ಬುಧವಾರ, ನವೆಂಬರ್ 4, 2015

ಕನ್ನಡ ಚಿತ್ರರಂಗದಲ್ಲಿ ಕನ್ನಡ

ಕನ್ನಡ ಭಾಷೆಯು ಶ್ರೀಮಂತವಾಗುವಲ್ಲಿ ಕನ್ನಡ ಚಿತ್ರರಂಗದ್ದು ಸಿಂಹಪಾಲು. ಕಾಲಕಾಲಕ್ಕೆ ಬದಲಾಗುತ್ತಿರುವ ತಂತ್ರಜ್ಞಾನಗಳು, ಮನಸ್ಥಿತಿಗಳು, ಪ್ರೇಕ್ಷಕ ವರ್ಗಗಳ ಅಭಿರುಚಿ ಇವೆಲ್ಲದರ ಜೊತೆಜೊತೆಗೆ ತನ್ನನ್ನು ತಾನು ತೊಡಗಿಸಿಕೊಂಡು ಸಧಬಿರುಚಿಯ ಚಿತ್ರಗಳನ್ನು ಬಡಿಸುತ್ತಾ ಕನ್ನಡ ಚಿತ್ರಗಳ ಮಾರುಕಟ್ಟೆ ಹೆಚ್ಚಿಸುತ್ತಾ ಬಂದಿರುವುದು ಕನ್ನಡ ಚಿತ್ರರಂಗದ ಹೆಗ್ಗಳಿಕೆ. ಭಾಷಾ ಬೆಳವಣಿಗೆಗೆ, ಉಳಿಕೆಗೆ ತಕ್ಕಂತಹ ಸಾಮಾಜಿಕ,ರಾಜಕೀಯ ನೆಲಗಟ್ಟಿನ ಚಿತ್ರಗಳ ಹೊರತಾಗಿಯೂ ಭಾಷೆಯ ಮೇಲೆ ಅಭಿಮಾನ ಉಕ್ಕಿಸುವುಂಥಹ ಚಿತ್ರಗಳನ್ನು ಕನ್ನಡದ ಮಡಿಲಿಗೆ ಚಿತ್ರರಂಗ ಹಾಕುತ್ತಲೇ ಬಂದಿದೆ. ಅಂದಿನ "ಮಯೂರ"ದಿಂದ ಹಿಡಿದು ಇಂದಿನ "ಸಂಗೊಳ್ಳಿ ರಾಯಣ್ಣ" ನವರೆಗೂ ಆ ಪರಂಪರೆ ನಿರಂತರವಾಗಿ ಬೆಳೆದು ಬಂದಿದೆ. ಇಂತಹ ಚಿತ್ರಗಳು ಕನ್ನಡಿಗನೆದೆಯಲ್ಲಿ ಹುಟ್ಟಿಸುವ ನಮ್ಮತನದ ಬಿರುಸಿನ ಸೊಗಸು ಅಪೂರ್ವ. ಕನ್ನಡ ಪ್ರೇಕ್ಷಕನಾದರೂ ಇಂತಹ ಚಿತ್ರಗಳನ್ನು ಗೆಲ್ಲಿಸುತ್ತಲೇ ಬಂದಿದ್ದಾನೆ. ಕನ್ನಡ,ಕರ್ನಾಟಕಗಳ ಕುರಿತ ಚಿತ್ರಗಳು ತೆರೆಕಾಣುತ್ತಲೇ ಇದೆ. ಕನ್ನಡಿಗನೆದೆಯಲ್ಲಿ ಕನ್ನಡಾಂಬೆಯ ಧ್ವಜವನ್ನು ಹಾರಿಸುತ್ತಲೇ ಇದೆ ಕನ್ನಡ ಚಿತ್ರರಂಗ.

ಚಿತ್ರಗಳಷ್ಟೇ ಅಲ್ಲದೇ ಹಾಡುಗಳು ಕೂಡಾ 'ಕನ್ನಡ'ದ ಕೆಲಸವನ್ನು ಮಾಡುತ್ತಲೇ ಬಂದಿದೆ. ಅಂದಿನ,
" ಕನ್ನಡದ ಅಕ್ಷರಮಾಲೆ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ" ಯಿಂದ ಹಿಡಿದು ಇತ್ತೀಚಿನ
"ಕರುನಾಡೇ ಕೈ ಚಾಚಿದೆ ನೋಡೆ ಹಸಿರುಗಳೇ ಆ ತೋರಣಗಳೇ" ವರೆಗೂ ಕನ್ನಡ ಚಲನಚಿತ್ರಗೀತೆಗಳಲ್ಲಿ ಕನ್ನಡದ ಕುರಿತಾದ ಹಾಡುಗಳದ್ದು ಮೇಲುಗೈ. ಹಾಡುಗಳ ಸಂಗೀತವೂ ಕೇಳಿ ಮರೆಯುವಂತದ್ದಲ್ಲ. ಅಂದಿನ ಹಾಡುಗಳು ಇಂದೂ ಜನಮಾನಸದಿಂದ ಮರೆಯಾಗಿಲ್ಲ. ಇಂತಹ ಸಾಧನೆಗಳ ಹಿಂದೆ ಕನ್ನಡದ ಅನೇಕ ನಿರ್ದೇಶಕರುಗಳ,ಸಾಹಿತಿಗಳ, ಸಂಗೀತಗಾರರ, ಹಾಡುಗಾರರ ಅನನ್ಯ ಪರಿಶ್ರಮ,ಪ್ರೀತಿಗಳಿವೆ.

