ಗುರುವಾರ, ಜನವರಿ 1, 2015

ಹೊಸ ವರ್ಷದ ಶುಭಾಶಯಗಳು!

ಮತ್ತೊಂದು ಅಂಚನ್ನು ತಲುಪಿದ್ದೇವೆ.
ದಾಟಿ ಮುಂದೆ ಹೆಜ್ಜೆಯಿಡಲೇ ಬೇಕು, ಹಾಗೇ ಇಡುವುದಕ್ಕೆ ಮುನ್ನ ಹಿಂದೆ ಒಮ್ಮೆ ಹೊರಳಿ ನೋಡಲೇಬೇಕಾಲ್ಲ..?!

ಹೊಸ ವರುಷ ಬಂದಿದೆ..!

ಗೋಡೆಯ ಮೇಲೆ ತೂಗು ಹಾಕಿರುವ ಕ್ಯಾಲೆಂಡರ್‍ ತೆಗೆದು, ಹೊಸದೊಂದು ತಂದು ತೂಗು ಹಾಕುತ್ತಿವಲ್ಲ.. ಹಾಗೇ ಹಳೇ ನೋವುಗಳ ಜಾಗದಲ್ಲಿ ಹೊಸ ಸಂತಸಗಳನ್ನು, ಮುರಿದು ಬಿದ್ದ ಕನಸುಗಳ ಅಂಗಳದಲ್ಲಿ ಹೊಸ ಕನಸುಗಳ ಹರವಿಕೊಳ್ಳುವಂತಿದ್ದರೆ... ಹೊಸ ವರ್ಷಕ್ಕೊಂಡು ಅರ್ಥವಲ್ಲವಾ..? ಹಳೇ ಗೋಡೆಗೆ ಅಂಟಿಕೊಂಡಿರುವ ಖುಷಿಗಳು ಮುಂದಿನ ಗೋಡೆಗೂ ವರ್ಗವಾಗುವಂತಿದ್ದರೆ..?!

ಪಟಪಟನೇ ಹೊರಳಿ ಹೋದ ವರುಷದಲ್ಲಿ ಗಳಿಸಿದ್ದೆಷ್ಟು? ಉಳಿಸಿದ್ದೆಷ್ಟು? ಕಳೆದಿದ್ದೆಷ್ಟು..? ಲೆಕ್ಕವೂ ಕೈಗೆ ಸಿಗಲಾರದಷ್ಟು ವೇಗವಾಗಿ ಮುಗಿದುಹೋಗಿಬಿಟ್ಟಿದೆ. ನಾವು ಹೊಸ ಕನಸುಗಳ ಕಟ್ಟಿಕೊಳ್ಳುವುದಕ್ಕೆ ಸಜ್ಜಾಗಿದ್ದೇವೆ.ಅಮ್ಮನೆನ್ನುವವಳೂ ಹೊಸ ವರುಷಕ್ಕೆ ಹೊರಳಿದ್ದಾಳೆ ಎದೆಯ ತುಂಬಾ ಮಿಂಚು ತುಂಬಿಕೊಂಡು,ಕಣ್ಣ ಕೊಳದಲ್ಲೇ ಕಣ್ಣೀರಿಂಗಿಸಿಕೊಂಡು ಅವಳ ಜೀವಗಳಿಗೆ ಕನಸು ಹೊಸೆವ ಕಸುಬು ಮಾಡುತ್ತಾಳೆ, ಗಂಡ ಅವಳ ನಗುವ ಕಿತ್ತು ಸಾರಾಯಿ ಕುಡಿವಾಗ, ಕುಡಿಗಳಿಗಾಗಿ ತನ್ನ ನಗುವ ಕೊಂದು, ಅನ್ನ ಹುಟ್ಟಿಸುತ್ತಾಳೆ ಅಮ್ಮ. ವರ್ಷದ ತುಂಬಾ ಆ ತಾಯಿಗೆ ಒಂದು ಹಿಡಿ ನಗುವನ್ನಲ್ಲದೇ ಮತ್ತೇನು ಕೊಡಬಹುದು?

