ಶನಿವಾರ, ಜನವರಿ 3, 2015

ಅವನ ಪ್ರಶ್ನೆಗೆ ಇವಳ ಉತ್ತರ!


ನೆಲ ಗುದ್ದಿ ನೀರು ತೆಗೆಯಬೇಕಾದ ವಯಸ್ಸಿಗೆ ನೆಲದ ಮೇಲೆ ಕಾಲೇ ನಿಲ್ಲದಂತೆ, ನೆತ್ತಿಯ ಮೇಲೆ ಕಣ್ಣಿಟ್ಟುಕೊಂಡಿದ್ದಾರೇನೋ ಅನ್ನುವಂತೆ ಓಡಾಡುವ ಸೊಬಗ ಸುಬ್ಬರ ಕುರಿತು ತುಸು ಜಾಗೃತೆ ಒಳ್ಳೆದು ಮೆದು ಮನಸ್ಸಿನ ಮುದ್ದು ಮಣಿಗಳೇ..! ನೋಟ್ಸ್ ತಗೊಂಡು ಲವ್ ಲೆಟರ್ಸಮೇತ ವಾಪಾಸು ಕೊಡುವ,ಮೊಬೈಲ್ ನಂಬರ್ಹೇಗೇಗೋ ಸಂಪಾದಿಸಿ ವಾಟ್ಸ್ಆಪ್ ನಲ್ಲಿ ಹಾಯ್ ಎನ್ನುತ್ತಾ ಲೀಟರ್ಗಟ್ಲೇ ಜೊಲ್ಲು ಸುರಿಸುವ, ಫೇಸ್ಬುಕ್ಕಿಗೂ ದಾಳಿಯಿಟ್ಟು ಜಗದೇಕ ಸುಂದರಿ ನೀನು ಅನ್ನುವಂತೆ ಲೈಕ್ ಒತ್ತುವ, ಕಾಮೆಂಟ್ ಹಾಕುವ, ಹುಡುಗಿಯರ ಟ್ವೆಂಟಿ ಫೋರ್ಇನ್ಟೂ ಸೆವೆನ್ಫೇವರೇಟ್ ಚಾಕಲೇಟ್ ಕಾನ್ಸೆಪ್ಟ್ ಅನ್ನು ದುರುಪಯೋಗ ಪಡಿಸಿಕೊಂಡು ಇನ್ನಿಲ್ಲದ ಮುಗ್ಥತೆಯ ಮುಖದ ಮೇಲೆ ತಂದುಕೊಂಡು ಚಾಕಲೇಟ್ ತಂದುಕೊಟ್ಟು ಲವ್ ಯೂ ಅನ್ನುವ ಮೂತಿಗೆ ಬಿದ್ದುಬಿಟ್ಟಿರೋ ಜೋಕೆ.. ಖೆಡ್ಡಾಕೆ ಕೊಡವಿದ ಸಂತಸದಲ್ಲಿ ಚೆನ್ನಿಗರಾಯರ ಗುಂಪಲ್ಲಿ ಪಾರ್ಟಿ ನಡೆಯದ್ದಿದ್ದರೆ ಕೇಳಿ..



ನೀವು ಹೋಗೋ ದೇವಸ್ಥಾನದ ಮುಂದೆಯೇ ಸದಾ ದರ್ಶನಕ್ಕೆ ಕಾಯುವ ಹುಡುಗು ಬುದ್ಧಿಯಲ್ಲಿ ಬೇಟೆಗಾರನ ತುಡಿತ. ಹುಡುಗರಿಗೆ ತಾಳ್ಮೆ ಕಮ್ಮಿ ಅನ್ನುವ ವಿಷಯ ಸುಳ್ಳಾಗುವುದೇ ಈಗ..ಒಲಿಸಿಕೊಳ್ಳಲು ಕಸರತ್ತು ನಡೆಸುವ ಸಮಯದಲ್ಲಿ. ಸಿನೆಮಾ ನೋಡಿ, ರಾಜಕುಮಾರನ ಕನಸು ಕಾಣುವ ಮಾಡರ್ನ್ ಮುಗ್ಥ ಮುಗುದೆಯರನ್ನು ಅದೇ ಸಿನೆಮಾ ಸ್ಟೈಲ್ ನಲ್ಲಿಯೇ ತ್ರಾಸವಿಲ್ಲದೇ ಹಳ್ಳಕ್ಕೆ ಬೀಳಿಸಿಕೊಳ್ಳುತ್ತಾರೆ ಆಧುನಿಕ ಸೋ ಕಾಲ್ಡ್ ರಾಜಕುಮಾರರು.

