ಬುಧವಾರ, ಡಿಸೆಂಬರ್ 26, 2012

ನುಣುಚಿಕೊಳ್ಳೋದೆ ಜೀವನವಾ..?!

ಇತ್ತೀಚಿಗೆ ಸ್ನೇಹಿತರ ದ್ವಿಚಕ್ರ ವಾಹನಕ್ಕೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿರುವಾಗ ಒಂದಷ್ಟು ಜನರು ಘಳಿಗೆಯೊಳಗೆ ಸುತ್ತಲು ಗುಂಪುಗಟ್ಟಿ ನೆರೆದರಾದರೂ ಯಾರೊಬ್ಬರೂ ಸಹಾಯಕ್ಕೆ ಮುಂದಾಗಲಿಲ್ಲ..ಆಮೇಲೆ ಅವರೇ ತನ್ನ ಸೆಲ್ ಫೋನ್ ಸಹಾಯದಿಂದ ತಮ್ಮ ಹೆಂಡತಿಗೆ ಕರೆ ಮಾಡಿ  ಆಸ್ಪತ್ರೆಗೆ ಹೋಗಬೇಕಾಯಿತು.ಎಲ್ಲ ಕುತೂಹಲದಿಂದ ದಿಟ್ಟಿಸುತ್ತಿದ್ದರೇ ವಿನಃ ಕೂಗಿ ಕರೆದರೂ ಹತ್ತಿರ ಬಂದು ಆಸ್ಪತ್ರೆಗೆ ಸಾಗಿಸುವ ಮಾನವೀಯತೆ ತೋರಿಸಲಿಲ್ಲ ಎಂದು ಸ್ನೇಹಿತರು ಬೇಸರಿಸುತ್ತಾರೆ.ಇಂತಹ ಅದೆಷ್ಟೋ ಘಟನೆಗಳು ದಿನನಿತ್ಯದ ಜೀವನದಲ್ಲಿ ನಡೆದು ಹೋಗಿದೆ. ಒಬ್ಬ ಮುಂದೆ ಬಂದು ಕಾಪಾಡಿದ್ದರೂ ಪ್ರಾಣ ಉಳಿಯಬಹುದಾಗಿದ್ದ ಉದಾಹರಣೆಗಳಿವೆ.ಆದರೆ ಅಂತಹ ಅಂತಃಕರಣ ಇಂದು ಕಣ್ಮರೆಯಾಗಿದೆ.ಹಾಗೊಮ್ಮೆ ಸಹಾಯಕ್ಕೆ ಹೋಗಿ, ಮುಂದೆ ಕೇಸು, ಕೋರ್ಟುಗಳ ಕಿರಿಕಿರಿಯಲ್ಲಿ ನಲುಗಲು ಯಾರೂ ತಾಯಾರಿರುವುದಿಲ್ಲ. ಅದಕ್ಕಾಗಿ ದೂರ ದೂರವೇ ಉಳಿದುಬಿಡುತ್ತಾರೆ. ನಾಗರೀಕ ಪ್ರಜ್ಞೆ ಅಳಿದು, ಸ್ವಾರ್ಥ ಮಾತ್ರ ಉಳಿದಿರುವುದಕ್ಕೆ ಇದು ಪುರಾವೆಯಾಗಿ ನಿಲ್ಲುತ್ತದೆ. ನನ್ನದೇ ರೂಂ ನಲ್ಲಿ ಚಳಿ ಜ್ವರ ಬಂದು ನಾನು ಮಲಗಿದ್ದಾಗ ಸೆಖೆ ಎಂದು ಜೋರು ಫ್ಯಾನ್ ಹಾಕಿ ಮಲಗುತ್ತಿದ್ದರು ರೂಂ ಮೇಟ್ಸ್...ಒಂದೇ ರೂಂ ಶೇರ್ ಮಾಡಿಕೊಂಡಿದ್ದರೂ ಕಡೇಪಕ್ಷ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೂ ಕರುಣೆ ಸಹಿತ ತೋರಿಸುವುದಿಲ್ಲ..ಬಸ್ ನಲ್ಲಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಎಂದು ಮೀಸಲಾದ ಸೀಟುಗಳನ್ನು ನಾವೇ ಬಾಚಿಕೊಂಡು ಅವರು ಬಂದು ನಿಂತಿರುವಾಗಲೂ 'ಸೀಟ್' ಬಿಟ್ಟು ಕೊಡದೇ ನಾವು ಭಾರತೀಯರೆಂದು ತೋರಿಸಿಕೊಳ್ಳುತ್ತೇವೆ.ತೀರಾ ಆಪ್ತರ ಮನೆಯಲ್ಲಿ ಏನೋ ಕಷ್ಟ, ಅಥವಾ ಸಾವು ಏನೇ ಸಂಭವಿಸಿದ್ದರೂ ಅವರ ದುಃಖಕ್ಕೆ ಹೆಗಲಾಗೋ ಮನೋಭಾವ ನಮ್ಮಲ್ಲಿಲ್ಲ. ಕೊನೆಪಕ್ಷ ಫೋನ್ ಮಾಡಿ ವಿಚಾರಿಸೋ ಸೌಜನ್ಯ ಕೂಡ ಇರುವುದಿಲ್ಲ.ಅಂಗವಿಕಲರೊ, ವೃದ್ದರೋ ರಸ್ತೆ ದಾಟುತ್ತಿದ್ದರೆ ಒಂದಿಷ್ಟು ಸಹಾಯ ಮಾಡೋ ಮನಸ್ಸು ಬರುವುದಿಲ್ಲ. ನಮ್ಮ ಪಕ್ಕದ ಮನೆಯಲ್ಲೇ ಯಾರೋ ದೌರ್ಜನ್ಯಕ್ಕೆ ಒಳಗಾದರೆಂದು ಗೊತ್ತಿದ್ದರೂ ಅವರ ಪರ ನಿಂತು ಧೈರ್ಯ ತುಂಬುವ ಇಚ್ಛೆ ನಮ್ಮದಾಗಿರುವುದಿಲ್ಲ.ಹೀಗೆ ಇಂದಿನ ಮಾನವನ ಕಠಿಣ ಅಂತಃಕರಣದ ಅನಾವರಣ ಮಾಡುತ್ತಾ ಹೋಗುತ್ತದೆ.

