ಮಂಗಳವಾರ, ಏಪ್ರಿಲ್ 9, 2013

ತಬ್ಬಲಿ..

ಅಪ್ಪನೆಂದು ನಾ ಕರೆಯುತ್ತಿದ್ದವ ಉಸಿರು ನಿಲ್ಲಿಸಿ ಶವವಾಗಿದ್ದಾನೆ. ಅವನಿಗಾಗಿ ಅಳುವವರು ಯಾರೂ ಇಲ್ಲ.. ನನ್ನ ಕಣ್ಣಲ್ಲೂ ಅವನಿಗಾಗಿ ಒಂದು ಹನಿ ನೀರು ತೊಟ್ಟಿಕ್ಕುವುದಿಲ್ಲ.ಇವತ್ತೂ ಬದುಕನ್ನೊಂದು ಪ್ರಶ್ನೆಯಾಗೇ ಬಿಟ್ಟು ಎದ್ದು ಹೋಗಿರುವ ಅವನಿಗಾಗಿ ನಾ ಕಣ್ತುಂಬಿಕೊಳ್ಳಲೇ..!?ರಾತ್ರಿ ಊಟ ಮುಗಿಸಿ ಮಲಗಿದ್ದವ ಬೆಳಗ್ಗೆ ಮತ್ತೆ ಮೇಲೆ ಏಳಲಿಲ್ಲ.. ಅನಾರೋಗ್ಯ, ಸಾಯುವಂತಹ ಮುದಿ ವಯಸ್ಸು ಎರಡೂ ಅಲ್ಲಾ.. ಆದರೂ ಇಂತದ್ದೊಂದು ಸಾವು..ಅಪ್ಪನೆಂಬುವವನ ಬಗ್ಗೆ ಒಂದಿಷ್ಟು ಕನಿಕರ ಇವತ್ತಿನವರೆಗೂ ಇತ್ತು.. ಅವನ ಸಾವು ಅರಗಿಸಿಕೊಳ್ಳಲಾಗದೆ ಇರುವುದು ಇದೆಯಲ್ಲ, ಇದು ದ್ವೇಷದ ಕಿಡಿ ಹತ್ತಿಸುತ್ತಿದೆ. ಅವನ ಸಾವು ಕೂಡ ನೆಮ್ಮದಿಯಾಗೇ ಬಂತಲ್ಲ.. ನನ್ನ ತಳಮಳ. ಒಂದಿಷ್ಟು ನೋವು, ನರಳಾಟ, ಜೀವನದ ಕೊನೆಯಲ್ಲೊಂದು ಕಣ್ಣಲ್ಲಿ ಪಶ್ಚಾತಾಪದ ಹನಿ ಉರುಳಿಸದೆ ಹೋಗಿಬಿಟ್ಟ, ನಾನೊಂದು ಸಣ್ಣ ನಿಟ್ಟುಸಿರೂ ಬಿಡದಂತೆ. 

ಗಂಡನ ಹೆಣದ ಮುಂದೆ ಚಿಕ್ಕಮ್ಮ ಕುಂತಿದ್ದಳು ಅವಳ ಇಬ್ಬರು ಗಂಡನ ಮನೆಯಲ್ಲಿರೋ ಹೆಣ್ಣು ಮಕ್ಕಳಿಗೆ (ನಾ ಅವರನ್ನು ತಂಗಿಯರೆನ್ನುವುದಿಲ್ಲಾ.. ) ಫೋನ್ ಮಾಡಿ ವಿಷಯ ತಿಳಿಸಲಾಗಿತ್ತು..ನನ್ನಮ್ಮನ ಹೊಟ್ಟೆಯಲ್ಲೇ ಹುಟ್ಟಿದ ಅಣ್ಣ ಮುಂದಿನ ಕಾರ್ಯಕ್ಕೆ ಕರ್ತವ್ಯದಂತೆ ಓಡಾಡುತ್ತಿದ್ದ..ಅತ್ತಿಗೆ ನನ್ನೊಂದಿಗೆ ಒಂದು ಮೂಲೆ ಸೇರಿದ್ದಳು.ನನಗೆ ಆಗಿಲ್ಲದ ದುಃಖ(!?)ಕ್ಕೆ ಸಾಂತ್ವನ ನೀಡುವಂತೆ ನಟಿಸುತ್ತಾ..ಬಂಧು ಬಳಗ ದೊಡ್ದದಾಗಿ ನೆರೆಯಲಾರಂಭಿಸಿತ್ತು.. ಎಲ್ಲರೂ ಕನಿಕರಿಸುವವರೇ ನನ್ನ ಮೇಲೆ..

