ಸೋಮವಾರ, ಜನವರಿ 7, 2013

ನಿಮಗೇ ಪತ್ವಾ ಹೊರಡಿಸೋಣವೇ.?

ಅದೊಂದು ಬಗೆಯ ವಿಚಿತ್ರ ಮನಸ್ಥಿತಿ, ಹುಡುಗಿಯರೆಂದರೆ ಹೀಗೆ ಇರಬೇಕೆಂದು ಕಟ್ಟಲೆಗಳನ್ನು ಅವರ ಮೇಲೆ ಗಾಢವಾಗಿ ಹೇರಲು ಆರಂಭಿಸುವ ಸಮಯ..ಅದು ಪಿಯುಸಿ ಗೆ ಕಾಲಿಟ್ಟ ಹೊತ್ತು. ಮೊಬೈಲಿನ ಬಗ್ಗೆ ಅದೇನೋ ಸಹಜ ಕುತೂಹಲ. ಅಪ್ಪನ ಮೊಬೈಲ್ ಹಿಡಿದು ಫ್ರೆಂಡ್ಸ್ ನಂಬರ್ ತೆಗೆದುಕೊಂಡು ಮೆಸೇಜ್ ಕಳಿಸಿ ಅವರ ರಿಪ್ಲೈ ಗಾಗಿ ಕಾಯೋ ಕ್ರೇಜ್ ನ ಕಾಲ. ಒಮ್ಮೆ ಯಾರೋ ನನಗಾಗಿ  ಕಾಲ್ ಮಾಡಿದ್ದರೆ ಅವತ್ತು ಸಂಭ್ರಮವೇ ಸಂಭ್ರಮ. ಅಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ಮುಗ್ದ ಖುಷಿಯೊಂದನ್ನು ಬಿಟ್ಟು. ಇಂತಹ ಹೊತ್ತಿನಲ್ಲೇ, "ಮಗಳ ಕೈಗೆ ಮೊಬೈಲ್ ಕೊಟ್ಟು ಅವಳನ್ನು ಹಾಳು ಮಾಡುತ್ತಿದ್ದಾನೆ, ಹುಡುಗಿಯರಿಗೆ ಇಂತದ್ದೆಲ್ಲಾ ಕೊಟ್ಟರೆ ಅವಳು ಮುಂದೆ ನಿಮ್ಮ ಮರ್ಯಾದೆ ತೆಗೆಯದೆ ಬಿಡುವುದಿಲ್ಲ ಬರೆದಿಟ್ಟುಕೊಳ್ಳಿ..." ಸಂಬಂಧಿಯೋರ್ವರ (ಅವರು ಕೂಡ ಹೆಣ್ಣೇ) ಮಾತುಗಳು ಅಪ್ಪನ ಜೊತೆ ಹೀಗೆ ಸಾಗಿತ್ತು..ನನ್ನ ಕಣ್ಣಲ್ಲಿ ಕಾವೇರಿ. ಹೆಣ್ಣು ಮಕ್ಕಳನ್ನು ಎಲ್ಲಿ ಇಟ್ಟಿರಬೇಕೋ ಅಲ್ಲೇ ಇಡಬೇಕು ಇಲ್ಲವಾದರೆ ಕೈ ಜಾರುತ್ತಾರೆ ಅನ್ನುವ ಅವರ ವಾದಕ್ಕೆ ಬೆಲೆ ಸಿಕ್ಕಿತ್ತು. ಅವತ್ತು ಮನದೊಳಗೆ ಶುರುವಾದ ಯುದ್ಧ ಇನ್ನೂ ನಿಂತಿಲ್ಲ.. ಹತಾಶೆ, ಕೋಪ ಮರೆಯಾಗಿಲ್ಲ.