ಶುಕ್ರವಾರ, ನವೆಂಬರ್ 30, 2012

ನಾನು ಮತ್ತು ಸಮಾಜ..!

ಒಂದಿಷ್ಟು ಗೊಂದಲಗಳನ್ನು ಒಡಲೊಳಗಿಟ್ಟುಕೊಂಡೇ , ಸ್ತ್ರೀ ವಾದ ಮತ್ತು ಸಮಾಜ ಸುಧಾರಣೆಯ ಭ್ರಮೆಯಲ್ಲಿರೋ ಹುಡುಗಿಯ ತುಮುಲಗಳು ಮತ್ತು ಅವಳು ವ್ಯವಸ್ಥೆಯಿಂದಲೇ ಬದಲಾದ ಬಗೆಯನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ತಪ್ಪು ಒಪ್ಪುಗಳೇನೇ ಇದ್ದರೂ ತಿಳಿಸಿ...
-ಸುಷ್ಮಾ ಮೂಡುಬಿದಿರೆ.

=============================================

ಹುಡುಗಿಯರಿಗೆ ಅದೆಷ್ಟು ಅನಿವಾರ್ಯತೆಗಳು..? ಅದೆಷ್ಟು ಬಾರಿ ಹೆಣ್ಣಾಗಿ ಹುಟ್ಟಬಾರದಿತ್ತು ಎಂದು ಯೋಚಿಸಿದ್ದೆನೋ.. ಮೊದಲ ಬಾರಿಗೆ ಇಂತಹ ಯೋಚನೆ ಬಂದಿದ್ದು ಅಜ್ಜಿಯೆನ್ನುವ ಲೇಡಿ ಹಿಟ್ಲರ್ ನಿಂದ. ಇನ್ನೂ ಚಿಕ್ಕವಳಿದ್ದೆ.  ಆ ಮನೆಗೆ ಹೋಗಬೇಡ, ಅಲ್ಲಿ ಆಟ ಆಡಬೇಡ, ಏನು ಗಂಡುಬೀರಿಯೇ ನೀನು ಹುಡುಗರೊಂದಿಗೆ ಸೇರಬೇಡ..ಹೀಗೆ ಸಾಗುತ್ತಿತ್ತು ಅಜ್ಜಿಯ ವಾಗ್ದಾಳಿ. ಹೈ ಸ್ಕೂಲ್ ಸೇರಿದ ಮೇಲಂತೂ ಈ ಕಟ್ಟುಪಾಡುಗಳ ನಡುವಿನ ಬದುಕೇ ಸಾಕೆನಿಸಿತ್ತು. ತಮ್ಮನಿಗೆ, ಅಣ್ಣನಿಗೆ ಇಲ್ಲದ ನೀತಿ ನಿಯಮಗಳು ನನಗೇಕೆ? ಉತ್ತರ ಹೇಳುವವರಿಲ್ಲ. ಒಮ್ಮೆ ಇಷ್ಟ ಪಟ್ಟು ಓರಗೆಯ ಗೆಳಯರೊಂದಿಗೆ ಪಿಕ್ಚರ್ ಗೆ ಹೊರಟಿದ್ದೆ. ಅಜ್ಜಿಯ ಬಾಯಿಗೆ ಹೆದರಿ ಆಸೆಯನ್ನ ಅದುಮಿ ಮನೆ ಮೂಲೆ ಸೇರಿದ್ದೆ. ಇವತ್ತಿಗೂ ಕಿಚ್ಚು ಹತ್ತುತ್ತೆ ಆ ವಿಷಯಕ್ಕೆ. ನಾನೂ ಸ್ತ್ರಿವಾದಿಯೇ..ಸಮಾನತೆಗಳ ಬಗ್ಗೆ ಸ್ಟೇಜ್ ಹತ್ತಿ ಭಾಷಣ ಮಾಡಿದ್ದೇನೆ, ಪೇಜುಗಟ್ಟಲೆ ಪ್ರಬಂಧ ಬರೆದಿದ್ದೇನೆ..ವಾದಿಸಿ ಗೆದ್ದಿದ್ದೇನೆ. ನನ್ನ ಬುಕ್ ಹರಿದ ಸತೀಶನಿಗೆ ಕೆನ್ನೆಗೆ ರಪ ರಪನೆ ಬಾರಿಸಿದ್ದೇನೆ. ಬಸ್ಸುಗಳಲ್ಲಿ, ರೋಡುಗಳಲ್ಲಿ ರೇಗಿಸೋ ಕೆಟ್ಟದಾಗಿ ನೋಡುವ ಜನಗಳಿಗೂ ಕಪಾಳ ಮೋಕ್ಷ ಮಾಡಿದ್ದೇನೆ. ಪುರುಷ ಸಮಾಜಕ್ಕೆ ಧಿಕ್ಕಾರವಿರಲೆಂದು ಹುಡುಗಿಯರ ಗುಂಪು ಕಟ್ಟಿ ಮೈಂಡ್ ವಾಶ್ ಅಂತಾರಲ್ಲ ಅಂತದ್ದೆಲ್ಲಾ ಮಾಡಿದ್ದೇನೆ.

