ಮಂಗಳವಾರ, ಅಕ್ಟೋಬರ್ 22, 2013

ಪಾಲ್ಗುಣಿ..


ಭಾನು ಭುವಿಯ ಮುದ್ದಿಸಲಾರಂಭಿಸಿ, ತನ್ನ ಪ್ರೀತಿ ಸೋನೆಯನ್ನು ಅವಳ ಮೇಲೆ ಹರಿಸಲಾರಂಭಿಸಿ ಇವತ್ತಿಗೆ ಭರ್ತಿ ಒಂದು ವಾರ.. ಅರೆಕ್ಷಣ ಬಿಡದೆ ಸುರಿಯುತ್ತಿದ್ದಾನೆ ಅವಳ ಮೇಲೆ.  ಹೊಟ್ಟೆಕಿಚ್ಚಿಗೋ ಎಂಬಂತೆ ಪಾಲ್ಗುಣಿ ತುಂಬಿ ಹರಿಯಲಾರಂಭಿಸಿದ್ದಾಳೆ. ಶಾಂತವಾಗಿ ತಿಳಿನೀರ ಹೊತ್ತು ಸಾಗುತ್ತಿದ್ದ ಅವಳ ಒಡಲೀಗ ಕೆಂಬಣ್ಣಕ್ಕೆ ತಿರುಗಿಯಾಗಿದೆ.. ಅವಳ ರಭಸಕ್ಕೆ ಪಕ್ಕದ ಕೆಲ ಮರಗಳ ಬುಡ ಅಲ್ಲಾಡುತ್ತಿದ್ದರೆ, ಕೆಲವು ಬಿದ್ದೇ ಹೋಗಿವೆ.. ಅವಳೀಗ ರುದ್ರ ನರ್ತನಗೈವ ರುದ್ರಿ. ಏನೆಂದರೆ ಏನೂ ನೋಡದೇ ಓಡುತ್ತಿದ್ದಾಳೆ ಗಮ್ಯದ ಕಡೆಗೆ.. ಕಲ್ಲುಬಂಡೆ, ಮರ-ಗಿಡಗಳು ಅವಳ ಲೆಕ್ಕಕ್ಕಿಲ್ಲಭಾನು ಭುವಿಯ ಪ್ರೇಮಕ್ಕೆ ಸಕಲ ಗಿಡಮರಗಳು ಹಚ್ಚ ಹಸಿರ ಹೊತ್ತು ಸಂತೋಷ ಸೂಸುತ್ತಿರೆ, ಇವಳೊಬ್ಬಳು ಹೀಗ್ಯಾಕೆ..? ಬಹುಶಃ ಅವಳಿಗೂ ತನ್ನಿನಿಯ ಶರಧಿಯ ಸೇರುವ ತವಕವಿರಬಹುದಾ..? ಯಾರು ಬಲ್ಲರು ಅವಳೊಡಲು..?

ಅವಳು ನನ್ನಂತೆಯೇ ಬದುಕ ತುಂಬಾ ಓಡಿದವಳು.. ಓಡುತ್ತಾನೆ ಇರುವವಳು. ಬದುಕಿಗೆ ಬೆನ್ನು ಹಾಕಿ ಓಡಲಿಲ್ಲ. ಬದುಕಿಗಾಗಿ ಓಡಿದ್ದು, ಓಡುತ್ತಿರುವುದು. ಅವಳಾದರೋ ಸಾವಿರ ಸತಿಯರಿರುವ ಶರಧಿಯನ್ನು ಒಲ್ಲೆ ಎನ್ನಲಿಲ್ಲ. ಸುಮ್ಮನಿದ್ದು ಬಿಟ್ಟಳು ಅವನೊಳು ಒಂದಾಗಿ.. ಆದರೆ ತಾನು? ಶರತ್‌ನ ಸಖಿಯರ ಅವನ ಸತಿಯಾಗಿ ಒಪ್ಪಿಕೊಂಡೇನೇ... ಸೋತು ಬಿಟ್ಟೆ ಅನಿಸಿದ ಕ್ಷಣ ಪಾಲ್ಗುಣಿಯೆಡೆಗೆ ಓಡಿ ಬರುತ್ತಿದ್ದೆ. ಅವಳೋ ಸಮಚಿತ್ತದಿಂದ ಹರಿಯುತ್ತಿದ್ದವಳು. ಸಮಾಧಾನ ಮಾಡಿ ಮತ್ತೆ ಪತಿಯ ಸೇರೆನ್ನುತ್ತಿದ್ದಳು ಅಮ್ಮನಂತೆ.. ಅವನೊಳು ಒಂದಾಗುವ ವ್ಯರ್ಥ ಪ್ರಯತ್ನ ಪಾಲ್ಗುಣಿಯಿಂದ. ಇವತ್ತೂ ಹಾಗೆ ಅಮ್ಮನಂತಹ ಇವಳಿಗಾಗಿ ಓಡಿ ಬಂದಿದ್ದೆ. ಒಂದಿಷ್ಟು ಸಮಾಧಾನ ಬೇಕಿತ್ತು. ಜಡಿಮಳೆಯ ಮಧ್ಯೆ ಗಟ್ಟಿ ಹೆಜ್ಜೆಯಿಟ್ಟು ಇಷ್ಟು ದೂರ ಬಂದರೆ, ತಾಳ್ಮೆಯ ಕಟ್ಟೆ ಒಡೆದು ಹೋದಂತೆ ನುಗ್ಗುತ್ತಿದ್ದಾಳೆ..ನಾ ಅವಳ ಮುಂದೆ ಮಂಡಿಯೂರಿ ಕುಳಿತೆ....ಅಳುತ್ತಿದ್ದೇನಾ..? 

