ಮಂಗಳವಾರ, ಡಿಸೆಂಬರ್ 11, 2012

ಇದು ಆತ್ಮದೊಳಗಿನ ಶ್ವಾಸ..

ಕನಸುಗಳು ಮನುಷ್ಯನ ಜೀವನಾಡಿ. ನಾಳಿನ ಬದುಕಿಗೆ ಭರವಸೆಯ ಬೆಳಕನ್ನು ಹಿಡಿದ ಪುಟ್ಟ ಹಣತೆಯಂತೆ ಅವು.ಪುಟ್ಟ ಹೆಜ್ಜೆಗೆ ಬೆಳಕಾಗಿ ಬದುಕು ಬೆಳಗುತ್ತದೆ. ಕತ್ತಲಿಂದ ಬೆಳಕಿನೆಡೆಗೆ ಸಾಗುವ ಅವನ ಪ್ರಯತ್ನಕ್ಕೆ ಮುನ್ನುಡಿ ಬರೆಯುತ್ತದೆ. ಬದುಕು ಕೊಡುವ ಬೆದರಿಕೆ, ಕಷ್ಟಗಳನ್ನು ಎದುರಿಸಿ ಅಚಲವಾಗಿ ಒಬ್ಬ ವ್ಯಕ್ತಿ ನಿಲ್ಲಬಲ್ಲನೆಂದರೆ ಅದು ಆತ ಕಂಡ ಕನಸುಗಳಿಂದ, ಆ ಕನಸಿನ ಗುರಿಯಿಂದ, ಗುರಿಯೆಡೆಗಿನ ಆತನ ತವಕದಿಂದ ಮಾತ್ರ ಸಾದ್ಯ. ಬದುಕೆಂದರೆ ಹಾಗೆ ಬವಣೆಗಳ ಸಾಲೇ..ಕೆಲವೊಮ್ಮೆ ಬೆವರಿನ ಬದಲು ರಕ್ತ ಹರಿಸಿದರೂ ಬದುಕು ಕೊಡುವ ಏಟು ಸಾಧಾರಣದ್ದಾಗಿರುವುದಿಲ್ಲ.. ಸೋಲಿನ ಮೆಟ್ಟಿಲೆರುತ್ತಲೇ ಗೆಲುವಿನ ಕೊನೆಯ ಮೆಟ್ಟಿಲು ದೊರಕುವುದು ನಿಜವಾದರೂ ಸೋಲುಗಳು ಕೊಡುವ ಹೊಡೆತಗಳಾದರೂ ಎಂತಹುದು? ಅವಮಾನ, ನಿಂದನೆ, ತೀರದ ದುಃಖ, ತಾ ಕಂಡ ಕನಸುಗಳು ತನ್ನ ಬವಣೆಗಳ ಬಿಸಿಯಲ್ಲಿ ಕರಗುತ್ತಿರುವಂತೆ ಭಾಸ. ಹೃದಯ ಹಿಂಡಿ ಬರುತ್ತದೆ. ಅಸಹಾಯಕತೆಯಿಂದ ಮನಸ್ಸು ನರಳುತ್ತದೆ.ಅವಳಿಗೂ ಅವಳ ಬದುಕು ಹಿಂದೊಮ್ಮೆ ಇಂತದ್ದೇ ಹೊಡೆದ ನೀಡಿತ್ತು. ನೋವನ್ನುಂಡೇ  ಬೆಳೆದ ಹುಡುಗಿ.
ಕಂಗಳ ತುಂಬಾ ಕನಸಿಟ್ಟುಕೊಂಡು, ಸುಂದರ ಭವಿಷ್ಯದ ಅದಮ್ಯ ಬಯಕೆಯುಳ್ಳವಳು . ಅಂದುಕೊಂಡಿದ್ದೆಲ್ಲ ಆಗಿಬಿಡಲು ಸಾದ್ಯವೇ? ಬಡ ಕುಟುಂಬದ  ಹಿರಿಕುವರಿಗೆ ಓದು ನಿಲ್ಲಿಸಲೇ ಬೇಕಾದ ಅನಿವಾರ್ಯತೆ. ಓದಿನಲ್ಲಿ ಜಾಣೆಯಿದ್ದರೂ ಸ್ಕಾಲರ್ ಶಿಪ್ ಪಡೆದುಕೊಳ್ಳುವ ಅರ್ಹತೆ ಅವಳ ಜಾತಿಗಿರಲಿಲ್ಲ. ಬೆಂಬಿಡದೆ ಕಾಡುವ ಆರ್ಥಿಕ ಮುಗ್ಗಟ್ಟಿಗೆ ಹೆತ್ತವರೊಂದಿಗೆ ಹೆಗಲು ಕೊಡಬೇಕಾಗಿತ್ತು. ಆಕಾಂಕ್ಷೆಗಳನ್ನೆಲ್ಲ ಬದಿಗೊತ್ತಿ ಬದುಕುವೆನೆಂದರೂ ಎಳೆ ಮನಸ್ಸಿನ ಕನಸುಗಳು ಒಮ್ಮೊಮ್ಮೆ ದಿಗ್ಗನೇ ಎದ್ದು ಬಿಡುತ್ತಿದ್ದವು..ಕಾಡುತ್ತಿದ್ದವು..

