ಸೋಮವಾರ, ಫೆಬ್ರವರಿ 18, 2013

ಪ್ರೇಮ ನಿವೇದನೆ..!!

  ಹೊಸದೇನೂ ಬರೆದಿಲ್ಲದ ಕಾರಣ, ಹಳೆಯ ಬರಹವನ್ನೇ ಹೊಸದಾಗಿ ಪೋಸ್ಟ್ ಮಾಡುತ್ತಾ ಇದ್ದೇನೆ.. ತಪ್ಪು ಒಪ್ಪುಗಳೇನೇ ಇದ್ದರೂ ದಯವಿಟ್ಟು ತಿಳಿಸಿ..
 
================================================
 
 
ನ್ನ ಸುವಿ,
ಗಲಿಬಿಲಿಯಾಗಬೇಡ ನೀನೇ..! ನನ್ನ ನಿನ್ನ ಹೆಸರು ಸೇರಿಸಿ ಕರೆದ ರೀತಿ ನಿನಗೆ ಒಪ್ಪಿಗೆಯಲ್ಲವಾ? ಮನದ ರಂಗೋಲಿಗೆ ಬಣ್ಣ ಹಚ್ಚಿದವನಿಗೆ ಸಿಹಿ ಮುತ್ತುಗಳು ಎಂಬ ಒಕ್ಕಣೆಯೊಂದಿಗೆ ಮೊದಲ ಪ್ರೇಮ ಪತ್ರವ ಆರಂಭಿಸೋಣ ಅಂದುಕೊಂಡರೂ ಯಾಕೋ ಲಜ್ಜೆ ತಡೆದಿದೆ..ನಾಚಿಕೆ ಆವರಿಸಿದೆ. ಹಾಗಾಗಿ ಮುತ್ತುಗಳು ಉದುರುವುದಿಲ್ಲ. ರಾತ್ರಿಯೆಲ್ಲಾ ನಿನ್ನ ನೆನಪು, ಕನವರಿಕೆ, ಕನಸುಗಳೊಂದಿಗೆ ಅರೆಬರೆ ನಿದ್ದೆ ಮಾಡಿ ಬೆಳಿಗ್ಗೆ ಎಂಟಕ್ಕೆಲ್ಲಾ ಹಾಸಿಗೆ ಬಿಡುವ ಅಭ್ಯಾಸ ಮಾಡಿಕೊಂಡಿದ್ದ ನಾನು, ಇವತ್ತು ಮುಂಜಾನೆ ನಾಲಕ್ಕುವರೆಗೆಲ್ಲಾ ದಡಕ್ಕನೆ ಎದ್ದು ಕೂತಿದ್ದೇನೆ. ಕೊರೆಯುವ ಚಳಿಯಲ್ಲಿ ತಣ್ಣನೆ ನೀರನ್ನು ಮುಖಕ್ಕೆರಚಿ ನಿನ್ನದೇ ಸ್ವೆಟರನ್ನು ಬೆಚ್ಚನೆ ಹೊದ್ದುಕೊಂಡು ಪೆನ್ನು ಪೇಪರ್ ಹಿಡಿದು ಕೂತಿದ್ದೇನೆ.ಅದೂ ಅನುರಾಗ ತುಂಬಿದ ಈ ಹೃದಯದ ಇಂಚೂ ಬಿಡದೇ ನಿನ್ನದೆಗೆ ದಾಟಿಸಬೇಕೆಂಬ ಅದಮ್ಯ ಹಂಬಲ ಮತ್ತು ಗಟ್ಟಿ ನಿರ್ಧಾರದಿಂದ. ಒಪ್ಪಿ ಅಪ್ಪುವುದು ಮಾತ್ರ ನಿನ್ನ ಕೆಲಸ.

