ಶುಕ್ರವಾರ, ಮಾರ್ಚ್ 15, 2013

ಹ್ಯಾಪಿ ಬರ್ತ್ ಡೇ ಅಮ್ಮಾ...

ತನ್ನ ಜೀವ ತನ್ನಲ್ಲಿ ಮೊಳಕೆಯೊಡೆಯುತ್ತಿದ್ದಾಗಿನಿಂದ ಹಿಡಿದು ಆ ಜೀವ ಬೆಳೆದು ತನ್ನೆತ್ತರದವರೆಗೆ ಬೆಳೆದು ನಿಂತಾಗಲೂ ಅದೇ ಮಮತೆ, ಪ್ರೀತಿ, ವಾತ್ಸಲ್ಯ ತೋರಿಸಲು ಬಹುಶಃ ಅಮ್ಮನೆಂಬ ದೇವತೆಯಿಂದ ಮಾತ್ರ ಸಾಧ್ಯ ಅನಿಸುತ್ತದೆ..ಎಳತ್ತಿನ ಕಪಿಚೇಷ್ಟೆ, ತುಂಟಾಟ, ಮುಗ್ದತೆ ಎಲ್ಲವನ್ನೂ ಮತ್ತದೇ ತುಂಬು ಪ್ರೀತಿಯಿಂದ ಒಪ್ಪಿಕೊಂಡು, ಎದೆಗವಚಿಕೊಂಡು ತಿದ್ದುತ್ತಾಳೆ. ಅವಳು ಹೇಳಿದ್ದನ್ನು ಸರಿಯಾಗಿ ಗ್ರಹಿಸಿಕೊಂಡು ಮಾಡಿದರೆ "ಜಾಣ/ಣೇ " ಅನ್ನುತ್ತಾ ಹುರಿದುಂಬಿಸುತ್ತಾಳೆ. ತನಗಾಗಿ ಏನಿಲ್ಲಾವಾದರೂ ತನ್ನ ಮಕ್ಕಳಿಗೆ ಎಲ್ಲದೂ ಇರಬೇಕೆಂದು ಆಸೆ ಪಡುತ್ತಾಳೆ, ಅವರ ಭವಿಷ್ಯಕ್ಕೆ ಬೆವರ ಬದಲು ರಕ್ತ ಹರಿಸಿದರೂ ಸೈ ಎಂದು ಟೊಂಕ ಕಟ್ಟಿ ನಿಲ್ಲುತ್ತಾಳೆ. ತನ್ನ ಆಸೆಗಳೆಲ್ಲಾ ಮಕ್ಕಳೇ ಎಂಬಂತೆ ಬದುಕುತ್ತಾಳಲ್ಲ ಅಂತಹ ಮಮತಾಮಯಿಯ ಋಣ ತೀರಿಸಲಾದೀತೇ..?? 