ಇದು ಒಬ್ಬಳ ಕತೆಯಲ್ಲ ಪ್ರತಿದಿನ ಇಂತಹ ನೂರಾರು ಕತೆಗಳು ನಡೆಯುತ್ತದೆ. ಎಳೆಯ ವಯಸ್ಸಿನಲ್ಲೇ ಹೀಗೆ ಮಹಿಳೆಯನ್ನು ಹತ್ತಿಕ್ಕುವ ಘನಕಾರ್ಯ(!) ಆರಂಭವಾಗುತ್ತದೆ.ಬಾಲ್ಯದಿಂದಲೂ ಹೆಣ್ಣೆಂದರೆ ಹೀಗೆ ಇರಬೇಕು ಎಂದು ಮನೆಯಲ್ಲಿ ನೀತಿ ಪಾಠ, ಆಕೆ ತನ್ನಿಷ್ಟದ ಉಡುಗೆ ತೊಡುವಂತಿಲ್ಲ, ಮೊಬೈಲು, ಇಂಟರ್ನೆಟ್ ಗಳಲ್ಲಿ ಆಕೆ ಇದ್ದರೆ ಆಕೆ ಅದೇನು ಮಾಡುತ್ತಿದ್ದಾಳೆ ಎನ್ನುವಲ್ಲಿ ಇಣುಕುವ ಸಮಾಜದ ಕೆಟ್ಟ ಕುತೂಹಲ, ಇದರ ಮದ್ಯ ಆಕೆಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆಂದು ಹೇಳುತ್ತಲೇ ಬೆನ್ನ ಹಿಂದೆಯಿಂದ ಚೂರಿ ಹಾಕುವ ಜನರು ಆಕೆಯ ಸುತ್ತ ಇರುವಾಗ ಆಕೆಗೆ ರಕ್ಷಣೆ ಎಲ್ಲಿಯದು? ಸಮಾಜವನ್ನು ಪ್ರಶ್ನಿಸುತ್ತಾ ಹೋದಷ್ಟು ನೀತಿಗೆಟ್ಟವಳೆಂದು ಪುರುಷ ಪ್ರಧಾನ ಸಮಾಜ ಆಕೆಯ ತಲೆಗೆ ಕಟ್ಟುವ ಕೀರಿಟ,ಶೋಷಣೆಗೆ ಒಳಗಾದರೆ  ನಾಲ್ಕು ದಿನ ಹೋರಾಟ, ಘೋಷಣೆಗಳು, ಮಂತ್ರಿಗಳಿಗೆ ಅರ್ಜಿ.. ಎಂದು ಓಡಾಡಿ ಆಮೇಲೆ ತಣ್ಣಗಾಗುವ ಮಹಿಳಾ ಸಂಘಟನೆಗಳು, ಒಳಗಿನ ರೋಷವನ್ನು ಹತ್ತಿಕ್ಕಲಾರದೇ, ನ್ಯಾಯವೂ ಸಿಗದೇ ಒಳಗೊಳಗೇ ಕುದ್ದು ಹೋಗುವ ಸಮಾಜದ ಪ್ರತಿಯೊಬ್ಬ ಮಹಿಳೆಯೂ ಕೂಡ ಶೋಷಿತಳೇ.

