ಶನಿವಾರ, ಏಪ್ರಿಲ್ 26, 2014

ಕದಡಿದ ಕಡಲು ...

ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://goo.gl/jhjxq1

ಭಾಗ (೨) : ದಿನಕರ್ ಮೋಗೆರರವರ "ದಣಪೆ http://goo.gl/cYJQfT

ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://goo.gl/nfSudn

ಭಾಗ (೪) : ರೂಪಾ ಸತೀಶ್ ವರ "ಮಿತಿ "  http://goo.gl/aoTMGC

ಭಾಗ (೫) : ಶಮ್ಮಿ ಸಂಜೀವ್ ಅವರ "ವ್ಯಾಪ್ತಿ-ಪ್ರಾಪ್ತಿ" http://goo.gl/cThzK1

ಬ್ಲಾಗಿಗರ ಖೋ ಖೋ ಆಟದಲ್ಲಿ ನಾನೂ ಆಡುವ ಪ್ರಯತ್ನ ಮಾಡಿದ್ದೇನೆ..
ಕಥೆ ಮುಂದುವರಿಸಿದ್ದೇನೆ.. ಕಥೆಗೆ ನ್ಯಾಯ ಸಲ್ಲಿಸುವ ಪ್ರಯತ್ನವಿದು. ಈ ಪ್ರಯತ್ನ ಎಷ್ಟು ಸಫಲವಾಗಿದೆ ಎಂದು ಹೇಳಬೇಕಾದವರು ನೀವು... ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.. 

ನಿಮ್ಮ ಮುಂದೆ....  

ಭಾಗ (೬) :  ಕದಡಿದ ಕಡಲು 

"ನೀನು ಇಲ್ಲಿ.... ?!" ನನ್ನ ಬಾಯಿಂದ ಉದ್ಗಾರವೊಂದು ತಾನೇ ತಾನಾಗಿ ಹೊರಟಿತು ಆಶ್ಚರ್ಯದ ಜೊತೆಗೆ..ಪತಿರಾಯನ ಸಮೀಪದಲ್ಲಿ ಬಗ್ಗಿ ನಿಂತು ಏನೋ ಹೇಳುತ್ತಿದ್ದ ಆ ಹುಡುಗಿಯ ಗುರುತು ಹತ್ತಿತ್ತು ನನಗೆ. 

ಆ ಹುಡುಗಿಯನ್ನು ಕುರಿತು "ನಮ್ಮ ಮನೆಯವರು " ಎನ್ನುತ್ತಾ ಎದ್ದು ಬಂದ ಇವರು  "ಈ ಪ್ರಶ್ನೆ ನಾನು ನಿನ್ನನ್ನು ಕೇಳಬೇಕು ಡಾರ್ಲಿಂಗ್.. ದೇವಿಯವರನ್ನ ಆಫೀಸ್ ನಲ್ಲಿ ನೋಡಿ ಈ ಉದ್ಗಾರ ನನ್ನ ಬಾಯಿಂದ ತಾನೇ ಬರಬೇಕು... ?" ಹತ್ತಿರ ಬಂದು ಕಣ್ಣು ಮಿಟುಕಿಸಿ ನಕ್ಕರು. 

ಗಲಿಬಿಲಿ ನನಗೆ. ಅಷ್ಟರಲ್ಲಿ ಆ ಹುಡುಗಿ ಹತ್ತಿರ ಬಂದಿದ್ದ ಪತಿರಾಯನನ್ನು ಸರಿಸಿ "ಹೇಯ್.. ಮೊದಲಿನ ಹಾಗೆ ಇದ್ದೀಯಲ್ಲೇ.. ಒಂಚೂರೂ ಬದಲಾಗಿಲ್ಲ - ಒಂದು ರೌಂಡ್ ಉಬ್ಬಿದ್ದಿಯಾ ಅನ್ನೋದನ್ನು ಬಿಟ್ಟರೆ... " ಪಕಪಕನೇ ನಕ್ಕಳು.

"ಮೈತ್ರಿ.. ನಿಮ್ಮಿಬ್ಬರಿಗೂ ಮೊದಲೇ ಪರಿಚಯವೇ...?!" ಇವರ ಪ್ರಶ್ನೆ. 

