ಬುಧವಾರ, ಫೆಬ್ರವರಿ 19, 2014

ಕ್ರಮದ ತೆರೆಯ ಸರಿಸಿಕೊಂಡು..

ಅಮ್ಮ ತಬ್ಬಿ ಅತ್ತೇ ಬಿಟ್ಟಿದ್ದರು “ಎಷ್ಟು ದಿನ ಆಯ್ತಮ್ಮಾ ನಿನ್ನ ನೋಡಿ..!” ಎಂದು.“ಶ್ರೀಕಾಂತು ಎಲ್ಲಿ…?!” ಜೊತೆಯಲ್ಲಿ ಬಾರದ ಅಳಿಯನ ಬಗ್ಗೆ ವಿಚಾರಣೆ. ಅರೆ! ಮದುವೆಯಾದ ಮೇಲೆ ಇದೇ ಮೊದಲು ತವರು ಮನೆಯ ಬಾಗಿಲು ತಟ್ಟುತ್ತಿರುವುದು. ಎಲ್ಲವೂ ಮುಂಚಿನಂತೆಯೇ ಇತ್ತು. ದೊಡ್ಡದೊಂದು ಅಂಗಳ, ಅಪ್ಪನ ಪ್ರೀತಿಯ ಕಾರು, ಅದರ ಪಕ್ಕ ಅಮ್ಮನ ಪ್ರೀತಿಯ ಮಲ್ಲಿಗೆ ಸಾಲುಗಳು. ಹತ್ತಿರ ಹೋಗಿ ಕೈಯಿಟ್ಟು ಸವರಿದೆ. “ಅದೊಂದು ಸಂತೆ.. “ಅಪ್ಪನ ಗೊಣಗಾಟ. ನನ್ನ ಲಾಗೇಜನ್ನೆಲ್ಲಾ ತಂದುಕೊಂಡು ನನ್ನ ರೂಮಿಗೆ ಬಂದೆ. ಇಲ್ಲೇ ಅಲ್ಲವೇ..? ನನ್ನ ಬಾಲ್ಯದ ಬದುಕಿನ ಸಿಹಿಯನ್ನು ಉಂಡಿದ್ದು. ಮನಸ್ಸು ಭಾರ ಭಾರ ಅನಿಸಿತು. ನನ್ನ ಮಂಚ, ಟೇಬಲ್, ಟೇಬಲ್ ನಡಿಯಲ್ಲಿ ನಸು ನಗುತ್ತಿರುವ ಶಾರುಕ್, ನನ್ನೆತ್ತರದ ಕನ್ನಡಿ, ಕಂಪ್ಯೂಟರ್‍.. ಎಲ್ಲವೂ ಮೊದಲಿನಂತೆಯೇ ಇದೆ. ಒಹ್…! ಇದೊಂದು ಹೊಸದು. ಬಹುಶ: ನನ್ನ ಮದುವೆಯಾದ ಮೇಲೆ ಅಪ್ಪ ಹಾಕಿಸಿದ್ದಿರಬೇಕು. ನನ್ನ-ಶ್ರೀಕಾಂತನ ಫೋಟೋ.
ದೂರದಿಂದ ಬಂದ ಸುಸ್ತಿಗೆ, ಬಿಸಿ ಬಿಸಿ ಸ್ನಾನ ಮಾಡಬೇಕಿತ್ತು, ಅಮ್ಮ “ನೀರು ಬಿಸಿ ಬಿಸಿ ಇದೆ ಸ್ನಾನ ಮಾಡು..” ಎಂದಿದ್ದು ಕೇಳಿಸಿತು. ಬಚ್ಚಲು ಮನೆಯ ಕಡೆ ಹೊರಟೆ. ದೃಷ್ಠಿ ಅಪ್ಪನತ್ತ ಹಾಯಿತು. ಅಪ್ಪನ ಕಣ್ಣಲ್ಲಿ ಸಿಡಿಮಿಡಿ. ಮಗಳೊಬ್ಬಳೇ ಬಂದಿದ್ದು ಅಪರಾಧವೆಂಬಂತೆ..! ಅಮ್ಮನ ಕಣ್ಣೊಳಗೆ ಆತಂಕ. ಗಮನಿಸದವಳಂತೆ ಮುಂದೆ ನಡೆದೆ.