ತನ್ನದೇ ವಯಸ್ಸಿನ ಗೆಳೆಯರು ಕಾಲೇಜು ಮೆಟ್ಟಿಲೇರಿ ಇಂಜಿನಿಯರಿಂಗು, ಡಾಕ್ಟರಿಕೆ ಇನ್ನು ಕೆಲವರು ಡಿಗ್ರಿ ಮಾಡುತ್ತಿರುವಾಗ ತನ್ನಿಂದ ಓದು ಮುಂದುವರಿಸಲಾಗದ ಹತಾಶೆ. ಕ್ಲಾಸು,ಪರೀಕ್ಷೆ,ಅಸೈನ್ಮೆಂಟ್ಸ್, ಸೆಮಿನಾರ್ಸು.. ಎಂದು ಮಾತಾಡುವ ಸ್ನೇಹಿತರೆಡೆಗೆ ಆಸೆ ಕಂಗಳು. ಅರ್ಧಕ್ಕೆ ಓದು ಬಿಟ್ಟವಳೆಂದು ಅವರು ನೋಡುವ ರೀತಿ, ಓರಗೆಯವರ ಚುಚ್ಚುಮಾತುಗಳು, ಪರರ ನೋವಲ್ಲಿ ಸುಖ ಪಡುವ ಜನರ ಮನಸ್ಥಿತಿ ದುಃಖದ ಮಡುವಿಗೆ ನೂಕುತ್ತಿತ್ತು. ಅವಳ ಆ ದುಃಖ ಕಾರ್ಗತ್ತಲ ಕಾನನದಲ್ಲಿ ಬೋಬ್ಬಿಟ್ಟಂತೆ..ಕೇಳಿಸಿಕೊಳ್ಳುವವರು ಯಾರಿರಲಿಲ್ಲ..
ಕಣ್ಣಿರೆಲ್ಲಾ ಇಂಗಿತ್ತು. ಇಂತಹದೊಂದು ಸಂಟಕವೇ ಅವಳಿಗೆ ಧೈರ್ಯ ಕೊಟ್ಟಿರಬೇಕು. ಲೋಕದ ಮಾತುಗಳಿಗೆ ಕಿವುಡಿಯಾಗಿ ಬಿಟ್ಟಳು. ಸ್ವಯಂ ಪ್ರೇರಣೆ ತೆಗೆದುಕೊಂಡಳು.ಕನಸುಗಳೆಡೆಗಿನ ಅವಳ ಪ್ರೀತಿ ಕೈ ಹಿಡಿಯಿತು.  ಓದು ಬಿಟ್ಟರೂ ಕಂಪ್ಯೂಟರ್ ಗಳಿಗೆ ಸಂಬಂಧಿಸಿದ ಕೋರ್ಸುಗಳನ್ನು ತಾನೇ ಸಣ್ಣದೊಂದು ಕೆಲಸಕ್ಕೆ ಸೇರಿ ದುಡಿದು, ಸಂಪಾದಿಸಿ ಕಲಿಯತೊಡಗಿದಳು. ಅದರಲ್ಲಿನ ಜ್ಞಾನದ ಮೇಲೆ ಕೆಲಸ ಬೇಟೆ ಸಾಗುತ್ತಲೇ ಇತ್ತು. ಅದೃಷ್ಟ ಬೆನ್ನಿಗಿರದಿದ್ದರೂ ಪ್ರಯತ್ನ ಇತ್ತು. ಸಂಜೆ ಪದವಿ ಕಾಲೇಜುಗಳ ಬಗ್ಗೆ ತಿಳಿದುಕೊಂಡಳು. ಈಗ ಆಕೆ ಸಂಜೆ ಪದವಿ ಕಾಲೇಜಿನ ವಿದ್ಯಾರ್ಥಿನಿ.ಅವಳೇ ಕಲಿತ ಕಂಪ್ಯೂಟರಿನ ಕೋರ್ಸು ಈಗ ದುಡಿಮೆಯಾಗಿದೆ. ಹಗಲು ದುಡಿಮೆ, ರಾತ್ರಿ ಓದು ಹೀಗೆ ಸಾಗಿದೆ ದಿನಚರಿ.. ಬದುಕು ತೀರ ದೊಡ್ಡ ಮಟ್ಟಿನ ಸುಖವನ್ನು ದೊರಕಿಸಿ ಕೊಡಲಿಲ್ಲವಾದರೂ,  ಗುರಿ ಈಗ ನಿಚ್ಚಳವಾಗಿದೆ. ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಆತ್ಮಧೈರ್ಯ ಅವಳಲ್ಲಿದೆ. ಮುಖ್ಯವಾಗಿ ಬದುಕಲ್ಲಿ ಹೊಸದೊಂದು ಆಶಾಕಿರಣ ಮೂಡಿದೆ. ಸ್ನೇಹಿತರ, ಓರಗೆಯವರ ಬಾಯಿಗಳೂ ಈಗ ಮುಚ್ಚಿವೆ. ಅವಳ ನಾಳೆಗಳ ಬಗ್ಗೆ ಅವಳಿಗೆ ಭರವಸೆಯಿದೆ.