ನಾ ಬರೆಯಲು ಕಲಿತ ಮೊದಲಕ್ಷರ "ಅ ಆ ಇ ಈ.. " ಯಿಂದ ಹಿಡಿದು "..x y z" ವರೆಗೂ ಮೇಷ್ಟ್ರು ಕಲಿಸುವ ಮೊದಲೇ ಅವಳೇ ಕೈ ಹಿಡಿದು ತಿದ್ದಿ ಬರೆಸಿದ್ದಳು, ಹಾಡು, ಭಾಷಣ, ಚಿತ್ರ...ಎಲ್ಲದಕ್ಕೂ ಮೊದಲ ಗುರುವೇ ಅಮ್ಮಾ..ಬಾಲ್ಯದಲ್ಲಿ ರಾತ್ರಿ ಭಯ ಬಿದ್ದಾಗ, ಶಿವ ಪಂಚಾಕ್ಷರಿ ಜಪಿಸು ಭಯ ಹತ್ತಿರವೇ ಸುಳಿಯಲ್ಲ ಅಂತ ಅವಳು ಅಂದ ಮಾತು ಇವತ್ತಿಗೂ ನನ್ನ ಪಾಲಿನ ಅಚಲ ಸತ್ಯ. ಜೀವನ ಮತ್ತೆ ಮತ್ತೆ ಪೆಟ್ಟು ಕೊಟ್ಟು ಭಯ ಬೀಳಿಸಿದಾಗಲೂ ಎದೆಗುಂದದೆ, ಧೃತಿಗೆಡದೆ ಮುನ್ನುಗ್ಗಿದಳಲ್ಲ ಅವಳಿಗೂ ಶಿವ ಪಂಚಾಕ್ಷರಿಯೇ ಆ ಧೈರ್ಯ ಕೊಟ್ಟಿದ್ದಾ..!? ಸೋಲು, ನಿಂದನೆ, ಅವಮಾನಗಳ ಜೊತೆಯಿದ್ದರೂ ತನ್ನ  ಮಕ್ಕಳೇ ತನ್ನ ಸರ್ವಸ್ವ ಎಂದುಕೊಂಡು ಕಿವುಡಿಯಂತೆ ವರ್ತಿಸಿದಳಲ್ಲ,  ದುಡಿದು ದುಡಿದೇ ಮಕ್ಕಳನ್ನು  ದೊಡ್ಡವರನ್ನಾಗಿ ಮಾಡುವ ಕನಸಲ್ಲಿದ್ದಾಳಲ್ಲ ಅಂತಹ ಅವಳ ಅದಮ್ಯ ವಾತ್ಸಲ್ಯಕ್ಕೆ ಏನೆನ್ನೋಣ....??ಹೆಡೆದ ಮಗನೊಬ್ಬ ಅಂಗವಿಕಲನಾಗಿ ಹುಟ್ಟಿದಾಗಲೂ ಬೇಸರಿಸದೆ, ಕಾಣದ ದೇವರ ಹಳಿಯದೆ, ಬದಲಾಗಿ ಆ ದೇವರನ್ನು ಮತ್ತೂ ಹೆಚ್ಚೆಚ್ಚು ನಂಬುತ್ತಾ, ಹರಕೆ ಕಟ್ಟಿಕೊಳ್ಳುತ್ತಾ ಕೈ ಜೋಡಿಸುತ್ತಾಳೆ, ಅವನಿಗಾಗಿ ಪ್ರಾರ್ಥಿಸುತ್ತಾಳೆ.. ದೇವರು ಕಲ್ಲಾಗೆ ಕುಳಿತಿದ್ದಾಗಲೂ ಛಲ ಬಿಡದೆ ಅವನ ವಿಧ್ಯಾಭ್ಯಾಸಕ್ಕಾಗಿ, ಅಗಲುವಿಕೆಯ ನೋವನ್ನೆಲ್ಲಾ ತಡೆದುಕೊಂಡು ಐದು ವರ್ಷದ ಕಂದನನ್ನು ದೂರದ ಊರಿಗೆ ಕಳುಹಿಸಲು ಒಪ್ಪುತ್ತಾಳೆ.ದೇವರಿಗೆ ಶರಣಾಗುತ್ತಾಳೆ. ಮೌನವಾಗಿ ಬಿಕ್ಕುತ್ತಾಳೆ. ಅಷ್ಟರಲ್ಲಿ ಮಡಿಲು ತುಂಬಿದ್ದ ಇನ್ನೊಬ್ಬ ಮಗ. ಆಕೆ ಮತ್ತೆ ಮೌನಿ. ದುಡಿಯುವುದಕ್ಕಾಗಿಯೇ ಹುಟ್ಟಿದ್ದಾಳೇನೋ ಎಂಬಂತೆ.. ಸೋಲನ್ನೇ ಸೋಲಿಸಿ ಬದುಕುತ್ತಾಳೆ ಅವಳೇ ಹೇಳುವಂತೆ, ತನ್ನ ಮೂರು ಜೀವಗಳಿಗಾಗಿ.
ಹಿಂದೊಮ್ಮೆ ನಾನೇ ಬರೆದಂತೆ
"ಅಮ್ಮ -
ಒತ್ತಿ ಬರುವ
ದುಃಖಕ್ಕೆ
ತಡೆಗೋಡೆಯಾಗಿ
ನಿಂತವಳು "
 
