ಗುರುವಾರ, ನವೆಂಬರ್ 15, 2012

ಬದುಕು ಮತ್ತು ಪ್ರೀತಿ..!

ಪ್ರೀತಿ ಪ್ರೇಮಗಳೆಂದು ಬರೆದಿದ್ದು ಬಹಳಷ್ಟು ಬಾರಿ ಸಾಕೆನಿಸಿದರೂ, ಅದೇನೋ ಅಂತಹ ವಿಷಯಗಳೇ ಸಿಕ್ಕಿ ತಲೆಯೊಳಗೆ ಗಿರಕಿ ಹೊಡೆಯುತ್ತಾ ಇರುತ್ತವೆ..ಬರಿಯ ಕಲ್ಪನೆಯಲ್ಲ. ನಿಜವಾಗಿಯೂ ಅಂತಹ ಘಟನೆಗಳು ನಡೆದು ಹೋದು ಅದೇನೋ ಅವ್ಯಕ್ತ ನೋವನ್ನ ಮನದೊಳಗೆ ಇರಿಸಿ ಹೋಗುತ್ತವೆ.. ಸುತ್ತ ಮುತ್ತ ಗೆಳೆಯರು.ಎಲ್ಲರದೂ ಹದಿವಯಸ್ಸೇ. ಪ್ರೀತಿ ಪ್ರೇಮಗಳು ಲವ್ವೆಂಬ ರೂಪದಲ್ಲಿ ಹೃದಯದ ಭದ್ರ ಕೋಟೆಯಲ್ಲಿ ನೆಲೆ ನಿಲ್ಲುವ ವಯಸ್ಸಿದು. ಹೈ ಸ್ಕೂಲ್ ಮೆಟ್ಟಿಲಲ್ಲಿ ಹುಟ್ಟುವ ಹರೆಯದ ಕಲರವ ಕಾಲೇಜು ಕ್ಯಾಂಪಸ್ಸಲ್ಲಿ ತನ್ನ ರಂಗು ಪಸರಿಸಿರುತ್ತದೆ. ಆದರೆ ಇಂತಹ ಬಣ್ಣ ಬಣ್ಣದ ಕನಸುಗಳಲ್ಲಿ ಹುಟ್ಟುವ ಈ ಪ್ರೀತಿಗಳದ್ದು ಯಾವಾಗಲೂ ಅದ್ಯಾಕೆ ದುರಂತ ಅಂತ್ಯಗಳಾಗುತ್ತವೆ..? ದುರಂತವಾಗಿಸುವ ದರ್ದು ಪ್ರೇಮಿಗಳಲ್ಲಿ ಇಬ್ಬರಲ್ಲಿ ಒಬ್ಬರಿಗೆ ಇದ್ದರೂ ಅಂತಹ ಪ್ರೀತಿಯನ್ನು ಹುಟ್ಟಿ, ಬೆಳೆಸುವುದು ಬೇಕಿತ್ತದರೂ ಯಾಕೆ? ವಿಷಯ ಬಹಳ ಗೊಂದಲ ಮತ್ತು ನನ್ನ ಮಟ್ಟಿಗೆ ಕೊಂಚ ಗಂಭೀರವೇ...! ಸ್ನೇಹಿತರ ಪ್ರೇಮ ಪ್ರಕರಣಗಳು ಮುರಿದು ಬಿದ್ದಾಗ ಅದೇನೋ ಮನ ತೀವ್ರ ತಲ್ಲಣಿಸುತ್ತದೆ...
ಮೊನ್ನೆ ಲಾಲಿ ಕಾಲ್ ಮಾಡಿದ್ದಳು.. ನನಗೋ ಆಶ್ಚರ್ಯ.. ಯಾವತ್ತೂ ಇಲ್ಲದವಳು ಈಗ ಕಾಲ್ ಮಾಡಿ ಬಿಟ್ಟಿದ್ದಾಳೆಂದರೆ ಅಚ್ಚರಿ ಸಹಜ. ನಾನು ಆಫೀಸ್ , ಕಾಲೇಜ್ ಎಂದು ಬ್ಯುಸಿ ಇದ್ದೆನಾದರೂ ಅವಳಲ್ಲಿ ಮಾತಾಡುವ ತವಕ ಇದ್ದೆ ಇತ್ತು. ಒಂದು ಕಾಲದಲ್ಲಿ ಜೀವದ ಗೆಳತಿಯಾಗಿದ್ದವಳು ಅವಳು. ಅವಳು ಕಾಲ್ ಮಾಡಿದ ಟೈಮ್ ಗೆ ನಾನು ಬ್ಯುಸಿ, ನನ್ನ ಟೈಮ್ ಗೆ ನಾನು ಕಾಲ್ ಮಾಡಿದ್ರೆ ಅವಳು ಕಾಲ್ ರಿಸಿವ್ ಮಾಡ್ತಾ ಇರ್ಲಿಲ್ಲ.."ಮನೇಲಿ ಎಲ್ಲಾ ಇದ್ದಾರೆ ಮಾತಾಡೋಕೆ ಆಗಲ್ಲ" ಅಂತ ಮೆಸೇಜ್ ಮಾಡುತ್ತಿದ್ದಳು. ಇಷ್ಟರಲ್ಲೇ ನನಗೆ ಗೊತ್ತಾಗಿ ಬಿಟ್ಟಿತ್ತು. ಮನೇಲಿ ಏನೋ ಸಮಸ್ಯೆಯಾಗಿದೆ ಎಂದು. ನೆಕ್ಸ್ಟ್ ಸಂಡೇ ಕಾಲ್ ಮಾಡಿದವಳು.
"ನನಗೆ ಮದುವೆ ಗೊತ್ತಾಗಿದೆ" ಎಂದಳು.