ಅರೆರೆ! ಸೂರ್ಯ ನೆತ್ತಿಯ ಮೇಲಿದ್ದ. ಇಷ್ಟೊತ್ತು ಮಲಗಿಬಿಟ್ಟೆನಾ?! ಒಂದು ನೆಮ್ಮದಿಯ, ನಿರಾತಂಕದ ನಿದ್ದೆಯ ಮಾಡಿ ಅದೆಷ್ಟು ದಿನಗಳು ಕಳೆದಿದ್ದವೋ ಏನೋ..? ಹೊರ ಬಂದು ಮುಖ ತೊಳೆದು ಆರಾಮಾದೆ. ಅಪ್ಪ ಟಿವಿ ಮುಂದೆ ಕೂತಿದ್ದರು. ಸನ್ನೆಯಲ್ಲೇ ಬಳಿ ಕರೆದರು. ಅಪ್ಪ ಎಂದರೇ ಹಾಗೆಯೇ..! ಮೊದಲಿನಿಂದಲೂ ಭಯ. ನಿತ್ಯದ ಕ್ರಮಗಳು, ಪೂಜೆ-ಪುನಸ್ಕಾರ, ಕಡೆಗೆ ಅಡುಗೆಯಲ್ಲೂ ಅವರಿಷ್ಟ ಅವರ ಕ್ರಮಗಳೇ ನಡೆಯಬೇಕು. ಅಮ್ಮನಲ್ಲದೇ ಬೇರೆ ಯಾರೂ ಈ ಅಪ್ಪನೊಂದಿಗೆ ಏಗಲಾರಳು-ನನ್ನ ಅಭಿಮತ. ಅಪ್ಪನ ಗಾಂಭೀರ್ಯ ನಿಲುವೂ, ಅವರ ಹಠಮಾರಿತನವೂ ಈ ಭಯಕ್ಕೆ ಕಾರಣ ಇದ್ದೀತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹಾಗೆಂದು ಅಪ್ಪನೇನು ಕೆಟ್ಟವನಲ್ಲ. ಅಪ್ಪನೆಂದರೆ ಊರಿನವರ ಹೆಮ್ಮೆ.ಮನೆಯವರ ಭೀತಿ ಅಷ್ಟೇ..!
ಇಂತಹ ಅಪ್ಪ ನನ್ನ ಬಳಿ ಕರೆಯುತ್ತಿದ್ದಾರೆ! ಹೃದಯ ಜೋರಾಗಿ ಬಡಿದುಕೊಳ್ಳಲಾರಂಭಿಸಿತ್ತು.
ಅಪ್ಪ, “ಶ್ರೀಕಾಂತು ಯಾಕೆ ಬರಲಿಲ್ಲ….?”
ರಜೆ ಇಲ್ಲವಂತೆ….!” ಪಕ್ಕನೆ ಬಾಯಲ್ಲಿ ಬಂದ ಸುಳ್ಳು.
ಹಾಗಿದ್ದ ಮೇಲೆ ನಿನಗೇನು ಅವಸರವಿತ್ತು…? ನೀನೂ ಅವನಿಗೆ ಬಿಡುವಿದ್ದಾಗಲೇ ರಜೆ ಜೊತೆಯಲ್ಲಿ ಬರಬಹುದಿತ್ತಲ್ಲ…?” ಅಪ್ಪನ ನೇರ ಪ್ರಶ್ನೆ.
ಮನಸಿನ ಹೊಯ್ದಾಟ, ತುಮುಲಗಳು ಮತ್ತೇ ಶುರುವಾಗಿತ್ತು. ಅಳಿಯನಿಲ್ಲದೇ ಮಗಳು ತವರಿಗೆ ಬರಬಾರದೇ..? ಎದೆಯಲ್ಲಿ ಪ್ರಶ್ನೆ. ನಾ ಹೇಳಲಾರೆ ಅಂವ ಬರಲಾರನೆಂದು. ಕಾರಣ - ಎದುರಿಗಿರುವುದು ಅಪ್ಪ. ಮೌನ ಅವರೇ ಮುರಿದರು. “ಎಷ್ಟು ದಿನ ರಜೆ ನಿನಗೆ?”