"ಹೂ೦.. ಸರ್.. ನಾವಿಬ್ಬರು ಒಟ್ಟಿಗೆ ಓದಿದ್ದು ಬೆಳೆದಿದ್ದು...ಹೇಳಮ್ಮಾ ತಾಯಿ ನಿನ್ನ ಪತಿದೇವರಿಗೆ.. " ಇವಳ ಉತ್ತರ. 

"ಏನು ಕೋ - ಇನ್ಸಿಡೆಂಟ್ಸ್ ನೋಡು ಚಿನ್ನಾ.. ನಿನ್ನ ಕಳೆದು ಹೋದ ಸ್ನೇಹಿತರೆಲ್ಲಾ ನನಗೆ ಸಿಕ್ಕಿ, ನಾನು ಅವರನ್ನು ಮತ್ತೆ ನಿನಗೆ ಒಪ್ಪಿಸುವ ಕಾರ್ಯಕ್ರಮ ಇಟ್ಟುಕೊಂಡಿರುವ ಹಾಗಾಗಿದೆ..ನಿನ್ನ ಸ್ನೇಹಿತರು ನನ್ನ ಆಪ್ತರು... ಮೈತ್ರಿ ಇಲ್ಲೇ ಕೆಲಸ ಮಾಡ್ತಾ ಇದ್ದಾಳೆ ಎರಡು ವರ್ಷದಿಂದ.. ತಾವು ನಮ್ಮ ಆಫೀಸ್ ಕಡೆ ಬರಬೇಕಲ್ಲಾ ಮೇಡಂ... ನಿಮಗೆ ಹೇಗೆ ಗೊತ್ತಿರುತ್ತೆ ಇದು... ? " 

"ಸರಿ ಕಣೆ... ಈಗ ಒಂದಿಷ್ಟು ಕೆಲಸ ಇದೆ.. ನೀನು ನಿಮ್ಮವರೊಂದಿಗೆ ಇರು.. ಸಂಜೆ ಸಿಗುವುದನ್ನು ಮರಿಬೇಡ.. ವರ್ಷಗಳಿಂದ ಕೂಡಿಟ್ಟಿದ್ದನ್ನು ಮಾತುಗಳನ್ನೆಲ್ಲಾ ನಿನಗೆ ಉಣ ಬಡಿಸುವುದಿದೆ.. " ಎಂದು  ಮೈತ್ರಿ ಅದೇನೋ ಸಹಿಗಳನ್ನು ಹಾಕಿಸಿಕೊಂಡು ಕ್ಯಾಬಿನ್ ನಿಂದ ಹೊರ ನಡೆದಳು.

ಇವರು ನನ್ನ ಕೈ ಮೇಲೆ ಕೈಯಿಟ್ಟು ಮೈತ್ರಿಯ ಬಗ್ಗೆ ಹೇಳತೊಡಗಿದರು.ಇಡೀಯ ಆಫೀಸ್ ನ ಒಬ್ಬಳೇ ನಿರ್ವಹಿಸುತ್ತಾಳೆಂದೂ ಆಕೆ ನಿನ್ನ ಬಾಲ್ಯ ಸ್ನೇಹಿತೆಯೇ ಆಗಿರುವುದು ತಮ್ಮ ಪುಣ್ಯವೆಂದೂ ಹೇಳುತ್ತಿದ್ದರು. ನನ್ನ ಅನುಮಾನ ಬೆಂಕಿಗೆ ತುಪ್ಪ ಸುರಿಯುವ ಮಾತುಗಳು!

ಗೊಂದಲಗಳ ಅಲೆ ಬುಗಿಲೆದ್ದಿತ್ತು ಇವರ ಮತ್ತು ಅವಳ ಮಧ್ಯೆ ಬಾಸ್ ಮತ್ತು ಎಂಪ್ಲೋಯೀಗೆ ಮೀರಿದ ಸಲುಗೆಯಿತ್ತು. ಅದನ್ನು ನಾನು ಗುರುತಿಸಿದ್ದೆ.. ಸಲುಗೆ ಸಂಬಂಧವಾ..?! ಆಗಿರಲಾರದು. ನನ್ನನ್ನು ನಾನು  ಸಮಾಧಾನಿಸಿಕೊಳ್ಳುತ್ತಿದ್ದೆ. ಆಫೀಸಿಗೆಂದು ಬಂದವಳಿಗೆ ಯಾಕೋ ಅಲ್ಲಿರಲು ಆಗಲೇ ಇಲ್ಲಾ..  ದಡಕ್ಕನೇ ಎದ್ದು ಬಿಟ್ಟೆ.. 