"ತಾಯಿ ಇಲ್ಲದ ಮಗು, ಈಗ ಅಪ್ಪನನ್ನೂ ಕಳಕೊಂಡು ತಬ್ಬಲಿಯಾಯಿತು.. "
"ಅಣ್ಣನಿಗಂತೂ ಜವಾಬ್ದಾರಿ ಇಲ್ಲಾ.. ಅಪ್ಪನಂತೆಯೇ.. ಇದರ ಮುಂದಿನ ಭವಿಷ್ಯ ಏನೋ.. "
"ಅವನಿದ್ದಾಗಲೇ ಒಂದು ಮದುವೆ ಅಂತ ಆಗಿದ್ದಿದ್ರೆ...ವಯಸ್ಸೂ ಮೀರುತ್ತಿದೆ.. "
ಸೊಬರಗರೆಲ್ಲಾ ಆಡಿದ ನೂರೆಂಟು ಮಾತುಗಳಿಗೆ ನಾನು ಮೂಗಿ ಮತ್ತು ಕಿವುಡಿಯಂತಾಗಿ ಬಿಟ್ಟಿದ್ದೆ.. ಒಳಗೆ ಜ್ವಾಲಾಮುಖಿ ಕುದಿಯಲಾರಂಭಿಸಿತ್ತು.

ಚಿಕ್ಕಮ್ಮನ ಮಕ್ಕಳು ಬಂದಿದ್ದರು.. ಕಾರ್ಯ ಸಸೂತ್ರವಾಗಿ ನಡೆಯಿತು. ಚಿಕ್ಕಮ್ಮನ ಮನೆಯಲ್ಲಿ ಉಳಿಯೋ ಮನಸ್ಸು ಬರುವುದಿಲ್ಲ..ಆಕೆ ಉಳಿಸಿಕೊಳ್ಳುವುದೂ ಇಲ್ಲಾ.. ನಾನು ಮತ್ತೆ ನನ್ನ ಹಾಸ್ಟೆಲ್ ಗೆ ಹೊರಟೆ..ಸಾವಿನ ಮನೆಯಿಂದ ಹಾಗೆ ಹೊರಡಬಾರದಂತೆ ಗಂಜಿಗೆ ಉಪ್ಪು ಸೇರಿಸಿ ಕೊಟ್ಟಿದ್ದನ್ನ ಕುಡಿದೆ. ಅತ್ತಿಗೆ ತನ್ನ ಮನೆಗೆ ಕರೆದಳು. ಅಣ್ಣನ ಮನೆಗೇ ಹೋಗುವುದೆಂದು ನಿರ್ಧರಿಸಿ ಅಣ್ಣನ ಮನೆಗೆ ಬಂದೆ. ಅವನೋ ನಿರ್ಭಾವುಕ.. ಎಂದಿನಂತೆ ಇದ್ದ. ಅಪ್ಪ ಆತ್ಮಬಂಧುವೆಂದು ಯಾವತ್ತೂ ನಮಗನಿಸಲೇ ಇಲ್ಲಾ.. ಅಪ್ಪನ ಕನಿಷ್ಠ ಜವಾಬ್ದಾರಿಗಳನ್ನು ಹೊತ್ತಿಲ್ಲದ ಅವನ ಮೇಲೆ ಅಂತಹ ಭಾವನೆ ಹೇಗೆ ಬರಲು ಸಾಧ್ಯ ..? ವಿಷಯ ತಿಳಿದ ಅಜ್ಜಿ ಓಡೋಡಿ ಬಂದಿದ್ದಳು ಅಣ್ಣನ ಮನೆಗೆ.. ಎಂಬತ್ತು ಎಂಭತ್ತೈದರ ಆಸುಪಾಸಿನ ಅಜ್ಜಿಯ ಕಣ್ಣಲ್ಲಿ ನನ್ನ ಕಂಡ ಕೂಡಲೇ ನೀರಾಡಿತ್ತು..ತಬ್ಬಿ ಅತ್ತುಬಿಟ್ಟಳು... ಹೇಳುವುದೇನಿರಲಿಲ್ಲ.. 

