ಮಂಗಳವಾರ, ಏಪ್ರಿಲ್ 29, 2014

ಮೊದಲ ಗಂಡ.. !

(ಮೊದಲ ಗಂಡ : ನಿಜಜೀವನ ಆಧಾರಿತ ಕಥೆಯಂತಹ ಬದುಕಿದು.. ಇದನ್ನು ಕಥೆಯಾಗಿ ಓದದೇ..ಜೀವನವಾಗಿ ಓದಿ ನೋಡಿ.. ನೋವಿನೊಂದು ಎಳೆ ನಿಮ್ಮ ಮನಸ್ಸನ್ನೂ ತಾಕೀತು ... ಉಸಿರಾಟದ ಭಾರ ಅರ್ಥವಾದೀತು ಎಂಬ ಆಶಯ)

ಸೋಮ :
ಸೋಮನೆಂದರೆ ಆರಡಿಯನ್ನೂ ಮೀರುವ ಎತ್ತರದ ಒಣಕಲು ಮತ್ತು ಕಪ್ಪಗಿನ ಆಕೃತಿ.ನನ್ನ ಮೊದಲ ಗಂಡ..! ನಮ್ಮದಾದರೂ ಎಂತಹ ಜೋಡಿ?! ಆರಡಿ ಎತ್ತರದ ಗಂಡ.. ನಾಲ್ಕಡಿ ಎತ್ತರದ ಹೆಂಡತಿ! ಕುಡಿತ ಶುರು ಮಾಡಿದನೆಂದರೆ ಅವನಿಗೂ ಮನುಷ್ಯತ್ವಕ್ಕೂ ಸಂಬಂಧವೇ ಇಲ್ಲಾ. ಹದಿನೆಂಟು ವರುಷ ಬಾಳಿದ್ದೇನೆ. ರಾಕ್ಷಸನಂತಹ ಅವನನ್ನು ಮತ್ತು ಅವನೊಳಗೆ ಸದಾ ಸುಪ್ತವಾಗಿ ಹರಿಯುತ್ತಿದ್ದ ಪ್ರೀತಿ, ದ್ವೇಷ, ಹತಾಶೆಗಳನ್ನು ಸಹಿಸಿಕೊಂಡು. ಕಳ್ಳ ಭಟ್ಟಿ ಇಳಿಸುತ್ತಿದ್ದ ಕುಡಿತಕ್ಕೆ. ಯಾವತ್ತೂ ಹೆಚ್ಚು ಕಮ್ಮಿ ಆಗಿಲ್ಲ. ಅಷ್ಟು ಪರಿಣಿತ ಅದರಲ್ಲಿ. ಬಳಸುತ್ತಿದ್ದ ಎಲ್ಲಾ ಮಾಲುಗಳೂ ಉತ್ತಮ ದರ್ಜೆಯದ್ದೇ ..! ಅಷ್ಟು ಶ್ರದ್ಧೆಯಿಂದ ತಯಾರಿಸಿರುತ್ತಿದ್ದ ..ಅದೇ ಶ್ರದ್ದೆಯಲ್ಲಿ ಕುಡಿಯುತ್ತಿದ್ದ.. ಮನೆಗೆ ಬಂದವರಿಗೂ ಕುಡಿಸುತ್ತಿದ್ದ. ಒಂದೆರಡು ಸಲ ಪೊಲೀಸರು ರೈಡ್ ಮಾಡಿದ್ದೂ ಉಂಟು. ಜೈಲಿಗೆ ಹೋಗಿ ಮತ್ತೆ ಬಂದು ಕಳ್ಳಭಟ್ಟಿ ಇಳಿಸುತ್ತಿದ್ದ. ಕೆಲವೊಮ್ಮೆ ಮೊದಲೇ ಸೂಚನೆ ಸಿಕ್ಕುತ್ತಿತ್ತು.. ನನಗೆ ಗಂಡ ಜೈಲು ಪಾಲಾಗುವುದು ಬೇಡವಿತ್ತು.. ಮಾಲು ಬಚ್ಚಿಡಲು ನಾನೂ ಸಹಾಯ ಮಾಡುತ್ತಿದ್ದೆ. ಮದುವೆಯಾದ ಹೊಸದರಲ್ಲಿ ಇವೆಲ್ಲಾ ಸೋಜಿಗದಂತೆ ಮತ್ತೊಮ್ಮೆ ಅಪರಾಧದಂತೆ ಗೋಚರಿಸುತ್ತಿತ್ತು.. ಬರುಬರುತ್ತಾ ಮಾಮೂಲಾಯಿತು.. ನಾನೂ ಭಟ್ಟಿ ಇಳಿಸುವುದರಲ್ಲಿ ಪರಿಣಿತೆ ಆಗಿಬಿಟ್ಟೆ - ಕುಡಿತದಲ್ಲೂ..!


ನಮ್ಮಲ್ಲಿ ಹೆಂಗಸರೂ ಕುಡಿಯುತ್ತಾರೆ. ಗಂಡನೇ ಕುಡಿಸುವಾಗ ಹೆಂಡತಿ ಯಾಕೆ ಒಲ್ಲೆ ಎನ್ನುತ್ತಾಳೆ..?ರಾತ್ರಿ ಮಲಗುವಾಗ ಒಂದಿಷ್ಟು ತೀರ್ಥ ಸೇವನೆ ಅಭ್ಯಾಸವಾಯಿತು. ಬಹುಶಃ ನಾ ಕುಡಿತ ಕಲಿಯಲಿಲ್ಲವಾದರೆ ಅಷ್ಟು ಎತ್ತರದ ಮನುಷ್ಯನನ್ನು ನಾಲ್ಕಡಿಯ ನಾನು ಅದು ಹೇಗಾದರೂ ಸಂಭಾಳಿಸುತ್ತಿದ್ದೆ ಹದಿನೆಂಟು ವರುಷ..?! ಬಾವನವರನ್ನು ಕಂಡರೆ ಸದಾ ದ್ವೇಷ ಇವನಿಗೆ. ತಾನು ಪ್ರೀತಿಸಿದ ಹೆಣ್ಣನ್ನು ಮದುವೆಯಾಗಲು ಬಿಡದೇ ನನ್ನನ್ನು ಗಂಟು ಹಾಕಿದ್ದಕ್ಕಾಗಿ.ಒಮ್ಮೊಮ್ಮೆ ಬಾವನವರು ಮರುಗುತ್ತಾರೆ ಆ ಹೆಣ್ಣನ್ನೇ ತಂದುಕೊಂಡಿದ್ದರೆ ಇವನು ಕುಡಿತ ಕಲಿಯುತ್ತಿರಲ್ಲಿಲ್ಲ ಅಂತ.. ಅವಳಾದರೋ ಪುಣ್ಯವಂತೆ ಇವನನ್ನು ಕಟ್ಟಿಕೊಂಡು ಬಂಜೆಯಾಗಲಿಲ್ಲ - ಮೂವತ್ತೆಂಟಕ್ಕೇ ಮುಂಡೆಯಾಗಲಿಲ್ಲ. ಮೂರು ಮಕ್ಕಳ ಸುಖ ಸಂಸಾರ ಅವಳದು. ನನ್ನ ತವರಿನ ಊರಿಗೆ ಅವಳನ್ನು ತಂದುಕೊಂಡಿರುವುದು. ಪ್ರೀತಿಸಿದ ಹುಡುಗಿಯ ಕೈ ಹಿಡಿಯಲಿಲ್ಲವೆಂದು ನನ್ನ ದ್ವೇಷಿಸಲಿಲ್ಲ ಅವ. ಅದೊಂದು ದೊಡ್ಡ ವರ ನನಗೆ.ಆದರೆ ಮಿಕ್ಕಂತೆ ಅವನಿದ್ದ ಸಿಟ್ಟು, ಹೆಂಡತಿಯೆಂದು ಅವ ತೊರುವ ದಬ್ಬಾಳಿಕೆಗಳಿಗೆನಾ ತಿಂದ ಹೊಡೆತಗಳೇನೂ ಕಡಿಮೆಯದ್ದಲ್ಲ.. ಹೊಡೆಯುತ್ತಿದ್ದ, ಬಡೆಯುತ್ತಿದ್ದ , ಒದೆಯುತ್ತಿದ್ದ... ನನಗೆ ಏನಾದರೂ ಸಹಿಸಿಕೊಳ್ಳುತ್ತಿದ್ದೆ. ಆದರೆ ಬಾವನವರ ವಿಷಯಕ್ಕೆ ಹೋದಾಗ ಮಾತ್ರ ಎಳೆದು ತಂದು ಕೂಡಿಸುತ್ತಿದ್ದೆ. ಮತ್ತೆ ಹೊಡೆತ ತಿನ್ನುತ್ತಿದ್ದೆ.

