ಗುರುವಾರ, ನವೆಂಬರ್ 1, 2012

ನೆನಪುಗಳ ಜಡಿಮಳೆ..


ಮತ್ತೆ ಈ ಮಳೆಗೆ ನೀನೇ ನೆನಪಾಗುತ್ತಿಯಾ..
ಮರೆತಿದ್ದೆಯಾ ನೆನಪಾಗುವುದಕ್ಕೆ ಎಂದು ಕೇಳಬೇಡ.. ನನ್ನಲ್ಲಿ ಉತ್ತರವಿಲ್ಲ..!
ನೀನು ನಾನು ತೇಲಿಬಿಟ್ಟ ಬಾಲ್ಯದ ಕಾಗದದ ದೋಣಿ, ಸ್ಕೂಲ್ ನಿಂದ ಬರುವಾಗ ತೊರೆಯ ನೀರಲ್ಲಿ ಮಿಂದೆದದ್ದು , ಗಾಳಿಗೆ ಸಿಕ್ಕ ಕೊಡೆಯಲ್ಲಿ ಒದ್ದೆ ಒದ್ದೆಯಾಗಿ ಅಮ್ಮ ಕಾಸಿಟ್ಟ ಬಿಸಿಬಿಸಿ ನೀರಲ್ಲಿ ಸ್ನಾನ ಮಾಡಿದ್ದು, ಮರುದಿನ ಅಪ್ಪ ರೈನ್ ಕೋಟ್  ಕೊಡಿಸಿದ್ದು, ಹೊರಗಿನ ಮಳೆಗೆ ಒಳಗೆ ಬೆಚ್ಚನೆ ಹೊದ್ದು ಮಲಗಿದ್ದು , ಮಳೆಗೆ ಸೋರುತ್ತಿದ್ದ ಛಾವಣಿಯಾ ಕೆಳಗೆ ಅಜ್ಜಿ ತಂದಿಟ್ಟ ಆ ದೊಡ್ಡ ಪಾತ್ರೆ.. ಅದೆಷ್ಟು ನೆನಪುಗಳು ಮಳೆಯೊಂದಿಗಿವೆ ಹುಡುಗಾ.. ಮಳೆಗೂ ನೆನಪಿಗಿಗೂ ಅದೆಷ್ಟು ದೊಡ್ಡ ನಂಟಿದೆ ನೋಡು.. ಎರಡು ದಿನದಿಂದ ಬೆಂಗಳೂರಲ್ಲಿ ಬಿಡದೆ ಮಳೆ.. ನನ್ನಲ್ಲಿ ನೆನಪುಗಳ ಸುರಿಮಳೆ.ನೆನಪುಗಳ ಕಾವಿಗೆ ಈ ಚಳಿಯಲ್ಲೂ ಒಂಥರಾ ಬೆಚ್ಚಗಿದ್ದೇನೆ..!ಊರಲ್ಲೂ ಭಾರಿ ಮಳೆಯಂತೆ , ಅಮ್ಮ ಫೋನ್ ಮಾಡಿದ್ದವಳು ಸೈಕ್ಲೋನ್ ಪ್ರಭಾವ ಅಂತ ಬೇರೆ ಅಂದಳು. ಅತ್ತೆ ಮಾಡಿಕೊಡೋ ಪತ್ರೊಡೆ, ಪೋಡಿ ತಿಂದು ಮಳೇನ ಮಜವಾಗಿ ಕಳೀತಾ ಇದ್ದೀಯ ಅಂತ ಸುದ್ದಿ ಬಂತು. ಕಾಲೇಜ್ ಗೆ ರಜ ಬೇರೆ..ಬೆಂಗಳೂರಿಗೆ ಬಂದುಬಿಡು ಮಾರಾಯ..ಮತ್ತೆ ಹಳೆ ದಿನಗಳನ್ನು ನೆನಪು ಮಾಡಿಕೊಳ್ಳಬಹುದು. ಮೊದಲ ಬಾರಿ ನೀ ನನ್ನ ಪ್ರಪೋಸ್ ಮಾಡಿದ್ದು ನೆನಪಿದೆಯ ನಿನಗೆ? ಪೆದ್ದ..ಆವಾಗಿನ್ನೂ 9ನೇ ತರಗತಿ ನಾವು. ಜೋರು ಮಳೆಯ ದಿನ ಮರದ ಕೆಳಗೆ ನಿಂತಿದ್ದೆವಲ್ಲಾ , ಮಳೆಗೆ ಒದ್ದೆ ಒದ್ದೆಯಾಗಿದ್ದರೂ ಮಂಡಿಯೂರಿ ಐ ಲವ್ ಯು ಅಂತ ಹೇಳಿಬಿಟ್ಟೆಯಲ್ಲ..ಭಂಡ..ಅತ್ತೆ ಮಗಳು ಅನ್ನೋ ಭಂಡತನವೇ ನಿನಗಷ್ಟು ಧೈರ್ಯ ಕೊಟ್ಟಿದ್ದು ಇರಬೇಕು. ಕೆನ್ನೆಗೊಂದು ರಪಾರನೆ ಭಾರಿಸಿಬಿಟ್ಟೆ ನೋಡು (ಹಿರೋಯಿನ್ ಸ್ಟೈಲ್ ನಲ್ಲಿ) ನೆನಪಿದೆಯ ಆ ಮೊದಲ ಪೆಟ್ಟಿನ ಖಾರ?! 