ಎಲ್ಲರೂ ಬುದ್ದಿಜೀವಿಗಳೇ..! ನಾಗರೀಕ ಪ್ರಜ್ಞೆ ಬಗ್ಗೆ ತಾಸುಗಟ್ಟಲೆ ಮಾತನಾಡಬಲ್ಲೆವು. ಕುಸಿಯುತ್ತಿರುವ, ಮಾನವೀಯ ಮೌಲ್ಯಗಳ ಬಗ್ಗೆ ಅನುಕಂಪ ತೋರಿಸಬಲ್ಲೆವು. ಇಂದಿನ ಯುವಜನಾಂಗವನ್ನು ಬೊಟ್ಟು ಮಾಡಿ ತೋರಿಸಬಲ್ಲೆವು..ಪ್ರೀತಿ, ಪ್ರೇಮ, ಕರುಣೆ, ಸಹಾಯ ಮಾಡುವ ಮನೋಭಾವ ಯಾರಲ್ಲೂ ಇಲ್ಲವೆಂದು ದೂರಬಲ್ಲೆವು. ಆದರೆ ಅಂತಹ ಪರಿಸ್ಥಿತಿ ನಮ್ಮಲ್ಲೇ ಬಂದಾಗ ಅಷ್ಟೇ ತಣ್ಣಗೆ ಕಳಚಿಕೊಳ್ಳುವ ಚಾಲಾಕಿತನನೂ ನಮ್ಮಲ್ಲಿದೆ. ಬಹುಶಃ ಇದು ಮುಂದೆ ಬರಬಹುದಾದ ಅಪಾಯವನ್ನು ಗ್ರಹಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮುಂಜಾಗ್ರತಾ ವಿಧಾನವೂ ಆಗಿದೆ. ಹಾಗೆಂದು ಕಣ್ಣೆದುರೇ ಒಬ್ಬ ವ್ಯಕ್ತಿ ಸಾಯುತ್ತಿದ್ದರೂ ಸುಮ್ಮನೆ ನೋಡುವುದು ಅದೆಂತಹ ಸಂಸ್ಕೃತಿ? ಮನ ಕಲುಕಬಹುದಾದ ಸನ್ನಿವೇಶದಲ್ಲೂ ನಾವು ನಮ್ಮ ಪಾಡಿಗೆ ಎದ್ದು ಹೋಗಬಲ್ಲೆವೆಂದರೆ ನಮ್ಮಲ್ಲಿ "ನಾಗರಿಕ ಪ್ರಜ್ಞೆ ಮತ್ತು ಮಾನವೀಯತೆ" ಯಂತಹ ವಿಷಯಗಳು ಅದೆಷ್ಟು ಅರ್ಥ ಕಳೆದುಕೊಂಡಿದ್ದಿರಬೇಕು? ನಾನು ನನ್ನದು ಎಂಬ ಮನುಷ್ಯನ ಇಂದಿನ ನೀತಿ ಅವನ ಮಟ್ಟಿಗೆ ತಕ್ಕುದೇ ಆದರೂ ಸಮಾಜದಲ್ಲಿರೋ ಅವನಿಗೆ ಅಲ್ಪವಾದರೂ ನಾಗರೀಕ ಪ್ರಜ್ಞೆ, ಮಾನವೀಯ ಮೌಲ್ಯಗಳು ಇರಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತೆ ಆಗಬಾರದಲ್ಲ? ಪ್ರಜ್ಞಾವಂತ ನಾಗರೀಕ ಎಂದು ಹೇಳಿಸಿಕೊಂಡರೆ ಸಾಲುವುದಿಲ್ಲ.. ಅದಕ್ಕೆ ಪೂರಕವಾಗಿ ನಮ್ಮ ಕೆಲಸಗಳಿರಬೇಕು..ಪ್ರಜೆ ಬದಲಾದರೆ ಸಹಾಯ ಮಾಡಿದವರನ್ನೇ ರುಬ್ಬುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ದೋಷದ ನೀವಾರಣೆಯೂ ಆಗಬಹುದು..ಇದರಿಂದ ಮುಂದೆ ಮತ್ತಷ್ಟು ಜನ ಮಾನವೀಯತೆ ಮೆರೆಯಬಹುದು. ಅದಕ್ಕೆ ನಾವು ನೀವೆಲ್ಲರೂ ಮನಸ್ಸು ಮಾಡಬೇಕು. ಒಂದಿಷ್ಟು ಮಾನವೀಯ ಮೌಲ್ಯಗಳನ್ನು, ನಾಗರೀಕ ಪ್ರಜ್ಞೆಗಳನ್ನು ಮನಸ್ಸಿನೊಳಕ್ಕೆ ಎಳೆದುಕೊಳ್ಳಬೇಕು.
ಅಂತೆಯೇ ನಡೆದುಕೊಳ್ಳಬೇಕು.

