ಶುಕ್ರವಾರ, ಮಾರ್ಚ್ 20, 2015

ಹುಣ್ಣಿಮೆಯಿದ್ದಾಗಷ್ಟೇ ಉಕ್ಕುವುದಾ ಕಡಲು..?!


"In Relationship” ಅನ್ನುವುದ ಪ್ರತಿಷ್ಠೆಯಾಗಿ ಬೆಳೆದಿದ್ದ ಸಂದರ್ಭದಲ್ಲೇ ಅವರಿಬ್ಬರ ಚಂದದ ಲವ್‌ಸ್ಟೋರಿ ಶುರುವಾಗಿದ್ದು. ಮೂರನೇ ಬೆಂಚಿನ ಕೊನೆಯಲ್ಲಿ ಕೂತು ಎರಡನೇ ಬೆಂಚಿನ ಕೊನೆಯ ಇವಳನ್ನು ದಿನವೀಡಿ ದಿಟ್ಟಿಸಿ ಕೂತಿದ್ದಾಗ್ಯೂ ಕೂಡಾ ಕ್ಲಾಸಿಗೆ ಮೊದಲನೇ rank ಬರೋ ರೋಮಿಯೋಗೆ ಆತನ ಜೂಲಿಯಟ್ ಒಲಿದು ಬಿಟ್ಟಿದ್ದಳು. ಹದಿಹರೆಯಕ್ಕೆ ಬಣ್ಣ ಬಂದಿತ್ತು, ರೆಕ್ಕೆ ಹುಟ್ಟಿತ್ತು.

ಇದೀಗ ಓದು ಮುಗಿಸಿ ನೌಕರಿ ಹಿಡಿದಾಗಿದೆ ಇಬ್ಬರೂ. ಕಾಲ್ಗೆಜ್ಜೆ ತೊಡಿಸಿದ ಹುಡುಗಾ, “ಡೋಂಟ್ ಬಿ ಸಿಲ್ಲಿ" ಅನ್ನುವಷ್ಟು ದೊಡ್ಡವನಾಗಿದ್ದಾನೆ. ಪ್ರಪಂಚದಲ್ಲಿ ಇವನೊಬ್ಬನೇ ಬುದ್ಧಿವಂತ ಅಂದುಕೊಂಡಿದ್ದ ಹುಡುಗಿಗೆ ಜಗತ್ತು ಮುಖಾಮುಖಿಯಾಗಿದೆ. ಇವನಿಷ್ಟೆಯಾ ಅನಿಸಿದೆ.

ಮುಂಚಿನಂತೆ ಒಂಟಿಗಾಲಲ್ಲಿ ಗುಲಾಬಿ ಹೂವು ಹಿಡಿದು ನಿಂತು “ನೀನು ನನ್ನ ಹೃದಯಸಾಮ್ರಾಜ್ಞಿ" ಅನ್ನುತ್ತಾ ಅವ ರೋಮ್ಯಾಂಟಿಕ್ ಆಗುವುದಿಲ್ಲಾ. ಇವಳು "ಸಕಲವೂ ನೀನೊಬ್ಬನೇ" ಅನ್ನುತ್ತಾ ಅವನ ಗಂಡಸಿನ ಗತ್ತನ್ನು ಬಡಿದೆಬ್ಬಿ ಉಲ್ಲಾಸಿತನನ್ನಾಗಿ ಮಾಡುವುದಿಲ್ಲಾ.ಮದುವೆ ನಿಕ್ಕಿಯಾಗಿನಿಂದ ಅತ್ತೆ-ಮಾವನಿಂದ ಫೋನೇಫೋನು.ಇವಳಿಗೆ ಏನು ಮಾತಾಡಲಿ, ಹೇಗೆ ಮಾತಾಡಲಿ ಚಡಪಡಿಕೆ. ಮದುವೆ ಶಾಸ್ತ್ರ, ಸೀರೆ, ತಾಳಿ ಅಂತ ಅವರು ಅಷ್ಟು ಕಾಳಜಿ ತೋರುವಾಗ ಗಂಡನ ಮನೆಯಲ್ಲೂ ಅಮ್ಮನನ್ನ ಪಡೆದೆ ಎಂಬ ಖುಷಿಗೆ ಕಣ್ಣಕೊನೆಯಲ್ಲಿ ಜಾರುತ್ತದೆ ಸಣ್ಣ ಬಿಂದು.