ಯಾರೇ ಹುಡುಗ ಅಂತ ಕೇಳೋ ಹಾಗಿರಲಿಲ್ಲ. ಹುಡುಗ ಯಾರೆಂದು ನನಗೂ ಗೊತ್ತಿತ್ತು..! Congrats ಎಂದೆ.
"ದೀಪಕ್ ಅಲ್ಲ ಹುಡುಗಾ.. ಮನೇಲಿ ಒಪ್ಪಲ್ಲ ಅಂತ ನಾನೇ ಬೇಡ ಅಂದೇ.." ಅವನಿಲ್ಲದೆ ಜೀವ ಇಲ್ಲ ಅನ್ನುತ್ತಿದ್ದವಳು ಇವಳೇನಾ? ನನಗೆ ಅಚ್ಚರಿ. ಸುಮಾರು ನಾಲಕ್ಕು ವರ್ಷಗಳ ಪ್ರೀತಿ..
 ನನ್ನ ಮತ್ತು ಅವಳ ಸ್ನೇಹ ಎಂಟನೇ ತರಗತಿಯಲ್ಲಿ ಮೊಳಕೆಯೊಡೆದಿದ್ದು.. ಒಬ್ಬರಿಗೊಬ್ಬರು ಎಂಬಂತೆ ಜೊತೆಯಾಗಿದ್ದು, ಪ್ರಾಣ ಸ್ನೇಹಿತೆ ಎನಿಸಿಕೊಂಡಿದ್ದು, ಆಡಿದ ಕಬ್ಬಡ್ಡಿ, ಕೋಕೋ ಗಳ  ನೆನಪು ಇನ್ನೂ ಹಸಿ ಹಸಿ. ಚಂದದ ಹೈ ಸ್ಕೂಲ್ ದಿನಗಳಲ್ಲೇ ಅವಳಿಗೆ ಚಂದದ್ದೊಂದು ಲವ್ ಆಗಿತ್ತು ನನಗೂ ಗೊತ್ತಿಲ್ಲದೇ..! ಮುಚ್ಚಿಟ್ಟಿದ್ದಳು. ಬಹುಶಃ ಗೊತ್ತಿದ್ದರೆ ಆಗಲೇ ಆ ಪ್ರೀತಿ ಇಲ್ಲಾ ಈ ಸ್ನೇಹ ಮುರಿದು ಬೀಳುತ್ತಿತ್ತು ಆ ಮಾತು ಬೇರೆ. ನಾನು ಮೊಂಡಿ ಪ್ರೀತಿ ಪ್ರೇಮಗಳ ಕಟ್ಟಾ ವಿರೋಧಿಯಾಗಿದ್ದವಳು ಒಂದು ಕಾಲಕ್ಕೆ.ಆಗ ಇವಳ ಪ್ರೇಮ ಪ್ರಕರಣ ನನಗೆ ತಿಳಿಯದೆ ಇದಿದ್ದು ಒಳ್ಳೆಯದೇ..ಎಸ್ ಎಸ್ ಎಲ್ ಸಿ ನ ಕೊನೆಯ ದಿನಗಳಲ್ಲಿ ಅದು ಹೇಗೋ ನನಗೆ ವಿಷಯ ತಿಳಿದು ಹೋಯಿತು. ಹುಡುಗ ಅತ್ತೆ ಮಗ ಅಂದಿದ್ದಳು. ಇನ್ನೊಂದು ರೀತಿ ಅಣ್ಣನೂ ಆಗುತ್ತಾನಂತೆ..! ನನಗೂ ಸುಧಿಗೂ ಇದ್ಯಾಕೋ ಸರಿ ಬರಲಿಲ್ಲ. ಅಣ್ಣನಾಗುವವನನ್ನು ಗಂಡನಾಗಿಸುವುದು ಸರಿ ಇಲ್ಲದ್ದು. ಈಗಲೇ ಇದಕ್ಕೆಲ್ಲಾ ಮುಕ್ತಿ ಹಾಡು , ಮೊಂಡಾಟ ಬಿಡು ಎಂದು ತಿಳಿ ಹೇಳಿದ್ದೆವು. ಅದ್ಯಾಕೋ ಪ್ರೇಮದ ಅಮಲಿನಲ್ಲಿದ್ದ ಅವಳಿಗೆ ನಮ್ಮ ಮಾತು ಸಹ್ಯವಾಗಲಿಲ್ಲ. ಜೊತೆಗೆ ಇನ್ನೊಂದು ರೀತಿಲಿ ಅತ್ತೆ ಮಗನೇ ಆಗುತ್ತಾನೆಂದು ಬೇರೆ ಹೇಳಿ ಬಿಟ್ಟಿದ್ದಳು. ಅದೇನೋ ಹುಚ್ಚು ಬುದ್ದಿ ಇಲ್ಲದ್ದನ್ನು ಇದೆ ಎಂದು ಕಲ್ಪಿಸಿ ಹೇಳಿಬಿಡುತ್ತೇ..ತಕ್ಷಣಕ್ಕೆ ಸಿಕ್ಕ ಆ ಪ್ರೀತಿನ ಕಳೆದುಕೊಳ್ಳುವುದು ಅವಳಿಗೂ ಇಷ್ಟವಿಲ್ಲ..ಇಂತಹ ಹೊತ್ತಿನಲ್ಲಿ ನಮ್ಮ ಮಾತು ನಮ್ಮ ಸ್ನೇಹದ ತಿಳಿನೀರ ಕೊಳಕ್ಕೆ ಕಲ್ಲನೆಸೆದಂತೆಯೇ ಆಗಿತ್ತು. ನಾವು ಜಲಸಿಯಿಂದ ಹೀಗೆ ಹೇಳುತ್ತಿದ್ದೇವೆಂದು ಅವಳು ಭಾವಿಸಿದ್ದು, ನೋವಾಗಿತ್ತು.
 