ಅಪ್ಪ ಮಾಡಿದ್ದೆಲ್ಲ ಒಪ್ಪಿಕೊಳ್ಳುವ ಅಮ್ಮ, ಚಿಕ್ಕಮ್ಮನಿಗೆ ದನಕ್ಕೆ ಬಡಿದಂತೆ ಬಡಿಯೋ ಚಿಕ್ಕಪ್ಪ, ಗಂಡಸರೆಂದು ದರ್ಪ ತೋರುವ ಮಾವಂದಿರು, ಗಂಡು ಹುಡುಗರು ಮಾಡಿದ್ದೆಲ್ಲ ಸರಿ ಅನ್ನೋ ಅಜ್ಜಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ಸುಖವಾಗಿದ್ದರೆಂಬ ಭ್ರಮೆಯಲ್ಲಿರೋ ಮನೆ ಹೆಂಗಸರು. ರೋಷ ಉಕ್ಕುತ್ತಿತ್ತು.. ಸಮಾಜದ ಬದಲಾವಣೆಗೆಯಾಗಬೇಕು. ಮನಸ್ಸು ತುಡಿಯುತ್ತಿತ್ತು. ಅಂದುಕೊಂಡಿದ್ದು ಸಾಧಿಸುವುದು ಅಷ್ಟು ಸುಲಭವೇ..? ನನ್ನ ಜೊತೆಗಿದ್ದ ಹುಡುಗಿಯರೇ ಹರೆಯ ಸಹಜವೆಂಬಂತೆ ಪ್ರೀತಿ ಪ್ರೇಮಗಳೆಂದು ಗಂಡು ಹುಡುಗರ ದಾಸಿಯರಾದರು. ಎಲ್ಲಾ ಆಕರ್ಷಣೆಗಳು. ಹುಡುಗರಾದರೂ ಅಷ್ಟೇ. ಈ ಹುಡುಗಿಯರನ್ನು ಮತ್ತೆ ಪ್ರೀತಿಯೆಂಬ ಹೆಸರಲ್ಲಿ ಬಂಧಿಸುವವರೇ.. ಕಡಿವಾಣಗಳನ್ನು ಹಾಕುವವರು..ಅನುಮಾನಿಸುವವರು .. ಈ ಹುಡುಗಿಯರಿಗೇಕೆ ಇದು ಅರ್ಥವಾಗುತ್ತಿಲ್ಲ? ಸ್ವಾತಂತ್ರ್ಯವಿಲ್ಲದ್ದೊಂದು ಬಾಳೇ ..?
ನಾನಂತೂ ನಿರ್ಧರಿಸಿ ಆಗಿತ್ತು. ಮದುವೆ ಮಾಡಿಕೊಳ್ಳುವುದಿಲ್ಲ. ಹೀಗೆ ಇದ್ದುಕೊಂಡು ಸಮಾಜ ಸುಧಾರಣೆ ಮಾಡುತ್ತೇನೆ. ಆಗಿನ್ನೂ ಹದಿನೇಳು ನನಗೆ. ಮನೆಯಲ್ಲಿ ನನ್ನ ವಾದಕ್ಕೆ ಮಣೆ ಹಾಕುವವರಿರಲಿಲ್ಲ. ಅಮ್ಮ ಇದ್ದ ಬದ್ದ ದೇವರಿಗೆಲ್ಲ ಹರಕೆ ಹೊತ್ತುಕೊಂಡಿದ್ದಳು. ನಾನು ಸರಿಯಾಗಬೇಕೆಂದು. ನಾನು ಸರಿಯಾಗೇ ಇದ್ದೆ. ಅವರುಗಳು, ಅವರು ಯೋಚನೆ ಮಾಡೋ ದಿಕ್ಕು ಸರಿಯಾಗಿರಲಿಲ್ಲ.. ಅದಕ್ಕೇ ನನ್ನ ವಿರೋಧವಿತ್ತು. ಸಮಾನತೆ ಬೇಕೆಂಬ ಭರದಲ್ಲಿ ಹುಡುಗರೊಂದಿಗೆಲ್ಲ ಜಗಳಕ್ಕೆ ನಿಲ್ಲುತ್ತಿದ್ದೆ. ಬಹುಶಃ ಅವರೊಂದಿಗೆ ಜಗಳವಾಡುವುದು, ವಿರೋಧಿಸುವುದೇ ಸ್ತ್ರೀವಾದವೆಂದು ನಾನು ಭಾವಿಸಿದಂತಿತ್ತು. ಅವರೊಂದಿಗೆ ವಾದದಲ್ಲಿ ಅಷ್ಟೇ ನನ್ನ ಗೆಲುವು ಬಿಟ್ಟರೇ , ಮಿಕ್ಕಂತೆ ಆಟಗಳಲ್ಲಿ ನಾನು ಸೋಲುತ್ತಿದೆ. ಅವರು ದೈಹಿಕವಾಗಿ ಬಲಿಷ್ಠರು. ದೇವರು ಮಾಡಿರೋ ತಾರತಮ್ಯವದು ನನ್ನ ಭಾವನೆ. ಅವರ ಗೆಲುವು, ಇಡೀಯ ಸ್ತ್ರೀ ಸಮಾಜದ ಸೋಲೆಂದೇ ನಾನು ತಿಳಿದಿದ್ದೆ. ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳೆಲ್ಲ ಬೆನ್ನ ಹಿಂದೆ ನಡೆಯುತ್ತಿದುದು ತಿಳಿದಿತ್ತು. ಒಂದು ರೀತಿಯ ಚಾರಿತ್ರ್ಯ ವಧೆಗೆ ಇದು ಮುನ್ನುಡಿ.ನಾನು ಸಮಾಜಕ್ಕೆ ಹೆದರುವವಳಲ್ಲ. ಹೀಗೆ ಹುಡುಗರೊಂದಿಗೆ ಜಿದ್ದಿಗೆ ಬಿದ್ದಿರುವುದು ಮನೆಗೂ ತಿಳಿಯಿತು. ಮನೆಯವರೆಲ್ಲ ನನ್ನ ಮೇಲೆ ಕೆಂಡ ಕಾರಿದರು. ಹೊಡೆತಗಳು ಬಿತ್ತು.. ಉರಿ..ದೇಹದ ಜೊತೆ ಮನಸ್ಸಿಗೂ..