ಇದನ್ನೆಲ್ಲಾ ಗೆಳತಿಗೆ ಹೇಳೋಣವೆಂದು ಫೋನೆತ್ತಿಕೊಂಡರೆ, ಮದುವೆಯಾದ ಮೂರನೇ ವರ್ಷಕ್ಕೆ ಗೆಳತಿ ಹೇಳುತ್ತಾಳೆ "ಅತ್ತೆಯಂದಿರು ಅಮ್ಮನಾಗುವುದಿಲ್ಲಾ ಕಣೇ..!" ಅಕ್ಷರಶ: ಬಿಕ್ಕುತ್ತಾಳೆ. ಅವಳಿಗೆ ಹೇಳಬೇಕೆಂದುಕೊಂಡಿದ್ದ ಮಾತು ಗಂಟಲಲ್ಲೇ ಸಿಕ್ಕಿಹಾಕಿಕೊಂಡು ಒದ್ದಾಡುತ್ತದೆ. ಅತ್ತೆಯ ಫೋನು ಇವಳು ರಿಸೀವು ಮಾಡುವುದಿಲ್ಲಾ ಮತ್ತೆ.ಈಗ್ಗೆ ಕೆಲವು ದಿನಗಳ ಹಿಂದೆ ರಾಮ್‌ಗೋಪಾಲ್‌ವರ್ಮಾನನ್ನು ಓದುತ್ತಿದ್ದೆ
ವೋಡ್ಕಾ ವಿತ್ ವರ್ಮಾ" ಓದುತ್ತಾ ಓದುತ್ತಾ.. ವರ್ಮಾ ಅದ್ಭುತ ವ್ಯಕ್ತಿಯಂತೆ ಕಂಡಿದ್ದ.

 ಅವನ ಬಗ್ಗೆ ಹೇಳಿದ ಎಲ್ಲರೂ ಅವನೊಬ್ಬ ಅಸಾಮಾನ್ಯನೆಂದೇ ಬಣ್ಣಿಸಿದರು. ಅವನ ಬಲಹೀನತೆಗಳನ್ನೂ ಹೆಮ್ಮೆಯಿಂದಲೇ ಪ್ರಚುರಪಡಿಸಿದರು. ಶ್ರೀದೇವಿ ಬಗ್ಗೆಗಿನ ಹುಚ್ಚನ್ನು ಮೆಚ್ಚಿಯೇ ಮಾತಾನಾಡಿದರು.ಟ್ವಿಟರ್‍ ಕುಟುಕುಗಳನ್ನು ಕೊಂಡಾಡಿದರು, ಹೆದರಿಕೆಯನ್ನುವುದೇ ಇಲ್ಲದ ಪ್ರಚಂಡನೆಂದರು.  

ಹೆಂಡತಿ-ಮಗಳನ್ನು ಬಿಟ್ಟರೂ ಊಹ್ಞೂಂ ಯಾರೂ ,"ಓಹ್..ಅವನಾ..!” ವೆಂದು ವ್ಯಂಗ್ಯವಾಡಲಿಲ್ಲ. ಅವನ ಕುಡಿತವನ್ನು ಬಲಹೀನತೆಯೆನ್ನಲಿಲ್ಲ.  

ಮುಂಬೈನ ತನ್ನ ಮನೆಯಲ್ಲಿ ಒಂಟಿ ಬದುಕು ಬದುಕುತ್ತಿದ್ದಾನಲ್ಲ ಇಷ್ಟಕ್ಕೆಲ್ಲಾ ಅವನೇ ಕಾರಣ ಎಲ್ಲರನ್ನೂ ಕಳಕೊಂಡ ಎಂದು ಕುಹಕವಾಡಲಿಲ್ಲಾ, ಅವನಿಷ್ಟದ ಬದುಕನ್ನು ಬದುಕುತ್ತಿದ್ದಾನೆ ಬದುಕಲಿ ಬಿಡ್ರಿ ನಿಮಗೇನು ಕಷ್ಟ ಅಂದರು..

-ಇದಕ್ಕೇ ವರ್ಮಾ ಹತ್ತಿರದಿಂದ ಕಾಣದೇ ಇದ್ದ ನಮಗೂ ಕಾಡುವುದು!

ಓದುತ್ತಾ ಹೋಗುವಾಗ ಸ್ಟಷ್ಟವಾಗುತ್ತಾ ಹೋಗುತ್ತದೆ..ಅವನು ಯಾರಿಗೂ ದಕ್ಕಲಿಲ್ಲವೆನ್ನುವ ಸತ್ಯ..ಸ್ವತಃ ತನ್ನ ಹೆಂಡತಿಗೂ..!  