ಹನಿ ಕಡಿಯದಂತೆ 
ಹನಿಯುತ್ತಿದ್ದ ಮಳೆಯಡಿಯಲ್ಲಿ 
ಹಿಂದು ಮುಂದುಗಳನೆಣಿಸುತ್ತಾ
ಪಾಲ್ಗುಣಿಗಭಿಮುಖವಾಗಿ ಕೂತಿದ್ದವಳ 
ಕಂಗಳಲ್ಲೂ ಹನಿಗಳಿದ್ದವು

ಮಳೆ ಹನಿಗಳು ದೇಹವ ತೊಯ್ಯುತ್ತಿದ್ದರೆ ಕಣ್ಣ ಹನಿಗಳು ಆ ನೀರ ಜೊತೆಯೇ ಕರಗುವುದಿಲ್ಲವೇ..? ಸುಮ್ಮನೆ ಹಾಗೇ ಕುಳಿತೇ ಇದ್ದೆ ಅಮ್ಮ ಮೆತ್ತಗೆ ಬಂದು ಮೈ ಸವರಲಿಲ್ಲ.. ರಪ್ಪನೆ ಬಡಿದು ಹೋದಳು. ಇವಳೂ ತನ್ನ ಪಾಲಿಗಿಲ್ಲವಾ..? ಹೃದಯ ಬಿಕ್ಕಳಿಸಿತು.. ಆತ್ಮ ನಿವೇದಿಸಿತು  ಅಮ್ಮನಿಗಾಗಿ..
ಎಷ್ಟು ಹೊತ್ತು ಹೀಗೆ ಕೂತಿದ್ದೆ..? ಸಂಜೆಯಾಗಿದ್ದಿರಬೇಕು ಮಳೆಗೆ ದಟ್ಟ ಕತ್ತಲು ತನ್ನ ಸುತ್ತ ಆವರಿಸಿತ್ತು.. ಶರತ್ ಬಂದು ತೋಳು ಹಿಡಿದೆತ್ತಿ ದರದರನೆ ಎಳೆದೊಯ್ದ. ಅದೆಲ್ಲಿಂದ ಹೊತ್ತಿನಲ್ಲಿ  ಆಟೋ ಹುಡುಕಿ ತಂದನೋ.. ಆಟೋದೊಳಗೆ ನೂಕಿ ತಾನು  ಕೂತ. ತೋಯ್ದು ತೊಪ್ಪೆಯಾಗಿದ್ದ ಹೆಂಡತಿಯ ಮೇಲೆ ಕನಿಷ್ಠ ಪಕ್ಷ ಕಾಳಜಿಯೂ ಇಲ್ಲದ ಭೂಪ. ಮನೆಗೆ ಬಂದವನೇ ರಪರಪ ಕೆನ್ನೆಗೆ ಭಾರಿಸಲಾರಂಭಿಸಿದ.. ನಾ ಮಾಡಿದ ತಪ್ಪಿಗೆ ಅವನು ಹೊಣೆಯಲ್ಲ.. ನಾ ಸಾಯುವಷ್ಟು ಹೇಡಿಯೇ..? ಸಾಯಲು ಪಾಲ್ಗುಣಿಯ ಬಳಿ ಹೋಗಿದ್ದೆನೇ..? ಆರೋಪಗಳಿಗೆ ಕಿವುಡಿಯಂತಿರುವುದು, ಮಾತುಗಳ ಏಟಿಗೆ ಮೂಕಿಯಾಗಿರುವುದು ಅಭ್ಯಾಸವಾಗಿಬಿಟ್ಟಿದೆ. ಬಯಸಿ ಬಯಸಿ ಪಡೆದ ಭಾಗ್ಯ..! ಅವನ ಅಮ್ಮನಿಗೆ ಮಗ ಮಾಡಿದ್ದು, ಹೇಳಿದ್ದು ವೇದವಾಕ್ಯವೇ. ನಾನೂ ಒಮ್ಮೆ ಇವತ್ತಿನ ಪಾಲ್ಗುಣಿಯಾಗಿ ಬಿಡಲೇ..? ಮನೆಯ ಕೊಳಕುಗಳನ್ನೆಲ್ಲ ತುಟಿಕಚ್ಚಿ ಸಹಿಸುವ ಬದಲು ಅವಳಂತೆ ರಭಸವಾಗಿ ಹರಿದು ಬಿಡಲೇ ಇವರ ಮೇಲೆ..?ಹರಿಯುವಿಕೆ ನನ್ನೊಡಲ ನೋವ ಬಸಿದು ನೆತ್ತರು ಹರಿಸಬಾರದಷ್ಟೇ.. ಮತ್ತೆ ಬಂದ ಗಂಡ "ನೀ ಸತ್ತು ನನ್ನ ಜೈಲು ಕಳಿಸಬೇಕಂತಿದ್ದಿಯೇನೆ ನಾಯಿ..ನಾಳೆ ಬೆಳಗುವಷ್ಟರಲ್ಲಿ ನಡಿ ನಿನ್ನ ಅಪ್ಪನ ಮನೆಗೆ.. ಬೆಳಿಗ್ಗಿನ ತನಕ ಇಲ್ಲೇ ಬಿದ್ದಿರು..  " ಇನ್ನೂ ಏನೇನೊ ಬಯ್ಗುಳಗಳು. ಮನೆಯ ಹೊರಗಡೆ ನೆಟ್ಟಿದ್ದ ಕಂಬಕ್ಕೆ ಕಟ್ಟಿ ಬಿಟ್ಟ. ತುಂಬಿದ ಮಳೆಯ ನಡುವೆ ನಾನು ನನ್ನ ಪಾಡು ಅಷ್ಟೇ.. ಮಳೆಯ ಒಂದೊಂದು ಹನಿಗಳು ತನ್ನಮ್ಮ ಪಾಲ್ಗುಣಿಯ ಸೇರಿಯೇ ಸೇರುತ್ತವೆ.. ಒಂದೀಡಿ ರಾತ್ರಿ ಮಳೆಯಲ್ಲಿ ತೊಪ್ಪೆಯಾದರೂ ನಾ ಬೇಸರಿಸಲಿಲ್ಲ. ತಾಯ ಮಡಿಲ ದೊರಕಿಸಿಕೊಟ್ಟ ಖುಷಿಗೆ.. ಮರುದಿನ ತವರಿಗೆ ಅಟ್ಟಲಿಲ್ಲ.. ಅಟ್ಟುವಷ್ಟು ಧೈರ್ಯವೂ ಅವನಲಿಲ್ಲ. ನನ್ನ ಉಟ್ಟುಡುಗೆಯಲ್ಲಿ ಓಡಿಸಿಕೊಂಡು ಬಂದಾತನಿಗೆ ಅಷ್ಟು ಹುಂಬತನ ಇದ್ದೀತಾ..? ಇದ್ದರೆ ನನ್ನ ಅಣ್ಣಂದಿರು ಅವನ್ನ ಉಸಿರಾಡಲು ಬಿಟ್ಟಾರಾ..? 