ಮೂಡಣದ ಸೂರ್ಯ ಏರಿ ಬರುತ್ತಾನಲ್ಲ....ನೋಡುತ್ತಿರುವಾಗ ನನ್ನದೆಯ ಸೂರ್ಯನಾದ ನಿನ್ನ ನೆನಪಾಗುತ್ತದೆ. ಇಷ್ಟಿಷ್ಟೇ ನನ್ನ ಭಾವ ಲೋಕವ ಆವರಿಸುತ್ತಾ ಬಂದವನು,ಮನದ ರಾಜ್ಯಕ್ಕೆ ಅಧಿಪತಿಯಾಗಿ ನಿಂತವನಲ್ಲವೇ ಇವನು?ಎಂದು ಅಚ್ಚರಿಯಾಗುತ್ತದೆ..ಎಲೆಯಿಂದ ತೊಟ್ಟಿಕ್ಕಿ ಫಳ್ ಎಂದು ಉದುರುವ ತುಂತುರಲ್ಲೂ ನಿನ್ನ ಪ್ರೀತಿ ಹನಿ ನನ್ನೊಳಗೆ ಇಳಿದಂತೆ ಭಾಸ.ಊರಿಗೆ ಹೋಗಿದ್ದಾಗ ಚಳಿಗೆ ಇರಲಿ ಎಂದು ನಿನ್ನ ಸ್ವೆಟರ್ ಬಿಚ್ಚಿ ಕೊಟ್ಟಿದ್ದೆಯಲ್ಲ..ಅದನ್ನಂತೂ ಒಂದು ದಿನನೂ ಬಿಟ್ಟು ಮಲಗಿಲ್ಲ..ಆಗಾಗ್ಗೆ ಏರಿಳಿತವಾಗುವ ನನ್ನೆದೆ ಕಡಲನ್ನು ಶಾಂತವಾಗಿಸಿ ನೆಮ್ಮದಿ, ಬೆಚ್ಚಗಿನ ಭಾವವನ್ನು ಕೊಡುವ ಶಕ್ತಿ ಅದಕ್ಕಿದೆ.ನನ್ನ ಬರ್ತ್ ಡೇ ಗೆ ನೀ ಕೊಟ್ಟ ಕೆಂಗುಲಾಬಿಯ ಅರ್ಥ ಹುಡುಕುವಲ್ಲಿ ಮಾತ್ರ ಇನ್ನಿಲ್ಲದ ಆಸ್ಥೆ.ನಿನ್ನ ತಂಗಿಗೆ ಕುರ್ತಾ ತಗೊಂಡಾಗ ನನಗೂ ಒಂದಿರಲಿ ಅಂತ ನನ್ನಿಷ್ಟದ ಬಣ್ಣದ ಕುರ್ತಾ ತಂದೆಯಲ್ಲ ಪದೇ ಪದೇ ಅದನ್ನೇ ತೊಡುವ ಹುಚ್ಚು ತುಸುವೇ ಹೆಚ್ಚಾಗಿದೆ.ಪ್ರತಿದಿನ ತಪ್ಪದೆ ಮನೆಯ ಹಿಂದುಗಡೆಯ ಬಸ್ ಸ್ಟಾಂಡ್ ಗೆ ಬರುತ್ತೀಯಲ್ಲಾ ಆಗೆಲ್ಲ ನಿನ್ನ ಕಣ್ಣೊಳಗೆ ಇರುವುದು ನನ್ನ ಪ್ರೀತಿಯ ಬಿಂಬವೇ ಅಂದುಕೊಂಡು ತೃಪ್ತಿ ಪಟ್ಟಿದ್ದೇನೆ.ನಿನ್ನ ಕಪ್ಪು ಕುದುರೆಯ ಬೆನ್ನೇರಿದಾಗ ಮುಂದೊಂದು ದಿನ ನಮ್ಮ ಮಧ್ಯಮಗುವೊಂದು ಬಂದು ಕುಳಿತಂತೆ ಭಾಸವಾದ ಕನಸಿಗೆ ನಾಚಿ ನೀರಾಗಿ ಅಂತರ ಕಾಪಾಡಿಕೊಂಡಿದ್ದೇನೆ.