ಕುಡಿದು ಕುಡಿದು ದಿನಾ ಬಾವನವರಲ್ಲಿ ಜಗಳವಾಡುತ್ತಿದ್ದ. ಓರಗಿತ್ತಿಯದು ಮೃದು ಸ್ವಭಾವ. ದನಿಯೆತ್ತರಿಸಿ ಮಾತನಾಡಿಯೂ ಗೊತ್ತಿಲ್ಲಾ ಅವಳಿಗೆ. ನಾನೇ ಇವನನ್ನು ದರದರ ಎಳೆದು ತಂದು ರೂಮಿನಲ್ಲಿ ಕೂಡಿ ಹಾಕಿ ಚಿಲಕ ಹಾಕುತ್ತಿದ್ದೆ.. ಅಥವಾ ಅವರನ್ನೇ ರೂಮಿನೊಳಗೆ ಕಳಿಸಿ ಅಂಗಳದಲ್ಲಿ ತಂದು ಕೂರಿಸುತ್ತಿದ್ದೆ ..ಆ ನನ್ನ ಶಕ್ತಿಯನ್ನು ನೆನೆವಾಗ ನಾನೇ ಬೆರಗಾಗುತ್ತೇನೆ. ಅವನಿಂದ ನಾನೇ ಒದೆ ತಿಂದದ್ದನ್ನು ನೆನೆವಾಗಲೂ ಅದೇ ಅಚ್ಚರಿ ನನ್ನಲ್ಲಿ.ಅದೇ ಸಮಯದಲ್ಲಿ ನಾದಿನಿ ಗಂಡನ್ನ ಬಿಟ್ಟು ತವರಿಗೆ ಬಂದು ಕೂತಿದ್ದಳು. ಅತ್ತೆ - ಮಗಳದ್ದು ಸೊಸೆಯರ ಮೇಲೆ ದಬ್ಬಾಳಿಕೆ ಶುರುವಾದ ದಿನಗಳವು. ನಾನು ಎದುರಿಸಿ ನಿಲ್ಲುತ್ತಿದ್ದೆ. ಅಕ್ಕ (ಓರಗಿತ್ತಿ) ಅತ್ತು ಮೂಲೆ ಸೇರುತ್ತಿದ್ದಳು..ಬಾವ ಹಿತ್ತಾಳೆ ಕಿವಿಯವರು ಅತ್ತೆ ನಾದಿನಿಯದ್ದೇ ಸರಿ ಎಂಬಂತೆ ವಾದಕ್ಕೆ ಇಳಿಯುತ್ತಿದ್ದರು. ನನ್ನ ಗಂಡ ನನ್ನ ಜೊತೆ ನಿಲ್ಲುತ್ತಿದ್ದ. ಆ ವಿಷಯದಲ್ಲಿ ಅಕ್ಕ ಏಕಾಂಗಿ. ನನ್ನ ಗಂಡ ಹೊರಗೆ ಹೋಗಿ ದುಡಿದು ಕಾಸು ಸಂಪಾದಿಸುವನಲ್ಲ. ಮನೆಯಲ್ಲೇ ಇದ್ದ ಅವನಿಗೆ ತನ್ನ ಅಕ್ಕ ಮತ್ತು ಅಮ್ಮನ ಪಿತೂರಿ ಗೊತ್ತಾಗಿತ್ತು.. ಅದೇನಾಗಿತ್ತೋ ಬಾವನವರು ಇಲ್ಲದ ಒಂದು ರಾತ್ರಿ ಸೊಸೆಯರಿಗೆ ಕಾಟ ಕೊಡುವ ಸ್ವಂತ ಅಕ್ಕನಿಗೆ ತನ್ನ ಅಮ್ಮನಿಗೆ ಬಡಿದು ಬಿಟ್ಟಿದ್ದ..ನಾ ಸುಮ್ಮನೆ ನೋಡುತ್ತಿದ್ದೆ. ಅಕ್ಕ ಬಂದು ಬಿಡುವಂತೆ ಕಾಲಿಗೆ ಬಿದ್ದಳು. ಅವ ಬಿಟ್ಟ. ಅತ್ತಿಗೆಯೆಂದರೆ ಅವನ ಪಾಲಿಗೆ ದೇವತೆ. ತನ್ನ ಅಮ್ಮನಿಗಿಂತಲೂ ಅತ್ತಿಗೆಗೊಂದು ಎತ್ತರದ ಸ್ಥಾನ ಅವನ ಹೃದಯದಲ್ಲಿತ್ತು. ಒರಟು ರಾಕ್ಷಸನ ಒಳಗೊಂದು ಪ್ರೇಮ ಜಲದ ಒರತೆ ಕಂಡಿದ್ದೆ. .ಮನೆಯ ಜಗಳ ಊರವರ ಬಾಯಿಯ ಮೂಲಕ ಒರಗಿತ್ತಿಯ ತವರಿಗೆ ತಿಳಿದಿತ್ತು. ಒಂದು ದಿನ ಅವಳ ಮನೆಯವರು ಬಾವನವರ ಸಂಸಾರವನ್ನೇ ಕರೆದುಕೊಂಡು ಅವಳ ತವರು ಮನೆಗೆ ಹೋದರು. ಮನೆಯಲ್ಲಿ ಉಳಿದಿದ್ದು ನಾನು, ಗಂಡ, ಅತ್ತೆ ಮತ್ತು ನಾದಿನಿ.. ಸ್ವಲ್ಪ ಸಮಯದ ಮೇಲೆ ನಾದಿನಿಯೂ ತನ್ನ ಮಗನನ್ನು ಕಟ್ಟಿಕೊಂಡು ಬೇರೆ ಮನೆಮಾಡಿದಳೆನ್ನಿ.

ಬಾವನವರಿಗೆ ಮೂರು ಮಕ್ಕಳು.. ಬೆಳೆಯುತ್ತಿದ್ದರು. ನಮಗಾದರೋ ಒಂದೂ ಇಲ್ಲಾ.. ಅತ್ತೆ ನಾದಿನಿ ಇಬ್ಬರೂ ನನ್ನ ಬಂಜೆ ಎಂದರು. ಇವ ಅವರಿಗೆ ಜಾಡಿಸಿ ಒದ್ದ. ಗಂಡಸಿನ ಸಹಜ ಅಹಮಿಕೆ ಬಿಟ್ಟು ದೋಷ ಅವನದು ಎಂದು ಒಪ್ಪಿಕೊಂಡ. ಬಾವನವರ ಮೂರು ಮಕ್ಕಳಲ್ಲಿ ಒಬ್ಬನನ್ನು ನನಗೆ ಕೊಡು ನಾನು ಸಾಕಿಕೊಳ್ತೇನೆ ಅಕ್ಷರಶಃ ಬಾವನವರಲ್ಲಿ ಬೇಡಿಕೊಂಡಿದ್ದ - ಮೊದಲ ಬಾರಿಗೆ. ಯಾರು ಯಾಕಾದರೂ ತಮ್ಮ ಮಗುವನ್ನು ಬಿಟ್ಟುಕೊಡುತ್ತಾರೆ? ಅದೂ ಇಂತಹ ಕುಡುಕ ದಂಪತಿಗೆ?! ಕುಡಿತ, ಜಗಳ. ಹೊಡೆತ ದಿನಚರಿ ಎನ್ನುವಷ್ಟು ಮಾಮೂಲಾಗಿತ್ತು ನನಗೆ. ಮಗುವಿಗಾಗಿ ಹಂಬಲಿಸುತ್ತಿದ್ದ. ಅದಕ್ಕಾಗಿಯೇ ಕುಡಿಯುತ್ತಿದ್ದಿನಿ ಅನ್ನುತ್ತಿದ್ದ. ಇದರ ಮಧ್ಯೆ ಇವನೊಂದು ಸೈಡ್ ಬಿಸಿನೆಸ್ ಇತ್ತು.. ಕುಡಿತಕ್ಕೆ ಮೊದಲನೇ ಸ್ಥಾನ ಅವನ ಜಗತ್ತಿನಲ್ಲಿ. ಮಿಕ್ಕಿದ್ದೆಲ್ಲವೂ ಸೈಡ್ ಡೇ! ಅದು ಲ್ಯಾಂಡ್ ಬುಸಿನೆಸ್. ನಮ್ಮದು ಹಳ್ಳಿ. ಗುಡ್ಡ ಗಾಡು ಪ್ರದೇಶ. ಹೆಚ್ಚಿನ ಜಾಗಗಳು ಸರಕಾರದ ಆಸ್ತಿ. ಜಾಗಗಳನ್ನು ಕಬಳಿಸುತ್ತಿದ್ದ. ಏನೇನೊ ರೆಕಾರ್ಡ್ ಗಳನ್ನು ಜೋಡಿಸಿಕೊಂಡು ಜಾಗ ತನ್ನದು ಮಾಡಿಕೊಳ್ಳುತ್ತಿದ್ದ ಅದನ್ನು ಇನ್ನೊಬ್ಬರಿಗೆ ಮಾರುತ್ತಿದ್ದ. ಅದೇ ದುಡ್ಡಲ್ಲಿ ಜೀವನ. ಇಂತಹ ಎಷ್ಟು ಜಾಗಗಳನ್ನು ಮಾರಿದ್ದಾನೋ ಲೆಕ್ಕವಿಟ್ಟಿಲ್ಲ ಸ್ವತಃ ಅವನೇ. ನಾನು ಬೀಡಿ ಕಟ್ಟುತ್ತಿದ್ದೆ.. ಜೀವನ ನಡೆಯುತ್ತಿತ್ತು. ತನ್ನ ಕೈಯಲ್ಲಿ ದುಡ್ಡು ಖಾಲಿಯಾದಾಗ ನಾನು ಬೀಡಿ ಕಟ್ಟಿ ಬಂದ ಹಣ ಕಿತ್ತುಕೊಳ್ಳುತ್ತಿದ್ದ. ಅವನಿಗೆ ಬಿಸಿನೆಸ್ ದಕ್ಕಲಿಲ್ಲವಾದಾಗ ನನ್ನ ಒಡವೆ ಅಡವಿಡುತ್ತಿದ್ದ. ಮತ್ತೆ ದುಡ್ದಾದಾಗ ಬಿಡಿಸಿ ತಂದು ಕೊಡುತ್ತಿದ್ದ. ಈ ನಡುವೆ ಎರಡು ಬಾರಿ ಹೃದಯಾಘಾತವಾಗಿತ್ತು. ಬಾವನವರು ಹೇಗೇಗೋ ದುಡ್ಡು ಹೊಂದಿಸಿ ಆಸ್ಪತ್ರೆ ಖರ್ಚುಗಳನ್ನು ನೋಡಿಕೊಂಡು ಉಳಿಸಿಕೊಂಡಿದ್ದರು.