ಎಪ್ಪತ್ತು-ಎಂಭತ್ತರ ದಶಕ ಕನ್ನಡ ಚಿತ್ರರಂಗದ ಸುಭೀಕ್ಷಕಾಲ. ಪುಟ್ಟಣ್ಣ ಕಣಗಾಲ್ ಎಂಬ ಮಾಂತ್ರಿಕನ ಕನ್ನಡ ಚಿತ್ರಗಳನ್ನು ಕಂಡು ಇಡೀಯ ಭಾರತ ಚಿತ್ರರಂಗ ಬೆಕ್ಕಸಬೆರಗಾಗಿತ್ತು. ಸಾಮಾಜೀಕ ನೆಲೆಗಟ್ಟಿನಲ್ಲಿ ಮೂಡಿಬಂದ ಅವರ ಚಿತ್ರಗಳದ್ದೇ ಒಂದು ಚರಿತ್ರೆ. ಡಾ||ರಾಜ್‌ ಅವರು ಕನ್ನಡ ಚಿತ್ರರಂಗದ ಹೆಮ್ಮೆ. ಹಂಸಲೇಖ ಅವರ ಸಾಹಿತ್ಯ-ಸಂಗೀತಗಳಿರಬಹುದು, ಉಪೇಂದ್ರರ "ಓಂ"ಕಾರವಿರಬಹುದು, ಕನ್ನಡ ಚಿತ್ರಗಳನ್ನು ಶ್ರೀಮಂತವಾಗಿ ಪ್ರೇಕ್ಷಕನಿಗೆ ತೋರಿಸಿದ ನಿರ್ದೇಶಕ ರವಿಚಂದ್ರನ್‌ ಇರಬಹುದು, ಇತ್ತೀಚೆಗೆ ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮಟ್ಟದ ಸದ್ದಾಗಿಸಿದ ಲೂಸಿಯಾ,ರಂಗಿತರಂಗ ಮುಂತಾದ ಚಿತ್ರಗಳ ಚಿತ್ರತಂಡಗಳಿರಬಹುದು ಹೀಗೆ ಅನೇರಿದ್ದಾರೆ ಇಲ್ಲಿ ಕನ್ನಡದ ಕುರಿತು ಜಗದ ಗಮನ ಸೆಳೆಸಿದವರು. ಕನ್ನಡವನ್ನು ತಮ್ಮ ಕ್ಷೇತ್ರಗಳಲ್ಲಿ ಪ್ರತಿನಿಧಿಸಿ, ಕನ್ನಡತನವನ್ನು ಎತ್ತಿ ಹಿಡಿದವರು.

ಕನ್ನಡದ ಕುರಿತು ಚಿತ್ರರಂಗ ಪ್ರೀತಿ ಸಿನೆಮಾ ಮತ್ತು ಸಿನೆಮಾದ ಹಾಡುಗಳಿಗಷ್ಟೇ ಸೀಮಿತವಾಗಿಲ್ಲ. ಕನ್ನಡದ ತಾರೆಗಳು ಕನ್ನಡಕ್ಕಾಗಿ,ಕರ್ನಾಟಕಕ್ಕಾಗಿ ಚಿತ್ರಗಳ ಹೊರತಾಗಿಯೂ ನಿಲ್ಲುತ್ತಾರೆ, ಹೋರಾಡುತ್ತಾರೆ. ಆ ಮೂಲಕ "ಕನ್ನಡ"ವಷ್ಟೇ ನಮ್ಮ ಆದ್ಯತೆ ಅನ್ನುವುದನ್ನು ಮಾತು ಮತ್ತು ಕೃತಿ ಎರಡರಲ್ಲಿಯೂ ಸಾಬೀತು ಪಡಿಸುತ್ತಾರೆ.

