ಸೋಮವಾರ, ನವೆಂಬರ್ 26, 2012

ಪಿಜಿ ಪುರಾಣ..

ಮೊನ್ನೆ ಸ್ನೇಹಿತರೊಬ್ಬರು ತಮ್ಮ  ಬ್ಲಾಗ್ ನಲ್ಲಿ ಪಿಜಿ ಪುರಾಣ ಬರೆದುಕೊಂಡಿದ್ದರು. ಅದನ್ನು ಓದಿ ನನಗೂ ನನ್ನ ಪಿಜಿಯ ಬಗ್ಗೆ ಬರೆಯಬೇಕೆನಿಸಿತು. ಬೆಂಗಳೂರಲ್ಲಿ ಕೊರತೆ ಇಲ್ಲದೆ ಇರೋ ಅನೇಕ ಸಂಗತಿಗಳಲ್ಲಿ ಪಿಜಿಯೂ ಒಂದು. ಬೆಂಗಳೂರಿಗೆ ಬರುವಾಗಲೇ ಅಣ್ಣ ತನ್ನ ಸ್ನೇಹಿತೆಯ ಒಡಗೂಡಿ ನನಗೆಂದೇ ಒಂದು ಪಿಜಿ ನೋಡಿ ನಿಕ್ಕಿ ಮಾಡಿ ಬಿಟ್ಟಿದ್ದ. ನಾನು ಹೋಗಿ ಸೇರಿಕೊಳ್ಳುವುದಷ್ಟೇ ನನಗಿದ್ದ ಕೆಲಸ. ಸೇರಿಕೊಂಡಯಿತು.. 
 ನಾಲಕ್ಕು ಮಂದಿ ಶೇರಿಂಗ್ ಉಳ್ಳ ಸಣ್ಣ ಕೋಣೆ, ಅದಕ್ಕೆ ನಾಲಕ್ಕು ಮಂಚಗಳು. ಮಂಚದ ಬಾಗಿಲು ತೆರೆದರೆ ಅಲ್ಲೊಂದು ಬಾಕ್ಸ್ ರೀತಿಯ ಬಟ್ಟೆಗಳನ್ನಿಡುವ ಜಾಗ..ತೀರಾ ಸಣ್ಣದು. ಹತ್ತು ಹದಿನೈದು ಮಂದಿ ಹುಡುಗಿಯರಿಗೆ ಒಂದೇ ಬಾತ್ ರೂಮ್, ಟಾಯ್ಲೆಟ್. ೨೪ ಗಂಟೆನೂ ಬಿಸಿ ನೀರು ಸಿಗುತ್ತಿತ್ತು ಅನ್ನುವುದೊಂದು ಪ್ಲಸ್ ಪಾಯಿಂಟ್ ಅಲ್ಲಿ. ಆಂಧ್ರ ರೀತಿಯ ಊಟವಂತೆ..! ಒಂಚೂರೂ ನನಗೆ ಸೇರದು. ಕೆಟ್ಟದೆನಿಸಿತ್ತು ಮೊದಲ ದಿನಾನೇ..ನನ್ನ ರೂಂ ಮೇಟ್ಸ್ ಹೊಂದಿಕೊಂಡು ಹೋಗತ್ತೆ - ಸ್ವಲ್ಪ ದಿನ ಅಂದರೂ, ಜಪ್ಪೆಂದರೂ ಆ ಊಟ ನನಗೆ ಸೇರದು. ನೀರು ಕೂಡ ಅಷ್ಟೇ. ಒಂದು ಥರದ ವಾಸನೆ. ನೀರು ಊಟ ಸರಿ ಇಲ್ಲದೆ ಈ ಪಿಜಿ ಮಹಾತ್ಮೆಯಿಂದ ಬೆಂಗಳೂರಿಗೆ ಬಂದ ಮೊದಲ ತಿಂಗಳೇ ಖಾಯಿಲೆ ಬಿದ್ದಿದ್ದೆ. ಖಾಯಿಲೆ ಬಿದ್ದ ಸಮಯದಲ್ಲೂ ಆ ರೂಂ ಮೇಟ್ಸ್ ಗಳ ಕಾಟ ತಡೆಯಾಲಾಗುತ್ತಿರಲಿಲ್ಲ. 