ಪಿಯುಸಿ ಗೆ ಬಂದಾಗಲೂ ನಮ್ಮ ಸ್ನೇಹ-ಅವಳ ಪ್ರೀತಿ ಮುಂದುವರಿದಿತ್ತು. ಅವಳ ಪ್ರೀತಿಗೆ ನಾವ್ಯಾರು ಅಡ್ಡಿಯಾಗಿ ನಿಲ್ಲಲಿಲ್ಲ..ಆದರೂ ಅವಳ ಪ್ರೀತಿ ನಮ್ಮನ್ನು ಜೊತೆಯಾಗಿ ಇರುವುದಕ್ಕೆ ಬಿಡಲಿಲ್ಲ.. ಪ್ರೀತಿ ಸ್ನೇಹಾನ ಬಿಡು ಅಂದಿತು. ಸ್ನೇಹದ ಕೊಂಡಿ ಕಳಚಿಬಿದ್ದಿತು. ನನಗಿನ್ನೂ ಕಾರಣ ಸ್ಪಷ್ಟವಿಲ್ಲ.ಅದ್ಯಾಕೆ ನಮ್ಮ ಅಷ್ಟು ಗಟ್ಟಿಯಾಗಿದ್ದ ಸ್ನೇಹ ಹಾಗೆ ಮುರಿದುಬಿತ್ತು? ಅವಳಾಗೇ ದೂರ ಹೋದಳು.. ನಾನು ಮೂಕವಾಗಿ ರೋಧಿಸಿದೆ. ಬಹುಶಃ ಅವನಿಗೆ ಅವಳು ಅವನ ಜೊತೆ ಮಾತ್ರ ಇರಬೇಕೆನ್ನುವುದು ಅತಿಯಾಗಿ, ಅವಳನ್ನು ಸ್ನೇಹದಿಂದ ದೂರ ಮಾಡಿರಬಹುದಾ? ಗೊತ್ತಿಲ್ಲ..! ಹೀಗೆ ನನ್ನೊಂದಿಗೆ ಮೌನವಾದ ಅವಳು ಮತ್ತೆ ಮಾತು ಶುರು ಮಾಡಿದಳು. ಏನೂ ಆಗಿಲ್ಲ ಎಂಬಂತೆ ಇದ್ದೆವು.. ಆದರೂ ಅದೆಲ್ಲೋ ಮೊದಲಿನ ತಿಳಿನೀರಿನಂತಹ ಸ್ನೇಹ ಮತ್ತೆ ದೊರಕಲೇ ಇಲ್ಲಾ.. ನಾನೂ ಅವಳಾದ ಮೇಲೆ ಯಾರನ್ನೂ ಜೀವದ ಗೆಳೆಯರು ಅನ್ನುವಷ್ಟು ಹಚ್ಚಿಕೊಳ್ಳಲು ಹೋಗಿಲ್ಲ.. ನಂಬಿಕೆ ಮುರಿದು ಬಿದ್ದ ಮೇಲೆ ಮತ್ತೊಂದು ಸ್ನೇಹಾನ ಹೇಗೆ ನೆಚ್ಚಿಕೊಳ್ಳಲಿ? ನಮ್ಮ ನಡುವೆ ಮಾತುಗಳಿದ್ದರೂ ಅದಕ್ಕೊಂದು ಕಟ್ಟುಪಾಡುಗಳಿತ್ತು.. :(  ಎಲ್ಲೊ ಒಂದು ಕಡೆ ಅವನಿಂದಾನೆ ನಮ್ಮ ಸ್ನೇಹ ಮುರಿದುಬಿತ್ತು ಅನ್ನೋ ಬೇಸರವಿದ್ದರೂ..ಅವರಿಬ್ಬರದ್ದು ಪರ್ಫೆಕ್ಟ್ ರಿಲೇಶನ್ ಶಿಪ್ ಅಂತ ಮನಸ್ಸು ಹೇಳುತ್ತಿತ್ತು..!