ಇವತ್ತಿಗೂ ನೀನೂ ನನ್ನ ಪ್ರೀತಿಸುತ್ತಿದ್ದಿಯಾ ಅನ್ನುವುದಕ್ಕೆ ಸ್ಪಷ್ಟ ಉತ್ತರ ಗೊತ್ತಿಲ್ಲ. ಆದರೂ ನಿನ್ನ ಪ್ರತಿ ನಡವಳಿಕೆಯಲ್ಲೂ ಪ್ರೀತಿಯ ಗಂಧ ನನ್ನ ಮುತ್ತಿಕ್ಕುತ್ತದೆ, ಉಸಿರ ಸೇರುತ್ತದೆ.ಉಸಿರ ತುಂಬಾ ನಿನ್ನ ಹೆಸರೇ ಎನ್ನುವುದನ್ನ ನಿನ್ನ ಮುಂದೆ ಕೂಗಿ ಹೇಳಬೇಕೆನಿಸುತ್ತೆ.ಗೆಳೆಯನಾಗಿ ಜೀವನಕ್ಕೆ ಕಾಲಿಟ್ಟವನು ಮುಂದೆ ಜೀವದ ಗೆಳೆಯನೆ ಆಗಿಬಿಡುತ್ತಿಯೆಂಬ ಸಣ್ಣ ಕಲ್ಪನೆಯಾದರೂ ನನ್ನಲಿತ್ತಾ ಎಂದರೆ ಇಲ್ಲ.ಸಣ್ಣ ಸುಳಿವೂ ನೀಡದೆ ಹಾಗೆ ಬಂದು ಮನದ ಬಾಂದಳಕ್ಕೆ ಕನಸುಗಳ ತಾರೆಗಳನ್ನು ಚೆಲ್ಲಿ ಹೋಗಿದ್ದಿಯಲ್ಲಾ? ಕನಸು ಕೊಟ್ಟವನು ಮನಸು ಕೊಡುವುದಿಲ್ಲವಾ? ನಿನ್ನೆ ನಾನು ಲಾಲಿ ಮಾತಾಡುತ್ತಿದ್ದಾಗ ಅವಳು ಹೇಳುತ್ತಿದ್ದಳು "ಲವ್ ನಲ್ಲಿ ಹುಡುಗಿಯರೇ ಪ್ರಪೋಸ್ ಮಾಡಿದರೆ ಅವರ ಸಂಬಂಧ ಗಟ್ಟಿಯಾಗಿರುತ್ತದಂತೆ..ಅದಿಕ್ಕೆ ಒಂದಿಷ್ಟು ಉದಾಹರಣೆಗಳನ್ನು ಕೂಡ ಕೊಟ್ಟಳು " ಯಾಕೋ ನಂಬಿಕೆ ಬಂತು. ನೀನೇ ಹೇಳುತ್ತಿಯೆಂದು ಕಾದಿದ್ದಾಯಿತು. ನಾನೇ ಮುಂದಾಗಿ ಕೇಳುತ್ತಿದ್ದೇನೆ.ಕನಸು ಕಂಗಳ ಮೌನರಾಗಕ್ಕೆ ದನಿಯಾಗಿ ಬರುತ್ತಿಯಾ?ಬದುಕಿಗೆ ಬೆಳಕಾಗುತ್ತಿಯಾ?

"ಕನಸುಗಳು ಆವಿಯಾಗಿ
ಬಾನಂಗಳಲಿ ಹೆಪ್ಪುಗಟ್ಟಿತ್ತು
ಕೈಗೆಟುಕದಂತೆ
ನೀ ಬಂದೆ ನನ್ನೊಳಗೆ ಈಗ
ಕರಗಿದ ಮೋಡಗಳ ಸೋನೆಮಳೆ."

