ಬುಧವಾರ, ಡಿಸೆಂಬರ್ 26, 2012

ನುಣುಚಿಕೊಳ್ಳೋದೆ ಜೀವನವಾ..?!

ಇತ್ತೀಚಿಗೆ ಸ್ನೇಹಿತರ ದ್ವಿಚಕ್ರ ವಾಹನಕ್ಕೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿರುವಾಗ ಒಂದಷ್ಟು ಜನರು ಘಳಿಗೆಯೊಳಗೆ ಸುತ್ತಲು ಗುಂಪುಗಟ್ಟಿ ನೆರೆದರಾದರೂ ಯಾರೊಬ್ಬರೂ ಸಹಾಯಕ್ಕೆ ಮುಂದಾಗಲಿಲ್ಲ..ಆಮೇಲೆ ಅವರೇ ತನ್ನ ಸೆಲ್ ಫೋನ್ ಸಹಾಯದಿಂದ ತಮ್ಮ ಹೆಂಡತಿಗೆ ಕರೆ ಮಾಡಿ  ಆಸ್ಪತ್ರೆಗೆ ಹೋಗಬೇಕಾಯಿತು.ಎಲ್ಲ ಕುತೂಹಲದಿಂದ ದಿಟ್ಟಿಸುತ್ತಿದ್ದರೇ ವಿನಃ ಕೂಗಿ ಕರೆದರೂ ಹತ್ತಿರ ಬಂದು ಆಸ್ಪತ್ರೆಗೆ ಸಾಗಿಸುವ ಮಾನವೀಯತೆ ತೋರಿಸಲಿಲ್ಲ ಎಂದು ಸ್ನೇಹಿತರು ಬೇಸರಿಸುತ್ತಾರೆ.ಇಂತಹ ಅದೆಷ್ಟೋ ಘಟನೆಗಳು ದಿನನಿತ್ಯದ ಜೀವನದಲ್ಲಿ ನಡೆದು ಹೋಗಿದೆ. ಒಬ್ಬ ಮುಂದೆ ಬಂದು ಕಾಪಾಡಿದ್ದರೂ ಪ್ರಾಣ ಉಳಿಯಬಹುದಾಗಿದ್ದ ಉದಾಹರಣೆಗಳಿವೆ.ಆದರೆ ಅಂತಹ ಅಂತಃಕರಣ ಇಂದು ಕಣ್ಮರೆಯಾಗಿದೆ.ಹಾಗೊಮ್ಮೆ ಸಹಾಯಕ್ಕೆ ಹೋಗಿ, ಮುಂದೆ ಕೇಸು, ಕೋರ್ಟುಗಳ ಕಿರಿಕಿರಿಯಲ್ಲಿ ನಲುಗಲು ಯಾರೂ ತಾಯಾರಿರುವುದಿಲ್ಲ. ಅದಕ್ಕಾಗಿ ದೂರ ದೂರವೇ ಉಳಿದುಬಿಡುತ್ತಾರೆ. ನಾಗರೀಕ ಪ್ರಜ್ಞೆ ಅಳಿದು, ಸ್ವಾರ್ಥ ಮಾತ್ರ ಉಳಿದಿರುವುದಕ್ಕೆ ಇದು ಪುರಾವೆಯಾಗಿ ನಿಲ್ಲುತ್ತದೆ. ನನ್ನದೇ ರೂಂ ನಲ್ಲಿ ಚಳಿ ಜ್ವರ ಬಂದು ನಾನು ಮಲಗಿದ್ದಾಗ ಸೆಖೆ ಎಂದು ಜೋರು ಫ್ಯಾನ್ ಹಾಕಿ ಮಲಗುತ್ತಿದ್ದರು ರೂಂ ಮೇಟ್ಸ್...ಒಂದೇ ರೂಂ ಶೇರ್ ಮಾಡಿಕೊಂಡಿದ್ದರೂ ಕಡೇಪಕ್ಷ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೂ ಕರುಣೆ ಸಹಿತ ತೋರಿಸುವುದಿಲ್ಲ..ಬಸ್ ನಲ್ಲಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಎಂದು ಮೀಸಲಾದ ಸೀಟುಗಳನ್ನು ನಾವೇ ಬಾಚಿಕೊಂಡು ಅವರು ಬಂದು ನಿಂತಿರುವಾಗಲೂ 'ಸೀಟ್' ಬಿಟ್ಟು ಕೊಡದೇ ನಾವು ಭಾರತೀಯರೆಂದು ತೋರಿಸಿಕೊಳ್ಳುತ್ತೇವೆ.ತೀರಾ ಆಪ್ತರ ಮನೆಯಲ್ಲಿ ಏನೋ ಕಷ್ಟ, ಅಥವಾ ಸಾವು ಏನೇ ಸಂಭವಿಸಿದ್ದರೂ ಅವರ ದುಃಖಕ್ಕೆ ಹೆಗಲಾಗೋ ಮನೋಭಾವ ನಮ್ಮಲ್ಲಿಲ್ಲ. ಕೊನೆಪಕ್ಷ ಫೋನ್ ಮಾಡಿ ವಿಚಾರಿಸೋ ಸೌಜನ್ಯ ಕೂಡ ಇರುವುದಿಲ್ಲ.ಅಂಗವಿಕಲರೊ, ವೃದ್ದರೋ ರಸ್ತೆ ದಾಟುತ್ತಿದ್ದರೆ ಒಂದಿಷ್ಟು ಸಹಾಯ ಮಾಡೋ ಮನಸ್ಸು ಬರುವುದಿಲ್ಲ. ನಮ್ಮ ಪಕ್ಕದ ಮನೆಯಲ್ಲೇ ಯಾರೋ ದೌರ್ಜನ್ಯಕ್ಕೆ ಒಳಗಾದರೆಂದು ಗೊತ್ತಿದ್ದರೂ ಅವರ ಪರ ನಿಂತು ಧೈರ್ಯ ತುಂಬುವ ಇಚ್ಛೆ ನಮ್ಮದಾಗಿರುವುದಿಲ್ಲ.ಹೀಗೆ ಇಂದಿನ ಮಾನವನ ಕಠಿಣ ಅಂತಃಕರಣದ ಅನಾವರಣ ಮಾಡುತ್ತಾ ಹೋಗುತ್ತದೆ.

