ಸೋಮವಾರ, ಫೆಬ್ರವರಿ 18, 2013

ಪ್ರೇಮ ನಿವೇದನೆ..!!

  ಹೊಸದೇನೂ ಬರೆದಿಲ್ಲದ ಕಾರಣ, ಹಳೆಯ ಬರಹವನ್ನೇ ಹೊಸದಾಗಿ ಪೋಸ್ಟ್ ಮಾಡುತ್ತಾ ಇದ್ದೇನೆ.. ತಪ್ಪು ಒಪ್ಪುಗಳೇನೇ ಇದ್ದರೂ ದಯವಿಟ್ಟು ತಿಳಿಸಿ..
 
================================================
 
 
ನ್ನ ಸುವಿ,
ಗಲಿಬಿಲಿಯಾಗಬೇಡ ನೀನೇ..! ನನ್ನ ನಿನ್ನ ಹೆಸರು ಸೇರಿಸಿ ಕರೆದ ರೀತಿ ನಿನಗೆ ಒಪ್ಪಿಗೆಯಲ್ಲವಾ? ಮನದ ರಂಗೋಲಿಗೆ ಬಣ್ಣ ಹಚ್ಚಿದವನಿಗೆ ಸಿಹಿ ಮುತ್ತುಗಳು ಎಂಬ ಒಕ್ಕಣೆಯೊಂದಿಗೆ ಮೊದಲ ಪ್ರೇಮ ಪತ್ರವ ಆರಂಭಿಸೋಣ ಅಂದುಕೊಂಡರೂ ಯಾಕೋ ಲಜ್ಜೆ ತಡೆದಿದೆ..ನಾಚಿಕೆ ಆವರಿಸಿದೆ. ಹಾಗಾಗಿ ಮುತ್ತುಗಳು ಉದುರುವುದಿಲ್ಲ. ರಾತ್ರಿಯೆಲ್ಲಾ ನಿನ್ನ ನೆನಪು, ಕನವರಿಕೆ, ಕನಸುಗಳೊಂದಿಗೆ ಅರೆಬರೆ ನಿದ್ದೆ ಮಾಡಿ ಬೆಳಿಗ್ಗೆ ಎಂಟಕ್ಕೆಲ್ಲಾ ಹಾಸಿಗೆ ಬಿಡುವ ಅಭ್ಯಾಸ ಮಾಡಿಕೊಂಡಿದ್ದ ನಾನು, ಇವತ್ತು ಮುಂಜಾನೆ ನಾಲಕ್ಕುವರೆಗೆಲ್ಲಾ ದಡಕ್ಕನೆ ಎದ್ದು ಕೂತಿದ್ದೇನೆ. ಕೊರೆಯುವ ಚಳಿಯಲ್ಲಿ ತಣ್ಣನೆ ನೀರನ್ನು ಮುಖಕ್ಕೆರಚಿ ನಿನ್ನದೇ ಸ್ವೆಟರನ್ನು ಬೆಚ್ಚನೆ ಹೊದ್ದುಕೊಂಡು ಪೆನ್ನು ಪೇಪರ್ ಹಿಡಿದು ಕೂತಿದ್ದೇನೆ.ಅದೂ ಅನುರಾಗ ತುಂಬಿದ ಈ ಹೃದಯದ ಇಂಚೂ ಬಿಡದೇ ನಿನ್ನದೆಗೆ ದಾಟಿಸಬೇಕೆಂಬ ಅದಮ್ಯ ಹಂಬಲ ಮತ್ತು ಗಟ್ಟಿ ನಿರ್ಧಾರದಿಂದ. ಒಪ್ಪಿ ಅಪ್ಪುವುದು ಮಾತ್ರ ನಿನ್ನ ಕೆಲಸ.