ಯಾಕೆಂದರೆ..
ಪ್ರೀತಿ ಎಂದು ಬಿದ್ದವರು ಹೆಚ್ಚಿನ ಬಾರಿ ಓದು ಓದು, ಜೀವನ ಎರಡೂ ಹಾಳು ಮಾಡಿಕೊಳ್ಳುವವರೇ ಹೆಚ್ಚು. ಲಾಲಿ ಹಾಗಲ್ಲ. ಹೆಚ್ಚು ಮಾರ್ಕ್ಸ್ ಬಂದಾಗ ಅವನು ತಲೆಸವರಿ ಹೇಳೋ  ಲವ್ ಯು ಗಾಗಿಯೇ ಹೆಚ್ಚೆಚ್ಚು ಓದುತ್ತಿದ್ದಳು. ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳುತ್ತಿದ್ದಳು. ಅದಕ್ಕೆ ಸಪೋರ್ಟ್ ಅವಳ ಹುಡುಗ ಮಾಡುತ್ತಿದ್ದ.ನಮ್ಮೂರಿನ ಆಂಜನೇಯ ಗುಡಿಲಿ ಅವನು ಹಣೆಗೆ ಹಚ್ಚುವ ಸಿಂಧೂರಕ್ಕಾಗಿಯೇ ಪಾರ್ಕ್ ಬಿಟ್ಟು ಗುಡಿನ ಮೀಟಿಂಗ್ ಪಾಯಿಂಟ್ ಮಾಡಿಕೊಂಡಿದ್ದಳು. ಒಂದಷ್ಟು ಭವಿಷ್ಯದ ಕನಸುಗಳನ್ನು ಅವನೊಂದಿಗೆನೇ ಹೆಣೆದಿದ್ದಳು.. ಬದುಕನ್ನ ಪ್ರೀತಿಯಿಂದ ಅಲಂಕರಿಸಿಕೊಂಡಿದ್ದರೂ ಬದುಕನ್ನು ರೂಪಿಸಿಕೊಳ್ಳುವ ಕಲೆ ಅವಳಿಗಿತ್ತು.. :)

ಇಂತಹ ಪ್ರೀತಿಯನ್ನು ಬಿಟ್ಟು ಬೇರೆಯವನೊಂದಿಗೆ ಹಸೆಮಣೆ ಏರಲು ಸಿದ್ದವಾಗಿರುವ ಗೆಳತಿಗೆ ಏನೂ ಹೇಳಲು ತೋಚುತ್ತಿರಲಿಲ್ಲ..