 ಚಳಿಗೆ ನಾನು ಮುದುಡಿಕೊಂಡು ಮಲಗಿದ್ದರೂ ಜೋರಾಗಿ ಫ್ಯಾನ್ ಹಾಕಿ ಮಲಗೋ ಅವರಿಂದ ಸಣ್ಣ ಸಹಾಯ ಕೂಡ ನಿರೀಕ್ಷಿಸುವಂತಿರಲಿಲ್ಲ. ಜೊತೆಗೆ ನಿಧಾನವಾಗಿ ಪಿಜಿ ಹುಡುಗಿಯರ ಸ್ವಚಂದತೆಯ ಅರಿವೂ ಆಗತೊಡಗಿತ್ತು. ಮೊದಲ ಬಾರಿಗೆ ಹೀಗೂ ಇರುತ್ತಾ ಅಂತ ಹಳ್ಳಿಯಿಂದ ಬಂದ ನನಗೆ ಅಚ್ಚರಿ. ಅಲ್ಲಿದ್ದ ಒಂದೇ ಒಂದು ಆಸರೆಯ ಖುಷಿಯ ಸಂಗತಿ ಎಂದರೆ ನಮ್ಮವಳೇ, ನಮ್ಮುರಿನವಳೇ ಆದ ಗೀತಾ ಪಕ್ಕದ ರೂಂ ನಲ್ಲಿ ಇದ್ದಿದ್ದು. ಅವಳೂ ಆ ತಿಂಗಳೇ ಪಿಜಿ ಖಾಲಿ ಮಾಡಿದ್ದರಿಂದ, ನನಗೂ ಖಾಲಿ ಖಾಲಿ ಅನಿಸತೊಡಗಿತ್ತು. ನಾನು ಕೂಡ ಬಂದ ಒಂದು ತಿಂಗಳಲ್ಲೇ ಆ ಪಿಜಿಯ ಸಹವಾಸ ಸಾಕೆಂದು, ಅಕ್ಕನ ಮನೆ ಸೇರಿಕೊಂಡು ಬಿಟ್ಟಿದ್ದೆ. ಆದರೇನು ಮಾಡುವುದು? ಅಕ್ಕನ ಮನೆಯಿಂದ ನನ್ನ ಆಫೀಸು ಮತ್ತು ಕಾಲೇಜ್ ಗೆ ದೂರ ಇರುವುದರಿಂದ ಬೇರೆಂದು ಪಿಜಿ ಹುಡುಕುವುದು ಅನಿವಾರ್ಯವಾಗಿತ್ತು.
ಮತ್ತೆ ಶುರುವಾಯಿತು ಪಿಜಿ ಹಂಟಿಂಗ್. ಎಲ್ಲೆಲಿಂದಲೋ ಅಡ್ರೆಸ್ ಕಲೆಕ್ಟ್ ಮಾಡಿಕೊಂಡು ಗಲ್ಲಿ ಗಲ್ಲಿ ಸುತ್ತಿದರೂ ನನಗಿಷ್ಟವಾಗುವ ಪಿಜಿ ಸಿಗಲೇ ಇಲ್ಲ... :(  ಕೊರತೆಗಳ ಸಾಲುಗಳೇ ಎದ್ದು ಕಾಣುತ್ತಿತ್ತು. ಒಂದಿದ್ದರೆ ಇನ್ನೊಂದಿಲ್ಲ ಇನ್ನೊಂದಿದ್ದರೆ ಮತ್ತೊಂದಿಲ್ಲ..ಇಂತವೇ ಪರಿಸ್ಥಿತಿ ಎಲ್ಲೆಡೆಯೂ..ಕೊನೆಗೆ ನಮ್ಮ ಸ್ನೇಹಿತರೊಬ್ಬರು, ಮನೆಯಲ್ಲೇ ಪಿಜಿ ನಡೆಸುವ ಒಬ್ಬ ಆಂಟಿಯ ಬಳಿಗೆ ಕರೆದುಕೊಂಡು ಹೋದರು. ಮನೆ ಊಟವೇ ಸಿಗುತ್ತದೆಂಬ ಖಾತ್ರಿಯಂತೂ ಸಿಕ್ಕಿತ್ತು.