ಮೂಡಣದ ಸೂರ್ಯ ಏರಿ ಬರುತ್ತಾನಲ್ಲ....ನೋಡುತ್ತಿರುವಾಗ ನನ್ನದೆಯ ಸೂರ್ಯನಾದ ನಿನ್ನ ನೆನಪಾಗುತ್ತದೆ. ಇಷ್ಟಿಷ್ಟೇ ನನ್ನ ಭಾವ ಲೋಕವ ಆವರಿಸುತ್ತಾ ಬಂದವನು,ಮನದ ರಾಜ್ಯಕ್ಕೆ ಅಧಿಪತಿಯಾಗಿ ನಿಂತವನಲ್ಲವೇ ಇವನು?ಎಂದು ಅಚ್ಚರಿಯಾಗುತ್ತದೆ..ಎಲೆಯಿಂದ ತೊಟ್ಟಿಕ್ಕಿ ಫಳ್ ಎಂದು ಉದುರುವ ತುಂತುರಲ್ಲೂ ನಿನ್ನ ಪ್ರೀತಿ ಹನಿ ನನ್ನೊಳಗೆ ಇಳಿದಂತೆ ಭಾಸ.ಊರಿಗೆ ಹೋಗಿದ್ದಾಗ ಚಳಿಗೆ ಇರಲಿ ಎಂದು ನಿನ್ನ ಸ್ವೆಟರ್ ಬಿಚ್ಚಿ ಕೊಟ್ಟಿದ್ದೆಯಲ್ಲ..ಅದನ್ನಂತೂ ಒಂದು ದಿನನೂ ಬಿಟ್ಟು ಮಲಗಿಲ್ಲ..ಆಗಾಗ್ಗೆ ಏರಿಳಿತವಾಗುವ ನನ್ನೆದೆ ಕಡಲನ್ನು ಶಾಂತವಾಗಿಸಿ ನೆಮ್ಮದಿ, ಬೆಚ್ಚಗಿನ ಭಾವವನ್ನು ಕೊಡುವ ಶಕ್ತಿ ಅದಕ್ಕಿದೆ.ನನ್ನ ಬರ್ತ್ ಡೇ ಗೆ ನೀ ಕೊಟ್ಟ ಕೆಂಗುಲಾಬಿಯ ಅರ್ಥ ಹುಡುಕುವಲ್ಲಿ ಮಾತ್ರ ಇನ್ನಿಲ್ಲದ ಆಸ್ಥೆ.ನಿನ್ನ ತಂಗಿಗೆ ಕುರ್ತಾ ತಗೊಂಡಾಗ ನನಗೂ ಒಂದಿರಲಿ ಅಂತ ನನ್ನಿಷ್ಟದ ಬಣ್ಣದ ಕುರ್ತಾ ತಂದೆಯಲ್ಲ ಪದೇ ಪದೇ ಅದನ್ನೇ ತೊಡುವ ಹುಚ್ಚು ತುಸುವೇ ಹೆಚ್ಚಾಗಿದೆ.ಪ್ರತಿದಿನ ತಪ್ಪದೆ ಮನೆಯ ಹಿಂದುಗಡೆಯ ಬಸ್ ಸ್ಟಾಂಡ್ ಗೆ ಬರುತ್ತೀಯಲ್ಲಾ ಆಗೆಲ್ಲ ನಿನ್ನ ಕಣ್ಣೊಳಗೆ ಇರುವುದು ನನ್ನ ಪ್ರೀತಿಯ ಬಿಂಬವೇ ಅಂದುಕೊಂಡು ತೃಪ್ತಿ ಪಟ್ಟಿದ್ದೇನೆ.ನಿನ್ನ ಕಪ್ಪು ಕುದುರೆಯ ಬೆನ್ನೇರಿದಾಗ ಮುಂದೊಂದು ದಿನ ನಮ್ಮ ಮಧ್ಯಮಗುವೊಂದು ಬಂದು ಕುಳಿತಂತೆ ಭಾಸವಾದ ಕನಸಿಗೆ ನಾಚಿ ನೀರಾಗಿ ಅಂತರ ಕಾಪಾಡಿಕೊಂಡಿದ್ದೇನೆ.

