ಮಂಗಳವಾರ, ಏಪ್ರಿಲ್ 29, 2014

ಮೊದಲ ಗಂಡ.. !

(ಮೊದಲ ಗಂಡ : ನಿಜಜೀವನ ಆಧಾರಿತ ಕಥೆಯಂತಹ ಬದುಕಿದು.. ಇದನ್ನು ಕಥೆಯಾಗಿ ಓದದೇ..ಜೀವನವಾಗಿ ಓದಿ ನೋಡಿ.. ನೋವಿನೊಂದು ಎಳೆ ನಿಮ್ಮ ಮನಸ್ಸನ್ನೂ ತಾಕೀತು ... ಉಸಿರಾಟದ ಭಾರ ಅರ್ಥವಾದೀತು ಎಂಬ ಆಶಯ)

ಸೋಮ :
ಸೋಮನೆಂದರೆ ಆರಡಿಯನ್ನೂ ಮೀರುವ ಎತ್ತರದ ಒಣಕಲು ಮತ್ತು ಕಪ್ಪಗಿನ ಆಕೃತಿ.ನನ್ನ ಮೊದಲ ಗಂಡ..! ನಮ್ಮದಾದರೂ ಎಂತಹ ಜೋಡಿ?! ಆರಡಿ ಎತ್ತರದ ಗಂಡ.. ನಾಲ್ಕಡಿ ಎತ್ತರದ ಹೆಂಡತಿ! ಕುಡಿತ ಶುರು ಮಾಡಿದನೆಂದರೆ ಅವನಿಗೂ ಮನುಷ್ಯತ್ವಕ್ಕೂ ಸಂಬಂಧವೇ ಇಲ್ಲಾ. ಹದಿನೆಂಟು ವರುಷ ಬಾಳಿದ್ದೇನೆ. ರಾಕ್ಷಸನಂತಹ ಅವನನ್ನು ಮತ್ತು ಅವನೊಳಗೆ ಸದಾ ಸುಪ್ತವಾಗಿ ಹರಿಯುತ್ತಿದ್ದ ಪ್ರೀತಿ, ದ್ವೇಷ, ಹತಾಶೆಗಳನ್ನು ಸಹಿಸಿಕೊಂಡು. ಕಳ್ಳ ಭಟ್ಟಿ ಇಳಿಸುತ್ತಿದ್ದ ಕುಡಿತಕ್ಕೆ. ಯಾವತ್ತೂ ಹೆಚ್ಚು ಕಮ್ಮಿ ಆಗಿಲ್ಲ. ಅಷ್ಟು ಪರಿಣಿತ ಅದರಲ್ಲಿ. ಬಳಸುತ್ತಿದ್ದ ಎಲ್ಲಾ ಮಾಲುಗಳೂ ಉತ್ತಮ ದರ್ಜೆಯದ್ದೇ ..! ಅಷ್ಟು ಶ್ರದ್ಧೆಯಿಂದ ತಯಾರಿಸಿರುತ್ತಿದ್ದ ..ಅದೇ ಶ್ರದ್ದೆಯಲ್ಲಿ ಕುಡಿಯುತ್ತಿದ್ದ.. ಮನೆಗೆ ಬಂದವರಿಗೂ ಕುಡಿಸುತ್ತಿದ್ದ. ಒಂದೆರಡು ಸಲ ಪೊಲೀಸರು ರೈಡ್ ಮಾಡಿದ್ದೂ ಉಂಟು. ಜೈಲಿಗೆ ಹೋಗಿ ಮತ್ತೆ ಬಂದು ಕಳ್ಳಭಟ್ಟಿ ಇಳಿಸುತ್ತಿದ್ದ. ಕೆಲವೊಮ್ಮೆ ಮೊದಲೇ ಸೂಚನೆ ಸಿಕ್ಕುತ್ತಿತ್ತು.. ನನಗೆ ಗಂಡ ಜೈಲು ಪಾಲಾಗುವುದು ಬೇಡವಿತ್ತು.. ಮಾಲು ಬಚ್ಚಿಡಲು ನಾನೂ ಸಹಾಯ ಮಾಡುತ್ತಿದ್ದೆ. ಮದುವೆಯಾದ ಹೊಸದರಲ್ಲಿ ಇವೆಲ್ಲಾ ಸೋಜಿಗದಂತೆ ಮತ್ತೊಮ್ಮೆ ಅಪರಾಧದಂತೆ ಗೋಚರಿಸುತ್ತಿತ್ತು.. ಬರುಬರುತ್ತಾ ಮಾಮೂಲಾಯಿತು.. ನಾನೂ ಭಟ್ಟಿ ಇಳಿಸುವುದರಲ್ಲಿ ಪರಿಣಿತೆ ಆಗಿಬಿಟ್ಟೆ - ಕುಡಿತದಲ್ಲೂ..!