ಒಂದು ರೂಮಿನಲ್ಲಿ ಇಬ್ಬರು ಹುಡುಗಿಯರು. ಒಟ್ಟಿಗೆ ಅಲ್ಲಿ ಇದ್ದಿದ್ದು ಎಂಟು ಮಂದಿ ಮಾತ್ರ. ಇಲ್ಲಿ ಕೊಂಚ ಆರಾಮವೇ ಇದ್ದೀತು ಅಂತ ಮನಸ್ಸು ಹೇಳುತ್ತಿತ್ತು. ಜೊತೆಗೆ ಆಂಟಿಯೂ, ಮನೆ ಮಕ್ಕಳ ಹಾಗೆ ನೋಡಿಕೊಳ್ಳುತ್ತೇವೆ, ನಮಗೆ ಮಾಡೋ ಊಟವನ್ನೇ ಮಕ್ಕಳಿಗೂ ನೀಡುವುದು ಎಂಬ ಆಶ್ವಾಸನೆ ಇತ್ತಾಗ ಪೂರ್ತಿ ಭರವಸೆ ಬಂದಿತು. ಸರಿ ಇನ್ನೇನು.?ಗಂಟು ಮೂಟೆ ಇಲ್ಲಿಗೆ ಶಿಫ್ಟ್ ಆಗಿಯೂ ಆಯಿತು.. ಇಲ್ಲಿಗೆ ಬಂದು ಒಂದು ವಾರಕ್ಕೆ ಮತ್ತದೇ ಸಾಮಾನ್ಯ ಪಿಜಿಯ ಚಾಳಿಗಳೇ. ಆಂಟಿ ಸ್ನಾನಕ್ಕೆ ಒಂದೇ ಬಕೆಟ್ ನೀರು ಕೊಡುವುದೆಂದು ಎಂದು ಹಠ ಹಿಡಿದು ಕೂತಿದ್ದರು. ನಾನು ಒಂದು ಬಕೆಟ್ ಸಾಲಲ್ಲ , ಇದನ್ನ ಸೇರುವುದಕ್ಕಿಂತ ಮೊದಲೇ ಹೇಳಬೇಕಿತ್ತು ಅಂತ ಹಠಕ್ಕೆ ಬಿದ್ದಿದ್ದೆ. ಕೊನೆಗೂ ಆಂಟಿಗೆ ಜಯ. ನಾನೇ ಶರಣಾದೆ. ಬಟ್ಟೆ ಒಗೆಯೋ ಕಲ್ಲು, ಅಲ್ಲಿನ ನಲ್ಲಿಗಳನ್ನು ತೆಗೆಸಿ ಅಲ್ಲೊಂದು ಶೆಡ್ ರೀತಿಯ ಕೋಣೆಯನ್ನು ಮಾಡಿ, ಮತ್ತೆರಡು ಅಲ್ಲಿಗೆ ಕಬ್ಬಿಣದ ಮಂಚಗಳನ್ನು ಹಾಕಿಸಿದ್ದರು. ಇನ್ನಿಬ್ಬರು ಹುಡುಗಿಯರನ್ನು ಸೇರಿಸುವ ಪ್ಲಾನ್ ಆಂಟಿದು. ಅಲ್ಲಿಗೆ ಬಟ್ಟೆ ಒಗೆಯುವ ಜಾಗ ಮತ್ತಷ್ಟು ಇಕ್ಕಟ್ಟಿನದು ಆಯಿತು. ಹೀಗೆ ಉಳಿಸುವ ಗಳಿಸುವ ಆಂಟಿಯ ದುರಾಸೆಗೆ ನಾವು ಬಲಿ. ಬಹಳಷ್ಟು ಬಾರಿ ಆಂಟಿಯೊಂದಿಗೆ ಕದನವಾಗಿ, ಪಿಜಿ ಬಿಡುವ ಯೋಚನೆ ಮಾಡಿದ್ದೇನೆ.ಆದರೆ ಸಿಕ್ಕಿದರಲ್ಲಿ ಇದೆ ಒಂದು ಮಟ್ಟಿಗೆ ಓಕೆ. ಏನಿಲ್ಲವೆಂದರೂ ಸ್ವಲ್ಪ ಮಟ್ಟಿಗೆ ಊಟನಾದರೂ ಚೆನ್ನಾಗಿದೆ ಎನ್ನುವುದಕ್ಕೆ ಇನ್ನೂ ಇಲ್ಲಿಂದ ಕದಲಿಲ್ಲ.