ಇವಳೊಬ್ಬಳಿದ್ದಾಳೆ, ಅವಳಿಗೆ ಒಂಟೊಂಟಿ ಭಾವದಲ್ಲಿ ಗಂಟುಬಿದ್ದಿರುವಾಗ ಅವನ ನೆನಪಾಗುತ್ತದೆ. ಮೇಸೇಜು ಮಾಡುತ್ತಾಳೆ. "ಸದಾ ಮೆಸೇಜು ಮಾಡಿಕೊಂಡು ಹರಟೆ ಹೊಡೆಯಲು ನಾವು ಚೈಲ್ಡಿಶ್ ಅಲ್ಲಾ... ಮೇಚ್ಯೂರ್‍ಡ್ ಆಗಿದ್ದೇವೆ.. ಬೆಳೆದ್ದೇವೆ..." ರಪ್ಪನೇ ಮೆಸೇಜು ರಾಚುತ್ತದೆ. ಹತ್ತಿರವಿದ್ದಾಗಲೂ ಮುಖ ಕೊಟ್ಟು ಮಾತಾಡದೇ ಮೊಬೈಲ್ ಕುಟ್ಟುತ್ತಿರುವ ಅವನ ಮೆಚ್ಯೂರ್‍ಡ್ ಚಿತ್ರ ಕಣ್ಣೆದುರು ಬಂದು ಫಳಕ್ಕನೇ ಹನಿಯೊಂದು ಉದುರತ್ತದೆ. ಅವಳು ಸುಮ್ಮನಾಗುತ್ತಾಳೆ.

ಬೈಕ್ ಎಂಬತ್ತಕ್ಕಿಂತ ಕಡಿಮೆ ಓಡಿಸಿದರೆ ಥ್ರಿಲ್ ಇಲ್ಲವೆನ್ನುವ, ಹೊಗೆ ಎಳೆದು ಸಿಕ್ಕುಬಿದ್ದರೂ ಮೀಸೆ ಮಣ್ಣಾಗದ, ಕಟ್ಟಿಕೊಂಡ ಕನಸುಗಳಿಗೆ ಎಳ್ಳುನೀರು ಬಿಟ್ಟು ಹೊರನಡೆದ, ಹದಿಹರೆಯದ ಚೆಲ್ಲಾಟಗಳಿಗೆ ಜೀವನ ತೆತ್ತುಬಿಡುತ್ತನೇನೋ ಅನ್ನುವಷ್ಟು ಭಯ ಹುಟ್ಟಿಸಿರುವ ಒಡಹುಟ್ಟಿದನೆಂದರೆ ಸಮುದ್ರವಿಹಾರಕ್ಕೆ ದೋಣಿಯಲ್ಲಿ ಹೋದವ ಈಜಿ ದಡ ಸೇರುತ್ತೇನೆಂದು ಇದ್ದ ದೋಣಿಯನ್ನೂ ಬಿಟ್ಟು ಸಮುದ್ರಕ್ಕೆ ಹಾರಿದ ಕನಸಸಷ್ಟೇ..!


ಸುತ್ತಲೂ ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಮಗಳು..ಇಂತದ್ದೇ ಕೌಟುಂಬಿಕ ಹೆಸರುಗಳನ್ನು ಕೊಟ್ಟುಕೊಂಡು ನಿಜದ ಸ್ನೇಹವಾ ಕಳೆದುಕೊಳ್ಳುತ್ತಿದ್ದೇವಾ? ಅನುಮಾನವಾಗುತ್ತೆ ನನಗೆ. ಇಂತಹ ಹೆಸರುಗಳು ಬೇಗ ಸೆಳೆಯುವುದು ನಿಜ..! ಆದರೆ ಅದೆಷ್ಟು ಜನ ಇಂತಹ ಹೆಸರುಗಳನ್ನು ಇಟ್ಟುಕೊಂಡು ನಮ್ಮ ಬದುಕಿನೊಳಗೆ ಕಾಲಿಡುವುದಕ್ಕೆ ಅರ್ಹರು..? ಅಥವಾ ನಾವೆಷ್ಟು ಅರ್ಹರು ಆ ಹೆಸರಿನಲ್ಲಿ ಅವರ ಮನೆ ಮನಸ್ಸಿನೊಳಕ್ಕೆ ಇಳಿಯುವುದಕ್ಕೆ..? ಮುಖವಾಡಗಳ ಬಾಳಿಕೆ ತುಂಬಾ ಕಡಿಮೆ. ಫೇಸ್‌ಬುಕ್ಕಿನಲ್ಲಿ ಫೀಲಿಂಗ್ ಸ್ಯಾಡ್ ಅನ್ನುವ ಸ್ಟೇಟಸ್ ಗೆ ಲೈಕು, ಕಾಮೆಂಟು ಮಾಡುವವರು, ಕಾಲ್ ಮಾಡಿ ವಿಚಾರಿಸುವವರೆಲ್ಲಾ ಆಪ್ತರೇ ಆಗಿದ್ದರೆ, ಮಾನವೀಯತೆಗಳು ಇವತ್ತು ನಡುಬೀದಿಯಲ್ಲಿ ಕೊಲೆಯಾಗುತ್ತಿರಲಿಲ್ಲವೇನೋ..! ಫೀಲಿಂಗ್ ಸ್ಯಾಡ್ ಅನ್ನುವಾಗ ಮಾತ್ರ ಇನ್ನಿಲ್ಲದ ಆಸ್ಥೆಯಿಂದ ಕೇಳುವವರಿಗೆ ನಮ್ಮ ನೋವುಗಳ ಬಗೆಗಿನ ಇನ್ಫರ್‌ಮೇಷನ್ ಬೇಕಿರುತ್ತದೆಯೇ ಹೊರತು ಅವುಗಳ ಶಮನವಲ್ಲ.. !