ಮುಂಜಾನೆ  ಮಳೆ ಕಡಿಮೆಯಾಗ ಹತ್ತಿತು... ಅತ್ತೆಗೆ ಮಗನ ಸೂಚನೆ ಸಿಕ್ಕಿರಬೇಕು.. ಬೆಳಿಗ್ಗೆ ಬೇಗ ಮಗನ ತಾಯಿ ಬಂದು ಎಬ್ಬಿಸಿಕೊಂಡು ಹೋಗಿ ಸ್ನಾನ ಮಾಡುವಂತೆ ಹೇಳಿ ಅಡುಗೆ ಕೆಲಸ ಹಚ್ಚಿದರು.. ನಾನೋ ಪಾಲ್ಗುಣಿಯ ಮಗಳು. ಅವಳಂತೆ ಎಲ್ಲವ ಮಾಡುತಲಿದ್ದೆ ಸಮಚಿತ್ತದಿಂದ .. ಮಗ ಆಫೀಸ್ ಎನ್ನುವ ಅವನ ಸಾಮ್ರಾಜ್ಯಕ್ಕೆ ಹೊರಟು ಹೋದ.. ನೆನ್ನೆಯ ದಿನ ನೋವುಗಳಲ್ಲಿ ಬೆಂದು ಮಳೆಯಲ್ಲಿ ನೆಂದ ಕಾರಣಕ್ಕೋ ಏನೋ ಮೈ ಶಕ್ತಿಯೇ ಉಡುಗಿಹೋದಂತಹ ಭಾವ. ಮೈ ಪೂರ ಸುಡುತಲಿತ್ತು. ಬುಡ ಕಡಿದ ಬಾಳೆಗಿಡದಂತೆ ದೊಪ್ಪನೆ ಬಿದ್ದು ಬಿಟ್ಟೆ.. ಅತ್ತೆಯ ಮೇಲೆ ಮನೆ ಕೆಲಸ ಭಾರ ಬೀಳುವ ಕಾರಣಕ್ಕೋ ಏನೋ.. ಅತ್ತೆ ಉಪಚರಿಸಲಿಲ್ಲ. ಕನಿಷ್ಠಪಕ್ಷ ಕರುಣೆಯೂ ನನ್ನ ಮೇಲೆ ಅವರಿಗೆ ಇರಲು ಸಾಧ್ಯವೇ ಇರಲಿಲ್ಲ. ತನ್ನ ಅನುಮತಿಯಿಲ್ಲದೇ ಮಗ ಕಟ್ಟಿಕೊಂಡು ಬಂದ ಸೊಸೆಯ ಮೇಲೆ ಎಷ್ಟು ಮಾತ್ರದ ಅಕ್ಕರೆ ಅವರಿಗಾದರೂ ಇದ್ದೀತು..? ಅಂತಹ ನಿರೀಕ್ಷೆಯೂ ನನ್ನ ಬದುಕಿಗೆ ತಪ್ಪು. ನನ್ನದೆನ್ನುವ ಜೀವವೊಂದು ಯಾರಿದ್ದಾರೆ ಇಲ್ಲಿ..? ಎಲ್ಲಿಯೂ ಸಲ್ಲದವಳಿಗೆ ಒಡನಾಡಿಗಳಿಲ್ಲ..ಮಧ್ಯಾಹ್ನ ಮಗರಾಯ ತನಗೆ ಮತ್ತು ತಾಯಿಗೆ ಊಟ ಕಟ್ಟಿಕೊಂಡು ಬಂದಿದ್ದ. ಆತನ ಮಾತುಗಳು ಕಿವಿಗೆ ಮಾತ್ರವಲ್ಲ ಹೃದಯಕ್ಕೂ ಬಡಿಯುತ್ತಿತ್ತು. "ಸತ್ತರೆ ಸಾಯಲಿ ಬಿಡಮ್ಮ.. ಪಾಲ್ಗುಣಿಗೆ ಹಾರಿ ನನ್ನ ನಿನ್ನ ಮೇಲೆ ಆರೋಪ ಬರುವುದಕ್ಕಿಂತ ಹೀಗೆ ಜ್ವರ ಬಿದ್ದೇ ಸಾಯಲಿ" ನನ್ನ ಸಾವಷ್ಟೇ ಬೇಕಾಗಿದ್ದು ಇವನಿಗೆ..? ಗಂಡನ ಸ್ತ್ರೀ ಲೋಲ ಬುದ್ದಿಗೂ ಮರುಗಲಿಲ್ಲ, ತನ್ನ ಹೆಂಡತಿಯಾಗಿ ಬೇಡ ಕೊನೆಪಕ್ಷ ಮನುಷ್ಯಳಾಗಿ ನೋಡದಿದ್ದಾಗಲೂ ಕೊರಗಲಿಲ್ಲ, ತನ್ನ ಹೀನ ಸ್ಥಿತಿಗೆ ಸಾಯುವ ಮನಸ್ಸು ಮಾಡಲಿಲ್ಲ. ಭರವಸೆಯ ದೀಪವಿಡಿದೇ ದಿನತಳ್ಳುತ್ತಿದ್ದೆ. ಭರವಸೆಯ ದೀಪವೇ ನಂದಿಹೋಯಿತು  ಈಗ ಜೀವನದಲ್ಲಿ ಮೊತ್ತ ಮೊದಲನೇ ಬಾರಿಗೆ ಉಸಿರಾಡಿಕೊಂಡೇ ಸತ್ತ ಅನುಭವ. ಹೌದು! ಇಂವ ಬದಲಾಯಿಸಲಾರ! ಪಾಲ್ಗುಣಿಯ ಆತ್ಮ ಚೀರಿ ಹೇಳಿತು