ಎಲ್ಲರೂ ಬುದ್ದಿಜೀವಿಗಳೇ..! ನಾಗರೀಕ ಪ್ರಜ್ಞೆ ಬಗ್ಗೆ ತಾಸುಗಟ್ಟಲೆ ಮಾತನಾಡಬಲ್ಲೆವು. ಕುಸಿಯುತ್ತಿರುವ, ಮಾನವೀಯ ಮೌಲ್ಯಗಳ ಬಗ್ಗೆ ಅನುಕಂಪ ತೋರಿಸಬಲ್ಲೆವು. ಇಂದಿನ ಯುವಜನಾಂಗವನ್ನು ಬೊಟ್ಟು ಮಾಡಿ ತೋರಿಸಬಲ್ಲೆವು..ಪ್ರೀತಿ, ಪ್ರೇಮ, ಕರುಣೆ, ಸಹಾಯ ಮಾಡುವ ಮನೋಭಾವ ಯಾರಲ್ಲೂ ಇಲ್ಲವೆಂದು ದೂರಬಲ್ಲೆವು. ಆದರೆ ಅಂತಹ ಪರಿಸ್ಥಿತಿ ನಮ್ಮಲ್ಲೇ ಬಂದಾಗ ಅಷ್ಟೇ ತಣ್ಣಗೆ ಕಳಚಿಕೊಳ್ಳುವ ಚಾಲಾಕಿತನನೂ ನಮ್ಮಲ್ಲಿದೆ. ಬಹುಶಃ ಇದು ಮುಂದೆ ಬರಬಹುದಾದ ಅಪಾಯವನ್ನು ಗ್ರಹಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮುಂಜಾಗ್ರತಾ ವಿಧಾನವೂ ಆಗಿದೆ. ಹಾಗೆಂದು ಕಣ್ಣೆದುರೇ ಒಬ್ಬ ವ್ಯಕ್ತಿ ಸಾಯುತ್ತಿದ್ದರೂ ಸುಮ್ಮನೆ ನೋಡುವುದು ಅದೆಂತಹ ಸಂಸ್ಕೃತಿ? ಮನ ಕಲುಕಬಹುದಾದ ಸನ್ನಿವೇಶದಲ್ಲೂ ನಾವು ನಮ್ಮ ಪಾಡಿಗೆ ಎದ್ದು ಹೋಗಬಲ್ಲೆವೆಂದರೆ ನಮ್ಮಲ್ಲಿ "ನಾಗರಿಕ ಪ್ರಜ್ಞೆ ಮತ್ತು ಮಾನವೀಯತೆ" ಯಂತಹ ವಿಷಯಗಳು ಅದೆಷ್ಟು ಅರ್ಥ ಕಳೆದುಕೊಂಡಿದ್ದಿರಬೇಕು? ನಾನು ನನ್ನದು ಎಂಬ ಮನುಷ್ಯನ ಇಂದಿನ ನೀತಿ ಅವನ ಮಟ್ಟಿಗೆ ತಕ್ಕುದೇ ಆದರೂ ಸಮಾಜದಲ್ಲಿರೋ ಅವನಿಗೆ ಅಲ್ಪವಾದರೂ ನಾಗರೀಕ ಪ್ರಜ್ಞೆ, ಮಾನವೀಯ ಮೌಲ್ಯಗಳು ಇರಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತೆ ಆಗಬಾರದಲ್ಲ? ಪ್ರಜ್ಞಾವಂತ ನಾಗರೀಕ ಎಂದು ಹೇಳಿಸಿಕೊಂಡರೆ ಸಾಲುವುದಿಲ್ಲ.. ಅದಕ್ಕೆ ಪೂರಕವಾಗಿ ನಮ್ಮ ಕೆಲಸಗಳಿರಬೇಕು..ಪ್ರಜೆ ಬದಲಾದರೆ ಸಹಾಯ ಮಾಡಿದವರನ್ನೇ ರುಬ್ಬುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ದೋಷದ ನೀವಾರಣೆಯೂ ಆಗಬಹುದು..ಇದರಿಂದ ಮುಂದೆ ಮತ್ತಷ್ಟು ಜನ ಮಾನವೀಯತೆ ಮೆರೆಯಬಹುದು. ಅದಕ್ಕೆ ನಾವು ನೀವೆಲ್ಲರೂ ಮನಸ್ಸು ಮಾಡಬೇಕು. ಒಂದಿಷ್ಟು ಮಾನವೀಯ ಮೌಲ್ಯಗಳನ್ನು, ನಾಗರೀಕ ಪ್ರಜ್ಞೆಗಳನ್ನು ಮನಸ್ಸಿನೊಳಕ್ಕೆ ಎಳೆದುಕೊಳ್ಳಬೇಕು.
ಅಂತೆಯೇ ನಡೆದುಕೊಳ್ಳಬೇಕು.