ಪಿಜಿ ಎನ್ನುವುದು ಎಲ್ಲರ ಸಾಮಾನ್ಯ ಅಭಿಪ್ರಾಯದಂತೆ ಕೆಟ್ಟದಾಗಿ ಊಟ ಕೊಡುವ, ತುತ್ತಿಗೂ ಲೆಕ್ಕ ಇಡುವ, ಸ್ನಾನಕ್ಕೆ ಒಂದೇ ಬಕೆಟ್ ನೀರು ಕೊಡುವ, ಇಕ್ಕಟ್ಟಿನ ಜಾಗದಲ್ಲಿ ಜೈಲಿನ ಅನುಭವ ಕೊಡುವ ಒಂದು ತಾಣವಾದರೂ, ಅಲ್ಲಿ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳಿವೆ, ಮೋಜು ಮಸ್ತಿಗಳಿವೆ. ದುಃಖ, ನೀರಾಸೆಗಳನ್ನು ಮರೆತು ಹೊಸ ಬದುಕಿಗೆ ಎದುರು ನೋಡುತ್ತಿರೋ ಮನಸ್ಸುಗಳಿವೆ.ಆಸೆ, ಕನಸುಗಳ ಕಂಗಳಿವೆ. ಅಶಾಂತಿಯಿದೆ ಅದಕ್ಕೆಂದೇ ಪಿಜಿಯ ಆಂಟಿ ಇದ್ದಾರೆ. ಖುಷಿ ಇದೆ ಅದಕ್ಕೆಂದೇ ನಾವು ಗೆಳತಿಯರಿದ್ದೇವೆ. ವೀಕೆಂಡ್ ಬಂತೆಂದರೆ ನಮ್ಮದೇ ಸಾಮ್ರಾಜ್ಯ. ವಾರದ ಇತರೆ ದಿನಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಪಾಳಿಯಾದ್ದರಿಂದ ಒಬ್ಬರ ಮುಖ ಒಬ್ಬರು ನೋಡುವುದೇ ಅಪರೂಪ. ಅದಕ್ಕಾಗಿಯೇ ಈ ವಾರಾಂತ್ಯ ಬರಬೇಕು. ಆಗ ಒಟ್ಟಿಗೆ ಹೊರಗೆ ಹೋಗುತ್ತೇವೆ, ಶಾಪಿಂಗ್, ಹೋಟೆಲ್, ಪಾರ್ಲರ್, ಡಾನ್ಸ್ ,ಹರಟೆ...ಹೀಗೆ ಹತ್ತು ಹಲವು ಬಗೆಯ ನಮ್ಮ ಮುಖಗಳು ತೆರೆದುಕೊಳ್ಳುತ್ತದೆ. ಆ ದಿನಗಳಲ್ಲಿ ಬೆಳಿಗ್ಗೆ ತುಸು ತಡವಾಗಿಯೇ ಏಳುವ ನಮಗೆ ಪಿಜಿ ಆಂಟಿಯ ಮಂಗಳಾರತಿ ಆದಮೇಲೇನೆ ಬೆಳಗಿನ ಉಪಾಹಾರ ದೊರೆಯುವುದು. ತಲೆಗೆ ಎಣ್ಣೆ ಹಚ್ಚಿದವರು, ಮೆಹಂದಿ ಹಚ್ಚಿದವರು ಹೀಗೆ ಸರದಿ ಪ್ರಕಾರ ಸ್ನಾನಕ್ಕೆಂದು ಹೋದರೆ ಭರ್ತಿ ಒಂದು ಗಂಟೆ ಅಲ್ಲಿ ಕಳೆಯದೆ ಹೊರಬರುವವರಲ್ಲ. ಆಂಟಿ ಕೊಡೋ ಒಂದು ಬಕೆಟ್ ನೀರಲ್ಲಿ ಅದ್ಹೇಗೆ ಒಂದು ಗಂಟೆ ಕಳೆಯುತ್ತಿರೆಂದು ಕೇಳಬೇಡಿ. ಅದು ಟಾಪ್ ಸೀಕ್ರೆಟ್..! ಒಳಗೆ ಪ್ಲಗ್ ಮತ್ತು ತಣ್ಣಿರಿನ ನಲ್ಲಿ ಇದೆ.. ನಮ್ಮಲ್ಲಿ ನೀರು ಬಿಸಿ ಮಾಡೋ ಕಾಯಿಲ್ ಇದೆ..! ಇಷ್ಟು ಸಾಕಲ್ಲ? ಹೀಗೆ ಸ್ನಾನ, ತಿಂಡಿ ಮುಗಿದ ಮೇಲೆ ಆಂಟಿಯ ಪುಟ್ಟ ಮೊಮ್ಮಗಳನ್ನು ಕರೆದುಕೊಂಡು ಬಂದು ಡಾನ್ಸ್ ಆಡುವುದು ನಮ್ಮ ಇಷ್ಟದ ಸಂಗತಿಗಳಲ್ಲಿ ಒಂದು. ಆಮೇಲೆ ಟಿವಿ ಗಾಗಿ ಹೋರಾಟ ಇದ್ದಿದ್ದೆ.ಸದ್ಯ ನಾವೆಲ್ಲರೂ ಕನ್ನಡದ ಹುಡುಗಿಯರೇ ಇರುವುದರಿಂದ ಈ ವಾರ್ ಸ್ವಲ್ಪ ಮಟ್ಟಿಗೆ ತಗ್ಗಿದೆ. 