ನನಗಾಗಿ ಇನ್ನೂ ಯಾರಾದರೂ ಇದ್ದಾರಾದರೆ ಅದು ಇವಳೇ.ನನ್ನ ದುಃಖದ ಕಟ್ಟೆ ಒಡೆದಿತ್ತು. ಇದುವರೆಗೂ ಹೆಪ್ಪುಗಟ್ಟಿದ್ದ ವೇದನೆ ಹೊರಬಂದಿದ್ದು ಅಜ್ಜಿಯ ಮಡಿಲಲ್ಲಿ.. ಸೊಸೆಯರ ದಬ್ಬಾಳಿಕೆಯ ಮಧ್ಯೆಯೂ ತಬ್ಬಲಿ ಮೊಮ್ಮಗಳ ತಬ್ಬಿ ಸಂತೈಸುವ ಒಂದೇ ಒಂದು ಜೀವ.ತನ್ನ ಮಗಳ ಜೀವನದಂತೆಯೇ ನಾಶವಾಗುತ್ತಿರುವ ಮೊಮ್ಮಗಳ ಜೀವನವನ್ನು ಕಂಡು ಮರಗುತ್ತಾಳೆ, ಕಣ್ಣೀರಾಗುತ್ತಾಳೆ, ಹಣೆಹಣೆ ಬಡಿದುಕೊಳ್ಳುತ್ತಾಳೆ, ಕಾಣದ ದೇವರ ಶಪಿಸುತ್ತಾಳೆ.. ದೇವರೆಂಬವನು ಕಣ್ಮುಚ್ಚಿ ಕೂತಿದ್ದಾನೆ..

ಅಪ್ಪ ಕೆಲಸದವಳನ್ನು ಮೋಹಿಸಿ ಸಂಬಂಧ ಇಟ್ಟುಕೊಂಡಾಗ ಗಂಡನ ತಪ್ಪುಗಳನ್ನು ಮುಚ್ಚಿ ಹಾಕಿ, ಹೊಂದಿಕೊಂಡು ಬಾಳುವ ಹೆಂಗಸಾಗದೇ ಇದ್ದಿದ್ದು ಅಮ್ಮನ ತಪ್ಪೇ..?ನಾನು ನನ್ನ ಅಣ್ಣ ಇನ್ನೂ ಪುಟ್ಟವರಿದ್ದಾಗಲೇ ಅಮ್ಮನಿಗೆ ಡಿವೋರ್ಸ್ ಮಾಡಿ, ಒಂದಿಷ್ಟು ಹಣ ಕೈಗೆ ತುರುಕಿ ಕೆಲಸದವಳನ್ನು ಚಿಕ್ಕಮ್ಮನ ಸ್ಥಾನಕ್ಕೆ ತಂದು, ಅವಳ ಸೆರಗೊಳಗೆ ಕಳೆದುಹೋದನಲ್ಲ ಅಪ್ಪಾ.. ಅವನ ಮಕ್ಕಳಾಗಿದ್ದು ನಮ್ಮ ತಪ್ಪೇ..?ಅಮ್ಮ ಮಕ್ಕಳ ಓದಿಸುವ ಸಲುವಾಗಿ ಅದೇನೇನೋ ಮಾಡಬಾರದ ಕೆಲಸ ಮಾಡುತ್ತಿದ್ದಳಂತೆ..ನಾವು ಹಾಸ್ಟೆಲ್ ಸೇರಿದ್ದವು..ನಾನಾಗ ಎಂಟನೇ ತರಗತಿ.. ಅಮ್ಮನಿಗೆ ಊರವರು ಹೇಳುವ 'ದೊಡ್ಡ ರೋಗ' ಬಂದು ತೀರಿಕೊಂಡಳು..ಅಮ್ಮ ತೀರಿಕೊಂಡಗಲೂ ಅಪ್ಪ ಬರಲಿಲ್ಲ..ಆಗ ತಾನೇ ಅಣ್ಣನ ಎಸ್ ಎಸ್ ಎಲ್ ಸಿ ಮುಗಿದಿತ್ತು.ಅಮ್ಮ ಮಕ್ಕಳಿಗಾಗಿ ಮಾಡಿದ್ದ ಒಂದಷ್ಟು ದುಡ್ಡು ಅಜ್ಜಿಯ ಕೈಲಿತ್ತು. ಅಜ್ಜಿ ನನ್ನ ಓದಿಸಿದಳು. ಅಣ್ಣ ಅಬ್ಬೆಪಾರಿಯಾದ.