ಶುಕ್ರವಾರ, ಮಾರ್ಚ್ 15, 2013

ಹ್ಯಾಪಿ ಬರ್ತ್ ಡೇ ಅಮ್ಮಾ...

ತನ್ನ ಜೀವ ತನ್ನಲ್ಲಿ ಮೊಳಕೆಯೊಡೆಯುತ್ತಿದ್ದಾಗಿನಿಂದ ಹಿಡಿದು ಆ ಜೀವ ಬೆಳೆದು ತನ್ನೆತ್ತರದವರೆಗೆ ಬೆಳೆದು ನಿಂತಾಗಲೂ ಅದೇ ಮಮತೆ, ಪ್ರೀತಿ, ವಾತ್ಸಲ್ಯ ತೋರಿಸಲು ಬಹುಶಃ ಅಮ್ಮನೆಂಬ ದೇವತೆಯಿಂದ ಮಾತ್ರ ಸಾಧ್ಯ ಅನಿಸುತ್ತದೆ..ಎಳತ್ತಿನ ಕಪಿಚೇಷ್ಟೆ, ತುಂಟಾಟ, ಮುಗ್ದತೆ ಎಲ್ಲವನ್ನೂ ಮತ್ತದೇ ತುಂಬು ಪ್ರೀತಿಯಿಂದ ಒಪ್ಪಿಕೊಂಡು, ಎದೆಗವಚಿಕೊಂಡು ತಿದ್ದುತ್ತಾಳೆ. ಅವಳು ಹೇಳಿದ್ದನ್ನು ಸರಿಯಾಗಿ ಗ್ರಹಿಸಿಕೊಂಡು ಮಾಡಿದರೆ "ಜಾಣ/ಣೇ " ಅನ್ನುತ್ತಾ ಹುರಿದುಂಬಿಸುತ್ತಾಳೆ. ತನಗಾಗಿ ಏನಿಲ್ಲಾವಾದರೂ ತನ್ನ ಮಕ್ಕಳಿಗೆ ಎಲ್ಲದೂ ಇರಬೇಕೆಂದು ಆಸೆ ಪಡುತ್ತಾಳೆ, ಅವರ ಭವಿಷ್ಯಕ್ಕೆ ಬೆವರ ಬದಲು ರಕ್ತ ಹರಿಸಿದರೂ ಸೈ ಎಂದು ಟೊಂಕ ಕಟ್ಟಿ ನಿಲ್ಲುತ್ತಾಳೆ. ತನ್ನ ಆಸೆಗಳೆಲ್ಲಾ ಮಕ್ಕಳೇ ಎಂಬಂತೆ ಬದುಕುತ್ತಾಳಲ್ಲ ಅಂತಹ ಮಮತಾಮಯಿಯ ಋಣ ತೀರಿಸಲಾದೀತೇ..?? 


ನಾ ಬರೆಯಲು ಕಲಿತ ಮೊದಲಕ್ಷರ "ಅ ಆ ಇ ಈ.. " ಯಿಂದ ಹಿಡಿದು "..x y z" ವರೆಗೂ ಮೇಷ್ಟ್ರು ಕಲಿಸುವ ಮೊದಲೇ ಅವಳೇ ಕೈ ಹಿಡಿದು ತಿದ್ದಿ ಬರೆಸಿದ್ದಳು, ಹಾಡು, ಭಾಷಣ, ಚಿತ್ರ...ಎಲ್ಲದಕ್ಕೂ ಮೊದಲ ಗುರುವೇ ಅಮ್ಮಾ..ಬಾಲ್ಯದಲ್ಲಿ ರಾತ್ರಿ ಭಯ ಬಿದ್ದಾಗ, ಶಿವ ಪಂಚಾಕ್ಷರಿ ಜಪಿಸು ಭಯ ಹತ್ತಿರವೇ ಸುಳಿಯಲ್ಲ ಅಂತ ಅವಳು ಅಂದ ಮಾತು ಇವತ್ತಿಗೂ ನನ್ನ ಪಾಲಿನ ಅಚಲ ಸತ್ಯ. ಜೀವನ ಮತ್ತೆ ಮತ್ತೆ ಪೆಟ್ಟು ಕೊಟ್ಟು ಭಯ ಬೀಳಿಸಿದಾಗಲೂ ಎದೆಗುಂದದೆ, ಧೃತಿಗೆಡದೆ ಮುನ್ನುಗ್ಗಿದಳಲ್ಲ ಅವಳಿಗೂ ಶಿವ ಪಂಚಾಕ್ಷರಿಯೇ ಆ ಧೈರ್ಯ ಕೊಟ್ಟಿದ್ದಾ..!? ಸೋಲು, ನಿಂದನೆ, ಅವಮಾನಗಳ ಜೊತೆಯಿದ್ದರೂ ತನ್ನ  ಮಕ್ಕಳೇ ತನ್ನ ಸರ್ವಸ್ವ ಎಂದುಕೊಂಡು ಕಿವುಡಿಯಂತೆ ವರ್ತಿಸಿದಳಲ್ಲ,  ದುಡಿದು ದುಡಿದೇ ಮಕ್ಕಳನ್ನು  ದೊಡ್ಡವರನ್ನಾಗಿ ಮಾಡುವ ಕನಸಲ್ಲಿದ್ದಾಳಲ್ಲ ಅಂತಹ ಅವಳ ಅದಮ್ಯ ವಾತ್ಸಲ್ಯಕ್ಕೆ ಏನೆನ್ನೋಣ....??ಹೆಡೆದ ಮಗನೊಬ್ಬ ಅಂಗವಿಕಲನಾಗಿ ಹುಟ್ಟಿದಾಗಲೂ ಬೇಸರಿಸದೆ, ಕಾಣದ ದೇವರ ಹಳಿಯದೆ, ಬದಲಾಗಿ ಆ ದೇವರನ್ನು ಮತ್ತೂ ಹೆಚ್ಚೆಚ್ಚು ನಂಬುತ್ತಾ, ಹರಕೆ ಕಟ್ಟಿಕೊಳ್ಳುತ್ತಾ ಕೈ ಜೋಡಿಸುತ್ತಾಳೆ, ಅವನಿಗಾಗಿ ಪ್ರಾರ್ಥಿಸುತ್ತಾಳೆ.. ದೇವರು ಕಲ್ಲಾಗೆ ಕುಳಿತಿದ್ದಾಗಲೂ ಛಲ ಬಿಡದೆ ಅವನ ವಿಧ್ಯಾಭ್ಯಾಸಕ್ಕಾಗಿ, ಅಗಲುವಿಕೆಯ ನೋವನ್ನೆಲ್ಲಾ ತಡೆದುಕೊಂಡು ಐದು ವರ್ಷದ ಕಂದನನ್ನು ದೂರದ ಊರಿಗೆ ಕಳುಹಿಸಲು ಒಪ್ಪುತ್ತಾಳೆ.ದೇವರಿಗೆ ಶರಣಾಗುತ್ತಾಳೆ. ಮೌನವಾಗಿ ಬಿಕ್ಕುತ್ತಾಳೆ. ಅಷ್ಟರಲ್ಲಿ ಮಡಿಲು ತುಂಬಿದ್ದ ಇನ್ನೊಬ್ಬ ಮಗ. ಆಕೆ ಮತ್ತೆ ಮೌನಿ. ದುಡಿಯುವುದಕ್ಕಾಗಿಯೇ ಹುಟ್ಟಿದ್ದಾಳೇನೋ ಎಂಬಂತೆ.. ಸೋಲನ್ನೇ ಸೋಲಿಸಿ ಬದುಕುತ್ತಾಳೆ ಅವಳೇ ಹೇಳುವಂತೆ, ತನ್ನ ಮೂರು ಜೀವಗಳಿಗಾಗಿ.
ಹಿಂದೊಮ್ಮೆ ನಾನೇ ಬರೆದಂತೆ
"ಅಮ್ಮ -
ಒತ್ತಿ ಬರುವ
ದುಃಖಕ್ಕೆ
ತಡೆಗೋಡೆಯಾಗಿ
ನಿಂತವಳು "
 