ಇವತ್ತಿಗೂ ನೀನೂ ನನ್ನ ಪ್ರೀತಿಸುತ್ತಿದ್ದಿಯಾ ಅನ್ನುವುದಕ್ಕೆ ಸ್ಪಷ್ಟ ಉತ್ತರ ಗೊತ್ತಿಲ್ಲ. ಆದರೂ ನಿನ್ನ ಪ್ರತಿ ನಡವಳಿಕೆಯಲ್ಲೂ ಪ್ರೀತಿಯ ಗಂಧ ನನ್ನ ಮುತ್ತಿಕ್ಕುತ್ತದೆ, ಉಸಿರ ಸೇರುತ್ತದೆ.ಉಸಿರ ತುಂಬಾ ನಿನ್ನ ಹೆಸರೇ ಎನ್ನುವುದನ್ನ ನಿನ್ನ ಮುಂದೆ ಕೂಗಿ ಹೇಳಬೇಕೆನಿಸುತ್ತೆ.ಗೆಳೆಯನಾಗಿ ಜೀವನಕ್ಕೆ ಕಾಲಿಟ್ಟವನು ಮುಂದೆ ಜೀವದ ಗೆಳೆಯನೆ ಆಗಿಬಿಡುತ್ತಿಯೆಂಬ ಸಣ್ಣ ಕಲ್ಪನೆಯಾದರೂ ನನ್ನಲಿತ್ತಾ ಎಂದರೆ ಇಲ್ಲ.ಸಣ್ಣ ಸುಳಿವೂ ನೀಡದೆ ಹಾಗೆ ಬಂದು ಮನದ ಬಾಂದಳಕ್ಕೆ ಕನಸುಗಳ ತಾರೆಗಳನ್ನು ಚೆಲ್ಲಿ ಹೋಗಿದ್ದಿಯಲ್ಲಾ? ಕನಸು ಕೊಟ್ಟವನು ಮನಸು ಕೊಡುವುದಿಲ್ಲವಾ? ನಿನ್ನೆ ನಾನು ಲಾಲಿ ಮಾತಾಡುತ್ತಿದ್ದಾಗ ಅವಳು ಹೇಳುತ್ತಿದ್ದಳು "ಲವ್ ನಲ್ಲಿ ಹುಡುಗಿಯರೇ ಪ್ರಪೋಸ್ ಮಾಡಿದರೆ ಅವರ ಸಂಬಂಧ ಗಟ್ಟಿಯಾಗಿರುತ್ತದಂತೆ..ಅದಿಕ್ಕೆ ಒಂದಿಷ್ಟು ಉದಾಹರಣೆಗಳನ್ನು ಕೂಡ ಕೊಟ್ಟಳು " ಯಾಕೋ ನಂಬಿಕೆ ಬಂತು. ನೀನೇ ಹೇಳುತ್ತಿಯೆಂದು ಕಾದಿದ್ದಾಯಿತು. ನಾನೇ ಮುಂದಾಗಿ ಕೇಳುತ್ತಿದ್ದೇನೆ.ಕನಸು ಕಂಗಳ ಮೌನರಾಗಕ್ಕೆ ದನಿಯಾಗಿ ಬರುತ್ತಿಯಾ?ಬದುಕಿಗೆ ಬೆಳಕಾಗುತ್ತಿಯಾ?

"ಕನಸುಗಳು ಆವಿಯಾಗಿ
ಬಾನಂಗಳಲಿ ಹೆಪ್ಪುಗಟ್ಟಿತ್ತು
ಕೈಗೆಟುಕದಂತೆ
ನೀ ಬಂದೆ ನನ್ನೊಳಗೆ ಈಗ
ಕರಗಿದ ಮೋಡಗಳ ಸೋನೆಮಳೆ."