 ಇವರಿಗೆಲ್ಲಾ ತಕ್ಕ ಶಾಸ್ತ್ರಿ ಮಾಡುತ್ತೇನೆ. ನನ್ನ ಮೇಲೆ ದಬ್ಬಾಳಿಕೆ ನಡೆಸಿದಂತೆ ಭಾಸವಾಗಿತ್ತು. ಮೊತ್ತಮೊದಲ ಬಾರಿಗೆ ಕೋಪದ ತಾಪದ ಜೊತೆಗೆ ಒಂಟಿತನದ ಅನುಭವಾಗಿತ್ತು. ನನಗಾಗಿ ಯಾರೂ ಇಲ್ಲವೆಂಬ ಭಾವವದು. ಏನೋ ಮಾಡಬೇಕೆಂದು ಹೊರಟವಳಿಗೆ ಒಂಟಿತನದ ಬೇನೆ ಸುಡಲಾರಂಭಿಸಿತ್ತು..ಗೆಳತಿಯರು ಜೊತೆಗಿಲ್ಲ, ಮನೆಯವರು ನನ್ನ ಮಾತನ್ನು ಒಪ್ಪುವುದಿಲ್ಲ..ನನ್ನ ಮಾತನ್ನು ಎಲ್ಲರೂ ಒಪ್ಪಬೇಕೆಂಬ ಹಠ ಗೆಲ್ಲುವಂತೆ ಇರಲಿಲ್ಲ.. ಅಷ್ಟಕ್ಕೂ ನಾನು ಹೇಳಿರುವುದು ತಪ್ಪೇನಲ್ಲ.ಸಂಪ್ರದಾಯದ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಶೋಷಿಸುತ್ತಿರುವ ಸಮಾಜದ ಬದಲಾವಣೆಗೆ ನಾನು ಆ ಸಂಪ್ರದಾಯವೆಂಬ ಕಟ್ಟುಪಾಡುಗಳನ್ನು ಮುರಿದು ತನ್ಮೂಲಕ ಈ ಸಮಾಜಕ್ಕೊಂದು ಪಾಠವಾಗಬೇಕೆಂಬ ಯೋಚನೆಗಳೂ ಬರುತ್ತಿತ್ತು.. ಗೊಂದಲಗಳಲ್ಲಿ ಬೇಯುತ್ತಿದ್ದೆ. ತಳಮಳ, ಸಂಕಟ.. ಎದೆಯನ್ನೆಲ್ಲಾ ಬಗೆಯುತ್ತಿತ್ತು. ಮನೆಯಲ್ಲಿ ದಿವ್ಯನಿರ್ಲಕ್ಷ್ಯ.. ನನ್ನ ಬಗೆಗಿನ ಅಸಡ್ಡೆಯೇ ಇದು? ಮತ್ತೆ ಕಾಲೇಜ್ ಗೆ ಹೊರಟವಳಿಗೆ ಮನವೆಲ್ಲಾ ಖಾಲಿ ಖಾಲಿ ಆದಂತೆ ಭಾಸ. ನನ್ನೊಂದಿಗೆ ಯಾರೂ ಬೆರೆಯುತ್ತಿರಲಿಲ್ಲ. ನಾನಾಗೇ ಕಾಲು ಕೆರಕೊಂಡು ಜಗಳಕ್ಕೆ ನಿಂತಾಗ ಜಗಳ ಮಾಡುತ್ತಿದ್ದವರೂ ಅವರಾಗೇ ನನ್ನ ಹತ್ತಿರ ಸುಳಿವವರಲ್ಲ. ಜಗಳ ಮಾಡೋ ಮನಸ್ಸು ನನಗೂ ಇರಲಿಲ್ಲ. ಒಂದು ಮನಸ್ಸು ಬೇಕಿತ್ತು..ನನ್ನ ಮನದ ಮಾತುಗಳಿಗೆ ಕಿವಿಯಾಗೋ ಹೃದಯ ಬೇಕಿತ್ತು.. ನಾನು ಭಯ ಪಡುತ್ತೇನೆ..ಇಂತಹ ನನ್ನ ಆಲೋಚನೆ ನನ್ನ ವ್ಯಕ್ತಿತ್ವದ ನಾಶವೇ ಸರಿ..ನನ್ನೊಳಗಿನ ನಾನು ಎಚ್ಚೆತ್ತುಕೊಳ್ಳುತ್ತಿದ್ದೆ. ಆದರೂ ಜಾರಿ ಬೀಳುತ್ತಿತ್ತು ಮನಸ್ಸು. ಸಮಾಜ ಬದಲಾಗೊಲ್ಲ. ನಾನು ಬದಲಾಗಬೇಕು.ಇಂತಹ ಹೊತ್ತಿನಲ್ಲೇ ರಾಜ್ ಅವರ "ನಿನ್ನ ಹಳದಿ ಕಣ್ಣಲಿ ಜಗವನೇಕೆ ನೀ ನೋಡುವೆ..." ಸಾಲುಗಳು ನೆನಪಾಗುತ್ತವೆ.
   