ಒಂದು ವಾರ..!”
ಮತ್ತೆ ಅಲ್ಲಿಯವರೆಗೂ ಅವನ ಊಟ ತಿಂಡಿಯ ಜವಾಬ್ದಾರಿಯೆಲ್ಲಾ..? ಗಂಡ-ಹೆಂಡತಿ ಎಂದಮೇಲೆ ಒಟ್ಟಿಗೆ ಬರಬೇಕು. ಅದು ಕ್ರಮ..”
ಮನದೊಳಗೆ ಅಸಹನೆಯ ಬೆಂಕಿ.ಒಡಲೆಲ್ಲಾ ಉರಿ. ಕ್ರಮ-ಕ್ರಮ-ಕ್ರಮ! ಕ್ರಮದ ನಡುವೆ ಕಮರಿ ಹೋಗುತ್ತಿರುವ ಮಗಳ ಜೀವನಕ್ಕಿಂತ ಮುಖ್ಯವಾ ಇವರ ಕ್ರಮ?!
ತಲುಪಿದ್ದಾದರೂ ಹೇಳಬೇಕೆಂಬ ಜ್ಞಾನ ಉಳಿದಿದೆಯಾ..”
ಅವನಿಗೆ ಹೇಳುವ ಅವಶ್ಯಕತೆ ಇರಲಿಲ್ಲ.. ನಾ ಹೇಳಿರಲಿಲ್ಲ ಕೂಡ. ಅಪ್ಪನೆದುರಿಗೆ ಹೌದು ಎಂದು ಉದ್ದುದ್ದ ತಲೆಯಾಡಿಸಿದೆ. ಅಪ್ಪನಿಗೆ ನನ್ನ ಈ ಬಗೆಯ ಮೌನ ಹಿಡಿಸಲಿಲ್ಲವಿರಬೇಕು.ಸುಮ್ಮನಾದರು..ಕಡೆಪಕ಼ “ಹೇಗಿದ್ದೀಯಾ ಮಗಳೇ…” ಎಂದು ಕೂಡ ಅನ್ನದೇ. ಒಡಲಲ್ಲಿ ಬೆಂಕಿ ಕೊತಕೊತ. ಉಗುಳಿ ಬಿಡುವ ತವಕ.
ಮಧ್ಯಾಹ್ನದ ಊಟ ಆಗಿ ಅಪ್ಪ ಮಲಗಿಬಿಟ್ಟರು. ನಿವೃತ್ತಿಯ ಆದ ಮೇಲೆ ಹೀಗೆಯೇ..ಊಟ ಆದಮೇಲೊಂದು ಸಣ್ಣ ನಿದ್ದೆಯ ಅಭ್ಯಾಸ. ನಾ ಮಾತಾನಾಡಬೇಕಿರುವುದು ಅಮ್ಮನಲ್ಲಿಯೇ..ಅಪ್ಪನ ಮುಂದೆ ನಿಂತು ಹೇಳಲಾರೆ. ಅಮ್ಮನಲ್ಲಿ ಹೇಳಿದರೆ ಅದು ಅಪ್ಪನ ತನಕ ತಲುಪುತ್ತದೆ. ತಲುಪುವುದಷ್ಟೇ ಮುಖ್ಯ ನನಗೆ. ಅಮ್ಮನದು ಊಟದ ನಂತರದ ಶುಚಿಗಳ ಕಾರ್ಯ ಭರದಿಂದ ಸಾಗಿತ್ತು. ಸರಿಯಾದ ಸಮಯವಿದು. ಮೆಲ್ಲಗೆ ಅಡುಗೆ ಮನೆಗೆ ಹೊಕ್ಕು ಮಾತಿಗಾರಂಭಿಸಿದೆ.