 


ನೋವು ನಲಿವೂ ಯಾವುದೇ ಇದ್ದರೂ ಮೊದಲು ನೆನಪಾಗುವಳೇ, ಒದಗುವವಳೇ ಅವಳು. ನಲಿವಿಗೆ ನಗುವಾಗಿ, ನೋವಿಗೆ ದನಿಯಾಗಿ, ದುಃಖಕ್ಕೆ ಹೆಗಲಾಗಿ... ಅಮ್ಮಾ ಎಂದರೆ ಎಲ್ಲವೂ..

ನಾಳೆ ಮಾರ್ಚ್ ಹದಿನಾರು
ಇಂತಹ ಅಮ್ಮನೆಂಬ ಅಮ್ಮನ ಜನುಮದಿನ..
ತನ್ನ ಮಕ್ಕಳ ಜನುಮದಿನವನ್ನು ಸಂಭ್ರಮದಿಂದ ಆಚರಿಸುವ ಅಮ್ಮ, ತನ್ನ ಜನುಮದಿನವನ್ನು ಮರೆತೇ ಬಿಟ್ಟಿರುತ್ತಾಳೆ. ಮಕ್ಕಳು ನೆನಪಿಸಿದಾಗ ಸಂತಸಕ್ಕೆ ಕಣ್ಣು ತುಂಬುತ್ತಾಳೆ. ಖುಷಿಯಿಂದ ಗಿಫ್ಟ್ ಕೊಡಿಸಿದರೆ ನನಗ್ಯಾಕೆ ಇದೆಲ್ಲಾ ಅನ್ನುತ್ತಾಳೆ, ಇದೇ ದುಡ್ಡು ನಿನ್ನಲ್ಲೇ ಇದ್ದಿದ್ದರೆ ನಿನಗ್ಯಾವುದಕ್ಕೋ ಆಗುತ್ತಿತ್ತಲ್ಲ ಅನ್ನುತ್ತಾಳೆ..ಮತ್ತೆ ಮತ್ತೆ ನಿಸ್ವಾರ್ಥಿಯಾಗುವ ಅಮ್ಮ ದೇವರಂತೆ ಭಾಸವಾಗುತ್ತಾಳೆ.ಅಮ್ಮ ಎನ್ನುವುದರಲ್ಲೇ ಪ್ರಪಂಚವನ್ನೇ ಕಾಣುವ ಅಮ್ಮನ ಮಕ್ಕಳಿಂದ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು. 


-ನೀವೂ ಅಮ್ಮನಿಗೆ ಶುಭಾಶಯ ಹೇಳುತ್ತಿರಲ್ಲಾ..
ಅಮ್ಮನ ಕನಸುಗಳೆಲ್ಲಾ ನನಸಾಗುವಂತೆ ಹಾರೈಸುತ್ತಿರಲ್ಲ..

 ಇಂತೂ ಅಮ್ಮನ ಮಕ್ಕಳು
-ಸುಷ್ಮಾ
-ಸುಮಂತ್
-ಜಗ್ಗು
 
 
 

16 ಕಾಮೆಂಟ್‌ಗಳು:

 1. ಅಮ್ಮನೆಂದರೆ ಮಾತಿಲ್ಲ. ಅಮ್ಮನಿಗಾಗಿ ನೀವು ಕೊಡುತ್ತಿರುವ ಈ ನುಡಿಕೊಡುಗೆ ಅನನ್ಯ.ಹಂಚಿಕೊಂಡಿರುವೆ...

