ಸೋಮವಾರ, ಫೆಬ್ರವರಿ 4, 2013

ಲವ್ ಚೀಟಿ..!

ನನ್ನ ಮುದ್ದುರಾಜ..
ರಜ ಕಳೆದು ಮತ್ತೆ ಈ ಬೆಂಗಳೂರಿಗೆ ಬರುವುದಕ್ಕೆ ಬೇಜಾರೋ ಬೇಜಾರು ಮಾರಾಯ..ಅತ್ತೆ, ಮಾವ ಮತ್ತು ಸ್ಪೆಷಲಿ ನಿನ್ನನ್ನು ತುಂಬಾ ಮಿಸ್ ಮಾಡ್ಕೊತೀನಿ ಅಂದ್ರೆ ನೀನು ನಗ್ತೀಯ ಅಂತ ಗೊತ್ತು. ಸೀರಿಯಸ್ ಮ್ಯಾಟರ್ ಗಳಿಗೆಲ್ಲ ನಗುವ ಒಬ್ಬನೇ ಭೂಪ ಇದ್ದರೆ ಅದು ನೀನೇ ಅಲ್ವಾ? ಚಳಿಗೋ, ಊರಿನ ನೆನಪಿಗೋ, ನಿನ್ನ ನಿನಪಿಗೋ ಮನಸ್ಸಂತೂ ಮುದ್ದೆಯಾಗಿದೆ.ಅತ್ತೆ ಹೆಣೆದು ಕೊಟ್ಟ ಸ್ವೆಟರ್ ಪಟ್ಟಾಗಿ ಹೊದ್ದುಕೊಳ್ಳುತ್ತೆನಾದರೂ ನೆನಪುಗಳೆಲ್ಲಾ ನಿನ್ನ ಬಿಡೇ ಎನ್ನುವಂತೆ ಅಪ್ಪಿಕೊಂಡಿದೆ.. ನನಗೋ ಚಳಿಯೋ ಚಳಿ.ಮನೆಯ ಬಿಸ್ಬಿಸಿ ಚಾಯ ಬೇಕೆನಿಸುತ್ತದೆ..ಸಿಗುವುದಿಲ್ಲ ಅಂತ ಗೊತ್ತಿರುವುದರ ಮೇಲೆ ಎಂತಹ ಅಕ್ಕರೆ ನೋಡು.. ಬಹುಶಃ ನಿನ್ನ ಮೇಲೆ ನನಗಿರೋ ಅಕ್ಕರೆ ಕೂಡ ಈ ರೀತಿಯದ್ದೆನಾ?! ನೀನು ನನ್ನವನಾಗುವುದಿಲ್ಲವಾ?ನನಗೆ ಸಿಗುವುದಿಲ್ಲವಾ? ಇಲ್ಲ ಎನ್ನಬೇಡ.


 

ನಿನ್ನ ಜೊತೆಗೆ ಆಡಿಕೊಂಡಿದ್ದಾಗ, ಓಡಾಡಿಕೊಂಡಿದ್ದಾಗ ಚಂದವಿತ್ತೋ..ದೂರ ಬಂದ ಮೇಲೆ ಕಷ್ಟವಾಗಿದೆ.ನಿನ್ನ ಜೊತೆ ಕಳೆದ ಪ್ರತಿ ನೆನಪು ಮರಕಳಿಸುತ್ತವೆ.ಮತ್ತೆ ಆ ದಿನಗಳಿಗಾಗಿ ಹಾತೊರೆಯುತ್ತೇನೆ.ಮಾವನ ಶ್ರಮದ ಗದ್ದೆ, ತೋಟಗಳ, ಅಲ್ಲಿರುವ ದೊಡ್ಡ ದೊಡ್ಡ ಬಂಡೆಗಳ ಮೇಲೆಲ್ಲಾ ನನ್ನ ನಿನ್ನ ಹೆಸರು ಜೀವಂತವಾಗಿರಬಹುದಲ್ಲವಾ? ಅವುಗಳು ಕೂಡ ನಮ್ಮನ್ನ ಅದೆಷ್ಟು ಮಿಸ್ ಮಾಡಿಕೊಳ್ಳುತ್ತಿರಬಹುದಲ್ಲವಾ?ಅಥವಾ ನೀನೊಬ್ಬನೇ ಅಲ್ಲಿ ಹೋಗಿ ನನ್ನ ನೆನೆದು ಬಿಕ್ಕಳಿಸುತ್ತಿದ್ದಿಯಾ..?ಮುತ್ತುರಾಜ.. ಅಲ್ಲಲ್ಲ ನನ್ನ ಮುದ್ದುರಾಜನೇ ನೀನು ನನ್ನ ಅದೆಷ್ಟು ಬಾರಿ ನೆನಸಿಕೊಳ್ಳುತ್ತಿಯೆಂದು ಒಂದು ದಿನ ಬರೆದಿಟ್ಟುಕೋ ..ನಿನ್ನ ನೆನವರಿಕೆ, ಕನವರಿಕೆಗಳಿಂದ ನನಗಿಲ್ಲಿ ಅಡಿಗಡಿಗೆ ಸೀನು, ಆಕಳಿಕೆಗಳೆಲ್ಲಾ ಬರುತ್ತಿರಬೇಕಾದರೆ ನೀನು ನೆನೆಸಿಕೊಳ್ಳುತ್ತಿಲ್ಲವೆಂದರೆ ಹೇಗೆ ನಂಬಲಿ ನಾನು?