ನಮ್ಮಲ್ಲಿ ಹೆಂಗಸರೂ ಕುಡಿಯುತ್ತಾರೆ. ಗಂಡನೇ ಕುಡಿಸುವಾಗ ಹೆಂಡತಿ ಯಾಕೆ ಒಲ್ಲೆ ಎನ್ನುತ್ತಾಳೆ..?ರಾತ್ರಿ ಮಲಗುವಾಗ ಒಂದಿಷ್ಟು ತೀರ್ಥ ಸೇವನೆ ಅಭ್ಯಾಸವಾಯಿತು. ಬಹುಶಃ ನಾ ಕುಡಿತ ಕಲಿಯಲಿಲ್ಲವಾದರೆ ಅಷ್ಟು ಎತ್ತರದ ಮನುಷ್ಯನನ್ನು ನಾಲ್ಕಡಿಯ ನಾನು ಅದು ಹೇಗಾದರೂ ಸಂಭಾಳಿಸುತ್ತಿದ್ದೆ ಹದಿನೆಂಟು ವರುಷ..?! ಬಾವನವರನ್ನು ಕಂಡರೆ ಸದಾ ದ್ವೇಷ ಇವನಿಗೆ. ತಾನು ಪ್ರೀತಿಸಿದ ಹೆಣ್ಣನ್ನು ಮದುವೆಯಾಗಲು ಬಿಡದೇ ನನ್ನನ್ನು ಗಂಟು ಹಾಕಿದ್ದಕ್ಕಾಗಿ.ಒಮ್ಮೊಮ್ಮೆ ಬಾವನವರು ಮರುಗುತ್ತಾರೆ ಆ ಹೆಣ್ಣನ್ನೇ ತಂದುಕೊಂಡಿದ್ದರೆ ಇವನು ಕುಡಿತ ಕಲಿಯುತ್ತಿರಲ್ಲಿಲ್ಲ ಅಂತ.. ಅವಳಾದರೋ ಪುಣ್ಯವಂತೆ ಇವನನ್ನು ಕಟ್ಟಿಕೊಂಡು ಬಂಜೆಯಾಗಲಿಲ್ಲ - ಮೂವತ್ತೆಂಟಕ್ಕೇ ಮುಂಡೆಯಾಗಲಿಲ್ಲ. ಮೂರು ಮಕ್ಕಳ ಸುಖ ಸಂಸಾರ ಅವಳದು. ನನ್ನ ತವರಿನ ಊರಿಗೆ ಅವಳನ್ನು ತಂದುಕೊಂಡಿರುವುದು. ಪ್ರೀತಿಸಿದ ಹುಡುಗಿಯ ಕೈ ಹಿಡಿಯಲಿಲ್ಲವೆಂದು ನನ್ನ ದ್ವೇಷಿಸಲಿಲ್ಲ ಅವ. ಅದೊಂದು ದೊಡ್ಡ ವರ ನನಗೆ.ಆದರೆ ಮಿಕ್ಕಂತೆ ಅವನಿದ್ದ ಸಿಟ್ಟು, ಹೆಂಡತಿಯೆಂದು ಅವ ತೊರುವ ದಬ್ಬಾಳಿಕೆಗಳಿಗೆನಾ ತಿಂದ ಹೊಡೆತಗಳೇನೂ ಕಡಿಮೆಯದ್ದಲ್ಲ.. ಹೊಡೆಯುತ್ತಿದ್ದ, ಬಡೆಯುತ್ತಿದ್ದ , ಒದೆಯುತ್ತಿದ್ದ... ನನಗೆ ಏನಾದರೂ ಸಹಿಸಿಕೊಳ್ಳುತ್ತಿದ್ದೆ. ಆದರೆ ಬಾವನವರ ವಿಷಯಕ್ಕೆ ಹೋದಾಗ ಮಾತ್ರ ಎಳೆದು ತಂದು ಕೂಡಿಸುತ್ತಿದ್ದೆ. ಮತ್ತೆ ಹೊಡೆತ ತಿನ್ನುತ್ತಿದ್ದೆ.