 
ಒಟ್ಟಿಗೆ ಹೊರಗೆ ಹೋಗಿ ತಿನ್ನೋ ಪಾನಿ ಪುರಿ, ಗೋಬಿ ಮಂಚೂರಿಗಳಲ್ಲಿ ಅದೇನೋ ವಿಶೇಷ ರುಚಿ. ಸಾಮಾನ್ಯವಾಗಿ ಹುಡುಗಿ ಹುಡುಗಿಯರು ಒಂದೇ ಕಡೆ ಇದ್ದಾಗ ಜಗಳವಾಗುವುದು ಜಾಸ್ತಿ. ನಮ್ಮಲ್ಲಿ ಒಳ್ಳೆಯ ಹೊಂದಾಣಿಕೆ ಇರುವುದರಿಂದ ಅಂತಹ ಜಗಳಗಳು ನಮ್ಮಲ್ಲಿ ಬಂದಿಲ್ಲ. ಸಣ್ಣ ಪುಟ್ಟ ಜಗಳಗಳು ಬಂದರೂ ಅಷ್ಟೇ ಬೇಗ ಮಾಯವಾಗಿ ಬಿಡುತ್ತದೆ. ಇಗೋಗಳ ಸಮಸ್ಯೆಯಿಲ್ಲ. ಒಟ್ಟಿಗೆ ಕೂತು ಹರಟೆ ಹೊಡೆಯುತ್ತೇವೆ. ಕಾಲೇಜು, ಮನೆ, ಭಾಷೆ, ಸಿನೆಮಾ,ರಾಜಕೀಯ, ಚುನಾವಣೆ, ಹೀರೋ, ಹಿರೋಯಿನ್ನುಗಳು, ಗಾಸಿಪ್,ಮೇಕಪ್ ,ಫ್ಯಾಶನ್.... ಹೀಗೆ ಹತ್ತು ಹಲವು ವಿಚಾರಗಳು ನಮ್ಮ ಮಾತುಗಳಲ್ಲಿ ಸಿಲುಕಿ ನಲುಗಿ ಹೋಗುತ್ತವೆ. ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಯುದ್ಧವಾಗುವುದೂ ಇದೇ..!
ಎಳ್ಳು ಎನ್ನುವುದು ಜೀವಕ್ಕೆ ತಂಪು ಎಂದು ವಾಧಿಸುವವರ ಗುಂಪು ಒಂದೆಡೆ..ಅದು ಸಕ್ಕತ್ ಹೀಟ್ ಎನ್ನುವವರ ಗುಂಪು ಇನ್ನೊಂದೆಡೆ..ಕೊನೆಗೆ ಸಮರದಲ್ಲಿ ಸಮಾಪ್ತಿ. ಕಳೆದ ಕೆಲ ವಾರಗಳ ಹಿಂದೆ "ತುಳು ಮತ್ತು ಕನ್ನಡ" ಎಂಬ ವಿಷಯಯೂ ಈ ಹರಟೆಯ ನಡುವೆ ಬಂದು ಮತ್ತೊಂದು ಸಮರ ನಮ್ಮ ಮದ್ಯೆ ತಂದಿಟ್ಟಿತ್ತು. ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡದಲ್ಲಿ ಮಾತಾಡಿದರೆ ಕ್ಯಾರೆ ಅನ್ನೋರಿಲ್ಲ. ತುಳುವರಿಗೆ ಮಾತ್ರ ಮನ್ನಣೆ. ಕರ್ನಾಟಕದಲ್ಲಿದ್ದುಕೊಂಡು ಇಂತಹ ಬೇಧ ತಂದಿಡುವವರು ಆ ಕಡೆ ಜನ...ಇತ್ಯಾದಿ ಇತ್ಯಾದಿ ಕಂಪ್ಲೇಟುಗಳು..  ಕನ್ನಡದ ಕುವರಿಯರಿಂದ ದ.ಕ ದ ತುಳುವತಿಯ ಮೇಲೆ ದಾಳಿ..! ನಾನು ಬಿಟ್ಟೇನೇ...? ಚೆನ್ನಾಗಿ ತರಾಟೆಗೆ ತೆಗೆದುಕೊಂಡು ಬಿಟ್ಟಿದ್ದೆ. ಮತ್ತೆ ಊಟಕ್ಕೆ ಕುಳಿತಾಗ ನಾವೆಲ್ಲರೂ ಒಂದೇ..