 


ನೋವು ನಲಿವೂ ಯಾವುದೇ ಇದ್ದರೂ ಮೊದಲು ನೆನಪಾಗುವಳೇ, ಒದಗುವವಳೇ ಅವಳು. ನಲಿವಿಗೆ ನಗುವಾಗಿ, ನೋವಿಗೆ ದನಿಯಾಗಿ, ದುಃಖಕ್ಕೆ ಹೆಗಲಾಗಿ... ಅಮ್ಮಾ ಎಂದರೆ ಎಲ್ಲವೂ..

ನಾಳೆ ಮಾರ್ಚ್ ಹದಿನಾರು
ಇಂತಹ ಅಮ್ಮನೆಂಬ ಅಮ್ಮನ ಜನುಮದಿನ..
ತನ್ನ ಮಕ್ಕಳ ಜನುಮದಿನವನ್ನು ಸಂಭ್ರಮದಿಂದ ಆಚರಿಸುವ ಅಮ್ಮ, ತನ್ನ ಜನುಮದಿನವನ್ನು ಮರೆತೇ ಬಿಟ್ಟಿರುತ್ತಾಳೆ. ಮಕ್ಕಳು ನೆನಪಿಸಿದಾಗ ಸಂತಸಕ್ಕೆ ಕಣ್ಣು ತುಂಬುತ್ತಾಳೆ. ಖುಷಿಯಿಂದ ಗಿಫ್ಟ್ ಕೊಡಿಸಿದರೆ ನನಗ್ಯಾಕೆ ಇದೆಲ್ಲಾ ಅನ್ನುತ್ತಾಳೆ, ಇದೇ ದುಡ್ಡು ನಿನ್ನಲ್ಲೇ ಇದ್ದಿದ್ದರೆ ನಿನಗ್ಯಾವುದಕ್ಕೋ ಆಗುತ್ತಿತ್ತಲ್ಲ ಅನ್ನುತ್ತಾಳೆ..ಮತ್ತೆ ಮತ್ತೆ ನಿಸ್ವಾರ್ಥಿಯಾಗುವ ಅಮ್ಮ ದೇವರಂತೆ ಭಾಸವಾಗುತ್ತಾಳೆ.ಅಮ್ಮ ಎನ್ನುವುದರಲ್ಲೇ ಪ್ರಪಂಚವನ್ನೇ ಕಾಣುವ ಅಮ್ಮನ ಮಕ್ಕಳಿಂದ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು. 


-ನೀವೂ ಅಮ್ಮನಿಗೆ ಶುಭಾಶಯ ಹೇಳುತ್ತಿರಲ್ಲಾ..
ಅಮ್ಮನ ಕನಸುಗಳೆಲ್ಲಾ ನನಸಾಗುವಂತೆ ಹಾರೈಸುತ್ತಿರಲ್ಲ..

 ಇಂತೂ ಅಮ್ಮನ ಮಕ್ಕಳು
-ಸುಷ್ಮಾ
-ಸುಮಂತ್
-ಜಗ್ಗು