ಸೋಮವಾರ, ಜನವರಿ 7, 2013

ನಿಮಗೇ ಪತ್ವಾ ಹೊರಡಿಸೋಣವೇ.?

ಅದೊಂದು ಬಗೆಯ ವಿಚಿತ್ರ ಮನಸ್ಥಿತಿ, ಹುಡುಗಿಯರೆಂದರೆ ಹೀಗೆ ಇರಬೇಕೆಂದು ಕಟ್ಟಲೆಗಳನ್ನು ಅವರ ಮೇಲೆ ಗಾಢವಾಗಿ ಹೇರಲು ಆರಂಭಿಸುವ ಸಮಯ..ಅದು ಪಿಯುಸಿ ಗೆ ಕಾಲಿಟ್ಟ ಹೊತ್ತು. ಮೊಬೈಲಿನ ಬಗ್ಗೆ ಅದೇನೋ ಸಹಜ ಕುತೂಹಲ. ಅಪ್ಪನ ಮೊಬೈಲ್ ಹಿಡಿದು ಫ್ರೆಂಡ್ಸ್ ನಂಬರ್ ತೆಗೆದುಕೊಂಡು ಮೆಸೇಜ್ ಕಳಿಸಿ ಅವರ ರಿಪ್ಲೈ ಗಾಗಿ ಕಾಯೋ ಕ್ರೇಜ್ ನ ಕಾಲ. ಒಮ್ಮೆ ಯಾರೋ ನನಗಾಗಿ  ಕಾಲ್ ಮಾಡಿದ್ದರೆ ಅವತ್ತು ಸಂಭ್ರಮವೇ ಸಂಭ್ರಮ. ಅಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ಮುಗ್ದ ಖುಷಿಯೊಂದನ್ನು ಬಿಟ್ಟು. ಇಂತಹ ಹೊತ್ತಿನಲ್ಲೇ, "ಮಗಳ ಕೈಗೆ ಮೊಬೈಲ್ ಕೊಟ್ಟು ಅವಳನ್ನು ಹಾಳು ಮಾಡುತ್ತಿದ್ದಾನೆ, ಹುಡುಗಿಯರಿಗೆ ಇಂತದ್ದೆಲ್ಲಾ ಕೊಟ್ಟರೆ ಅವಳು ಮುಂದೆ ನಿಮ್ಮ ಮರ್ಯಾದೆ ತೆಗೆಯದೆ ಬಿಡುವುದಿಲ್ಲ ಬರೆದಿಟ್ಟುಕೊಳ್ಳಿ..." ಸಂಬಂಧಿಯೋರ್ವರ (ಅವರು ಕೂಡ ಹೆಣ್ಣೇ) ಮಾತುಗಳು ಅಪ್ಪನ ಜೊತೆ ಹೀಗೆ ಸಾಗಿತ್ತು..ನನ್ನ ಕಣ್ಣಲ್ಲಿ ಕಾವೇರಿ. ಹೆಣ್ಣು ಮಕ್ಕಳನ್ನು ಎಲ್ಲಿ ಇಟ್ಟಿರಬೇಕೋ ಅಲ್ಲೇ ಇಡಬೇಕು ಇಲ್ಲವಾದರೆ ಕೈ ಜಾರುತ್ತಾರೆ ಅನ್ನುವ ಅವರ ವಾದಕ್ಕೆ ಬೆಲೆ ಸಿಕ್ಕಿತ್ತು. ಅವತ್ತು ಮನದೊಳಗೆ ಶುರುವಾದ ಯುದ್ಧ ಇನ್ನೂ ನಿಂತಿಲ್ಲ.. ಹತಾಶೆ, ಕೋಪ ಮರೆಯಾಗಿಲ್ಲ.