ಇವರು " ಯಾಕೋ ಪುಟ್ಟಾ ಹೊರಟೆಯಾ..? ಆಗ್ಲಿಂದ ಒಂದೇ ಒಂದು ಮಾತನ್ನು ಆಡಿಲ್ಲ ನೀನು ಏನಾಯ್ತೋ.. ?" ಇವರ ಕಣ್ಣಲ್ಲಿ ಆತಂಕ ನಿಚ್ಚಳವಾಗಿ ಗೋಚರಿಸುತ್ತಿತ್ತು ನನಗೆ.

"ಏನಿಲ್ಲಾ ಅಮ್ಮ ಮನೆಗೆ ಹೋಗಿದ್ದೆ.. ಅದಕ್ಕೆ ಈ ಕಡೆಗೂ ಬಂದು ಹೋಗೋಣಾಂತ ಬಂದೆ.. " ಉತ್ತರಿಸಿದೆ.

"ಮಧ್ಯಾಹ್ನ ಹೊರಗಡೆ ಲಂಚ್ ಹೋಗೋಣ... ರಾಣಿಯವರ ಮೂಡ್ ಸರಿಹೋಗಬಹುದೇನೋ.... "

"ಇಲ್ಲಾ ತಲೆ ನೋಯ್ತಿದೆ ಯಾಕೋ.. ಸಂಜೆ ಹೋಗೋಣ.. " ಹೊರಟೆ.

ಎದೆಯಲ್ಲಿ ನನ್ನನ್ನೊಮ್ಮೆ ಹುದುಗಿಸಿಕೊಂಡು  "ಲವ್ ಯು.. " ಅಂತ ಪಿಸುಗುಟ್ಟಿ ಬೀಳ್ಕೊಟ್ಟ.

ನನ್ನಲ್ಲಿ ಸಾಗರದ ಅಲೆಗಳ ರೌದ್ರ ನೃತ್ಯ ಶುರುವಾಗಿತ್ತು.ಮನಸ್ಸು ಕದಡಿದ ಕಡಲಂತಾಗಿತ್ತು. ಮನೆಗೆ ಬಂದು ಹಾಗೆ ಸೋಫಾದ ಮೇಲೆ ಬಿದ್ದುಕೊಂಡೆ. ಬದುಕಿನಲ್ಲಿ ಕವಲುಗಳು ಮೂಡುತ್ತಿರುವ ಸೂಚನೆ ಸಿಕ್ಕಂತೆ ಆಗಿ ಮನಸ್ಸು ಮ್ಲಾನವಾಯಿತು. ಇವರಿಗೆ ಬರುವ ತರೇವಾರಿ ಮೆಸೇಜ್ ಗಳು ಕಣ್ಣ ಮುಂದೆ ಸುಳಿದಾಡುವಂತೆ ಭಾಸವಾಯಿತು. ಮೈತ್ರಿಯೇ ಆ ಮೆಸೇಜ್ ನ ಹಿಂದಿನ ಕೈ ಇದ್ದಿರಬಹುದಾ?? ! ಪ್ರಶ್ನೆಗಳು - ಗೊಂದಲಗಳು ನನ್ನೊಳಗೆ ಯುದ್ದ ಸೃಷ್ಟಿಸಿದ್ದವು.

ಮೈತ್ರಿ!
ಪ್ರೈಮರಿ ಯಿಂದ ಡಿಗ್ರಿಯ ಕಾಲೇಜ್ ನ ತನಕವೂ ನಾವಿಬ್ಬರು ಒಟ್ಟಿಗೆ ಓದಿದವರು. ನಮ್ಮಿಬ್ಬರದು ಅಕ್ಕ- ಪಕ್ಕದ ಮನೆಯೇ ಆಗಿದ್ದರಿಂದ ನಮ್ಮ ಸ್ನೇಹ ಗಾಢವಾಗಿಯೇ ಬೆಳೆದು ನಿಂತಿತ್ತು. ಆದರೆ ನಮ್ಮಿಬ್ಬರದೂ ವಿರುದ್ಧ ಸ್ವಭಾವಗಳು.  ನಾನು ದನಿ ಎತ್ತರಿಸಿದರೂ ಮುದುಡಿ ಕೂರುವ ಹುಡುಗಿ.. ಅವಳೋ ಬೋಲ್ಡ್ ಎನ್ನುವುದಕ್ಕೆ ಮತ್ತೊಂದು ಹೆಸರು. ಹಟಮಾರಿ.. ತನಗೆ ಬೇಕು ಅನಿಸಿದ್ದನ್ನು ದಕ್ಕಿಸಿಕೊಳ್ಳದೆ ಬಿಡುವ ಹುಡುಗಿ ಅಲ್ಲವೇ ಅಲ್ಲ ಅವಳು.. 