ಮದುವೆಯಾಗಿ ಹದಿನೇಳು ವರ್ಷ ಕಳೆದಿತ್ತು. ಯಾರೋ ಮಗು ದತ್ತು ತೆಗೆದುಕೊಳ್ಳುವಂತೆ ಹೇಳಿದರಂತೆ..ಇವ ಇದ್ದಕ್ಕಿದ್ದ ಹಾಗೆ ಬದಲಾಗಿದ್ದ. ಮಗು ದತ್ತು ತೆಗೆದುಕೊಳ್ಳುವುದಕ್ಕೆ ಕಾನೂನಿನ ರೀತಿಯಲ್ಲಿ ಬೇಕಾದ ಅರ್ಹತೆ ಪಡೆಯಲು ಇಂತಹ ನಿರ್ಧಾರಕ್ಕೆ ಬಂದಿದ್ದ.ಅರ್ಹತೆಯೆಂದರೆ ಎಂತಹದು..?! ದಂಪತಿಯ ಹಣ ಕಾಸಿನ ಪರಿಸ್ಥಿತಿ, ವಯಸ್ಸು ಇತ್ಯಾದಿ.. ವಯಸ್ಸದರೂ ಇತ್ತು..ಹಣ?ಅದನ್ನು ಗಳಿಸಬೇಕಿತ್ತು. ಇನ್ನು ಮುಂದೆ ಭಟ್ಟಿ ಇಳಿಸುವುದಿಲ್ಲವೆಂದ. ಕೆಲಸಕ್ಕೆ ಹೋಗುತ್ತೇನೆ ಎಂದ. ಒಂದು ಮಗು ದತ್ತು ತೆಗೆದುಕೊಳ್ಳೋಣ ಎಂದ. ಸರಿ..! ನಂಬಿಕೆ ಬರಲಿಲ್ಲ ನಂಗೆ. ಆದರೆ ಅವ ನಿಜಕ್ಕೂ ಬದಲಾಗಿದ್ದ. ನಮ್ಮದೇ ಊರಿನ ಜೈನರ ಮನೆಗೆ ತೋಟದ ಕೆಲಸಕ್ಕೆ ಹೋಗಲು ಶುರುವಿಟ್ಟ. ಡಾಕ್ಟರ್ ಭಾರದ ಕೆಲಸ ಮಾಡುವ ಹಾಗಿಲ್ಲ ಎಂದಿದ್ದರು. ಇವನ ಉಮೇದಿನ ಮುಂದೆ ನನ್ನ ಮಾತುಗಳು ನಡೆಯಲಿಲ್ಲ. ಹತ್ತಿರತ್ತಿರ ಒಂದು ವರ್ಷ ಖುಷಿಯಲ್ಲಿ ಮಿಂದು ಹೋಗಿತ್ತು ನಮ್ಮ ಸಂಸಾರ. ಈ ಹಿಂದೆ ಬ್ಯಾಂಕ್ ನಲ್ಲಿ ಅವ ಇರಿಸಿದ್ದ ಒಡವೆಯಲ್ಲಿ ಬೆಂಡೋಲೆ ಹೋಗಿ ಬಿಟ್ಟಿತ್ತು. ಹೊಸ ಬೆಂಡೋಲೆ ಮಾಡಿಸಿಕೊಟ್ಟ. ಮನೆಗೆ ಮಿಕ್ಸಿ ಬಂತು.ಬಿದ್ದು ಹೋಗುವಂತಿದ್ದ ಕೊಟ್ಟಿಗೆ ನೆಟ್ಟಗೆ ನಿಲ್ಲಿಸಿದ. ನಮ್ಮನೆಯ ಆಳದ ಬಾವಿಯಿಂದ ನೀರು ಸೇದುವ ಕಷ್ಟ ತಪ್ಪಿಸಲು ಪಂಪ್ ಸೆಟ್ ಹಾಕಿಸಿದ..ನನ್ನ ಹೆಸರಿನಲ್ಲಿ ಒಂದಿಷ್ಟು ಜಾಗ ಮಾಡಿದ. ಒಂದು ರೀತಿಯಲ್ಲಿ ಸುಖ ಸಂಸಾರ ಸಿಕ್ಕಿತ್ತು.

ಅವತ್ತು ದೀಪಾವಳಿ. ನಮಗೆ ಮೂರುದಿನದ ಹಬ್ಬ. ಮೊದಲನೇಯ ದಿನ ತುಂಬಾ ಖುಷಿಯಲ್ಲಿ ಇದ್ದ. ಯಾಕೆಂದರೆ ದತ್ತು ತೆಗೆದುಕೊಳ್ಳುವುದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದ. ಸಂತೋಷಕ್ಕೆ ಅಂಗಳದ ತುಂಬಾ ಪಟಾಕಿ ಸಿಡಿಸಿ ನಲಿದ ರಾತ್ರಿ ಭರ್ಜರಿ ಊಟ ಮಾಡಿ ಮಲಗಿದ ಅಷ್ಟೇ ಮತ್ತೆ ಬೆಳಿಗ್ಗೆ ಏಳಲಿಲ್ಲ. ಹೃದಯಾಘಾತವೆಂದು ಡಾಕ್ಟರ್ ಶರಾ ಬರೆದರು. ಬಹುಶಃ ಸಂತೋಷಕ್ಕೆ ಅವನ ಹೃದಯ ಬಹುವಾಗಿ ಮಿಡಿದಿರಬೇಕು... ಹೃದಯ ಸ್ತಬ್ಧವಾಯಿತು.

ಸಂತೋಷ ಸತ್ತು ಹೋಯಿತು ಅವನೊಂದಿಯೇ. ವಿಧಿ ಮತ್ತೊಮ್ಮೆ ಅನ್ಯಾಯ ಮಾಡಿದ. ಬದುಕುವ ಭರವಸೆಯೇ ಕಳೆದು ಹೋದಂತಹ ಘಳಿಗೆ.. ಕನಸಿನ ದೀಪ ಕುಸಿದು ಬಿತ್ತು. ಬದುಕು ಅಂದಕಾರವಾಯಿತು... ಜೊತೆಗೆ ಕ್ರಮೇಣ ಮೊದಲನೇ ಗಂಡನ ಅಧ್ಯಾಯವೂ ಬದುಕಿನಿಂದ ಮುಗಿದು ಹೋಯಿತು.

ಮುಂದೆ ಬದುಕಿಗೆ ಎರಡನೇ ಗಂಡ ಬರುತ್ತಾನೆ. ಬದುಕು ಬಾಣಲೆಯಿಂದ ನೇರಾ ಬೆಂಕಿಗೇ ಬೇಳುತ್ತದೆ.(ವಿ. ಸೂ: ಬದುಕು ಇಲ್ಲಿಗೇ ಮುಗಿಯುವುದಿಲ್ಲವಲ್ಲಾ...??
ಮುಂದುವರಿಕೆ ಇದೆ... 
ಸದ್ಯಕ್ಕೆ ಇಷ್ಟು ಸಾಕು.. )ಶನಿವಾರ, ಏಪ್ರಿಲ್ 26, 2014

ಕದಡಿದ ಕಡಲು ...

ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://goo.gl/jhjxq1

ಭಾಗ (೨) : ದಿನಕರ್ ಮೋಗೆರರವರ "ದಣಪೆ http://goo.gl/cYJQfT

ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://goo.gl/nfSudn

ಭಾಗ (೪) : ರೂಪಾ ಸತೀಶ್ ವರ "ಮಿತಿ "  http://goo.gl/aoTMGC

ಭಾಗ (೫) : ಶಮ್ಮಿ ಸಂಜೀವ್ ಅವರ "ವ್ಯಾಪ್ತಿ-ಪ್ರಾಪ್ತಿ" http://goo.gl/cThzK1

ಬ್ಲಾಗಿಗರ ಖೋ ಖೋ ಆಟದಲ್ಲಿ ನಾನೂ ಆಡುವ ಪ್ರಯತ್ನ ಮಾಡಿದ್ದೇನೆ..
ಕಥೆ ಮುಂದುವರಿಸಿದ್ದೇನೆ.. ಕಥೆಗೆ ನ್ಯಾಯ ಸಲ್ಲಿಸುವ ಪ್ರಯತ್ನವಿದು. ಈ ಪ್ರಯತ್ನ ಎಷ್ಟು ಸಫಲವಾಗಿದೆ ಎಂದು ಹೇಳಬೇಕಾದವರು ನೀವು... ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.. 

ನಿಮ್ಮ ಮುಂದೆ....  