ಒಮ್ಮೊಮ್ಮೆ ಈ ಡಾಕ್ಟರಿಕೆ ಓದುವುದನ್ನ ಬಿಟ್ಟು ಊರಿಗೆ ಓಡಿ ಬಂದು ಬಿಡೋಣ ಎಂದೆಲ್ಲಾ ಯೋಚನೆಗಳು ಮುತ್ತಿಕ್ಕಿ ಕಾಡುತ್ತವೆ.ನೀ ಓದುವ ಡಿಗ್ರಿ ನನಗೂ ಸಾಲುವುದಿಲ್ಲವಾ ಹೇಳು..? ಕಾಲೇಜು ಕ್ಯಾಂಪಸ್ ನ ಜೋಡಿ ಹಕ್ಕಿಗಳನ್ನು ನೋಡಿದಾಗಲೆಲ್ಲಾ ನಾನು ನಿನ್ನ ಜೊತೆಗೆ ಇರಬೇಕೆಂಬ ಭಾವನೆ ಅದಮ್ಯವಾಗುತ್ತದೆ.ನನ್ನೆಲ್ಲವನ್ನೂ ಶ್ರದ್ಧೆಯಿಂದ ಆಲಿಸುವ, ಮುದ್ದಿಸುವ ಜೀವವೊಂದು ಬೇಕು ಅನಿಸುತ್ತದೆ.ಪ್ರೇಮಿಗಳ ದಿನಗಳ ದಿನಕ್ಕೆ ಇವರೆಲ್ಲರ ಕಲರವದ ಮುಂದೆ ನಾನು ನಿನ್ನ ನೆನಪಿನಲ್ಲಿ ಒಂಟಿಯಾಗಿ ಹೇಗೆ ಇಲ್ಲಿರಲಿ ಹೇಳು.ನಿನಗೂ ಹೀಗೆಲ್ಲಾ ಆಗುತ್ತಿರುತ್ತದಾ? ಆಗುವುದಿಲ್ಲ ಅಂತ ನೀ ಹೇಳುವುದಾದರೆ ಅವತ್ತು ರಾಮ ಮಂದಿರದಲ್ಲಿ ನೀನು ಹಣೆಗಿಟ್ಟ ಕುಂಕುಮದ ಅರ್ಥವೇನು?ನಾನು ಜ್ವರ ಬಂದು ಹಾಸಿಗೆ ಹಿಡಿದ್ದಿದ್ದಾಗ ಹಗಲು ರಾತ್ರಿ ಸೇವೆ ಮಾಡಿದಿಯಲ್ಲ, ಆಗಿದ್ದಿದ್ದು ಮಾನವೀಯತೆ ಮಾತ್ರವಾ?ಪ್ರೀತಿ ಇರಲಿಲ್ಲವಾ? ನನ್ನ ಮದುವೆಯಾಗುತ್ತೆನೆಂದು ಬಂದ ಹರಿ ಮೇಲ್ಯಾಕೆ ನಿಂಗೆ ಕೆಂಡದಂತ ಕೋಪ?ಆಗುವುದಿಲ್ಲ ಎನ್ನುವುದಾದರೆ ಇದಕ್ಕೆಲ್ಲಾ ನೀನು ಉತ್ತರ ಹೇಳಲೇ ಬೇಕು.


ಪರ್ಲ್ ಕಿಂಗ್, ನನ್ನ ಮದುವೆಯಾಗುತ್ತಿಯಾ? ಹೀಗೆ ನಿನ್ನಲ್ಲಿ ಕೇಳುವುದಕ್ಕೆ ಬೆಟ್ಟದಷ್ಟು ಇಚ್ಛೆ ಇದ್ದರೂ,ಏನೋ ಹಿಂಜರಿಕೆಯಿದೆ.ಅಪ್ಪ ಅಮ್ಮನನ್ನು ಕಳೆದುಕೊಂಡು "ಪ್ರತಿಯೊಂದಕ್ಕೂ ಅಂತ್ಯವಿದೆಯಂತೆ, ನೋವುಗಳಿಗೂ ಈ ತೆರದ್ದೊಂದು ಇದ್ದೀತಾ?" ಬುಕ್ಕಿನ ತುಂಬಾ ಬರೆದುಕೊಂಡು ನೋವುಗಳಲ್ಲಿ ಬೇಯುತ್ತಿದ್ದಾಗ ಎತ್ತಿಕೊಂಡು ಬಂದವರು ನಿನ್ನಪ್ಪ.ಈಗ ತಂಗಿ ಮಗಳೆಂದು ನಿನ್ನ ಅಪ್ಪ ನನ್ನ ಸಾಕುತ್ತಿಲ್ಲವಾ?ದೊಡ್ಡದೆನ್ನುವ ಓದನ್ನೂ ಓದಿಸುತ್ತಿದ್ದಾರೆ.ತನ್ನ ಮಗನನ್ನು ಸಾಮಾನ್ಯ ಡಿಗ್ರಿ ಕಾಲೇಜ್ ಗೆ ಸೇರಿಸಿದರೂ ಸೊಸೆಯನ್ನ ಮಾತ್ರ ಡಾಕ್ಟರಿಕೆಗಾಗಿ ದೊಡ್ಡ ಊರಿನ ದೊಡ್ಡ ಕಾಲೇಜಿಗೆ ಸೇರಿಸಿರುವ ಮಾವನ ಉದಾರತೆಗೆ ನಿನಗೆ ಹೀಗೆ ಕೇಳುವುದರಿಂದ ಮೋಸವಾಗುತ್ತದಾ?ಮನಸ್ಸು ಗೊಂದಲದ ಗೂಡಾಗಿದೆ.ಅಪ್ಪ ಅಮ್ಮನ ಪ್ರೀತಿ ನಿನ್ನ ಅಪ್ಪ ಅಮ್ಮನೇ ಮೊಗೆಮೊಗೆದು ಕೊಡುತ್ತಿದ್ದಾರೆ.ಗಂಡನಾಗಿ ನೀನು ನನಗೆ ಒಲಿದು ಬರುತ್ತಿಯಾ?ಪ್ರೀತಿಸುತ್ತಿಯಾ? ಈ ಪ್ರೇಮಿಗಳ ದಿನಕ್ಕೆ ಇದನ್ನ ಓದಿಕೊಂಡು ಲವ್ ಯು ಟೂ ಅನ್ನುತ್ತಿಯಾ? ನಿನ್ನ ತುಂಬಾ ಪೀಡಿಸಿರುವುದು, ಕಾಡಿಸಿರುವುದು ಇನ್ನೂ ನೆನಪಿದೆ.ಆದರೂ ನೀನು ನನಗೆ ಒಲಿಯುತ್ತಿಯಲ್ವಾ? ನಿನಗೆ ಹೆಂಡತಿಯಾಗಿ, ಮನೆಗೆ ಒಳ್ಳೆಯ ಸೊಸೆಯಾಗಿ ನಾನು ಬಾಳಲಾರೆನಾ ಹೇಳು..ಬಾಳುವ ನಂಬಿಕೆ ನನಗಿದೆ ಮುದ್ದುರಾಜನೇ.. :) ನೀನು ಒಪ್ಪಿಕೊಂಡು ಬಿಟ್ಟರೆ ರಜ ಇಲ್ಲದಿದ್ದರೂ ನಾನೇ ರಜ ಮಾಡಿಕೊಂಡು ಊರಿಗೆ ಬಂದು ಬಿಡುತ್ತೇನೆ. ಪ್ರೇಮಿಗಳಾಗಿ ಒಮ್ಮೆ ಹೊಲ ಗದ್ದೆ ಸುತ್ತೋಣ. ಬಂಡೆ ಮೇಲೆ ಹೆಸರು ಕೆತ್ತೋಣ ಏನಂತೀಯಾ?

-ಮುತ್ತುರಾಜನ ಮುತ್ತು.
12 ಕಾಮೆಂಟ್‌ಗಳು:

 1. ಚೈತ್ರದ ಪ್ರೇಮಾಂಜಲಿ ಚಿತ್ರದ ಧ್ವನಿ ಸುರುಳಿಯಲ್ಲಿ ಹಂಸಲೇಖ ಪ್ರತಿಯೊಂದು ಹಾಡಿಗೂ ವಿವರಣೆ ಕೊಟ್ಟಿದ್ದಾರೆ.. ಅದರಲ್ಲಿ ಒಂದು ಮಾತು ಬರುತ್ತದೆ.. "ಓ ಪ್ರೇಮಿಗಳೇ ನೀವೆಷ್ಟು ಬಾರಿ ಮೈ ಮುಟ್ಟಿದ್ದೀರಿ ಎಂದು ಕೇಳಬೇಡಿ...ಎಷ್ಟು ಬಾರಿ ನಿಮ್ಮ ಮನ ತಟ್ಟಿದ್ದೀರಿ ಎಂದು ಕೇಳಿಕೊಳ್ಳಿ"