ಜೊತೆಗೆ ಫ್ಲರ್ಟಿಂಗ್ ಶುರುಹಚ್ಚಿಕೊಂಡಿದ್ದಳು... ಅವಳ ಅಗಲವಾಗದ ಅರಳು ಕಂಗಳಿಗೆ ಮೋಡಿ ಮಾಡುವ ಶಕ್ತಿ ಇದೆ .. ಅವಳ ಮಾತುಗಳಲ್ಲಿ ಸೆಳೆತ ಇದೆ.. ಒಮ್ಮೆ ನಾನೇ "ಫ್ಲರ್ಟಿಂಗ್ ತಪ್ಪಲ್ವೇನೆ.. ? ಬಿಡೆ ಇದನ್ನೆಲ್ಲಾ " ಅಂದಿದ್ದೆ. . ಆದರೆ ಅವಳು ಮಹತ್ವಾಕಾಂಕ್ಷಿ. "ಕಾಲೇಜು ಜೀವನದಲ್ಲಿ ಇದೆಲ್ಲಾ ಇಲ್ಲದಿದ್ದರೆ ಮಜಾ ಇಲ್ಲ ಕಣೆ.." ಅನ್ನುತ್ತಿದ್ದಳು.  

ಅವಳ ಹಿಂದೆ ಹುಡುಗರು ಸುತ್ತುವುದನ್ನು ಎಂಜಾಯ್ ಮಾಡುತ್ತಿದ್ದಳು. ನನಗೂ ಒಳಗೊಳಗೇ ಆಸೆ.. ತನ್ನ ಸುತ್ತಲೂ ಹುಡುಗರು ಮುತ್ತಿಕೊಳ್ಳಬೇಕು, ಮೆಚ್ಚಬೇಕು ಎಂದು. 

ಸಹಜವಾಗಿ ನಾನು "ಈ ಹುಡುಗ" ನನ್ನು ತುಸು ಜಾಸ್ತಿಯೇ ಅನ್ನುವ ಹಾಗೆ ಹಚ್ಚಿಕೊಂಡೆ, ಅವನ ತುಂಟ ಮಾತುಗಳಿಗೆ ನಾಚಿಕೊಂಡೆ. ನನ್ನ ನಾಚುವ ಸ್ವಭಾವವೇ ಅವ ಇಷ್ಟವೆಂದ. ನಾ ಮೆಚ್ಚಿಕೊಂಡೆ. 

ಮೈತ್ರಿಯೂ ಈ ಹುಡುಗನಿಗೆ ಹತ್ತಿರವಾಗಲು ಹವಣಿಸಿದಳು. ನನ್ನದೆಯೊಳಗೆ ಬೆಂಕಿ ಆಗ. ನಾ ಯಾವುದನ್ನೂ ಬಾಯಿ ಬಿಟ್ಟು ಹೇಳಲಾರೆ. ಮೈತ್ರಿಯ ಹಾಗೆ ಸಾಧಿಸಲಾರೆ. 

ಮೈತ್ರಿಗೆ ಉಳಿದೆಲ್ಲಾ ಹುಡುಗರಿಗಿಂತ ಕಣ್ಣಲ್ಲೇ ಮಾತನಾಡೋ ಅವ ಇಷ್ಟವಂತೆ. ಅವನಿಗೆ ಹತ್ತಿರವಾಗಿ ಬಿಟ್ಟಳು.. ನಾನು ಇನ್ನೂ ಹತ್ತಿರವಾಗಿದ್ದೆ.. 