ಇಷ್ಟೆಲ್ಲಾ ಯಾಕೆ ಬರೆಯಬೇಕಾಯಿತೆಂದರೆ ದಿನೇದಿನೇ ಹೆಚ್ಚುತ್ತಿರುವ ಅತ್ಯಾಚಾರಗಳ ಕಾರಣದಿಂದಾಗಿ ಬಿಹಾರದ ಪಂಚಾಯಿತಿಯೊಂದು ಹೆಣ್ಣು ಮಕ್ಕಳಿಗೆ ಮೊಬೈಲ್, ಪ್ಯಾಶನ್ ಉಡುಗೆಗಳನ್ನು ನಿಷೇಧಿಸಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಹಗಲು ದೌರ್ಜನ್ಯ ನಡೆಯುತ್ತಿರುವುದಕ್ಕೆ ಇದು ಕೈಗನ್ನಡಿಯಾಗಿ ನಿಲ್ಲುತ್ತದೆ. ಅತ್ಯಾಚಾರದ ಪ್ರಕರಣಗಳಲ್ಲಿ ಶೋಷಿತರಾಗಿರುವುದು,ಅವಮಾನ, ಅಪಮಾನ, ಸಾವು -ನೋವುಗಳನ್ನು ಅನುಭವಿಸಿರುವವರು ಮಹಿಳೆಯರು.. ಜೊತೆಗೆ ಇಂತಹ ಕಾನೂನು ಕಟ್ಟಲೆಗಳನ್ನು ರೂಪಿಸುವುದು ಕೂಡ ಮಹಿಳೆಯರಿಗೆನೇ. ಅಮಾನುಷವಾಗಿ ಅಮಾಯಕ ಹೆಣ್ಣುಗಳನ್ನು ಬಲಿ ತೆಗೆದುಕೊಂಡ ಭೂಪರು ಮಾತ್ರ ಯಾವುದೇ ಕಾನೂನು ರೀತ್ಯಾ ಶಿಕ್ಷೆಗಳಿಗೆ ಒಳಗಾಗದೆ ರಾಜರೋಷವಾಗಿದ್ದಾರೆ. ಆ ಮೂಲಕ ಸಮಾಜಕ್ಕೆ ಇಂತಹ ಅನ್ಯಾಯಗಳು ನಡೆದರೂ ಶಿಕ್ಷೆ ದೊರಕುವುದಿಲ್ಲ, ತಾವು ಸೇಫ್ ಎನ್ನುವ ಸಂದೇಶ ರಾವಾನಿಸುತ್ತಿದ್ದಾರೆ. ನಮ್ಮ ಕಾನೂನು ವ್ಯವಸ್ಥೆ ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆ.ಅಪರಾಧಿಗಳಿಗೆ ತಕ್ಕ ಶಿಕ್ಷೆ ಜಾರಿ ಮಾಡಿ, ಇಂತಹ ಹೆಣ್ಣುಬಾಕರಿಗೆ ಉತ್ತರ ನೀಡುವ ಬದಲು ಪ್ರಜಾಪ್ರಭುತ್ವ ವ್ಯವಸ್ಥೆ ಮಹಿಳಾ ಸಮಾಜವನ್ನು ಬಂಧಿಯಾಗಿಸುವ ಮತ್ತು ಆ ರೀತಿಯಲ್ಲಿ ಮತ್ತೆ ಆಕೆಯನ್ನು ನಾಲ್ಕು ಗೋಡೆಗಳ ಮದ್ಯೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೌರ್ಜನ್ಯ ಪುರುಷರಿಂದ  ಆಗಿದ್ದರೂ ಶಿಕ್ಷೆ ಮಾತ್ರ ಮಹಿಳೆಯರೇ ಅನುಭವಿಸುತ್ತಿದ್ದಾರೆ.