ಹೀಗೆ ಪಿಜಿ ಅನ್ನುವುದು ಒಂದು ಕಡೆಯಿಂದ ಕೆಟ್ಟ ಆನುಭವಗಳನ್ನು ಕೊಡುತ್ತಿದ್ದರೂ, ಒಳ್ಳೆಯ ಗೆಳತಿಯರಿಂದ ಇಷ್ಟವೂ ಆಗುತ್ತದೆ. ಕಷ್ಟ ಅಂದಾಗ ಹೆಗಲು ಕೊಡೊ, ಖಾಯಿಲೆಯಲ್ಲಿ ಮಲಗಿದ್ದಾಗ ಅಕ್ಕನಂತೆ ನೋಡಿಕೊಳ್ಳೋ ಅಕ್ಕಂದಿರನ್ನು ಈ ಪಿಜಿ ಕೊಟ್ಟಿದೆ.. ಬದುಕಿಗಾಗಿ, ಆಯ್ದು ಕೊಂಡ ಜೀವನಕ್ಕಾಗಿ ಇಲ್ಲಿರುವುದು ನಮಗೂ ಅನಿವಾರ್ಯವೇ..! ಸದ್ಯಕ್ಕೆ ಪಿಜಿ ಆಂಟಿಯ ಎಲ್ಲಾ ಮಾತುಗಳಿಗೂ ಕಿವುಡಿಯರು ನಾವು. ಪಿಜಿ ಬಿಡೋ ಯೋಚನೆ ಸದ್ಯಕ್ಕಿಲ್ಲ.. :)