ಉಸಿರು ತಾಕುವಷ್ಟು ಹತ್ತಿರ ಬಂದು " ನಿನ್ನ ಹಾಗೆ ನಾಚುವುದಕ್ಕೆ, ತುಟಿ ಕೊನೆಯಲ್ಲೇ ನಗು ದಾಟಿಸುವುದಕ್ಕೆ ಮತ್ಯಾವ ಹೆಣ್ಣಿಗೂ ಬರುವುದಿಲ್ಲಾ ಕಣೇ.. " ಅನ್ನುತ್ತಿದ್ದ. ನನ್ನ ಮುಖ ಕೆಂಪು ಕೆಂಪು. ಅಂದರೆ ನನ್ನ ಬಿಟ್ಟರೆ ಬೇರೆ ಯಾವ ಹೆಣ್ಣಲ್ಲೂ ಅನುರಕ್ತನಾಗುವ ಬಯಕೆ ಇಲ್ಲದೆ ಹುಡುಗ ಇವನು.. ಮೈತ್ರಿ ನನ್ನಷ್ಟು ಹತ್ತಿರವಿಲ್ಲ ಇವನಿಗೆ ಅನ್ನುವ ಭಾವವೇ ನನ್ನನು ಬೆಚ್ಚಗೆ ಇರಿಸುತ್ತಿತ್ತು.

ಇವಳ  ಬಾಯ್ ಫ್ರೆಂಡ್ ಗಳಲಿ ತುಸು ಭಿನ್ನವಾದ ಹುಡುಗನೊಬ್ಬ ಇದ್ದ.  ಇವಳನ್ನು ತುಂಬಾ ಅನ್ನುವಷ್ಟು ಪ್ರೀತಿಸುತ್ತಿದ್ದ. "ಅವನು ಹುಚ್ಚ ಕಣೆ.. " ಅಂತ ನನ್ನ ಹತ್ತಿರ ಹೇಳಿಕೊಂಡು ನಗುತ್ತಿದ್ದಳು. ಆದರೆ ಮತ್ತೆ ಅದೇನಾಯಿತೋ ಅದೇ ಹುಡುಗನನ್ನು ತಾನು ಪ್ರೀತಿಸುತ್ತಿದ್ದೇನೆ ಎನ್ನುತ್ತಿದ್ದಳು. ಮೌನವಾಗುತ್ತಿದ್ದಳು. ತುಸು ಗಂಭೀರವಾಗಿದ್ದಳು ಆ ದಿನಗಳಲ್ಲಿ.  ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆ. ನನಗೂ ಒಂದು ಮಾತು ತಿಳಿಸಿರಲಿಲ್ಲ ಅವಳು. ಊರಲೆಲ್ಲಾ ಓಡಿ ಹೋದಳೆಂಬ ಸುದ್ದಿ.. ಮತ್ತೆ ನಾನವಳನ್ನು ನೋಡಿದ್ದು ಇವತ್ತೇ.

ಇವತ್ತು ಅವಳಾಡಿದ ಮಾತುಗಳಲ್ಲಿ ಅದೇ ಕಾಲೇಜಿನ ದಿನಗಳಲ್ಲಿ ಇದ್ದ ತುಂಟತನ, ಚೇಷ್ಟೆಗಳಿದ್ದವು. ಹೌದು! ಅವಳಾದರೂ ಅಷ್ಟೇ. ಈಗ ಮೊದಲಿಗಿಂತಲೂ ಸುಂದರವಾಗಿದ್ದಳು. ವಯಸ್ಸಿಗಿಂತ ಚಿಕ್ಕದಾಗಿ ಕಾಣುವಂತೆ ಅವಳ ಹೇರ್ ಸ್ಟೈಲ್, ಡ್ರೆಸ್ ಸೆನ್ಸ್, ಮೇಕ್ ಅಪ್ ಗಳು...

ನಾನೇ ಮದುವೆಯಾಗಿ ಮಗುವಾದ ಮೇಲೆ ಎಲ್ಲಾ ಮರೆತೇ.. ಸೌಂದರ್ಯ ಪ್ರಜ್ಞೆ ನಶಿಸಿಯೇ ಹೋಗಿದೆ ನನ್ನಲ್ಲಿ.. ಗಂಡುಗಳನ್ನು ಆಕರ್ಷಿಸಬೇಕು. ಅವಳಿಗೆ ಈ ಕಲೆ ಚೆನ್ನಾಗಿ ಗೊತ್ತು. ನನ್ನ ಗಂಡ ಹ್ಯಾಂಡ್ಸ್೦.. ಸುರದ್ರೂಪಿ ಗಂಡುಗಳನ್ನು ಮಣಿಸದೇ ಬಿಡಲಾರಳು ಇವಳು.. 