ಪಡಕೊಳ್ಳುವ ಸಲುವಾಗಿ ಕಳಕೊಳ್ಳುವ ನೀತಿಯನ್ನು ರೂಡಿಸಿಕೊಂಡಿರುವ ಶಕುನಿ ಬುದ್ಧಿಯ ಪುರುಷಪುಂಗವರು ತಾವು ನಿಮಗಾಗಿ ಅದೆಷ್ಟೆಲ್ಲಾ ಕಷ್ಟ ಪಡುತ್ತಿದ್ದೇವೆ ಎಂಬುದನ್ನು ಹುಡುಗಿಗೆ ತಿಳಿಯುವಂತೆಯೇ ಮಾಡುತ್ತಿರುತ್ತಾರೆ. ಮೆದು ಹುಡುಗಿ "ಪಾಪ!! ತನಗಾಗಿ ಎಷ್ಟು ಪಾಡು ಪಡುತ್ತಿದ್ದಾನೆ " ಅಂತೆಲ್ಲಾ ಕನಿಕರ ತೋರಿಸಿ ನಗೆಯೊಂದ ಬಿಸಾಕಿದರೆ, ಹುಡುಗಿ ತನ್ನ ಜೊತೆ ಲವ್ವಿಗೆ ಬಿದ್ದಿದ್ದಾಳೆಂದೇ ನಿಕ್ಕಿಯಾಗಿಬಿಡುತ್ತಾರೆ. ಹುಡುಗರದು ಕಷ್ಟ ತೋರಿಸಿಕೊಂಡು ಇಷ್ಟ ಪಡಕೊಳ್ಳುವ ತೀಕ್ಣ ಬುದ್ದಿ!



ಮೋಸ ಮಾಡುವುದು ಹುಡುಗಿಯರಲ್ಲಾ ಸ್ವಾಮಿ.. ಮೋಸ ಹೋಗುವುದು ಹುಡುಗಿಯರು. ಹುಡುಗಿಯೇನಾದರೂ ಪ್ಪಿ ತಪ್ಪಿ ಲವ್ವಿಗೆ ಬಿದ್ದಳೆಂದುಕೊಳ್ಳಿ ಬೈಕಿನ ಬೆನ್ನಿಗೆ ಹುಡುಗಿಯನ್ನು ಅಂಟಿಸಿಕೊಂಡು ಊರು ತುಂಬಾ ಮೆರವಣಿಗೆ ಮಾಡಿ ಅವಳ ಮನೆಯವರಿಂದ ಛೀಮಾರಿ ಹಾಕಸಿದಿದ್ದರೆ ಹುಡುಗನ ಲವ್ವಿಗೆ ಬೆಲೆಯಿದೆ ಹೇಳಿ..? ಇದೇ ನೆವವಾಗಿ ಬ್ರೇಕಪ್ ಏನಾದರೂ ಆಯಿತೋ ಹುಡುಗ ದೇವದಾಸ, ಹುಡುಗಿ ಅಕ್ಷರಷಃ ರಾವಣ ಸುಪರ್ದಿಯಲ್ಲಿರುವ ವನವಾಸದ ಸೀತೆ.

