ಶನಿವಾರ, ಜನವರಿ 3, 2015

ಅವನ ಪ್ರಶ್ನೆಗೆ ಇವಳ ಉತ್ತರ!


ನೆಲ ಗುದ್ದಿ ನೀರು ತೆಗೆಯಬೇಕಾದ ವಯಸ್ಸಿಗೆ ನೆಲದ ಮೇಲೆ ಕಾಲೇ ನಿಲ್ಲದಂತೆ, ನೆತ್ತಿಯ ಮೇಲೆ ಕಣ್ಣಿಟ್ಟುಕೊಂಡಿದ್ದಾರೇನೋ ಅನ್ನುವಂತೆ ಓಡಾಡುವ ಸೊಬಗ ಸುಬ್ಬರ ಕುರಿತು ತುಸು ಜಾಗೃತೆ ಒಳ್ಳೆದು ಮೆದು ಮನಸ್ಸಿನ ಮುದ್ದು ಮಣಿಗಳೇ..! ನೋಟ್ಸ್ ತಗೊಂಡು ಲವ್ ಲೆಟರ್ಸಮೇತ ವಾಪಾಸು ಕೊಡುವ,ಮೊಬೈಲ್ ನಂಬರ್ಹೇಗೇಗೋ ಸಂಪಾದಿಸಿ ವಾಟ್ಸ್ಆಪ್ ನಲ್ಲಿ ಹಾಯ್ ಎನ್ನುತ್ತಾ ಲೀಟರ್ಗಟ್ಲೇ ಜೊಲ್ಲು ಸುರಿಸುವ, ಫೇಸ್ಬುಕ್ಕಿಗೂ ದಾಳಿಯಿಟ್ಟು ಜಗದೇಕ ಸುಂದರಿ ನೀನು ಅನ್ನುವಂತೆ ಲೈಕ್ ಒತ್ತುವ, ಕಾಮೆಂಟ್ ಹಾಕುವ, ಹುಡುಗಿಯರ ಟ್ವೆಂಟಿ ಫೋರ್ಇನ್ಟೂ ಸೆವೆನ್ಫೇವರೇಟ್ ಚಾಕಲೇಟ್ ಕಾನ್ಸೆಪ್ಟ್ ಅನ್ನು ದುರುಪಯೋಗ ಪಡಿಸಿಕೊಂಡು ಇನ್ನಿಲ್ಲದ ಮುಗ್ಥತೆಯ ಮುಖದ ಮೇಲೆ ತಂದುಕೊಂಡು ಚಾಕಲೇಟ್ ತಂದುಕೊಟ್ಟು ಲವ್ ಯೂ ಅನ್ನುವ ಮೂತಿಗೆ ಬಿದ್ದುಬಿಟ್ಟಿರೋ ಜೋಕೆ.. ಖೆಡ್ಡಾಕೆ ಕೊಡವಿದ ಸಂತಸದಲ್ಲಿ ಚೆನ್ನಿಗರಾಯರ ಗುಂಪಲ್ಲಿ ಪಾರ್ಟಿ ನಡೆಯದ್ದಿದ್ದರೆ ಕೇಳಿ..ನೀವು ಹೋಗೋ ದೇವಸ್ಥಾನದ ಮುಂದೆಯೇ ಸದಾ ದರ್ಶನಕ್ಕೆ ಕಾಯುವ ಹುಡುಗು ಬುದ್ಧಿಯಲ್ಲಿ ಬೇಟೆಗಾರನ ತುಡಿತ. ಹುಡುಗರಿಗೆ ತಾಳ್ಮೆ ಕಮ್ಮಿ ಅನ್ನುವ ವಿಷಯ ಸುಳ್ಳಾಗುವುದೇ ಈಗ..ಒಲಿಸಿಕೊಳ್ಳಲು ಕಸರತ್ತು ನಡೆಸುವ ಸಮಯದಲ್ಲಿ. ಸಿನೆಮಾ ನೋಡಿ, ರಾಜಕುಮಾರನ ಕನಸು ಕಾಣುವ ಮಾಡರ್ನ್ ಮುಗ್ಥ ಮುಗುದೆಯರನ್ನು ಅದೇ ಸಿನೆಮಾ ಸ್ಟೈಲ್ ನಲ್ಲಿಯೇ ತ್ರಾಸವಿಲ್ಲದೇ ಹಳ್ಳಕ್ಕೆ ಬೀಳಿಸಿಕೊಳ್ಳುತ್ತಾರೆ ಆಧುನಿಕ ಸೋ ಕಾಲ್ಡ್ ರಾಜಕುಮಾರರು.