ನೆನೆಸಿಕೊಂಡರೆ ನಗೋ ನಗು..ನಿನ್ನ ಬಿಟ್ಟು ಮಳೆಲೇ ಧುರುಧುರು ನಡೆದುಕೊಂಡು ಮನೆತಲುಪವರೆಗೂ ನಿನ್ನ ಮೇಲೆ ಸಿಟ್ಟಿತ್ತು. ಅದೆಷ್ಟೋ ಹೊತ್ತಾದ ಮೇಲೆ ಮನೆಗೆ ಬಂದ ನಿನಗೆ, ಅಣ್ಣನ ಮಗನೆಂದು ನನ್ನಮ್ಮ  ಸ್ಪೆಷಲ್ ನೀರುಳ್ಳಿ ಬಜೆ ಮಾಡಿಕೊಟ್ಟಿದ್ದು. ಯಾವತ್ತೂ ನನ್ನ ಬಿಟ್ಟು ತಿನ್ನದವ ಅವತ್ತು ಗಬಗಬನೆ ನೀರುಳ್ಳಿ ಬಜೆ ನುಂಗಿದ್ದು ನೆನಪಿದೆಯಾ? ಮತ್ತೆ ಮರುದಿನ ಸಾರೀ ಕೇಳಿ ಜೊತೆ ಬಂದಿದ್ದೆಯಲ್ಲ ಹುಚ್ಚು ಹುಡುಗಾ...


ನಿನ್ನ ನನ್ನ ನಿಶ್ಚಿತಾರ್ಥದ ದಿನನೂ ಇಂತದ್ದೆ ಒಂದು ಜಡಿ ಮಳೆ.. ಈ ಮಳೇಲಿ ನಿಶ್ಚಿತಾರ್ಥ ಬೇಕಿತ್ತಾ ಎಂದು ನೆಂಟರಿಷ್ಟರೆಲ್ಲ ಪ್ರಶ್ನಿಸುವಂತಾಗಿತ್ತು.ನಿನ್ನ ಮಾಸ್ಟರ್ ಡಿಗ್ರಿ ಮುಗಿಯೋದಕ್ಕೆ ಇನ್ನೂ ಒಂದು ವರ್ಷವಿತ್ತು. ನಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಹೊರಡಬೇಕಾಗಿತ್ತು. ಒಟ್ಟಾರೆ ಗಡಿಬಿಡಿನಲ್ಲಿ ಮಳೆಯ ನಡುವೆಯೇ ನಾವಿಬ್ಬರು ಉಂಗುರ ಬದಲಾಯಿಸಿಕೊಂಡ್ವಿ... ಆಗೆಲ್ಲಾ ಅದೆಷ್ಟು ಸಂತೋಷ ಇತ್ತು ನೋಡು..ವಾರಕ್ಕೊಂದು ಮೇಲ್, ನಿಮಿಷ ನಿಮಿಷಕ್ಕೊಂದು ಮೆಸೇಜ್ ಪ್ರೇಮಿಗಳಾಗಿರೋ ಚಂದದ ಅನುಭವ ಪಡೆದ ದಿನಗಳವು..