ಅಮ್ಮಾ.. ಅದೇನು ಬೆಳಿಗ್ಗೆ ಇದ್ದ ಮಲ್ಲಿಗೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ..?ಯಾರು ಅಪ್ಪನಾ..?!”
ಅವರಿಗೆ ಅದು ಯಾವಾಗಲೂ ಸಂತೆ.. ಬೇಡವೆಂದರೂ ಕತ್ತರಿಸಿ ಬಿಟ್ಟರು..” ಅಮ್ಮನ ಬೇಜಾರು. ಮಲ್ಲಿಗೆ ಗಿಡಗಳೆಂದರೆ ಅಮ್ಮನಿಗೆ ಅದೆಷ್ಟು ಪ್ರೀತಿ. ಅಪ್ಪನ ಮಾತಿಗೆ ಎದುರಾಡದೇ ನಡೆಯುವುದೇ ಅಮ್ಮನ ಧರ್ಮವಾ..? ಅದೂ ತನ್ನ ಇಷ್ಟಗಳನ್ನು ಬಲಿಕೊಟ್ಟು…? ಇದುವರೆಗೂ ನನ್ನ ಅಮ್ಮನ ಜೀವನ ನಡೆದ್ದದ್ದೇ ಅಪ್ಪನ ಅಪ್ಪಣೆಯ ಮೇಲೆ ನನ್ನ ಓದು, ಬಟ್ಟೆ…ಕೊನೆಗೆ ಮದುವೆಯೂ ಕೂಡ..ಎಲ್ಲವೂ ಅವರಿಷ್ಟ! ಪಾಪದ ಹೂವಿನ ಗಿಡಗಳಿಂದ ಅದೆಂಥ ತೊಂದರೆ ಅಪ್ಪನಿಗೆ..? ನಾ ಕಾಣೆ. ಬಹುಶಃ ಮನಸ್ಸಿಗೆ ಒಮ್ಮೆ ಬೇಡವೆನಿಸಿದ ಮೇಲೆ ಯಾವುದನ್ನೇ ಆದರೂ ಮನುಷ್ಯ ಒಪ್ಪಿಕೊಳ್ಳಲಾರ ಅನಿಸುತ್ತೆ. ನನಗೂ ಶ್ರೀಕಾಂತನ ಮೇಲೆ ಇಂತದ್ದೇ ಬೇಡವೆನಿಸುವ ಭಾವ. ಇನ್ನೂ ಸಹಿಸಲಾರೆ ಎಂಬ ಭಾವ.
ಅಮ್ಮನೇ ಮುಂದುವರಿದು ಹೇಳಿದರು “ಯಾಕೆ ಪುಟ್ಟಾ.. ಶ್ರೀಕಾಂತು ಬರಲಿಲ್ಲಾ..?ಮದುವೆಯಾದ ಹೊಸದರಲ್ಲಿ ಗಂಡ-ಹೆಂಡತಿ ಜೊತೆ ಜೊತೆಯಾಗಿ ಬರುವುದು ಕ್ರಮ ಕಣೋ…” ಮಮತೆ ತುಂಬಿ ಹೇಳಿದ್ದರು. ಆದರೆ ಮದುವೆಯಾದ ಈ ಆರು ತಿಂಗಳು ನಾ ಹೇಗೆ ಅವನನ್ನು ಸಹಿಸಕೊಂಡೆ..? ಹೇಗೆ ವಿವರಿಸಲಿ..? ಕಥೆಗೆ ಅಂತ್ಯ ಕೊಡಲೇಬೇಕಾದ ಅನಿವಾರ್ಯತೆ. ವಿಷಯ ವಿಷಮವಾದರೂ ದಾಟಿಸಲೇಬೇಕು. ಒಪ್ಪಿಸಿಬಿಟ್ಟೆ.. ಅಮ್ಮನೆಂಬ ಕಡಲಿನ ಒಡಲಿಗೆ.
ಅಮ್ಮಾ.. ಡಿವೋರ್ಸ್ ಗೆ ಅಪ್ಲೈ ಮಾಡಿದ್ದೇನೆ…!”