  ಪ್ರತ್ಯುತ್ತರಅಳಿಸಿ

 2. ಅಮ್ಮನಿಲ್ಲದ ಜೀವ ಎಂದರೆ ದೈವ. ಆ ದೈವಕ್ಕೆ ಅಮ್ಮನ ಪ್ರೀತಿ, ಮಮತೆಯ ಹನಿ ಬೇಕು ಎನಿಸಿದಾಗ ತ್ರಿಮೂರ್ತಿಗಳು ಸತಿ ಅನುಸೂಯಳಿಗೆ ಮಕ್ಕಳಾಗಿ ತಮ್ಮ ಹಂಬಲವನ್ನು ತೀರಿಸಿಕೊಂಡರು. ಅಂಥಹ ದೇವರಿಗೆ ದೇವರು ಈ ತಾಯಿ. ಪಿ. ಎಸ್ ತಾಯಿಯ ಬಗ್ಗೆ ಬರೆದಿರುವ ಲೇಖನವಲ್ಲ ಇದು. ಇದು ತಾಯಿಯ ಹೃದಯ ನಿನ್ನ ಮೇಲೆ ಅಚ್ಚೊತ್ತಿರುವ ಪದಗಳನ್ನು ಅಕ್ಷರಗಳಾಗಿ ಮೂಡಿಸಿದ್ದೀಯ. ಸೊಗಸಾಗಿದೆ ತುಂಬಾ ಇಷ್ಟವಾಯಿತು
  ನಿಮ್ಮ ಕುಟುಂಬದ ಕನಸುಗಳೆಲ್ಲ ತಾಯಿಯ ಕಣ್ಣಲ್ಲಿ ಮುಂಚು ತರಲಿ. ಅಮ್ಮನಿಗೆ ಜನುಮದ ದಿನದ ಶುಭಾಶಯಗಳು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಣ್ಣಯ್ಯಾ...
   ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.. :)

   ಅಳಿಸಿ
 3. ಈ ಆಯಂದಿರೇ ಹೀಗೆ
  ತಮಗೆ ಹಸಿವಾದರೆ ನಮಗೆ ಉಣಬಡಿಸುವ
  ತಮಗೆ ಛಳಿಯಾದರೆ ನಮಗೆ ಕಂಬಳಿ ಹೊದೆಸುವ
  ನಾವು ಬಿದ್ದಾಗ ತಬ್ಬಿ ಸಂತೈಸುವ
  ನಾವು ಗೆದ್ದಾಗ ಬರೀ ನಕ್ಕು ಸುಮ್ಮನಾಗುವ
  ನಮ್ಮ ಬದುಕ ರೂಪಿಸುವುದರಲ್ಲೇ ತಮ್ಮ ಬದುಕ ಸವೆಸಿಬಿಡೋ
  ವಿಚಿತ್ರ ಜೀವಗಳು....ದೇವರಿದ್ದಾನೋ ಇಲ್ಲವೋ ಅಮ್ಮನಿದ್ದಾಳೆ ಕಾಯಲು....
  ಆ ಜೀವ ಹರಸಲಿ ನಮ್ಮಂಥ ಕಿರಿಯರನೆಲ್ಲ...
  ನಿನ್ನಮ್ಮಂಗೆ ನನ್ನ ಕಡೆಯಿಂದಲೂ ನಮನಗಳ ತಿಳಿಸಿಬಿಡು...
  :::
  ಸುಷ್ಮಾ - ಅಮ್ಮನಿಗಾಗಿ ಬರೆದ ಸಾಲುಗಳು ತುಂಬ ಇಷ್ಟವಾದವು...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಶ್ರೀ... ನೀವು ಆಯಿಯ ಬಗ್ಗೆ ಬರೆದಿದ್ದನ್ನ ಓದಿದ್ದೆ..
   ಹೌದು... ನೀವೇ ಹೇಳಿದಂತೆ ಅಮ್ಮಂದಿರೆ ಹೀಗೆ ತಮ್ಮ ಅವಶ್ಯಕತೆಗಳನ್ನು ಮಕ್ಕಳಿಗೆ ಪೂರೈಸಿ ತೃಪ್ತಿ ಪಟ್ಟುಕೊಳ್ಳುವವರು.. :)
   ಧನ್ಯವಾದಗಳು ಪ್ರತಿಕ್ರಿಯೆಗೆ..