13 ಕಾಮೆಂಟ್‌ಗಳು:

 1. ನಾ ಎಂದೂ ಕಂಡರಿಯದ ಲೋಕದ ಪರಿಚಯ ಮಾಡಿಕೊಟ್ಟಿರುವಿರಿ
  ಅಲ್ಲಿಯ ನಿಮ್ಮ ಅನುಭವಗಳು ಅನನ್ಯ. ಒಳ್ಳೆಯ ಲೇಖನ..

  ಪ್ರತ್ಯುತ್ತರಅಳಿಸಿ
 2. ಹೊಸದೊಂದು ಲೋಕಕ್ಕೆ ಹೋದ ಅನುಭವ ನನಗೂ ಮೊದಲಾಗಿತ್ತು..
  ಈಗ ಮಾಮೂಲಾಗಿದೆ ಸರ್..
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 3. ೬ ತಿಂಗಳಿನಿಂದ ಪಿಜಿ ಗಾಳಿ ಒಗ್ಗಿದೆ .. ನೀವು ಹೇಳಿದ ಪಿಜಿ ಅನುಭವ ಇನ್ನೂ ಆಗಿಲ್ಲ ಸುಷ್ಮಾ ... ಆದರೆ ಈ ಪಿಜಿ ಗೆಳತಿಯರನ್ನು, ಅಕ್ಕಂದಿರನ್ನು , ಕೊಟ್ಟಿದ್ದು .. ಯಾರನ್ನೋ ನಮ್ಮವರನ್ನಾಗಿ ಮಾಡಿದ್ದಂತೂ ನಿಜ ..
  ಚೆನ್ನಾಗಿದೆ ಲೇಖನ ...

  ಪ್ರತ್ಯುತ್ತರಅಳಿಸಿ
 4. ಶಿವಗಂಗೆ ಕ್ಷೇತ್ರದಲ್ಲಿ ಒರಳುಕಲ್ಲು ತೀರ್ಥ ಇದೆ..ಇಲ್ಲಿ ಕೈ ಹಾಕಿದರೆ ನೀರು ಸಿಗುತ್ತದೆ ಎನ್ನುವ ನಂಬಿಕೆ ಇದೆ..ಕೆಲವೊಮ್ಮೆ ಚಿಕ್ಕ ಮಕ್ಕಳು ಕೈ ಒರಳಲ್ಲಿ ಹಾಕಿದಾಗ ಸಿಗುವ ನೀರು..ಕೆಲವೊಮ್ಮೆ ದೊಡ್ಡವರು ಕೈ ಹಾಕಿದಾಗ ಸಿಗುವುದಿಲ್ಲ....ಹೀಗೆ ಒಬ್ಬೊಬ್ಬರ ಅನುಭವ ಒಂದೊಂದು ರೀತಿ...ಈ ಅನುಭವಗಳು ಹಾಗೆಯೇ...ಕೆಲವರಿಗೆ ಎಟುಕದ್ದು..ಇನ್ನು ಕೆಲವರಿಗೆ ನಿಲುಕುವುದಿಲ್ಲ..ಆದ್ರೆ ಅನುಭವದಿಂದ ಯಾರು ಹೊರತಲ್ಲ..ಸುಂದರ ಪಿ.ಜಿ. ಲೋಕ..ಪೇಯಿಂಗ್ ಗೆಸ್ಟ್ ಆಗಿದ್ದು...ಪೇಂಟಿಂಗ್ ದಿ ಬೆಸ್ಟ್ ಮಾಡಿದಾಗ ಖುಷಿ ತರುತ್ತದೆ.. ಚಂದದ ಅನುಭವಗಳ ಕಥಾನಕ ಸುಷ್ಮಾ ಪುಟ್ಟಿ..