ಬದುಕು ಅದು ಹೇಗೆ ಹೇಗೆ ತಿರುವು ಪಡೆದುಕೊಂಡು ಬಿಡುತ್ತದಲ್ಲ...ಆಕ್ಸಿಡೆಂಟ್ ನಲ್ಲಿ ಕಾಲು ಕಳಕೊಂಡ ನನ್ನ ಮದುವೆಯಾಗಲು ನಿನ್ನ ಅಪ್ಪ ಅಮ್ಮ ನಿರಾಕರಿಸಿದರು. ನಮ್ಮಿಬ್ಬರ ಬದುಕು ಅಲ್ಲಿಗೆ ನಿಂತಿತು. ನೀನೂ ಬೇರೆ ಮದುವೆಯಾಗಲಿಲ್ಲ. ಫೋನ್, ಮೆಸೇಜ್, ಇಮೇಲ್ ಯಾವುದೂ ಇಲ್ಲಾ...ನಾನೂ ಹಾಗೆ ಇದ್ದೇನೆ ಹಿಂದಿನಂತೆಯೇ.  ಪ್ರತಿಕ್ಷಣವೂ ನಿನ್ನ ಪ್ರೀತಿಯ ಕನವರಿಕೆಯೊಂದಿಗೆ. ತಡೆಯಲಾರದೆ ಇಷ್ಟು ಬರೆದುಬಿಟ್ಟೆ..ಈ ಮಳೆ ಸಿಹಿ ಕಹಿ ನೆನಪುಗಳನ್ನು ಒತ್ತಿ ಬರಿಸುತ್ತದೆ.. ಇಬ್ಬರೂ ನೆನಪಿದ್ದೂ ಇಲ್ಲದವರಂತೆ ಬದುಕುತ್ತಿದ್ದೇವೆ.. ಸುಖವಾಗಿರುವಂತೆ ತೋರಿಸಿಕೊಳ್ಳುತ್ತಿದೇವೆ. ತೋರಿಕೆ ನಿಜವಲ್ಲ. ನಿಜದಲ್ಲಿ ನಮ್ಮ ಬದುಕಿಲ್ಲ.
ಸುಂದರ ಮಳೆಯಲ್ಲಿ ನೆನಪುಗಳೊಂದಿಗೆ ತೊಯ್ದುಬಿಡು.. ಕಹಿಗಳು ಕೊಚ್ಚಿ ಹೋಗಲಿ..ಸಿಹಿಗಳು ಬದುಕು ತುಂಬಲಿ ಹುಡುಗಾ..

6 ಕಾಮೆಂಟ್‌ಗಳು:

 1. ಒಂದು ಚಿಕ್ಕ ಅಪಘಾತ ಬದುಕನ್ನೇ ಬುಡ ಮೇಲು ಮಾಡುತ್ತದೆ ಅಲ್ಲವೇ ಗೆಳತಿ?

  ಕಾವ್ಯದಷ್ಟೇ ನಿಮ್ಮ ಲೇಖನಿ ಗದ್ಯದಲ್ಲೂ ಪಳಗುತ್ತಿದೆ. ಒಳ್ಳೆಯದಾಗಲಿ.

  ಪ್ರತ್ಯುತ್ತರಅಳಿಸಿ
 2. ಚಂದದ ಸುಂದರ ಬರಹ ....ಮಳೆಯೊಂದಿಗೆ ಅದೆಷ್ಟು ನೆನಪುಗಳು ...ಇಷ್ಟ ಆಯ್ತು.. :))

  ಪ್ರತ್ಯುತ್ತರಅಳಿಸಿ
 3. ನಿಜ ಸರ್ ಒಂದು ಸಣ್ಣ ಬದುಕಿನ ತಿರುವು ಬದುಕಿನ ದಿಕ್ಕನ್ನೇ ತಿರುವಿ ಹಾಕಿ ಬಿಡಬಲ್ಲುದು , ಅದೆಷ್ಟೂ ವರ್ಷಗಳ ಕನಸು, ಆಸೆಗಳನ್ನ ನುಂಗಿ ಹಾಕಿ ಬಿಡಬಲ್ಲುದು...
  ಧನ್ಯವಾದಗಳು ಬದರಿ ಸರ್...

  ಪ್ರತ್ಯುತ್ತರಅಳಿಸಿ