 
ಪುರಂದರ ದಾಸರು "ಈಸಬೇಕು ಇದ್ದು ಜಯಿಸಬೇಕು" ಎನ್ನುತ್ತಾರೆ. ಜಯಿಸುವ ದಾರಿಯಲ್ಲಿ ಕಲ್ಲು ಮುಳ್ಳುಗಳು ಅನೇಕ. ಗುರಿ ಸ್ಪಷ್ಪವಾಗಿದ್ದು, ಮನಸ್ಸು ಧೃಡವಾಗಿದ್ದರೆ, ತನ್ನ ಸಾಮರ್ಥ್ಯದಲ್ಲಿ ನಂಬಿಕೆಯಿದ್ದರೆ ಯಾವುದೂ ಅಸಾಧ್ಯವಲ್ಲ. ಉಳಿಯೇಟು ಸಹಿಸಿಕೊಂಡರಲ್ಲವೇ ಕಲ್ಲು ಶಿಲೆಯಾಗುವುದು? ದೇಶ ಕಂಡ ಮಹಾತ್ಮರೆಲ್ಲ ಇಂತಹ ಕಷ್ಟ ನಷ್ಟಗಳನ್ನು ಅನುಭವಿಸಿಯೇ ಉನ್ನತ ಸ್ಥಾನವೇರಿರುವುದು. ಇಲ್ಲಿ ಸಾಧಿಸುವ ನಮ್ಮ ಛಲಗಾರಿಕೆ ಮಾತ್ರ ಮುಖ್ಯವಾಗುತ್ತದೆ. ಆಧುನಿಕ ಜಗತ್ತು ಬಹಳಷ್ಟು ಅವಕಾಶ, ಸವಲತ್ತುಗಳನ್ನು ಒದಗಿಸಿರುವುದರಿಂದ ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ಎಲ್ಲೊ ಒಂದು ಕಡೆ ಕಷ್ಟಕ್ಕೆ ಹೆಗಲಾಗುವವರು ಬೇಕೆಸಿದರೂ, ಸಿಗದಿದ್ದಾಗ ಕೊರಗದೇ ತಮ್ಮ ಗುರಿಯೆಡೆಗೆ ಪ್ರಯತ್ನಿಗಳಾದಾಗ ಸೋಲಿಗೂ ಭಯವಾಗಿ ಯಶಸ್ಸು ಅಪ್ಪಿಕೊಂಡೀತು, ಬಾಳು ಬಂಗಾರವಾದೀತು.
=================================================
 