ಅಮ್ಮ ಮರಗಟ್ಟಿ ಹೋದಳಿರಬೇಕು ಒಂದು ಕ್ಷಣ. ಒಡನೆಯೇ ಸಾವರಿಸಿಕೊಂಡು, “ಯಾಕೆ ಅನಿಷ್ಠದ ಮಾತನಾಡುತ್ತಿಯಾ..?” ಕಣ್ಣಲ್ಲಿ ಕಾವೇರಿ ತುಂಬಿದ್ದಳು. ಮಗಳು ಯೋಚನೆಗೆ ಬಿದ್ದೇ ನಿರ್ಧರಿಸದ್ದಳು. “ಅಮ್ಮಾ ಯೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ..ಬದಲಿಸಿವುದು ಸಾಧ್ಯವೇ ಇಲ್ಲದ ಮಾತು..” ಕಡ್ಡಿ ಮುರಿದಂತೆ ಮಾತು. ಎಂದೂ ಮಗಳಿಗೆ ಒಂದೇಟು ಕೊಟ್ಟು ಗೊತ್ತಿಲ್ಲದ ಅಮ್ಮನ ಕೈ ಬೀಸಿ ಬಾರಿಸಿತ್ತು ಮಗಳ ಕೆನ್ನೆಗೆ. ಮನಸಿನ ನೋವು, ಆಘಾತಗಳೇ ಹೆಚ್ಚಿರುವಾಗ ದೇಹಕ್ಕಾಗುವ ನೋವು ಹೆಚ್ಚೆನಿಸುವುದಿಲ್ಲ. ಅಮ್ಮನ ಅಳು ನನ್ನ ಕರುಳು ತಾಕುತ್ತಿತ್ತು. ಅಮ್ಮನ ಕಣ್ಣೀರನ್ನು ನಾನೂ ಸೇರಿದಂತೆ ಹೆಚ್ಚಿನ ಮಕ್ಕಳು ಸಹಿಸಲಾರರು. ಯಾಕೆಂದರೆ ಅಮ್ಮ ಅಳುವುದಿಲ್ಲ... ಅಥವಾ ಅಮ್ಮ ಅಳುವುದು ಸುಲಭಕ್ಕೆ ನಮಗೆ ಕಾಣಿಸುವುದಿಲ್ಲ.
ಶ್ರೀಕಾಂತ!
ಗಂಡನೆನ್ನುವ ಪದಕ್ಕೆ ನಾಲಾಯಕ್ ಎನ್ನಬಹುದಾದ ವ್ಯಕ್ತಿ. 
ಹೆಣ್ಣು ಗಂಡಿನ ಎಲ್ಲಾ ದೋಷಗಳು, ಅವಗುಣಗಳು, ಬೆಜವಾಬ್ದಾರಿತನಗಳನ್ನೂ ಸಹಿಸಬಲ್ಲಳು. ಆದರೆ ಹೆಂಡತಿಯಿದ್ದಾಗಲೇ ಬೇರೆ ಹೆಣ್ಣಿನ ಸಹವಾಸದ ಗಂಡನ್ನು-ಗಂಡನನ್ನು ಹೇಗೆ ತಾನೇ ಎದೆಗವಚಿ ಮುದ್ದಾಡಬಲ್ಲಳು..? ಮದುವೆಯಾದ ಹೊಸದೆನ್ನುವುದು ಪ್ರತಿ ಹೆಣ್ಣಿನ ವಸಂತಕಾಲ. ಬಣ್ಣ ಬಣ್ಣದ ಕನಸಿನ ಬದುಕಿಗೆ ಆಗ ತಾನೇ ಕಾಲಿಟ್ಟ ಘಳಿಗೆಯಲ್ಲಿ ಕನಸಿನ ಬಣ್ಣವೇ ಸೋರಿ ಹೋದರೆ.. ಮನಸ್ಸಿನ ಮೃದುತನ ಕರಗಿಹೋಗುವುದರಲ್ಲಿ ಸಂದೇಹವಿಲ್ಲ. ಅದರಲ್ಲೂ ಗಂಡನೆನಿಸಿಕೊಂಡವ ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡು ತನ್ನದೇ ಸರಿಯೆಂದು ವಾದಿಸುತ್ತಾ ಕೊನೆಪಕ್ಷ ತಿದ್ದಿಕೊಳ್ಳುವ ಪ್ರಯತ್ನವನ್ನೂ ಮಾಡದಿದ್ದರೆ ಹೆಣ್ಣಿಗೆ ಅದಕ್ಕಿಂತ ಘೋರ ನರಕ ಮತ್ತೊಂದಿರಲು ಸಾಧ್ಯವಿಲ್ಲ. ಅದರಲ್ಲೂ ಶ್ರೀಕಾಂತ ಹೊಲಸು ಮಾಡಿ ಸಿಕ್ಕಿ ಬಿದ್ದರೂ ಮೀಸೆ ಮಣ್ಣಾಗಲೇ ಇಲ್ಲಾ ಎಂದಾಗ ನಾಯಿ ಬಾಲಕ್ಕೆ ದಬ್ಬೆ ಕಟ್ಟುವ ತನ್ನ ವ್ಯರ್ಥ ಪ್ರಯತ್ನದ ಅರಿವು ಗಂಭೀರವಾಗಿಯೇ ಆಯಿತು.ಬೇಲಿಯ ಹೊರಗೂ ಒಳಗೂ ತನ್ನದೇ ಅಧಿಪತ್ಯವಿರಬೇಕೆಂಬ ಅವನ ದಾಹದೆಡೆ ತಿರಸ್ಕಾರ ಮೂಡಿತ್ತು. ಆ ಕ್ಷಣ ನನ್ನ ಸಹನೆಯ ಕೊನೆಯ ಗೆರೆಯೂ ದಾಟಿತ್ತು. ಅವನಿಷ್ಟಕ್ಕೆ ನಾ ಕಟ್ಟುಬಿದ್ದು ಬಾಳ್ವೆ ಮಾಡಲು ನಾನೇನು ಅಮ್ಮನೇ..? ನಾ ಹೊರ ಬಂದಿದ್ದೆ. ಹಾಸ್ಟೆಲ್ ಎನ್ನುವ ತಕ್ಷಣಕ್ಕೆ ಸಿಗುವ ತಾಣ ಸೇರಿಕೊಂಡು ಬಿಟ್ಟಿದ್ದೆ. ಡಿವೋರ್ಸ್‌ಗೆ ಅಪ್ಲೈ ಮಾಡಿದ್ದೆ.

ಅಪ್ಪನಿಗೆ ಅಳಿಯನೆಂದರೆ ಪ್ರೀತಿ. ತಾ ಮೆಚ್ಚಿ ಆರಿಸಿದ, ದೊಡ್ಡಂಕಿ ಸಂಬಳದ ಹುಡುಗ ಅವನು. ಅದರ ಹಿಂದಿನ ಸಣ್ಣ ಬುದ್ದಿ, ಅನಾಚಾರಗಳ ಅರಿವಿಲ್ಲ ಅವರಿಗೆ. ದೊಡ್ಡಂಕಿಯ ಆಸೆಗೆ ಬಿದ್ದು ದಡ್ಡರಾಗಿದ್ದು ವಿಪರ್ಯಾಸ. ಅಪ್ಪನಿಗೋ ಅಮ್ಮನಿಗೋ ಹೇಳಿದರೆ “ಕ್ರಮ”ದ ಪಾಠದ ವಿನಃ ಬೇರೆನೂ ದಕ್ಕುವ ನಿರೀಕ್ಷೆಗಳಿಲ್ಲ. ಅಳಿಯನ ಬಗ್ಗೆ ಹೇಳಿದರೆ ನಂಬುವರೆಂಬ ನಂಬಿಕೆಯೂ ಇಲ್ಲಾ..ಹೇಳುವುದು ಕರ್ತವ್ಯ. ಅಮ್ಮನಲ್ಲಿ ಹೇಳಿದೆ.