ಆತ್ಮೀಯರೆದುರುಗೂ ಆತ್ಮರತಿ ಮಾಡಿಕೊಳ್ಳುತ್ತಾನೆಯೇ ಹೊರತು, ಆತ್ಮವ ತೆರೆದಿಟ್ಟು ಬೆತ್ತಲಾಗುವುದಿಲ್ಲಾ.ಅವನ ಮಿತಿಯದು. ಸಿಕ್ಕಿದವರಿಗಿಗೆಲ್ಲಾ, ಇಂತಿಷ್ಟೇ ಇಷ್ಟೆಂದು ಮೈಸೂರು ಪಾಕಿನ ಚಿಕ್ಕ ತುಣುಕಿನಂತೆ,ಹಾಗಲಕಾಯಿಯ ಪುಟ್ಟ ಹಸಿತುಂಡಿನಂತೆ  ಸಿಗುತ್ತಾನೆಯೇ ಹೊರತು, ಇಡೀಯಾಗಿ ಅಲ್ಲ. ಅತೀ ಸಿಹಿ ಅಥವಾ ಅತೀ ಕಹಿ ಮನುಷ್ಯರಾದ ನಮಗೆ ವ್ಯರ್ಜ್ಯ. ಅದು ಚೆನ್ನಾಗಿ ವರ್ವಾನಿಗೆ ಗೊತ್ತು.  

ಅದಕ್ಕೆ ಅವನೆಡೆಗೆ ನಮ್ಮಗಳಿಗೆ ಇರುವ ಕುತೂಹಲ ಕದಡದಂತೆ ಕಾಪಾಡಿಕೊಂಡಿದ್ದಾನೆ ಅಂವ. ಕಮಿಟ್‌ಮೆಂಟುಗಳು ಆತ್ಮೀಯತೆಯನ್ನ/ಪ್ರೀತಿಯನ್ನ ಸಾಯಿಸುತ್ತದಾ..? ಹಾಗಿದ್ದರೆ ವರ್ಮಾ ಕಮಿಟ್ಟ್ ಆಗುವುದೇ ಇಲ್ಲಾ


ಅವನ/ಳ ಕಂಡರೆ ಚಿಟ್ಟೆಯೊಂದು ಹೊಟ್ಟೆಯೊಳಗೆ ಕಚಗುಳಿ ಇಟ್ಟಿತ್ತಲ್ಲಾ.. ಅವಳ/ನ್ನೇ ತಾನೇ ಇದೀಗ ಪ್ರೀತಿಸಿ ಮದುವೆಯಾಗಿರುವುದು. ಯಾಕೆ ಒಳಗೆ ಚಿಟ್ಟೆಯ ಸದ್ದಿಲ್ಲಾ ಈಗ?

ಹೊಸದಾಗಿ ಮದುವೆಯಾದ ಜೋಡಿಗೆ ವರ್ಷ ಕಳೆವಷ್ಟರಲ್ಲಿ ಎಲ್ಲರಿದ್ದಾಗ ಟೇಬಲ್ ಕೆಳಗೆ ಕೈಕೈ ಹಿಡಿದುಕೊಂಡು ತಮ್ಮ ಲೋಕದಲ್ಲಿ ವಿಹರಿರೋ ಉಮೇದಿರುವುದಿಲ್ಲಾ.

ಮೊದಮೊದಲು ಅಮ್ಮನಿಗಿಂತಲೂ ಒಂದು ಕಾಳು ಹೆಚ್ಚೇ ತೂಗುತ್ತಿದ್ದ ಅತ್ತೆಯ ಪ್ರೀತಿ ಈಗ "ಸೊಸೆ ಸರಿಯಿಲ್ಲಾ"ವೆನ್ನುವ ಸ್ಥಿತಿಗೆ ತಲುಪಿದೆ.. ಸೊಸೆಗಾದರೂ ಅತ್ತೆಯಲ್ಲಿ ಮೊದಲಿನಂತೆ ತನ್ನಮ್ಮ ಕಾಣದೇ ಗಂಡನಮ್ಮನಷ್ಟೇ ಕಾಣುತ್ತಾಳೆ.