ಇವತ್ತಿನ (೧೧-೧೨-೨೦೧೨) ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ. :)
ಇದು ಆತ್ಮದೊಳಗಿನ ಶ್ವಾಸ..
 
 

14 ಕಾಮೆಂಟ್‌ಗಳು:

 1. ಚೆಂದದ ಲೇಖನ... ಇನ್ನು ಮತ್ತಷ್ಟು ಬರಲಿ...

  ಪ್ರತ್ಯುತ್ತರಅಳಿಸಿ
 2. ತುಂಬಾ ಖುಷಿಯಾಯಿತಮ್ಮ. ಆಟೋಗ್ರಾಫ್ ಸಹಿ ಮಾಡಿಕೊಳ್ಳಲು ಬರುತ್ತೇನೆ.

  ಉತ್ತಮ ಲೇಖನ.

  ಪ್ರತ್ಯುತ್ತರಅಳಿಸಿ
 3. ಸರ್, ನಿಮ್ಮ ಈ ಅಕ್ಕರೆಯ ಪ್ರತಿಕ್ರಿಯೆಗೆ ಮನಸ್ಸು ಮೂಕ ಮೂಕ..
  ಧನ್ಯವಾದಗಳು ಸರ್..

  ಪ್ರತ್ಯುತ್ತರಅಳಿಸಿ
 4. ಸುಂದರ ಲೇಖನ..
  ಬರೆಯುತ್ತಿರಿ.. ಮುಂದುವರೆಯಲಿ ಬರವಣಿಗೆ.
  ಓದುತ್ತಿರುತ್ತೇವೆ...
  ಓದಿ ಚಪ್ಪಾಳೆ ತಟ್ಟುತ್ತಿರುತ್ತೇವೆ...

  ಖುಷಿಯಾಯ್ತು ಕಣೆ...

  ಪ್ರತ್ಯುತ್ತರಅಳಿಸಿ
 5. ಧನ್ಯವಾದಗಳು ಚಿನ್ಮಯ್...ಪ್ರೋತ್ಸಾಹ ಹೀಗೆ ಇರಲಿ...