ಡಿಗ್ರಿ ಮುಗಿದು ಕೆಲಸದ ದಾರಿ ನೋಡಿದಾಗಲೂ ಅಲ್ಲೂ ಪುರುಷರ ಮೇಲುಗೈ. ಒಳ್ಳೆಯ ಅಂಕಗಳನ್ನು ಗಳಿಸಿರೋ ಹೆಣ್ಣು ಮಕ್ಕಳಿಗಿಂತ ಗಂಡುಗಳೆಂಬ ಕಾರಣವೇ ಒಳ್ಳೆಯ ಹುದ್ದೆಗೆ ಕಾರಣವಾಗುತ್ತಾ ಇದ್ದಿದ್ದು ಸರಿ ಕಾಣುತ್ತಿರಲಿಲ್ಲವಾದರೂ  ಮೊದಲಿನಂತೆ ಉರಿದು ಬೀಳುವ ನನ್ನ ಪ್ರವೃತ್ತಿ ಕಡಿಮೆಯಾಗಿತ್ತು. ಮೆತ್ತಗಾಗಿದ್ದೆನಾ
? ಇರಲಾರದು ಅಂದುಕೊಳ್ಳುತ್ತೇನೆ. ಸಮಾಜದ ರೀತಿ ನೀತಿಯ ವಿರುದ್ದ ಗೆಲುವು ಸಿಗಲಾರದೆಂಬ ಗಟ್ಟಿ ಅಭಿಪ್ರಾಯಕ್ಕೆ ನನ್ನ ಅಭಿಪ್ರಾಯವನ್ನು ಅದುಮಿಟ್ಟುಕೊಂಡಿದ್ದೆ. ಇಷ್ಟರಲ್ಲಿ ನನ್ನ ಮದುವೆ ಪ್ರಯತ್ನ ನಡೆಯುತ್ತಿತ್ತು. ಯಾರೂ ಜೀವದ ಗೆಳೆಯರಿಲ್ಲದೇ ಒಂಟಿಯಾಗಿದ್ದೆನಾದರೂ ಮದುವೆಯೆಂಬ ಕೂಪಕ್ಕೆ ಬೀಳಲು ನಾನು ಸಿದ್ದಳಿರಲಿಲ್ಲ. ಮತ್ತೆ ಗಂಡಿನ ಅಡಿಯಾಳಾಗಿ ಬದುಕುವುದು ಹೇಯ ಅನಿಸುತ್ತಿತ್ತು. ಇಲ್ಲೂ ನನ್ನ ಮಾತಿಗೆ ಬೆಲೆ ಸಿಗಲಿಲ್ಲ. ಅತ್ತು ಕರೆದು ರಂಪ ಮಾಡಿದೆ. ಸಿಡಿದು ಬಿದ್ದೆ. ಎಮೋಷನಲ್ ಬ್ಲಾಕ್ ಮೇಲನ್ನು ಅಮ್ಮನ್ನ ಮುಂದಿಟ್ಟುಕೊಂಡು ಮನೆಯವರೆಲ್ಲಾ ಶುರು ಮಾಡಿದ್ದರು. ಒಪ್ಪಿಕೊಂಡೆ.. !ನಿಕ್ಕಿಯಾಗಿದ್ದ ಹುಡುಗನನ್ನು ಕರೆದು ನನ್ನ ಯೋಚನೆಗಳ ಬಗ್ಗೆ ಹೇಳಿದೆ.. ಅವನ ವಿರೋಧವಿರಲಿಲ್ಲ. ನಿನಗೆ ಸರಿ ಅನಿಸಿದ್ದನ್ನು ಮಾಡೋ ಅಧಿಕಾರ ನನ್ನ ಮನೆಯಲ್ಲಿ ನಿನಗೆ ಇರುತ್ತದೆ ಎಂದ. ಅವನ ಮನೆಯವರದೂ ಅದೇ ಅಭಿಪ್ರಾಯ. ಮೊದಲ ಬಾರಿಗೆ ಹುಡುಗರೆಂದರೆ ಹೀಗೂ ಇರುತ್ತಾರೆಯೇ?! ಎನಿಸಿತ್ತು...
ನನ್ನ ಕೆಲಸದ ಹೊತ್ತು ಮುಗಿಯುವ ವೇಳೆಗೆ ಆ ಹುಡುಗ ಬರುತ್ತಿದ್ದ. ಅದೆಷ್ಟು ಬಾರಿ ಬರಬೇಡವೆಂದರೂ ಒಮ್ಮೆ ನಿಮ್ಮನ್ನ ನೋಡಿ ಹೋಗುತ್ತೇನೆ ಎನ್ನುತ್ತಿದ್ದ. ಹಾಗೆ ನೋಡಿಕೊಂಡು ಹೋಗುತ್ತಿದ್ದ. ಹೆಚ್ಚು ಮಾತಿಲ್ಲ. ಒಂದು ಕಪ್ ಟೀ ಗೂ ನಾನು ಅವಕಾಶ ಕೊಡುವವಳಲ್ಲ. ಅವನಿಗೂ ನನ್ನ ಬಗ್ಗೆ ಮೊದಲೇ ಹೇಳಿದ್ದರಿಂದಲೋ ಏನೋ ಜಾಸ್ತಿ ಒತ್ತಾಯ ಮಾಡಿದವನಲ್ಲ. ಚಂದದ ಮೆಸೇಜುಗಳನ್ನು ಕಳಿಸುತ್ತಿದ್ದ..ನಾನು ಓದಿಕೊಂಡು ಸುಮ್ಮನಾಗುತ್ತಿದ್ದೆ. ಹೀಗೆ ಹಲವು ದಿನಗಳು ಕಳೆದವು. ನನ್ನ ಕಲ್ಪನೆಯಲಿದ್ದ ಗಂಡಸಾಗಿರಲಿಲ್ಲ ಅವನು. ಮೃದು, ನನ್ನ ಇಷ್ಟಕ್ಕೆ ಅಡ್ಡಿ ಬರುವವನಲ್ಲ. ಅವನ ಅಂತಹ ನಡವಳಿಕೆಯೇ ನನ್ನ ಬದಲಿಸಿಬಿಟ್ಟಿತ್ತು. ಮೊದಲ ಬಾರಿಗೆ ಒಂದು ಹುಡುಗನನ್ನು ಮೆಚ್ಚಿಕೊಂಡೆ..ಪ್ರೀತಿಸಿದೆ. ನನ್ನೊಳಗಿನ ಬಜಾರಿ ಕಳೆದುಹೋಗಿದ್ದಳು. ಸಮಾಜ ನನ್ನ ಬದಲಿಸಲಿಲ್ಲ..ಸಮಾಜದ ಒಳ್ಳೆತನವೇ ಬದಲಿಸಿತು ಅಂದುಕೊಂಡೆ. ನೋಡನೋಡುತ್ತಾ ಬಹಳ ಆತ್ಮಿಯರಾದೆವು. ಪುರುಷ ಸಾಂಗತ್ಯ ಇಷ್ಟೊಂದು ಭದ್ರತೆಯ ಭಾವವನ್ನು ಕೊಡಬಹುದೆಂಬ ಕಲ್ಪನೆಯೂ ನನಗಿರಲಿಲ್ಲ.. ಪ್ರತಿಯೊಂದಕ್ಕೂ ಕೇರ್ ಮಾಡುತ್ತಿದ್ದ. ಜೋಪಾನ ಮಾಡುತ್ತಿದ್ದ..ನಾನು ಇಂತಹ ಹುಡುಗನನ್ನು ಪಡೆದಿದ್ದಿಕ್ಕೆ ಅದೃಷ್ಟಶಾಲಿ..! :)