  ಅಮ್ಮನ ದುಃಖದ ಕಟ್ಟೆಯೊಡೆದು ಹರಿಯುತ್ತಲೇ ಇತ್ತು. ಅಮ್ಮನಿಗೆ ಮಗಳ ಮುಂದಿನ ಬದುಕೇ ದೊಡ್ಡದೊಂದು ಪ್ರಶ್ನೆಯಾಗಿತ್ತು. “ಅಮ್ಮಾ.. ಕೈಲಿ ಕೆಲಸವಿದೆ. ಜೀವನಕ್ಕೆ ತಾಪತ್ರಯ ಇಲ್ಲಾ..” ಸಮಾಧಾನಿಸಲು ಪ್ರಯತ್ನಿಸಿದೆ.
ಬೇಲಿಯಾಚಿಗಿನ ಬದುಕು ಇದಕ್ಕೂ ಕಠೋರ..!” ಅಮ್ಮನ ಬಿಕ್ಕಳಿಕೆಯಲ್ಲಿ ಮಾತುಗಳು ನಲುಗಿದವು. ನಾ ಕೇಳಲು ಸಿದ್ದಳಿಲ್ಲ.
ಅಪ್ಪನ ರೂಮಿಗೆ ಅಮ್ಮ ಎದ್ದು ಹೋದರು.. ಅಮ್ಮ ಅಪ್ಪನಲ್ಲಿ ಏನನ್ನೂ ಮುಚ್ಚಿಟ್ಟವರಲ್ಲ..ಈಗ ಅತ್ತು ಕರೆದು ಎಲ್ಲಾ ಹೇಳಿ ಬಿಡುತ್ತಾರೆ. ಅಪ್ಪನಿಗದು ಪ್ರತಿಷ್ಠೆಯ ಪ್ರಶ್ನೆ, ನನಗೆ ಬದುಕಿನ, ಬದುಕಿನ ನೆಮ್ಮದಿಯ ಪ್ರಶ್ನೆ..ಇಷ್ಟು ವರುಷದ ನನ್ನ ಜೀವನಕ್ಕೆ ಇದೊಂದಾದರೂ ನನ್ನದು ಎನ್ನುವ ನಿರ್ಧಾರವಿರಲಿ. ಅಪ್ಪನನ್ನು ಎದುರಿಸುತ್ತೇನೆ! ಸಾಕು.. ಅಮ್ಮನ ಮಲ್ಲಿಗೆ ಗಿಡವಾಗಲಾರೆ ಅಪ್ಪನ ಕೈಲಿ.
ರೂಮಿನಿಂದ ಅಪ್ಪನ ಜೋರು ಮಾತುಗಳು, ಅಮ್ಮನ ಅಳು ಕೇಳಿಸುತ್ತಿತ್ತು. ನಾ ಕಿವಿಗೊಡಲಿಲ್ಲ. ಅಂಗಳದ ಹೊರಗೆ ಕತ್ತರಿಸಿ ಹಾಕಿದ್ದ ಮಲ್ಲಿಗೆ ಗಿಡಗಳತ್ತ ಗಮನ ಹರಿಯಿತು. ಬಾಡಿದ ಮಲ್ಲಿಗೆಗಳು.. ಕೆಲವೊಂದು ಇನ್ನೂ ಮೊಗ್ಗು. ನಾನೂ ಹೀಗೇ ಆಗಿಬಿಟ್ಟೆನಾ.. ಮನಸ್ಸು ಪ್ರಶ್ನಿಸಿತು. ಪರಿಮಳವಿನ್ನೂ ಕುಂದಿರಲಿಲ್ಲ. ಕೆಲವನ್ನು ಆಯ್ದು ತಂದು ನನ್ನ ಮಂಚದ ತುಂಬಾ ಹರಡಿದೆ. ಹಗುರಾಗಿ ಮೈಚಾಚಿ ಮಲಗಿದೆ. ಅಪ್ಪನ ಗೆಜ್ಜೆಯ ಸಪ್ಪಳ…! ನನ್ನ ರೂಮಿನ ಬಾಗಿಲು ದೂಕಿಕೊಂಡು ಒಳ ಬಂದರು. ಒಂದೇ ಸಮನೇ ಪ್ರಶ್ನೆಗಳು, ಕಟಕಿಗಳು, ಬೈಗುಳಗಳು.ಅಪ್ಪನ ಒಣ ಪ್ರತಿಷ್ಠೆಯ ತುತ್ತತುದಿಯ ಹಂತ! ಶ್ರೀಕಾಂತ್ ಇಲ್ಲದ ಬಾಳಿನೊಳಗೆ ಅಪ್ಪನ ನೆರಳೂ ದಕ್ಕಲಾರದಂತೆ.