ಭಾಗ (೬) :  ಕದಡಿದ ಕಡಲು 

"ನೀನು ಇಲ್ಲಿ.... ?!" ನನ್ನ ಬಾಯಿಂದ ಉದ್ಗಾರವೊಂದು ತಾನೇ ತಾನಾಗಿ ಹೊರಟಿತು ಆಶ್ಚರ್ಯದ ಜೊತೆಗೆ..ಪತಿರಾಯನ ಸಮೀಪದಲ್ಲಿ ಬಗ್ಗಿ ನಿಂತು ಏನೋ ಹೇಳುತ್ತಿದ್ದ ಆ ಹುಡುಗಿಯ ಗುರುತು ಹತ್ತಿತ್ತು ನನಗೆ. 

ಆ ಹುಡುಗಿಯನ್ನು ಕುರಿತು "ನಮ್ಮ ಮನೆಯವರು " ಎನ್ನುತ್ತಾ ಎದ್ದು ಬಂದ ಇವರು  "ಈ ಪ್ರಶ್ನೆ ನಾನು ನಿನ್ನನ್ನು ಕೇಳಬೇಕು ಡಾರ್ಲಿಂಗ್.. ದೇವಿಯವರನ್ನ ಆಫೀಸ್ ನಲ್ಲಿ ನೋಡಿ ಈ ಉದ್ಗಾರ ನನ್ನ ಬಾಯಿಂದ ತಾನೇ ಬರಬೇಕು... ?" ಹತ್ತಿರ ಬಂದು ಕಣ್ಣು ಮಿಟುಕಿಸಿ ನಕ್ಕರು. 

ಗಲಿಬಿಲಿ ನನಗೆ. ಅಷ್ಟರಲ್ಲಿ ಆ ಹುಡುಗಿ ಹತ್ತಿರ ಬಂದಿದ್ದ ಪತಿರಾಯನನ್ನು ಸರಿಸಿ "ಹೇಯ್.. ಮೊದಲಿನ ಹಾಗೆ ಇದ್ದೀಯಲ್ಲೇ.. ಒಂಚೂರೂ ಬದಲಾಗಿಲ್ಲ - ಒಂದು ರೌಂಡ್ ಉಬ್ಬಿದ್ದಿಯಾ ಅನ್ನೋದನ್ನು ಬಿಟ್ಟರೆ... " ಪಕಪಕನೇ ನಕ್ಕಳು.

"ಮೈತ್ರಿ.. ನಿಮ್ಮಿಬ್ಬರಿಗೂ ಮೊದಲೇ ಪರಿಚಯವೇ...?!" ಇವರ ಪ್ರಶ್ನೆ. 

"ಹೂ೦.. ಸರ್.. ನಾವಿಬ್ಬರು ಒಟ್ಟಿಗೆ ಓದಿದ್ದು ಬೆಳೆದಿದ್ದು...ಹೇಳಮ್ಮಾ ತಾಯಿ ನಿನ್ನ ಪತಿದೇವರಿಗೆ.. " ಇವಳ ಉತ್ತರ. 

"ಏನು ಕೋ - ಇನ್ಸಿಡೆಂಟ್ಸ್ ನೋಡು ಚಿನ್ನಾ.. ನಿನ್ನ ಕಳೆದು ಹೋದ ಸ್ನೇಹಿತರೆಲ್ಲಾ ನನಗೆ ಸಿಕ್ಕಿ, ನಾನು ಅವರನ್ನು ಮತ್ತೆ ನಿನಗೆ ಒಪ್ಪಿಸುವ ಕಾರ್ಯಕ್ರಮ ಇಟ್ಟುಕೊಂಡಿರುವ ಹಾಗಾಗಿದೆ..ನಿನ್ನ ಸ್ನೇಹಿತರು ನನ್ನ ಆಪ್ತರು... ಮೈತ್ರಿ ಇಲ್ಲೇ ಕೆಲಸ ಮಾಡ್ತಾ ಇದ್ದಾಳೆ ಎರಡು ವರ್ಷದಿಂದ.. ತಾವು ನಮ್ಮ ಆಫೀಸ್ ಕಡೆ ಬರಬೇಕಲ್ಲಾ ಮೇಡಂ... ನಿಮಗೆ ಹೇಗೆ ಗೊತ್ತಿರುತ್ತೆ ಇದು... ? " 

"ಸರಿ ಕಣೆ... ಈಗ ಒಂದಿಷ್ಟು ಕೆಲಸ ಇದೆ.. ನೀನು ನಿಮ್ಮವರೊಂದಿಗೆ ಇರು.. ಸಂಜೆ ಸಿಗುವುದನ್ನು ಮರಿಬೇಡ.. ವರ್ಷಗಳಿಂದ ಕೂಡಿಟ್ಟಿದ್ದನ್ನು ಮಾತುಗಳನ್ನೆಲ್ಲಾ ನಿನಗೆ ಉಣ ಬಡಿಸುವುದಿದೆ.. " ಎಂದು  ಮೈತ್ರಿ ಅದೇನೋ ಸಹಿಗಳನ್ನು ಹಾಕಿಸಿಕೊಂಡು ಕ್ಯಾಬಿನ್ ನಿಂದ ಹೊರ ನಡೆದಳು.

ಇವರು ನನ್ನ ಕೈ ಮೇಲೆ ಕೈಯಿಟ್ಟು ಮೈತ್ರಿಯ ಬಗ್ಗೆ ಹೇಳತೊಡಗಿದರು.ಇಡೀಯ ಆಫೀಸ್ ನ ಒಬ್ಬಳೇ ನಿರ್ವಹಿಸುತ್ತಾಳೆಂದೂ ಆಕೆ ನಿನ್ನ ಬಾಲ್ಯ ಸ್ನೇಹಿತೆಯೇ ಆಗಿರುವುದು ತಮ್ಮ ಪುಣ್ಯವೆಂದೂ ಹೇಳುತ್ತಿದ್ದರು. ನನ್ನ ಅನುಮಾನ ಬೆಂಕಿಗೆ ತುಪ್ಪ ಸುರಿಯುವ ಮಾತುಗಳು!

ಗೊಂದಲಗಳ ಅಲೆ ಬುಗಿಲೆದ್ದಿತ್ತು ಇವರ ಮತ್ತು ಅವಳ ಮಧ್ಯೆ ಬಾಸ್ ಮತ್ತು ಎಂಪ್ಲೋಯೀಗೆ ಮೀರಿದ ಸಲುಗೆಯಿತ್ತು. ಅದನ್ನು ನಾನು ಗುರುತಿಸಿದ್ದೆ.. ಸಲುಗೆ ಸಂಬಂಧವಾ..?! ಆಗಿರಲಾರದು. ನನ್ನನ್ನು ನಾನು  ಸಮಾಧಾನಿಸಿಕೊಳ್ಳುತ್ತಿದ್ದೆ. ಆಫೀಸಿಗೆಂದು ಬಂದವಳಿಗೆ ಯಾಕೋ ಅಲ್ಲಿರಲು ಆಗಲೇ ಇಲ್ಲಾ..  ದಡಕ್ಕನೇ ಎದ್ದು ಬಿಟ್ಟೆ.. 

ಇವರು " ಯಾಕೋ ಪುಟ್ಟಾ ಹೊರಟೆಯಾ..? ಆಗ್ಲಿಂದ ಒಂದೇ ಒಂದು ಮಾತನ್ನು ಆಡಿಲ್ಲ ನೀನು ಏನಾಯ್ತೋ.. ?" ಇವರ ಕಣ್ಣಲ್ಲಿ ಆತಂಕ ನಿಚ್ಚಳವಾಗಿ ಗೋಚರಿಸುತ್ತಿತ್ತು ನನಗೆ.

"ಏನಿಲ್ಲಾ ಅಮ್ಮ ಮನೆಗೆ ಹೋಗಿದ್ದೆ.. ಅದಕ್ಕೆ ಈ ಕಡೆಗೂ ಬಂದು ಹೋಗೋಣಾಂತ ಬಂದೆ.. " ಉತ್ತರಿಸಿದೆ.

"ಮಧ್ಯಾಹ್ನ ಹೊರಗಡೆ ಲಂಚ್ ಹೋಗೋಣ... ರಾಣಿಯವರ ಮೂಡ್ ಸರಿಹೋಗಬಹುದೇನೋ.... "

"ಇಲ್ಲಾ ತಲೆ ನೋಯ್ತಿದೆ ಯಾಕೋ.. ಸಂಜೆ ಹೋಗೋಣ.. " ಹೊರಟೆ.

ಎದೆಯಲ್ಲಿ ನನ್ನನ್ನೊಮ್ಮೆ ಹುದುಗಿಸಿಕೊಂಡು  "ಲವ್ ಯು.. " ಅಂತ ಪಿಸುಗುಟ್ಟಿ ಬೀಳ್ಕೊಟ್ಟ.