ಗಡ್ಡಬಿಟ್ಟ ದೇವದಾಸನೋ ಅದೇ ಪೋಸಲ್ಲಿ ಹಳೆಹುಡುಗಿಯ ಹೆಸರಲ್ಲೇ ಮತ್ತೊಂದು ಹುಡುಗಿಯನ್ನು ಪಟಾಯಿಸಿ ಬಿಡುತ್ತಾನೆ ಸೀತೆಯ ಪಾಡೇನು..?! ಹುಡುಗರು ಹೂವಿಂದ ಹೂವಿಗೆ ಹಾರುವ ದುಂಬಿಗಳು.. ಇವತ್ತು ಹೂ ಮಜವೆನಿಸಿದರೆ ಇಲ್ಲಿ, ಇಲ್ಲಾ ಇನ್ನೊಂದು ಚಂದದ ಹೂ ಸಿಕ್ಕರೆ ಇಲ್ಲಿಂದ ಅಲ್ಲಿ. ಹೂಗಳೋ ದುಂಬಿಗಳ ಬಣ್ಣಕ್ಕೆ, ಮಾತಿಗೆ ಮರುಳಾಗೋ ಬಲಿಪಶುಗಳು.



ಬೀ ಅಲರ್ಟ್ ಗರ್ಲ್ಸ್..!
ಕನಸಿನ ರಾಜಕುಮಾರ ಧರೆಗಿಳಿದು ಬರಲು ಬದುಕು ಎಂಭತ್ತರ ದಶಕದ ಸಿನೆಮಾವೂ ಅಲ್ಲಾ.. ಹುಡುಗನೆನ್ನುವವ ಆಗಿನ ಕಾಲದ ಹೀರೋನೂ ಅಲ್ಲಾ. ಹಗಲು ರಾತ್ರಿಗಳ ಅರಿವಿಲ್ಲದೇ ಫ್ಲರ್ಟ್ ಮಾಡುವ ಹುಡುಗರದ್ದು ಗುಳ್ಳೆನರಿಗಳ ಪಾರ್ಟಿ. ನೀವೆಂದರೆ ಸಾವಿತ್ರಿಯ ಥರಹ ಯಮನನ್ನು ಬೇಕಾದರೆ ಜಯಿಸಬಲ್ಲಿರಿ, ನಿಮ್ಮ ಜಾಣ್ಮೆ ಬುದ್ಧಿಮತ್ತೆಗಳನೆಲ್ಲವನ್ನೂ ಸೂರೆಗೈದು ನಿಮ್ಮನ್ನೇ ಬುದ್ಧು ಮಾಡೋ ಇಪ್ಪತ್ತೊಂದನೇ ಶತಮಾನದ ಹೈದರನಲ್ಲಾ. ಮಂಕು ಬೂದಿ ಎರಚಿ ನಿಮ್ಮನ್ನ ಮಂಕಿ ಮಾಡುವ ಕಪಿ ಸೈನ್ಯವಿದೆ ನಿಮ್ಮ ಸುತ್ತ-ಮುತ್ತಲೂ ಎಚ್ಚರಿಕೆ ಎಚ್ಚರಿಕೆ. ಒಂದು ಹುಡುಗ ಸುಮ್ಮಸುಮ್ಮನೆ ನಿಮ್ಮ ಜೊತೆ ಕ್ಲೋಸ್ ಆಗುತ್ತಿದ್ದಾನೆ, ಪಡಬಾರದ ಕಷ್ಟ ಪಟ್ಟು ನಿಮ್ಮೆದುರು ಶ್ರಮಜೀವಿಯಾಗುತ್ತಿದ್ದಾನೆ ಎಂದರೆ ನಿಮಗೊಂದು ಹಳ್ಳ ತೋಡಿದ್ದಾನೆ ಅಂತಲೇ ಅರ್ಥಮಾಡಿಕೊಂಡು ಬಿಡಿ ಗರ್ಲ್ಸ್. ಅಪ್ಪನೋಡಿದ ಹುಡುಗನಿಂದ ನೀವು ತಾಳಿ ಕಟ್ಟಿಸಿಕೊಳ್ಳುವಾಗ ಬಂದು ಮಂತ್ರಾಕ್ಷತೆ ಹಾಕಿಹೋಗುವಷ್ಟು ಸಲಿಗೆ ಸದರ ಸಾಕು ನವಕಾಲದ ಹುಡುಗರೊಂದಿಗೆ. ಪ್ರೀತಿ-ಪ್ರೇಮವೆಂದು ಹೋದಿರೋ ಜೋಕೆ.
 -------------------------------------------------------------------------------------