ಅವಳೇ ಮುಂದುವರಿದು ಹೇಳಿದಳು.
"ಮನೇಲಿ ಆಗಲೇ ಗಂಡು ನೋಡುವುದಕ್ಕೆ ಶುರು ಮಾಡಿದ್ದರು. ಅಮ್ಮನಿಗೆ ಹೇಳಿದೆ. ಅವಳು ಖಡಾಖಂಡಿತವಾಗಿ ಇಲ್ಲ ಆಗೋಲ್ಲ ಅಂದುಬಿಟ್ಟಳು. ಅಣ್ಣನಾಗುವನನ್ನ ಮದುವೆಯಾದರೆ ನೆಂಟರಿಷ್ಟರ ಮುಂದೆ ನಮ್ಮ ಮರ್ಯಾದೆ ಏನಾಗಬೇಡ? ಅಪ್ಪನಲ್ಲಿ ಹೇಳಲು ನನಗೆ ಧೈರ್ಯ ಇಲ್ಲಾ..ಒಂದುವೇಳೆ ಹೇಳಿದರೆ ಅಪ್ಪ ಅಮ್ಮನಿಗೆ 'ನೀನು ಬೆಳೆಸಿದ ಮಗಳು..ನಿನ್ನಿಂದಲೇ ಎಲ್ಲಾ..' ಎನ್ನುತ್ತಾ ಕೋಡೋ ಹಿಂಸೇನ ತಾಳಿಕೊಂಡು ಇರುವಷ್ಟು ಶಕ್ತಿ ನನ್ನಲ್ಲಿಲ್ಲ. ಹೆತ್ತವರು ನನ್ನ ಮೇಲೆ ಇಟ್ಟ ನಂಬಿಕೆನ ಕೊಂದು ದೀಪಕ್ ಜೊತೆ ಹೋಗಲಾ?!" ಪ್ರಶ್ನಿಸುತ್ತಾಳೆ . ಏನೆಂದು ಉತ್ತರಿಸಿಯೇನು ನಾನು?
"ಅವತ್ತು ಅವನ ಮಾತಿಗೆ ಬೆಲೆ ಕೊಟ್ಟು ನಿಂಗೆ ಸುಧಿಗೆ ಬೇಸರ ಮಾಡಿದೆ..." ಬಿಕ್ಕಿದಳು..
"ತೀರಾ ಸಣ್ಣ ವಯಸ್ಸಿನಲ್ಲಿದ್ದಾಗ ಎದ್ದ ಆಕರ್ಷನೆನ ಪ್ರೀತಿ ಅಂದುಕೊಂಡಿದ್ದು ನನ್ನ ತಪ್ಪು. ಅದು ಪ್ರೀತಿ ಅಲ್ಲ. ಹೆತ್ತವರಿಗಿಂತ ದೊಡ್ಡದು ಖಂಡಿತಾ ಈ ಆಕರ್ಷಣೆಗಳಲ್ಲ..!" ಅಲ್ಟಿಮೇಟ್ ಎನ್ನುವ ಸ್ಟೇಟ್ ಮೆಂಟ್..!
"ಅವನ್ನ ಮದುವೆಯಾದರೆ ಮುಂದೆ ನನಗೆ ಅಣ್ಣನ್ನ ಮದುವೆಯಾದೆನೆಂದು ಅನಿಸಿದರೆ ಆಗ ಕಾಡೋ ಗಿಲ್ಟಿಗಿಂತ ಈಗಲೇ ಬೇರೆಯಾಗುವುದು ಒಳ್ಳೆದಲ್ಲವಾ? "
ಪ್ರೀತಿಸುವಾಗ ಆ ಗಿಲ್ಟಿ ಕಾಡಿಲ್ಲ ಅಂದರೆ ಮುಂದೆ ಹೇಗೆ ಕಾಡಲು ಸಾದ್ಯ? ನಾಲಿಗೆ ತುದಿವರೆಗೆ ಬಂದಿದ್ದ ಪ್ರಶ್ನೆನ ತಡೆದಿದ್ದೆ. ನನ್ನೊಂದಿಗೆ ಅವಳು ಮಾತಾನಾಡುತ್ತಿರುವುದು ಮನಸ್ಸಿನ ದುಗುಡಗಳನ್ನು ಹಗುರಾಗಿಸಿಕೊಳ್ಳಲು. ಅವಳ ನಿರ್ಧಾರದ ಬಗ್ಗೆ ಪ್ರಶ್ನಿಸುವ ಅಧಿಕಾರ ಅವಳು ನನಗೆ ಕೊಟ್ಟೂ ಇಲ್ಲಾ ನಾನು ಅದನ್ನು ಈಗ ಕೇಳಲೂಬಾರದು.ಅವಳ ಮಾತುಗಳಿಗೆ ಕಿವಿಯಾಗುತ್ತೆನಷ್ಟೇ.
"ಈಗ ಮನೇಲಿ ಎಲ್ಲರೂ ಖುಷಿಯಾಗಿದ್ದಾರೆ. ಒಳ್ಳೆಯ ಮಗಳಾಗಿದ್ದೇನೆ. ದೀಪಕ್ ಗೆ ನನಗಿಂತ ಒಳ್ಳೆಯ ಹುಡುಗಿ ಸಿಗುತ್ತಾಳೆ . ಅವನು ಚೆನ್ನಾಗಿರಲಿ. ಅವನು ಮನೇಲಿ ಬಂದು ಮಾತಾಡ್ತೀನಿ ಅಂದ್ರೆ ಅವನ್ನ ನಾನೇ ತಡೆದಿದ್ದೀನಿ. ನನ್ನ ಮನೆಯ ಸಂತೋಷ ನನ್ನ ಪ್ರೀತಿಯ ಕಾರಣಕ್ಕಾಗಿ ನಾಶ ಆಗೋದು ನನಗೆ ಬೇಕಿಲ್ಲ.. ನಾನು ಅವನಿಗೆ ಮೋಸ ಮಾಡಿದೆನಾ? ನನಗನಿಸುತ್ತಿಲ್ಲ ಹಾಗೆಂದು..! ಈಗಲೂ ಅವನು ಚೆನ್ನಾಗಿರಲೆಂದೇ ಬಯಸುತ್ತೇನೆ. ಅವನೊಂದಿಗೆ ಬದುಕಿಗೆ ಹೆಜ್ಜೆ ಹಾಕುವ ಅದೃಷ್ಟ ನನಗಿಲ್ಲ ಅಷ್ಟೇ..."
ಕಾಡುತ್ತಿರುವ ಗಿಲ್ಟಿನ ತಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಪ್ರೀತಿಗಿಂತ ಬದುಕು ದೊಡ್ದದೆನ್ನುವುದು ಸತ್ಯ. ಅದನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಅವನ ಪ್ರೀತಿಯ ದಾರಿಯಿಂದ ತಿರುವು ಪಡಕೊಂಡು ಸಾಗಿದರೂ ಆ ದಾರಿಯ ನೆನಪಿದೆ.
ಯಾಕೋ ಪ್ರೀತಿಸಿದವರೆಲ್ಲಾ ಬದುಕಿನ ಕೊನೆವರೆಗೂ ಜೊತೆಯಾಗಿ ಇರುವುದೇ ಇಲ್ಲವೇನೋ ಅನಿಸುತ್ತಿದೆ. ಅಷ್ಟಕ್ಕೂ ಹದಿಹರೆಯದ ಪ್ರೀತಿ ಜೊತೆ ನಿಲ್ಲುವುದೇ ಇಲ್ಲಾ.. ಒಂದಲ್ಲ ಒಂದು ಕಾರಣಕ್ಕೆ ಮುರಿದು ಬೀಳುತ್ತದೆ. ಅವನ/ಳ ನೆನಪಿನಲ್ಲೇ ಬದುಕು ಸವೆಸುತ್ತೇನೆ ಎಂದವರೂ ಮುಂದೊಂದು ದಿನ ಮತ್ತೊಬ್ಬರೊಂದಿಗೆ ಎಲ್ಲಾ ಮರೆತೇ ಬದುಕುತ್ತಿರುತ್ತಾರೆ. ಕೆಲವರು ಸಪ್ತಪದಿ ತುಳಿದು ಪ್ರೀತಿ ಮರೆತರೆ, ಇನ್ನು ಕೆಲವರು ಕೆಲ ಸಮಯ ದೇವದಾಸ್ ಥರ ಫೋಸ್ ಕೊಟ್ಟು ಮತ್ತೊಂದು ಚೆಲುವೆ ಸಿಕ್ಕೊಡನೆ ಮರೆಯುತ್ತಾರೆ. ಇನ್ನೂ ಕೆಲವರು ಬದುಕಿಗಾಗಿ ಇನ್ನೊಬ್ಬರೊಂದಿಗೆ ಹೆಜ್ಜೆ ಹಾಕುತ್ತಿದ್ದರೂ ಮರೆಯದೇ ಮರೆತಂತೆ ಬಾಳುತ್ತಾರೆ..ಬದುಕು  ಅಂದರೆ ಇಷ್ಟೇನಾ? ಹೊಂದಾಣಿಕೆಗಳು..!  ಬದುಕು ಮತ್ತು ಪ್ರೀತಿ ಯಾವತ್ತೂ ಬೇರೆ ಬೇರೆಯೇ! ಇಂತಹ ಸಂದರ್ಭಗಳಲ್ಲಿ ತೀವ್ರವಾಗಿ ಅನಿಸುತ್ತಿರುತ್ತದೆ.