ಹೀಗಿರುವಾಗ ಭಾವಿ ಅತ್ತೆಯಾಗುವವರು ನನ್ನನ್ನು ಮನೆಗೆ ಕರೆದಿರುವರೆಂದು ಹೇಳಿ ಭಾವಿ ಗಂಡ ಅವರ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಹೋದಾಗ ಅತ್ತೆಯವರು ದೇವಸ್ಥಾನಕ್ಕೆ ಹೋಗಿದ್ದಾರೆಂದು ತಿಳಿಯಿತು. ಒಂದು ಗೂಡಿದ ಮನಸ್ಸುಗಳು, ಜೊತೆಗೆ ಏಕಾಂತ. ಗಂಡನಾಗುವವ ಮುಂದುವರಿಯಲು ಸಿದ್ದನಾದ. ನನ್ನ ವಿರೋಧದ ನಡುವೆಯೂ ಬಳಸಿಕೊಂಡ. ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಎಲ್ಲಾ ಮುಗಿದಿತ್ತು. ಇಲ್ಲಿಂದ ನನ್ನ ಬದುಕಿನ ಮತ್ತೊಂದು ಅಧ್ಯಾಯ ಶುರುವಾಗಿತ್ತು. ಇದಾದ ಮೇಲೆ ನನಗಲ್ಲಿ ನಿಲ್ಲಲಾಗದೆ ಹೊರಬಂದಿದ್ದೆ. ಅವನಿಗೆ ಮೊದಲಿದ್ದ ಉತ್ಸಾಹ ಈಗಿರಲಿಲ್ಲ. ಜೊತೆಗೆ ಅನುಮಾನಿಸಲು ತೊಡಗಿದ್ದ. ಅಸಹ್ಯದ ಮಾತುಗಳನ್ನ ಹೇಳುತ್ತಿದ್ದ.. ನಾನು ಸೋತುಹೋದೆ. ಪ್ರೀತಿಯ ಮುಖವಾಡದೊಳಗೆ ಇಂತದ್ದೊಂದು ಮೋಸ ಇರಬಹುದೆಂಬ ಕಲ್ಪನೆಯಿಲ್ಲದೆ ಮೋಸ ಹೋದೆ. ನಾನು ಮೌನಿಯಾದೆ. ಒಂದುದಿನ ಇದ್ದಕ್ಕಿದಂತೆ ನಿಶ್ಚಯವಾಗಿದ್ದ ಮದುವೇನ ರದ್ದು ಮಾಡಿಕೊಂಡು ನನ್ನ ಬಾಳಿಂದ ಎದ್ದು ಹೋದ. ಅನ್ಯಾಯವಾಗುತ್ತಿದ್ದರೂ ನನ್ನೊಳಗಿನ ಸ್ತ್ರೀವಾದಿ ಮತ್ತೆ ಏಳಲಿಲ್ಲ. ಸತ್ತುಹೋಗಿದ್ದಳು.. :(


ಈಗ ಮತ್ತೆ 
ಮನೆಯಲ್ಲಿ ವರನ್ವೇಷಣೆಗೆ ತೊಡಗಿದ್ದಾರೆ..
ನಾನು ಸರಿಯೋ? ಸಮಾಜ ಸರಿಯೋ..?ಯಾರದು ತಪ್ಪೋ..?
ತಿಳಿಯುತ್ತಿಲ್ಲ...! ಯಾವ ಹುಡುಗನೂ ನಿಕ್ಕಿಯಾಗುತ್ತಿಲ್ಲ.. ಒಂದೊಂದು ನೆವಗಳಿಂದ ದೂರಗುತ್ತಿದ್ದಾರೆ.ವಯಸ್ಸು ಮೀರುತ್ತಿದೆ. ಒಮ್ಮೆ ನಿಶ್ಚಯವಾದ ಮದುವೆ ಮುರಿದು ಬಿದ್ದರೆ ಹೀಗೇಯಂತೆ...!! ನನ್ನಲ್ಲಿ ಏನೋ ದೋಷ ಇರಬೇಕೆಂದು ಅಕ್ಕಪಕ್ಕದ ಬಾಯಿಗಳು ಮಾತಾಡುತ್ತಿವೆ. ನಾನು ಬಾಯಿಗೆ ಬೀಗ ಜಡಿದು ಕೂತಿದ್ದೇನೆ ಮತ್ತದೇ ನನ್ನ ಬೆಂಬಿಡದ ಗೊಂದಲಗಳ ಜೊತೆಗೆ..

(ಇದು ಕಾಲ್ಪನಿಕ ಕಥೆ..)
 

16 ಕಾಮೆಂಟ್‌ಗಳು:

 1. ಇದರ ಮೊದಲ ಸಾಲುಗಳು ನನಗೆ ನನ್ನ ಚಿಕ್ಕಂದಿನ ನೆನಪು ಮಾಡಿದವು..ನಾವೂ ಹುಡುಗಿಯರಿಗೇ ಏಕೆ ಅದಷ್ಟು ಸವಲತ್ತು ಎಂದು ಅಲವತ್ತು ಕೊಂಡಿದ್ದೆವು...ಅವರಗಷ್ಟೇ ಸಮವಸ್ತ್ರ ಕೊಡುವಾಗ ಉರಿಗಣ್ಣಿನಿಂದ ನೋಡಿದ್ದೆವು...ಇದ್ದ ೨೦ ರೂ ಫಿಯಲ್ಲೂ ೭ ರೂ ರಿಯಾಯತಿ ಎಂದಾಗ ಅಯ್ಯೋ ನಮಗಾದರೂ ಇದ್ದಿದ್ದರೆ ೨ ರೂಪಾಯಿಯ ಮೂರು ಪೆಪ್ಸಿಯ ಜೊತೆ ೧ ಚಿಕ್ಕಿ ತಿನ್ನಬಹುದಿತ್ತಲ್ಲಾ ಎಂದು ಕೊಂಡಿದ್ದೆವು...
  ಹಿಂಗೆ ಏನೇನೋ...........ಕ್ರಮೇಣ ಭಾವನೆ ಬದಲಾಗುತ್ತಾ ಹುಡುಗಿಯರೆಂದರೆ ಇನ್ನೇನೋ ಆಯಿತು..ಈಗ ಕಾಲೇಜಿನಲ್ಲಿ ಮತ್ತೇನೋ ಆಗಿದೆ...ಇನ್ನೂ ಎನಾಗತ್ತೋ ಗೊತ್ತಿಲ್ಲ...
  ಲೇಖನ ಚೆನಾಗಿದೆ.....
  ಹಾಂ "ಇದು ಕಥೆ" ಎಂದು ಪ್ರಕಾಶಣ್ಣನ ಥರ ಕೊನೆಯಲ್ಲಿ ಬರೆಯುವುದನ್ನು ಮರೆತಿರಾ????????