ಆ ಹುಡುಗ ನೆನಪಾದ. ಅವನಾದರೂ ಇದ್ದಿದ್ದರೇ.. ಮನಸ್ಸು ಬಯಸಿತು.. ಬಯಸುವಿಕೆಯಲ್ಲಿ ಬಯಕೆ ಇರಬಾರದು ಬುದ್ದಿಯ ಎಚ್ಚರಿಕೆ. ಅವನು ಜೊತೆಯಲ್ಲಿ ಇದ್ದಾಗ ತೊಯ್ದಾಟಗಳಿಲ್ಲ ... ಎಲ್ಲವೂ ನಿಚ್ಚಳ....ಅವನ ಆ ಆರಾಧನಾ ಭಾವದಲ್ಲಿ ಜಗತ್ತೇ ಮರೆತು ಹೋಗಿಬಿಡುತ್ತದೆ. ಮರೆತು ಬಿಡಬೇಕೆಂದು ಇದ್ದ ಹುಡುಗ ಮತ್ತೆ ಎದೆಯೊಳಗೆ ಕಾಲಿಡುತ್ತಿದ್ದಾನೆ.. ನಾನು ತಲ್ಲಣಿಸುತ್ತಿದ್ದೇನೆ...

ಕಾಲಿಂಗ್ ಬೆಲ್ ಬಡಿದುಕೊಳ್ಳುತ್ತಿದೆ... ಕತ್ತಲಾಗಿದೆ..  ಗಡಿಯಾರ ಗಂಟೆ ಎಂಟು ಎಂದು ತೋರಿಸುತ್ತಿತ್ತು. 

ಅರೇ...! ನಿದ್ದೆ ಬಂದು ಬಿಟ್ಟಿತ್ತಾ ನನಗೆ...?!

ಬಾಗಿಲು ತೆಗೆದೆ...

ಪತಿರಾಯನೂ ಮೈತ್ರಿಯೂ ನಗುತ್ತಾ ಒಳಗೆ ಕಾಲಿಡುತ್ತಿದ್ದಾರೆ.. ಅದೂ ರಾತ್ರಿಯ ಹೊತ್ತಲ್ಲಿ! ಮೈತ್ರಿಯ ಕೈ ಗಂಡನ ತೋಳೊಳಗೆ ಬಂಧಿಯಾಗಿತ್ತು... 

ಕಾಲಡಿಯ ನೆಲ ಕುಸಿದಂತೆ ಭಾಸ... ಕುಸಿದು ಬಿದ್ದೆ.

- ಸುಷ್ಮಾ ಮೂಡುಬಿದಿರೆ 

17 ಕಾಮೆಂಟ್‌ಗಳು:

 1. ವಾಹ್ ಸುಷ್ಮಾ ತಂಗ್ಯವ್ವಾ, ಏನು ಇದು, ಹೀಗೆ ಬೊಂಬಾಟ್ ಸಿಕ್ಸರ್ ಹೊಡೆದರೆ ಬೇರೆಯವರ ಕಥೆ ಏನು, ಅಬ್ಬ ಕಥೆಯನ್ನು ಹೀಗೆಲ್ಲಾ ತೆಗೆದುಕೊಂಡು ಹೋಗಬಹುದು ಅಂತಾ ದಾಟಿಯಲ್ಲಿ ತೋರಿಸಿದ್ದೀರ , ಕಥೆಯ ನಿರೂಪಣೆ ತುಂಬಾ ಚೆನ್ನಾಗಿದೆ, ಕಥೆಯಲ್ಲಿ ಹಲವಾರು ತಿರುವುಗಳು ಕಥೆಗೆ ಪೂರಕವಾಗಿವೆ, ನಮ್ಮೆಲ್ಲರ ಶುಭ ಹಾರೈಕೆಗಳು , ಜೈ ಹೊ ಸುಷ್ಮಾ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಬಾಲಣ್ಣಾ...