ತಾಯಿ ಮಗ ಎಲ್ಲೊ ಹೊರಡುತ್ತಲಿದ್ದರು. ಬಟ್ಟೆ ತುಂಬುತ್ತಿದ್ದಂತೆ, ಲಗೇಜ್ ಪ್ಯಾಕ್ ಮಾಡುತ್ತಿದ್ದಂತೆ, ಅವಸರವಸರ ಮಾಡುತ್ತಿದ್ದಂತೆ.. ಗಮನಕ್ಕೆ ಬರುತ್ತಿತ್ತು. ಒಂದು ಹತ್ತು ನಿಮಿಷಕ್ಕೆ ದಡ್ ಎ೦ದು ಬಾಗಿಲು ಮುಚ್ಚಿ ಲಾಕ್ ಹಾಕಿದ ಸದ್ದು.. ಹೌದು ಎಲ್ಲೊ ಹೊರಟಿದ್ದಾರೆ.. ತಾನಿಲ್ಲಿ ನರಳಿ ಸತ್ತು ಹೋಗಲೆಂಬಂತೆ. ಸಾವಿಗೆ ಅವರು ಕಾರಣವಾಗದಿರಲೆಂಬಂತೆ ನನ್ನ ಬಿಟ್ಟು ಹೊರಟಿದ್ದಾರೆ. ಮಿಸುಕಾಡಲೂ ತ್ರಾಣವಿಲ್ಲದೆ, ಬಾಯಿಗೆ ಒಂದು ಹನಿ ನೀರು ಕಾಣದೆ ಇದ್ದಂತಹ ಹೊತ್ತಲ್ಲಿ ಒಬ್ಬ ಬಂದ..ಪಾಲ್ಗುಣಿಯ ಹುಡುಕಿಕೊಂಡು ಶರಧಿಯೇ ಬಂದಂತೆ..! ಶರತ್‌ನ ಗೆಳೆಯ. ತಾನು  ಶರತ್‌ನ ಹಿಂದೆ ಬಂದಾಗ ಗುಟ್ಟಾಗಿ ಬಂದು ಶರತ್‌ನ ಗುಟ್ಟು ಹೇಳಿದವ.. ಅವನ ಹಿಂದೆ ಬಾರದಿರು ಎಂದು ಬಾಯಿಗೆ ನೀರು ಬಿಟ್ಟಂತೆ ಹೇಳಿದವ. ಪ್ರೀತಿ ಕುರುಡು ಅನ್ನುತ್ತಾರೆ, ಘಳಿಗೆಯಲ್ಲಿ ಪ್ರೇಮಿಯೂ ಕುರುಡಿಯಾಗಿದ್ದಳು. ಒಳಗನ್ನಡಿ ನೋಡದೇ, ಹೊರಗಿನ ಬೆರಗಿಗೆ ಸೋತು ಬಂದವಳು
"ಪಾಲ್ಗುಣಿ... " ಕರೆದ
" ಉಹ್...." ಮುಲುಗಿದೆ. ಗಂಜಿ ಮಾಡಿ ಕುಡಿಸಿದ... ಗುಳಿಗೆ ಕೊಟ್ಟ.. ತಣ್ಣೀರು ಬಟ್ಟೆಯ ಹಣೆ ಮೇಲೆ ಇಟ್ಟ.. ತಾಯಿ ಉಪಚರಿಸಿದಂತೆ ಉಪಚರಿಸಿದ. ಪ್ರೀತಿ ಕಾಣದ ಬರಡು ನೆಲಕ್ಕೆ ಒಂದು ಹನಿ ಪ್ರೀತಿಯ ಜೀವ ಜಲ ಬಿದ್ದು ಅಲ್ಲೊಂದು ಸಸಿ ಚಿಗುರಿದಂತೆ ನಾ ಚಿಗುರಿದ್ದೆ..  ಪ್ರೀತಿಯ ಆರೈಕೆಗೆ ರಾತ್ರಿ ಬೆಳಗಾಗುವಷ್ಟರಲ್ಲಿ ಜ್ವರ ತೀರಿ ಹೋಗಿತ್ತು