   ಅಳಿಸಿ
 4. ಸುಷ್ಮಾ...ನಿಮ್ಮ ಅಮ್ಮನಿಗೆ ಹುಟ್ಟುಹಬ್ಬದ ಪ್ರೀತಿಯ ಶುಭ ಹಾರೈಕೆಗಳು... :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸುಮತಿ ಅಕ್ಕಾ... ಧನ್ಯವಾದಗಳು..
   ನನ್ನ ಬ್ಲಾಗ್ ಗೆಳೆಯರು, ಮುಖ ಪುಸ್ತಕದ ಗೆಳೆಯರ ಶುಭಾಶಯಗಳ ಬಂಡಲ್ ಅನ್ನೇ ಮನೆಗೆ ಪಾರ್ಸೆಲ್ ಮಾಡಿದ್ದೇನೆ :)

   ಇನ್ನೊಂದು ವಿಶೇಷ ಅಂದರೆ ನನ್ನ ಅಮ್ಮನ ಹೆಸರು ಮತ್ತು ನಿಮ್ಮ ಹೆಸರು ಒಂದೇ.. :)

   ಅಳಿಸಿ
 5. ಓದುತ್ತಿದ್ದಂತೆ ಒಮ್ಮೆ ಮೈ ಜುಮ್ ಎಂದಿತು. ಅಮ್ಮನ ಜನುಮ ದಿನಕ್ಕೊಂದು ಪ್ರೀತಿಯ ಕೊಡುಗೆ. ಇಷ್ಟವಾಯಿತು. ಜನುಮ ದಿನದ ಶುಭ ಹಾರೈಕೆಗಳನ್ನ ತಿಳಿಸಿಬಿಡಿ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಗಣೇಶ್ ಜೀ...
   ತಮ್ಮ ಶುಭಾಶಯ ತಲುಪಿಸಿದ್ದೇನೆ... ಮೆಚ್ಚುಗೆಗೆ ಧನ್ಯವಾದಗಳು :)

   ಅಳಿಸಿ
 6. Happy happy Birthday amma..:) and Thank you very much for giving me a cute, idiot adorable darling friend... :) waiting for a big party with a chocolate cake.. :) Kothi kodsilla andre ammange helateeni kane...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸಂಧ್ಯಾ ಡಾರ್ಲಿಂಗ್..
   ಚಂದ ಚಂದನೆಯ ನಿನ್ನ ಪ್ರತಿಕ್ರಿಯೆಗೆ ಧನ್ಯವಾದಗಳು ಕಣೇ ಹುಡುಗಿ :)

   ಅಳಿಸಿ
 7. ಹ್ಯಾಪಿ birth day ಅಮ್ಮ :)
  ಪ್ರೀತಿ ,ಆಶೀರ್ವಾದದಲ್ಲಿ ನಂಗೂ ಒಂದು ಪಾಲಿರಲಿ

  ಮನ ಮುಟ್ಟೋ ಶುಭಾಶಯ ಪತ್ರ ತುಂಬಾ ಇಷ್ಟವಾಯ್ತು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿನಗೊಂದು ಪಾಲಿಡದೇ ನಾ ಬಾಚಿಕೊಂಡೇನೇ ಮುದ್ದಮ್ಮಾ.. ??
   ಪ್ರತಿಕ್ರಿಯೆಗೆ ಧನ್ಯವಾದಗಳು..

   ಅಳಿಸಿ
 8. ಒಲುಮೆಯ ಅಮ್ಮನಿಗೆ ನಮ್ಮದೂ ಶುಭಾಶಯ ತಲುಪಿಸಿಬಿಡಿ. ಈ ನಗು ಹೀಗೆ ಇರಲಿ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಸರ್ ತಮ್ಮ ಪ್ರತಿಕ್ರಿಯೆಗೆ.. ಹೀಗೆ ಹರಸುತ್ತಿರಿ.. :)

   ಅಳಿಸಿ