===============================================

೨೫-೧೨-೨೦೧೨ ರ ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ... :)
ಮಂಗಳವಾರ, ಡಿಸೆಂಬರ್ 11, 2012

ಇದು ಆತ್ಮದೊಳಗಿನ ಶ್ವಾಸ..

ಕನಸುಗಳು ಮನುಷ್ಯನ ಜೀವನಾಡಿ. ನಾಳಿನ ಬದುಕಿಗೆ ಭರವಸೆಯ ಬೆಳಕನ್ನು ಹಿಡಿದ ಪುಟ್ಟ ಹಣತೆಯಂತೆ ಅವು.ಪುಟ್ಟ ಹೆಜ್ಜೆಗೆ ಬೆಳಕಾಗಿ ಬದುಕು ಬೆಳಗುತ್ತದೆ. ಕತ್ತಲಿಂದ ಬೆಳಕಿನೆಡೆಗೆ ಸಾಗುವ ಅವನ ಪ್ರಯತ್ನಕ್ಕೆ ಮುನ್ನುಡಿ ಬರೆಯುತ್ತದೆ. ಬದುಕು ಕೊಡುವ ಬೆದರಿಕೆ, ಕಷ್ಟಗಳನ್ನು ಎದುರಿಸಿ ಅಚಲವಾಗಿ ಒಬ್ಬ ವ್ಯಕ್ತಿ ನಿಲ್ಲಬಲ್ಲನೆಂದರೆ ಅದು ಆತ ಕಂಡ ಕನಸುಗಳಿಂದ, ಆ ಕನಸಿನ ಗುರಿಯಿಂದ, ಗುರಿಯೆಡೆಗಿನ ಆತನ ತವಕದಿಂದ ಮಾತ್ರ ಸಾದ್ಯ. ಬದುಕೆಂದರೆ ಹಾಗೆ ಬವಣೆಗಳ ಸಾಲೇ..ಕೆಲವೊಮ್ಮೆ ಬೆವರಿನ ಬದಲು ರಕ್ತ ಹರಿಸಿದರೂ ಬದುಕು ಕೊಡುವ ಏಟು ಸಾಧಾರಣದ್ದಾಗಿರುವುದಿಲ್ಲ.. ಸೋಲಿನ ಮೆಟ್ಟಿಲೆರುತ್ತಲೇ ಗೆಲುವಿನ ಕೊನೆಯ ಮೆಟ್ಟಿಲು ದೊರಕುವುದು ನಿಜವಾದರೂ ಸೋಲುಗಳು ಕೊಡುವ ಹೊಡೆತಗಳಾದರೂ ಎಂತಹುದು? ಅವಮಾನ, ನಿಂದನೆ, ತೀರದ ದುಃಖ, ತಾ ಕಂಡ ಕನಸುಗಳು ತನ್ನ ಬವಣೆಗಳ ಬಿಸಿಯಲ್ಲಿ ಕರಗುತ್ತಿರುವಂತೆ ಭಾಸ. ಹೃದಯ ಹಿಂಡಿ ಬರುತ್ತದೆ. ಅಸಹಾಯಕತೆಯಿಂದ ಮನಸ್ಸು ನರಳುತ್ತದೆ.ಅವಳಿಗೂ ಅವಳ ಬದುಕು ಹಿಂದೊಮ್ಮೆ ಇಂತದ್ದೇ ಹೊಡೆದ ನೀಡಿತ್ತು. ನೋವನ್ನುಂಡೇ  ಬೆಳೆದ ಹುಡುಗಿ.
ಕಂಗಳ ತುಂಬಾ ಕನಸಿಟ್ಟುಕೊಂಡು, ಸುಂದರ ಭವಿಷ್ಯದ ಅದಮ್ಯ ಬಯಕೆಯುಳ್ಳವಳು . ಅಂದುಕೊಂಡಿದ್ದೆಲ್ಲ ಆಗಿಬಿಡಲು ಸಾದ್ಯವೇ? ಬಡ ಕುಟುಂಬದ  ಹಿರಿಕುವರಿಗೆ ಓದು ನಿಲ್ಲಿಸಲೇ ಬೇಕಾದ ಅನಿವಾರ್ಯತೆ. ಓದಿನಲ್ಲಿ ಜಾಣೆಯಿದ್ದರೂ ಸ್ಕಾಲರ್ ಶಿಪ್ ಪಡೆದುಕೊಳ್ಳುವ ಅರ್ಹತೆ ಅವಳ ಜಾತಿಗಿರಲಿಲ್ಲ. ಬೆಂಬಿಡದೆ ಕಾಡುವ ಆರ್ಥಿಕ ಮುಗ್ಗಟ್ಟಿಗೆ ಹೆತ್ತವರೊಂದಿಗೆ ಹೆಗಲು ಕೊಡಬೇಕಾಗಿತ್ತು. ಆಕಾಂಕ್ಷೆಗಳನ್ನೆಲ್ಲ ಬದಿಗೊತ್ತಿ ಬದುಕುವೆನೆಂದರೂ ಎಳೆ ಮನಸ್ಸಿನ ಕನಸುಗಳು ಒಮ್ಮೊಮ್ಮೆ ದಿಗ್ಗನೇ ಎದ್ದು ಬಿಡುತ್ತಿದ್ದವು..ಕಾಡುತ್ತಿದ್ದವು..

