ಭಾನುವಾರ, ಜೂನ್ 21, 2015

ಅಪ್ಪನೆನ್ನುವ ನನ್ನ ಸಡಗರಕ್ಕೆ ಹ್ಯಾಪ್ಪಿ ಫಾದರ್ಸ್ ಡೇ


ಇವತ್ತು ಅಪ್ಪಂದಿರ ದಿನವಂತೆ!

ಇಂತದ್ದೊಂದು ದಿನವಿರುವ ಅರಿವಾದಂದಿನಿಂದ ಪ್ರತಿಸಲವೂ ಬೆಳಿಗ್ಗೆ ಬೇಗ ಎದ್ದು ಅಪ್ಪನಿಗೆ ಫೋನಾಯಿಸುತ್ತೇನೆ. “ಹ್ಯಾಪಿ ಫಾದರ್‍ಸ್ ಡೇ ಅಪ್ಪಾ" ಅನ್ನುತ್ತೇನೆ. ಅಪ್ಪನಿಗೆ ಇಂತದ್ದೆಲ್ಲಾ ದಿನಗಳ ಕುರಿತು ಆಸ್ಥೆಯಿಲ್ಲವಾದರೂ ಮಗಳ ಮಾತಿಗೆ ಮರು ಮಾತನಾಡದೇ "ಥಾಂಕ್ಯೂ ಮಗಳೇ" ಅನ್ನುತ್ತಾರೆ. ನನಗೂ ಸಹ "ದಿನ"ಗಳ ಬಗ್ಗೆ ವಿಶೇಷ ಅಕ್ಕರೆಯಿರಲಿಲ್ಲ.ಆದರೆ ಈ ದಿನಗಳು ಒಮ್ಮೆ ನಮ್ಮನ್ನೊಮ್ಮೆ ತಿರುಗಿ ನೋಡುವಂತೆ ಮಾಡುತ್ತಲ್ಲ, ನಂಟಿನ ಖುಷಿಯಗಳನ್ನು ಮತ್ತೆ ಮೆಲ್ಲುವ ಹಾಗೆ ಮಾಡುತ್ತಲ್ಲ ಅದಕ್ಕಾಗಿ ಆಪ್ತವೆನಿಸುತ್ತೆ ಈ ಆಚರಣೆಗಳು.
ಅಪ್ಪ ಎಂದಾಗ ನೆನಪಿನ ಖಜಾನೆಯಲ್ಲಿ ಬರೀ ಸಿಹಿಗಳಷ್ಟೇ ತೆರೆದುಕೊಳ್ಳುವುದು.ಅಪ್ಪನ ಜೊತೆಗಿನ ನೆನಪುಗಳು ನನ್ನ ಸದಾ ರಾಜಕುಮಾರಿಯನ್ನಾಗಿಸುತ್ತವೆ.. ಅಮ್ಮ "ಅಪ್ಪನದೇ ಮಗಳು" ಎಂದು ಬೈಯ್ಯುವಾಗ ಹೆಮ್ಮೆಯೆಸುತ್ತದೆ. ಪುಟ್ಟವಳಿದ್ದಾಗ ಅಪ್ಪನ ಹೆಗಲೇರಿ ನೋಡಿದ ಯಕ್ಷಗಾನ, ತೋಳಲ್ಲೇ ಹೋದ ನಿದ್ದೆಗಳು ಬದುಕಿನ ಸ್ಫೂರ್ತಿ ಚಿಲುಮೆಗಳು. ಬೆನ್ನ ಮೇಲೆ ಹೊತ್ತೇ ಸೇತುವೆ ದಾಟುತ್ತಿದ್ದ ಅಪ್ಪನೆಂದರೆ ನನಗೀಗಲೂ ಸೋಜಿಗ. ಅಷ್ಟು ಸಣ್ಣ ಅಡಿಕೆ ಮರದ ಸೇತುವೆಯಲ್ಲಿ ನನ್ನೂ ಹೊತ್ತುಕೊಂಡು ಅಪ್ಪ ನದಿ ದಾಟುತ್ತಿದುದು ಹೇಗೆ?! ನನ್ನತ್ತೆ ಅನ್ನುವುದಿದೆ ಮಗಳ ಕಾಲು ನೆಲ ನೋಡಿಲ್ಲವಂತೆ ಆಗ. ರಾತ್ರಿ ನಿದ್ದೆಗೂ ಅಪ್ಪನದೇ ಹೊಟ್ಟೆಯಾಗಬೇಕಿತ್ತು! ಅಪ್ಪನ ಡುಮ್ಮು ಹೊಟ್ಟೆಯ ಮೇಲೆ ಮಗಳ ಸುಖ ನಿದ್ದೆ.ಹುಟ್ಟುಹಬ್ಬಗಳನ್ನು ವಿಶೇಷವಾಗಿಸಿದ್ದು ಅಪ್ಪನೇ. ಹೊಸ ಬಟ್ಟೆ ,ಕೇಕುಗಳು, ಚಾಕಲೇಟ್ಸ್‌ಗಳು.. ವಾಹ್.. ಹುಟ್ಟುಹಬ್ಬಕ್ಕೆ ಕಾಯುವ ಹಾಗೆ ಮಾಡುತ್ತಿತ್ತು. ಅಪ್ಪ ಕೊಡಿಸಿದ ಬಟ್ಟೆಗಳ ಸೊಗಸೇ ಬೇರೆ. ಅವರು ಕೊಡಿಸುವ ಪ್ರತಿಯೊಂದಕ್ಕೂ ಸಂಭ್ರಮವಿದೆ. ದುಡಿಯುವುದಕ್ಕೆ ಶುರುಮಾಡಿದ ಮೇಲೂ ಅಪ್ಪನ ಕಿಸೆಯಲ್ಲಿನ ದುಡ್ಡಿಂದ ಐಸ್‌ಕ್ಯಾಂಡಿ ತಿನ್ನುವುದರಲ್ಲಿ ಆನಂದವಿದೆ. ಆದರೆ ನನ್ನಪ್ಪ ಜಿಪುಣರು! ಯಾವ ಹುಟ್ಟುಹಬ್ಬಕ್ಕೂ ಸಂಜೆ ೭.