ಮೊದಲು ಪಿಜಿಗೆ ಬಂದಿದ್ದಾಗ ಯಾವುದೋ ಸಾಫ್ಟವೇರ್‍ ಡಿಸೈನ್ ಮಾಡುವ ಹುಡುಗಿ ಅದೆಷ್ಟು ಅದ್ಬುತ ಕಲೆಯನ್ನು ಕರಗತ ಮಾಡಿಕೊಂಡಿರುವ ಕಲೆಗಾತಿಯಂತೆ ಕಂಡಿದ್ದಳು. ಈಗ ಅವಳು "ಕಲೆ"ಯಂತೆಷ್ಟೇ ಕಾಣುತ್ತಾಳೆ. ಕಳೆಕಳೆಯಾಗಿ ಅಲ್ಲ
ಹೆಂಡತಿಯೆನ್ನುವವಳು ಸದಾ ಕಿರಿಕಿರಿಯ ಮೂಟೆ ಎಂದು ಗೊಣಗಿಕೊಳ್ಳುವಾಗಲೇ ಫೇಸ್‌ಬುಕ್ಕಿನಲ್ಲಿ ಅವನ ಹಳೆಯ ಪ್ರೀತಿ ಸಿಕ್ಕಿಬಿಡುತ್ತಾಳೆಂದುಕೊಳ್ಳಿ ಅವನ ಉತ್ಸಾಹ ಚಿಗಿತುಕೊಳ್ಳುತ್ತದೆ,ನವಯುವಕನಾಗಿ ಬಿಡುತ್ತಾನೆ ಅವ.  

ಇವಳು ತನ್ನ ಹಳೆಯ ಕ್ರಶ್ ಫೇಸ್ಬುಕ್ಕಿನಲ್ಲಿ ತನ್ನ ಫೋಟೋ ಲೈಕ್ ಮಾಡಿದನೆಂದು ಬೀಗುತ್ತಾಳೆ. ಇದು ಅವರವರ ಮಿತಿಯಲ್ಲಿ ಅವರವರು ಕಂಡುಕೊಳ್ಳುವ ಗೀಟು ಎಳೆದುಕೊಂಡು ಪಡುವ ಮತ್ತು ಗೀಟು ದಾಟಬಾರದಾದ ಸುಖಗಳು. 

ಒಬ್ಬರನ್ನೊಬ್ಬರು ಅರಿತುಕೊಂಡು ಪ್ರೀತಿಸಿ ಮದುವೆಯಾದವರೂ ಕೂಡಾ ಯಾಕೆ ಮದುವೆಯಾದ ಮೇಲೆ ಮನಸ್ಸುಗಳ ಮುರಿದುಕೊಳ್ಳುತ್ತಾರೆ. ಅಣ್ಣ-ತಮ್ಮಂದಿರು ದಾಯಾದಿಗಳಾಗುತ್ತಾರೆ.ವಾರಗಿತ್ತಿಯರು ಜುಟ್ಟು ಹಿಡಿದುಕೊಳ್ಳುತ್ತಾರೆ.ಅತ್ತೆ-ಸೊಸೆಯರದ್ದು ನಿತ್ಯಕದನ. ವರ್ಷಾನುಗಟ್ಟಲೇ ಪ್ರೀತಿಸುತ್ತಿದ್ದವರು ಮದುವೆಯಾಗುತ್ತೆವೆಂದು ಹೊರಟು ಭವಿಷ್ಯದ ಪ್ಲಾನ್ ಮಾಡುವಾಗ ಕದನಕ್ಕೆ ನಿಲ್ಲುತ್ತಾರೆ
 

ಯಾಕೆ ಹೀಗೆ..?!
ನಮ್ಮವರು ಎಂದುಕೊಂಡಿರುವ ಎಲ್ಲರ ಜೊತೆಯೂ ನಾವು ಜೀವನ ಮಾಡುತ್ತಿರುವುದಿಲ್ಲಾ.ಒಂದೇ ಮನೆಯಲ್ಲಿ ಇರುತ್ತಿರುವುದಿಲ್ಲಾ.. ದಿನಕ್ಕೊಮ್ಮೆ ಸಿಗಲೇಬೇಕೆಂದು ನಿಯಮ ಹಾಕಿಕೊಂಡಿರುವದಿಲ್ಲಾ. 

ದೂರದಿಂದ ನಿಂತು ಹಾಯ್ ಮಾಡಿರುತ್ತೆವಷ್ಟೇ, ಪ್ರತಿಯಾಗಿ ಅವರೊಂದು ಹಾಯ್ ಮಾಡಿರುತ್ತಾರಷ್ಟೇ! :ಓಹ್! ಇಷ್ಟೇನಾ..” ಅನ್ನುವ ಭಾವನೆ ಬರುವುದಕ್ಕೆ ಅವಕಾಶವಿರುವುದಿಲ್ಲಾ ಅಲ್ಲಿ. ಅದಕ್ಕೆ ಅವುಗಳು ನಮ್ಮ ಪಾಲಿನ ಎವರ್‌ಗ್ರೀನ್ ನೆನಪುಗಳು ಮತ್ತು ಖುಷಿಯ ಮೂಟೆಗಳು,

ದಿನಾ ಜೊತೆಜೊತೆಯಲ್ಲೇ ಸಾಗೋ ಸಂಬಂಧಗಳು ಹಾಗಲ್ಲ.ಕ್ರಮೇಣ ಬಂಧ ಬಂಧನವಾಗುವ ಎಲ್ಲಾ ಸಾಧ್ಯತೆಗಳೂ ಇವೇ ಅಲ್ಲಿ. ಸಂಬಂಧ ಮತ್ತು ಅದರಿಂದ ಸಹಜವಾಗಿ ಬರಬಹುದಾದ ಕಮಿಟ್‌ಮೆಂಟ್‌ಮೆಂಟ್‌ನ ತೂಕ ಜಾಸ್ತಿ ಇಲ್ಲಿ.