ಗೋಕಾಕ್ ಚಳುವಳಿ:
ಆಗ ಕರ್ನಾಟಕ ರಾಜ್ಯ ಉದಯವಾಗಿ ಎರಡು ದಶಕಗಳೇ ಸಂದಿತ್ತು. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಅಧಿಪತ್ಯ ಇಲ್ಲದೇ ಇರುವಿಕೆಗಳು ಕನ್ನಡಿಗರ ಮನನೋಯಿಸಿತ್ತು. ಗೋಕಾಕ ವರದಿಯ ಪ್ರಕಾರ ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಅನುಷ್ಠಾನಗೊಳಿಸುವುದಕ್ಕಾಗಿ ೧೯೮೨ನೇ ಇಸವಿಯಲ್ಲಿ ಕರ್ನಾಟಕದ ಎಲ್ಲೆಲ್ಲೂ ಒಂದು ಅಭೂತಪೂರ್ವ ಹೋರಾಟ ನಡೆಯಿತು. ಡಾ||ರಾಜ್ ಎನ್ನುವ ದ್ರುವತಾರೆ ಅಂದು ಕನ್ನಡಕ್ಕಾಗಿ ಮುಂದಾಳತ್ವವಹಿಸಿಕೊಂಡು "ಗೋಕಾಕ್ ಚಳುವಳಿ"ಗೆ ಆನೆಬಲ ತಂದುಕೊಟ್ಟರು. ಡಾ||ರಾಜ್ ಹಿಂದೆ ಇಡೀಯ ಕನ್ನಡ ಚಿತ್ರರಂಗ ನಿಂತಿದ್ದು ಈಗ ಇತಿಹಾಸ.

ಕಾವೇರಿ ಗಲಾಟೆ:
ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ "ಕಾವೇರಿ ಗಲಾಟೆ"ಯಲ್ಲೂ ಕನ್ನಡ ಚಿತ್ರರಂಗದ್ದು ಕರ್ನಾಟಕದ ಪರವಾಗಿನ ಸಕಾರಾತ್ಮಕ ನಿಲವು. ಅಂಬರೀಷ್‌ ಅವರು ತಮ್ಮ ಚಿತ್ರರಂಗದ ಗೆಳೆಯರ ಜೊತೆಗೂಡಿ ತಮಿಳುನಾಡಿಗೆ ನೀರು ಸರಬರಾಜು ಮಾಡುವ ವಿರುದ್ದ ಗುಡುಗುತ್ತಾರೆ. ಸರಕಾರಕ್ಕೆ ಈ ಕುರಿತು ಅರ್ಜಿ ಸಲ್ಲಿಸುತ್ತಾರೆ. ಆ ಮೂಲಕ ಕನ್ನಡ ಚಿತ್ರರಂಗದ ಹಿರಿಯಣ್ಣನಾಗಿ ಅಂಬರೀಷ್‌ ಇಡೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತಾರೆ.

ಇತರೆ ಹೋರಾಟಗಳು:
ಇತ್ತೀಚೆಗೆ ನಡೆದ ಕಳಸಾ ಮಂಡೂರಿ ಯೋಜನೆಗೂ ಕನ್ನಡ ಸಿನಿತಾರೆಯರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಮೂನ್ನೂರಕ್ಕೂ ಹೆಚ್ಚು ಮಂದಿ ರೈತರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ತಾವು ರೈತರ ಪರವಾಗಿ ನಿಂತಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಹೆಚ್ಚಿದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ರೈತರಿಗೆ ನೈತಿಕ ಬೆಂಬಲ ಕೊಟ್ಟು ರೈತರ ಕುರಿತು ತಮ್ಮ ಕಳಕಳಿಯನ್ನು ತೋರಗೊಟ್ಟಿದ್ದಾರೆ.

ಕರ್ನಾಟಕದ ಜನರಿಗೆ ಡಬ್ಬಿಂಗ್‌ ನಿಂದ ಅನ್ನಹುಟ್ಟುವುದಿಲ್ಲ ಎನ್ನುವ ಕಾರಣಕ್ಕೆ ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ದೊಡ್ಡ ಪ್ರಮಾಣದ ಹೋರಾಟಗಳು ನಡೆದಿವೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸಗಳು ಸಿಗಬೇಕು ಅನ್ನುವ ಮೂಲಕ ಕನ್ನಡಿಗರ ಪರವಾಗಿ ಶಿವರಾಜ್‌ಕುಮಾರ್‍ ನಿಂತಿದ್ದಾರೆ.