"ಯಾಕೋ ತುಂಬಾ ಮಾತಾಡಬೇಕು ನಿನ್ನ ಜೊತೆ.. ಊರಿಗೆ ಬಂದಾಗ ಸಿಗೋಣ.." ಎಂದಿದ್ದಾಳೆ. ಈ ವಾರಾಂತ್ಯ ಊರಿಗೆ ಹೋಗ್ತಾ ಇದ್ದೇನೆ..ಅವಳ ಪ್ರಶ್ನೆಗಳಿಗೆ ಉತ್ತರವಾಗಬೇಕೋ..?ಕಿವಿಯಾಗಬೇಕೋ..? ನಿರ್ಧರಿಸಬೇಕಿದೆ...
 
14 ಕಾಮೆಂಟ್‌ಗಳು:

 1. ಭಾವನೆಗಳು ಅರ್ಥಪೂರ್ಣ ಭಾವುಕತೆಗೆ ದಾರಿಮಾಡಿದರೆ ಒಳ್ಳೆಯದೇ ಆದರೆ ಹೆಚ್ಚು ಭಾಗ ಭಾವುಕತೆ ಭಾವನೆಗಳ ಜೊತೆ ಹರಿದುಬಿಡುತ್ತದೆ. ನಿಮ್ಮ ಕಥೆಯ ಓಟವೂ ಇದೇ ತುಡಿತಗಳಲ್ಲಿ ತೊಳಲಾಡಿದೆ..ಹಾಗಾಗಿ ಕಥೆಗೆ ಜೀವ... ಚನ್ನಾಗಿದೆ..