ನೀನು ಒಪ್ಪಿದರೆ ನಾನೇ ಬರೆದ ನಾಲಕ್ಕು ಸಾಲುಗಳಿಗೆ ಅರ್ಥ ಬರುತ್ತದೆ. ಬದುಕಿಗೂ ಕೂಡ.. ಅಪ್ಪ ಅಮ್ಮನ ಪ್ರೀತಿ ಕಂಡಿಲ್ಲ ನೋಡು.ಅದಕ್ಕೆ ಆಕಾಂಕ್ಷೆಗಳು ಹೆಪ್ಪುಗಟ್ಟಿದ್ದು. ನಿನ್ನ ಪ್ರೀತಿ ನನ್ನೊಳಗೆ ಸುರಿವ ಸೋನೆಮಳೆಯಾಗುತ್ತಾ? ಕಣ್ಣ ಭಾಷೆಗೆ ಮಾತು ಬರುತ್ತಾ? ನೀನು ಬಾ ಎಂದರೆ ಓಡಿ ಬರುತ್ತೇನೆ. ನಿನ್ನ ಕನಸುಗಳಿಗೆ ಒಡತಿಯಾಗಿ, ನಿನಗೆ ಮಡದಿಯಾಗಿ. ಇಷ್ಟೆಲ್ಲಾ ನಿನಗೆ ಹೇಳುವಷ್ಟರಲ್ಲಿ ಬೆಳಕು ಹರಿದಿದೆ. ರವಿಯ ಹೊನ್ನ ಕಿರಣಗಳು ತೂರಿಕೊಂಡು ನುಗ್ಗುತ್ತಿದೆ.ಇವತ್ತು ಬಸ್ ಸ್ಟಾಂಡ್ ಹತ್ತಿರ ನೀನು ಬಂದಾಗ ಈ ಪತ್ರ ನಿನ್ನ ಕೈಗಿಟ್ಟು ಹೊರಡುತ್ತೇನೆ.ಕಪ್ಪು ಕುದುರೆಯ ಬೆನ್ನುಹತ್ತುವುದಿಲ್ಲ. ನಿನ್ನ ಒಪ್ಪಿಗೆಯಿದ್ದರೆ ಕಡ್ಡಾಯವಾಗಿ ಡೈರಿ ಮಿಲ್ಕ್ ಸಿಲ್ಕ್ ನೊಂದಿಗೆ ಆಂಜನೇಯ ಗುಡಿಗೆ ಸಂಜೆ ಆರಕ್ಕೆ ಬಾ. ಅಲ್ಲಿ ನಾನು ನಿನಗಾಗೆ ಕಾದಿರುತ್ತೇನೆ..ನೀನು ಬಂದೇ ಬರುತ್ತಿಯೆಂಬ ನಂಬಿಕೆಯೊಂದಿಗೆ, ಪ್ರೀತಿ ಜ್ಯೋತಿಯ ನಿನ್ನ ಕಣ್ಣಲ್ಲಿ ಕಾಣೋ ಹಂಬಲದೊಂದಿಗೆ.

-ಸುವಿಯ ಸುಮಾ.
ಸೋಮವಾರ, ಫೆಬ್ರವರಿ 4, 2013

ಲವ್ ಚೀಟಿ..!