ಅತ್ಯಾಚಾರವನ್ನು ತಡೆಯಲು ಎಂಬ ಕಾರಣವಿಟ್ಟುಕೊಂಡು ಮೊಬೈಲ್, ಪ್ಯಾಶನ್ ಉಡುಗೆಗಳನ್ನು ನಿಷೇಧಿಸಿ ಆಕೆಯನ್ನು ಬಂಧಿಯಾಗಿಸುವ ಕಾನೂನಿನಲ್ಲಿ ಯಾವುದೇ ಹುರುಳಿಲ್ಲ. ಆ ರೀತಿ ಆದಲ್ಲಿ, ಮುಂದೆ ಅನ್ಯಾಯಗಳು ನಾಲ್ಕು ಗೋಡೆಯ ಮದ್ಯೆ ಸತ್ತು ಹೋಗುವ ಪ್ರಮೇಯವೇ ಹೆಚ್ಚು. ಮೊಬೈಲ್ ನಿಂದ, ಇಂಟರ್ನೆಟ್ ನಿಂದ ಅಥವಾ ಉಡುಗೆ ತೊಡುಗೆಯಿಂದ ಖಂಡಿತಾ ಇಂತಹ ಪ್ರಕರಣಗಳು ಜರುಗಿಲ್ಲ..ಅದು ಆಗಿರುವುದು ಗಂಡಸಿನ ದುಷ್ಟತನದಿಂದ, ಆತನೊಳಗಿನ ಕ್ರೌರ್ಯದಿಂದ. ಈ ದುಷ್ಟತನಕ್ಕೆ ತಕ್ಕ ಉತ್ತರ ನೀಡಬೇಕೇ ಹೊರತು ಮಹಿಳೆಯ ಸ್ವಾತಂತ್ರ್ಯ ಹರಣ ಮಾಡುವುದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಕ್ಕುದಲ್ಲ. ಮಹಿಳೆಗೆ ಅನ್ಯಾಯವದಂತಹ  ಪ್ರಕರಣಗಳಲ್ಲಿ ವೇಗವಾಗಿ ಶಿಕ್ಷೆ ಆದರೆ ಅತ್ಯಾಚಾರಗಳಂತಹ  ಹೇಯ ಕೃತ್ಯಗಳ ಕೊನೆಯಾಗಬಹುದು, ದೌರ್ಜನ್ಯಕ್ಕೆ ಒಳಗಾಗಿ ಸಮಾಜದ ರೀತಿ ರಿವಾಜುಗಳಿಗೆ ಹೆದರಿ ಎಲ್ಲೊ ಒಂದು ಕಡೆಯಿಂದ ಅಪರಾಧಿಗಳಿಗೆ ರಕ್ಷಣೆ ಒದಗಿಸಿ, ಅಪರಾಧವನ್ನು ಬಚ್ಚಿಟ್ಟಿದ್ದ ಸ್ತ್ರೀ ಕೂಡ ಧೈರ್ಯವಾಗಿ ಮುಂದೆ ಬಂದು ತನಗಾದ ಅನ್ಯಾಯವನ್ನು ಕಾನೂನಿನ ಮುಂದೆ ಇಟ್ಟು ನ್ಯಾಯ ಪಡೆಯಬಹುದು. ಜೊತೆಗೆ ಸ್ತ್ರೀ ಗೆ ತನ್ನ ಕುಟುಂಬದವರ ಸಹಕಾರ ಅಗತ್ಯ . ಚುಚ್ಚು ಮಾತುಗಳ ಬದಲಾಗಿ, ಧೈರ್ಯ ಹೇಳುವ, ಕಷ್ಟಕ್ಕೆ ಹೆಗಲಾಗುವವರಾಗಿದ್ದರೆ ಆಕೆ ಸಬಲೆಯಾಗಿ ಅನ್ಯಾಯದ ವಿರುದ್ಧ ಹೋರಾಡುವುದರಲ್ಲಿ ಸಂಶಯವಿಲ್ಲ. ಅಂತಹ ಬೆಂಬಲ ಮನೆಯ ವಾತಾವರಣದಲ್ಲಿ ಸಿಗಬೇಕು. ಭಯ ಇದ್ದಲ್ಲಿ ಮಾತ್ರ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಆಗಲು ಸಾದ್ಯ. ಅಂತಹ ಭಯದ ನಿರ್ಮಾಣ ಕಾನೂನಿಂದ ಆಗಬೇಕು. ದೇಶ, ಕಾನೂನು, ನಾಗರೀಕರು ಆರೋಗ್ಯ ಪೂರ್ಣ ಸಮಾಜಕ್ಕಾಗಿ ಶ್ರಮಿಸಬೇಕು, ಸ್ತ್ರೀಯನ್ನು ಬಂಧಿಯಾಗಿಸುವಂತಹ ಕಾನೂನುಗಳು ಜಾರಿಯಾದರೆ ಖಂಡಿತಾ ಅದಕ್ಕೆ ಸ್ತ್ರೀ ಸಮಾಜದ ದಿಕ್ಕಾರವಿದೆ.  ==================================================================
೦೭-೦೧-೨೦೧೩ ರ ವಿಜಯಕರ್ನಾಟಕದ ಲವಲವಿಕೆಯಲ್ಲಿ ಪ್ರಕಟಿತ.. :)