ಅಪ್ಪ ಇದ್ದಾಗಲೂ, ಅಮ್ಮ ಹೋದಾಗಲೂ, ಓದುವಾಗಲೂ, ಓದಿ ಕೆಲಸ ಸಿಕ್ಕಾಗಲೂ.. ಹಾಸ್ಟೆಲ್ ಎನ್ನುವುದು ಖಾಯಂ ಆಗಿತ್ತು. ಎಲ್ಲರಿದ್ದೂ ಇಲ್ಲದಂತೆ.. ಹಾಸ್ಟೆಲ್ ಹತ್ರ ಕೆಲಸ ಇದ್ದರೆ ಹಾಗೆ ಅಣ್ಣ ಬಂದು ನೋಡಿಕೊಂಡು ಹೋಗುತ್ತಿದ್ದ ಅನ್ನುವ ಸಮಾಧಾನವೊ೦ದನ್ನು ಬಿಟ್ಟರೆ ಬೇರೆಂದು ಖುಷಿ ಬದುಕಲ್ಲಿ ಇರಲೇ ಇಲ್ಲಾ..ಅಜ್ಜಿಯ ಮನೆಗೆ ಹೋದಾಗಲೆಲ್ಲ ಕಣ್ಣೀರು ಸುರಿಸುವ ಅಜ್ಜಿಯನ್ನು ಕಂಡು ಕಂಡೂ ಅಲ್ಲಿಗೆ ಹೋಗುವ ಮನಸ್ಸು ನನಗೂ ಆಗುತ್ತಿರಲಿಲ್ಲ.

ಇಷ್ಟರಲ್ಲೇ ದೇವರು ಬದುಕಲ್ಲಿ ಮೊದಲ ಬಾರಿಗೆ ಒಂದು ನೆಮ್ಮದಿ ಜಮೆ ಮಾಡಿದ. ಅದು ಅಂಜುವಿನ ರೂಪದಲ್ಲಿ. ಅವನೂ ಅಜ್ಜಿಯ ಮೊಮ್ಮಗನೇ.. ನನಗೆ ಮಾವನ ಮಗ.. ಜೀವನದಲ್ಲಿ ಹೆಣ್ಣೊಬ್ಬಳು ಬಯಸುವ ಸೆಕ್ಯೂರ್ಡ್ ಫೀಲ್ ಕೊಟ್ಟ ಮೊದಲ ಗಂಡಸು ಅಂಜನ್. ಮೊದಲೆರಡು ತಿಂಗಳ ಒಡನಾಟ ಖುಷಿಯಾಗೇ ಇತ್ತು. ಯಾವಾಗ ಪ್ರೀತಿ ಮಾವನ ಕಿವಿಯ ತಲುಪಿತೋ ಆಗ ಉಂಟಾಗಿದ್ದು ರಾದ್ದಾಂತ.. ತಂಗಿಯ ಮಗಳು ತನಗೆ ಸೊಸೆಯಾಗಬಾರದೆಂದು ಮಾವ, ನಡತೆಗೆಟ್ಟ ನಾದಿನಿಯ ಮಗಳು ಬೇಡವೆಂದು ಅತ್ತೆ, ತಂದೆ ತಾಯಿಯರ ಬೆದರಿಕೆಗೆ ಅಂಜಿದ ಅಂಜನ್.. ನಾನು ಮತ್ತೆ ಒಂಟಿ ಎಂದಿನಂತೆ.. ನಾನಾಗಿ ಅವನ ಹತ್ತಿರ ಹೋಗಲಿಲ್ಲ.. ದೂರನೂ ಮಾಡಲಿಲ್ಲ.ಬಂದವನೂ ಅವನೇ.. ಹೋದವನೂ ಅವನೇ..ಕಣ್ಣೀರು  ಬಿಡದಂತೆ ಅಪ್ಪಿತ್ತು. ಅಷ್ಟರಲ್ಲಿ ಅಣ್ಣ ತನ್ನ ಜೀವನ ನೋಡಿಕೊಂಡು ಬಿಟ್ಟಿದ್ದ. ಅತ್ತಿಗೆಯನ್ನು ಪ್ರೀತಿಸಿ ಅವನ ಸಂಸಾರದ ಜವಾಬ್ದಾರಿಯ ಹೊರುವಷ್ಟು ಜವಾಬ್ದಾರಿಯುತ ಮನುಷ್ಯನಾಗಿದ್ದ. ಚಿಕ್ಕಮ್ಮನ ಎರಡು ಹೆಣ್ಣುಮಕ್ಕಳ ಮದುವೆಯನ್ನೂ ಅಪ್ಪನೇ ನಿಂತು ಮಾಡಿದ ಸುದ್ದಿಯೂ ಸಿಕ್ಕಿತ್ತು.