  ಪ್ರತ್ಯುತ್ತರಅಳಿಸಿ
 2. ಸುಷ್ಮಾ ಪುಟ್ಟಿ...ಅರ್ಥಗರ್ಭಿತ ಲೇಖನ...ಪ್ರೀತೀನ ಸ್ನೇಹಾನ.ಅಂದಾಗ ಒಂದು ಬಿಟ್ಟು ಇನ್ನೊಂದು ಹಿಡಿದಾಗ..ಬಿಟ್ಟ ವಸ್ತುವನ್ನೇ ಮೊಂದೊಂದು ದಿನ ನೆನೆದು ಅಳುವುದು ಭಾವುಕತೆ...ಮನುಜನ ಚಿಂತನೆಯ ಮೂಸೆಯಲ್ಲಿ ಇದಕ್ಕೆ ಪರಿಹಾರವೇ ಇಲ್ಲ...ದೇಹವನ್ನು ಬುದ್ದಿ ಬಿಟ್ಟು ಮನಸು ಆಳಿದಾಗ "ಪರಪಂಚ" ಸಹಜವಾಗಿ ಕಾಣುತ್ತದೆ.ಇಲ್ಲವೇ ಸರಪಂಚನಾಗಿ ಪಂಚಾಯತಿ ಕಟ್ಟೆ ಏರಿ ಕುಳಿತಿರುತ್ತದೆ..
  ಸುಂದರವಾದ ಲೇಖನ ಪುಟ್ಟಿ ಅಭಿನಂದನೆಗಳು!

  ಪ್ರತ್ಯುತ್ತರಅಳಿಸಿ
 3. ಬರೆದ ರೀತಿ ಸುಪರ್.... ನಮ್ಮ ಮುಂದೆ ಕುಳಿತು ಮಾತನಾಡಿದ ಹಾಗಿತ್ತು.... ಮನದ ಎಲ್ಲಾ ದುಗುಡಗಳೂ ಹೇಳಿಕೊಂಡ ಹಾಗಿತ್ತು....

  ಪ್ರತ್ಯುತ್ತರಅಳಿಸಿ
 4. ಯಾಕೋ ಪ್ರೀತಿಸಿದವರೆಲ್ಲಾ ಬದುಕಿನ ಕೊನೆವರೆಗೂ ಜೊತೆಯಾಗಿ ಇರುವುದೇ ಇಲ್ಲವೇನೋ ಅನಿಸುತ್ತಿದೆ.

  ಅನ್ನುವ ನಿಮ್ಮ ಒಂದೇ ಮಾತಿನಲ್ಲಿ ಲೊಳೆಯದ ಪ್ರೇಮಾಂಕುರಗಳ ಸಾದೃಶ್ಯತೆ ಇದೆ.

  ಜಗತ್ತಿನ ಎಲ್ಲ ಪ್ರೇಮಗಳೂ ಸಾಫಲ್ಯತೆ ಪಡೆಯಲಿ. ಆ ಪ್ರೇಮ ವಿವಾಹಗಳು ನೂರ್ಕಾಲ ಮಸಣದವರೆಗೂ ಬಾಳಲಿ.

  ಪ್ರತ್ಯುತ್ತರಅಳಿಸಿ
 5. @Sri.. ಧನ್ಯವಾದಗಳು ಅಣ್ಣಯ್ಯ..
  ಸಂಬಂಧಗಳಲ್ಲಿ ಯಾಕೆ ಹೀಗಾಗುತ್ತದೆ ಎಂಬ ತೊಳಲಾಟ ಇನ್ನೂ ಬಗೆಹರಿದಿಲ್ಲ...

  ಪ್ರತ್ಯುತ್ತರಅಳಿಸಿ
 6. ಧನ್ಯವಾದಗಳು ದಿನಕರ್ ಸರ್..
  ಗೋಜಲು ಗೊಜಲಾಗಿರೋ ಮನಸ್ಥಿತಿಲಿ ಹುಟ್ಟಿದ ಬರಹ ಇದು... ಮನಸ್ಸಿನ ತುಮುಲಗಳಿವು ....

  ಪ್ರತ್ಯುತ್ತರಅಳಿಸಿ
 7. ನಿಮ್ಮ ಹಾರೈಕೆ ನಿಜವಾಗಲಿ ಬದರಿ ಸರ್...
  ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು ...

  ಪ್ರತ್ಯುತ್ತರಅಳಿಸಿ
 8. "ಅವನ್ನ ಮದುವೆಯಾದರೆ ಮುಂದೆ ನನಗೆ ಅಣ್ಣನ್ನ ಮದುವೆಯಾದೆನೆಂದು ಅನಿಸಿದರೆ ಆಗ ಕಾಡೋ ಗಿಲ್ಟಿಗಿಂತ ಈಗಲೇ ಬೇರೆಯಾಗುವುದು ಒಳ್ಳೆದಲ್ಲವಾ? "
  ಪ್ರೀತಿಸುವಾಗ ಆ ಗಿಲ್ಟಿ ಕಾಡಿಲ್ಲ ಅಂದರೆ ಮುಂದೆ ಹೇಗೆ ಕಾಡಲು ಸಾದ್ಯ? ನಾಲಿಗೆ ತುದಿವರೆಗೆ ಬಂದಿದ್ದ ಪ್ರಶ್ನೆನ ತಡೆದಿದ್ದೆ.