ಕುಡಿದು ಕುಡಿದು ದಿನಾ ಬಾವನವರಲ್ಲಿ ಜಗಳವಾಡುತ್ತಿದ್ದ. ಓರಗಿತ್ತಿಯದು ಮೃದು ಸ್ವಭಾವ. ದನಿಯೆತ್ತರಿಸಿ ಮಾತನಾಡಿಯೂ ಗೊತ್ತಿಲ್ಲಾ ಅವಳಿಗೆ. ನಾನೇ ಇವನನ್ನು ದರದರ ಎಳೆದು ತಂದು ರೂಮಿನಲ್ಲಿ ಕೂಡಿ ಹಾಕಿ ಚಿಲಕ ಹಾಕುತ್ತಿದ್ದೆ.. ಅಥವಾ ಅವರನ್ನೇ ರೂಮಿನೊಳಗೆ ಕಳಿಸಿ ಅಂಗಳದಲ್ಲಿ ತಂದು ಕೂರಿಸುತ್ತಿದ್ದೆ ..ಆ ನನ್ನ ಶಕ್ತಿಯನ್ನು ನೆನೆವಾಗ ನಾನೇ ಬೆರಗಾಗುತ್ತೇನೆ. ಅವನಿಂದ ನಾನೇ ಒದೆ ತಿಂದದ್ದನ್ನು ನೆನೆವಾಗಲೂ ಅದೇ ಅಚ್ಚರಿ ನನ್ನಲ್ಲಿ.ಅದೇ ಸಮಯದಲ್ಲಿ ನಾದಿನಿ ಗಂಡನ್ನ ಬಿಟ್ಟು ತವರಿಗೆ ಬಂದು ಕೂತಿದ್ದಳು. ಅತ್ತೆ - ಮಗಳದ್ದು ಸೊಸೆಯರ ಮೇಲೆ ದಬ್ಬಾಳಿಕೆ ಶುರುವಾದ ದಿನಗಳವು. ನಾನು ಎದುರಿಸಿ ನಿಲ್ಲುತ್ತಿದ್ದೆ. ಅಕ್ಕ (ಓರಗಿತ್ತಿ) ಅತ್ತು ಮೂಲೆ ಸೇರುತ್ತಿದ್ದಳು..ಬಾವ ಹಿತ್ತಾಳೆ ಕಿವಿಯವರು ಅತ್ತೆ ನಾದಿನಿಯದ್ದೇ ಸರಿ ಎಂಬಂತೆ ವಾದಕ್ಕೆ ಇಳಿಯುತ್ತಿದ್ದರು. ನನ್ನ ಗಂಡ ನನ್ನ ಜೊತೆ ನಿಲ್ಲುತ್ತಿದ್ದ. ಆ ವಿಷಯದಲ್ಲಿ ಅಕ್ಕ ಏಕಾಂಗಿ. ನನ್ನ ಗಂಡ ಹೊರಗೆ ಹೋಗಿ ದುಡಿದು ಕಾಸು ಸಂಪಾದಿಸುವನಲ್ಲ. ಮನೆಯಲ್ಲೇ ಇದ್ದ ಅವನಿಗೆ ತನ್ನ ಅಕ್ಕ ಮತ್ತು ಅಮ್ಮನ ಪಿತೂರಿ ಗೊತ್ತಾಗಿತ್ತು.. ಅದೇನಾಗಿತ್ತೋ ಬಾವನವರು ಇಲ್ಲದ ಒಂದು ರಾತ್ರಿ ಸೊಸೆಯರಿಗೆ ಕಾಟ ಕೊಡುವ ಸ್ವಂತ ಅಕ್ಕನಿಗೆ ತನ್ನ ಅಮ್ಮನಿಗೆ ಬಡಿದು ಬಿಟ್ಟಿದ್ದ..