ತನ್ನದೇ ವಯಸ್ಸಿನ ಗೆಳೆಯರು ಕಾಲೇಜು ಮೆಟ್ಟಿಲೇರಿ ಇಂಜಿನಿಯರಿಂಗು, ಡಾಕ್ಟರಿಕೆ ಇನ್ನು ಕೆಲವರು ಡಿಗ್ರಿ ಮಾಡುತ್ತಿರುವಾಗ ತನ್ನಿಂದ ಓದು ಮುಂದುವರಿಸಲಾಗದ ಹತಾಶೆ. ಕ್ಲಾಸು,ಪರೀಕ್ಷೆ,ಅಸೈನ್ಮೆಂಟ್ಸ್, ಸೆಮಿನಾರ್ಸು.. ಎಂದು ಮಾತಾಡುವ ಸ್ನೇಹಿತರೆಡೆಗೆ ಆಸೆ ಕಂಗಳು. ಅರ್ಧಕ್ಕೆ ಓದು ಬಿಟ್ಟವಳೆಂದು ಅವರು ನೋಡುವ ರೀತಿ, ಓರಗೆಯವರ ಚುಚ್ಚುಮಾತುಗಳು, ಪರರ ನೋವಲ್ಲಿ ಸುಖ ಪಡುವ ಜನರ ಮನಸ್ಥಿತಿ ದುಃಖದ ಮಡುವಿಗೆ ನೂಕುತ್ತಿತ್ತು. ಅವಳ ಆ ದುಃಖ ಕಾರ್ಗತ್ತಲ ಕಾನನದಲ್ಲಿ ಬೋಬ್ಬಿಟ್ಟಂತೆ..ಕೇಳಿಸಿಕೊಳ್ಳುವವರು ಯಾರಿರಲಿಲ್ಲ..
ಕಣ್ಣಿರೆಲ್ಲಾ ಇಂಗಿತ್ತು. ಇಂತಹದೊಂದು ಸಂಟಕವೇ ಅವಳಿಗೆ ಧೈರ್ಯ ಕೊಟ್ಟಿರಬೇಕು. ಲೋಕದ ಮಾತುಗಳಿಗೆ ಕಿವುಡಿಯಾಗಿ ಬಿಟ್ಟಳು. ಸ್ವಯಂ ಪ್ರೇರಣೆ ತೆಗೆದುಕೊಂಡಳು.ಕನಸುಗಳೆಡೆಗಿನ ಅವಳ ಪ್ರೀತಿ ಕೈ ಹಿಡಿಯಿತು.  ಓದು ಬಿಟ್ಟರೂ ಕಂಪ್ಯೂಟರ್ ಗಳಿಗೆ ಸಂಬಂಧಿಸಿದ ಕೋರ್ಸುಗಳನ್ನು ತಾನೇ ಸಣ್ಣದೊಂದು ಕೆಲಸಕ್ಕೆ ಸೇರಿ ದುಡಿದು, ಸಂಪಾದಿಸಿ ಕಲಿಯತೊಡಗಿದಳು. ಅದರಲ್ಲಿನ ಜ್ಞಾನದ ಮೇಲೆ ಕೆಲಸ ಬೇಟೆ ಸಾಗುತ್ತಲೇ ಇತ್ತು. ಅದೃಷ್ಟ ಬೆನ್ನಿಗಿರದಿದ್ದರೂ ಪ್ರಯತ್ನ ಇತ್ತು. ಸಂಜೆ ಪದವಿ ಕಾಲೇಜುಗಳ ಬಗ್ಗೆ ತಿಳಿದುಕೊಂಡಳು. ಈಗ ಆಕೆ ಸಂಜೆ ಪದವಿ ಕಾಲೇಜಿನ ವಿದ್ಯಾರ್ಥಿನಿ.ಅವಳೇ ಕಲಿತ ಕಂಪ್ಯೂಟರಿನ ಕೋರ್ಸು ಈಗ ದುಡಿಮೆಯಾಗಿದೆ. ಹಗಲು ದುಡಿಮೆ, ರಾತ್ರಿ ಓದು ಹೀಗೆ ಸಾಗಿದೆ ದಿನಚರಿ.. ಬದುಕು ತೀರ ದೊಡ್ಡ ಮಟ್ಟಿನ ಸುಖವನ್ನು ದೊರಕಿಸಿ ಕೊಡಲಿಲ್ಲವಾದರೂ,  ಗುರಿ ಈಗ ನಿಚ್ಚಳವಾಗಿದೆ. ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಆತ್ಮಧೈರ್ಯ ಅವಳಲ್ಲಿದೆ. ಮುಖ್ಯವಾಗಿ ಬದುಕಲ್ಲಿ ಹೊಸದೊಂದು ಆಶಾಕಿರಣ ಮೂಡಿದೆ. ಸ್ನೇಹಿತರ, ಓರಗೆಯವರ ಬಾಯಿಗಳೂ ಈಗ ಮುಚ್ಚಿವೆ. ಅವಳ ನಾಳೆಗಳ ಬಗ್ಗೆ ಅವಳಿಗೆ ಭರವಸೆಯಿದೆ.