ಇದು ಒಬ್ಬಳ ಕತೆಯಲ್ಲ ಪ್ರತಿದಿನ ಇಂತಹ ನೂರಾರು ಕತೆಗಳು ನಡೆಯುತ್ತದೆ. ಎಳೆಯ ವಯಸ್ಸಿನಲ್ಲೇ ಹೀಗೆ ಮಹಿಳೆಯನ್ನು ಹತ್ತಿಕ್ಕುವ ಘನಕಾರ್ಯ(!) ಆರಂಭವಾಗುತ್ತದೆ.ಬಾಲ್ಯದಿಂದಲೂ ಹೆಣ್ಣೆಂದರೆ ಹೀಗೆ ಇರಬೇಕು ಎಂದು ಮನೆಯಲ್ಲಿ ನೀತಿ ಪಾಠ, ಆಕೆ ತನ್ನಿಷ್ಟದ ಉಡುಗೆ ತೊಡುವಂತಿಲ್ಲ, ಮೊಬೈಲು, ಇಂಟರ್ನೆಟ್ ಗಳಲ್ಲಿ ಆಕೆ ಇದ್ದರೆ ಆಕೆ ಅದೇನು ಮಾಡುತ್ತಿದ್ದಾಳೆ ಎನ್ನುವಲ್ಲಿ ಇಣುಕುವ ಸಮಾಜದ ಕೆಟ್ಟ ಕುತೂಹಲ, ಇದರ ಮದ್ಯ ಆಕೆಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆಂದು ಹೇಳುತ್ತಲೇ ಬೆನ್ನ ಹಿಂದೆಯಿಂದ ಚೂರಿ ಹಾಕುವ ಜನರು ಆಕೆಯ ಸುತ್ತ ಇರುವಾಗ ಆಕೆಗೆ ರಕ್ಷಣೆ ಎಲ್ಲಿಯದು? ಸಮಾಜವನ್ನು ಪ್ರಶ್ನಿಸುತ್ತಾ ಹೋದಷ್ಟು ನೀತಿಗೆಟ್ಟವಳೆಂದು ಪುರುಷ ಪ್ರಧಾನ ಸಮಾಜ ಆಕೆಯ ತಲೆಗೆ ಕಟ್ಟುವ ಕೀರಿಟ,ಶೋಷಣೆಗೆ ಒಳಗಾದರೆ  ನಾಲ್ಕು ದಿನ ಹೋರಾಟ, ಘೋಷಣೆಗಳು, ಮಂತ್ರಿಗಳಿಗೆ ಅರ್ಜಿ.. ಎಂದು ಓಡಾಡಿ ಆಮೇಲೆ ತಣ್ಣಗಾಗುವ ಮಹಿಳಾ ಸಂಘಟನೆಗಳು, ಒಳಗಿನ ರೋಷವನ್ನು ಹತ್ತಿಕ್ಕಲಾರದೇ, ನ್ಯಾಯವೂ ಸಿಗದೇ ಒಳಗೊಳಗೇ ಕುದ್ದು ಹೋಗುವ ಸಮಾಜದ ಪ್ರತಿಯೊಬ್ಬ ಮಹಿಳೆಯೂ ಕೂಡ ಶೋಷಿತಳೇ.