ನಾ ನೆರಳು ಬಯಸಿಲ್ಲ.. ಪ್ರೀತಿ, ವಿಶ್ವಾಸಗಳಷ್ಟೇ.. “
ಗಂಡ ಬಿಟ್ಟ ಹೆಣ್ಣಿಗೆ ಯಾವುದೂ ದಕ್ಕಲಾರವು..” ಅಪ್ಪನ ಕೊನೆಯ ಮಾತು.
ನಾ ಮೌನಿಯಾದೆ. ಅಪ್ಪ ಮಗಳು ತನ್ನ ಮಾತು ಕೇಳಿಬಿಟ್ಟಳು ಅಂದುಕೊಂಡಿರಬೇಕು..ಹೊರನಡೆದರು ಅದೇ ಹಳೆಯ ಗರ್ವದಿಂದ. ನಾ ಅಪ್ಪನ ಮಗಳು. ಅಮ್ಮ ಒಣಗಲು ಹಾಕಿದ್ದ ನನ್ನ ಬಟ್ಟೆಗಳನ್ನು ತಂದು ಮಡಚಿ ಬ್ಯಾಗಿನೊಳಗೆ ತುಂಬಿಕೊಂಡೆ. ಮಲ್ಲಿಗೆಯ ಮಾಲೆ ಕಟ್ಟಿ ಮುಡಿದುಕೊಂಡು ಹೊರಟೆ.
ಅಮ್ಮಾ ತಡೆದರು, ಬುದ್ದಿ ಹೇಳಿದರು ಮತ್ತೆ ಕಣ್ಣೀರು ಹಾಕಿದರು. ಅಪ್ಪ “ಮಾತು ಮೀರಿ ಹೋದವಳು ಮತ್ತೆಂದೂ ಈ ಕಡೆ ಮುಖ ಮಾಡಬಾರದು ಎಂದು ಹೇಳು..” ಎಂದರು. ಮನಸ್ಸು ಯಾವುದಕ್ಕೂ ಮಣಿಯದಷ್ಟು ಕಲ್ಲಾಗಿತ್ತು. ಮುರಿದ ಮನಸ್ಸು ವಾಸ್ತವದೊಂದಿಗೆ ರಾಜಿಯಾಗಿದೆ. ಒಣ ಕ್ರಮಗಳೊಂದಿಗೆ ಅಲ್ಲಾ..!
ನಿಮಗೆ ಭಾರವಾಗಿ ಇರಲಾರೆ ಅಪ್ಪಾ..ಮುಂದೆ ಎಂದಾದರೂ ಮಗಳು ಬೇಕೆನಿಸಿದಾಗ ಫೋನಾಯಿಸಿ ಮಗಳು ಓಡಿ ಬರುತ್ತಾಳೆ.. ನಿಮ್ಮನ್ನು ಬಿಟ್ಟರೆ ಈ ಪ್ರಪಂಚದಲ್ಲಿ ನಿಮ್ಮ ಮಗಳೂ ಒಂಟಿಯೇ…” ಹೇಳಿ ಕ್ರಮದ ತೆರೆಯ ಸರಸಿಕೊಂಡು ಹೊರನಡೆದೆ. ಸೂರ್ಯ ಮುಳುಗುವವನಿದ್ದ. ಕತ್ತಲ ಸೀಳಿ ಬೆಳಕ ಕೊಡುವ ಚಂದಿರ ನಗುನಗುತ್ತಾ ಮೇಲೆರುತ್ತಿದ್ದ.. ಹೊಸ ಬದುಕು ನಗುತ್ತಿದ್ದಂತೆ ಭಾಸವಾಯಿತು.