  ಪ್ರತ್ಯುತ್ತರಅಳಿಸಿ
 2. ಹಾಗೆ ಅಲ್ವಾ ಮನುಷ್ಯ ಸಹಜ.. ನಮಗಿರುವುದನ್ನು ಬಿಟ್ಟು ಇಲ್ಲದುದರ ಬಗ್ಗೆ ಜಾಸ್ತಿ ಕುತೂಹಲ, ಆಸೆ ಇಟ್ಟುಕೊಂಡಿರುತ್ತೇವೆ ನಾವು..
  ತೃಪ್ತಿ ಪಡುವುದಿಲ್ಲ..
  ಧನ್ಯವಾದಗಳು ಚಿನ್ಮಯ್ ಸುಂದರ ಪ್ರತಿಕ್ರಿಯೆಗೆ..
  ಹಾ.. ನೀವು ಹೇಳಿದಂತೆ ಇದು ಕತೆ ಎಂದು ಸೇರಿಸಿದ್ದೇನೆ ನೋಡಿ... :)

  ಪ್ರತ್ಯುತ್ತರಅಳಿಸಿ
 3. ಭಾಳ ಒಳ್ಳೆಯ ಕತೆ ನಿಜ ಹೆಣ್ಣಿಗೆ ಕಟ್ಟುಪಾಡುಗಳು ಹಲವಾರು ಬಗೆಯವು..
  ಒಂಥರಾ ನಿತ್ಯದ ಸಂಘರ್ಶ ಅವಳದು..

  ಪ್ರತ್ಯುತ್ತರಅಳಿಸಿ
 4. ಈ ಲಿಂಗ ಬೇಧವು ನನಗು ತುಸುವೂ ಹಿಡಿಸದು. ಜವಾಬ್ದಾರಿ ಸಮರ್ಥರಿಗೇ ಸಿಗಬೇಕು ಎನ್ನುವ ವಾದ ನನ್ನದು.

  ಪುರುಷ ದಬ್ಬಾಳಿಕೆಯನ್ನು ಸ್ತ್ರೀ ಖಂಡಿಸಬೇಕು, ದಂಡಿಸಬೇಕು ಮತ್ತು ತಿದ್ದಬೇಕು.

  ನಮ್ಮ ವಿರೋಧಿಗಳು ನಮ್ಮ ಚಾರಿತ್ರ್ಯ ವಧೆ ಮಾಡಲು ಯಾವತ್ತೂ ಕಾಯುತ್ತಿರುತ್ತಾರೆ ಗೆಳತಿ.

  ಕಥೆಯ ಹಲವು ಘಟಕಗಳಲ್ಲೂ ಸಮಾಜದ ಡೊಂಕುಗಳ ಅನಾವರಣವಾಗಿದೆ. ಮೆಚ್ಚುಗೆಯಾಯ್ತು.

  ಪ್ರತ್ಯುತ್ತರಅಳಿಸಿ
 5. ಕಥೆ ಚೆನ್ನಾಗಿದೆ ಅದರೆ ಒಂದಷ್ಟು ಪ್ರಶ್ನೆಗಳು
  ಆದರೆ ಅಷ್ಟು ಮೆತ್ತಗಿದ್ದ ಒಳ್ಳೆಯ ಹುಡುಗ ಕೆಟ್ಟವನಾಗಿ ಬದಲಾದದ್ದು ಏಕ
  ಸ್ತ್ರೀವಾದಿತನವೇ ಹುಡುಗನ ವಿಮುಖತೆಗೆ ಕಾರಣವೇ?
  ಅಕಸ್ಮಾತ್ ಹುಡುಗಿ ಸಂಪ್ರದಾಯಸ್ತೆಯಾಗಿದ್ದರೂ ಅಥವಾ ಸ್ತ್ರೀ ವಾದಿಯಾಗಿಲ್ಲದಿದರೂ ಇಂತಹ ಘಟನೆಗಳು ಸಾಧ್ಯವಲ್ಲವೇ?
  ಅನ್ಯಾಯವಾದಾಗ ಸಿಡಿದೇಳಬೇಕಾಗಿದ್ದ ಹುಡುಗಿ ಏಕೆ ಬದಲಾದಳು.( ಬಸ್ ನಲ್ಲಿ ಕೆಟ್ಟದಾಗಿ ನೋಡಿದವರ ಕಪಾಳ ಮೋಕ್ಷ ಮಾಡಿದೆ ಎಂದಾಕೆಗೆ ಸಿಡಿದೇಳುವುದೇನೂ ಕಷ್ಟವಾಗಿರಲಿಕ್ಕಿಲ್ಲ)

  ಪ್ರತ್ಯುತ್ತರಅಳಿಸಿ
 6. ಭೇದ ಭಾವದ ತಾರತಮ್ಯ ತೋರಿಸಿದರು ಹೆಣ್ಣು ಸಿಡಿದೆದ್ದು ಬಾಯಿ ಮಾಡಿದಳು ಕೊನೆಗೆ ಹೆಣ್ಣಿಗೆ ಮತ್ತಷ್ಟು ಕಷ್ಟ ಬಂದಿತು... ವಿರೋಧಿಸಿದರೆ ಒಂದು ರೀತಿ ಕಷ್ಟ ವಿರೋಧಿಸದೇ ಇದ್ದರೆ ಇನ್ನೊಂದು ರೀತಿ ಕಷ್ಟ... ತುಂಬಾ ಒಳ್ಳೆಯ ವಿಚಾರದ ಮೇಲಿನ ಕಥೆ ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ
 7. ಮನಸ್ಸನ್ನು ಚಂಚಲಗೊಳಿಸಿದ ಬರಹ .. ಹೆಣ್ಣಿಗೆ ಅನ್ವಯವಾಗುವ ಸಾಮಾಜಿಕ ಕಟ್ಟುಪಾಡುಗಳನ್ನು ಪ್ರಶ್ನಿಸಿ, ಪ್ರತಿಭಟಿಸುವ ನಿಮ್ಮ ಪರಿ ಇಷ್ಟವಾಯ್ತು ..