6 ಕಾಮೆಂಟ್‌ಗಳು:

 1. ಹಾದಿಯಲ್ಲಿ ನಡೆವಾಗ ಎಡವಿ ಬಿದ್ದರೆ...ಮುಂದೆ ಪ್ರತಿಯೊಬ್ಬ ದಾರಿಹೋಕನಿಗೂ ಎಚ್ಚರಿಕೆ ಘಂಟೆ ಹೊಡೆಯೋಣ ಎನ್ನುತ್ತದೆ ಮಾನವತ ವಾದ...ಅದನ್ನು ಹೇಳುವರಿಗೆ ಆ ಕಳಕಳಿಯಿದ್ದರೂ ಕೇಳುವವರಿಗೆ ಯಾಕೆ ಹೀಗೆ ಕೊರೆತ ಎನ್ನಿಸುತ್ತದೆ.. ಜೀವನ ಚಕ್ರ ಚಿತ್ರದಲ್ಲಿನ ಒಂದು ಸಂಭಾಷಣೆ ಬೆಂಕಿ ಕಡ್ಡಿಯನ್ನು ಬೆಂಕಿ ಪೊಟ್ಟಣಕ್ಕೆ ಉಜ್ಜಿದಾಗ...ಕಡ್ಡಿಗೆ ನಷ್ಟವೇ ಹೊರತು ಪೊಟ್ಟಣಕ್ಕೆ ಅಲ್ಲ". ಈ ನಿಟ್ಟಿನಲ್ಲಿ ಸಮಾಜವೇ ಆಗಲಿ, ಇಲ್ಲ ಪೋಷಕರೇ ಆಗಲಿ ಕಡ್ಡಿಯನ್ನು ರಕ್ಷಿಸುವ ಭರದಲ್ಲಿ ಹೀಗೆ ರಕ್ಷಾ ಕವಚವೆಂಬ ಉಪದೇಶವನ್ನು ಕೊಡುತ್ತಾರೆ...ಪಿ.ಎಸ್ ನಿನ್ನ ಲೇಖನದಲ್ಲಿ ಮೊಗೆದು ತೆಗೆದಿರುವ ಪ್ರಶ್ನೆಗಳೆಲ್ಲ ಅತಿ ಸಮಂಜಸವಾಗಿದೆ..ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರೂ...ಕೇವಲ ಕ್ಷಣಿಕ ನಿಮಿಷಗಳ ಆಮೀಷಕ್ಕೆ ಒಳಗಾಗಿ ತನ್ನ ಸುತ್ತಲಿನ ವಾತಾವರಣವನ್ನೇ ಗಬ್ಬೆಬ್ಬಿಸುವ ಕೆಲಸಕ್ಕೆ ಕೈ ಹಾಕುವ ಮುನ್ನ ತನ್ನ ಮನೆಯತ್ತಲೂ ದೃಷ್ಟಿ ಹಾಯಿಸಿದರೆ ಸಾಕು..ನಮ್ಮ ಸಮಾಜ ಮಧ್ಯರಾತ್ರಿಯಲ್ಲೂ ಕೂಡ ಸುರಕ್ಷಿತ...ಸುಂದರ ಲೇಖನ ಪಿ.ಎಸ್ ಅಭಿನಂದನೆಗಳು...

  ಪ್ರತ್ಯುತ್ತರಅಳಿಸಿ
 2. ಶಿಕ್ಷಣದಲ್ಲಿ ಹೆಣ್ಣು ಮಕ್ಕಳನ್ನ ಮುಸುಕು ಧಾರಿಗಳಾಗಿಸುವ ಪಾಂಡಿಚರಿ ಸರ್ಕಾರದ ನಿರ್ಧಾರವೂ ಹಾಸ್ಯಾಸ್ಪದ ಅಲ್ಲವೇ?
  ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರದೆ ಸಮಸ್ಯೆಗೂ ಪರಿಹಾರವಿಲ್ಲ!

  ಪ್ರತ್ಯುತ್ತರಅಳಿಸಿ
 3. ಚೆನಾಗಿದೆ ಕಣೆ...
  ನಿಜವಾದ ಮಾತುಗಳು..ಅವರವರ ವೈಯಕ್ತಿಕ ಬದುಕಿಗೆ ಕಟ್ಟಳೆಯ ಹೆಸರಲ್ಲಿ ಭಂಗತರುವುದು ತೆರವಲ್ಲ..ಒಳ್ಳೆಯ ಬರಹ ಇಷ್ಟವಾಯ್ತು..
  ಬರೆಯುತ್ತಿರು..
  ನಮಸ್ತೆ :)

  ಪ್ರತ್ಯುತ್ತರಅಳಿಸಿ
 4. ಸುಷ್ಮಾ ಅವರೇ.... ಈ ಸಂದರ್ಭದಲ್ಲಿ ನಿಮ್ಮ ಲೇಖನ ಮಹತ್ವದ್ದೇ... ಆದರೆ ಇದರಲ್ಲೂ ಒಂದೆರಡು ವಿಷಯವನ್ನು ಯೋಚಿಸುವಂತಾದ್ದಿದೆ....
  ಟೀನೇಜ್... ಹುಚ್ಚು ಕುದುರೆಯನ್ನು ಏರಿ ಹೋಗಬೇಕೆಂದುಕೊಳ್ಳುವ ವಯಸ್ಸು ಅದು... ಮನಸ್ಸಿಗೆ ಹಿಡಿತವೂ ಇರುವುದಿಲ್ಲ... ವಿಚಾರ ಮಾಡೋ ಪ್ರಭುದ್ಧತೆಯೂ ಬಂದಿರೋಲ್ಲಾ.... ಹುಡುಗ ಕಣ್ಣು ಮಿಟುಕಿಸಿದರೆ ಸಾಕು... ಹುಡುಗಿ ಮುಗುಳ್ನಕ್ಕರೆ ಸಾಕು.... ಜಾರಿ ಬಿದ್ದುಬಿಡುವ ವಯಸ್ಸು... ಬಿದ್ದ ಹೊಂಡ ಕೆಸರೂ ಇರಬಹುದು... ಹಾಲೂ ಇರಬಹುದು... ನನ್ನ ಪ್ರಕಾರ ಖಂಡಿತಾ ಈ ವಯಸ್ಸಲ್ಲಿ ಮೊಬೈಲ್ ಬೇಡ... ಅಪ್ಪನ ಮೊಬೈಲ್ ನಿಂದ ಅಪರೂಪಕ್ಕೆ ಕಳಿಸೋ ಮೆಸೇಜ್ ನ ಖುಷಿಯೇ ಸಾಕು..... ಕಲಿಯೋ ಹುಡುಗರಿಗೆ ಮೊಬೈಲ್ ಅವಶ್ಯಕತೆಯೇ ಇಲ್ಲಾ...