ನನ್ನಲ್ಲಿ ಸಾಗರದ ಅಲೆಗಳ ರೌದ್ರ ನೃತ್ಯ ಶುರುವಾಗಿತ್ತು.ಮನಸ್ಸು ಕದಡಿದ ಕಡಲಂತಾಗಿತ್ತು. ಮನೆಗೆ ಬಂದು ಹಾಗೆ ಸೋಫಾದ ಮೇಲೆ ಬಿದ್ದುಕೊಂಡೆ. ಬದುಕಿನಲ್ಲಿ ಕವಲುಗಳು ಮೂಡುತ್ತಿರುವ ಸೂಚನೆ ಸಿಕ್ಕಂತೆ ಆಗಿ ಮನಸ್ಸು ಮ್ಲಾನವಾಯಿತು. ಇವರಿಗೆ ಬರುವ ತರೇವಾರಿ ಮೆಸೇಜ್ ಗಳು ಕಣ್ಣ ಮುಂದೆ ಸುಳಿದಾಡುವಂತೆ ಭಾಸವಾಯಿತು. ಮೈತ್ರಿಯೇ ಆ ಮೆಸೇಜ್ ನ ಹಿಂದಿನ ಕೈ ಇದ್ದಿರಬಹುದಾ?? ! ಪ್ರಶ್ನೆಗಳು - ಗೊಂದಲಗಳು ನನ್ನೊಳಗೆ ಯುದ್ದ ಸೃಷ್ಟಿಸಿದ್ದವು.

ಮೈತ್ರಿ!
ಪ್ರೈಮರಿ ಯಿಂದ ಡಿಗ್ರಿಯ ಕಾಲೇಜ್ ನ ತನಕವೂ ನಾವಿಬ್ಬರು ಒಟ್ಟಿಗೆ ಓದಿದವರು. ನಮ್ಮಿಬ್ಬರದು ಅಕ್ಕ- ಪಕ್ಕದ ಮನೆಯೇ ಆಗಿದ್ದರಿಂದ ನಮ್ಮ ಸ್ನೇಹ ಗಾಢವಾಗಿಯೇ ಬೆಳೆದು ನಿಂತಿತ್ತು. ಆದರೆ ನಮ್ಮಿಬ್ಬರದೂ ವಿರುದ್ಧ ಸ್ವಭಾವಗಳು.  ನಾನು ದನಿ ಎತ್ತರಿಸಿದರೂ ಮುದುಡಿ ಕೂರುವ ಹುಡುಗಿ.. ಅವಳೋ ಬೋಲ್ಡ್ ಎನ್ನುವುದಕ್ಕೆ ಮತ್ತೊಂದು ಹೆಸರು. ಹಟಮಾರಿ.. ತನಗೆ ಬೇಕು ಅನಿಸಿದ್ದನ್ನು ದಕ್ಕಿಸಿಕೊಳ್ಳದೆ ಬಿಡುವ ಹುಡುಗಿ ಅಲ್ಲವೇ ಅಲ್ಲ ಅವಳು.. 

ಜೊತೆಗೆ ಫ್ಲರ್ಟಿಂಗ್ ಶುರುಹಚ್ಚಿಕೊಂಡಿದ್ದಳು... ಅವಳ ಅಗಲವಾಗದ ಅರಳು ಕಂಗಳಿಗೆ ಮೋಡಿ ಮಾಡುವ ಶಕ್ತಿ ಇದೆ .. ಅವಳ ಮಾತುಗಳಲ್ಲಿ ಸೆಳೆತ ಇದೆ.. ಒಮ್ಮೆ ನಾನೇ "ಫ್ಲರ್ಟಿಂಗ್ ತಪ್ಪಲ್ವೇನೆ.. ? ಬಿಡೆ ಇದನ್ನೆಲ್ಲಾ " ಅಂದಿದ್ದೆ. . ಆದರೆ ಅವಳು ಮಹತ್ವಾಕಾಂಕ್ಷಿ. "ಕಾಲೇಜು ಜೀವನದಲ್ಲಿ ಇದೆಲ್ಲಾ ಇಲ್ಲದಿದ್ದರೆ ಮಜಾ ಇಲ್ಲ ಕಣೆ.." ಅನ್ನುತ್ತಿದ್ದಳು.  

ಅವಳ ಹಿಂದೆ ಹುಡುಗರು ಸುತ್ತುವುದನ್ನು ಎಂಜಾಯ್ ಮಾಡುತ್ತಿದ್ದಳು. ನನಗೂ ಒಳಗೊಳಗೇ ಆಸೆ.. ತನ್ನ ಸುತ್ತಲೂ ಹುಡುಗರು ಮುತ್ತಿಕೊಳ್ಳಬೇಕು, ಮೆಚ್ಚಬೇಕು ಎಂದು. 

ಸಹಜವಾಗಿ ನಾನು "ಈ ಹುಡುಗ" ನನ್ನು ತುಸು ಜಾಸ್ತಿಯೇ ಅನ್ನುವ ಹಾಗೆ ಹಚ್ಚಿಕೊಂಡೆ, ಅವನ ತುಂಟ ಮಾತುಗಳಿಗೆ ನಾಚಿಕೊಂಡೆ. ನನ್ನ ನಾಚುವ ಸ್ವಭಾವವೇ ಅವ ಇಷ್ಟವೆಂದ. ನಾ ಮೆಚ್ಚಿಕೊಂಡೆ. 

ಮೈತ್ರಿಯೂ ಈ ಹುಡುಗನಿಗೆ ಹತ್ತಿರವಾಗಲು ಹವಣಿಸಿದಳು. ನನ್ನದೆಯೊಳಗೆ ಬೆಂಕಿ ಆಗ. ನಾ ಯಾವುದನ್ನೂ ಬಾಯಿ ಬಿಟ್ಟು ಹೇಳಲಾರೆ. ಮೈತ್ರಿಯ ಹಾಗೆ ಸಾಧಿಸಲಾರೆ. 

ಮೈತ್ರಿಗೆ ಉಳಿದೆಲ್ಲಾ ಹುಡುಗರಿಗಿಂತ ಕಣ್ಣಲ್ಲೇ ಮಾತನಾಡೋ ಅವ ಇಷ್ಟವಂತೆ. ಅವನಿಗೆ ಹತ್ತಿರವಾಗಿ ಬಿಟ್ಟಳು.. ನಾನು ಇನ್ನೂ ಹತ್ತಿರವಾಗಿದ್ದೆ.. 

ಉಸಿರು ತಾಕುವಷ್ಟು ಹತ್ತಿರ ಬಂದು " ನಿನ್ನ ಹಾಗೆ ನಾಚುವುದಕ್ಕೆ, ತುಟಿ ಕೊನೆಯಲ್ಲೇ ನಗು ದಾಟಿಸುವುದಕ್ಕೆ ಮತ್ಯಾವ ಹೆಣ್ಣಿಗೂ ಬರುವುದಿಲ್ಲಾ ಕಣೇ.. " ಅನ್ನುತ್ತಿದ್ದ. ನನ್ನ ಮುಖ ಕೆಂಪು ಕೆಂಪು. ಅಂದರೆ ನನ್ನ ಬಿಟ್ಟರೆ ಬೇರೆ ಯಾವ ಹೆಣ್ಣಲ್ಲೂ ಅನುರಕ್ತನಾಗುವ ಬಯಕೆ ಇಲ್ಲದೆ ಹುಡುಗ ಇವನು.. ಮೈತ್ರಿ ನನ್ನಷ್ಟು ಹತ್ತಿರವಿಲ್ಲ ಇವನಿಗೆ ಅನ್ನುವ ಭಾವವೇ ನನ್ನನು ಬೆಚ್ಚಗೆ ಇರಿಸುತ್ತಿತ್ತು.

ಇವಳ  ಬಾಯ್ ಫ್ರೆಂಡ್ ಗಳಲಿ ತುಸು ಭಿನ್ನವಾದ ಹುಡುಗನೊಬ್ಬ ಇದ್ದ.  ಇವಳನ್ನು ತುಂಬಾ ಅನ್ನುವಷ್ಟು ಪ್ರೀತಿಸುತ್ತಿದ್ದ. "ಅವನು ಹುಚ್ಚ ಕಣೆ.. " ಅಂತ ನನ್ನ ಹತ್ತಿರ ಹೇಳಿಕೊಂಡು ನಗುತ್ತಿದ್ದಳು. ಆದರೆ ಮತ್ತೆ ಅದೇನಾಯಿತೋ ಅದೇ ಹುಡುಗನನ್ನು ತಾನು ಪ್ರೀತಿಸುತ್ತಿದ್ದೇನೆ ಎನ್ನುತ್ತಿದ್ದಳು. ಮೌನವಾಗುತ್ತಿದ್ದಳು. ತುಸು ಗಂಭೀರವಾಗಿದ್ದಳು ಆ ದಿನಗಳಲ್ಲಿ.  ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆ. ನನಗೂ ಒಂದು ಮಾತು ತಿಳಿಸಿರಲಿಲ್ಲ ಅವಳು. ಊರಲೆಲ್ಲಾ ಓಡಿ ಹೋದಳೆಂಬ ಸುದ್ದಿ.. ಮತ್ತೆ ನಾನವಳನ್ನು ನೋಡಿದ್ದು ಇವತ್ತೇ.

ಇವತ್ತು ಅವಳಾಡಿದ ಮಾತುಗಳಲ್ಲಿ ಅದೇ ಕಾಲೇಜಿನ ದಿನಗಳಲ್ಲಿ ಇದ್ದ ತುಂಟತನ, ಚೇಷ್ಟೆಗಳಿದ್ದವು. ಹೌದು! ಅವಳಾದರೂ ಅಷ್ಟೇ. ಈಗ ಮೊದಲಿಗಿಂತಲೂ ಸುಂದರವಾಗಿದ್ದಳು. ವಯಸ್ಸಿಗಿಂತ ಚಿಕ್ಕದಾಗಿ ಕಾಣುವಂತೆ ಅವಳ ಹೇರ್ ಸ್ಟೈಲ್, ಡ್ರೆಸ್ ಸೆನ್ಸ್, ಮೇಕ್ ಅಪ್ ಗಳು...