   ನೀವೆಲ್ಲಾ ಹಿರಿಯರು ಸೇರಿ ಬರೆದ... ಮುಂದುವರಿಸಿದ ಕಥೆ...
   ನೀವು ಮುಂದುವರೆಸಲು ಹೇಳಿದಾಗ ನನಗೆ ಅಳುಕಿತ್ತು... ನಾ ಬರೆಯಲಾರೆ ಎಂಬುದಾಗಿ.... ಬರೆಯುವಾಗ ಒಂದಿಷ್ಟು ಬದ್ದತೆಗಳು, ಜವಾಬ್ದಾರಿ ಇರುತ್ತದೆ...ನನ್ನ ಮುಂದುವರಿಕೆ ಈ ಹಿಂದೆ ಬರೆದ ಯಾರೊಬ್ಬರ ಭಾವಕ್ಕೂ ದಕ್ಕೆ ತರಬಾರದು ಮತ್ತು ಅವರ ಕತೆಯ ತೂಕಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು...

   ಇದು ನನ್ನ ಮಟ್ಟಿಗೆ ದೊಡ್ಡ ಜವಾಬ್ದಾರಿ...
   ನೀವೆಲ್ಲರೂ ಜತನವಾಗಿ ಕಾಪಾಡಿಕೊಂಡು ಹೋದ ಪಾತ್ರಗಳನ್ನು ನಾನು ಕೈ ಬಿಟ್ಟು ಕೆಸರಿನಲ್ಲಿ ಜಾರಿಕೊಂಡರೆ ಅದು ಕಥೆ ಮತ್ತು ಕಥೆಗಾರರಿಗೆ ಮಾಡಿದ ಅವಮಾನವೇ ಸೈ...

   ನಿಮ್ಮೆಲ್ಲರ ಕಾಮೆಂಟ್ ಗಳು ನಾನು ಕಥೆಯನ್ನು ತೀರ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ, ಒಂದಿಷ್ಟು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ ಎನ್ನುವುದಕ್ಕೆ ಸಾಕ್ಷಿಯಾಗಿದೆ...ಇಷ್ಟರಮಟ್ಟಿಗೆ ಸಂತೋಷವಿದೆ ನನಗೆ...

   ಧನ್ಯವಾದಗಳು ಇಂತಹ ಒಂದು ಅವಕಾಶಕ್ಕಾಗಿ...

   ಅಳಿಸಿ
 2. ಮೌನರಾಗ...
  ಮೈತ್ರಿಯ ಆಗಮನ ನಿಜಕ್ಕೂ ಅದ್ಭುತ ತಿರುವು ನೀಡಿದೆ :)...
  ಇಷ್ಟವಾಯಿತು ಎಂದಿನಂತೆ ನಿಮ್ಮ ಬರವಣಿಗೆಯಲ್ಲಿನ ಆಪ್ತತೆ....
  ಬರೆಯುತ್ತಿರಿ..ಖೋ ..
  ನಮಸ್ತೆ :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಚಿನ್ಮಯ್...
   ಧನ್ಯವಾದಗಳು... ಈ ಮಟ್ಟಿನ ಪ್ರತಿಕ್ರಿಯೆಗೆ...

   ಅಳಿಸಿ


 3. " ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೋ ಧುಂಬಿಯ ಹಾಡಿನ ಝೇಂಕಾರದಲ್ಲೋ.. ಘಮ್ಮನೆ ಹೊಮ್ಮಿರುವ"
  ನೀನು ಮುಂದುವರೆಸಿದ ಈ ಲೇಖನ ಓದಿದ ನಂತರ ಮೂಡಿಬಂದ ಹಾಡು ಇದು. ಒಲವೆ ಜೀವನ ಸಾಕ್ಷಾತ್ಕಾರ ಎನ್ನುತ್ತಾರೆ. ಅದು ನಿಜದ ಪರಮಾವಧಿ.

  "ಬಯಸುವಲ್ಲಿ ಬಯಕೆ ಇರಬಾರದು" ಮನಸ್ಸೆಳೆದ ಸಾಲುಗಳು. ಆಸೆ ಪಟ್ಟಾಗ. ಅಥವಾ ಒಂದು ಸಂಬಂಧವನ್ನು ಹೆಣೆದುಕೊಂಡಾಗ ಒಂದು ಗೆರೆಯನ್ನು ಎಲ್ಲಿ ಎಳೆಯಬೇಕು ಎನ್ನುವ ತಾರ್ಕಿಕತೆಗಿಂತ ಮನಕ್ಕೆ ಬೇಲಿ ಬೇಕಾಗಿರುತ್ತದೆ.