ಮೈ ಮೇಲೆ ಒಂದು ಶಾಲು ಹೊದ್ದು ಶಿಶಿರನ ಮುಂದೆ ಕೂತಿದ್ದೆ
"ಇವರೆಲ್ಲಿ... ?" ಮೊದಲ ಪ್ರಶ್ನೆ 
"ತಿರುಪತಿಗೆ ಹೋಗಿದ್ದಾನೆ. ಅಮ್ಮನ ಜೊತೆ.. " 
"ಇದ್ದಕ್ಕಿದ್ದ ಹಾಗೆ.. " ಏನೋ ಹೇಳ ಹೊರಟಿದ್ದೆ ತಡೆದ ಶಿಶಿರ
"ಏನೂ ಹೇಳಬೇಡಿ, ಕೇಳಬೇಡಿ.. ನಾಲ್ಕು ದಿನ ಅವನು ಬರೋಲ್ಲ..ನಾಲ್ಕನೆಯ ದಿನ ಅವನು ಬರೋವಷ್ಟರಲ್ಲಿ ನಾ ಇಲ್ಲಿರೋಲ್ಲ.. ನಿಮ್ಮ ಆರೈಕೆಯ ಹೊಣೆ ನನ್ನದು. " ಶರತನೇ ಶಿಶಿರನ ಇಲ್ಲಿ ಇರಲು ಹೇಳಿ ಹೋದನಾ..? ಸಣ್ಣದೊಂದು ಆಸೆಯ ಮಿಂಚು ಮನದಲ್ಲಿ. ಇದ್ದಿರಲಾರದೆಂಬ ಸತ್ಯ ಗೊತ್ತಿದ್ದರೂ ಪಾಲ್ಗುಣಿ ಮನದಲ್ಲಿ ಮಿಂಚು ತುಂಬಿಕೊಂಡು ಮತ್ತೆ ಬದುಕಿಗೆ ಶರತ್‌ನ ಪ್ರೀತಿ ಸೋನೆಯ ನಿರೀಕ್ಷೆ ಮಾಡುತ್ತಾಳೆ.. ಎರಡು ದಿನ ಅಷ್ಟೇ ಪಾಲ್ಗುಣಿ ಮೊದಲಿನಂತಾದಳು.ಅಡುಗೆ ಮನೆಗೆ ಹೋದರೆ ಅಲ್ಲಿ ಶಿಶಿರ ಅವಳ ಸಹಾಯಕ್ಕೆ ನಿಂತಿರುತ್ತಿದ್ದ. ತಿಂಡಿಗೆ, ಊಟಕ್ಕೆ ಕಡೆಗೆ ಒಂದು ಲೋಟ ಬಿಸ್ಬಿಸಿ ಕಾಫಿಗೂ ಶಿಶಿರನ ನಗುಮೊಗದ ಜೊತೆಯಿರುತ್ತಿತ್ತು. ನಗು ಮರೆತ ಸಂದರ್ಭದಲ್ಲಿ ಶಿಶಿರ ಪಾಲ್ಗುಣಿಯ ಒಡಲಲ್ಲಿ ನಗೆಯ ಬುಗ್ಗೆ ತುಂಬಿಟ್ಟಶಿಶಿರ ನಿಧಾನಕ್ಕೆ ಮನದೊಳಕ್ಕೆ ಇಳಿಯುತ್ತಿದ್ದ. ದಿನಗಳೂ ಹೀಗೆ ಇರಬಾರದೇ ಮನಸ್ಸಲ್ಲಿ ಆಸೆ ಬಂದೇ ಹೋಯಿತು. ಶಿಶಿರನಿಗೂ ತನ್ನ ಜೊತೆ ಕಳೆವ ಕ್ಷಣಗಳು ಇಷ್ಟೇ ಮಧುರವಾಗಿ ಇದ್ದೀತಾ..? ಬೆನ್ನ ಹಿಂದೆಯೇ ಪ್ರಶ್ನೆ. ಸದಾ ಹೊಡೆಯುತ್ತಿದ್ದ, ರಾತ್ರಿಯೆಂದರೆ ಸಾಕು ಹೆಂಡತಿಯನ್ನೇ ಅತ್ಯಾಚಾರ ಮಾಡುತ್ತಿದ್ದ, ಚುಚ್ಚು ಮಾತುಗಳಿಂದ ನೋಯಿಸುತ್ತಿದ್ದ, ಕೊನೆಗೆ ತನ್ನ ಇರುವಿಕೆಯೇ ಬೇಡವೆಂಬಂತೆ ವರ್ತಿಸಿದ ಮೃಗಿಯ ಗುಣಭೂಷಣ ಶರತನಿಗಿಂತ ಶಿಶಿರ ಮನುಷ್ಯನಾಗಿ ಕಂಡ. ತನ್ನವನಾಗಿ ಇಂವ ಇದ್ದಿದ್ದರೆ ಎಂಬ ಬಯಕೆ ತಂದ ಅಥವಾ ಪ್ರೀತಿಗಾಗಿ ಹಪಹಪಿಸುತ್ತಿದ್ದ ಪಾಲ್ಗುಣಿಯ ಮನಕ್ಕೆ ಶಿಶಿರ ಹೀಗೆ ಕಂಡನೋ..?! 

ಇನ್ನು ಒಂದೇ ದಿನ 
ಶಿಶಿರ ತನ್ನ ಬಿಟ್ಟು ಹೋಗುತ್ತಾನೆ. ಮನಸ್ಸಿಗೆ ಕಿರಿಕಿರಿಯಾಗಹತ್ತಿತು. ಶಿಶಿರನ ಕಣ್ಣೊಳಗೆ ಇಳಿದು "ನನ್ನ ಬಿಟ್ಟು ಹೋಗುತ್ತಿಯಾ ಶಿಶಿರಾ...? " ಕೇಳಿಬಿಟ್ಟೆ
"ಇಲ್ಲಾ ನನ್ನ ಕೂಸೇ.. " ಎದೆಗೊತ್ತಿಕೊಂಡ. ನನ್ನ ಕಣ್ಣಲ್ಲಿ ನೀರಿನ ಪೊರೆ. ಅವನೆದೆಗೆ ಒರಗಿಕೊಂಡವಳ ಎದೆಯಲ್ಲಿ ಒಬ್ಬ ಗಂಡು ಒಬ್ಬ ಹೆಣ್ಣಿಗೆ ಮಾತ್ರ ಕೊಡಬಹುದಾದ ಸೆಕ್ಯೂರ್ಡ್ ಅನುಭೂತಿ. ಶಿಶಿರ ಮೌನ ಒಡೆದು ಮಾತನಾಡಲಾರಂಭಿಸಿದ.. ಪಾಲ್ಗುಣಿ ಸುಮ್ಮನೆ ಕೇಳುತ್ತಾ ಹೋದಳು. ಪಾಲ್ಗುಣಿ ಮೋಸ ಹೋದ ಬಗೆ ಬಲು ಚಂದವಾಗಿತ್ತು..! 
ಅದು ಗೊತ್ತಿದ್ದವರು ಇಬ್ಬರೇ 
ಒಬ್ಬ ಶರತ್‌  ಮತ್ತು ಇನ್ನೊಬ್ಬ ಶಿಶಿರ..!
******************************************************************

"ಪಾಲ್ಗುಣಿ ಹೆಸರೇ ಎಷ್ಟು ಮುದ್ದಾಗಿದೆ ಅಲ್ಲವೇನೋ... " ಶರತ ಸಿಗರೇಟಿನ ಹೊಗೆಯುಗುಳುತ್ತಾ ಕೇಳಿದ್ದ
"ಕಣ್ಣು ಅವಳ ಮೇಲೆ ಬಿತ್ತಾ.. " ಶಿಶಿರನ ಮರುಪ್ರಶ್ನೆ
"ಒಂಥರಾ ನಶೆ ಇದೆ ಅವಳಲ್ಲಿ.. ಅನಿಸುತ್ತಿಲ್ಲವಾ ನಿನಗೆ ಹಾಗೆಂದು... "
"ತಾ ಮೆಚ್ಚಿದ ಹುಡುಗಿಯ ರೂಪಿನ ಬಗ್ಗೆ ಗೆಳೆಯರಲ್ಲಿ ಚರ್ಚಿಸುವ ನಿನ್ನಂತವರೂ ಇದ್ದಾರ? "
"ನಾನು ನೀನು ಬೇರೆಯೇನೋ.. ನನಗೆ ಅವಳು ಸಿಕ್ಕರೆ ನಿನಗೆ ಕೊಡದೇ ಇರುತ್ತೇನೆಯೇ..?!" ಗಹಗಹಿಸಿ ನಕ್ಕ
"ಛೀ.. " ಶಿಶಿರ ಹೇಸಿಗೆ ಪಟ್ಟುಕೊಂಡು ಒಂದಿಷ್ಟು ಬುದ್ದಿ ಹೇಳಿ ಹೊರಟಿದ್ದ