ನಾನೇ ಮದುವೆಯಾಗಿ ಮಗುವಾದ ಮೇಲೆ ಎಲ್ಲಾ ಮರೆತೇ.. ಸೌಂದರ್ಯ ಪ್ರಜ್ಞೆ ನಶಿಸಿಯೇ ಹೋಗಿದೆ ನನ್ನಲ್ಲಿ.. ಗಂಡುಗಳನ್ನು ಆಕರ್ಷಿಸಬೇಕು. ಅವಳಿಗೆ ಈ ಕಲೆ ಚೆನ್ನಾಗಿ ಗೊತ್ತು. ನನ್ನ ಗಂಡ ಹ್ಯಾಂಡ್ಸ್೦.. ಸುರದ್ರೂಪಿ ಗಂಡುಗಳನ್ನು ಮಣಿಸದೇ ಬಿಡಲಾರಳು ಇವಳು.. 

ಆ ಹುಡುಗ ನೆನಪಾದ. ಅವನಾದರೂ ಇದ್ದಿದ್ದರೇ.. ಮನಸ್ಸು ಬಯಸಿತು.. ಬಯಸುವಿಕೆಯಲ್ಲಿ ಬಯಕೆ ಇರಬಾರದು ಬುದ್ದಿಯ ಎಚ್ಚರಿಕೆ. ಅವನು ಜೊತೆಯಲ್ಲಿ ಇದ್ದಾಗ ತೊಯ್ದಾಟಗಳಿಲ್ಲ ... ಎಲ್ಲವೂ ನಿಚ್ಚಳ....ಅವನ ಆ ಆರಾಧನಾ ಭಾವದಲ್ಲಿ ಜಗತ್ತೇ ಮರೆತು ಹೋಗಿಬಿಡುತ್ತದೆ. ಮರೆತು ಬಿಡಬೇಕೆಂದು ಇದ್ದ ಹುಡುಗ ಮತ್ತೆ ಎದೆಯೊಳಗೆ ಕಾಲಿಡುತ್ತಿದ್ದಾನೆ.. ನಾನು ತಲ್ಲಣಿಸುತ್ತಿದ್ದೇನೆ...

ಕಾಲಿಂಗ್ ಬೆಲ್ ಬಡಿದುಕೊಳ್ಳುತ್ತಿದೆ... ಕತ್ತಲಾಗಿದೆ..  ಗಡಿಯಾರ ಗಂಟೆ ಎಂಟು ಎಂದು ತೋರಿಸುತ್ತಿತ್ತು. 

ಅರೇ...! ನಿದ್ದೆ ಬಂದು ಬಿಟ್ಟಿತ್ತಾ ನನಗೆ...?!

ಬಾಗಿಲು ತೆಗೆದೆ...

ಪತಿರಾಯನೂ ಮೈತ್ರಿಯೂ ನಗುತ್ತಾ ಒಳಗೆ ಕಾಲಿಡುತ್ತಿದ್ದಾರೆ.. ಅದೂ ರಾತ್ರಿಯ ಹೊತ್ತಲ್ಲಿ! ಮೈತ್ರಿಯ ಕೈ ಗಂಡನ ತೋಳೊಳಗೆ ಬಂಧಿಯಾಗಿತ್ತು... 

ಕಾಲಡಿಯ ನೆಲ ಕುಸಿದಂತೆ ಭಾಸ... ಕುಸಿದು ಬಿದ್ದೆ.

- ಸುಷ್ಮಾ ಮೂಡುಬಿದಿರೆ 

ಶುಕ್ರವಾರ, ಏಪ್ರಿಲ್ 18, 2014

ವಿಶ್ವ ಮಹಿಳಾ ದಿನಾಚರಣೆ 08-03-2014


ನಮಸ್ತೆ 
ವಿ ಆರ್ ಕಾರ್ಪೆಂಟರ್ ಅವರು.. ಮಹಿಳಾ ದಿನಾಚರಣೆಯ ಸಲುವಾಗಿ ಬರೆಸಿದ ಲೇಖನ ಇದು ಲೇಖನ ಇದು.. 
ನವಿಲು ಪತ್ರಿಕೆಯಲ್ಲಿ ಪ್ರಕಟಿತ ಕೂಡ... 
ಅವಸರಕ್ಕೆ ಸಿಕ್ಕ ಲೇಖನ.. 
ಹೇಗಿದೆ ಅಂತಾ ಹೇಳಿ.. 

ಧನ್ಯವಾದಗಳು 

- ಸುಷ್ಮಾ ಮೂಡುಬಿದರೆ 
______________________________________________


ಸ್ತ್ರೀ ಸಬಲೀಕರಣದ ಉದ್ದಿಶ್ಯಗಳು ಮುಖ್ಯವಾಹಿನಿಗೆ ಬಂದು ಶತಮಾನಗಳೇ ಕಳೆದಿವೆ. ಹನ್ನೆರಡನೇ ಶತಮಾನದ 'ಅಕ್ಕ' ಳಿಂದ  ಹಿಡಿದು ಇಪ್ಪತ್ತೊಂದನೇ ಶತಮಾನದ ಇತ್ತೀಚಿನವರೆಗೂ ಸ್ತ್ರೀ ಸಬಲೀಕರಣ ಒಂದು ಚರ್ಚಿತ ವಿಷಯವೇ. ಶತಮಾನಗಳು ಉರುಳಿದರೂ ವ್ಯವಸ್ಥೆಯಿಂದ ನ್ಯಾಯ ಪಡೆಯಲು ಸಾಧ್ಯವಾಗಿಲ್ಲ ಎಂದರೆ ಒಂದು ಗಂಭೀರ ವಿಚಾರ ಮಂಡನೆಯ ಅಗತ್ಯವಿದೆ. ಇಂದು ಮಾರ್ಚ್ ಎಂಟು "ವಿಶ್ವ ಮಹಿಳಾ ದಿನ". ಆಶ್ಚರ್ಯವೆಂದರೆ ಈ ದಿನಕ್ಕೂ ಶತಮಾನಗಳ ಸಂಭ್ರಮ ಈಗಾಗಲೇ ನಡೆದು ಬಿಟ್ಟಿದೆ. ಸ್ತ್ರೀಗೆ ಸಹಜವಾಗಿ ಸಿಕ್ಕಬೇಕಾದ ಹಕ್ಕು ,ಬಾಧ್ಯತೆ, ನೆಮ್ಮದಿಯಾಗಿ ಉಸಿರಾಡುವಂತಹ ಬದುಕಿನ ಹಕ್ಕು ಮಾತ್ರ ಇಂದೂ ಮರೀಚಿಕೆಯೇ. ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳ ಕಣ್ಣೀರಿನ ಅಂತ್ಯ ಸಾಧ್ಯವೇ ಇಲ್ಲವೇ..?!

ಕೆಲವೊಂದು ಹಾಸ್ಯಗಳಲ್ಲಿ, ವ್ಯಂಗ್ಯ ಚಿತ್ರಗಳಲ್ಲಿ ಹೆಂಡತಿಯಿಂದ ಗಂಡನಿಗೆ ದೌರ್ಜನ್ಯ, ಪ್ರೇಯಸಿ ಪ್ರಿಯಕರನ ದುಡ್ಡು ಹೊಡೆಯುವವಳು ಇತ್ಯಾದಿಯಾಗಿ ಬಿಂಬಿಸಲಾಗುತ್ತದರೂ.. ಇದು ಎಷ್ಟರ ಮಟ್ಟಿಗಿನ ಸತ್ಯ..? ಪೂರ್ತಿಯಾಗಿ ಇಲ್ಲವೇ ಇಲ್ಲ ಎಂದು ಅಲ್ಲಗಳೆಯುವ ವಿಷಯ ಇದಲ್ಲವಾದರೂ ಗಂಡಿನ ಸುಪರ್ದಿಯಲ್ಲಿ ಹೆಣ್ಣು ಅನುಭವಿಸುವ ಯಾತನೆಗೂ ಇದಕ್ಕೂ ಸರಿಸಮವೆಲ್ಲಿ..? ದಿಲ್ಲಿಯ ನಿರ್ಭಯ ಪ್ರಕರಣ ಇನ್ನೂ ಹಸಿಹಸಿಯಾಗಿದೆ. ಕರಾವಳಿಯ ಸೌಜನ್ಯ ಪ್ರಕರಣಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ,  ಪಕ್ಕದ ಮನೆಯ ಕೂಸು ಅಪ್ಪನಿಂದಲೇ ಅತ್ಯಾಚಾರವೆಸಗಲ್ಪಟ್ಟ ಘಟನೆ ಕಣ್ಣ ಮುಂದಿದೆ. ಅತ್ಯಾಚಾರದ ಪ್ರಕರಣಗಳು ಒಂದೇ ಎರಡೇ ..? ಎಣಿಕೆಗೆ ಸಿಗದಷ್ಟು ಮುಂದುವರಿದಿದೆ ಇದು. ಲೋಕನಿಂದನೆಗೆ ಹೆದರಿ ಅದಿನ್ನೆಷ್ಟು ಪ್ರಕರಣಗಳು ನಮ್ಮ ಮಣ್ಣಿನೊಳಗೆ ಅಡಗಿವೆಯೋ...? ಬಡವನ ಕೋಪ ದವಡೆಗೆ ಮೂಲ ಎನ್ನುತ್ತಾರೆ. ಸ್ತ್ರೀ ಸಮಾಜದ ಪ್ರಸ್ತುತ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ವಿಜ್ಞಾನ - ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದೂ, ಮಹಿಳೆ ಕೂಡ ತನ್ನ ಛಾಪು ಎಲ್ಲಾ ಕ್ಷೇತ್ರಗಳಲ್ಲೂ ಮೂಡಿಸಿರುವ ಸಂದರ್ಭದಲ್ಲೂ ಮನುಕುಲ ತಲೆತಗ್ಗಿಸುವಂತಹ ಇಂತಹ ಘಟನೆಗಳು ನಡೆಯುತ್ತವೆ ಎಂದಾದರೆ ಭಾರತೀಯರ ನೈತಿಕ ಮೌಲ್ಯಗಳು ಎಷ್ಟು ಕುಸಿದಿವೆ ಚಿಂತನೆ ಅಗತ್ಯ. 