ಪಡಕೊಳ್ಳುವ ಸಲುವಾಗಿ ಕಳಕೊಳ್ಳುವ ನೀತಿಯನ್ನು ರೂಡಿಸಿಕೊಂಡಿರುವ ಶಕುನಿ ಬುದ್ಧಿಯ ಪುರುಷಪುಂಗವರು ತಾವು ನಿಮಗಾಗಿ ಅದೆಷ್ಟೆಲ್ಲಾ ಕಷ್ಟ ಪಡುತ್ತಿದ್ದೇವೆ ಎಂಬುದನ್ನು ಹುಡುಗಿಗೆ ತಿಳಿಯುವಂತೆಯೇ ಮಾಡುತ್ತಿರುತ್ತಾರೆ. ಮೆದು ಹುಡುಗಿ "ಪಾಪ!! ತನಗಾಗಿ ಎಷ್ಟು ಪಾಡು ಪಡುತ್ತಿದ್ದಾನೆ " ಅಂತೆಲ್ಲಾ ಕನಿಕರ ತೋರಿಸಿ ನಗೆಯೊಂದ ಬಿಸಾಕಿದರೆ, ಹುಡುಗಿ ತನ್ನ ಜೊತೆ ಲವ್ವಿಗೆ ಬಿದ್ದಿದ್ದಾಳೆಂದೇ ನಿಕ್ಕಿಯಾಗಿಬಿಡುತ್ತಾರೆ. ಹುಡುಗರದು ಕಷ್ಟ ತೋರಿಸಿಕೊಂಡು ಇಷ್ಟ ಪಡಕೊಳ್ಳುವ ತೀಕ್ಣ ಬುದ್ದಿ!ಮೋಸ ಮಾಡುವುದು ಹುಡುಗಿಯರಲ್ಲಾ ಸ್ವಾಮಿ.. ಮೋಸ ಹೋಗುವುದು ಹುಡುಗಿಯರು. ಹುಡುಗಿಯೇನಾದರೂ ಪ್ಪಿ ತಪ್ಪಿ ಲವ್ವಿಗೆ ಬಿದ್ದಳೆಂದುಕೊಳ್ಳಿ ಬೈಕಿನ ಬೆನ್ನಿಗೆ ಹುಡುಗಿಯನ್ನು ಅಂಟಿಸಿಕೊಂಡು ಊರು ತುಂಬಾ ಮೆರವಣಿಗೆ ಮಾಡಿ ಅವಳ ಮನೆಯವರಿಂದ ಛೀಮಾರಿ ಹಾಕಸಿದಿದ್ದರೆ ಹುಡುಗನ ಲವ್ವಿಗೆ ಬೆಲೆಯಿದೆ ಹೇಳಿ..? ಇದೇ ನೆವವಾಗಿ ಬ್ರೇಕಪ್ ಏನಾದರೂ ಆಯಿತೋ ಹುಡುಗ ದೇವದಾಸ, ಹುಡುಗಿ ಅಕ್ಷರಷಃ ರಾವಣ ಸುಪರ್ದಿಯಲ್ಲಿರುವ ವನವಾಸದ ಸೀತೆ.