ಪಾಲ್ಗುಣಿಯ ಹುಚ್ಚು ಶರತನಲ್ಲಿ ಶುರುವಾಗಿದ್ದು ಹೀಗೆ.. ಅವಳು ನದಿಯಂತೆ ಶಾಂತೆ.. ತನ್ನಪಾಡಿಗೆ ತಾನು ಹರಿಯುತ್ತಿದ್ದವಳು.. ಕಾಲೇಜ್ ಎಂಬ ಬಣ್ಣದ ಲೋಕದಲ್ಲೂ ಮನಸ್ಸು ಹಿಡಿತದಲ್ಲಿ ಇಟ್ಟುಕೊಂಡ ಜಾಣೆ.. ಸುಕೋಮಲೆ.. ಶರತ್‌ನ ಆಫೀಸಿನ ಕಿಟಕಿಯಿಂದ ಕಾಲೇಜು ಆವರಣದ ಸಕಲವೂ ಕಾಣಿಸುವ ಹಾಗಿತ್ತು. ಆಫೀಸಿನಲ್ಲಿ ತಾನು ಓದಿರುವ ಓದಿಗೆ ದೊಡ್ದಂಕಿಯ ಸಂಬಳವೂ, ದೊಡ್ಡ ಪೋಸ್ಟೂ ಒಲಿದ್ದಿತ್ತು ಶರತ್‌ನಿಗೆ. ಶಾಂತಮೂರ್ತಿ ಹುಡುಗಿಯ ತನ್ನ ತೆಕ್ಕೆಗೆ ಎಳೆದುಕೊಳ್ಳಬೇಕೆಂಬ ಆಸೆ, ಹಠವಾಗಿ ಮಾರ್ಪಟ್ಟು ದಿನೇದಿನೇ ಹೆಚ್ಚುತ್ತಿತ್ತು. ಹುಡುಗಿ ಸಿಗುತ್ತಿಲ್ಲ. ಅಷ್ಟರಲ್ಲಿ ಆಕೆ ಆಗರ್ಭ ಶ್ರೀಮಂತನ ಮಗಳೆಂದೂ, ಅದೆಷ್ಟೋ ಕೋಟಿಯಲ್ಲಿರುವ ಆಸ್ತಿಗೆ ತನ್ನ ಅಣ್ಣಂದಿರ ಜೊತೆ ಈಕೆಯೂ ಹಕ್ಕುದಾರಳೆಂದು ಗೊತ್ತಾದ ಮೇಲಂತೂ ಶರತನಿಗೆ ಹುಚ್ಚು ಹಿಡಿಯುವುದೊಂದು ಬಾಕಿ.. ಮೊದಲು ಆಕೆಯನ್ನು ಸುಖಿಸುವ ಆಸೆ ಹೊತ್ತಿದ್ದ ಶರತ್ ಈಗ ಮದುವೆಯಾಗಿ ಆಕೆಯ ಆಸ್ತಿಯನ್ನೂ ಸುಖಿಸುವ ಕನಸು ಕಾಣತೊಡಗಿದ. ಅವನ ನಿರಂತರ ಪ್ರಯತ್ನದ, ಕಪಟತೆಯ ಫಲವಾಗಿ ಪಾಲ್ಗುಣಿ ಒಲಿದಳು. ಅವಳ ಅಪ್ಪ, ಅಣ್ಣಂದಿರು ಒಲಿಯಲಿಲ್ಲ. ತಂಗಿ ಪ್ರೀತಿಸಿದವನೆಂಬ ಮಮಕಾರಕ್ಕೆ ತಂಗಿ ಹಠಬಿದ್ದ ಪರಿಣಾಮ ಶರತನಿಗೆ ಉಸಿರಾಡುವಷ್ಟು ಅಧಿಕಾರ ಅಷ್ಟೇ ಸಿಕ್ಕಿತು. ಶರತ್ ಬದುಕಿಕೊಂಡ.