ಸ್ತ್ರೀ ಕುಲಕ್ಕೆ 'ಅತ್ಯಾಚಾರ' ವೊಂದೇ ಪ್ರಬಲ ಸಮಸ್ಯೆಯಾಗಿಲ್ಲ. ಇದರ ಜೊತೆಜೊತೆಗೆ ಅವಳನ್ನು ಮಾನಸಿಕವಾಗಿ ಕೂಡ ಕುಸಿಯುವಂತೆ ಮಾಡುವ ಕಾರ್ಯಗಳು ಸದ್ದಿಲ್ಲದೇ ನಡೆಯುತ್ತಲೇ ಇದೆ. ಹಾಗಾಗಿ ಪ್ರತಿದಿನದ ಬದುಕು ಅವಳಿಗೆ ಸವಾಲೇ..! ದೈಹಿಕವಾಗಿ ಮಹಿಳೆ ಪುರುಷನಿಗಿಂತ ದುರ್ಬಲ ಎನ್ನಲಾಗುತ್ತದೆ. ಆದರೆ ದಿನನಿತ್ಯ ನಾವು ನೋಡಬಹುದಾದಂತಹ ಕಟ್ಟಡ ಕಾಮಗಾರಿಯನ್ನು ಒಮ್ಮೆ ಗಮನಿಸಿ ಮಹಿಳೆ ಪುರುಷನಿಗೆ ಸಮನಾಗಿ ದುಡಿಯುತ್ತಿರುತ್ತಾಳೆ. ಕೃಷಿಭೂಮಿಯಲ್ಲಿ ಕಾರ್ಯನಿರತವಾಗಿರುವ ಹೆಣ್ಣನ್ನೇ ನೋಡಿ, ದೈಹಿಕ ಶಕ್ತಿ ಬೇಡುವ ಕೆಲಸಗಳನ್ನು ಸಶಕ್ತವಾಗಿ ನಿರ್ವಹಿಸುತ್ತಿರುತ್ತಾಳೆ. ಹಾಗಾಗಿ ದೈಹಿಕವಾಗಿ ಆಕೆ ಬಲಹೀನಳು ಎಂಬುವುದು ಹುರುಳಿಲ್ಲದ ಮಾತು. ಆದರೆ ಇಲ್ಲಾದರೂ ಈಕೆಗೆ ನ್ಯಾಯವಿದೆಯೇ ಎಂದರೆ ಇಲ್ಲ! ಮೈ ತುಂಬಾ ಕೆಲಸ ಮಾಡುವ ಆಕೆ ಕೈ ತುಂಬಾ ಸಂಬಳ ಪಡೆಯಲು ಅನರ್ಹಳು. ಪುರುಷ ಈ ಕೆಲಸಗಳಿಗೆ ಪಡೆಯುವಷ್ಟು ಪಗಾರ ಆಕೆ ಸ್ತ್ರೀ ಎನ್ನುವ ಕಾರಣಕ್ಕೆ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಕಛೇರಿಯಲ್ಲಿ ಕೂತು ಕೆಲಸ ಮಾಡುವ ವಿದ್ಯಾವಂತೆ ಎನಿಸಿಕೊಂಡ ಹೆಣ್ಣಿಗೂ ಅನ್ವಯಿಸುತ್ತದೆ. 

ಮೊದಲು ಬರಿಯ ಮನೆವಾರ್ತೆಗಳಿಗಷ್ಟೇ ಆಕೆ ಸೀಮಿತವಾಗಿದ್ದಳೆಂದರೆ ಸರಿ. ಆದರೆ ಈಗ ಹಾಗಿಲ್ಲ. ಆಕೆ ವಿದ್ಯಾವಂತೆ, ಬುದ್ದಿವಂತೆ ಮನೆಯಿಂದ ಆಚೆಗೂ ತನ್ನ ವ್ಯಕ್ತಿತ್ವ ಬಿಂಬಿಸಬಲ್ಲಳು. ಇದೆ ಹುರುಪಿನಲ್ಲಿ ಮನೆಯಿಂದ ಹೊರಗೂ ದುಡಿಯಲು ಆರಂಭಿಸುತ್ತಾಳೆ ಹೆಣ್ಣು. ಸಂಸಾರ ನಿರ್ವಹಣೆಯಲ್ಲಿ ಆಕೆಯದು ಪ್ರಮುಖ ಪಾತ್ರವಾಗಿರುತ್ತದೆ. ಆದರೆ ಮತ್ತೆ ಇಲ್ಲೂ ಆಕೆ ಅಸಮಾನತೆಯ ಕೂಪದೊಳಗೆ ಬೇಯಲು ಆರಂಭಿಸುತ್ತಾಳೆ. ಈಗ ಆಕೆಗೆ ಮನೆಯ ಹೊರಗೆ ಒಳಗೆ ಎರಡೂ ಕಡೆಯಲ್ಲೂ ಕೆಲಸ. ಗಂಡಸು ಮಾತ್ರ ತಾನೇ ಉತ್ಪಾದಕ ಎಂಬಂತೆ ಬೀಗುತಿರುತ್ತಾನೆ. ಒಂದು ಕಡೆಯಿಂದ ಬಿಡಿಸಿಕೊಂಡು ನೆಮ್ಮದಿಯ ಉಸಿರುಬಿಡುತ್ತೇನೆ ಎಂದುಕೊಂಡರೆ ಮತ್ತೆಲ್ಲಿಂದಲೋ ಗಕ್ಕನೆ ಹಿಡಿದು ತೆಕ್ಕೆಯೊಳಗೇ ಹಿಡಿದು ನಿಲ್ಲಿಸುವ ಪ್ರಯತ್ನ. ಪುರುಷ ಪ್ರಧಾನ ವ್ಯವಸ್ಥೆಯ ಈ ಬಗೆಯ ನೀತಿಯ ಕುರಿತು ಅವಳೊಳಗೆ ಒಂದು ನಿಟ್ಟುಸಿರು ಹುಟ್ಟದಿದ್ದರೆ ಕೇಳಿ. 

ಸಮಾಜ ಆಧುನಿಕರಣಗೊಂದಂತೆ ನಗರ ಪ್ರದೇಶಗಳಿಗೆ ವಲಸೆ ಬರುವ ಯುವಸಮುದಾಯದ ದೊಡ್ಡ ಹಿಂಡಿದೆ. ಹೀಗೆ ವಲಸೆ ಬರುತ್ತಿರುವವರಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಕೂಡ ದೊಡ್ಡದಿದೆ. ನಂಬಿ, ಹೀಗೆ ವಲಸೆ ಬಂದ ಹೆಣ್ಣುಮಕ್ಕಳಲ್ಲಿ ಬಹುತೇಕರ ಹಿಂದೆಯೂ ಒಂದೊಂದು ಕರುಣಾಜನಕ ಕಥೆಯಿದೆ, ವ್ಯಥೆಯಿದೆ. ದುರುಳ ಅಪ್ಪನದೋ, ಪ್ರೇಮಿಯದೋ, ಸಂಬಂಧಿಯದೋ, ಗೆಳೆಯನದೋ ಅಥವಾ ಬದುಕು ಕಟ್ಟಿಕೊಡುತ್ತೆನೆಂದು ನಂಬಿಸಿ ವಂಚಿಸಿದ ಗಂಡನದೋ ಕರಿ ನೆರಳಿದೆ. ಅತಂತ್ರ ಬದುಕನ್ನು ಕಟ್ಟಿಕೊಳ್ಳಲು ಅವಳು ಪಡುವ  ಪಡಿಪಾಟಲು ಇದು. ಆದರೆ ಇಲ್ಲಿ ಮತ್ತೆ ಒಂಟಿ ಹೆಣ್ಣೆಂದರೆ ಕಣ್ಣು ಹಾಕಲು ಬಾಸೋ , ಮತ್ತಿನ್ಯಾರೋ ಹಸಿದ ತೋಳದಂತೆ ಕಾದು ಕುಳಿತಿರುತ್ತಾಳೆ. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ತನಗೆ ತಾನೇ ತಾಳಿ ಬಿಗಿದುಕೊಂಡು ಜೀವನ ಸಾಗಿಸುವ ಜೀವಂತ ಉದಾಹರಣೆ ಇದೆ. ಮಹಾನಗರಿಯ ಜೀವನದಲ್ಲಿ ಕಂಡುಕೊಂಡಿರುವ ಸತ್ಯ ಇದು.