೨೦ರ ಮೊದಲು ವಿಶ್ ಮಾಡಿದ ಹಿಸ್ಟರಿ ಇಲ್ಲ. ಗೆಳೆಯರೆಲ್ಲಾ ರಾತ್ರಿ ಹನ್ನೆರಡರಿಂದ ಶುರು ಮಾಡಿ, ಅಮ್ಮನೂ ಬೆಳಿಗ್ಗೆ ಎದ್ದು ಫೋನ್ ಮಾಡಿ ವಿಶ್ ಮಾಡಿದ್ರೂ ನನ್ನಪ್ಪನ ಸುದ್ದಿ ಇರುವುದಿಲ್ಲ. "ಅಪ್ಪನಿಗೆ ನೆನಪು ಮಾಡಮ್ಮ ನನ್ನ ಬರ್ತಡೇ ಅಂತ" ಅಮ್ಮನಿಗೆ ಗೋಗರೆದರೆ " ನೆನಪಿಲ್ಲದೇನು ಕಾಯ್ತಾ ಇದ್ದಾರೆ ೭.೨೦ ಕ್ಕೆ" ಅಮ್ಮನ ಉತ್ತರ. ಸಂಜೆಯ ಹೊತ್ತಿಗೆ ಎಲ್ಲರದ್ದೂ ವಿಶ್‌ಗಳು ಮುಗಿದ ಮೇಲೆ ಅಪ್ಪ ಕಾಲ್ ಮಾಡ್ತಾರೆ. "ಈಗ ನನ್ನ ಮಗಳು ಹುಟ್ಟಿದ್ದು"ಎನ್ನುತ್ತಾ. ಅಪ್ಪನ ಆ ಮಾತು ಕೇಳುತ್ತಿದ್ದಂತೆಯೇ ನನಗೆ ಹೊಸ ಹುಟ್ಟಿನ ಸಂಭ್ರಮ ಪ್ರತಿವರ್ಷ.ಜಗತ್ತಿನ ಪ್ರತಿ ಮಗಳ ಕಥೆಯೂ ಇದೇ ಇರಬೇಕು! ಅಪ್ಪನೆನ್ನುವ ಸೂಪರ್‌ಮ್ಯಾನ್‌ನ ಮುಚ್ಚಟೆ ಗೊಂಬೆಗಳವರು. ಜ್ವರ ಬಂದು ನರಳುವಾಗ, ಕಾಲು ನೋವಾಗಿ ಅಳುವಾಗ ಪಿಜಿಯ ನಾಲ್ಕು ಗೋಡೆಗಳ ದಿವ್ಯಸಮ್ಮುಕದಲ್ಲಿ ಅಪ್ಪನ ನೆನಪಿಗೆ ತೀವೃತೆ ಬಂದು ಬಿಡುತ್ತದೆ. ಅಪ್ಪನಿದಿದ್ದರೇ ಹತ್ತಿರ..?! ಅವರ ಜಗತ್ತಿನ ಅಷ್ಟೂ ಕೆಲಸಗಳನ್ನೂ ಬಿಸುಟಿ ಮಗಳ ಹತ್ತಿರ ಕೂತುಬಿಡುತ್ತಿದ್ದರಲ್ಲಾ? ಆ ದಿನಗಳ ನೆನಪಾಗುತ್ತದೆ. ಅಷ್ಟಕ್ಕೂ ಅಪ್ಪನೆಂದರೆ ಮುದ್ದಷ್ಟೆಯಾ?! ಅಪ್ಪ ಬಯ್ಯವುದಿಲ್ಲ.. ಹೊಡೆಯುವುದಿಲ್ಲ ಅಮ್ಮನಂತೆ. ಮಕ್ಕಳು ತಪ್ಪು ಮಾಡಿದರಾ..? ಅವರ ಕೆಂಗಣ್ಣು ಮಾತಾನಾಡುತ್ತದೆ. ನಾವು ತೆಪ್ಪಗಾಗುತ್ತೇವೆ.
ಅಪ್ಪನೆಂದರೆ ಹೀಗೇ..!

ಮಗಳ ಪಾಲಿಗೆ ಪ್ರೀತಿ ಸಾಗರ. ಜಗತ್ತಿನಲ್ಲಿದೆ ಅನ್ನಬಹುದಾದ ಅಷ್ಟೂ ಪ್ರೀತಿಯನ್ನೂ ನನಗೆ ಮೊಗಮೊಗೆದು ಕೊಟ್ಟ ನನ್ನಪ್ಪನಿಗೆ ಅಪ್ಪಂದಿರ ದಿನದ ಖುಷಿಗೆ ಬಿಗ್ ಹಗ್ಸ್.. ಲವ್‌ ಯೂ.. ಎವರ್‍ & ಫಾರೆವರ್‍..-ಅಪ್ಪನ ಮಗಳು

{ಅಪ್ಪನೆಡೆಗಿನ ನನ್ನ ಖುಷಿ 19-06-2015ರ ಕನ್ನಡಪ್ರಭ.ಕಾಂ ನಲ್ಲಿ ಪ್ರಕಟಗೊಂಡಿದೆ. 
ಕೊಂಡಿ: http://goo.gl/zc54DB}