ಮಧ್ಯೆ ಪಾಲ್ಗುಣಿ ಒಲಿದ ಸುದ್ದಿ ತಿಳಿದು ಶಿಶಿರ ಪಾಲ್ಗುಣಿಯಲ್ಲಿಗೆ ಓಡೋಡಿ ಬಂದಿದ್ದ. ತನ್ನ ಗೆಳೆಯ ನಿನ್ನನ್ನು ಪ್ರೀತಿಸುತ್ತಿಲ್ಲವೆಂದು ಆಸ್ತಿ ಮತ್ತು ನಿನ್ನ ಚೆಲುವನ್ನು ಸೂರೆಗೈವ ತಂತ್ರವಷ್ಟೇ ಇದು ಎಂದು ಒತ್ತಿ ಒತ್ತಿ ಹೇಳಿದ್ದ. ಇವಳು ನಂಬಲಿಲ್ಲ. ತಾನು ಮನದಲ್ಲೇ ಇಟ್ಟುಕೊಂಡು  ಪೂಜಿಸುತ್ತಿದ್ದ ಹುಡುಗಿ ಅದೂ ಶರತನಂತವನ ಪಾಲಾಗುತ್ತಿರುವುದನ್ನು ಕಂಡು ಏನೂ ಮಾಡಲಾಗದ ಅಸಹಾಯಕನಾಗಿ ಶಿಶಿರ ನಿಂತಿದ್ದ. ಅಷ್ಟಕ್ಕೂ ಶರತನ  ಕೈ ಕೆಳಗೆ ದುಡಿವ ಮಾಮೂಲಿ ಮನುಷ್ಯನಿಗೆ ಇನ್ನೆಷ್ಟರ ಶಕ್ತಿಯಾದರೂ ಇದ್ದೀತು..? ಪಾಲ್ಗುಣಿ ತನ್ನವರ ತೊರೆದು ಶರತ್‌ನ ಮನೆ ತುಂಬಿದಳು.. ವಿದ್ಯಾಭ್ಯಾಸ ಮುರಿದು ಬಿತ್ತುಅವಳ ಮನೆಯೊಳಗೆ ತುಂಬಿಸಿಕೊಂಡಿದ್ದೇ ಶರತನ ತಾಯಿಯ ತಿರಸ್ಕಾರ.. ಶ್ರೀಮಂತನ ಮಗಳೆಂದು ಗೊತ್ತಾದಾಗ ತುಸು ಪ್ರೀತಿ ಉಪಚಾರ ಮಾಡಿದರಾದರೂ, ಯಾವಾಗ ತನ್ನ ಮಗ ಪಾಲ್ಗುಣಿಯ ಕಟ್ಟಿಕೊಂಡು ಅವಳ ತವರು ಮನೆಗೆ ರಾಜಿ ಒಪ್ಪಂದಕ್ಕೆ ಹೋಗಿ ಅವಮಾನ, ಬೆದರಿಕೆ ಹಾಕಿಸಿಕೊಂಡು ಬಂದನೋ ಅವತ್ತು ಅದೂ ನಿಂತುಹೋಯಿತು.. ಜೊತೆಗೆ ಶರತ್‌ನ ನಿಜವಾದ ಬಣ್ಣವೂ ಬಯಲಾಗ ಹತ್ತಿತು.  ಆಫೀಸಿನ ಹುಡುಗಿಯೊಂದಿಗೆ ಆತನಿಗಿದ್ದ ಅನೈತಿಕ ಸಂಬಂಧ, ಆಸ್ತಿ ದಕ್ಕದೇ ಇದ್ದುದಕ್ಕೆ ಆತನಿಗಿದ್ದ ಅಸಮಾಧಾನ, ಕೊನೆಗೊಮ್ಮೆ ತಾನು ಸತ್ತು ಹೋದರೆ ಸಾಕೆಂದು ಅವನು ಬಯಸಿದ ರೀತಿ.. ಎಲ್ಲವೂ ತಿಳಿಯತೊಡಗಿತು
ಮುಂದೆ ಪಾಲ್ಗುಣಿ  ಹರಿದಿದ್ದು ಬರಿಯ ಕಣ್ಣೀರಾಗಿ ಮಾತ್ರ.. 
*************************************************************************

ಶಿಶಿರ ನಿಟ್ಟುಸಿರಿಟ್ಟ. ಇವಳು ನಗೆ ಚೆಲ್ಲಿದಳು
"ಹೌದೂ.. ಕೊನೆಯ ಪ್ರಶ್ನೆ ಮತ್ತೇನೂ ಕೇಳುಲ್ಲ.. ನೀವು ಹೇಗೆ ಇಲ್ಲಿಗೆ ಬಂದಿರಿ ..?"
"ಶರತ್ ಊಟದ ಸಮಯದಲ್ಲಿ ಊಟ ಕಟ್ಟಿಕೊಂಡು ಮನೆಗೆ ಬಂದಿದ್ದನ್ನ ನೋಡಿದ್ದೆ. ಆಮೇಲೆ ಸ್ವಲ್ಪ ಹೊತ್ತಿಗೆ ಫೋನ್ ಮಾಡಿ ತಾನು ತಿರುಪತಿಗೆ ಹೋಗ್ತಾ ಇದ್ದೇನೆ. ಆಫೀಸ್ ಒಂದು ನಾಲ್ಕು ದಿನ ನೋಡಿಕೋ ಎಂದು ಹೇಳಿ ಫೋನ್ ಇಟ್ಟ.. ಅವನ ಚೇಂಬರ್‌ಗೆ ಹೋದರೆ ಕೀ ಬಂಚ್ ಅವನ ಟೇಬಲ್ ಮೇಲಿತ್ತು. ಅಂದರೆ ಇದು ಮೊದಲೇ ಯೋಚಿಸಿಕೊಂಡು ಮಾಡಿದ ಪ್ರಯಾಣ ಅಲ್ಲವೆಂದು ಖಚಿತವಾಗಿ ಮನೆಯ ಕೀ ತೆಗೆದುಕೊಂಡು  ಯಾವುದೋ ಅನುಮಾನದ ಮೇಲೆ ಇಲ್ಲಿ ಬಂದೆ.. ನೀವಿಲ್ಲಿ ಸ್ಥಿತಿಯಲ್ಲಿದ್ದಿರಿ... " ಮಾತು ಮುಗಿಸಿದ. ಪಾಲ್ಗುಣಿಯ ಒಡಲಲ್ಲಿ ಎಂತದೋ ಒಂದು ಹೇಳಲಾಗದ ಭಾವ ಉಕ್ಕಿತು. ಶಿಶಿರನ ಹತ್ತಿರ ಬಂದು ಮತ್ತೊಮ್ಮೆ ಅವನದೆಯಲ್ಲಿ ಮುಖ ಹುದುಗಿಸಿದಳು. ಇವನೊಳಗೆ ಹೆಪ್ಪುಗಟ್ಟಿದ್ದ ಪ್ರೀತಿ ನೀರಾಯಿತು. ಅವಳ ತಲೆ ನೇವರಿಸಿದ.. ಅಷ್ಟೇ!!. ಅಲ್ಲಿಂದ ಹೊರಟ. ತನ್ನ ಪ್ರೀತಿಯ ಬಿಟ್ಟು, ಗೆಳೆಯನ ಹೆಂಡತಿಯ ತೊರೆದು

ಮತ್ತೆ ಗಂಡ ಬಂದ, ಅತ್ತೆ ಬಂದರು. ತಾನು ಗೆಲುವಾಗಿರುವುದು ಅವರಲ್ಲಿ ಒಂದು ಪವಾಡದಂತೆ ಕಂಡಿತ್ತುದಿನ ಹಿಂದಿನಂತೆ ಎಂದಿನಂತೆ ಸಾಗುತಲಿತ್ತು. ಇಷ್ಟು ದಿನಕ್ಕೆ ಒಮ್ಮೆಯೂ ಅಮ್ಮನಂತೆ ಪ್ರೀತಿಸುತ್ತಿದ್ದ ಪಾಲ್ಗುಣಿ ನೆನಪಾಗಲಿಲ್ಲ ಶಿಶಿರ ನೆನಪಾದ. ಅವನು ಬರಲಿಲ್ಲ. ಅಮ್ಮನಲ್ಲಿಗೆ ಇವಳು ಹೋಗಲಿಲ್ಲ.