ನಾ ಸುಮ್ಮನೆ ನೋಡುತ್ತಿದ್ದೆ. ಅಕ್ಕ ಬಂದು ಬಿಡುವಂತೆ ಕಾಲಿಗೆ ಬಿದ್ದಳು. ಅವ ಬಿಟ್ಟ. ಅತ್ತಿಗೆಯೆಂದರೆ ಅವನ ಪಾಲಿಗೆ ದೇವತೆ. ತನ್ನ ಅಮ್ಮನಿಗಿಂತಲೂ ಅತ್ತಿಗೆಗೊಂದು ಎತ್ತರದ ಸ್ಥಾನ ಅವನ ಹೃದಯದಲ್ಲಿತ್ತು. ಒರಟು ರಾಕ್ಷಸನ ಒಳಗೊಂದು ಪ್ರೇಮ ಜಲದ ಒರತೆ ಕಂಡಿದ್ದೆ. .ಮನೆಯ ಜಗಳ ಊರವರ ಬಾಯಿಯ ಮೂಲಕ ಒರಗಿತ್ತಿಯ ತವರಿಗೆ ತಿಳಿದಿತ್ತು. ಒಂದು ದಿನ ಅವಳ ಮನೆಯವರು ಬಾವನವರ ಸಂಸಾರವನ್ನೇ ಕರೆದುಕೊಂಡು ಅವಳ ತವರು ಮನೆಗೆ ಹೋದರು. ಮನೆಯಲ್ಲಿ ಉಳಿದಿದ್ದು ನಾನು, ಗಂಡ, ಅತ್ತೆ ಮತ್ತು ನಾದಿನಿ.. ಸ್ವಲ್ಪ ಸಮಯದ ಮೇಲೆ ನಾದಿನಿಯೂ ತನ್ನ ಮಗನನ್ನು ಕಟ್ಟಿಕೊಂಡು ಬೇರೆ ಮನೆಮಾಡಿದಳೆನ್ನಿ.

ಬಾವನವರಿಗೆ ಮೂರು ಮಕ್ಕಳು.. ಬೆಳೆಯುತ್ತಿದ್ದರು. ನಮಗಾದರೋ ಒಂದೂ ಇಲ್ಲಾ.. ಅತ್ತೆ ನಾದಿನಿ ಇಬ್ಬರೂ ನನ್ನ ಬಂಜೆ ಎಂದರು. ಇವ ಅವರಿಗೆ ಜಾಡಿಸಿ ಒದ್ದ. ಗಂಡಸಿನ ಸಹಜ ಅಹಮಿಕೆ ಬಿಟ್ಟು ದೋಷ ಅವನದು ಎಂದು ಒಪ್ಪಿಕೊಂಡ. ಬಾವನವರ ಮೂರು ಮಕ್ಕಳಲ್ಲಿ ಒಬ್ಬನನ್ನು ನನಗೆ ಕೊಡು ನಾನು ಸಾಕಿಕೊಳ್ತೇನೆ ಅಕ್ಷರಶಃ ಬಾವನವರಲ್ಲಿ ಬೇಡಿಕೊಂಡಿದ್ದ - ಮೊದಲ ಬಾರಿಗೆ. ಯಾರು ಯಾಕಾದರೂ ತಮ್ಮ ಮಗುವನ್ನು ಬಿಟ್ಟುಕೊಡುತ್ತಾರೆ? ಅದೂ ಇಂತಹ ಕುಡುಕ ದಂಪತಿಗೆ?! ಕುಡಿತ, ಜಗಳ. ಹೊಡೆತ ದಿನಚರಿ ಎನ್ನುವಷ್ಟು ಮಾಮೂಲಾಗಿತ್ತು ನನಗೆ. ಮಗುವಿಗಾಗಿ ಹಂಬಲಿಸುತ್ತಿದ್ದ. ಅದಕ್ಕಾಗಿಯೇ ಕುಡಿಯುತ್ತಿದ್ದಿನಿ ಅನ್ನುತ್ತಿದ್ದ. ಇದರ ಮಧ್ಯೆ ಇವನೊಂದು ಸೈಡ್ ಬಿಸಿನೆಸ್ ಇತ್ತು.. ಕುಡಿತಕ್ಕೆ ಮೊದಲನೇ ಸ್ಥಾನ ಅವನ ಜಗತ್ತಿನಲ್ಲಿ. ಮಿಕ್ಕಿದ್ದೆಲ್ಲವೂ ಸೈಡ್ ಡೇ! ಅದು ಲ್ಯಾಂಡ್ ಬುಸಿನೆಸ್. ನಮ್ಮದು ಹಳ್ಳಿ. ಗುಡ್ಡ ಗಾಡು ಪ್ರದೇಶ. ಹೆಚ್ಚಿನ ಜಾಗಗಳು ಸರಕಾರದ ಆಸ್ತಿ. ಜಾಗಗಳನ್ನು ಕಬಳಿಸುತ್ತಿದ್ದ. ಏನೇನೊ ರೆಕಾರ್ಡ್ ಗಳನ್ನು ಜೋಡಿಸಿಕೊಂಡು ಜಾಗ ತನ್ನದು ಮಾಡಿಕೊಳ್ಳುತ್ತಿದ್ದ ಅದನ್ನು ಇನ್ನೊಬ್ಬರಿಗೆ ಮಾರುತ್ತಿದ್ದ. ಅದೇ ದುಡ್ಡಲ್ಲಿ ಜೀವನ. ಇಂತಹ ಎಷ್ಟು ಜಾಗಗಳನ್ನು ಮಾರಿದ್ದಾನೋ ಲೆಕ್ಕವಿಟ್ಟಿಲ್ಲ ಸ್ವತಃ ಅವನೇ. ನಾನು ಬೀಡಿ ಕಟ್ಟುತ್ತಿದ್ದೆ.. ಜೀವನ ನಡೆಯುತ್ತಿತ್ತು. ತನ್ನ ಕೈಯಲ್ಲಿ ದುಡ್ಡು ಖಾಲಿಯಾದಾಗ ನಾನು ಬೀಡಿ ಕಟ್ಟಿ ಬಂದ ಹಣ ಕಿತ್ತುಕೊಳ್ಳುತ್ತಿದ್ದ. ಅವನಿಗೆ ಬಿಸಿನೆಸ್ ದಕ್ಕಲಿಲ್ಲವಾದಾಗ ನನ್ನ ಒಡವೆ ಅಡವಿಡುತ್ತಿದ್ದ. ಮತ್ತೆ ದುಡ್ದಾದಾಗ ಬಿಡಿಸಿ ತಂದು ಕೊಡುತ್ತಿದ್ದ. ಈ ನಡುವೆ ಎರಡು ಬಾರಿ ಹೃದಯಾಘಾತವಾಗಿತ್ತು. ಬಾವನವರು ಹೇಗೇಗೋ ದುಡ್ಡು ಹೊಂದಿಸಿ ಆಸ್ಪತ್ರೆ ಖರ್ಚುಗಳನ್ನು ನೋಡಿಕೊಂಡು ಉಳಿಸಿಕೊಂಡಿದ್ದರು.