ನೀನು ಒಪ್ಪಿದರೆ ನಾನೇ ಬರೆದ ನಾಲಕ್ಕು ಸಾಲುಗಳಿಗೆ ಅರ್ಥ ಬರುತ್ತದೆ. ಬದುಕಿಗೂ ಕೂಡ.. ಅಪ್ಪ ಅಮ್ಮನ ಪ್ರೀತಿ ಕಂಡಿಲ್ಲ ನೋಡು.ಅದಕ್ಕೆ ಆಕಾಂಕ್ಷೆಗಳು ಹೆಪ್ಪುಗಟ್ಟಿದ್ದು. ನಿನ್ನ ಪ್ರೀತಿ ನನ್ನೊಳಗೆ ಸುರಿವ ಸೋನೆಮಳೆಯಾಗುತ್ತಾ? ಕಣ್ಣ ಭಾಷೆಗೆ ಮಾತು ಬರುತ್ತಾ? ನೀನು ಬಾ ಎಂದರೆ ಓಡಿ ಬರುತ್ತೇನೆ. ನಿನ್ನ ಕನಸುಗಳಿಗೆ ಒಡತಿಯಾಗಿ, ನಿನಗೆ ಮಡದಿಯಾಗಿ. ಇಷ್ಟೆಲ್ಲಾ ನಿನಗೆ ಹೇಳುವಷ್ಟರಲ್ಲಿ ಬೆಳಕು ಹರಿದಿದೆ. ರವಿಯ ಹೊನ್ನ ಕಿರಣಗಳು ತೂರಿಕೊಂಡು ನುಗ್ಗುತ್ತಿದೆ.ಇವತ್ತು ಬಸ್ ಸ್ಟಾಂಡ್ ಹತ್ತಿರ ನೀನು ಬಂದಾಗ ಈ ಪತ್ರ ನಿನ್ನ ಕೈಗಿಟ್ಟು ಹೊರಡುತ್ತೇನೆ.ಕಪ್ಪು ಕುದುರೆಯ ಬೆನ್ನುಹತ್ತುವುದಿಲ್ಲ. ನಿನ್ನ ಒಪ್ಪಿಗೆಯಿದ್ದರೆ ಕಡ್ಡಾಯವಾಗಿ ಡೈರಿ ಮಿಲ್ಕ್ ಸಿಲ್ಕ್ ನೊಂದಿಗೆ ಆಂಜನೇಯ ಗುಡಿಗೆ ಸಂಜೆ ಆರಕ್ಕೆ ಬಾ. ಅಲ್ಲಿ ನಾನು ನಿನಗಾಗೆ ಕಾದಿರುತ್ತೇನೆ..ನೀನು ಬಂದೇ ಬರುತ್ತಿಯೆಂಬ ನಂಬಿಕೆಯೊಂದಿಗೆ, ಪ್ರೀತಿ ಜ್ಯೋತಿಯ ನಿನ್ನ ಕಣ್ಣಲ್ಲಿ ಕಾಣೋ ಹಂಬಲದೊಂದಿಗೆ.

-ಸುವಿಯ ಸುಮಾ.
11 ಕಾಮೆಂಟ್‌ಗಳು:

 1. ಅಹಾ .. ನವುರು ಸ್ಪರ್ಶದ ಅನುಭೂತಿ ... ಕನಸು ಕೊಟ್ಟವನು ಮನಸು ಕೊಡದೆ ಹೋಗಲಾರ .. ಇದೀಗ ಐದೂವರೆ ...ನೀನು ಡೈರಿ ಮಿಲ್ಕ್ ಸಿಲ್ಕ್ ಚಪ್ಪರಿಸುತ್ತಿರಬೇಕು ...!!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕನಸು ಕೊಟ್ಟವನು ಮನಸ್ಸಿನ ಜೊತೆಗೆ ಬದುಕಿಗೆ ಬೆಳಕಾಗಿ ಬಂದುಬಿಡಲೆಂದು ಹಾರೈಸಿ ಬಿಡಿ ಹುಸ್ಸೈನ್... ಧನ್ಯವಾದಗಳು..

   (ಡೈರಿ ಮಿಲ್ಕ್ ಮೆಲ್ಲುತ್ತಿಲ್ಲಾ.. ಕಲ್ಪನೆಯ ಪ್ರೇಮ ಪತ್ರವಾದ್ದರಿಂದ ಆ ಯೋಗ ಬಂದಿಲ್ಲಾ.. )

   ಅಳಿಸಿ
 2. "ಒಲವೆ ಜೀವನ ಸಾಕ್ಷಾತ್ಕಾರ" ಅಂತ ಅಣ್ಣಾವ್ರು ಹಾಡಿದಾಗ ಅದರಲ್ಲಿ ಓಡಾಡಿದ ಕ್ಯಾಮೆರಾ ಕೈಚಳಕ ಕೂಡ ಇದೆ ಭಾವವನ್ನು ಹರಿಸಿತ್ತು..ಒಲವು ಪರ್ವತದ ತಪ್ಪಲಿನಲ್ಲಿ ಹುಟ್ಟುವ ಝರಿಯ ಹಾಗೆ..ಹುಟ್ಟಿದ ಮೇಲೆ ಅದರ ಹರಿವು, ಪಾತ್ರ, ಅರಿವಾಗುವ ಮೊದಲೇ ಮನದ ಕಡಲ ಅಲೆಗಳ ಹುಯ್ದಾಟದಲ್ಲಿ ತೇಲುವ ದೋಣಿಯಾಗಿಬಿಡುತ್ತದೆ. ಅಂಥಹ ಮುಗ್ಧ ಭಾವನೆಗಳು ಇಲ್ಲಿ ಹುಟ್ಟಿಸುವ ಗುಂಗು ಲೇಖನದ ಮೊದಲಿಂದ ಆರಂಭವಾಗಿ ಕಡೆಯ ತನಕ ಹರಿದು ಮುಂದಿನ ಭಾಗಕ್ಕೆ ಕಾಯುವ ಹಾಗಿದೆ.. ಇಷ್ಟು ಸುಲಲಿತವಾಗಿ ಪದಗಳ ಜೊತೆ ಆಟವಾಡುವ ನಿನ್ನ ನೈಪುಣ್ಯ ನೋಡಿದಾಗ ಖುಷಿಯಾಗುತ್ತದೆ.ಸುಂದರ ಪತ್ರ ಪಿ.ಎಸ್.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಅಣ್ಣಯ್ಯ ...
   ಈಗ ಮತ್ತೆ ಈ ಪತ್ರ ಓದುತ್ತಿದ್ದಾಗ ಶೃಂಗಾರ ಜಾಸ್ತಿ ಆಯಿತೇನೋ ಅನ್ನೋ ಅಳುಕು ಕಾಡುತ್ತಿದೆ..

   ಅಳಿಸಿ
 3. ಒಲವಿನ ಸ್ವೆಟರ್ ಹೊದ್ದ ಮನಸಿನ ಬೆಚ್ಚನೆಯ ಮಧುರ ಭಾವಗಳು....
  ಸುಷ್ಮಾ - ಇಷ್ಟವಾಯಿತು ಭಾವ ಬರಹ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಒಲವಿಗೂ ಸ್ವೆಟರ್ ಗೂ ಬಿಟ್ಟಿರಲಾರದ ನಂಟು ಶ್ರೀ..
   ಧನ್ಯವಾದಗಳು...

   ಅಳಿಸಿ
 4. ಒಪ್ಪಿ ಅಪ್ಪುವುದು ಮಾತ್ರ ನಿನ್ನ ಕೆಲಸ.
  ಮೇಲಿನ ಸಾಲು special ಅನ್ನಿಸಿದ್ದು ಸುಳ್ಳಲ್ಲ.

  ಮನದ ರಂಗೋಲಿಗೆ ಬಣ್ಣ ಹಚ್ಚಿದವನಿಗೆ ಸಿಹಿ ಮುತ್ತುಗಳು ಎಂಬ ಒಕ್ಕಣೆಯೊಂದಿಗೆ ಮೊದಲ ಪ್ರೇಮ ಪತ್ರವ ಆರಂಭಿಸೋಣ ಅಂದುಕೊಂಡರೂ ಯಾಕೋ ಲಜ್ಜೆ ತಡೆದಿದೆ...

  ಪ್ರೀತಿ ಎಂಥೆಂಥ ಸಾಲುಗಳನ್ನು ಹುಟ್ಟು ಹಾಕಿಬಿಡುತ್ತದಲ್ವಾ...?

  ಸುಷ್ಮಾ ನಿನ್ನ ಬರಹದಲ್ಲಿ ಮನಸ್ಸು ಮಧುರವಾಗಿಸುವ ಭಾವಗಳು ತುಂಬಾ ಇವೆ...

  ಚಂದದ ಬರಹ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ರಾಘವ್ ಜೀ..
   ಮನಸ್ಸು ಮಧುರವಾಗಿದೆ ಎಂದು ಹೇಳಿ, ನನ್ನ ಮನಸ್ಸನ್ನೂ ಪ್ರಫುಲ್ಲವಾಗಿಸಿದಿರಿ ಧನ್ಯವಾದಗಳು..
   ತಮ್ಮ ಪ್ರತಿಕ್ರಿಯೆಯಿಂದ ತುಂಬಾ ಎನ್ನುವಷ್ಟು ಖುಷಿಯಾಯಿತು...

   ಅಳಿಸಿ
 5. ಹಳೆಯ ನೆನಪುಗಳನ್ನು ಮೀಟುವುದೂ ಒಂದು ಕಲೆ. ನಮ್ಮ ಕಾಲೇಜು ದಿನಗಳಿಗೆ ಹೊತ್ತೊಯ್ದ ಈ ಬರಹ ನೆಚ್ಚಿಗೆಯಾಯ್ತು. ಎಂತದೋ ಪುಳಕ...

  ಪ್ರತ್ಯುತ್ತರಅಳಿಸಿ