ಇವತ್ತು ಶರತ್ ಧಿಗಿಧಿಗಿ ಅನ್ನುತ್ತಿದ್ದ. ಕಂಗಳು ಕೆಂಡ ಕಾರುತ್ತಿದ್ದವು. ಮೈ ಮೇಲೆ ರಾಕ್ಷಸ ಬಂದವರಂತೆ ಕಿರುಚಾಡಹತ್ತಿದ. ಹೌದು ..!ಶಿಶಿರ ಗೆಳೆಯನಿಗೆ ಸತ್ಯ ಹೇಳಿಬಿಟ್ಟಿದ್ದ. ತಾನು ನಾಲ್ಕು ದಿನ ಪಾಲ್ಗುಣಿಯೊಂದಿಗೆ ಇದ್ದ ವಿಚಾರ.. ಶರತ್‌ನ ಕಣ್ಣಲ್ಲಿ ಅವನ ಹೆಂಡತಿ ಕುಲಟೆಯಾಗಿ ಬಿಟ್ಟಳು. ಪವಿತ್ರ ಪಾಲ್ಗುಣಿಯ ಕಳಂಕಿನಿಯನ್ನಾಗಿ ಮಾಡಿದ ಹೊಣೆ ಮುಗ್ದ ಶಿಶಿರನಿಗೆ ಸಲ್ಲಬೇಕು.. ತಾನು ಮತ್ತೊಮ್ಮೆ ಮೋಸ ಹೋಗಿ ಬಿಟ್ಟೆ ಶಿಶಿರನಿಂದ.. ತನ್ನ ಬಗ್ಗೆ ಮೃದು ಭಾವನೆ ತರಿಸಿ ಈಗ ರೀತಿಯ ಅಪವಾದ ತನ್ನ ಮೇಲೆ ಹೊರಿಸಿದ ಶಿಶಿರ. ಪಾಲ್ಗುಣಿ ಕ್ರೋಧಗೊಂಡಳು, ನರಳಿದಳು.. ಗಂಡ ಮನೆಯಿಂದ ಆಚೆ ಅಟ್ಟಿಬಿಟ್ಟ.. ಘರ್ಜಿಸಿದ.  ಈಗ ನೆನಪಾದವಳು ಅಮ್ಮ ಪಾಲ್ಗುಣಿ.. ಅಮ್ಮನನ್ನು ಶಾಶ್ವತವಾಗಿ ಸೇರಿ ಬಿಡುವೆನೆಂದು  ಓಡಿದಳು ಅವಳ ಬಳಿಗೆ. ಅಲ್ಲಿ ಶಿಶಿರ ತೆರೆದ ತೋಳುಗಳಿಂದ ಕಾದಿದ್ದ ತನ್ನ ಪಾಲ್ಗುಣಿಗಾಗಿ
"ನಾ ಹಾಗೆ ಹೇಳಿರದೇ ಇದ್ದಿದ್ದರೆ, ನಿನಗೆ ಸತ್ತು ಸತ್ತು ಬದುಕುವುದರ ವಿನಾ ಬೇರೊಂದು ಬದುಕಿತ್ತಾ ಪಾಲ್ಗುಣಿ..? ಬಂಧನದಿಂದ ಮುಕ್ತಿಯಿತ್ತಾ..? ನನ್ನ ಪ್ರೀತಿ ನನಗೆ ದೊರಕುವ ಸಂಭವವಿತ್ತಾ..? " ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸಿದ
"ನಿನ್ನ ಜೋಪಾನ ಮಾಡುತ್ತೇನೆ.. ನನ್ನ ಬದುಕು ತುಂಬುತ್ತೀಯಾ...?" ಮತ್ತೊಮ್ಮೆ ಕೇಳಿದ
ಪಾಲ್ಗುಣಿಗೆ ಹೊಸ ಬದುಕು ಕಾಣಿಸಿತು.. ತನಗಾಗಿ ಮಿಡಿವ ಹೃದಯ ಕಾಣಿಸಿತು. ಅವನ ಕುರಿತು ತಪ್ಪಾಗಿ ಆಲೋಚಿಸಿದ್ದ ತನ್ನ ಬಗ್ಗೆಯೇ ಅವಳಿಗೆ ನಾಚಿಕೆ ಉಂಟಾಯಿತು .ಅವನ ತೋಳಬಂಧನದಲ್ಲಿ ಬಂಧಿಯಾದಳು. ಅದೆಷ್ಟೋ ಹೊತ್ತು ಪಾಲ್ಗುಣಿ ನದಿತಟದಲ್ಲೇ ಇಬ್ಬರೂ ಕೂತಿದ್ದರು. ಈಗ ಅಮ್ಮನಲ್ಲಿ ಅವತ್ತಿದ್ದ ರಭಸ, ರುದ್ರತೆ ಯಾವುದೂ ಇರಲಿಲ್ಲ. ಶಾಂತವಾಗಿ ಹರಿಯುತ್ತಿದ್ದಳು. ಇಬ್ಬರ ಬಳಿಯೂ ಬಂದು ಮೆಲ್ಲ ಮೈ ಸವರಿ ಹೋಗುತ್ತಿದ್ದಳು
"ಅಮ್ಮನಿಗೆ ಖುಷಿಯಾಗಿದೆ... " ಪಾಲ್ಗುಣಿ ಶಿಶಿರನ ಕಿವಿಯಲ್ಲಿ ಉಸುರಿದಳು.  
ಶಿಶಿರ ನಸು ನಕ್ಕಹೊಸ ಬದುಕೊಂದು ನಗುತಿತ್ತು.