[ನಾ ಹೀಗೆಲ್ಲಾ ಹುಡುಗರ ಬಗ್ಗೆ ಬರೆಯಬಲ್ಲೇನಾ..?!
ಹೀಗೊಂದು ಬರಹ ಬೇಕಿತ್ತು ಅಂದಾಗ ಹೀಗೆ ಬರೆದಿದ್ದಷ್ಟೇ...
ಮತ್ತೇ ಹುಡುಗರ ಬಗ್ಗೆ ನಂಗೇನೂ ದ್ವೇಷವಿಲ್ಲಾ ನೋಡಿ ;)

-ಈ ವಾರದ ವಿಜಯ ನೆಕ್ಟ್ಸ್ ನಲ್ಲಿ ಪ್ರಕಟಿತ (02-01-2015]

ಗುರುವಾರ, ಜನವರಿ 1, 2015

ಹೊಸ ವರ್ಷದ ಶುಭಾಶಯಗಳು!

ಮತ್ತೊಂದು ಅಂಚನ್ನು ತಲುಪಿದ್ದೇವೆ.
ದಾಟಿ ಮುಂದೆ ಹೆಜ್ಜೆಯಿಡಲೇ ಬೇಕು, ಹಾಗೇ ಇಡುವುದಕ್ಕೆ ಮುನ್ನ ಹಿಂದೆ ಒಮ್ಮೆ ಹೊರಳಿ ನೋಡಲೇಬೇಕಾಲ್ಲ..?!

ಹೊಸ ವರುಷ ಬಂದಿದೆ..!

ಗೋಡೆಯ ಮೇಲೆ ತೂಗು ಹಾಕಿರುವ ಕ್ಯಾಲೆಂಡರ್‍ ತೆಗೆದು, ಹೊಸದೊಂದು ತಂದು ತೂಗು ಹಾಕುತ್ತಿವಲ್ಲ.. ಹಾಗೇ ಹಳೇ ನೋವುಗಳ ಜಾಗದಲ್ಲಿ ಹೊಸ ಸಂತಸಗಳನ್ನು, ಮುರಿದು ಬಿದ್ದ ಕನಸುಗಳ ಅಂಗಳದಲ್ಲಿ ಹೊಸ ಕನಸುಗಳ ಹರವಿಕೊಳ್ಳುವಂತಿದ್ದರೆ... ಹೊಸ ವರ್ಷಕ್ಕೊಂಡು ಅರ್ಥವಲ್ಲವಾ..? ಹಳೇ ಗೋಡೆಗೆ ಅಂಟಿಕೊಂಡಿರುವ ಖುಷಿಗಳು ಮುಂದಿನ ಗೋಡೆಗೂ ವರ್ಗವಾಗುವಂತಿದ್ದರೆ..?!

ಪಟಪಟನೇ ಹೊರಳಿ ಹೋದ ವರುಷದಲ್ಲಿ ಗಳಿಸಿದ್ದೆಷ್ಟು? ಉಳಿಸಿದ್ದೆಷ್ಟು? ಕಳೆದಿದ್ದೆಷ್ಟು..? ಲೆಕ್ಕವೂ ಕೈಗೆ ಸಿಗಲಾರದಷ್ಟು ವೇಗವಾಗಿ ಮುಗಿದುಹೋಗಿಬಿಟ್ಟಿದೆ. ನಾವು ಹೊಸ ಕನಸುಗಳ ಕಟ್ಟಿಕೊಳ್ಳುವುದಕ್ಕೆ ಸಜ್ಜಾಗಿದ್ದೇವೆ.



ಅಮ್ಮನೆನ್ನುವವಳೂ ಹೊಸ ವರುಷಕ್ಕೆ ಹೊರಳಿದ್ದಾಳೆ ಎದೆಯ ತುಂಬಾ ಮಿಂಚು ತುಂಬಿಕೊಂಡು,ಕಣ್ಣ ಕೊಳದಲ್ಲೇ ಕಣ್ಣೀರಿಂಗಿಸಿಕೊಂಡು ಅವಳ ಜೀವಗಳಿಗೆ ಕನಸು ಹೊಸೆವ ಕಸುಬು ಮಾಡುತ್ತಾಳೆ, ಗಂಡ ಅವಳ ನಗುವ ಕಿತ್ತು ಸಾರಾಯಿ ಕುಡಿವಾಗ, ಕುಡಿಗಳಿಗಾಗಿ ತನ್ನ ನಗುವ ಕೊಂದು, ಅನ್ನ ಹುಟ್ಟಿಸುತ್ತಾಳೆ ಅಮ್ಮ. ವರ್ಷದ ತುಂಬಾ ಆ ತಾಯಿಗೆ ಒಂದು ಹಿಡಿ ನಗುವನ್ನಲ್ಲದೇ ಮತ್ತೇನು ಕೊಡಬಹುದು?