ನನ್ನ ಮುದ್ದುರಾಜ..
ರಜ ಕಳೆದು ಮತ್ತೆ ಈ ಬೆಂಗಳೂರಿಗೆ ಬರುವುದಕ್ಕೆ ಬೇಜಾರೋ ಬೇಜಾರು ಮಾರಾಯ..ಅತ್ತೆ, ಮಾವ ಮತ್ತು ಸ್ಪೆಷಲಿ ನಿನ್ನನ್ನು ತುಂಬಾ ಮಿಸ್ ಮಾಡ್ಕೊತೀನಿ ಅಂದ್ರೆ ನೀನು ನಗ್ತೀಯ ಅಂತ ಗೊತ್ತು. ಸೀರಿಯಸ್ ಮ್ಯಾಟರ್ ಗಳಿಗೆಲ್ಲ ನಗುವ ಒಬ್ಬನೇ ಭೂಪ ಇದ್ದರೆ ಅದು ನೀನೇ ಅಲ್ವಾ? ಚಳಿಗೋ, ಊರಿನ ನೆನಪಿಗೋ, ನಿನ್ನ ನಿನಪಿಗೋ ಮನಸ್ಸಂತೂ ಮುದ್ದೆಯಾಗಿದೆ.ಅತ್ತೆ ಹೆಣೆದು ಕೊಟ್ಟ ಸ್ವೆಟರ್ ಪಟ್ಟಾಗಿ ಹೊದ್ದುಕೊಳ್ಳುತ್ತೆನಾದರೂ ನೆನಪುಗಳೆಲ್ಲಾ ನಿನ್ನ ಬಿಡೇ ಎನ್ನುವಂತೆ ಅಪ್ಪಿಕೊಂಡಿದೆ.. ನನಗೋ ಚಳಿಯೋ ಚಳಿ.ಮನೆಯ ಬಿಸ್ಬಿಸಿ ಚಾಯ ಬೇಕೆನಿಸುತ್ತದೆ..ಸಿಗುವುದಿಲ್ಲ ಅಂತ ಗೊತ್ತಿರುವುದರ ಮೇಲೆ ಎಂತಹ ಅಕ್ಕರೆ ನೋಡು.. ಬಹುಶಃ ನಿನ್ನ ಮೇಲೆ ನನಗಿರೋ ಅಕ್ಕರೆ ಕೂಡ ಈ ರೀತಿಯದ್ದೆನಾ?! ನೀನು ನನ್ನವನಾಗುವುದಿಲ್ಲವಾ?ನನಗೆ ಸಿಗುವುದಿಲ್ಲವಾ? ಇಲ್ಲ ಎನ್ನಬೇಡ.


 

ನಿನ್ನ ಜೊತೆಗೆ ಆಡಿಕೊಂಡಿದ್ದಾಗ, ಓಡಾಡಿಕೊಂಡಿದ್ದಾಗ ಚಂದವಿತ್ತೋ..ದೂರ ಬಂದ ಮೇಲೆ ಕಷ್ಟವಾಗಿದೆ.ನಿನ್ನ ಜೊತೆ ಕಳೆದ ಪ್ರತಿ ನೆನಪು ಮರಕಳಿಸುತ್ತವೆ.ಮತ್ತೆ ಆ ದಿನಗಳಿಗಾಗಿ ಹಾತೊರೆಯುತ್ತೇನೆ.ಮಾವನ ಶ್ರಮದ ಗದ್ದೆ, ತೋಟಗಳ, ಅಲ್ಲಿರುವ ದೊಡ್ಡ ದೊಡ್ಡ ಬಂಡೆಗಳ ಮೇಲೆಲ್ಲಾ ನನ್ನ ನಿನ್ನ ಹೆಸರು ಜೀವಂತವಾಗಿರಬಹುದಲ್ಲವಾ? ಅವುಗಳು ಕೂಡ ನಮ್ಮನ್ನ ಅದೆಷ್ಟು ಮಿಸ್ ಮಾಡಿಕೊಳ್ಳುತ್ತಿರಬಹುದಲ್ಲವಾ?ಅಥವಾ ನೀನೊಬ್ಬನೇ ಅಲ್ಲಿ ಹೋಗಿ ನನ್ನ ನೆನೆದು ಬಿಕ್ಕಳಿಸುತ್ತಿದ್ದಿಯಾ..?ಮುತ್ತುರಾಜ.. ಅಲ್ಲಲ್ಲ ನನ್ನ ಮುದ್ದುರಾಜನೇ ನೀನು ನನ್ನ ಅದೆಷ್ಟು ಬಾರಿ ನೆನಸಿಕೊಳ್ಳುತ್ತಿಯೆಂದು ಒಂದು ದಿನ ಬರೆದಿಟ್ಟುಕೋ ..ನಿನ್ನ ನೆನವರಿಕೆ, ಕನವರಿಕೆಗಳಿಂದ ನನಗಿಲ್ಲಿ ಅಡಿಗಡಿಗೆ ಸೀನು, ಆಕಳಿಕೆಗಳೆಲ್ಲಾ ಬರುತ್ತಿರಬೇಕಾದರೆ ನೀನು ನೆನೆಸಿಕೊಳ್ಳುತ್ತಿಲ್ಲವೆಂದರೆ ಹೇಗೆ ನಂಬಲಿ ನಾನು?