Life goes on..!
ಅಭದ್ರತೆ, ಅಸಹಾಯಕತೆ, ಅವಮಾನಗಳು ಎಲ್ಲದರ ನಡುವೆಯೂ ಜೀವನ ನಡೆಯುತ್ತಿರುತ್ತದೆ ಅದರ ಪಾಡಿಗೆ. ಬದುಕೆಂದರೆ ಸುಮ್ಮನಲ್ಲಾ, ಎಚ್ಚರದಿಂದ ನಡೆಯಬೇಕು ಅನ್ನುತ್ತಿರುತ್ತಾಳೆ ಅಜ್ಜಿ. ಇಟ್ಟ ಹೆಜ್ಜೆಗಳಿಗೆಲ್ಲಾ ಲೆಕ್ಕವಿಟ್ಟೇ ನಡೆಯುವುದಾಗಿದ್ದರೆ, ನೋವುಗಳು ಇಲ್ಲದ ಖುಷಿಗಳಿಗೂ ಒಲ್ಲದ ಬದುಕನ್ನ ಬದುಕುತ್ತಿರಬೇಕಾಗುತ್ತದೇನೋ..! ಬದುಕೆಂದರೆ ಬದುಕು ಅಷ್ಟೇ, ಕ್ಷಣಕ್ಷಣವನ್ನೂ ಹೀರಿ ಬದುಕುತ್ತೇನೆಂಬಂತೆ ಬದುಕಬೇಕಿದೆ.ಬದುಕಿಗೊಂದು ನಗೆಯ ತೀವೃತೆಯ ದಕ್ಕಿಸಿಕೊಡಬೇಕಿದೆ.

ಎಲ್ಲರ ಬದುಕೂ ಬಣ್ಣವಾಗಲಿ.
ಹೊಸ ವರ್ಷದ ಶುಭಾಶಯಗಳು1 ಕಾಮೆಂಟ್‌:

  1. ಹೊಸ ಮನೆಗೆ ಹೋಗುವಾಗ.. ಬೇಕಾದ ವಸ್ತುಗಳನ್ನು ಹೊತ್ತುಕೊಂಡು ಬೇಡದ ವಸ್ತುಗಳನ್ನು ಬಿಸಾಡಿ ಹೋಗುವ ರೀತಿಯಲ್ಲಿ.. ಹೊಸವರ್ಷಕ್ಕೆ ಒಂದು ಸುಂದರ ಲೇಖನ ಜೊತೆಯಲ್ಲಿ ಮನಸ್ಸಿಗೆ ಮುಕ್ಕಾಗುವ ಭಾವಗಳನ್ನು ಹೊರಗೆ ಬಿಸಾಡಿ... ಲೈಫ್ goes ಆನ್ ಎನ್ನುವ ಉದಾತ್ತ ಭಾವ ತೋರುವ ಸುಂದರ ಲೇಖನ
    ಇಷ್ಟ ಆಯಿತು ಪಿ ಎಸ್

    ಪ್ರತ್ಯುತ್ತರಅಳಿಸಿ