  ಪ್ರತ್ಯುತ್ತರಅಳಿಸಿ
 5. ಪಿಜಿ ಪ್ರವರ ಚೆನ್ನಾಗಿತ್ತು ರೀ. ನಮ್ಮ ಕಾಲದಲ್ಲಿ ಹಾಸ್ಟಲುಗಳೇ ಗತಿ. ಎರಡಕ್ಕೂ ಅಂತ ಬದಲಾವಣೆ ಇಲ್ಲ ಬಿಡಿ. ಹೆಸರು ಮಾತ್ರ ಬದಲು ಅಷ್ಟೇ.

  ಪ್ರತ್ಯುತ್ತರಅಳಿಸಿ
 6. ಯಾರ್ರೀ ಅ ಡಬ್ಬ ಅಣ್ಣ.... ಒಂದು ಒಳ್ಳೆ ಪಿ.ಜಿ ನೋಡಕಗಲ್ವಂಥ !

  ಪ್ರತ್ಯುತ್ತರಅಳಿಸಿ
 7. ಧನ್ಯವಾದಗಳು ಸಂಧ್ಯಾ..
  ಪಿಜಿ ಗಾಳಿ ಬರಬರುತ್ತಾ ಒಗ್ಗಿಕೊಂಡರೂ ಅದು ಕಟ್ಟಿಕೊಡುವ ಅನುಭವಗಳು ಅನೇಕ..
  ಒಳ್ಳೆಯ ಅನುಭವಗಳೇ ನಿಮ್ಮದಾಗಲಿ...

  ಪ್ರತ್ಯುತ್ತರಅಳಿಸಿ
 8. ನಿಜ ಶ್ರೀಕಾಂತಣ್ಣ...
  ಒಬ್ಬೊಬ್ಬರ ಅನುಭವಗಳು ಒಂದೊಂದು ತರಹ..ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 9. ನಿಜ ಬದರಿ ಸರ್..
  ಪಿಜಿ ಮತ್ತು ಹಾಸ್ಟೆಲ್ ಗಳಿಗೆ ಅಂತಹ ಬದಲಾವಣೆಗಳು ಇಲ್ಲಾ ಅಂದುಕೊಳ್ಳುತ್ತೇನೆ..ಹೆಸರು ಬೇರೆಬೇರೆಯಿದ್ದರೂ ರೀತಿ ನೀತಿಗಳು ಒಂದೇ ರೀತಿ. ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್...

  ಪ್ರತ್ಯುತ್ತರಅಳಿಸಿ
 10. ಆ ಡಬ್ಬ ಅಣ್ಣನ ಹೆಸರು ತೋತು ಅಂತ...ಸ್ವಲ್ಪ ಮೆದುಳು ತೂತು ಅವನಿಗೆ..!
  ಈ ಮಾತನ್ನು ನೀವೇ ನಮ್ಮ ಅಣ್ಣನಿಗೆ ಕೇಳಿ ಶೋಷಿತ್ ಪೂಜಾರಿ....
  ;) ;) ;)

  ಪ್ರತ್ಯುತ್ತರಅಳಿಸಿ
 11. ಸುಶ್ಮ ಚೆನ್ನಾಗಿದೆ...ಪಿ ಜಿ....ಕಥೆ.... ತುಂಬಾ ಇಷ್ಟ ಆಯ್ತು..

  ಪ್ರತ್ಯುತ್ತರಅಳಿಸಿ