 
ಪುರಂದರ ದಾಸರು "ಈಸಬೇಕು ಇದ್ದು ಜಯಿಸಬೇಕು" ಎನ್ನುತ್ತಾರೆ. ಜಯಿಸುವ ದಾರಿಯಲ್ಲಿ ಕಲ್ಲು ಮುಳ್ಳುಗಳು ಅನೇಕ. ಗುರಿ ಸ್ಪಷ್ಪವಾಗಿದ್ದು, ಮನಸ್ಸು ಧೃಡವಾಗಿದ್ದರೆ, ತನ್ನ ಸಾಮರ್ಥ್ಯದಲ್ಲಿ ನಂಬಿಕೆಯಿದ್ದರೆ ಯಾವುದೂ ಅಸಾಧ್ಯವಲ್ಲ. ಉಳಿಯೇಟು ಸಹಿಸಿಕೊಂಡರಲ್ಲವೇ ಕಲ್ಲು ಶಿಲೆಯಾಗುವುದು? ದೇಶ ಕಂಡ ಮಹಾತ್ಮರೆಲ್ಲ ಇಂತಹ ಕಷ್ಟ ನಷ್ಟಗಳನ್ನು ಅನುಭವಿಸಿಯೇ ಉನ್ನತ ಸ್ಥಾನವೇರಿರುವುದು. ಇಲ್ಲಿ ಸಾಧಿಸುವ ನಮ್ಮ ಛಲಗಾರಿಕೆ ಮಾತ್ರ ಮುಖ್ಯವಾಗುತ್ತದೆ. ಆಧುನಿಕ ಜಗತ್ತು ಬಹಳಷ್ಟು ಅವಕಾಶ, ಸವಲತ್ತುಗಳನ್ನು ಒದಗಿಸಿರುವುದರಿಂದ ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ಎಲ್ಲೊ ಒಂದು ಕಡೆ ಕಷ್ಟಕ್ಕೆ ಹೆಗಲಾಗುವವರು ಬೇಕೆಸಿದರೂ, ಸಿಗದಿದ್ದಾಗ ಕೊರಗದೇ ತಮ್ಮ ಗುರಿಯೆಡೆಗೆ ಪ್ರಯತ್ನಿಗಳಾದಾಗ ಸೋಲಿಗೂ ಭಯವಾಗಿ ಯಶಸ್ಸು ಅಪ್ಪಿಕೊಂಡೀತು, ಬಾಳು ಬಂಗಾರವಾದೀತು.
=================================================
 
ಇವತ್ತಿನ (೧೧-೧೨-೨೦೧೨) ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ. :)
ಇದು ಆತ್ಮದೊಳಗಿನ ಶ್ವಾಸ..
 
 

ಸೋಮವಾರ, ಡಿಸೆಂಬರ್ 10, 2012

ನಮ್ ಅಡ್ಡ..