ಗಡ್ಡಬಿಟ್ಟ ದೇವದಾಸನೋ ಅದೇ ಪೋಸಲ್ಲಿ ಹಳೆಹುಡುಗಿಯ ಹೆಸರಲ್ಲೇ ಮತ್ತೊಂದು ಹುಡುಗಿಯನ್ನು ಪಟಾಯಿಸಿ ಬಿಡುತ್ತಾನೆ ಸೀತೆಯ ಪಾಡೇನು..?! ಹುಡುಗರು ಹೂವಿಂದ ಹೂವಿಗೆ ಹಾರುವ ದುಂಬಿಗಳು.. ಇವತ್ತು ಹೂ ಮಜವೆನಿಸಿದರೆ ಇಲ್ಲಿ, ಇಲ್ಲಾ ಇನ್ನೊಂದು ಚಂದದ ಹೂ ಸಿಕ್ಕರೆ ಇಲ್ಲಿಂದ ಅಲ್ಲಿ. ಹೂಗಳೋ ದುಂಬಿಗಳ ಬಣ್ಣಕ್ಕೆ, ಮಾತಿಗೆ ಮರುಳಾಗೋ ಬಲಿಪಶುಗಳು.ಬೀ ಅಲರ್ಟ್ ಗರ್ಲ್ಸ್..!
ಕನಸಿನ ರಾಜಕುಮಾರ ಧರೆಗಿಳಿದು ಬರಲು ಬದುಕು ಎಂಭತ್ತರ ದಶಕದ ಸಿನೆಮಾವೂ ಅಲ್ಲಾ.. ಹುಡುಗನೆನ್ನುವವ ಆಗಿನ ಕಾಲದ ಹೀರೋನೂ ಅಲ್ಲಾ. ಹಗಲು ರಾತ್ರಿಗಳ ಅರಿವಿಲ್ಲದೇ ಫ್ಲರ್ಟ್ ಮಾಡುವ ಹುಡುಗರದ್ದು ಗುಳ್ಳೆನರಿಗಳ ಪಾರ್ಟಿ. ನೀವೆಂದರೆ ಸಾವಿತ್ರಿಯ ಥರಹ ಯಮನನ್ನು ಬೇಕಾದರೆ ಜಯಿಸಬಲ್ಲಿರಿ, ನಿಮ್ಮ ಜಾಣ್ಮೆ ಬುದ್ಧಿಮತ್ತೆಗಳನೆಲ್ಲವನ್ನೂ ಸೂರೆಗೈದು ನಿಮ್ಮನ್ನೇ ಬುದ್ಧು ಮಾಡೋ ಇಪ್ಪತ್ತೊಂದನೇ ಶತಮಾನದ ಹೈದರನಲ್ಲಾ. ಮಂಕು ಬೂದಿ ಎರಚಿ ನಿಮ್ಮನ್ನ ಮಂಕಿ ಮಾಡುವ ಕಪಿ ಸೈನ್ಯವಿದೆ ನಿಮ್ಮ ಸುತ್ತ-ಮುತ್ತಲೂ ಎಚ್ಚರಿಕೆ ಎಚ್ಚರಿಕೆ. ಒಂದು ಹುಡುಗ ಸುಮ್ಮಸುಮ್ಮನೆ ನಿಮ್ಮ ಜೊತೆ ಕ್ಲೋಸ್ ಆಗುತ್ತಿದ್ದಾನೆ, ಪಡಬಾರದ ಕಷ್ಟ ಪಟ್ಟು ನಿಮ್ಮೆದುರು ಶ್ರಮಜೀವಿಯಾಗುತ್ತಿದ್ದಾನೆ ಎಂದರೆ ನಿಮಗೊಂದು ಹಳ್ಳ ತೋಡಿದ್ದಾನೆ ಅಂತಲೇ ಅರ್ಥಮಾಡಿಕೊಂಡು ಬಿಡಿ ಗರ್ಲ್ಸ್. ಅಪ್ಪನೋಡಿದ ಹುಡುಗನಿಂದ ನೀವು ತಾಳಿ ಕಟ್ಟಿಸಿಕೊಳ್ಳುವಾಗ ಬಂದು ಮಂತ್ರಾಕ್ಷತೆ ಹಾಕಿಹೋಗುವಷ್ಟು ಸಲಿಗೆ ಸದರ ಸಾಕು ನವಕಾಲದ ಹುಡುಗರೊಂದಿಗೆ. ಪ್ರೀತಿ-ಪ್ರೇಮವೆಂದು ಹೋದಿರೋ ಜೋಕೆ.
 -------------------------------------------------------------------------------------[ನಾ ಹೀಗೆಲ್ಲಾ ಹುಡುಗರ ಬಗ್ಗೆ ಬರೆಯಬಲ್ಲೇನಾ..?!
ಹೀಗೊಂದು ಬರಹ ಬೇಕಿತ್ತು ಅಂದಾಗ ಹೀಗೆ ಬರೆದಿದ್ದಷ್ಟೇ...
ಮತ್ತೇ ಹುಡುಗರ ಬಗ್ಗೆ ನಂಗೇನೂ ದ್ವೇಷವಿಲ್ಲಾ ನೋಡಿ ;)

-ಈ ವಾರದ ವಿಜಯ ನೆಕ್ಟ್ಸ್ ನಲ್ಲಿ ಪ್ರಕಟಿತ (02-01-2015]

4 ಕಾಮೆಂಟ್‌ಗಳು:

 1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 2. ​ತಾಜ್ ಮಹಲ್ ಒಂದು ಕಡೆಯಿಂದ ನೋಡಲು ಸುಂದರ.. ಅದೇ ಅದರ ಹಿಂದೆ ನೋಡಿದಾಗ ಯಮುನೆ ಮಲಿನವಾಗಿ ಹರಿಯುತ್ತಿರುತ್ತಾಳೆ.. ಮೋಸಹೋದವರ ಪಾಡು ಹೇಳತೀರದು.. ಹೆಣ್ಣು ಮಕ್ಕಳ ಅಂತರಂಗದ ಬಗ್ಗೆ ಮನೋಜ್ಞ ರೀತಿಯಲ್ಲಿ ಎಚ್ಚರಿಕೆಯ ಬರಹ ಇಷ್ಟವಾಗುತ್ತದೆ. "ನೋಡುವ ನೋಟವೆಲ್ಲ ಅಂದವು ತಾನೇ ಹೇಳೇ ಜಾಣೆ.. ಬಾಳೇ ಪ್ರೇಮಗೀತೆ" ಅಣ್ಣಾವ್ರ ಹಾಡು ನೆನಪಿಗೆ ಬಂತು..
  ​ಸುಂದರ ಬರಹ ಪಿ ಎಸ್ ​

  ಪ್ರತ್ಯುತ್ತರಅಳಿಸಿ
 3. ಶ್ರೀಕಾಂತ್ ಅಣ್ಣ ಮತ್ತು ಬದರಿ ಸಾರ್‍ ಧನ್ಯವಾದಗಳು :)

  ಪ್ರತ್ಯುತ್ತರಅಳಿಸಿ