===============================================

೨೫-೧೨-೨೦೧೨ ರ ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ... :)
6 ಕಾಮೆಂಟ್‌ಗಳು:

 1. ಉತ್ತಮ ಲೇಖನ ಸುಷ್ಮಾ,ನಿನ್ನೆ ಪತ್ರಿಕೆಯಲ್ಲಿ ಓದಿದೆ...ಅಭಿನಂದನೆಗಳು....ಇತ್ತೀಚಿಗೆ ಯುವ ಬರಹಗಾರರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಗೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ...

  ಅಂದ ಹಾಗೆ ನುಣುಚಿಕೊಳ್ಳುವುದು ಮನುಷ್ಯನ ಸ್ವಾಭಾವಿಕ ಗುಣ... ಎಲ್ಲೋ ಕೆಲವರು ರಿಸ್ಕ್ ತೆಗೆದು ಕೊಂಡು ಸಹಾಯಕ್ಕೆ ಧಾವಿಸುತ್ತಾರೆ ಅಷ್ಟೇ...

  ಪ್ರತ್ಯುತ್ತರಅಳಿಸಿ
 2. ಪಿ.ಎಸ್. ತುಂಬಾ ವಾಸ್ತವವಾದ ಲೇಖನ. ಜನರಲ್ಲಿ ಸಹಾಯ ಹಸ್ತ ಚಾಚುವ ಗುಣ ಕಡಿಮೆ ಆಗಿದೆ ಈ ನಾಗರೀಕ ಸಮಾಜದಲ್ಲಿ ಅದು ನಗರ ಪ್ರದೇಶದಲ್ಲಿ..ಅದಕ್ಕೆ ಕಾರಣ ಈ ಮಾಧ್ಯಮಗಳು, ಹಾಗು ಇನ್ನಿತರ ನ್ಯಾಯಾಂಗ ಅಂಗಗಳು. ಯಾರನ್ನೋ ಉಳಿಸಲು, ರಕ್ಷಿಸಲು, ಸಹಾಯ ಹಸ್ತ ನೀಡಿದವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು, ಹಿಂಸೆ ಮಾಡುವುದು, ಮಾನಸಿಕವಾಗಿ ಕಾಟಕೊದುವುದು ಹೀಗೆ...ಅಥವಾ ದುಡ್ಡು, ಭಯ ಅಥವಾ ಬೇರೆ ಏನು ಕಾರಣಗಳಿಂದ ಅಪಘಾತಕ್ಕೆ ಒಳಗಾದವರು, ಅಥವಾ ತೊಂದರೆಗೆ ಒಳಗಾದವರು ದೋಸೆ ತಿರುವಿದಂತೆ ತಮ್ಮ ಹೇಳಿಕೆ ಗಳನ್ನೂ ಬದಲಿಸಿ ಸಹಾಯಾ ಮಾಡಿದವರಿಗೆ ಕೇಡು ಮಾಡುವುದು ಈ ಕಾರಣಗಳಿಂದ ಸುಶಿಕ್ಷಿತ ಸಮಾಜದಲ್ಲಿ ಸಹಾಯ ಹಸ್ತ ಚಾಚಲು ಹಿಂದೆ ಮುಂದೆ ನೋಡುತ್ತಾರೆ..ಹಳ್ಳಿಯ ಕಡೆ ಈಗಲೂ ಕೂಡ ಆ ಮಾನವೀಯತೆ ಕಳೆದು ಹೋಗಿಲ್ಲ..ಎನ್ನುವುದು ಸಂತಸದ ಸಂಗತಿ..ಸುಂದರ ವಿಚಾರವನ್ನು ಹೆಕ್ಕಿ ತೆಗೆದು ಹರಡಿದ ನಿಮ್ಮ ಲೇಖನ ಅಭಿನಂದನೀಯ ಪಿ.ಎಸ್!