ಕಾಲೇಜ್ ಎಂದರೆ ಮೊದಲು ನೆನಪಾಗುವುದೇ ಫ್ರೆಂಡ್ಸ್..ಒಂದಿಷ್ಟು ತರಲೆ, ತುಂಟತನ, ಮಸ್ತಿಗಳು ಈ ಫ್ರೆಂಡ್ಸ್ ಎನ್ನೋ ಪದದ ಜೊತೆಜೊತೆಗೆ ಇರುತ್ತವೆ. ಕಾಲೇಜ್ ಗೆ ಬಂಕ್ ಹೊಡೆದು ನಮ್ ಅಡ್ದಾಕ್ಕೆ ಬಂದು ಸೇರಿದಿವೆಂದರೆ ಅದರ ಗತ್ತು ದೌಲತ್ತೆ ಬೇರೆ..! ಅಂದಹಾಗೆ ನಮ್ ಅಡ್ಡ, ಕಾಲೇಜ್ ಮುಂದುಗಡೆ ಇರೋ ಪಾರ್ಕ್.. ಪಾರ್ಕ್ ಮದ್ಯ ಎಲ್ಲಾ ಗೆಳೆಯರು ಸೇರಿ ಭಾರಿ ಚರ್ಚೆಗಳನ್ನೇ ನಡೆಸುತ್ತೇವೆ. ಸಿನೆಮಾ, ಪ್ರೀತಿ, ಪ್ರೇಮ, ಫ್ರೆಂಡ್ ಶಿಪ್ಪುಗಳ ಬಗ್ಗೆ ಒಂದು ಪಿ.ಹೆಚ್ ಡಿಗಾಗೋವಷ್ಟು ವಿಷಯ ಸಂಗ್ರಹವಿದೆ ನಮ್ಮಲ್ಲಿ. ಹುಡುಗರು ಹುಡುಗೀರು ಎನ್ನದೇ ನಮ್ಮ ನಮ್ಮ ವಾದಗಳನ್ನು ಮಂಡಿಸುತ್ತೇವೆ. ಅಂತ್ಯಾಕ್ಷರಿ, ಮೂಕಾಭಿನಯಗಳು ನಮ್ಮ ವಿವಿಧ ಆಟಗಳಲ್ಲಿ ಮುಖ್ಯವಾದುವು. ಕೆಲವೊಮ್ಮೆ  ಸಂತೋಷ ಉಕ್ಕಿ ಬಂದಾಗ ಎಲ್ಲಾ ಸೇರಿ ಪಾರ್ಕ್ ಎಂದೂ ನೋಡದೆ ನೃತ್ಯ ಕೌಶಲ್ಯನ್ನು ಪ್ರದರ್ಶಿಸುವುದೂ ಇದೆ.. ಅದೆಷ್ಟೋ ಬಾರಿ ನಮ್ಮ ಪ್ರತಿಭೆ(?)ಯನ್ನು ಮೆಚ್ಚದ ಅಜ್ಜಿಯರು, ಆಂಟಿಯರು ಬೈದುಕೊಂಡು ನಾವಿದ್ದ ಜಾಗದಿಂದ ಎಸ್ಕೇಪ್ ಆಗಿರುವುದೂ ಇದೆ.. ನಮ್ ಅಡ್ದಾನೇ  ನಮಗೆ ಪ್ರಿಯವಾದರೂ ಒಂದಿಷ್ಟು ಪಿಕ್ ನಿಕ್, ಟೂರ್ ಗಳ ನೆಪದಲ್ಲಿ ಊರು ಸುತ್ತುತ್ತೇವೆ..ಸಂಭ್ರಮಿಸುತ್ತೇವೆ. ನೆನಪಿನ ಪುಟಗಳಿಗೆ ಸಂತಸದ ಕ್ಷಣಗಳನ್ನು ದಾಖಲಿಸುತ್ತೇವೆ.