ಒಮ್ಮೊಮ್ಮೆ ಈ ಡಾಕ್ಟರಿಕೆ ಓದುವುದನ್ನ ಬಿಟ್ಟು ಊರಿಗೆ ಓಡಿ ಬಂದು ಬಿಡೋಣ ಎಂದೆಲ್ಲಾ ಯೋಚನೆಗಳು ಮುತ್ತಿಕ್ಕಿ ಕಾಡುತ್ತವೆ.ನೀ ಓದುವ ಡಿಗ್ರಿ ನನಗೂ ಸಾಲುವುದಿಲ್ಲವಾ ಹೇಳು..? ಕಾಲೇಜು ಕ್ಯಾಂಪಸ್ ನ ಜೋಡಿ ಹಕ್ಕಿಗಳನ್ನು ನೋಡಿದಾಗಲೆಲ್ಲಾ ನಾನು ನಿನ್ನ ಜೊತೆಗೆ ಇರಬೇಕೆಂಬ ಭಾವನೆ ಅದಮ್ಯವಾಗುತ್ತದೆ.ನನ್ನೆಲ್ಲವನ್ನೂ ಶ್ರದ್ಧೆಯಿಂದ ಆಲಿಸುವ, ಮುದ್ದಿಸುವ ಜೀವವೊಂದು ಬೇಕು ಅನಿಸುತ್ತದೆ.ಪ್ರೇಮಿಗಳ ದಿನಗಳ ದಿನಕ್ಕೆ ಇವರೆಲ್ಲರ ಕಲರವದ ಮುಂದೆ ನಾನು ನಿನ್ನ ನೆನಪಿನಲ್ಲಿ ಒಂಟಿಯಾಗಿ ಹೇಗೆ ಇಲ್ಲಿರಲಿ ಹೇಳು.ನಿನಗೂ ಹೀಗೆಲ್ಲಾ ಆಗುತ್ತಿರುತ್ತದಾ? ಆಗುವುದಿಲ್ಲ ಅಂತ ನೀ ಹೇಳುವುದಾದರೆ ಅವತ್ತು ರಾಮ ಮಂದಿರದಲ್ಲಿ ನೀನು ಹಣೆಗಿಟ್ಟ ಕುಂಕುಮದ ಅರ್ಥವೇನು?ನಾನು ಜ್ವರ ಬಂದು ಹಾಸಿಗೆ ಹಿಡಿದ್ದಿದ್ದಾಗ ಹಗಲು ರಾತ್ರಿ ಸೇವೆ ಮಾಡಿದಿಯಲ್ಲ, ಆಗಿದ್ದಿದ್ದು ಮಾನವೀಯತೆ ಮಾತ್ರವಾ?ಪ್ರೀತಿ ಇರಲಿಲ್ಲವಾ? ನನ್ನ ಮದುವೆಯಾಗುತ್ತೆನೆಂದು ಬಂದ ಹರಿ ಮೇಲ್ಯಾಕೆ ನಿಂಗೆ ಕೆಂಡದಂತ ಕೋಪ?ಆಗುವುದಿಲ್ಲ ಎನ್ನುವುದಾದರೆ ಇದಕ್ಕೆಲ್ಲಾ ನೀನು ಉತ್ತರ ಹೇಳಲೇ ಬೇಕು.