 ಕ್ರಶ್ಶುಗಳಿಗೆ, ಪ್ರೀತಿಗಳಿಗೆ, ಆಕರ್ಷಣೆಗಳಿಗೆ ಇಂತಹ ಕಟ್ಟುಪಾಡುಗಳಿರುವುದಿಲ್ಲಾ. ಸಂಬಂಧಗಳು ಕಮಿಟ್‌ಮೆಂಟ್‌ ಬೇಡುತ್ತದೆ. ನಾವು ಸೂಕ್ಷ್ಮತೆ ಕಳಕೊಂಡರೆ ಕಮಿಟ್‌ಮೆಂಟ್‌ಗಳು ನಮ್ಮ ನಮ್ಮ ನಡುವೆ ನಾವು ಉಳಿಸಿಕೊಳ್ಳಬಹುದಾದ ಚಿಕ್ಕಚಿಕ್ಕ ಸಂಗತಿಗಳನ್ನು, ಕುತೂಹಲಗಳನ್ನು ವ್ಯಾನಿಷ್‌ ಮಾಡಿ ಬಿಡುತ್ತದೆ ಹಾಗಾಗದಂತೆ ನೋಡಿಕೊಳ್ಳುವುದರಲ್ಲಿ ನಮ್ಮ ಖುಷಿಯಿರುವುದು..!

ವರ್ಮಾನಂತೆ ಕಮಿಟ್ಟೇ ಆಗದೇ ಇರುವುದರಲ್ಲಿ ಸಂತಸವಿದ್ದೀತಾ..?! ನೀರಿನ ಚಳಿಗೆ, ಬೆಂಕಿಯ ಬಿಸಿಗೆ ಹೆದರಿಕೊಂಡು ದೂರ ನಿಂತರೆ ಜೋಳಿಗೆ ಭರ್ತಿ ಖಾಲಿಯೇ..

ಜೊತೆಯಲ್ಲಿದ್ದುಕೊಂಡೇ ಬೊಗಸೆ ತುಂಬಾ ಪ್ರೀತಿಯೆಂಬ ಜೀವಜಲ ಹಿಡಿದು ತನ್ನವರಿಗೆ ಕುಡಿಸಿ, ಕುಡಿಯುವುದಿದೆಲ್ಲಾ ಅಲ್ಲಿದೆ ನಿಜವಾದ ಖುಷಿಯಿದೆ.

ಪ್ರೀತಿ ಸಂಬಂಧವಾಗುವ ಹೊತ್ತಿನಲ್ಲಿ, ಸಂಬಂಧಗಳಲ್ಲಿ ಪ್ರೀತಿ ಉಳಿಸಿಕೊಳ್ಳೋದು ಈ ಹೊತ್ತಿನ ಜರೂರು! 
ಹಾಗಾದಾಗ,
ಟೀನೇಜಲ್ಲಿ ಶುರುವಾದ ಪ್ರೀತಿ ಬದುಕು ಕಟ್ಟಿಕೊಟ್ಟೀತು.
ಗಂಡ ರೋಮ್ಯಾಂಟಿಕ್ ಆದಾನು.
ಸೊಸೆ ಅತ್ತೆಯಲ್ಲಿ ಅಮ್ಮನನ್ನ ಮತ್ತೆ ಕಂಡಾಳು.
ವರುಷದ ನಂತರವೂ ನವದಂಪತಿಗಳು ಕಿಲಕಿಲ ಪಿಸುಗುಟ್ಯಾರು.
ಹೆಂಡತಿ ಹಳೆ ಪ್ರೇಯಸಿಗಿಂತ ಮಿಗಿಲಾಗಿ ಕಂಡಾಳು.
ಮನಸ್ಸುಗಳು ಒಂದಾದೀತು
 
ಅಂದು ಹುಣ್ಣಿಮೆಯಿಲ್ಲದಿದ್ದಾಗ್ಯೂ ಉಕ್ಕೀತು ಕಡಲು ಚಂದಿರನೆಡೆಗೆ..!