ದಾರೀಲಿ ಹೋಗೋ ಹುಡುಗಿರನ್ನು ಕುರಿತು ಕಾಮೆಂಟ್ಸ್ ಮಾಡೋ, ಮೃದು ಭಾವನೆ ತೋರಿಸೋ ನಮ್ ಅಡ್ಡಾದ ಹುಡುಗರಿಗೆ, ಹುಡುಗಿಯರಾಗಿ "ಬೇಡ ಕಣ್ರೋ..ಕಾಮೆಂಟ್ಸ್ ಮಾಡಬೇಡಿ.." ಅನ್ನೋ ನಾವು, ನಮ್ ಸಂಗಡ ಹುಡುಗರಿಲ್ಲದೇ ನಾವು ನಾವೇ ಇದ್ದಾಗ "ಈ ಪೆಕ್ರ ಸ್ವಲ್ಪ ಸ್ಮಾರ್ಟ್ ಇದ್ದಾನೆ.., ಲೋವೆಸ್ಟ್ ಜೀನ್ಸ್ ಒಪ್ಪತ್ತೆ ಇವಂಗೆ.." ಅಂತೆಲ್ಲಾ ಮಾತಾಡಿಕೊಂಡು ಸುಮ್ಮನೊಂದು ಸ್ಮೈಲ್ ಕೊಟ್ಟು ಬಿಡುತ್ತೇವೆ..ಅಲ್ಲಿಗೆ ಅಂವ ನಮ್ಮ ಫ್ಯಾನ್ ಆದಂಗೆ.. ಆದರೂ ಹಿಂದೆ ಬರುವ ಹುಡುಗರನೆಲ್ಲ ನಾವು ಒಪ್ಪುವುದಿಲ್ಲ.."ನಾವು ಕಾಲೇಜ್ ಗೆ ಬಂದಿರೋದು ಓದಲು..ಇವೆಲ್ಲಾ ನಂಗೆ ಹಿಡಿಸೋಲ್ಲ.." ಇತ್ಯಾದಿ ಸಿದ್ಧ ಉತ್ತರ ನಮ್ಮ ಬಳಿ ಇರುತ್ತೆ..ನಮ್ಮಲ್ಲೇ ಒಬ್ಬ ಬೇರೊಂದು ಹುಡುಗಿನ ಇಷ್ಟ ಪಟ್ಟ ಎಂದರೆ ಆ ಹುಡುಗಿನ ಫ್ರೆಂಡ್ ಮಾಡಿಕೊಂಡು ಅವನಿಗೂ "ಫ್ರೆಂಡ್" ಮಾಡೋ ಜವಾಬ್ದಾರಿ ಹುಡುಗಿಯರಾಗಿ ನಮ್ಮ ಮೇಲಿರುತ್ತೆ..ಫೇಸ್ ಬುಕ್ ನಲ್ಲಿ ಕ್ಯೂ ನಲ್ಲಿ ನಿಂತಿರೋ ಹುಡುಗರ ಫ್ರೆಂಡ್ ರಿಕ್ವೆಸ್ಟ್ ಗಳ ಮೇಲೆ ನಮಗೆ ಅದಮ್ಯ ಪ್ರೀತಿ..ಅದನ್ನು ಸ್ವೀಕರಿಸೋ ಅಥವಾ ಡಿಲೀಟ್ ಮಾಡೋ ಗೋಜಿಗೆ ಹೋಗುವುದಿಲ್ಲ..ಜಾಸ್ತಿ ರಿಕ್ವೆಸ್ಟ್ ಇದ್ದಷ್ಟು ನಮ್ಮ ಪ್ರತಿಷ್ಠೆ ಹೆಚ್ಚುವುದು..ದಾರೀಲಿ ಹೋಗೋವಾಗ ರೇಗಿಸೋ ಸೀನಿಯರ್ಸ್ ಹುಡುಗರ ಗುಂಪು, ನಮಗಾಗಿ ಯಾವ ಸಹಾಯಕ್ಕೂ ರೆಡಿಯಾಗಿರೋ ಹೊಸ ಫ್ರೆಂಡುಗಳು, ಫ್ರೆಂಡ್ ಶಿಪ್ ಎಂದು ಬಂದು ಮೊಬೈಲ್ ನಂಬರ್ ಕಲೆಕ್ಟ್ ಮಾಡಿ ಒಂದಿನ "ಐ ಲವ್ ಯು " ಅನ್ನೋ ಹುಡುಗ, ಈಗಲೂ ಅದೇ ಕ್ರಶ್ ಉಳಿಸಿಕೊಂಡಿರೋ ಹೈ ಸ್ಕೂಲ್  ಕ್ಲಾಸ್ ಮೇಟ್, ಫೇಸ್ ಬುಕ್ ನಲ್ಲಿ ಆನ್ಲೈನ್ ಹೋದ ಕೂಡಲೇ ಚಾಟ್ ಬಾಕ್ಸ್ ಲಿ ಬಂದು ಕೂರೋ ಗೆಳೆಯರಲ್ಲದ ಗೆಳೆಯರು.. ಇವರುಗಳ ಬಗ್ಗೆ ತುಸು ಹುಸಿಮುನಿಸು..ಸ್ವಲ್ಪ ಅಕ್ಕರೆ..ಸದ್ದಿಲ್ಲದೇ ನಮ್ಮೊಳಗೊಂದು ಖುಷಿಯನ್ನ ಜಮೆ ಮಾಡುವವರು ಇವರೆಲ್ಲ ಅನ್ನೋ ನಂಬಿಕೆ.