ಈ ಮಧ್ಯೆ ಅಪ್ಪನೆಂಬುವವ ಸಿಕ್ಕಿದ್ದ. ಪಶ್ಚಾತ್ತಾಪದ ಕರಿನೆರಳೂ ಗೋಚರಿಸಲಿಲ್ಲ. ಚಿಕ್ಕಮ್ಮನ ಆಡಳಿತದಲ್ಲಿ ಇವನದ್ದು ನಾಯಿಪಾಡು ಎಂಬರಿವಿದ್ದರೂ ಆ ಕ್ಷಣ ಅವನ ಅಸಹಾಯಕತೆಗೆ ಕರುಳು ಚುರ್ ಗುಟ್ಟಿದ್ದು ಸುಳ್ಳಲ್ಲ..ಸಿಕ್ಕಿದವ ಹೇಗಿದ್ದಿಯಾ ಮಗಳೇ ಅನ್ನಲಿಲ್ಲ..ಖರ್ಚಿಗೊಂದಿಷ್ಟು ಕೇಳಿದ. ಐನೂರರ ಎರಡು ನೋಟು ಕೈಗೆ ತುರುಕಿ ಬಂದೆ..ಮತ್ತೊಮ್ಮೆ ಅಸಹ್ಯವಾಗಿತ್ತು ಅವನ ಬಗ್ಗೆ.. ಇದಾದ ಮೇಲೆ ಮತ್ತೆ ಮತ್ತೆ ಅಪ್ಪ ಸಿಗಲಾರಂಭಿಸಿದ ಅಪ್ಪನ ಆಸ್ತಿ ಚಿಕ್ಕಮ್ಮನ ಪಾಲಾದ ಮೇಲೆ ಅಪ್ಪನ ಬಗ್ಗೆ ಅವಳಲ್ಲಿ ಯಾವ ಗೌರವವೂ ಉಳಿದಿರಲಿಲ್ಲ.. ಅಪ್ಪ ಕುಡಿಯೋದಕ್ಕೆ ಅದಕ್ಕೆ ಬೇಕಾದ ಹಣಕ್ಕೆ ಮೊದಲ ಹೆಂಡತಿಯ ಮಗಳನ್ನೇ ಆಶ್ರಯಿಸಿದ್ದ.. ಇಷ್ಟಾದರೂ ಒಮ್ಮೆಯೂ ಅಪ್ಪನ ಬಾಯಿಂದ ಮಗಳ ಬಾಳಿನ ಪ್ರಶ್ನೆ ಬರಲಿಲ್ಲ, ತಾನು ಮಗಳಿಗೆ ಮೋಸ ಮಾಡಿದ್ದೇನೆ ಎಂಬ ಸಂಕಟ ಕಾಣಿಸಲಿಲ್ಲ, ಹುಟ್ಟಿಸಿದ ಋಣವ ತೀರಿಸು ಎಂಬಂತಿತ್ತು ಅವನ ಮುಖಭಾವ. ಈ ಮಧ್ಯೆ ಅತಿ ಹೆಚ್ಚು ಕಾಡಿದ್ದು ಅಂಜು. ಹಂಬಲಿಸುವ ಮನಕ್ಕೆ ಅಂಜು ಸಿಗಲಿಲ್ಲ.. ಅಜ್ಜಿಯೇ ಅಂಜುನ ಮಾತಾಡಿಸಿದ್ದು, ಮೊಮ್ಮಗಳಿಗಾಗಿ ಬೇಡಿದ್ದು ಗೊತ್ತಿದ್ದರೂ ಅಂಜು ಏನೂ ಮಾಡುವಂತೆ ಇರಲಿಲ್ಲ.ಅತ್ತೆ ಮಾವನ ಮಾತಿನ ಮುಂದೆ ಅಜ್ಜಿಯೂ, ಅಂಜುವೂ ತೆಪ್ಪಗಿರಲೇ ಬೇಕಿತ್ತು.