  ಫ್ಯಾಶನ್....
  ಈ ತರಹದ ಬಟ್ಟೆ ಇರಲಿ.... ಇಷ್ಟು ಮಾತ್ರ ಬಟ್ಟೆ ಇರಲಿ... ಆದಷ್ಟು short ಬಟ್ಟೆ ಇರಲಿ.... ಇಂತಹ ಮಾತುಗಳನ್ನು film director ಹೇಳಬಹುದೇ ಹೊರತು ಯಾವುದೇ ತಂದೆ ತಾಯಿ ಅನ್ನೊಲ್ಲಾ....
  ಬೇರೆ ಎಲ್ಲಾ ಫ್ಯಾಶನ್ ಓಕೆ... ಆದರೆ ಬಟ್ಟೆಗಳನ್ನೆಲ್ಲಾ ಚಿಕ್ಕ ಮಾಡ್ತಾ ಹೋಗೋ ಅರೆ ಮೈ ಪ್ರದರ್ಶನದ ಫ್ಯಾಶನ್ ಏಕೆ ಹೇಳಿ? ಖಂಡಿತಾ ಅದು ನಮಗೆ ಬೇಡಾ... ನಮ್ಮ ಸಂಸ್ಕ್ರತಿಯೂ ಅದಲ್ಲ..... ಸೀರೆಯಲ್ಲಿ... ಚೂಡಿಯಲ್ಲಿಯೂ ಕೂಡಾ ಬೇಕಷ್ಟು ಅಂದವಾಗಿ ಕಾಣಬಹುದು... ಪ್ರಚೋದನಕಾರಿ ಉಡುಗೆ ತೊಡುಗೆಯೇ ಬೇಕೆ?

  ನಾನೂ ಕೂಡಾ ಪುರುಷ ಪ್ರಧಾನವಾಗಿಯೇ ಬರ್ದಿದೀನಿ ಅಂದ್ಕೋಬೇಡಿ... ಎಲ್ಲವನ್ನೂ ಸೇರಿಸಿ ಹೇಳಿದ್ದಿದು.
  ಅತ್ಯಾಚಾರಗಳು, ಮುಸುಕುಧಾರಣೆಗಳು, ಮನೆಯಲ್ಲಿಯೇ ಕೂಡಿಟ್ಟು ಶಾಲೆಗೆ ಕಳಿಸದೇ ಇರೋದು ಇವೆಲ್ಲಕ್ಕೂ ನನ್ನ ವಿರೋಧವಿದೆ...
  ಇವೆಲ್ಲವುಗಳು ಹೆಚ್ಚಲಿಕ್ಕೆ ಕಾರಣಗಳ ಮೂಲವೇ ಇವು.. ಮೊಬೈಲ್, ಇಂಟರ್ನೇಟ್, ಉಡುಗೆ ತೊಡುಗೆಗಳು..
  ಆದರೆ ಮನೆಯಿಂದ ಹೊರ ಪ್ರಪಂಚಕ್ಕೆ ಕಾಲಿಡೋವಾಗ ನಾವೊಮ್ಮೆ ನಮ್ಮ ಸಂಸ್ಕೃತಿಯನ್ನು ನೆನಪಿಸಿಕೊಂಡರೆ ಉತ್ತಮ.,...
  ಶಿಕ್ಷಣ, ಪ್ರಭುದ್ದತೆರಗಳು ಮೊದಲಿರಲಿ....
  ಪ್ರಭುದ್ದತೆ ಬರುವ ಮೊದಲು ಇವುಗಳ ಬಳಕೆ ಮಂಗನ ಕೈಯಲ್ಲಿನ ಮಾಣಿಕ್ಯ...