ಇವಳೊಬ್ಬಳಿದ್ದಾಳೆ, ಅವಳಿಗೆ ಒಂಟೊಂಟಿ ಭಾವದಲ್ಲಿ ಗಂಟುಬಿದ್ದಿರುವಾಗ ಅವನ ನೆನಪಾಗುತ್ತದೆ. ಮೇಸೇಜು ಮಾಡುತ್ತಾಳೆ. "ಸದಾ ಮೆಸೇಜು ಮಾಡಿಕೊಂಡು ಹರಟೆ ಹೊಡೆಯಲು ನಾವು ಚೈಲ್ಡಿಶ್ ಅಲ್ಲಾ... ಮೇಚ್ಯೂರ್‍ಡ್ ಆಗಿದ್ದೇವೆ.. ಬೆಳೆದ್ದೇವೆ..." ರಪ್ಪನೇ ಮೆಸೇಜು ರಾಚುತ್ತದೆ. ಹತ್ತಿರವಿದ್ದಾಗಲೂ ಮುಖ ಕೊಟ್ಟು ಮಾತಾಡದೇ ಮೊಬೈಲ್ ಕುಟ್ಟುತ್ತಿರುವ ಅವನ ಮೆಚ್ಯೂರ್‍ಡ್ ಚಿತ್ರ ಕಣ್ಣೆದುರು ಬಂದು ಫಳಕ್ಕನೇ ಹನಿಯೊಂದು ಉದುರತ್ತದೆ. ಅವಳು ಸುಮ್ಮನಾಗುತ್ತಾಳೆ.

ಬೈಕ್ ಎಂಬತ್ತಕ್ಕಿಂತ ಕಡಿಮೆ ಓಡಿಸಿದರೆ ಥ್ರಿಲ್ ಇಲ್ಲವೆನ್ನುವ, ಹೊಗೆ ಎಳೆದು ಸಿಕ್ಕುಬಿದ್ದರೂ ಮೀಸೆ ಮಣ್ಣಾಗದ, ಕಟ್ಟಿಕೊಂಡ ಕನಸುಗಳಿಗೆ ಎಳ್ಳುನೀರು ಬಿಟ್ಟು ಹೊರನಡೆದ, ಹದಿಹರೆಯದ ಚೆಲ್ಲಾಟಗಳಿಗೆ ಜೀವನ ತೆತ್ತುಬಿಡುತ್ತನೇನೋ ಅನ್ನುವಷ್ಟು ಭಯ ಹುಟ್ಟಿಸಿರುವ ಒಡಹುಟ್ಟಿದನೆಂದರೆ ಸಮುದ್ರವಿಹಾರಕ್ಕೆ ದೋಣಿಯಲ್ಲಿ ಹೋದವ ಈಜಿ ದಡ ಸೇರುತ್ತೇನೆಂದು ಇದ್ದ ದೋಣಿಯನ್ನೂ ಬಿಟ್ಟು ಸಮುದ್ರಕ್ಕೆ ಹಾರಿದ ಕನಸಸಷ್ಟೇ..!