ದೇಶವೀಡಿ ಪುರುಷ ಪ್ರಧಾನ ಸಮಾಜವಾಗಿರುವ ಹೊತ್ತಿನಲ್ಲಿ ಕರಾವಳಿ ಜಿಲ್ಲೆಯೊಂದಿದೆ ಮಾತೃ ಪ್ರಧಾನ ಸಮಾಜವನ್ನು ಹೊತ್ತು. ವಿಪರ್ಯಾಸವೆಂದರೆ ಇಂದು ಅಲ್ಲೇ ಹೆಚ್ಚಾಗಿ ಅತ್ಯಾಚಾರಗಳು,ಕೊಲೆ, ಪ್ರೇಮದ ನೆಪದಲ್ಲಿ ಹುಡುಗಿಯನ್ನು ದೈಹಿಕವಾಗಿ ಬಳಸಿಕೊಂಡು ಸಾಮಾಜಿಕ ತಾಣಗಳಲ್ಲಿ ವೀಡಿಯೊ, ಫೋಟೋಗಳನ್ನು ಹಾಕಿ ಹೆಣ್ಣಿನ ಚಾರಿತ್ರ್ಯ ವಧೆ ಮಾಡುವುದು ಮುಂತಾದ ಅವಮಾನಕ ಘಟನೆಗಳು ನಡೆಯುತ್ತಿರುವುದು. ಮಾತೃ ಪ್ರಧಾನವೆಂಬುದು ಇಂದು ಅಲ್ಲಿ ವಂಶಾವಳಿಯ ಬೆಳವಣಿಗೆಗೆ ಮಾತ್ರ ಸೀಮಿತವಾಗಿರುವುದು ಖೇದಕರ. ಇವಿಷ್ಟಷ್ಟೇ ಅಲ್ಲದೇ , ಭ್ರೂಣ ಹತ್ಯೆ, ಆಸಿಡ್ ದಾಳಿ, ವರದಕ್ಷಿಣೆ ಹಾವಳಿ... ಮುಂತಾದ ಇನ್ನೂ ಅನೇಕ ಪ್ರಕರಣಗಳಿವೆ. 

ಸ್ತ್ರೀ ವಾದ, ಸ್ತ್ರೀ ಸಬಲೀಕರಣವೆಂದರೆ ಪುರುಷ ದ್ವೇಷ ಎಂದರ್ಥವಲ್ಲ. ಇದುವರೆಗೂ ಹೇಳಿದ್ದು ಸಮಾಜದ ಒಂದು ಮುಖದ ಪರಿಚಯವಷ್ಟೇ. ಯಾಕೆಂದರೆ ಪ್ರತಿ ಹೆಣ್ಣೂ ತಂದೆ, ಅಣ್ಣಾ, ತಮ್ಮ, ಮೇಷ್ಟ್ರು.. ಮುಂತಾದ ಸಂಬಂಧಗಳ ಜೊತೆ ಬೆಳೆದು ಬಂದಿರುತ್ತಾಳೆ. ಅವಳ ಏಳ್ಗೆಯಲ್ಲಿ ಅವರ ಪಾಲೂ ಇರುತ್ತದೆ. ಹಾಗೆಯೇ ಪುರುಷ ಪ್ರಧಾನ ಸಮಾಜದ ಇನ್ನೊಂದು ಮುಖಗಳ ಕುರಿತು ಜಾಗೃತಿ ಅತ್ಯಗತ್ಯ. ಜೊತೆಗೆ ಮಹಿಳೆಯರಿಂದಲೇ ಮಹಿಳೆಗೆ ಆಗುತ್ತಿರುವ ನೋವುಗಳ ಕುರಿತೂ ವಿಚಾರ ಮಂಡನೆಯಾಗಬೇಕು. ಹೆಣ್ಣು ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ . ಸೊಸೆಯಾಗಿ, ಅಜ್ಜಿಯಾಗಿ... ಹೀಗೆ ನಾನಾ ಸ್ಥಾನಗಳನ್ನು ನಿರ್ವಹಿಸುತ್ತಾಳೆ. ಹೀಗೆ ನಿರ್ವಹಿಸುವಾಗ ಕೆಲವೊಮ್ಮೆ ಹೆಣ್ಣಿಗೆ ಹೆಣ್ಣೇ ಶತ್ರು ವಾಗಿ ಕೂಡ ಪರಿಣಮಿಸುತ್ತಾಳೆ. ಹೆಣ್ಣಿಗೆ ಹೆಣ್ಣೇ ಬೆಲೆ ನೀಡದಿದ್ದರೆ ಗಂಡಿನಿಂದ ತಾನೇ ಏನು ನಿರೀಕ್ಷಿಸಲು ಸಾಧ್ಯ..? ಸೊಸೆಯಾಗಿ ತಾನು ಅನುಭವಿಸಿದ ಯಾತನೆ ತನ್ನ ಸೊಸೆಯೂ ಅನುಭವಿಸಲಿ ಎಂದು ಅತ್ತೆ ಆಸೆ ಪಟ್ಟರೆ ಅದಕ್ಕಿಂತ ಘೋರ ಮತ್ತೊಂದಿಲ್ಲ. ಅತ್ತೆ ಅಮ್ಮನಾದರೆ ಸೊಸೆ ಮಗಳೇ. ಮನಸ್ಥಿತಿಗಳ ಬದಲಾವಣೆ ಆಗಬೇಕು.

ಶತಶತಮಾನಗಳಿಂದ ಸಮಾನತೆಗಾಗಿ, ಬದುಕಿನ ಹಕ್ಕಿಗಾಗಿ ಕಥೆ, ಕವನಗಳನ್ನು ಬರೆದಿದ್ದು, ಸಿಡಿದೆದ್ದಿದ್ದು ಸಾಕು..! ನಾವು ನಾವೇ ಬದಲಾಗೋಣ. ನಮ್ಮ ಮನೆಯಲ್ಲಿರೋ ಅಸಮಾನತೆಯ ಭೂತವನ್ನು ಗುಡಿಸೋಣ. "prevention is better than cure" ಎಂಬ ಮಾತಿದೆ. ದೌರ್ಜನ್ಯಕ್ಕೆ ಒಳಗಾಗುವ ಮೊದಲು ಎಚ್ಚೆತ್ತುಕೊಳ್ಳೋಣ. ನಮ್ಮ ಕೈಮೀರಿ ಹೋಗುವ ಸಂದರ್ಭಕ್ಕೆ ನಾವೇ ಮೊದಲು ಅಣಿಯಾಗೋಣ. ನಿಮಗೆ ಗೊತ್ತಿರಬಹುದು ಇಂದು ಮಾರುಕಟ್ಟೆಯಲ್ಲಿ "ಪೆಪ್ಪರ್ ಸ್ಪ್ರೇ" ನಂತಹ ಅವಕಾಶಗಳಿವೆ. ಪ್ರತಿ ಹೆಣ್ಣುಮಗಳು ತನ್ನ ಕೈಚೀಲದಲ್ಲಿ ಕೈಗೆಟುವಷ್ಟು ಹತ್ತಿರದಲ್ಲಿ ಸ್ಪ್ರೇ ಇಟ್ಟುಕೊಳ್ಳಬೇಕು. ಸಂದರ್ಭ ಬಂದಾಗ ಬಳಕೆ ಮಾಡಬೇಕು. ಖಂಡಿತಾ ಇದು ಪರಿಣಾಮಕಾರಿ ಮಾದರಿ. ಯಾಕೆಂದರೆ ಒಮ್ಮೆ ಇದರ ರುಚಿ ಒಬ್ಬನಿಗೆ ಹತ್ತಿದರೆ ಬಹುಶಃ ಮತ್ತೊಮ್ಮೆ ಆತ ಇಂತಹ ನೀಚ ಕೆಲಸಕ್ಕೆ ಇಳಿಯುವುದಿಲ್ಲ. ನೋವು ತಿಂದುಕೊಂಡು ಸರಕಾರ ಪರಿಹಾರ ನೀಡುತ್ತದೆ ಎಂದು ಕಾದು ಕೂರುವುದಕ್ಕಿಂತ ಇದು ಬಹಳ ಪರಿಣಾಮಕಾರಿ ವಿಧಾನ.
ತನ್ನನ್ನು ತಾನು ರಕ್ಷಿಸಲು ಇಷ್ಟು ಮಾಡಿದರೆ ಸಾಕು.. ಎಲ್ಲಾ ದೌರ್ಜನ್ಯಗಳಿಂದ (ಅದು ಪ್ರತ್ಯಕ್ಷ / ಪರೋಕ್ಷ ಯಾವುದೇ ಆಗಿರಬಹುದು) ತನ್ನ ಆತ್ಮರಕ್ಷಣೆಯ ಕೆಲಸವನ್ನು ತಾನೇ ಖುದ್ದಾಗಿ ನಿಭಾಯಿಸುವಷ್ಟರ ಮಟ್ಟಿಗೆ ಸ್ತ್ರೀ ಬೆಳೆದುಬಿಟ್ಟರೆ ಸಾಕು...ಸ್ತ್ರೀ ಸಬಲೀಕರಣವೆಂದರೆ ಇನ್ನೇನೂ ಅಲ್ಲಾ. 

ಮಾತೃ ಹೃದಯದ ಪ್ರತಿ ಹೆಣ್ಣಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು. 

-ಸುಷ್ಮಾ ಮೂಡುಬಿದಿರೆ.