ಮದುವೆಯಾಗಿ ಹದಿನೇಳು ವರ್ಷ ಕಳೆದಿತ್ತು. ಯಾರೋ ಮಗು ದತ್ತು ತೆಗೆದುಕೊಳ್ಳುವಂತೆ ಹೇಳಿದರಂತೆ..ಇವ ಇದ್ದಕ್ಕಿದ್ದ ಹಾಗೆ ಬದಲಾಗಿದ್ದ. ಮಗು ದತ್ತು ತೆಗೆದುಕೊಳ್ಳುವುದಕ್ಕೆ ಕಾನೂನಿನ ರೀತಿಯಲ್ಲಿ ಬೇಕಾದ ಅರ್ಹತೆ ಪಡೆಯಲು ಇಂತಹ ನಿರ್ಧಾರಕ್ಕೆ ಬಂದಿದ್ದ.ಅರ್ಹತೆಯೆಂದರೆ ಎಂತಹದು..?! ದಂಪತಿಯ ಹಣ ಕಾಸಿನ ಪರಿಸ್ಥಿತಿ, ವಯಸ್ಸು ಇತ್ಯಾದಿ.. ವಯಸ್ಸದರೂ ಇತ್ತು..ಹಣ?ಅದನ್ನು ಗಳಿಸಬೇಕಿತ್ತು. ಇನ್ನು ಮುಂದೆ ಭಟ್ಟಿ ಇಳಿಸುವುದಿಲ್ಲವೆಂದ. ಕೆಲಸಕ್ಕೆ ಹೋಗುತ್ತೇನೆ ಎಂದ. ಒಂದು ಮಗು ದತ್ತು ತೆಗೆದುಕೊಳ್ಳೋಣ ಎಂದ. ಸರಿ..! ನಂಬಿಕೆ ಬರಲಿಲ್ಲ ನಂಗೆ. ಆದರೆ ಅವ ನಿಜಕ್ಕೂ ಬದಲಾಗಿದ್ದ. ನಮ್ಮದೇ ಊರಿನ ಜೈನರ ಮನೆಗೆ ತೋಟದ ಕೆಲಸಕ್ಕೆ ಹೋಗಲು ಶುರುವಿಟ್ಟ. ಡಾಕ್ಟರ್ ಭಾರದ ಕೆಲಸ ಮಾಡುವ ಹಾಗಿಲ್ಲ ಎಂದಿದ್ದರು. ಇವನ ಉಮೇದಿನ ಮುಂದೆ ನನ್ನ ಮಾತುಗಳು ನಡೆಯಲಿಲ್ಲ. ಹತ್ತಿರತ್ತಿರ ಒಂದು ವರ್ಷ ಖುಷಿಯಲ್ಲಿ ಮಿಂದು ಹೋಗಿತ್ತು ನಮ್ಮ ಸಂಸಾರ. ಈ ಹಿಂದೆ ಬ್ಯಾಂಕ್ ನಲ್ಲಿ ಅವ ಇರಿಸಿದ್ದ ಒಡವೆಯಲ್ಲಿ ಬೆಂಡೋಲೆ ಹೋಗಿ ಬಿಟ್ಟಿತ್ತು. ಹೊಸ ಬೆಂಡೋಲೆ ಮಾಡಿಸಿಕೊಟ್ಟ. ಮನೆಗೆ ಮಿಕ್ಸಿ ಬಂತು.ಬಿದ್ದು ಹೋಗುವಂತಿದ್ದ ಕೊಟ್ಟಿಗೆ ನೆಟ್ಟಗೆ ನಿಲ್ಲಿಸಿದ. ನಮ್ಮನೆಯ ಆಳದ ಬಾವಿಯಿಂದ ನೀರು ಸೇದುವ ಕಷ್ಟ ತಪ್ಪಿಸಲು ಪಂಪ್ ಸೆಟ್ ಹಾಕಿಸಿದ..ನನ್ನ ಹೆಸರಿನಲ್ಲಿ ಒಂದಿಷ್ಟು ಜಾಗ ಮಾಡಿದ. ಒಂದು ರೀತಿಯಲ್ಲಿ ಸುಖ ಸಂಸಾರ ಸಿಕ್ಕಿತ್ತು.