  ಪ್ರತ್ಯುತ್ತರಅಳಿಸಿ
 6. ಮನದ ಸಸಿಗೆ ನೀರೆರೆಯಬೇಕು ಎಂದು ಕಾಡಲ್ಲಿ ಕುಳಿತಾಗ ಇಂತಹ ಒಂದು ಲೇಖನದ ಝರಿ ಮನಸಿಗೆ ಮುದ ಕೊಡುತ್ತದೆ..ಮನಸೋತಾಗ ಸಾಂತ್ವನ ಹೇಳುವ ಮಾತಿನ ಬದಲು ಮನಸ್ಸನ್ನು ಬಡಿದು ಅದನ್ನು ಹುರಿ ಮಾಡಿ ಮುನ್ನುಗುವಂತೆ ಮಾಡುವ ಲೇಖನಗಳು ಹಾಡುಗಳು ಸದಾ ಯಶಸ್ಸಿನತ್ತ ಒಯ್ಯುತ್ತದೆ.ಅಭಿನಂದನೆಗಳು ಪಿ ಎಸ್ ಸುಂದರ ಲೇಖನ...

  ಪ್ರತ್ಯುತ್ತರಅಳಿಸಿ
 7. ಚೆನ್ನಾಗಿದೆ ಬರಹದ ಶೈಲಿ. ಇನ್ನೂ ಹೆಚ್ಚಿನ ವಿಧದ ವಸ್ತುಗಳು ಬರಹದಲ್ಲಿರಲಿ ಎಂದು ಹಾರಯಿಕೆ.

  ಪ್ರತ್ಯುತ್ತರಅಳಿಸಿ
 8. ಸುಶ್ಮಾ, ಚನ್ನಾಗಿದೆ ಲೇಖನ.. ವಿಕ ಲೇಖನಕ್ಕೆ ಅಭಿನಂದನೆಗಳು..

  ಪ್ರತ್ಯುತ್ತರಅಳಿಸಿ
 9. baduke haage alwa? ,,,nireekshe hosatalla ,,niraseyooo hosatalla! ,,,nireekshegalellaa kai serali ,,,nice one

  ಪ್ರತ್ಯುತ್ತರಅಳಿಸಿ
 10. ಎಲ್ಲೊ ಒಂದು ಕಡೆ ಬದುಕು ಕಲಿಸಿದ ಪಾಠ, ಬರಹವಾಗಿ ಹರಿದಾಗ ನಮ್ಮಲ್ಲೋ ಇತರರಲ್ಲೋ ಜಾರಿದ ಕನಸುಗಳನ್ನು ಮತ್ತೆ ತಮ್ಮ ಅಂಗೈಯೊಳಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಬಹುದು..ಇಂತಹ ಸಾದ್ಯತೆ ಸಾದ್ಯವಾದರೆ ಬರಹ ಸಾರ್ಥಕವಾದಂತೆ.. ಶ್ರೀ ಅಣ್ಣಯ್ಯ, ನಿಮ್ಮ ಮೆಚ್ಚುಗೆಯ ನುಡಿಗೆ ನಾನು ಅಭಾರಿ.. :)

  ಕಿಟ್ಟಣ್ಣ.. ನಿಮ್ಮ ಸಲಹೆ ಸೂಚನೆಗಳೇ ನನಗೆ ದಾರಿದೀಪ..ನೀವು ಹೇಳಿದ ರೀತಿಯಲ್ಲಿ ಪ್ರಯತ್ನಿಸುತ್ತೇನೆ..
  ಧನ್ಯವಾದಗಳು.. :)

  ಅಜಾದ್ ಸರ್ ಪ್ರತಿಕ್ರಿಯೆಗಾಗಿ ಧನ್ಯವಾದಗಳು.. ನಿಮ್ಮ ಬೆಂಬಲ ಸದಾ ಜೊತೆಗಿರಲಿ. :)

  ಭಾಗ್ಯ.. ನಿನ್ನ ಹಾರೈಕೆಗೆ ಥ್ಯಾಂಕ್ಸ್ ಅ ಲಾಟ್ ಕಣೆ..
  ಹೀಗೆ ಪ್ರತಿಕ್ರಿಯಿಸುತ್ತಿರು..ನನ್ನ ಖುಷಿ ಅದು.. :)

  ಪ್ರತ್ಯುತ್ತರಅಳಿಸಿ