  ಈ ವಾಕ್ಯ ತುಂಬಾ ಇಷ್ಟವಾಯಿತು ಸುಷ್ಮಾ... ನನಗೂ ಕೂಡ ಹಾಗೆ ಅನಿಸುತ್ತಿದೆ.. ಇನ್ನೊಂದು ಬಾರಿ ಸಿಕ್ಕಿದಾಗ ಅವಳನ್ನು ಕೇಳಿಬಿಡು.

  ಪ್ರತ್ಯುತ್ತರಅಳಿಸಿ
 9. ಯಾಕೋ ಪ್ರೀತಿಸಿದವರೆಲ್ಲಾ ಬದುಕಿನ ಕೊನೆವರೆಗೂ ಜೊತೆಯಾಗಿ ಇರುವುದೇ ಇಲ್ಲವೇನೋ ಅನಿಸುತ್ತಿದೆ.
  ಅದ್ಯಾಕೆ ಹಾಗೆ ಅಂದಕೋತೀವಿ......
  ಯಾಕಂದ್ರೆ ಪ್ರೀತಿ ಅನ್ನೋದು ಅದು ಮಾಡೋದಲ್ಲಾ......
  ಅದು ಮೂಡೋದು..... ಅದು ಮೂಡಬೇಕಿದ್ರೆ ಜಾತಿ ಗೋತ್ರ ಹಣ ಇದನ್ನೆಲ್ಲಾ ನೋಡಿ ಮೂಡಲ್ಲಾ...
  ಆದರೆ ಮುಂದೆ ಇದೆಲ್ಲಾ ವಿಚಾರ ಬರತ್ತಲ್ವಾ? ಅದಕ್ಕೆ ನಮ್ಗೆ ಹಾಗನಿಸಬಹುದೇನೋ..... ಯಾಕಂದ್ರೆ ಇದೇ ತಾನೆ ಪ್ರೀತಿಗೆ ಹೆಚ್ಚಿನ ಪಕ್ಷ ಅಡ್ಡವಾಗೋದು....

  ಆದರೆ ಪ್ರೀತಿ ನಮಗೆ ಸಂತೋಷವನ್ನೇ ಕೊಡ್ಲಿ ಇಲ್ಲಾ ದುಃಖವನ್ನೇ ಕೊಡಲಿ ಅದು ಒಂದು ಮಧುರಾಲಾಪ....

  ಪ್ರತ್ಯುತ್ತರಅಳಿಸಿ
 10. ಸುಷ್ಮಾ ತುಂಬಾ ಆಪ್ತವಾಗಿದೆ ನಿಮ್ಮ ಬರಹ...ಸಖತ್ ಇಷ್ಟ ಆಯ್ತು ... :))

  ಪ್ರತ್ಯುತ್ತರಅಳಿಸಿ
 11. ಧನ್ಯವಾದಗಳು ಲಲಿತಾ..
  ಪ್ರಶ್ನಿಸುವ ಅಧಿಕಾರ ನನಗಿದೆಯೋ ಇಲ್ಲವೋ ಗೊತ್ತಿಲ್ಲ...!

  ಪ್ರತ್ಯುತ್ತರಅಳಿಸಿ
 12. ರಾಘವ ಸರ್,
  ಪ್ರೀತಿ ಅನ್ನೋದು ಮಧುರ ಅನ್ನೋದು ನಿಜವಾದರೂ..
  ಹರೆಯದ ಪ್ರೀತಿಗಳೆಲ್ಲಾ ಮುರಿದು ಹೋಗುತ್ತಿರುವುದು... ಬದ್ಧತೆ ಇಲ್ಲದೆ ಆಕರ್ಷಣೆಗಳನ್ನೆಲ್ಲಾ ಪ್ರೀತಿ ಎಂದುಕೊಂಡು, ಕೊನೆಗೊಮ್ಮೆ ಕೊಡವಿಕೊಂಡು ಎದ್ದು ಹೋಗುವುದು ಯಾಕೋ ಬೇಸರವಾಗುತ್ತದೆ ಅಲ್ಲವೇ?

  ಪ್ರತ್ಯುತ್ತರಅಳಿಸಿ
 13. ಥ್ಯಾಂಕ್ಸ್ ಅ ಲಾಟ್ ಸುದೀಪ ಅಕ್ಕಾ..

  ಪ್ರತ್ಯುತ್ತರಅಳಿಸಿ