  ಈಗ ನಡೆಯುತ್ತಿರುವುದಕ್ಕೆ ವಿಷಾದವಿದೆ... ನಡೆಯಬಾರದೆಂಬ ಕಾಳಜಿಗೆ ನನ್ನೀ ವಿಚಾರ...

  ಉತ್ತಮವಾದ ಬರಹ...

  ಪ್ರತ್ಯುತ್ತರಅಳಿಸಿ
 5. ಹೌದು ಇಂದು ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತಿಲ್ಲ... ಅದರ ಬದಲಾಗಿ ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ. ದಾಮಿನಿಯಂತಹ ಎಷ್ಟೋ ಹೆಣ್ಣುಮಕ್ಕಳು ಪುರಷರ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಇದಕ್ಕೆಲ್ಲ ಅಂತ್ಯ ಯಾವಾಗ? ಸೌಜನ್ಯಳ ಪ್ರಕರಣ ಇನ್ನೂ ಅನೇಕ ಘಟನೆಗಳಿಗೆ ಯಾವುದೇ ತಿರುವು ಸಿಕ್ಕಿಲ್ಲ. ನಿನ್ನ ಬರಹದಿಂದ ಪುರುಷ ಸಮಾಜ ಇನ್ನಾದರೂ ತನ್ನನ್ನು ತಿದ್ದಿಕೊಳ್ಳಲಿ...

  ಪ್ರತ್ಯುತ್ತರಅಳಿಸಿ
 6. ಅಣ್ಣಯ್ಯ.. ರಕ್ಷಣೆ ಅನ್ನುವ ಹೆಸರಲ್ಲಿ ಬಂಧಿಸುವುದು ಎಷ್ಟು ಸರಿ??
  ಪುರುಷ ಸಮಾಜದಿಂದ ಆಗುತ್ತಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ಶಿಕ್ಷೆಯೂ ಹೆಣ್ಣಿಗೇ ಇದ್ದರೆ ನ್ಯಾಯ ಸಮನಾಗಿ ಇಲ್ಲದಂತೆ ಅಲ್ಲವೇ? ಇದರಲ್ಲೂ ತಾರತಮ್ಯ.
  ಮದ್ಯ ರಾತ್ರಿಯಲ್ಲಿ ಸುರಕ್ಷಿತಳಾಗಿ ಹೆಣ್ಣು ಓಡಾಡುವ ಸ್ಥಿತಿ ಬರಲಿ ಎಂದು ಆಶಿಸೋಣ...
  ಧನ್ಯವಾದಗಳು ಶ್ರೀಕಾಂತಣ್ಣ ....

  ಬದರಿ ಸರ್..
  ನನ್ನ ಅನಿಸಿಕೆ ಕೂಡ ಅದೇ.. ವಿದ್ಯೆ ವಿನಯ ಕಲಿಸುತ್ತದಂತೆ. ಅಂತಹ ವಿನಯ, ಸಂಸ್ಕೃತಿ ವಿದ್ಯೆ ಕೊಟ್ಟಿದ್ದರೆ, ಇಂದು ಯಾಕೆ ವಿದ್ಯಾವಂತರೇ ಇಂತಹ ಕ್ರೌರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು..??
  ಪ್ರತಿಕ್ರಿಯೆಗೆ ಧನ್ಯವಾದಗಳು ಸರ್...

  ಚಿನ್ಮಯ್ ಪ್ರತಿಕ್ರಿಯೆಗೆ ಧನ್ಯವಾದಗಳು..
  ಇಂತಹ ಕಟ್ಟಲೆಗಳನ್ನು ತರುತ್ತಿರುವ ರೀತಿಗಳನ್ನು ನೋಡಿದರೆ ಮತ್ತೆ ಹೆಣ್ಣನ್ನು ಹಿಂದಿನಂತೆಯೇ ಬಂಧಿಸಿಡುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿದೆಯೇ ?