ಪರ್ಲ್ ಕಿಂಗ್, ನನ್ನ ಮದುವೆಯಾಗುತ್ತಿಯಾ? ಹೀಗೆ ನಿನ್ನಲ್ಲಿ ಕೇಳುವುದಕ್ಕೆ ಬೆಟ್ಟದಷ್ಟು ಇಚ್ಛೆ ಇದ್ದರೂ,ಏನೋ ಹಿಂಜರಿಕೆಯಿದೆ.ಅಪ್ಪ ಅಮ್ಮನನ್ನು ಕಳೆದುಕೊಂಡು "ಪ್ರತಿಯೊಂದಕ್ಕೂ ಅಂತ್ಯವಿದೆಯಂತೆ, ನೋವುಗಳಿಗೂ ಈ ತೆರದ್ದೊಂದು ಇದ್ದೀತಾ?" ಬುಕ್ಕಿನ ತುಂಬಾ ಬರೆದುಕೊಂಡು ನೋವುಗಳಲ್ಲಿ ಬೇಯುತ್ತಿದ್ದಾಗ ಎತ್ತಿಕೊಂಡು ಬಂದವರು ನಿನ್ನಪ್ಪ.ಈಗ ತಂಗಿ ಮಗಳೆಂದು ನಿನ್ನ ಅಪ್ಪ ನನ್ನ ಸಾಕುತ್ತಿಲ್ಲವಾ?ದೊಡ್ಡದೆನ್ನುವ ಓದನ್ನೂ ಓದಿಸುತ್ತಿದ್ದಾರೆ.ತನ್ನ ಮಗನನ್ನು ಸಾಮಾನ್ಯ ಡಿಗ್ರಿ ಕಾಲೇಜ್ ಗೆ ಸೇರಿಸಿದರೂ ಸೊಸೆಯನ್ನ ಮಾತ್ರ ಡಾಕ್ಟರಿಕೆಗಾಗಿ ದೊಡ್ಡ ಊರಿನ ದೊಡ್ಡ ಕಾಲೇಜಿಗೆ ಸೇರಿಸಿರುವ ಮಾವನ ಉದಾರತೆಗೆ ನಿನಗೆ ಹೀಗೆ ಕೇಳುವುದರಿಂದ ಮೋಸವಾಗುತ್ತದಾ?ಮನಸ್ಸು ಗೊಂದಲದ ಗೂಡಾಗಿದೆ.ಅಪ್ಪ ಅಮ್ಮನ ಪ್ರೀತಿ ನಿನ್ನ ಅಪ್ಪ ಅಮ್ಮನೇ ಮೊಗೆಮೊಗೆದು ಕೊಡುತ್ತಿದ್ದಾರೆ.ಗಂಡನಾಗಿ ನೀನು ನನಗೆ ಒಲಿದು ಬರುತ್ತಿಯಾ?ಪ್ರೀತಿಸುತ್ತಿಯಾ? ಈ ಪ್ರೇಮಿಗಳ ದಿನಕ್ಕೆ ಇದನ್ನ ಓದಿಕೊಂಡು ಲವ್ ಯು ಟೂ ಅನ್ನುತ್ತಿಯಾ? ನಿನ್ನ ತುಂಬಾ ಪೀಡಿಸಿರುವುದು, ಕಾಡಿಸಿರುವುದು ಇನ್ನೂ ನೆನಪಿದೆ.ಆದರೂ ನೀನು ನನಗೆ ಒಲಿಯುತ್ತಿಯಲ್ವಾ? ನಿನಗೆ ಹೆಂಡತಿಯಾಗಿ, ಮನೆಗೆ ಒಳ್ಳೆಯ ಸೊಸೆಯಾಗಿ ನಾನು ಬಾಳಲಾರೆನಾ ಹೇಳು..ಬಾಳುವ ನಂಬಿಕೆ ನನಗಿದೆ ಮುದ್ದುರಾಜನೇ.. :) ನೀನು ಒಪ್ಪಿಕೊಂಡು ಬಿಟ್ಟರೆ ರಜ ಇಲ್ಲದಿದ್ದರೂ ನಾನೇ ರಜ ಮಾಡಿಕೊಂಡು ಊರಿಗೆ ಬಂದು ಬಿಡುತ್ತೇನೆ. ಪ್ರೇಮಿಗಳಾಗಿ ಒಮ್ಮೆ ಹೊಲ ಗದ್ದೆ ಸುತ್ತೋಣ. ಬಂಡೆ ಮೇಲೆ ಹೆಸರು ಕೆತ್ತೋಣ ಏನಂತೀಯಾ?

-ಮುತ್ತುರಾಜನ ಮುತ್ತು.