ಇಷ್ಟೆಲ್ಲಾ ಯಾಕೆ ಬರೆಯಬೇಕಾಯಿತೆಂದರೆ ದಿನೇದಿನೇ ಹೆಚ್ಚುತ್ತಿರುವ ಅತ್ಯಾಚಾರಗಳ ಕಾರಣದಿಂದಾಗಿ ಬಿಹಾರದ ಪಂಚಾಯಿತಿಯೊಂದು ಹೆಣ್ಣು ಮಕ್ಕಳಿಗೆ ಮೊಬೈಲ್, ಪ್ಯಾಶನ್ ಉಡುಗೆಗಳನ್ನು ನಿಷೇಧಿಸಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಹಗಲು ದೌರ್ಜನ್ಯ ನಡೆಯುತ್ತಿರುವುದಕ್ಕೆ ಇದು ಕೈಗನ್ನಡಿಯಾಗಿ ನಿಲ್ಲುತ್ತದೆ. ಅತ್ಯಾಚಾರದ ಪ್ರಕರಣಗಳಲ್ಲಿ ಶೋಷಿತರಾಗಿರುವುದು,ಅವಮಾನ, ಅಪಮಾನ, ಸಾವು -ನೋವುಗಳನ್ನು ಅನುಭವಿಸಿರುವವರು ಮಹಿಳೆಯರು.. ಜೊತೆಗೆ ಇಂತಹ ಕಾನೂನು ಕಟ್ಟಲೆಗಳನ್ನು ರೂಪಿಸುವುದು ಕೂಡ ಮಹಿಳೆಯರಿಗೆನೇ. ಅಮಾನುಷವಾಗಿ ಅಮಾಯಕ ಹೆಣ್ಣುಗಳನ್ನು ಬಲಿ ತೆಗೆದುಕೊಂಡ ಭೂಪರು ಮಾತ್ರ ಯಾವುದೇ ಕಾನೂನು ರೀತ್ಯಾ ಶಿಕ್ಷೆಗಳಿಗೆ ಒಳಗಾಗದೆ ರಾಜರೋಷವಾಗಿದ್ದಾರೆ. ಆ ಮೂಲಕ ಸಮಾಜಕ್ಕೆ ಇಂತಹ ಅನ್ಯಾಯಗಳು ನಡೆದರೂ ಶಿಕ್ಷೆ ದೊರಕುವುದಿಲ್ಲ, ತಾವು ಸೇಫ್ ಎನ್ನುವ ಸಂದೇಶ ರಾವಾನಿಸುತ್ತಿದ್ದಾರೆ. ನಮ್ಮ ಕಾನೂನು ವ್ಯವಸ್ಥೆ ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆ.ಅಪರಾಧಿಗಳಿಗೆ ತಕ್ಕ ಶಿಕ್ಷೆ ಜಾರಿ ಮಾಡಿ, ಇಂತಹ ಹೆಣ್ಣುಬಾಕರಿಗೆ ಉತ್ತರ ನೀಡುವ ಬದಲು ಪ್ರಜಾಪ್ರಭುತ್ವ ವ್ಯವಸ್ಥೆ ಮಹಿಳಾ ಸಮಾಜವನ್ನು ಬಂಧಿಯಾಗಿಸುವ ಮತ್ತು ಆ ರೀತಿಯಲ್ಲಿ ಮತ್ತೆ ಆಕೆಯನ್ನು ನಾಲ್ಕು ಗೋಡೆಗಳ ಮದ್ಯೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೌರ್ಜನ್ಯ ಪುರುಷರಿಂದ  ಆಗಿದ್ದರೂ ಶಿಕ್ಷೆ ಮಾತ್ರ ಮಹಿಳೆಯರೇ ಅನುಭವಿಸುತ್ತಿದ್ದಾರೆ.

ಅತ್ಯಾಚಾರವನ್ನು ತಡೆಯಲು ಎಂಬ ಕಾರಣವಿಟ್ಟುಕೊಂಡು ಮೊಬೈಲ್, ಪ್ಯಾಶನ್ ಉಡುಗೆಗಳನ್ನು ನಿಷೇಧಿಸಿ ಆಕೆಯನ್ನು ಬಂಧಿಯಾಗಿಸುವ ಕಾನೂನಿನಲ್ಲಿ ಯಾವುದೇ ಹುರುಳಿಲ್ಲ. ಆ ರೀತಿ ಆದಲ್ಲಿ, ಮುಂದೆ ಅನ್ಯಾಯಗಳು ನಾಲ್ಕು ಗೋಡೆಯ ಮದ್ಯೆ ಸತ್ತು ಹೋಗುವ ಪ್ರಮೇಯವೇ ಹೆಚ್ಚು. ಮೊಬೈಲ್ ನಿಂದ, ಇಂಟರ್ನೆಟ್ ನಿಂದ ಅಥವಾ ಉಡುಗೆ ತೊಡುಗೆಯಿಂದ ಖಂಡಿತಾ ಇಂತಹ ಪ್ರಕರಣಗಳು ಜರುಗಿಲ್ಲ..