ಸುತ್ತಲೂ ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಮಗಳು..ಇಂತದ್ದೇ ಕೌಟುಂಬಿಕ ಹೆಸರುಗಳನ್ನು ಕೊಟ್ಟುಕೊಂಡು ನಿಜದ ಸ್ನೇಹವಾ ಕಳೆದುಕೊಳ್ಳುತ್ತಿದ್ದೇವಾ? ಅನುಮಾನವಾಗುತ್ತೆ ನನಗೆ. ಇಂತಹ ಹೆಸರುಗಳು ಬೇಗ ಸೆಳೆಯುವುದು ನಿಜ..! ಆದರೆ ಅದೆಷ್ಟು ಜನ ಇಂತಹ ಹೆಸರುಗಳನ್ನು ಇಟ್ಟುಕೊಂಡು ನಮ್ಮ ಬದುಕಿನೊಳಗೆ ಕಾಲಿಡುವುದಕ್ಕೆ ಅರ್ಹರು..? ಅಥವಾ ನಾವೆಷ್ಟು ಅರ್ಹರು ಆ ಹೆಸರಿನಲ್ಲಿ ಅವರ ಮನೆ ಮನಸ್ಸಿನೊಳಕ್ಕೆ ಇಳಿಯುವುದಕ್ಕೆ..? ಮುಖವಾಡಗಳ ಬಾಳಿಕೆ ತುಂಬಾ ಕಡಿಮೆ. ಫೇಸ್‌ಬುಕ್ಕಿನಲ್ಲಿ ಫೀಲಿಂಗ್ ಸ್ಯಾಡ್ ಅನ್ನುವ ಸ್ಟೇಟಸ್ ಗೆ ಲೈಕು, ಕಾಮೆಂಟು ಮಾಡುವವರು, ಕಾಲ್ ಮಾಡಿ ವಿಚಾರಿಸುವವರೆಲ್ಲಾ ಆಪ್ತರೇ ಆಗಿದ್ದರೆ, ಮಾನವೀಯತೆಗಳು ಇವತ್ತು ನಡುಬೀದಿಯಲ್ಲಿ ಕೊಲೆಯಾಗುತ್ತಿರಲಿಲ್ಲವೇನೋ..! ಫೀಲಿಂಗ್ ಸ್ಯಾಡ್ ಅನ್ನುವಾಗ ಮಾತ್ರ ಇನ್ನಿಲ್ಲದ ಆಸ್ಥೆಯಿಂದ ಕೇಳುವವರಿಗೆ ನಮ್ಮ ನೋವುಗಳ ಬಗೆಗಿನ ಇನ್ಫರ್‌ಮೇಷನ್ ಬೇಕಿರುತ್ತದೆಯೇ ಹೊರತು ಅವುಗಳ ಶಮನವಲ್ಲ.. !


Life goes on..!
ಅಭದ್ರತೆ, ಅಸಹಾಯಕತೆ, ಅವಮಾನಗಳು ಎಲ್ಲದರ ನಡುವೆಯೂ ಜೀವನ ನಡೆಯುತ್ತಿರುತ್ತದೆ ಅದರ ಪಾಡಿಗೆ. ಬದುಕೆಂದರೆ ಸುಮ್ಮನಲ್ಲಾ, ಎಚ್ಚರದಿಂದ ನಡೆಯಬೇಕು ಅನ್ನುತ್ತಿರುತ್ತಾಳೆ ಅಜ್ಜಿ. ಇಟ್ಟ ಹೆಜ್ಜೆಗಳಿಗೆಲ್ಲಾ ಲೆಕ್ಕವಿಟ್ಟೇ ನಡೆಯುವುದಾಗಿದ್ದರೆ, ನೋವುಗಳು ಇಲ್ಲದ ಖುಷಿಗಳಿಗೂ ಒಲ್ಲದ ಬದುಕನ್ನ ಬದುಕುತ್ತಿರಬೇಕಾಗುತ್ತದೇನೋ..! ಬದುಕೆಂದರೆ ಬದುಕು ಅಷ್ಟೇ, ಕ್ಷಣಕ್ಷಣವನ್ನೂ ಹೀರಿ ಬದುಕುತ್ತೇನೆಂಬಂತೆ ಬದುಕಬೇಕಿದೆ.ಬದುಕಿಗೊಂದು ನಗೆಯ ತೀವೃತೆಯ ದಕ್ಕಿಸಿಕೊಡಬೇಕಿದೆ.

ಎಲ್ಲರ ಬದುಕೂ ಬಣ್ಣವಾಗಲಿ.
ಹೊಸ ವರ್ಷದ ಶುಭಾಶಯಗಳು