ಯಾರಿಲ್ಲದ ಈ ಬದುಕಿನಲ್ಲಿ, ಸತ್ತು ಹೋದ ಅಪ್ಪನಲ್ಲಿ ಕೂಗಿ ಕೂಗಿ ಕೇಳಬೇಕು ಅನಿಸುತ್ತಿರುವುದು ..ತನಗಾಗಿ ಯಾರೂ ಇಲ್ಲ ಎಂಬ ಅರಿವಿದ್ದಾಗ ಬದುಕುವುದು ಎಷ್ಟು ಕಠಿಣ ಗೊತ್ತೆನಪ್ಪಾ..? ನಾನು ಅದ್ಯಾವ ತಪ್ಪು ಮಾಡಿದೆನೆಂದು ಹೀಗೆ ನಾನು ಸಾಯಲೂ ಆಗದೆ ಬದುಕಲೂ ಆಗದೇ ಒಂಟಿಯಾಗಿದ್ದೇನೆ..? ಅದೆಷ್ಟು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ..? ಮತ್ತೆ ಬದುಕಿದ್ದೇನೆ..! ಈ ಘೋರಗಳನ್ನ ಅನುಭವಿಸಲು. ನೀನೊಬ್ಬ ಸರಿ ಇದ್ದಿದ್ದರೆ..!!? ಈ ಪ್ರಶ್ನೆ ಅಮ್ಮ ಹೋದಾಗಿನಿಂದಲೂ ನನ್ನ ಎಡಬಿಡದೆ ಕಾಡಿ ಕಿತ್ತು ತಿನ್ನುತ್ತಿದೆ. ನೀನು ಉತ್ತರಿಸುವುದಿಲ್ಲ.. ಬೇಜವಾಬ್ದಾರಿಯ ತಂದೆಗಳನ್ನು ಮತ್ಯಾರಿಗೂ ಕೊಡಬೇಡ ದೇವರೇ.. ನನ್ನಂತಿರುವ ಅನೇಕರ ಬಾಳಿನ ಗೋಳಿನ ಮುಗಿಲು ಮುಟ್ಟುವ ಆಕ್ರಂದನ ಇದು.ನನಗಿಂತ ಕಿರಿಯ ಚಿಕ್ಕಮ್ಮನ ಮಕ್ಕಳ ಮದುವೆ ಮಾಡುವಾಗ, ನಾನು ನೆನಪಿಗೆ ಬರಲಿಲ್ಲವೇನಪ್ಪಾ..? ನೀನು ನನ್ನನ್ನೂ ಡಿವೋರ್ಸ್ ಮಾಡಿದ್ದೇಯಾ ಮಗಳ ಸ್ಥಾನದಿಂದ..? ಒಮ್ಮೆ ಮಮತೆಯಿಂದ ತಲೆ ಸವರಿ ಮಗಳೇ ಅನ್ನಬಾರದಿತ್ತಾ..? ನೀನೇನು ಮಾಡಿಲ್ಲದಿದ್ದರೂ ಸರಿಯೇ.. ಕೊನೆಪಕ್ಷ ಒಂದು ಬೊಗಸೆ ಪ್ರೀತಿ ನೀಡಲು ಬರವೆನೀತ್ತಪ್ಪಾ ನಿನಗೆ..? ಅದಕ್ಕೆ ನಿನ್ನ ಮೇಲೆ ಅಸಹ್ಯವಾಗಿದ್ದು, ದಿಕ್ಕಾರ ಕೂಗಬೇಕಿನಿಸಿದ್ದು, ನೀ ಸತ್ತಾಗ ಕಣ್ಣಲ್ಲೊಂದು ಹನಿ ನೀರೂ ಚೆಲ್ಲದೇ ಉಳಿದಿದ್ದು. ದಿಕ್ಕಾರವಿರಲಿ ನಿನಗೆ.