  ಪ್ರತ್ಯುತ್ತರಅಳಿಸಿ
 8. ನಿಜ ಸರ್... ಕಟ್ಟು ಪಾಡುಗಳ ನಡುವಿನ ಬದುಕಲ್ಲಿ ಆಕೆಯದು ನಿತ್ಯ ಸಂಘರ್ಷವೇ ಸರಿ..
  ಪ್ರತಿಕ್ರಿಯೆಗಾಗಿ ಧನ್ಯವಾದಗಳು ದೇಸಾಯಿ ಸರ್...

  ಪ್ರತ್ಯುತ್ತರಅಳಿಸಿ
 9. ವ್ಯವಸ್ಥೆಯ ಬಗೆಗಿನ ಅಸಮಾಧಾನ ಈ ರೀತಿ ಹೊರಗೆ ಬಂದಿದೆ ಬದರಿ ಸರ್...
  ಧನ್ಯವಾದಗಳು... ನಿಮ್ಮ ಪ್ರತಿಕ್ರಿಯೆ ನನಗೆ ಬಲ.. tanx a lot sir...

  ಪ್ರತ್ಯುತ್ತರಅಳಿಸಿ
 10. ಧನ್ಯವಾದಗಳು ರೂಪ ಮೇಡಂ...
  ನಿಮ್ಮ ಪ್ರಶ್ನೆಗಳು ಇನ್ನಷ್ಟು ಯೋಚಿಸುವಂತೆ.. ಆಳಕ್ಕಿಳಿಯುವಂತೆ ಮಾಡುತ್ತದೆ...
  ಹುಡುಗರಲ್ಲಿ ಸಾಮಾನ್ಯವಾಗಿ ಒಂದು ಮನಸ್ಥಿತಿ ಇರುತ್ತದೆ. ಹುಡುಗಿಯರು ಸ್ವಲ್ಪ ಅಹಂಕಾರಿಗಳೋ, ತಮ್ಮದೇ ಸರಿಯೆಂದು ವಾದಿಸುವವರೋ ಆಗಿದ್ದರೆ "ಅವಳ ಸೊಕ್ಕು ಮುರಿಯುತ್ತೆನೆಂದು" ಹೊರಡುವ ಮನಸ್ಥಿತಿ. ಈಕೆ ತನ್ನ ಮನದಾಳವನ್ನು ಮೊದಲೇ ಆತನ ಮುಂದೆ ಬಿಚ್ಚಿಟ್ಟಿದ್ದರಿಂದ ಗಂಡಸಾಗಿ ಆತ ಪುರುಷ ಪ್ರಧಾನ ಸಮಾಜದ ಪ್ರತಿನಿಧಿಯಾಗಿರುತ್ತಾನೆ. ಪ್ರೀತಿಯ ರೂಪದಲ್ಲಿ ಆಕೆಯಲ್ಲಿನ ಸ್ತ್ರೀ ವಾದಿಯನ್ನು ನೀವಾರಿಸುವ ಪ್ರಯತ್ನ ಆತನದಾಗಿರಬಹುದು..ಎಲ್ಲೂ ಆಕೆಗೆ ಆತನ ಮನದ ಸಂಪೂರ್ಣ ಪರಿಚಯ ಆಗದೆ ಇರುವುದರಿಂದ ಆಕೆಗೂ ಇಂತದ್ದೆ ಕಾರಣಕ್ಕೆ ಬಿಟ್ಟು ಹೋದನೆಂದು ಸ್ಪಷ್ಟವಾಗಿ ಹೇಳಲು ಬರುವುದಿಲ್ಲ.
  ಜೊತೆಗೆ ಇದು ಬರಿಯ ಅವಳೊಬ್ಬಳ ಬಾಳಲ್ಲೇ ನಡೆಯಬೇಕಾಗಿಲ್ಲ. ಸಾಮಾನ್ಯ ಹುಡುಗಿಯ ಜೀವನದಲ್ಲೂ ನಡೆಯಬಹುದು. ಆಗ ಕಾರಣ ಇನ್ನೊಂದು ರೀತಿಯದ್ದಾಗಿರಬಹುದು..ಹೆಣ್ಣಿನ ಮೇಲಿನ ಶೋಷಣೆ ಇಂದು ನೆನ್ನೆಯದಲ್ಲ ಅಲ್ಲವೇ..?

  ಕಥೆಯಲ್ಲೇ ಹೇಳಿರುವಂತೆ ಆಕೆಯ ಧೋರಣೆ ಎಲ್ಲರಿಂದಲೂ ಅವಳನ್ನು ದೂರ ಮಾಡುತ್ತದೆ. ಒಂದು ರೀತಿಯಲ್ಲಿ ಒಂಟಿಯಾಗೆ ಇರುತ್ತಾಳೆ.ಆಗ ಹುಡುಗ ಅವಳ ಯೋಚನಾ ದಿಕ್ಕನ್ನು ಬದಲಾಯಿಸುತ್ತಾನೆ. ಅಂತಹ ಸಮಯದಲ್ಲಿ ಅವಳ ಮನಸ್ಥಿಯನ್ನು ಸಮಾಜದ ಒಳ್ಳೆತನ ಬದಲಿಸಿತು ಅಂದುಕೊಳ್ಳುತ್ತಾಳೆ ..ಬದಲಾದ ಆಕೆಯನ್ನು ಮನೆ ಮತ್ತು ಸಮಾಜ ಆದರಿಸುತ್ತದೆ. ಹಾಗಾಗಿ ಮತ್ತೆ ಹಿಂದಿನ ಬದುಕಿಗೆ ಮರಳಲು,ತನ್ನವರಿಂದ ಬೇರಾಗಲು(ಏಕೆಂದರೆ ನೊಂದಿರುತ್ತಳಲ್ಲ..) ಇಷ್ಟಪಡಲಾರಳು ಎಂಬುದು ನನ್ನ ಭಾವನೆ. ಜೊತೆಗೆ ಸಮಾಜದ ರೀತಿ ನೀತಿಗಳಿಂದ ಬೇಸೆತ್ತು , ತನಗಾದ ದೌರ್ಜನ್ಯದಿಂದ ಕುಸಿದು, ಸಿಡಿದೇಳುವ ಆಕೆಯ ಗುಣವನ್ನು ಬಿಡುತ್ತಾಳೆ..ಹೆಣ್ಣಿನ ಸಹಜ ಗುಣವಾದ ಸಹನೆ, ತಾಳ್ಮೆಗಳನ್ನು ಮೈಗೂಡಿಸಿಕೊಂಡು ಮೌನಿಯಾಗುತ್ತಾಳೆ.

