವನು ಕೊಡಿಸುತ್ತಿದ್ದ ಬೋಟಿ ನೆನಪಾದವು.

  ಒಳ್ಳೆಯ ಶೈಲಿ. ಗಲ್ಫ ಕನ್ನಡಿಗದಲ್ಲಿ ಪ್ರಕಟವಾದದ್ದಕ್ಕೆ ಶುಭಾಶಯಗಳು.

  ಪ್ರತ್ಯುತ್ತರಅಳಿಸಿ
 3. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಚಂದದ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು ಬದರಿ ಸರ್...

  ಪ್ರತ್ಯುತ್ತರಅಳಿಸಿ