ಅದು ಆಗಿರುವುದು ಗಂಡಸಿನ ದುಷ್ಟತನದಿಂದ, ಆತನೊಳಗಿನ ಕ್ರೌರ್ಯದಿಂದ. ಈ ದುಷ್ಟತನಕ್ಕೆ ತಕ್ಕ ಉತ್ತರ ನೀಡಬೇಕೇ ಹೊರತು ಮಹಿಳೆಯ ಸ್ವಾತಂತ್ರ್ಯ ಹರಣ ಮಾಡುವುದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಕ್ಕುದಲ್ಲ. ಮಹಿಳೆಗೆ ಅನ್ಯಾಯವದಂತಹ  ಪ್ರಕರಣಗಳಲ್ಲಿ ವೇಗವಾಗಿ ಶಿಕ್ಷೆ ಆದರೆ ಅತ್ಯಾಚಾರಗಳಂತಹ  ಹೇಯ ಕೃತ್ಯಗಳ ಕೊನೆಯಾಗಬಹುದು, ದೌರ್ಜನ್ಯಕ್ಕೆ ಒಳಗಾಗಿ ಸಮಾಜದ ರೀತಿ ರಿವಾಜುಗಳಿಗೆ ಹೆದರಿ ಎಲ್ಲೊ ಒಂದು ಕಡೆಯಿಂದ ಅಪರಾಧಿಗಳಿಗೆ ರಕ್ಷಣೆ ಒದಗಿಸಿ, ಅಪರಾಧವನ್ನು ಬಚ್ಚಿಟ್ಟಿದ್ದ ಸ್ತ್ರೀ ಕೂಡ ಧೈರ್ಯವಾಗಿ ಮುಂದೆ ಬಂದು ತನಗಾದ ಅನ್ಯಾಯವನ್ನು ಕಾನೂನಿನ ಮುಂದೆ ಇಟ್ಟು ನ್ಯಾಯ ಪಡೆಯಬಹುದು. ಜೊತೆಗೆ ಸ್ತ್ರೀ ಗೆ ತನ್ನ ಕುಟುಂಬದವರ ಸಹಕಾರ ಅಗತ್ಯ . ಚುಚ್ಚು ಮಾತುಗಳ ಬದಲಾಗಿ, ಧೈರ್ಯ ಹೇಳುವ, ಕಷ್ಟಕ್ಕೆ ಹೆಗಲಾಗುವವರಾಗಿದ್ದರೆ ಆಕೆ ಸಬಲೆಯಾಗಿ ಅನ್ಯಾಯದ ವಿರುದ್ಧ ಹೋರಾಡುವುದರಲ್ಲಿ ಸಂಶಯವಿಲ್ಲ. ಅಂತಹ ಬೆಂಬಲ ಮನೆಯ ವಾತಾವರಣದಲ್ಲಿ ಸಿಗಬೇಕು. ಭಯ ಇದ್ದಲ್ಲಿ ಮಾತ್ರ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಆಗಲು ಸಾದ್ಯ. ಅಂತಹ ಭಯದ ನಿರ್ಮಾಣ ಕಾನೂನಿಂದ ಆಗಬೇಕು. ದೇಶ, ಕಾನೂನು, ನಾಗರೀಕರು ಆರೋಗ್ಯ ಪೂರ್ಣ ಸಮಾಜಕ್ಕಾಗಿ ಶ್ರಮಿಸಬೇಕು, ಸ್ತ್ರೀಯನ್ನು ಬಂಧಿಯಾಗಿಸುವಂತಹ ಕಾನೂನುಗಳು ಜಾರಿಯಾದರೆ ಖಂಡಿತಾ ಅದಕ್ಕೆ ಸ್ತ್ರೀ ಸಮಾಜದ ದಿಕ್ಕಾರವಿದೆ.  ==================================================================
೦೭-೦೧-೨೦೧೩ ರ ವಿಜಯಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ.. :)