  ರಾಘವ್ ಸರ್,
  ಕಾಲ ಬದಲಾದಂತೆ ಮನುಷ್ಯನ ಅವಶ್ಯಕತೆಗಳು ಕೂಡ ಬದಲಾಗುತ್ತಾ ಇರುತ್ತವೆ ಅಲ್ಲವೇ? ಹಾಗೆ ಮೊಬೈಲ್ ಕೂಡ. ನಿಜ ಕಲಿಯುವ ಮಕ್ಕಳಿಗೆ ಮೊಬೈಲ್ ಅವಶ್ಯಕತೆ ಇಲ್ಲ ಅನ್ನೋದನ್ನ ಒಪ್ಪಿಕೊಳ್ಳಬಹುದು. ಆದರೆ ಸದ್ಯಕ್ಕೆ ಅದು ಅಗತ್ಯ ಅನ್ನುವ ಮಟ್ಟಿಗೆ ಬೆಳೆದಿರುವುದರಿಂದ ಮೊಬೈಲ್ ಬಳಕೆ ತಪ್ಪಲ್ಲ. ಬಳಸುವಾಗ ಎಚ್ಚರ ಇರಬೇಕು. ಆ ಎಚ್ಚರ ಹಿರಿಯರಿಂದ ಅವರ ಮುಕ್ತ ಮಾತುಕತೆಯಿಂದ ಟೀನೇಜ್ ಮಕ್ಕಳಿಗೆ ದೊರಕಬೇಕು. ಬಳಸಲೇಬಾರದೆಂಬ ನೀತಿ ತರವಲ್ಲ ಎಂಬುದು ನನ್ನ ಅನಿಸಿಕೆ. ಜೊತೆಗೆ ಮೊಬೈಲ್ ನಿಷೇಧಿಸುವರಿಂದ, ಅನಾಹುತ ಆದಾಗ ಕೊನೆಪಕ್ಷ ಸಂಬಂಧಪಟ್ಟವರಿಗೆ ಇನ್ಫಾರ್ಮ್ ಮಾಡಬಹುದಾದ ಕೊನೆ ಅವಕಾಶವೂ ತಪ್ಪಿ ಹೋಗುತ್ತದೆ.
  ಪ್ಯಾಶನ್ ಉಡುಗೆ ಬಗ್ಗೆ ನಿಮ್ಮ ನೀತಿ ಸರಿಯಾದುದೇ. ಅತಿಯಾದ ಪ್ಯಾಶನ್ ಉಡುಗೆಗಳನ್ನು, ತುಂಡುಡುಗೆಗಳನ್ನು ನೀವು ದಿನನಿತ್ಯ ನೋಡುವ ಎಷ್ಟು ಜನ ಮಹಿಳೆಯರು ಉಪಯೋಗಿಸುತ್ತಾರೆ? ಪ್ಯಾಶನ್ ಎನ್ನುವ ಹೆಸರಲ್ಲಿ ಸಾಮಾನ್ಯ ಮಹಿಳೆಯರಂತೂ ಅತಿರೇಕಕ್ಕೆ ಹೋಗುವುದಿಲ್ಲ. ಆ ರೀತಿ ಹೋಗುವವರು ಶೇಕಡವಾರು ಕಡಿಮೆಯೇ..ಎಲ್ಲೊ ಹೈ ಫೈ ಎನ್ನುವಂತಹ ಜೀವನಶೈಲಿ ಒಗ್ಗಿಸಿಕೊಂಡವರು ಆ ಶೇಕಡಾವರು ಸಂಖ್ಯೆಯಲ್ಲಿ ಬರಬಹುದೇನೋ..
  ನನ್ನ ಪ್ರಕಾರ ಮೊಬೈಲ್, ಇಂಟರ್ನೆಟ್, ಉಡುಗೆ ತೊಡುಗೆ ಖಂಡಿತಾ ಮಾರಕವಲ್ಲ. ಮಾರಕ ಗಂಡಸಿನ ಕೆಟ್ಟ ದೃಷ್ಟಿ ಮಾತ್ರ.

  ನಿಮ್ಮ ವಿಮರ್ಶಾತ್ಮಕ ಕಾಮೆಂಟ್ ತುಂಬಾ ಖುಷಿ ನೀಡಿತು. ಧನ್ಯವಾದಗಳು ಸರ್...

  ಧನ್ಯವಾದಗಳು ಲಲಿತಾ .
  ಇಂತಹ ಪ್ರಕರಣಗಳ ಕೊನೆಯಾಬೇಕು ಅನ್ನೋದೇ ಎಲ್ಲರ ಆಶಯ...

  ಪ್ರತ್ಯುತ್ತರಅಳಿಸಿ