  ಇಲ್ಲಿ ವ್ಯವಸ್ಥೆಯ ತಾರತಮ್ಯ, ಅನ್ಯಾಯಗಳು ಮತ್ತು ಅದನ್ನು ವಿರೋಧಿಸುತ್ತಾ ಬಂದವರೇ ವ್ಯವಸ್ಥೆಯಿಂದ ಬದಲಾಗುವ ರೀತಿಯನ್ನು ಹೇಳಿದ್ದೇನೆ ಮೇಡಂ...
  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 11. ನಿಜ 'ಮನಸ್ಸು' ಮೇಡಂ..
  "ಅತ್ತ ದರಿ ಇತ್ತ ಪುಲಿ " ಎಂಬಂತಹ ಸಂಕಷ್ಟ ಹೆಣ್ಣು ಮಕ್ಕಳದು.. ವಿರೋಧಿಸಿದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಉಳಿಗಾಲವಿಲ್ಲ...!

  ಪ್ರತ್ಯುತ್ತರಅಳಿಸಿ
 12. ಧನ್ಯವಾದಗಳು ಹುಸೇನ್...
  ಓದುಗನನ್ನು ಇಷ್ಟರ ಮಟ್ಟಿಗೆ ಕಥೆ ಕಾಡಿದರೂ ಸಾಕು.. ನನ್ನ ಪ್ರಯತ್ನ ಸಾರ್ಥಕವಾದಂತೆ... :)
  Thank you so much...

  ಪ್ರತ್ಯುತ್ತರಅಳಿಸಿ
 13. ಉರಿಯುವ ಸೂರ್ಯ ಹುಟ್ಟುತ್ತಾ ತಂಪಾಗಿರುತ್ತಾನೆ...ಮುಳುಗುವಾಗ ತಂಪಾಗಿರುತ್ತಾನೆ...ಇದರ ಮಧ್ಯೆ ಉರಿಯುತ್ತ ಬೆಳಗುತ್ತಾನೆ..ಮನುಜನ ಜೀವನವು ಹಾಗೆ...ಸು"ಮನ"ದಿಂದ ಕ"ವನ"ದ..ಮನ ಮತ್ತು ವನದ ಮಧ್ಯೆ ಇಂತಹ ಅನೇಕ ಮೊಗ್ಗುಗಳು, ಕಾಯಿಗಳು ಅರಳಲು ಪ್ರಯತ್ನಪಟ್ಟು ಮುದುಡಿ ಹೋಗಿ ಬಿಡುತ್ತವೆ...

  ಪಿ.ಎಸ್ ನಿಮ್ಮ ಲೇಖನದಲ್ಲಿ ಇಷ್ಟವಾಗುವ ಮನದೊಳಗಿನ ದೊಂಬರಾಟ ಘಾಡತೆ, ಕಾಡಿಸುವ ಭಾವಗಳ ಸಾಂಧ್ರತೆ ಮತ್ತು ಸರಿಯಾಗಿ ನಿಲುಕುವ ತಾರ್ಕಿಕತೆ..ಇವೆಲ್ಲವೂ ಮೆಲೈಸಿರುವ ನಿಮ್ಮ ಈ ಲೇಖನ ಒಂದು ಅಮೃತ ಭಾವ ವರ್ಷಿಣಿ...

  ಪ್ರತ್ಯುತ್ತರಅಳಿಸಿ
 14. ಕಥೆ ಚೆನ್ನಾಗಿ ಬರೆದಿದ್ದೀರಿ. ಮುಂದಿನ ಕಥೆಯಲ್ಲಿ ಹುಡುಗಿಗೆ ಚಂದದ ಜೊತೆ ಸಿಗಲಿ

  ಪ್ರತ್ಯುತ್ತರಅಳಿಸಿ
 15. @ ಶ್ರೀಕಾಂತ್ ಬ್ರದರ್: ಅಣ್ಣಯ್ಯ ನಿಮ್ಮ ಪ್ರತಿಕ್ರಿಯೆ ಒಂದು ರೀತಿ ಟಾನಿಕ್ ಇದ್ದ ಹಾಗೆ..ಮಂಕು ಬಡಿದ ಮನವನ್ನು ಕೂಡ ಬಡಿದೆಬ್ಬಿಸುತ್ತದೆ.. ನಿಮ್ಮ ಈ ಪ್ರೀತಿಗೆ ಏನು ಹೇಳಲು ತೋಚುತ್ತಿಲ್ಲ...
  ಧನ್ಯವಾದಗಳು ಅಂತ ಹೇಳುವುದೂ ಕಡಿಮೆಯೆನಿಸುತ್ತದೆ...
  tanQ So much... ನಿಮ್ಮ ಆಶೀರ್ವಾದ ಸದಾ ಜೊತೆಗಿರಲಿ..

  ಪ್ರತ್ಯುತ್ತರಅಳಿಸಿ
 16. @ಸ್ವರ್ಣ: ಧನ್ಯವಾದಗಳು ಸರ್... ನಿಮ್ಮ ಹಾರೈಕೆ ನಿಜವಾಗಲಿ..

  ಪ್ರತ್ಯುತ್ತರಅಳಿಸಿ