  ಪ್ರತ್ಯುತ್ತರಅಳಿಸಿ
 3. ಅತ್ಯುತ್ತಮ ಶೀರ್ಷಿಕೆ. ಆ ದಿನವೇ ನಾನು ಪತಿಕೆಯಲ್ಲಿ ಓದಿದ್ದೆ ಬ್ಲಾಗಿಗೆ ಬರಲು ತುಸು ತಡವಾಯಿತು.

  ಹೀಗೆ ಬರೆಯುತ್ತಿರು ಯಾವಾಗಲೂ...

  ಪ್ರತ್ಯುತ್ತರಅಳಿಸಿ
 4. ಏಯ್ ಚೆನಾಗಿದೆ ಕಣೆ...
  ಬಹಳ ನಿಜವಾದ ವಿಷಯ ಅದು...
  ಬರಿತಾ ಇರು..
  ಓದೊದೊಂದೆ ನಮ್ ಕೆಲ್ಸಾ..
  ಖುಷಿಯಾಯ್ತು...
  ಮುಂದೊಂದು ದಿನ ನಿಂಗೇ ಒಂದು ಅಂಕಣ ಬರೆಯುವ ಅವಕಾಶ ಸಿಗಲಿ..:)
  ನಮಸ್ತೆ :)

  ಪ್ರತ್ಯುತ್ತರಅಳಿಸಿ
 5. ತುಂಬಾ ಉತ್ತಮ ಲೇಖನ.. ಪತ್ರಿಕೆಯಲ್ಲಿ ಪ್ರಕಟವಾದದ್ದಕ್ಕೆ ಶುಭಾಷಯ ಕೋರುವುದರ ಜೊತೆಗೆ....
  ನಾವು ಮಾನವರು ಮಾನವೀಯ ಮೌಲ್ಯದ ಬಗ್ಗೆ
  ಪತ್ರಿಕೆಯಲ್ಲಿ ಓದಿ ತಿಳಿದುಕೊಳ್ಳಬೇಕಾದಂತಹ ಪರಿಸ್ಥಿತಿ...
  ನಿಜಕ್ಕೂ ಬೇಸರದ ಸಂಗತಿ ಅಲ್ವಾ...?
  ಇನ್ನು ಮುಂದಾದರೂ ಅಷ್ಟಷ್ಟಾಗಿ ಬದಲಾಗೋಣ...

  ಆದರೂ ಸುಷ್ಮಾ.....
  ಆತ್ಮ ಸಾಕ್ಷಿ ಅನ್ನೋದು ಇರುತ್ತಲ್ವಾ? ಅದರಿಂದ ನುಣುಚಿಕೊಳ್ಳೊದು ಕಷ್ಟ ಅಲ್ವಾ?


  ಪ್ರತ್ಯುತ್ತರಅಳಿಸಿ
 6. ಧನ್ಯವಾದಗಳು ಗಿರೀಶ್ ಸರ್, ಶ್ರೀ ಅಣ್ಣಯ್ಯ, ಬದರಿ ಸರ್, ಚಿನ್ಮಯ್ & ರಾಘವ್ ಸರ್..
  ಹೀಗೆ ಬರುತ್ತಿರಿ.. ನಿಮ್ಮ ಸಲಹೆ ಸೂಚನೆಗಳು ನನಗೆ ದಾರಿದೀಪ.

  ಪ್ರತ್ಯುತ್ತರಅಳಿಸಿ