ಅವತ್ತು ದೀಪಾವಳಿ. ನಮಗೆ ಮೂರುದಿನದ ಹಬ್ಬ. ಮೊದಲನೇಯ ದಿನ ತುಂಬಾ ಖುಷಿಯಲ್ಲಿ ಇದ್ದ. ಯಾಕೆಂದರೆ ದತ್ತು ತೆಗೆದುಕೊಳ್ಳುವುದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದ. ಸಂತೋಷಕ್ಕೆ ಅಂಗಳದ ತುಂಬಾ ಪಟಾಕಿ ಸಿಡಿಸಿ ನಲಿದ ರಾತ್ರಿ ಭರ್ಜರಿ ಊಟ ಮಾಡಿ ಮಲಗಿದ ಅಷ್ಟೇ ಮತ್ತೆ ಬೆಳಿಗ್ಗೆ ಏಳಲಿಲ್ಲ. ಹೃದಯಾಘಾತವೆಂದು ಡಾಕ್ಟರ್ ಶರಾ ಬರೆದರು. ಬಹುಶಃ ಸಂತೋಷಕ್ಕೆ ಅವನ ಹೃದಯ ಬಹುವಾಗಿ ಮಿಡಿದಿರಬೇಕು... ಹೃದಯ ಸ್ತಬ್ಧವಾಯಿತು.

ಸಂತೋಷ ಸತ್ತು ಹೋಯಿತು ಅವನೊಂದಿಯೇ. ವಿಧಿ ಮತ್ತೊಮ್ಮೆ ಅನ್ಯಾಯ ಮಾಡಿದ. ಬದುಕುವ ಭರವಸೆಯೇ ಕಳೆದು ಹೋದಂತಹ ಘಳಿಗೆ.. ಕನಸಿನ ದೀಪ ಕುಸಿದು ಬಿತ್ತು. ಬದುಕು ಅಂದಕಾರವಾಯಿತು... ಜೊತೆಗೆ ಕ್ರಮೇಣ ಮೊದಲನೇ ಗಂಡನ ಅಧ್ಯಾಯವೂ ಬದುಕಿನಿಂದ ಮುಗಿದು ಹೋಯಿತು.

ಮುಂದೆ ಬದುಕಿಗೆ ಎರಡನೇ ಗಂಡ ಬರುತ್ತಾನೆ. ಬದುಕು ಬಾಣಲೆಯಿಂದ ನೇರಾ ಬೆಂಕಿಗೇ ಬೇಳುತ್ತದೆ.(ವಿ. ಸೂ: ಬದುಕು ಇಲ್ಲಿಗೇ ಮುಗಿಯುವುದಿಲ್ಲವಲ್ಲಾ...??
ಮುಂದುವರಿಕೆ ಇದೆ... 
ಸದ್ಯಕ್ಕೆ ಇಷ್ಟು ಸಾಕು.. )6 ಕಾಮೆಂಟ್‌ಗಳು:

  1. ಹಲವು ಕಡೆ ಇದೇ ರೀತಿಯ ಕತೆ ಕೇಳಿದ್ದೆ. ಸೋಮನ ಚಿತ್ರಣ ನೈಜವಾಗಿದೆ.
    ದತ್ತು ತೆಗೆದುಕೊಳ್ಳುವ ದಂಪತಿಗಳ ನಿರ್ಧಾರಕ್ಕೆ ಸರ್ಕಾರ ಏನಾದರೂ ಸಹಾಯದ ಪ್ಯಾಕೇಜ್ ಘೋಷಿಸಬೇಕು.
    ಪಾಪ ಈಗ ಆಕೆ 2ನೇ ಗಂಡನನ್ನು ಏಗಬೇಕೇಮೋ?

    ಪ್ರತ್ಯುತ್ತರಅಳಿಸಿ