ಕನ್ನಡದ ಕಳಕಳಿ:
ಕನ್ನಡ ಚಿತ್ರಸಾಹಿತಿ ಕವಿರಾಜ್ ಇತ್ತೀಚೆಗೆ "ಕಂಕಣ" ಅನ್ನುವ ತಂಡ ಕಟ್ಟಿಕೊಂಡು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕನ್ನಡ ಜಾಗೃತಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಎಲ್ಲರ ಮೊದಲ ಆದ್ಯತೆಯಾಗಿರಬೇಕೆಂಬ ಕಾರಣಕ್ಕೆ, ಕನ್ನಡಿಗರನ್ನು ಪರಭಾಷಾ ವ್ಯಾಮೋಹದಿಂದ ಪಾರು ಮಾಡುವುದಕ್ಕಾಗಿ 'ಕಂಕಣ'ವು ಕಾರ್ಯಪ್ರವೃತ್ತವಾಗಿದೆ.

ಹೀಗೆ ಪ್ರತ್ಯಕ್ಷ ಮಾತ್ರವಲ್ಲದೇ ಪರೋಕ್ಷವಾಗಿಯೂ ಕನ್ನಡ ಮತ್ತು ಕನ್ನಡಿಗರಿಗಾಗಿ ಚಿತ್ರರಂಗದ ದಿಗ್ಗಜರು ತಮ್ಮತಮ್ಮ ಶಕ್ತ್ಯಾನುಸಾರ ಕೆಲಸ ಮಾಡುತ್ತಿರುವುದು ಚಿತ್ರರಂಗದ ಹೆಮ್ಮೆ.

ಇಷ್ಟು ಧನಾತ್ಮಾಕ ವಿಚಾರಗಳ ಹೊರತಾಗಿಯೂ ಒಂದಿಷ್ಟು ಋಣಾತ್ಮಕ ವಿಚಾರಗಳು ಕನ್ನಡ ಚಿತ್ರರಂದ ಬಗ್ಗೆ ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಜನಸಮಾನ್ಯರಿಗೆ ಮಾದರಿಯಾಗಬೇಕಾಗಿರುವ ತಾರೆಯರು ನಿಜಜೀವನದ ಆಂಗ್ಲ ಪ್ರೇಮ, ಹೊಸ ಸಿನೆಮಾಗಳ ಹಾಡುಗಳಲ್ಲಿ ಹೆಚ್ಚಿರುವ ಇತರೆ ಭಾಷೆ ಮಿಶ್ರಿತ ಕನ್ನಡ ಶಬ್ದಗಳು, ಕನ್ನಡದ ನಟ-ನಟಿಯರಿಗೆ ಕನ್ನಡದಲ್ಲೇ ಸಿಗದ ಅವಕಾಶಗಳು, ರಿಮೇಕ್‌ಗಳ ಹಾವಳಿ, ಸಮಾಜೀಕ ಘಟನೆಗಳಿಗೆ ಶೀಘ್ರವಾಗಿ ಸ್ಪಂದಿಸದ ಮನಸ್ಥಿತಿ.. ಹೀಗೆ ಹತ್ತು ಹಲವು ವಿಚಾರಗಳು ಕನ್ನಡ ಚಿತ್ರರಂಗದ ಬಗ್ಗೆ ಬೆರಳು ತೋರಿಸುತ್ತದೆ.

ಆದರೆ ಇಷ್ಟೆಲ್ಲದರ ಹೊರತಾಗಿಯೂ ಕನ್ನಡಿಗರಿಗೆ ಕನ್ನಡದ ಮೇಲೆ ‌ಅಭಿಮಾನ, ಚಿತ್ರರಂಗಕ್ಕೆ ಕನ್ನಡದ ಮೇಲಿನ ಪ್ರೀತಿ ಕುಗ್ಗುವುದಿಲ್ಲವೆಂಬುದು ಸಾರ್ವಕಾಲಿಕ ಸತ್ಯ, ಹೇಗೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನೋ, ಹಾಗೆ ಕನ್ನಡ ಚಿತ್ರರಂಗದಲ್ಲೂ ಕನ್ನಡ,ಕನ್ನಡಿಗರೇ ದೊರೆಗಳು. ಕನ್ನಡವನ್ನು ಉನ್ನತ ಸ್ಥಾನಕ್ಕೇರಿಸುವ, ಕನ್ನಡವನ್ನು ಉಳಿಸಿ, ಬೆಳೆಸುವಂತ, ಕನ್ನಡದ ಕುರಿತು ಜಗ ನಿಬ್ಬೆರಾಗುವಂತಹ ಚಿತ್ರಗಳು ಕನ್ನಡದಲ್ಲಿ ಮತ್ತಷ್ಟು ಬರಲಿ, ಸಿನೆಮಾರಂಗದ ಕನ್ನಡ ಕಾಳಜಿ ಪರಂಪರೆ ನಿರಂತರವಾಗಿರಲಿ ಎಂಬ ಆಶಯದೊಂದಿಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು.

(kannadaprabha.com ನ ಕನ್ನಡ ರಾಜ್ಯೋತ್ಸವ ವಿಶೇಷ ಪುಟದಲ್ಲಿ ಪ್ರಕಟಿತ