  ಇನ್ನೊಂದು ಸುಂದರ ತಿರುವಿಗೆ ಕೊಂಡೊಯ್ದ ನಿನ್ನ ಲೇಖನದ ಪರಿ ಇಷ್ಟವಾಯಿತು. ಎಲ್ಲಿಯೂ ಬೇಲಿ ಹಾರದೆ, ಮಿತಿ ಮೀರದೆ, ತನ್ನ ಇತಿ ಮಿತಿಯಲ್ಲಿ ಆತಂಕ, ಕುತೂಹಲ ಎರಡನ್ನು ಹೊತ್ತು ಸಾಗಿದ ಮತ್ತು ಇನ್ನೊಂದು ಮಜಲಿಗೆ ತಿರುಗಲು ಸಿದ್ಧವಿರುವ ಲೇಖನ ಸೂಪರ್.

  ಇಷ್ಟವಾಯಿತು ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಅಣ್ಣಯ್ಯಾ ಈ ಪರಿಯ ಮೆಚ್ಚುಗೆಗೆ...

   ಸರಣಿ ಕಥೆಯನ್ನು ಬರೆಯುವ ಪ್ರಯತ್ನ ಇದು ಆಗಿರುವುದರಿಂದ... ತಿರುವು ನೀಡದೆ ಹೋದರೆ ಮುಂದುವರಿಕೆಗೆ ಅವಕಾಶ ಎಲ್ಲಿದೆ ಅಲ್ಲವೇ..?

   ಅಳಿಸಿ
 4. ಮೈತ್ರಿಯ ಪ್ರವೇಶದಿಂದ ಹೊಸ ತಿರುವಿಗೆ ನಾಂದಿ ಹಾಡಿದ್ದೀರಿ ತಾವು.
  ಅಂದು ಹಾಗೆ ಕಣ್ಮರೆಯಾದವಳು ತೀರಅ ಹೀಗೆ ತನ್ನವರ ಮುಂದೆಯೇ ಪ್ರತ್ಯಕ್ಷವಾದರೆ ನಾಯಕಿಯ ಪಾಡೇನು?
  ಭಗವಂತ! ಮೈತ್ರಿಯ ಜೊತೆ ತನ್ನವರು, ಅದೂ ಈ ಹೊತ್ತಿಲ್ಲಿ ತನ್ನ ಮನೆಗೇ!
  ಮುಂದೇನು ಕಾದಿದೆಯೋ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬದರಿ ಸರ್
   ಕಥೆಯ ಮುಂದುವರಿಕೆಗೆ ಮೈತ್ರಿ ಅಗತ್ಯ ಎನಿಸಿತು ನನಗೆ..
   ಬರಿಯ ಮೂರೇ ಜನದ ಸುತ್ತ ಕಥೆ ತಿರುಗುವುದೇ ಆದರೆ ಅವರ ಮಾನಸಿಕ ಸ್ಥಿತಿಗಳನ್ನು ಬಿಟ್ಟು ಬೇರೆ ವಿಚಾರಗಳಿಗೆ ಕಡಿಮೆ ಮಹತ್ವ ಸಿಕ್ಕೀತು ಅಥವಾ ಕತೆಯ ಮುಂದುವರಿಕೆಗೆ ಅವಕಾಶ ಇಲ್ಲದಂತೆ ಆಗುತ್ತದೆ ಅನಿಸಿ ಮೈತ್ರಿಯನ್ನು ತಂದಿದ್ದೇನೆ

   ನೋಡುವಾ ಮುಂದೇನಾಗುತ್ತದೋ..

   ಅಳಿಸಿ
 5. ಸುಷ್ಮಾ..
  ನಿಜಕ್ಕೂ ತುಂಬಾ ಚಂದದ ಕಥೆ... ಖೊ ಖೊ....

  ಈ ಸರಣಿ ಇದುವರೆಗೆ ಮಸ್ತ್ ಆಗಿ ಬರ್ತಿದೆ...

  ಜೈ ಹೋ !

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಣ್ಣಾ ..
   ಬಹಳ ದಿನಗಳ ಮೇಲೆ ನನ್ನ ಕನಸಿಗೆ ಬಂದಿದ್ದೀರಿ.. ಧನ್ಯವಾದಗಳು
   ಖೋ .. ಖೋ ....

   ಅಳಿಸಿ
 6. ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ. ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. http://sudhieblog.blogspot.in/2014/05/blog-post.html

  ಪ್ರತ್ಯುತ್ತರಅಳಿಸಿ