ನೆನಪುಗಳು ಸುರುಳಿ ಬಿಚ್ಚಿಕೊಂಡು ಕೂತಿತ್ತು. 
ಅಜ್ಜಿ "ಪುಟ್ಟಾ.. ಅಂಜು ಬಂದಿದ್ದಾನೆ ನೋಡು.. " ನಾನು ಕಕ್ಕಾಬಿಕ್ಕಿಯಾಗಿದ್ದೆ ಅವನನ್ನು ಇಲ್ಲಿ ನೋಡಿ.
ಅಂಜು ಹತ್ತಿರ ಬಂದವನೇ ನನ್ನ ಕೈಯನ್ನು ತನ್ನ ಕೈಯೊಳಗೆ ಭದ್ರವಾಗಿ ಹಿಡಿದ. "ಮತ್ತೆ ನಿನ್ನ ಬಿಟ್ಟು ಹೋಗಲ್ಲ ಕಂದಾ..ಮಾವ ಹೋದ ವಿಷಯ ತಿಳಿದು, ಅಪ್ಪ-ಅಮ್ಮನಿಗೆ ನೀನೇ ಅವರ ಸೊಸೆ ಅಂತ ಹೇಳಿ ಬಂದಿದ್ದೇನೆ.. ಅಪ್ಪನೋ ಅಮ್ಮನೋ ಮಾಡಿದ ತಪ್ಪಿಗೆ ನೀನು ಹೊಣೆಯಲ್ಲ ಕೂಸೇ.. ಧೈರ್ಯ ಮಾಡಿ ಬಂದಿದ್ದೇನೆ..ನಿನ್ನ ನೋವುಗಳಿಗೆ ಇವತ್ತೇ ಕೊನೆ.ಮತ್ತೆಂದೂ ಅವು ನಿನ್ನ ಬಾಧಿಸುವುದಿಲ್ಲ. ಬದುಕು ಪೂರ್ತಿ ನಿನ್ನವನಾಗಿ ಇರ್ತಿನಿ.. ಈ ಬದುಕ ಒಪ್ಪಿಕೋತೀಯಾ..?"
ಕನಸೋ ನನಸೋ ಅರಿಯದಂತಹ ಸ್ಥಿತಿ..ಸಂದೇಹವಾಯಿತು..ಒಪ್ಪಿಕೊಳ್ಳು
ವ  ದಿಟ್ಟತನ ಬರಲಿಲ್ಲ ಎನ್ನುವುದಕ್ಕಿಂತ ನಂಬಿಕೆ ಕಳಕೊಂಡ ಪರಿಸ್ಥಿತಿ ಅದು.. ಅವನೇ ಮುಂದಾಗಿ ಅಜ್ಜಿಯ ಮಡಿಲಿಂದ ಎಬ್ಬಿಸಿ ತೋಳಲ್ಲಿ ಬಳಸಿದ.ತಬ್ಬಲಿಯ ಬಾಳಲ್ಲಿ ಭರವಸೆಯ ಕಿರಣ ಮೂಡಿತು.ಅವನ ತೋಳಾಸರೆಯಲ್ಲಿ ಕತ್ತಲೆ ಸರಿದು ಬೆಳಕು ಮೂಡಿತು.