ಕೊನೆಗೆ ಒಂದಿಷ್ಟು ಉಪ್ಪು ಖಾರ ಸೇರಿಸಿ ಮಸಾಲಾ ಮಾಡಿ, ನಮ್ ಅಡ್ಡಾದಲ್ಲಿ ಈ ಬಗ್ಗೆ, ಕಾಲೇಜ್ ರಾಜಕುಮಾರ/ರಿ ಯರ ಬಗ್ಗೆ ಹರಡಿರೋ ಗಾಸಿಪ್ ಗಳ ಮಾತಾಡಿದೆವೆಂದರೆ ಮನಸ್ಸಿಗೆ ಸಮಾದಾನವಾದಂತೆ .ಹೀಗೆ ನಮ್ ಅಡ್ಡ ಸವಿ ಸಿಹಿ ಕ್ಷಣಗಳ ಮಿಶ್ರಣ..ಇಲ್ಲಿ ಸಿಗೋ ಖುಷಿ, ಕಂಫರ್ಟ್ ಕೋಟಿ ತಂದು ಸುರಿದರೂ ಸಿಗಲಾರದು..


=========================================================

ಇವತ್ತಿನ (೧೦-೧೨-೨೦೧೨)ವಿಜಯ ಕರ್ನಾಟಕದ ಲವಲವಿಕೆಯಲ್ಲಿ (ನಮ್ ಅಡ್ಡಾ) ನನ್ನ ಲೇಖನ...
ವಿಜಯ ಕರ್ನಾಟಕದ ಬಳಗಕ್ಕೆ ಮತ್ತು ಶ್ರೀದೇವಿ ಕಳಸದ ಅವರಿಗೆ ಧನ್ಯವಾದಗಳು....