  ಅಂಥಹ ಒಂದು ಮನ ತಟ್ಟುವ ಪತ್ರ ಇದಾಗಿದೆ..ಬಹಳ ಮುದ್ದಾದ ಬರಹ ಹಾಗೆ ಮುದ್ದಾಗಿ ರಚಿಸಿರುವ ಎದೆಯಾಳದ ನೆಲದಲ್ಲಿ ಭಾವಗಳ ರಂಗವಲ್ಲಿಯ ಚಿತ್ರಣ...ಕ್ರಿಯಾಶೀಲತೆಯನ್ನು ಒರೆ ಹಚ್ಚುವ ಪತ್ರ..ಹಾಗೆ ಮನದಾಳದಲ್ಲಿರುವ ಪ್ರೀತಿ, ವಿಶ್ವಾಸ, ಅನುಮಾನ ಇವೆಲ್ಲವನ್ನೂ ಪದಗಳಾಗಿ ಯಾವುದಕ್ಕೂ ಜೋತು ಬೀಳದೆ ಬರೆಯುವುದು ನಿಜವಾಗಿಯೂ ಸವಾಲಿನ ಕೆಲಸ..ಅಂಥಹ ಸವಾಲನ್ನು ಗೆದ್ದಿರುವ ನಿನ್ನ ಬರಹಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು... ಸೂಪರ್ ಪಿ.ಎಸ್

  ಪ್ರತ್ಯುತ್ತರಅಳಿಸಿ
 2. ಕಥಾ ನಾಯಕಿಗೆ ತಥಾಸ್ತು ಎನ್ನಿಲಿ ಅಷ್ಟೂ ದೇವತೆಗಳು.

  ಸೂಪರ್ರೂ,,,,

  ಪ್ರತ್ಯುತ್ತರಅಳಿಸಿ
 3. ಶ್ರೀಕಾಂತಣ್ಣ... ಮುತ್ತುರಾಜನ ಮುತ್ತಿನ ಗೊಂದಲಗಳನ್ನು, ಆಕಾಂಕ್ಷೆಯನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು ಅಣ್ಣಯ್ಯ.. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ..

  ಪ್ರತ್ಯುತ್ತರಅಳಿಸಿ
 4. ಪ್ರತಿಕ್ರಿಯೆಗೆ ಧನ್ಯವಾದಗಳು ಚಿನ್ಮಯ್..
  ಆದರೆ ಯಾವ ಭಾವದಲ್ಲಿ "ಯಪ್ಪಾ.." ಅಂದ್ರಿ ಅಂತ ಗೊತ್ತಾಗ್ಲಿಲ್ಲ... :(

  ಪ್ರತ್ಯುತ್ತರಅಳಿಸಿ
 5. @ಬದರಿನಾಥ್ ಸರ್.. ಕಥಾ ನಾಯಕಿಗೆ ದೇವತೆಗಳ ಆಶೀರ್ವಾದವಾದರೆ ನನಗೆ ನಿಮ್ಮ ಆಶೀರ್ವಾದವಿರಲಿ ಗುರುಗಳೇ..

  ಪ್ರತ್ಯುತ್ತರಅಳಿಸಿ
 6. ಮತ್ತೊಮ್ಮೆ ಚೆನ್ನಾಗಿದೆ ಅಂದರೆ ಟಾನಿಕ್ ಇದ್ದ ಹಾಗೆ ಹುಮ್ಮಸ್ಸು ಬರುತ್ತದೆ..
  ಚೆನ್ನಾಗಿಲ್ಲ ಅಂತ ಅಂದರೆ ಇಂಜೆಕ್ಷನ್ ಇದ್ದ ಹಾಗೆ ಚುಚ್ಚಿದರೂ ಮುಂದಿನ ಸಲದ ಬರವಣಿಗೆಗೆ ಪೂರ್ತಿ ಅಲ್ಲದೆ ಹೋದರೂ, ಹಿಂದಿನ ಸಲಕ್ಕಿಂತ ಚೆನ್ನಾಗಿದೆ ಅನ್ನುವ ಹಾಗೆ ಕ್ಯೂರ್ ಆಗಿರುತ್ತದೆ ಶ್ರೀ.. :)

  ಪ್ರತ್ಯುತ್ತರಅಳಿಸಿ
 7. ಮೌನ ರಾಗಕ್ಕೆ ನೀವು ಬಾರಿಸಿದ ವೀಣೆ ತುಂಬಾ ಇಂಪಾಗಿದೆ.. ಮಾಧುರ್ಯವಾಗಿದೆ :)

  ಪ್ರತ್ಯುತ್ತರಅಳಿಸಿ